ಆ್ಯಮಿ ಜಾಕ್ಸನ್‌ಗೆ ಪ್ರೇಮ್‌ರ “ದಿ ವಿಲನ್” ಸಿನಿಮಾದ ಹೆಸರು ಗೊತ್ತಿಲ್ವಾ?

ಪ್ರೇಮ್‌ರ ಮಹತ್ವಾಕಾಂಕ್ಷೆಯ ಸಿನಿಮಾ ದಿ ವಿಲನ್ ಚಿತ್ರೀಕರಣ ಭರದಿಂದ ಸಾಗುತ್ತಿದೆ. ಪ್ರೇಮ್ ಅವರು ಶಿವಣ್ಣ ಮತ್ತು ಸುದೀಪ್‌ರನ್ನು ಒಟ್ಟು ಗೂಡಿಸಿದ್ದಷ್ಟೇ ಅಲ್ಲ, ಅಂತಾರಾಷ್ಟ್ರೀಯ ನಟಿ ಆ್ಯಮಿ ಜಾಕ್ಸನ್‌ರನ್ನು ಕೂಡ ಕನ್ನಡಕ್ಕೆ ಪರಿಚಯಿಸುತ್ತಿದ್ದಾರೆ. ಬಾಲಿವುಡ್, ತಮಿಳಲ್ಲಿ ಬಹಳ ಸೌಂಡು ಮಾಡಿರುವ ನಾಯಕ ನಟಿ ಈ ಆ್ಯಮಿ ಜಾಕ್ಸನ್. ಈಕೆಗೆ ಭಯಂಕರ ಬೇಡಿಕೆ ಕೂಡ ಇದೆ. ಹೀಗಿರುವಾಗ ಈಕೆಯನ್ನು ಕನ್ನಡಕ್ಕೆ ತಂದ ಪ್ರೇಮ್ ಬಗ್ಗೆ ಸಿನಿಮಾ ಪ್ರೇಮಿಗಳಿಗೆ ಹೆಮ್ಮೆ ಉಂಟಾಗಿತ್ತು. ಆದರೆ ಈಗ ಒಂದು ಡೌಟು ಶುರುವಾಗಿದೆ. ಆ್ಯಮಿ ಕನ್ನಡಕ್ಕೆ ಬಂದಿದ್ದೇನೋ ಹೌದು. ನಟಿಸುತ್ತಿರುವುದು ಕೂಡ ಹೌದು. ಆದರೆ ಆಕೆಗೆ ತಾನು ಯಾವ ಸಿನಿಮಾದಲ್ಲಿ ನಟಿಸುತ್ತೇನೆ ಅನ್ನುವುದು ಗೊತ್ತಿಲ್ಲವೇ?

ಈ ಅನುಮಾನ ಬರುವುದಕ್ಕೆ ಕಾರಣವಿದೆ. ಆ್ಯಮಿ ಜಾಕ್ಸನ್ ದಿ ವಿಲನ್ ಸಿನಿಮಾದ ತನ್ನ ಭಾಗದ ಚಿತ್ರೀಕರಣಕ್ಕಾಗಿ ಬ್ಯಾಂಕಾಕ್‌ಗೆ ತೆರಳಿದ್ದರು. ಅವರ ಹವ್ಯಾಸವೆಂದರೆ ಅವರು ಎಲ್ಲೆಲ್ಲಿ ಹೋಗುತ್ತಾರೆ, ಏನೇನು ಮಾಡುತ್ತಾರೆ ಅವೆಲ್ಲವನ್ನೂ ಫೋಟೋ ತೆಗೆದು ಸೋಷಿಯಲ್ ಮೀಡಿಯಾಗಳಿಗೆ ಅಪ್ ಲೋಡ್ ಮಾಡುತ್ತಾರೆ. ಅದೇ ಥರ ದಿ ವಿಲನ್ ಸಿನಿಮಾದಲ್ಲಿ ಭಾಗವಹಿಸಿದ ಫೋಟೋವನ್ನೂ ಅಪ್‌ಲೋಡ್ ಮಾಡಿದ್ದರು. ಆದರೆ ಅವರು ತನ್ನ ಹೊಸ ಸಿನಿಮಾ ಅಂತ ಹೇಳಿದ್ದಾರೆಯೇ ಹೊರತು ದಿ ವಿಲನ್ ಬಗ್ಗೆ ಒಂದೇ ಮಾತೂ ಹೇಳಿಲ್ಲ. ಪ್ರೇಮ್ ಹೆಸರನ್ನೂ ಎತ್ತಿಲ್ಲ.

ಅದು ಬಿಡಿ, ಈಗ ದಿ ವಿಲನ್ ತಂಡ ಲಂಡನ್‌ನಲ್ಲಿದೆ. ಸುದೀಪ್ ಮತ್ತು ಆ್ಯಮಿ ಜಾಕ್ಸನ್ ಚಿತ್ರೀಕರಣ ಲಂಡನ್ನಿನ  ರೀಜೆಂಟ್‌ ಸ್ಟ್ರೀಟಿನಲ್ಲಿ ನಡೆಯುತ್ತಿದೆ. ಆ್ಯಮಿ ಅಲ್ಲಿ ಇರುವ ಫೋಟೋ ಕೂಡ ಹಾಕಿದ್ದಾರೆ. ಆದರೆ ತನ್ನ ಹೊಸ ಸಿನಿಮಾ ಅಂತ ಹೇಳಿದ್ದಾರೆಯೇ ಹೊರತು ದಿ ವಿಲನ್ ಅಂತಾಗಲಿ ಕನ್ನಡ ಸಿನಿಮಾ ಅಂತಾಗಲಿ ಚಕಾರವೇ ಇಲ್ಲ. ಹೀಗಾಗಿ ಆ್ಯಮಿ ಜಾಕ್ಸನ್‌ಗೆ ದಿ ವಿಲನ್ ಎಂಬ ಹೆಸರೇ ಗೊತ್ತಿಲ್ಲವೇ ಎಂಬ ಡೌಟು ಬರುವುದು ಸಹಜ ಅಲ್ವೇ?

 

-Ad-

Leave Your Comments