ಮನುಷ್ಯತ್ವ ಇರುವವರಿಗೆ ಮಾತ್ರ “ಅಮರಾವತಿ”

ಆತ್ಮಿಯರೆ, ಹಲವು ಪ್ರಯತ್ನಗಳಿಂದಾಗಿ ಗಾಂಧಿನಗರದಲ್ಲಿರುವ ಮೇನಕ ಥೇಟರ್ನಲ್ಲಿ ಸಂಜೆ 4:30 ಹಾಗು  7:30 ಶೋ ಸಿಕ್ಕಿದೆ. ಈಗ ಈ ಎರಡೂ ಶೊಗಳು 50 ದಿನ ಹೌಸಫುಲ್ ಓಡಿದರೂ ನಮಗೆ ಲಾಭ ಅಂತೇನೂ ಬರಲ್ಲ. ಆದರೂ ಸಾಲ ಮಾಡಿ ಬಾಡಿಗೆ ಕಟ್ಟಿ ಈ ಎರಡೂ ಶೊ ಉಳಿಸಿಕೊಂಡಿದ್ದೀವಿ. ಒಂದೇ ಆಸೆಯಿಂದ. ಸಾಧ್ಯವಾದಷ್ಟು ಹೆಚ್ಚಿನ ಜನ ಇದನ್ನ ನೋಡಲಿ ಅಂತ. ಸೊ ಕೇಳ್ಕೊಳ್ತಾ ಇರೋದಿಷ್ಟೆ. ಇನ್ನೊಂದು ಅವಕಾಶ ಕೊಡಿ. We deserve it.

_ಬಿ ಎಂ ಗಿರಿರಾಜ್ giriraj

ಕನ್ನಡದ  ಒಬ್ಬ ಪ್ರತಿಭಾವಂತ, ಯಾರೂ ತುಳಿಯದ ಹಾದಿಯಲ್ಲಿ ನಡೆಯುವ ,ಚಿತ್ರರಂಗದ ದಿಕ್ಕುಗಳನ್ನು ವಿಸ್ತರಿಸುವ  ನಿರ್ದೇಶಕನಿಗೆ ನಾವು ತಂದಿರುವ ಸ್ಥಿತಿ ನೋಡಿ.

ತಾವೇ  ಹೆತ್ತ ಮಗುವಿನ ಮಲ ಒರೆಸಿ ತೊಳೆಯುವುದಕ್ಕೂ ಅಸಹ್ಯ ಪಟ್ಟು ಮೂಗು ಮುಚ್ಚಿಕೊಳ್ಳುವ ಅಪ್ಪ -ಅಮ್ಮಂದಿರಿರುವ ಈ ಕಾಲವಿದು. ಅಂಥಾದ್ದರಲ್ಲಿ ಊರವರು ತಿಂದು ತೇಗಿ ಕೆಳಗೆ ಬಿಟ್ಟ ಮಲವನ್ನು ಹೊತ್ತು ಸಾಗಿಸುವ ಜನರ ಬಗ್ಗೆ ಕಿಂಚಿತ್ ಪ್ರೀತಿ ,ಅನುಕಂಪವಾದರೂ ನಮ್ಮೊಳಗೆ ಇದೆಯೇ ? ಈ ಪ್ರಶ್ನೆಗೆ ಬಹುತೇಕರ ಉತ್ತರ ಅನುಕಂಪನಾ ? ಥು ..ಅಸಹ್ಯದ ಜನ ಕಣ್ರೀ ಹತ್ತಿರಾನು ಸೇರಿಸಬಾರದು. ಅವರಿರುವುದೇ ಆ ಕೆಲಸ ಮಾಡುವುದಕ್ಕಾಗಿ ಬಿಡಿ ಇಂಥಾ ಮಾತುಗಳೇ ನಮ್ಮ ಸುತ್ತ ಕೇಳಿಸುವುದು . ಅಪ್ಪಿ ತಪ್ಪಿ ಏನಾದ್ರೂ ಇಷ್ಟೆಲ್ಲಾ ಟೆಕ್ನಾಲಜಿ ಇರೋ ಕಾಲದಲ್ಲಿ ನಮ್ಮಂತೆ ಬಾಳಿ ಬದುಕಬೇಕಾದ ಅಮಾಯಕ ಜನರನ್ನ ಶತಮಾನಗಳಿಂದ ಹೀನಾಯವಾಗಿ ನಡೆಸಿಕೊಳ್ಳುತ್ತಿದ್ದೇವಲ್ಲ  ಅಂತನ್ನುವ ಧ್ವನಿ ಕೇಳಿದರೆ ಅಂಥವರನ್ನು ನಿಜವಾದ ಮನುಷ್ಯರು ಅನ್ನಬಹುದು.

ನಮ್ಮೊಳಗೇ ಪ್ರಶ್ನೆಗಳನ್ನು ಹುಟ್ಟಿಸುತ್ತಾ ನಮ್ಮನ್ನು ಮನುಷ್ಯತ್ವದ ಮಹಲಿಗೆ ಕರೆದೊಯ್ಯುವ ಚಿತ್ರ ಅಮರಾವತಿ . ಊರ ಕೊನೆಯ ಕೇರಿಯಲ್ಲಿ, ನಗರಗಳ ಸ್ಲಮ್ಮಿನಲ್ಲಿ ಬದುಕುವ ,ಪ್ರಾಣವನ್ನು ಲೆಕ್ಕಿಸದೆ ತುತ್ತು ಕೂಳಿಗಾಗಿ ಮಲದ ಗುಂಡಿಗಳಿಗೆ ಇಳಿದು ಕೊಳೆತೊಳೆಯುವ ಮಂದಿಯ ಬದುಕಿನ ಬವಣೆ-ಭಾವನೆಗಳನ್ನು ತೋರಿಸಿ ಮಾನವತೆಯ ಕಟ್ಟಡಕ್ಕೆ ಪ್ರೀತಿಯ ಇಟ್ಟಿಗಳನ್ನ ಜೋಡಿಸುವ ಬನ್ನಿ ಎಂದಿದ್ದಾರೆ ನಿರ್ದೇಶಕ ಬಿ ಎಂ ಗಿರಿರಾಜ್ .

ಯಾರೂ ಮುಟ್ಟದ , ಸೋಕಿಸಿಕೊಳ್ಳಲೂ ಹೆದರುವ ವಿಷಯವನ್ನು ತನ್ನ ಭವಿಷ್ಯವನ್ನೇ ಪಣಕ್ಕಿಟ್ಟು ಅಮರಾವತಿಯನ್ನು ಕಟ್ಟಿದ್ದಾರೆ ಗಿರಿರಾಜ್. ಸಮಾಜ ಬದಲಾಗ್ಬೇಕು ಕಣ್ರೀ ಅಂತ ಕುಳಿತಲ್ಲೇ ಭಾಷಣ ಬಿಗಿಯುವ , ನಾವೆಲ್ಲಾ ಒಂದೇ ಜಾತಿ ನಾವು ಭಾರತೀಯರು ಅಂತ ಎದೆ ತಟ್ಟಿಕೊಳ್ಳುವ ಜನರೆಲ್ಲಾ ತಪ್ಪದೆ ನೋಡಬೇಕಾದ ಸಿನಿಮಾವಿದು. 

ಅಮರಾವತಿ ಅಂಥಾ ಸಿನಿಮಾ ಮಾಡಿ ಥಿಯೇಟರ್ ಗಾಗಿ ಅಂಗಲಾಚಿದ ಗಿರಿರಾಜರ ಸ್ಥಿತಿ ನೋಡಿದರೆ ಗುಣ ಮಟ್ಟದ,ಪ್ರಯೋಗಾತ್ಮಕ  ಕನ್ನಡ ಚಿತ್ರಗಳಿಗೆ ನಾವು ಕೊಡ್ತಾ ಇರುವ ಬೆಲೆ ಎಂಥಾದ್ದು ಅನ್ನುವುದು ನಮ್ಮ ಮುಖಕ್ಕೆ ರಾಚುತ್ತಿದೆ. ಸಿನಿಮಾ ಬಿಡುಗಡೆಯಾಗಿ ವಾರ ಕಳೆದರೂ ಜನ ಮಲ ಕಂಡಾಗ ಮೂಗು ಮುಚ್ಚಿ ಕೊಳ್ಳುವಂತೆ ಅಮರಾವತಿ ಗೆ ಮೂತಿ ತಿರುವಿರುವುದು ಮನಃಸ್ಥಿತಿಗೆ ಸಾಕ್ಷಿಯಾಗಿದೆ.  ಒಂದಿಷ್ಟೂ  ಅಶ್ಲೀಲತೆಯ ಸೋಂಕಿಲ್ಲದ ಅಮರಾವತಿಗೆ ಎ ಸರ್ಟಿಫಿಕೇಟ್ ಕೊಟ್ಟು ಬಾಗಿಲಲ್ಲೇ ಬರೆ ಎಳೆದ ಸೆನ್ಸಾರ್ ಮಂಡಳಿಯ ಸೆನ್ಸಿಟಿವಿಟಿಗೆ ,ವ್ಯವಸ್ಥಿತ ಹುನ್ನಾರಕ್ಕೆ ಗಿರಿರಾಜ್ ಬಗ್ಗುವ ಹಾಗೇನು ಕಂಡಿಲ್ಲ. ತನ್ನ ಪ್ರತಿಭೆ,ಸಾಮರ್ಥ್ಯದ ಬಗ್ಗೆ ನಂಬಿಕೆ ಇರುವಂಥವರನ್ನು ಬಡಿವುದು ಸುಲಭವಲ್ಲ. ಗಿರಿರಾಜ್ ಛಲ ಬಿಡದೆ ಬೆಂಗಳೂರಿನ ಮೇನಕಾ ಚಿತ್ರಮಂದಿರದಲ್ಲಿ ಎರಡು ಶೋ ಪಡೆದಿದ್ದಾರೆ. ಅದೂ ಸಾಲ ಮಾಡಿ . ಲಾಭ ಕನಸಿನ ಮಾತೇ . ಆದ್ರೆ ಹೇಗಾದ್ರು ಮಾಡಿ ಅಮರಾವತಿ ಹೆಚ್ಚು ಜನರನ್ನ ತಲುಪಲಿ ಎನ್ನುವುದಷ್ಟೇ ಅವರ ಉದ್ದೇಶ.

ಅಮರಾವತಿ ಮನೆ ಮಂದಿಯೆಲ್ಲ ನೋಡಿ ಗೆಲ್ಲಿಸಲೇ ಬೇಕಾದ ಚಿತ್ರ. ನಮ್ಮ ಜೊತೆ ನಮ್ಮ ಮಕ್ಕಳನ್ನೂ  ಮಾನವೀಯವಾಗಿಸುವ  ಅಮರಾವತಿಯನ್ನೊಮ್ಮೆ ತಪ್ಪದೆ  ನೋಡಿ. ಕೊಟ್ಟ ಕಾಸಿಗೆ ಮೋಸಮಾಡದೆ ಜನರ ಸಮಯವನ್ನು ಹಾಳುಮಾಡದೆ ಬದ್ಧತೆಯಿಂದ ಹೊಸೆದಿರುವ ಬತ್ತಿಗೆ ಎಣ್ಣೆ ಎರೆದು ಪ್ರೀತಿಯ ಬೆಳಕನ್ನು ಹೊತ್ತಿಸಿ .   

 

-Ad-

Leave Your Comments