ಅಶೋಕ್ ಬಾದರದಿನ್ನಿ ಅಭಿನಯವನ್ನು ನಾನು ಬೆರಗುಗಣ್ಣಿನಿಂದ ನೋಡುತ್ತಿದ್ದೆ -ಉಮಾಶ್ರೀ

ಹಿರಿಯ ರಂಗಕರ್ಮಿ, ನಟ,ನಿರ್ದೇಶಕ ಅಶೋಕ್ ಬಾದರದಿನ್ನಿ ಮರಳಿ ಬಾರದ ಲೋಕ ಸೇರಿದ್ದಾರೆ. ಹೊಸನೀರು ,ಒಂದುಮುತ್ತಿನ ಕಥೆ , ಅಂಜದ ಗಂಡು , ಮನಮೆಚ್ಚಿದ ಹುಡುಗಿ, ವಿಜಯ ಖಡ್ಗ ,ಸಿಡಿದೆದ್ದ ಗಂಡು ಹೀಗೆ ಹಲವಾರು ಚಿತ್ರಗಳಲ್ಲಿ ನಟಿಸಿದವರು .  ಎನ್ ಎಸ್ ರಾವ್ ನಂತರ ಉಮಾಶ್ರೀ ಮತ್ತಿವರ ಜೋಡಿಯ ಬಂಡಿ ಜೋರಾಗೆ ಓಡಿತ್ತು. 80ರಿಂದ 90ರ ದಶಕದ ಕೊನೆವರೆಗೂ ಬೆಳ್ಳಿ ಪರದೆಯಲ್ಲಿ ಮಿಂಚಿದವರು. ಹಲವರ ಮನದಲ್ಲಿ ಮರೆಯಾಗದೆ ಉಳಿದ ನೆನಪುಗಳು ಇಲ್ಲಿವೆ

 

 

umashri-3100
ಉಮಾಶ್ರೀ -ಸಚಿವರು  ಕನ್ನಡ ಮತ್ತು ಸಂಸ್ಕೃತಿ ,ಮಹಿಳಾ ಮತ್ತು ಮಕ್ಕಳ ಕಲ್ಯಾಣ, ವಿಕಲ ಚೇತನರ ಹಾಗು ಹಿರಿಯ ನಾಗರೀಕರ ಸಬಲೀಕರಣ  ಇಲಾಖೆ

ಅಶೋಕ್ ಬಾದರದಿನ್ನಿ ರಂಗಭೂಮಿ ಹಾಗು ಸಿನಿಮಾ ರಂಗಕ್ಕೆ ತಮ್ಮ ಪ್ರತಿಭೆಯನ್ನು ಧಾರೆ ಎರೆದವರು. ನನ್ನ ಜೊತೆ ಅನೇಕ ಚಿತ್ರಗಳಲ್ಲಿ ,ನಾಟಕಗಳಲ್ಲಿ ಅಭಿನಯಿಸಿದವರು. ಅವರ ಅಭಿನಯವನ್ನು ನಾನು ಬೆರಗುಗಣ್ಣಿನಿಂದ ನೋಡುತ್ತಿದ್ದೆ. ಸಿನಿಮಾ ಜೊತೆಗೆ ರಂಗಭೂಮಿಯಲ್ಲೂ ಹಾಸ್ಯಕ್ಕೆ ಹೊಸ ಆಯಾಮ ತಂದುಕೊಟ್ಟವರು ಅಶೋಕ್ ಬಾದರದಿನ್ನಿಯವರು .ಅಂತಹ ಅನನ್ಯ ಕಲಾವಿದನನ್ನು ಕಳೆದುಕೊಂಡಿದ್ದೇವೆ. ಅವರ ಅನಾರೋಗ್ಯದ ವಿಷಯ ತಿಳಿಯುತ್ತಿದ್ದ  ಹಾಗೆ ಚಿತ್ರದುರ್ಗದ  ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕರನ್ನು ಅವರ ಮನೆಗೆ ಕಳುಹಿಸಿ ಅವ್ರ ಆರೋಗ್ಯ ವಿಚಾರಿಸಲು ಹೇಳಿದ್ದೆ. ಬಾದರದಿನ್ನಿಯವರ ಸಂಪೂರ್ಣ ವೈದ್ಯಕೀಯ ವೆಚ್ಚವನ್ನು ಭರಿಸಲು ಕನ್ನಡ ಮತ್ತು ಸಂಸ್ಕೃತಿ ಇಲಾಖೆಗೆ  ಆದೇಶವನ್ನು ಕೊಟ್ಟಿದ್ದೇನೆ.ಅದ್ಭುತ ಕಲಾವಿದನನ್ನು ಕಳೆದುಕೊಂಡ ನೋವು ಕಾಡುತ್ತಿದೆ.

 

13015279_10208717292670699_5624432646410199681_n
ಬಿ ಸುರೇಶ -ನಿರ್ದೇಶಕ

ನನ್ನ ಮೊದಲ ನಾಟಕ “ಕೋತಿ ಕಥೆ ” ನಿರ್ದೇಶಿಸಿದವರು ಬಾದರದಿನ್ನಿ. ನಾಟಕ ಬರೆಯುವುದನ್ನು ಕಲಿಸಿದ ಗುರು ಅಶೋಕ್ .ಅನೇಕ ರಂಗಭೂಮಿ ಚಳುವಳಿಗಳಲ್ಲಿ ಸಕ್ರಿಯರಾಗಿದ್ದವರು . ಬಿಜಾಪುರ ರಂಗ ಚಳುವಳಿಯಲ್ಲಿ ಅವರ ಪಾತ್ರ ಬಹಳ ದೊಡ್ಡದು.  ಬೆಂಗಳೂರಿಗೆ ಬಂದ ಮೊದಲ ದಿನಗಳಲ್ಲಿ ಅವರ ಅಭಿನಯ ಹಾಗು ನಿರ್ದೇಶನದ ಪ್ರತಿಭೆ ಗುರುತಿಸಿದವ್ರು ವಿಜಯಮ್ಮ. ಈ ಹುಡುಗನ ಜೀವನಕ್ಕೊಂದು ದಾರಿ ಕಲ್ಪಿಸಿಕೊಡಬೇಕೆಂದು ತೀರ್ಮಾನಿಸಿ  ನನ್ನ ತಾಯಿ ವಿಜಯಮ್ಮ  ಮತ್ತು ಪಂಡಿತ್ ರಾಜೀವ್ ತಾರಾನಾಥ್ “ಅಭಿನಯ ತರಂಗ ” ಕ್ಕೆ ಮೊದಲ ಪ್ರಾಂಶುಪಾಲರನ್ನಾಗಿ ಮಾಡಿದ್ದರು. ಆನಂತರ ಸಾಕಷ್ಟು ಅವಕಾಶಗಳು ಒದಗಿ ಬಂದಿದ್ದವು. ಸಿನಿಮಾ ರಂಗದಲ್ಲಿ ಸಾಧುಕೋಕಿಲ ಬರುವ ಮುನ್ನ ಹಾಸ್ಯ ಪಾತ್ರಗಳಲ್ಲಿ ಅವಕಾಶಕ್ಕೇನು ಕೊರತೆ ಇರಲಿಲ್ಲ.  ಗೌರಿ ಶಂಕರ ಚಿತ್ರ ನಿರ್ದೇಶನ ಮಾಡಿದರು ಯಶಸ್ಸು ಕಾಣಲಿಲ್ಲ. ಅವ್ರು ಬೆಳಗುವ ಪ್ರತಿಭೆ ಇದ್ದವರು ಮತ್ತಷ್ಟು ಬೆಳೆಯಬೇಕಿತ್ತು. ನನ್ನ ನೆನಪಿನಲ್ಲಂತೂ ಯಾವತ್ತಿಗೂ ಉಳಿಯುವ ಜೀವ ಅಶೋಕ್ ಬಾದರದಿನ್ನಿ.

1483260_10204512873701188_2137668540581119806_n3
ಸತ್ಯಮೂರ್ತಿ ಆನಂದೂರು -ಹಿರಿಯ ಪತ್ರಕರ್ತ

ಬಹಳ ಪ್ರತಿಭಾವಂತ ನಟ ,ನಿರ್ದೇಶಕ ಅಶೋಕ್ ಬಾದರದಿನ್ನಿ . ಲಂಕೇಶರ “ಸಂಕ್ರಾತಿ” ನಾಟಕವನ್ನು ಅದ್ಭುತವಾಗಿ  ರಂಗಕ್ಕೆ ತಂದಿದ್ದರು . ಲಂಕೇಶರನ್ನೇ ಮೆಚ್ಚಿಸಿದ ನಿರ್ದೇಶಕ . ಪತ್ರಿಕೆಯಲ್ಲಿ ಅವರ ಬಗ್ಗೆ ಸ್ವತಃ ಲಂಕೇಶ್ ಪ್ರಶಂಸಿಸಿದ್ದರು . ಬಹಳ ಪ್ರಯೋಗ ಶೀಲ ವ್ಯಕ್ತಿ . ಮೇಕಪ್ ಇಲ್ಲದೆ ನಟರನ್ನು ರಂಗಕ್ಕೆ ತಂದಿದ್ದಲ್ಲದೆ ,ತಾಂತ್ರಿಕವಾಗಿ ಅನೇಕ ಪ್ರಯೋಗಗಳನ್ನು ಮಾಡಿದ್ದರು. ಸಿನಿಮಾದಲ್ಲಿ ಎಂಥೆಥದೋ  ದ್ವಂದ್ವಾರ್ಥದ ಹಾಸ್ಯ ಪಾತ್ರಗಳು ಸಿಕ್ಕಿ ಅವರ ಪ್ರತಿಭೆ ಬೆಳಗಬೇಕಾದ ಮಟ್ಟದಲ್ಲಿ ಬೆಳಗಲೇ ಇಲ್ಲ.

 

14907665_10153800613052364_9096013075769157885_n
ಪ್ರೀತಿ ನಾಗರಾಜ್- ಪತ್ರಕರ್ತೆ

ದಾವಣಗೆರೆಯಲ್ಲಿ  “ಸಂಕ್ರಾಂತಿ” ನಾಟಕದ ರಹರ್ಸಲ್ಗೆ ಹೋಗೋವಾಗ ನನಗೆ 3-4 ವರುಷ. ಎಲ್ಲಿಯವರೆಗೆ ಆ ನಾಟಕ ಪ್ರದರ್ಶನವಾಗುತಿತ್ತು ಅಂದರೆ ನಾನು ದೊಡ್ಡವಳಾದ ಮೇಲೆ ಅದೇ ನಾಟಕದಲ್ಲಿ ನಾಯಕಿಯ ಪಾತ್ರವನ್ನು ಮಾಡಿದೆ. ಸುಮಾರು ೧೫೦ಕ್ಕೂ ಹೆಚ್ಚು ಪ್ರದರ್ಶನ ಕಂಡ ಅದ್ಭುತ ನಾಟಕ ಸಂಕ್ರಾಂತಿ . ಅವ್ರ ನಿರ್ದೇಶನದಲ್ಲಿ ಅಭಿನಯಿಸಿದ್ದು ಮರೆಯಲಾಗದ ಅನುಭವ.

 

 

jayalakshmi-patil
ಜಯಲಕ್ಷ್ಮಿ ಪಾಟೀಲ್ -ನಟಿ

ನನ್ನ ಸೋದರ ಮಾವ. ಹೆಂಡತಿ ಮೂರು ಮಕ್ಕಳನ್ನು ಬಿಟ್ಟು ಹೋಗಿದ್ದಾರೆ. ಹಣವಂತರೇನಲ್ಲ . ೬೪ ಸಾಯುವ ವಯಸ್ಸೂ ಅಲ್ಲ . ಪ್ಯಾರಾಲಿಸಿಸ್ ,ಅಲ್ಸರ್ ಎಲ್ಲಾ ಸೇರಿ ಅವ್ರನ್ನ ಇಹಲೋಕ ತ್ಯಜಿಸುವಂತೆ ಮಾಡಿದವು. ಸಿನಿಮಾ ಬಿಟ್ಟ ಮೇಲೆ ಚಿತ್ರದುರ್ಗದ ಮುರಘಾಮಠದಲ್ಲೇ ಆಶ್ರಯ ಪಡೆದಿದ್ದರು. ಅಲ್ಲೇ ರಂಗ ತರಬೇತಿ ಶಾಲೆ ನಡೆಸುತ್ತಿದ್ದರು. ಮನೆ ,ಮನಸ್ಸಿನಲ್ಲಿ ದುಃಖ ಆವರಿಸಿದೆ.

 

 

ತಾನು ಮರೆಯಾದರು ತನ್ನ ಕಲೆಯನ್ನು ನಮ್ಮ ನೆನಪುಗಳಲ್ಲಿ ಉಳಿಸಿದ ಅಶೋಕ್ ಬಾದರದಿನ್ನಿ ಆತ್ಮಕ್ಕೆ ಶಾಂತಿ ದೊರಕಲಿ .

ನಿರೂಪಣೆ -ಭಾನುಮತಿ ಬಿ ಸಿ

 


 

-Ad-

Leave Your Comments