ಅನಗತ್ಯ ವಿವಾದಕ್ಕೆ ಸಿಲುಕಿದೆಯೇ ಡ್ರಾಮಾ ಜೂನಿಯರ್ಸ್2 ?

ಜೀ ಕನ್ನಡದ ಡ್ರಾಮಾ ಜ್ಯೂನಿಯರ್ಸ್ ಪುಟ್ಟ ಪುಟ್ಟ ಮಕ್ಕಳ ತೊದಲು ಮಾತಿನ, ಮುಗ್ದ ಮುಖದ, ಪ್ರಬುದ್ಧ ನಟನೆಯಿಂದ ಕನ್ನಡದ ಯಶಸ್ವಿ ರಿಯಾಲಿಟಿ ಶೋ ಅನ್ನಿಸಿಕೊಂಡಿತ್ತು, ಈಗ ಅದರ ಎರೆಡನೇ ಆವೃತ್ತಿ ಶುರುವಾಗಿ ಮತ್ತೆ ಪ್ರೇಕ್ಷಕರನ್ನು ಮಕ್ಕಳು ಅಳಿಸಿ, ನಗಿಸಿ, ಕುಣಿಸಿ ಹಿರಿಯರನ್ನೂ ಮಕ್ಕಳಾಗಿಸಿಕೊಂಡಿವೆ, ಆ ಮಟ್ಟಿಗೆ ಯಶಸ್ವಿ ಕಾರ್ಯಕ್ರಮವಾಗಿ ಮೂಡಿ ಬಂದಿದೆ. ಆದರೆ ಈಗ ಈ ಕಾರ್ಯಕ್ರಮಕ್ಕೆ ಸಂಬಂಧಿಸಿದಂತೆ ವಿವಾದವೊಂದು ಹುಟ್ಟುಕೊಂಡಿದೆ.

ವಿವಾದಿತ ದೃಶ್ಯವೇನು….

ಮೊನ್ನೆ ಈ ಶೋನಲ್ಲಿ ಒಂದು ಹಾಸ್ಯದ ಸ್ಕಿಟ್ ನಲ್ಲಿ ಗೃಹಪ್ರವೇಶದ ಕಾರ್ಯಕ್ರಮಕ್ಕೆ ಪುರೋಹಿತರು ಬರುವ ವಿಡಂಬನೆಯ ದೃಶ್ಯ ಒಂದು ಬಂದಿತ್ತು ಮತ್ತು ಆ ದೃಶ್ಯದಲ್ಲಿ ಪುರೋಹಿತ ವೇಷಧಾರಿ ಮಕ್ಕಳು ಹಾಸ್ಯದ ಮ್ಯಾನರಿಸಂನಿಂದ ಅದ್ಭುತವಾಗಿ ಅಭಿನಯಿಸಿದ್ದರು, ಜೊತೆಗೆ ಅಲ್ಲಿ ಚತುರ್ಯವಾಗಿ ಗೋ ಮೂತ್ರ ಸೇವಿಸಿ ನಡೆಯುವ ಒಂದು ಹಾಸ್ಯ ಪ್ರಸಂಗ ಗಮನ ಸೆಳೆದಿತ್ತು. ಈ ದೃಶ್ಯ ಈಗ ವಿವಾದದ ಕೇಂದ್ರ ಬಿಂದುವಾಗಿದೆ.

ವಿವಾದ ಏಕೆ…?

ಈ ದೃಶ್ಯ ಬ್ರಾಹ್ಮಣ ಸಮುದಾಯವನ್ನು ಲೇವಡಿ ಮಾಡುವಂತಿತ್ತು, ಬ್ರಾಹ್ಮಣರನ್ನು ಕೀಳಾಗಿ ಚಿತ್ರಿಸಿದ್ದಾರೆ, ಇದು ನಿಂದನೆಗೆ ಸಮಾನದ್ದು ಅಂತೆಲ್ಲ ಸಾಮಾಜಿಕ ಜಾಲತಾಣದಲ್ಲಿ ಉಯಿಲೆದ್ದಿತ್ತು. ಬ್ರಾಹ್ಮಣರು ಹಂಗೆಲ್ಲಾ ಸಹಿಸೇವು ಝೀ ಕನ್ನಡದವರು ಕ್ಷಮೆ ಕೇಳಲೇ ಬೇಕು ಎನ್ನುವ ಆಗ್ರಹದೊಂದಿಗೆ ಫೇಸ್ಬುಕ್ಕಿನಲ್ಲಿ ಪೋಸ್ಟ್ ಗಳನ್ನ ಹಾಕಿ ತಮ್ಮ ಆಕ್ರೋಶ ವ್ಯಕ್ತ ಪಡಿಸಿದ್ದರು.

ಆ ಕಾರ್ಯಕ್ರಮದ ಆ ದೃಶ್ಯ ನಿಜಕ್ಕೂ ಇಷ್ಟೆಲ್ಲ ವಿವಾದಕ್ಕೆ ಅರ್ಹವಾದುದ್ದೇ… ??
ಖಂಡಿತ ಇಲ್ಲ ಎನ್ನುವುದು ಮೇಲ್ನೋಟಕ್ಕೇ ತಿಳಿದುಬಿಡುತ್ತದೆ. ಅದ್ರಲ್ಲಿ ಒಂದು ಪಾತ್ರ ಹಾಸ್ಯಾಸ್ಪದವಾಗಿರತ್ತೆ ಅದರ ವೃತ್ತಿ ಪುರೋಹಿತಿಕೆ ಆಗಿರತ್ತೆ. ಅಂತಹ ಪಾತ್ರದ ಹೋಲಿಕೆಯ ವ್ಯಕ್ತಿಗಳು ಇರಬಾರದು ಎಂದೇನೂ ಇಲ್ಲ, ಅದೊಂದು ಪಾತ್ರ ಪಾತ್ರವಷ್ಟೇ, ಅದನ್ನು ಒಂದಿಡೀ ಸಮುದಾಯ ಕನೆಕ್ಟ್ ಮಾಡಿಕೊಳ್ಳುವುದು ಸಮಂಜಸ ಅಲ್ಲ, ಮಕ್ಕಳ ಆ ಅಭಿನಯವನ್ನು ನೋಡಿ ಮನಸಾರೆ ನಕ್ಕು ಆರಾಮಾಗಿ ಇದ್ದುಬಿಡಬಹುದಾದ ವಿಷಯ ಅಷ್ಟೇ. ಹಾಗೆ ನೋಡಿದರೆ ಹಿಂದೆ “ಗುರುಶಿಷ್ಯರು”ಚಿತ್ರದಲ್ಲಿ ದಡ್ಡತನದ ವಟುಗಳ ಚಿತ್ರಣ ಇತ್ತು, ಉಪೇಂದ್ರ ತಮ್ಮ ಚಿತ್ರಗಳಲ್ಲಿ ಪುರೋಹಿತರ ಪಾತ್ರಗಳನ್ನು ವಿಡಂಬನೆಗೆ ಉಪಯೋಗಿಸಿಕೊಂಡಿದ್ದರು, ಇನ್ನೂ ಹಲವಾರು ಉದಾಹರಣೆಗಳಿದಾವೆ ಆಗೆಲ್ಲ ಬರೀ ಪಾತ್ರಗಳಾಗೆ ಆಸ್ವಾದಿಸಿದ್ದರು ಜನ, ಕಲೆಯನ್ನು ಕಲೆಯಾಗೆ ನೋಡಬೇಕು, ಹೊರತು ವಿವಾದಗಳನ್ನ ಸೃಷ್ಟಿಸುವುದಲ್ಲ, ಯಕ್ಷಗಾನದಲ್ಲಿ ಮತ್ತು ಹಲವು ಸಿನೆಮಾದಲ್ಲಿ ಮುಸ್ಲಿಂ ಪಾತ್ರವನ್ನು ಹಾಸ್ಯಕ್ಕೆ ಉಪಯೋಗಿಸಿಕೊಂಡಿದ್ದು ಹಲವು ಉದಾಹರಣೆ ಇದೆ, ಸೇಠ್ ಪಾತ್ರಗಳ ಹಾಸ್ಯ, ಸರ್ದಾರ್ಜಿಗಳ ಹಾಸ್ಯ ಹೀಗೆ ಉದಾಹರಣೆಗಳು ಬೇಕಾದಷ್ಟಿವೆ, ಎಲ್ಲರೂ ಐಯ್ಯೋ ಇದು ನಮಗಾದ ಅವಮಾನ ಎಂದುಬಿಟ್ಟರೆ ಸಮಾಜದೊಳಗಿನ ಪಾತ್ರಗಳ ಮೂಲಕ ಕತೆಯನ್ನು ಪ್ರಸ್ತುತ ಪಡಿಸುವುದಾದರೂ ಹೇಗೆ???
ಈಗ ಝೀ ಕನ್ನಡದ ಈ ಕಾರ್ಯಕ್ರಮದ ವಿವಾದ ಉಡುಪಿ ಮಠದವರೆಗೂ ಹೋಗಿದೆ ಎನ್ನುವ ಸುದ್ದಿ ಬರ್ತಿದೆ. ಇಷ್ಟಕ್ಕೂ ಇದನ್ನು ವಿವಾದವನ್ನಾಗಿ ಮಾಡಿದ್ದು ತೀರ ಬಾಲಿಶವೇ ಸರಿ.

-Ad-

Leave Your Comments