ಅಭಿಮಾನಿಗಳಿಗಾಗಿ ನಾನೇನು ಮಾಡಿಲ್ಲ -ಅಂಬರೀಶ್

ಬಲಗೈಲಿ ಕೊಟ್ಟಿದ್ದು ಎಡಗೈಗೆ ಗೊತ್ತಾಗಬಾರದು ದಾನ ಅಂದ್ರೆ ಆಗಿರಬೇಕು ಅಂತಾರಲ್ಲ ಆ ಮಾತನ್ನ ಅಕ್ಷರಶಃ ಪಾಲಿಸಿಕೊಂಡು ಬಂದವರು ಚಿತ್ರರಂಗದ ದೊಡ್ಡಣ್ಣ ಅಂಬರೀಷ್ . ಸಿನಿಮಾರಂಗಕ್ಕೆ ಕಾಲಿಟ್ಟ ದಿನದಿಂದ ಹತ್ತಾರು ವರುಷಗಳ ಕಾಲ ಕಷ್ಟ ಎಂದು ಬಂದವರ ಕೈ ಹಿಡಿದವರು. ಅಣ್ಣಾ.. ಎಂದು  ಬಂದ ಅಭಿಮಾನಿಗಳಿಗೆ ಕೈಲಾದಷ್ಟು ಸಹಾಯ ಹಸ್ತ ಚಾಚಿದವರು . ಆದರೂ ಎಲ್ಲಿಯೂ ನಾನು ದಾನಶೂರ ಕರ್ಣ ಅಂತ ಹೇಳಿಕೊಂಡು ತಿರುಗಲಿಲ್ಲ. ಇಂದು ಅವರ ಅರವತ್ತೈದನೇ ಹುಟುಹಬ್ಬ. ಅಂದಿನ ಅಂಬಿ ಇಂದೂ ಕೂಡ ಬದಲಾದ ಆಗಿಲ್ಲ. ಇದಕ್ಕೆ ಅವರಾಡಿರುವ ಮಾತುಗಳೇ ಸಾಕ್ಷಿ.

ಅಭಿಮಾನಿಗಳೆಂದರೆ ಅಪರಿಮಿತ ಪ್ರೀತಿ 

ಕನ್ನಡ ಚಿತ್ರರಂಗದಲ್ಲಿ ಸಾಕಷ್ಟು ಅಭಿಮಾನಿಗಳನ್ನು ಗಳಿಸಿರುವ ರೆಬೆಲ್ ಸ್ಟಾರ್ ನಿನ್ನೆ ರಾತ್ರಿಯೇ ಅಭಿಮಾನಿಗಳ ಜೊತೆ ಸೇರಿಕೊಂಡು ಕೇಕ್ ಕತ್ತರಿಸಿ ಸಂಭ್ರಮಿಸಿದ್ದಾರೆ. ಮಧ್ಯರಾತ್ರಿ 12 ಗಂಟೆಯಲ್ಲಿ ನಿದ್ರೆ ಮೂಡಲ್ಲಿದ್ದ ಅಂಬರೀಶ್, ಯಾಕ್ರಲೇ ಇಷ್ಟೊತ್ತಲ್ಲಿ ಅಂತ ಅನ್ಕೊಂಡೇ ಕೇಕ್ ಕಟ್ಟಿಂಗ್ ಮಾಡಿದ್ರು. ಆಮೇಲೆ ಮಾಧ್ಯಮಗಳ ಜೊತೆ ಮಾತನಾಡುವಾಗಲೂ ಅಭಿಮಾನಿಗಳ ಜಯಕಾರ ಮುಂದುವರಿದಾಗ ಹೇ ಇರ್ರೋ ಅಂತ ಸ್ವಲ್ಪ ಗರಂ ಆದ್ರು. ಬಳಿಕ ತನ್ನಷ್ಟಕ್ಕೆ ಮುಗುಳುನಗೆ ಬೀರಿ ಇರಪ್ಪ ಅಂದ್ರೆ.. ಹೇ ಇರ್ರೋ ಅಯ್ಯ ಅಯ್ಯಯ್ಯೋ.. ನನ್ನ ಬರ್ತ್ ಡೇ 65 ವರ್ಷದಿಂದ ಹೀಗೇ ನಡೀತಿದೆ..ಪಾಪ ಅದೇ ಪ್ರೀತಿ ಹಾಗೆ ಮುಂದುವರಿದಿದೆ. ಈ ಅಭಿಮಾನ ಪ್ರೀತಿ ಸಂಪಾದನೆ ಮಾಡೋದು ತುಂಬಾ ಕಷ್ಟ. ನಾನು ಅದನ್ನು ಸಂಪಾದನೆ ಮಾಡಿದ್ದೀನಿ ಅನ್ನೋದೆ ಸಂತೋಷ. ಅವರ ಪ್ರೀತಿ ವಿಶ್ವಾಸದಿಂದ ನಾವು ಇಲ್ಲಿ  ಜೀವನ ಮಾಡಿದ್ದೀವಿ ನಮ್ಮಿಂದ ಅವರಿಗೆ ಏನು ಆಗಿಲ್ಲ ಅಂದ್ರು. ನಾವು ಪ್ರಚಾರಕ್ಕಾಗಿ ಏನನ್ನೂ ಮಾಡಲ್ಲ, ನಮ್ಮ ಹೃದಯ ಮೆಚ್ಚುವ ಕೆಲಸ ಮಾಡ್ತೀವಿ ಅಷ್ಟೆ ಅಂದ್ರು.

ಈ ವೇಳೆ ಅಭಿಮಾನಗಳ ಹುಚ್ಚಾಟ ಜಾಸ್ತಿಯಾದಾಗ ಲೇ ಹೋಗೋ ಆ ಕಡೆ ಅಂತಾ ತಮ್ಮದೇ ಸ್ಟೈಲ್ ನಲ್ಲಿ ಘರ್ಜಿಸಿದ್ರು. ಕೊನೆಗೆ ದಮ್ಮಯ್ಯ ಸುಮ್ನಿರ್ರೋ ಅಂತಾ ಬೇಡಿಕೊಂಡ್ರು ಅಂಬರೀಶ್.

ಅಂಬಿ ಮಾಡಿದ ಸಹಾಯದಲ್ಲಿ ಬದುಕು ಕಟ್ಟಿಕೊಂಡ ಕಟ್ಟಾ ಅಭಿಮಾನಿ ನಾಗಮಂಗಲದ ಅಂಕಣ್ಣನಂಥ ಅನೇಕರು ಇನ್ನೂ ನಮ್ಮ ನಡುವೆ ಇದ್ದಾರೆ.

ಹೊಸ ಮನೆಯಲ್ಲಿ ಹುಟ್ಟುಹಬ್ಬ 

ಪ್ರತಿವರ್ಷ ಜೆಪಿ ನಗರದ ನಿವಾಸದಲ್ಲಿ ಕೇಕ್ ಕತ್ತರಿಸುತ್ತಿದ್ದ ಅಂಬರೀಶ್ ಈ ಬಾರಿ ಜಯನಗರದ ಹೊಸ ಮನೆಯಲ್ಲಿ ಹುಟ್ಟುಹಬ್ಬ ಆಚರಿಸಿಕೊಂಡ್ರು. ಮನೆ ಮುಂದೆ ಬ್ಯಾನರ್ ಬಟ್ಟಿಂಗ್ಸ್ ರಾರಾಜಿಸುತ್ತಿದ್ದವು. ಅಭಿಮಾನಿಗಳು ಥರಹೇವಾರಿ  ಕೇಕ್ ಗಳ ಜೊತೆ ಆಗಮಿಸಿದ್ರು. ಅಂಬರೀಶ್ ಒಂದು ಕೇಕ್ ಕತ್ತರಿಸಿ ಕೇಕ್ ಕಟ್ಟಿಂಗ್ ಸಂಭ್ರಮಕ್ಕೆ ಚಾಲನೆ ಕೊಟ್ರು. ಈ ವೇಳೆ ಪತ್ನಿ ಸುಮಲತಾ, ಮಗ ಅಭಿಷೇಕ್ ಕೂಡ ಹಾಜರಿದ್ರು. ರಾಜಕೀಯದಲ್ಲಿದ್ದು ರಾಜಕಾರಣ ಮಾಡದೆ ತನ್ನ ಕ್ಷೇತ್ರವನ್ನೂ  ಮೀರಿ ..ಮೀರಿ ಬೆಳೆದಿರುವ ಅಂಬರೀಶ್ ಗೆ ರಾಜ್ಯಾದ್ಯಂತ ಅಭಿಮಾನಿಗಳಿದ್ದು, ಯಾವುದೇ ಪಕ್ಷದ ಸ್ವತ್ತಲ್ಲ ನಮ್ಮ ಕನ್ವರ್ ಲಾಲ್ ಅನ್ನೊದನ್ನ ತೋರಿಸಿದ್ರು.

ತವರು ಜಿಲ್ಲೆ ಮಂಡ್ಯದಲ್ಲೂ ಅಂಬಿ ಹುಟ್ಟುಹಬ್ಬದ ಸಂಭ್ರಮ ಮನೆ ಮಾಡಿತ್ತು . ಸಂಜಯ್ ವೃತ್ತದಲ್ಲಿ ದೊಡ್ಡ ದೊಡ್ಡ ಕಟೌಟ್ ಜೊತೆಗೆ ಶಾಮಿಯಾನ ಹಾಕಿ ವೇದಿಕೆ ನಿರ್ಮಿಸಲಾಗಿತ್ತು . ಫಲಾನುಭವಿಗಳಿಗೆ ಟೈಲರಿಂಗ್ ಮೆಷಿನ್ ಕೊಡುವುದು, ಹಿರಿಯ ರೈತ ಹೋರಾಟಗಾರ ಜಿ ಮಾದೇಗೌಡರಿಗೆ ಸನ್ಮಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

ಸಾವನ್ನೇ ಗೆದ್ದು ಬಂದಿರುವ  ಅಂಬರೀಶ್  ಎಂಬ ನೇರನುಡಿಯ ,ಕಲ್ಮಶವಿಲ್ಲದ ಕರುಣಾಳು ಶತದಿನೋತ್ಸವ ಆಚರಣೆ ಮಾಡಲಿ. ಸಿನಿಮಾ ರಂಗದಲ್ಲಿ ಮನೆ ಯಜಮಾನನ ಹಾಗೆ ರಾರಾಜಿಸುತ್ತಲೇ  ಇರಲಿ  ಅನ್ನೋದು ciniadda.com ಆಶಯ.

-Ad-

Leave Your Comments