ತಿಥಿ ಆಯ್ತು, ತರ್ಲೆ ವಿಲೇಜ್ ಗೆ ವಯ್ತಾ ಇವಿ..ಏನ್ ನಿಮ್ ಪ್ರಾಬ್ಲಮ್ಮು?

ಸೆಂಚುರಿ ಗೌಡ, ಗಡ್ದಪ್ಪ  ಅಂದಾಕ್ಷಣ ನೆನಪಾಗುವುದು ತಿಥಿ ಸಿನಿಮಾ . ಅಥವಾ ತಿಥಿ ಸಿನಿಮಾ ಅಂತಿದ್ದ ಹಾಗೆ ಫಳ್ ಅಂತ ಪರದೆ ಮೇಲೆ ಬಿಚ್ಚಿಕೊಳ್ಳುವುದು ಸೆಂಚುರಿ ಗೌಡ, ಗಡ್ಡಪ್ಪ . ನೊದೆ ಕೊಪ್ಪಲಲ್ಲಿ ಸಣ್ಣದೊಂದು ಟೀ ಅಂಗಡಿ ಇಟ್ಕೊಂಡು ಬಡಸ್ತನ ಇದ್ರುವೇ ಹೆಚ್ಗೆ ತಲೆ ಕೆಡಿಸ್ಕೊಳ್ದೆ ಓಡಾಡ್ಕೊಂಡು ತನ್ನ ಪಾಡಿಗೆ ತಾನಿದ್ದ ಚನ್ನೇಗೌಡ . ಇನ್ನೊಂದ್ ಕಡೆ ಬೆಳ್ಳಾವೆಯಲ್ಲಿ ಬೆಚ್ಚಗಿದ್ರು  ಸಿಂಗ್ರಿಗೌಡ್ರು. ಇವರಿಬ್ಬರನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತಾಗುವಂತೆ ಮಾಡಿದ್ದು ತಿಥಿ ಸಿನಿಮಾ.

thithi

“ಇದು ಒಂದು ಸಿನಿಮಾ ಅಂತಾರೇನ್ರಿ ಒಂದು ಡಾಕ್ಯುಮೆಂಟರಿ ಥರ ಇದೆ” ಅಂತ ಇಲ್ಲಿನ ಕೆಲ ಸಣ್ಣ ಮನಸ್ಸಿನ ದೊಡ್ಡ ಮನುಷ್ಯರು ಆಡಿಕೊಳ್ಳುತ್ತಿರುವಾಗ ಸದ್ದಿಲ್ಲದೆ ದೂರ ದೇಶದಲ್ಲಿ ಪ್ರಶಸ್ತಿಗಳನ್ನ ಬಾಚಿ ಕೊಳ್ಳುತಿತ್ತು  ತಿಥಿ. ಆಡುಭಾಷೆಯನ್ನ ಆಡಿಕೊಳ್ಳುತ್ತಾ, ಹಳ್ಳಿಗರ ಜೀವನವನ್ನ ಅಪಹಾಸ್ಯ ಗೈಯುತ್ತಾ ಕೂತಲ್ಲೇ ಮೂತಿ ತಿರುವಿದವರ ಸ್ವಾಟೆಗೆ ತಿವಿದಂತೆ 14 ಅಂತಾರಾಷ್ಟ್ರೀಯ ಪ್ರಶಸ್ತಿಗಳನ್ನೂ ಅನಾಮತ್ತಾಗಿ ಗಳಿಸಿತ್ತು ತಿಥಿ.

ತಿಥಿ ಸಿನಿಮಾ ನೋಡಿದವರೆಗೆಲ್ಲ ಮರೆಯಲು ಸಾಧ್ಯವಾಗದ ಪಾತ್ರಗಳು ಅಂದ್ರೆ ಸೆಂಚುರಿ ಗೌಡ ಮತ್ತು ಗಡ್ಡಪ್ಪ. ಪ್ರಾರಂಭದ ಒಂದೆರಡು ದೃಶ್ಯದಲ್ಲಿ ಮಾತ್ತ್ರ ಬಂದು ವೈಕುಂಠ ವಾಸಿಯಾಗುವ ಸೆಂಚುರಿ ಗೌಡ ತನ್ನ ಟಿಪಿಕಲ್ ಧ್ವನಿ ಹಾಗು ಸಂಭಾಷಣೆಯಿಂದ ಮರೆಯಲಾಗದ ಪಾತ್ರವಾಗಿ ಕಾಡಿದ್ದು ನಿಜ . “ಏನ್ ನಿನ್ ಪ್ರಾಬ್ಲಮ್ಮು”  “ನಂಗ್ ಬರುದೂ ಇಲ್ಲ .ನಾ ಮಾಡುದು ಇಲ್ಲ” ಎಂಬ ಗಡ್ದಪ್ಪನ ಡೈಲಾಗ್ ಗಳು ಎಲ್ಲರ ಬಾಯಲ್ಲಿ ಆಡುಮಾತಿನಂತೆ ಹರಿದಾಡಿದವು. ಒಬ್ಬ ಸಮರ್ಥ ಶಿಲ್ಪಿಯ  ಕೈಗೆ ಸಿಕ್ಕ ಕಲ್ಲು ಕಲಾಕೃತಿಯಾಗಿ ಅರಳುವ ಹಾಗೆ  ಈರೇಗೌಡರ ಸಾರಥ್ಯದಲ್ಲಿ ಸಹಜ ಕಲಾವಿದರಾಗಿ ಅರಳಿದವರು ಸಿಂಗ್ರಿ ಗೌಡ -ಚನ್ನೇಗೌಡ. ಅವರ ಒರಿಜಿನಲ್ ಹೆಸರುಗಳು  ಇವತ್ತಿಗೂ ಎಷ್ಟೋ ಜನರಿಗೆ ಗೊತ್ತಿಲ್ಲ.  ಸೆಂಚುರಿಗೌಡ ,ಗಡ್ಡಪ್ಪನಾಗೇ ಜನರ ಮನಸ್ಸಿನಲ್ಲಿ ಉಳಿದಿರುವುದು.eregowda-ramಬಣ್ಣದ ಲೋಕದಲ್ಲಿ ಮುಖಕ್ಕೆ ಬಣ್ಣವಿಲ್ಲದೆ ಗೆಲ್ಲುವುದು ಸಾಧ್ಯ ಅನ್ನುವುದನ್ನು ತೋರಿಸಿಕೊಟ್ಟವರು ಈರೇಗೌಡ ಹಾಗು ರಾಮರೆಡ್ಡಿ. ಯಾವ ಬಣ್ಣದ ಹಂಗಿಲ್ಲದೆ ಮಣ್ಣಿನ ಮಕ್ಕಳ ಕಪ್ಪು -ಕಂದು ಬಣ್ಣವನ್ನು  ಇದ್ದ ಹಾಗೇ ತೋರಿಸಿ  ಗೆದ್ದು ಬಂತು ತಿಥಿ. ಈ ಇಬ್ಬರು ಕಲಾವಿದರು ಓದು ಬರಹ ಬಾರದ ಅನಕ್ಷರಸ್ತರು. ಹಳ್ಳಿ ಗಮಾರರು (ದಿಲ್ಲಿಯವರ ದೃಷ್ಟಿಯಲ್ಲಿ ).ಸಂಭಾಷಣೆಯನ್ನು ಕಲಿಸಿ,ಎಲ್ಲಿಯೂ ನಾಟಕೀಯತೆ ಸುಳಿಯದ ಹಾಗೆ ಪಾತ್ರಗಳು ನಮ್ಮೆದುರೇ ಮಾತಾಡುತ್ತಿವೆಯೇನೋ ಅನ್ನಿಸುವಂತೆ ತೆರೆಯ ಮೇಲೆ ಮೂಡಿಸಬೇಕಾದರೆ ಈರೇಗೌಡರ  ಅಪಾರ ಸಹನೆ, ಶ್ರದ್ಧೆ, ಕಥೆ ಹೇಳುವ ಕಲೆಯದು ಸಿಂಹಪಾಲು.

ತಿಥಿ ಸಿನಿಮಾಗೂ ಮುನ್ನ  “ಅಯ್ಯೋ ನಂಗೇನು ಊರು ಹೋಗು ಅಂತದೆ ಕಾಡು ಬಾ ಅಂತದೆ ಕನ ಬಿಡು” ಅಂತಿದ್ದ ಹಣ್ಣುಹಣ್ಣು ಜೀವ ಸಿಂಗ್ರಿಗೌಡ. “ಅದೇನೇನ್ ಆದದೋ ನೋಡುಮ ನಡಿ “ ಅಂತಿದ್ದ ಚನ್ನೇಗೌಡರನ್ನ ಈಗ ಅವಕಾಶಗಳು ಅರಸಿ ಬರುತ್ತಿವೆ. ತರ್ಲೆ ವಿಲೇಜ್ ಸಿನಿಮಾದಲ್ಲಿ ಇವರಿಬ್ಬರದೇ ಭಾರೀ ಜೋರು.

tarle-village-gaddappa-centuriತರ್ಲೆ ವಿಲೇಜ್ ಟ್ರೈಲರ್ ಈಗಾಗಲೇ ಸಾಕಷ್ಟು ಜನರನ್ನ ನಗಿಸಿದೆ. ನಿರ್ದೇಶಕ ರಘು ಪದೇ ಪದೇ ತಿಥಿ ಸಿನಿಮಾವನ್ನ ನೆನಪಿಸಿಕೊಂಡೇ ತರ್ಲೆ ವಿಲೇಜ್ ಬಗ್ಗೆ ಮಾತಾಡಿದ್ದಾರೆ. ಇದೊಂಥರ ತಿಥಿ ಥರಾನೇ ಆದ್ರೆ ಅದು ಸ್ಲೋ ಆಗಿತ್ತು. ನಾವು ಕಮರ್ಷಿಯಲ್ ಸಿನಿಮಾಗೆ ಬೇಕಾಗಿರೋ ಸ್ಪೀಡ್ನಲ್ಲಿ ಮಾಡಿದ್ದೇವೆ. ಹಳ್ಳಿ ಕಥೆಯಲ್ಲಿ ಕಾಮಿಡಿ ತಂದಿದ್ದೇವೆ. ನಮ್ಮ ಸಿನಿಮಾಗೆ U ಸರ್ಟಿಫಿಕೇಟ್ ಸಿಕ್ಕಿದೆ. ಎಲ್ಲರು ನೋಡಬಹುದು ಅನ್ನುತ್ತಿದ್ದಾರೆ.

ನಾಳೆ ಬರಲಿರುವ ಸಿನಿಮಾ ನೋಡಿದ ಮೇಲೆ ಪ್ರೇಕ್ಷಕರು, ವಿಮರ್ಶಕರು ಯಾವ ಯಾವ ಸರ್ಟಿಫಿಕೇಟ್ ಕೊಡ್ತಾರೋ ನೋಡೋಣ. ಆದರೆ  ಆ… ಕಮ್ರಾನಾ ? ಅದೆಂಗ್ ಇರ್ತದ್ಲಾ? ನಾವು ಸಿನಿಮಾದಲ್ಲಿ ಮಾಡಕ್ಕಾದದ?  ಅನ್ನುತ್ತಿದ್ದ  ಸಿಂಗ್ರಿ ಗೌಡ, ಚನ್ನೇಗೌಡರನ್ನ ಒಪ್ಪಿಸಿ , ಒಲಿಸಿಕೊಂಡು ಸೆಂಚುರಿ ಗೌಡ,ಗಡ್ದಪ್ಪನಾಗಿಸಿ  ನೋಡುಗರ ಮನಸ್ಸಿನಲ್ಲಿ ಉಳಿಯುವಂಥ ಪಾತ್ರ ಕೊಟ್ಟ ಈರೇಗೌಡರನ್ನ ನೆನೆಯಲೇ ಬೇಕಲ್ಲವೇ .

 

 

-Ad-

Leave Your Comments