ಬದ್ಮಾಶ್ ಚಿತ್ರತಂಡದ ಸದಸ್ಯರು ಇತ್ತೀಚಿಗಷ್ಟೆ ತಿರುಪತಿಗೆ ಭೇಟಿ ನೀಡಿ ತಿಮ್ಮಪ್ಪನ ದರ್ಶನ ಪಡೆದು ವಾಪಾಸ್ ಬಂದಿದ್ದಾರೆ.
ಅರೇ ಇವರ್ಯಾಕೆ ತಿಮ್ಮಪ್ಪನ ದರ್ಶನಕ್ಕೆ ಹೋದ್ರು ಅಂತಾ ನಾವು ನಾಯಕ ನಟ ಧನಂಜಯ ಅವರನ್ನು ಸಂಪರ್ಕಿಸಿದಾಗ ‘‘ತಿಮ್ಮಪ್ಪ ಎಲ್ಲ ದೇವರಿಗಿಂತ ತುಂಬಾ ಸ್ಟ್ರಾಂಗ್ ಅಲ್ವಾ, ಅದಕ್ಕೆ ಸಿನಿಮಾ ಬಿಡುಗಡೆಗೂ ಮುನ್ನ, ಅವನ ಆಶೀರ್ವಾದ ತೆಗೆದುಕೊಂಡರೆ ಒಳಿತು ಎಂದು ನಾವೆಲ್ಲ ಹೋಗಿದ್ದೇವೆ,’’ ಎಂದು ಹೇಳಿದರು.
ಮುಂದಿನ ಸೆಪ್ಟಂಬರ್ ಅಥವಾ ಅಕ್ಟೋಬರ್ನಲ್ಲಿ ಬದ್ಮಾಶ್ ಚಿತ್ರಮಂದಿರಗಳಿಗೆ ಅಪ್ಪಳಿಸುತ್ತಾನೆ. ಅದಕ್ಕಿಂತಲೂ ಮುಂಚೆ ಚಿತ್ರ ತಂಡದವರು ತಿರುಪತಿಗೆ ಹೋಗಿ ತಿಮ್ಮಪ್ಪನ ದರ್ಶನ ಪಡೆದು ಬಂದಿರುವುದು ಎಲ್ಲರ ಗಮನ ಸೆಳೆದಿದೆ. ನಾಯಕ ನಟ ಧನಂಜಯ, ನಿರ್ದೇಶಕ ಆಕಾಶ್ ಶ್ರೀವತ್ಸ, ನಿರ್ಮಾಪಕ ರವಿ ಕಶ್ಯಪ್, ಸೇರಿದಂತೆ ಇಡೀ ಚಿತ್ರತಂಡ ತಿರಪತಿಗೆ ಪ್ರಯಾಣ ಬೆಳೆಸಿತ್ತು.
ತನ್ನ ಟೀಸರ್ನಿಂದ ಬಾಲಿವುಡ್ ಸುಲ್ತಾನ್ ಸಲ್ಮಾನ್ ಖಾನ್ ಅವರ ಗಮನವನ್ನು ಸೆಳೆದಿರುವ ಬದ್ಮಾಶ್ ಧನಂಜಯ ಅವರ ಚಿತ್ರಜೀವನದಲ್ಲಿ ಒಂದು ಮೈಲಿಗಲ್ಲಾಗುವ ಎಲ್ಲ ಲಕ್ಷಣಗಳು ಕಾಣುತ್ತಿವೆ. ಟೀಸರ್ ನಂತರ, ಆಡಿಯೋ ಕೂಡಾ ಸಾಕಷ್ಟು ಸದ್ದು ಮಾಡಿತ್ತು. ಜೂಡಾ ಸ್ಯಾಂಡಿ ಹೊಸ ಸಂಗೀತ ನಿರ್ದೇಶಕರಾದರು ಅದ್ಭುತವಾಗಿ ಟ್ಯೂನ್ ಹಾಕಿದ್ದರು.
ಈ ಸಿನಿಮಾ ಗೆದ್ದರೆ ಆಕಾಶ್ ಶ್ರೀವತ್ಸ ಒಬ್ಬ ಒಳ್ಳೆ ಟೆಕ್ನಿಶಿಯನ್ ಆಗಿ ಕನ್ನಡ ಚಿತ್ರರಂಗಕ್ಕೆ ಸಿಗುತ್ತಾರೆ. ಏಕೆಂದರೆ ಮೇಕಿಂಗ್ ನೋಡಿದಾಗ ಆಕಾಶ್ ಅವರ ಕುಸುರಿ ಕೆಲಸ ಎದ್ದು ಕಾಣುತ್ತದೆ. ನಿರ್ಮಾಪಕ ರವಿ ಕಶ್ಯಪ್ ಅವರಿಗೂ ಮೊದಲ ಪ್ರಯತ್ನವಾದ್ದರಿಂದ ಅವರಿಗೂ ಇದು ಅಗ್ನಿ ಪರೀಕ್ಷೆ.
ಈ ಬೆಳವಣಿಗೆಗಳ ನಡುವೆ ಚಿತ್ರತಂಡ ತಿರುಪತಿಗೆ ಹೋಗಿ ದೇವರ ಆಶೀರ್ವಾದವನ್ನು ಪಡೆದಿರುವುದು ತಂಡದ ಆತ್ಮಸ್ಥೈರ್ಯವನ್ನು ಹೆಚ್ಚಿಸಿದೆ ಎಂದು ಹೇಳಬಹುದು.