ನಿಧಾನಿಸಿ ಯೋಚಿಸಿದಾಗ ಆಳಕ್ಕಿಳಿಯುವ “ಬ್ಯುಟಿಫುಲ್ ಮನಸ್ಸುಗಳು”

“ಕೇಳಿದ್ದೂ ಸುಳ್ಳಾಗಬಹುದು ನೋಡಿದ್ದೂ ಸುಳ್ಳಾಗಬಹುದು ನಿಧಾನಿಸಿ ಯೋಚಿಸಿದಾಗ ನಿಜವು  ತಿಳಿವುದು” ಈ ಸಾಲನ್ನ ಮತ್ತೆ ಮತ್ತೆ ನೆನಪಿಸುವ ಸಿನಿಮಾ  “ಬ್ಯುಟಿಫುಲ್ ಮನಸ್ಸುಗಳು”. ಕಥೆಯೇ ಇಲ್ಲಿ ಜೀವಾಳ. ೨೦೧೩ರರಲ್ಲಿ ನಡೆದ ಸತ್ಯ ಘಟನೆಯನ್ನ ಅಬ್ಬರವಿಲ್ಲದೆ, ಹೊಡಿಬಡಿಗಳ ಹಾರಾಟವಿಲ್ಲದೆ ನಿಧನಿಧಾನವಾಗಿ ಒಳ ಒಳ.. ಒಳ ಮನಸ್ಸಿಗೆ ಮುಟ್ಟಿಸುವ ಚಿತ್ರವಿದು.

beautiful cinema 3

ನಿರ್ದೇಶನ:

ಮೊದಲಾರ್ಧದಲ್ಲಿ ಮಾಮೂಲಿ ಪ್ರೇಮ ಕಥೆ ಥರ ಇದೆಯಲ್ಲ ಅನ್ನಿಸುವ ಹಾಗೆ ತೋರಿಸುತ್ತ ಮಧ್ಯೆ ಮಧ್ಯೆ ಮಾಧ್ಯಮಗಳ  (ನ್ಯೂಸ್ ಚಾನೆಲ್) ಕೆಲವು ಮಕ್ಕಿಕಾಮಕ್ಕಿ, ಪೆಕರುತನದ  ಜೊತೆಗೆ “ಬ್ಯುಟಿಫುಲ್ ಮನಸ್ಸುಗಳು”ಅನ್ನೋ ಒಂದೊಳ್ಳೆ ಕಾರ್ಯಕ್ರಮವನ್ನು ತೆರೆಯ ಮೇಲೆ ತಿರುಗಾಡಿಸುತ್ತ ಕುತೂಹಲವನ್ನು ಕಾದಿಟ್ಟುಕೊಳ್ಳುತ್ತಾರೆ ಜಯತೀರ್ಥ.

jayathirtha

ಕೇವಲ ಮೊದಲ ನೋಟದ ಆಕರ್ಷಣೆಯೇ ಪ್ರೀತಿ . ಅಥವಾ ಇಷ್ಟ ಆಗಿಬಿಟ್ರೆ ಸಾಕು ಅದೇ ಪ್ರೀತಿ ಅನ್ನೋ ಭ್ರಮೆಯಲ್ಲಿ ಉಡಾಫೆ ಬದುಕು ದೂಡೋದು ಅಲ್ಲ. ಪ್ರೀತಿ ಅಂದ್ರೆ ನಂಬಿಕೆ, ಜವಾಬ್ದಾರಿ, ಪರಸ್ಪರ ಗೌರವ, ತಾಳುವಿಕೆ ಅನ್ನುವುದನ್ನು ಸಮರ್ಥವಾಗಿ ಕಟ್ಟಿದ್ದಾರೆ. ಯಾರದೋ ಮನೆಯ ಜಗಳ, ಮತ್ಯಾರದೋ ಬದಿಯ ಬದುಕನ್ನು ಬೀದಿಗೆ ತಂದು ಹಿಂದು -ಮುಂದು ಯೋಚಿಸದೆ ಪರಿಣಾಮವನ್ನು ಲೆಕ್ಕಿಸದೆ ಮತ್ತೆ ಮತ್ತೆ ದೃಶ್ಯರೂಪದಲ್ಲಿ ಬಿತ್ತರಿಸಿ ಸಾಮಾಜಿಕ ಬದ್ಧತೆಯನ್ನು ಬದಿಗೊತ್ತುವ ಕೆಲ ವಾಹಿನಿಗಳ ಪೊಳ್ಳುತನ, ಭ್ರಷ್ಟತನವನ್ನ ತೆರೆಗೆಳೆದು ತಂದಿದ್ದಾರೆ ಜಯತೀರ್ಥ.

beautiful cinema 5

ಹೆಣ್ಣುಮಕ್ಕಳ ಮೇಲೆ ಆರೋಪಗಳು ಬಂದಾಗ ಅದರಲ್ಲೂ ವೇಶ್ಯಾವಾಟಿಕೆಯಂಥವು ಕೇಳಿದಾಗ ಸ್ವಲ್ಪವೂ ವಿವೇಚಿಸದೆ ರೋಚಕವಾಗಿ ಪದೇ ಪದೇ ತೋರಿಸುವ ಕೆಲ ಮಾಧ್ಯಮಗಳ ಬಗ್ಗೆ ಅಸಹ್ಯವುಟ್ಟಿದರೂ ಹೆಣ್ಣುಮಕ್ಕಳ ವಿಷಯದಲ್ಲಿ ಸಣ್ಣ ಸತ್ಯವಲ್ಲದ ಚಾಡಿ ಮಾತು ಕೇಳಿದಾಗಲೂ  ಬಾಯಿಂದ ಬಾಯಿಗೆ ಹರಿಯಬಿಟ್ಟು ಅವಳ ಬಾಳಿನ ಬಣ್ಣಗೆಡಿಸುವ ನಮ್ಮ ಜನರ ಮನಸ್ಥಿತಿಯ ಮುಖಕ್ಕೂ ಭೂತಗಾಜು ಬಿಟ್ಟು ನೋಡಿಕೊಳ್ಳಿ ನಿಮ್ಮ ಕೊಳಕು ಮನಃಸ್ಥಿಯನ್ನ ಎನ್ನುವಂತೆ ತೋರಿಸಿದ್ದಾರೆ. ರಕ್ಷಕ ಭಕ್ಷಕನಾದಾಗ ಅಮಾಯಕರ ಪಾಡು ಇಲ್ಲಿ ಕಣ್ಣಿಗೆ ಕಟ್ಟುತ್ತದೆ. ಭಂಡರನ್ನ ಸರಿದಾರಿಗೆ ತರಲು ಮಾತಿನ ಪೆಟ್ಟಿಗಿಂತ ಬ್ರಹ್ಮಾಸ್ತ್ರದ ಪ್ರಯೋಗವೇ ಬೇಕು ಅನ್ನುವುದನ್ನೂ ಯಶಸ್ವಿಯಾಗಿ ಕಟ್ಟಿದ್ದಾರೆ. ಕೊಲೆಗಡುಕನ ಮನಸ್ಸನ್ನೂ  ಬದಲಿಸಿ ಬ್ಯುಟಿಫುಲ್ ಮನಸ್ಸುಗಳಾಗಿಸಿದ್ದಾರೆ. 

ಅಭಿನಯ :

beautiful cinema 4

ನೀನಾಸಂ ಸತೀಶ್ ಚಿತ್ರದಲ್ಲಿ ನಟಿಸಿದ್ದಾರೆ ಅಂತನ್ನಿಸುವುದಿಲ್ಲ. ನಮ್ಮೆದುರೇ ನಡೆಯುತ್ತಿರುವ ಘಟನೆಯಂತೆ, ಪಕ್ಕದಲ್ಲೇ ಇರುವ ಪೊರಕಿಯಂತೆ, ತಪ್ಪಾದಾಗ ತಿದ್ದಿಕೊಂಡು ಬೆಳೆವ ಒಳ್ಳೆ ಹುಡುಗನಂತೆ, ಪ್ರೀತಿಸಿದ ಜೀವಕ್ಕಾಗಿ ಏನನ್ನು ಬೇಕಾದರೂ ಮಾಡಿಬಿಡುವ ಧೈರ್ಯಸ್ಥನಂತೆ ಸಹಜವಾಗಿ ಕಾಣುತ್ತಾರೆ. ನಟಿಸಿದರೂ  ನಟಿಸದಂತೆ ಕಾಣುವುದು ಕಷ್ಟದ ಕೆಲಸ. ಇಷ್ಟ ಪಟ್ಟು ಸೊಗಸಾಗಿ ಮಾಡಿದಂತಿದೆ ಸತೀಶ್ ಅಭಿನಯ.

beautiful cinema 1

ಶ್ರುತಿ ಹರಿಹರನ್ ಪಾತ್ರಕ್ಕೆ ಹೇಳಿಮಾಡಿಸಿದ ನಟಿ. ಆಕೆಯ ಮುಖದಲ್ಲಿ, ಮಾತಿನಲ್ಲಿ ಪ್ರೌಢಿಮೆ ಮಿಂಚುತ್ತದೆ. ಹುಟ್ಟಿದ ಮನೆಯ ನೊಗ ಹೊತ್ತು, ಪ್ರೀತಿಯ ಕರೆಗೆ ಓಗೊಟ್ಟು ಮತ್ತೆ ಅವಮಾನಿತೆಯಾಗುವ ಸನ್ನಿವೇಶಗಳಲ್ಲೂ ಶ್ರುತಿಯದ್ದು ಮೆಚ್ಚುವ ಅಭಿನಯ.

ಅಚ್ಯುತ ಎಂದ್ರೆ ಮೆಚ್ಚುತಾ…

beautiful_manasugalu1

ಭ್ರಷ್ಟ ಪೊಲೀಸ್ ಅಧಿಕಾರಿಯಾಗಿದ್ದವ ತನ್ನದೇ ಮಗಳ ಜೀವಕ್ಕೆ ಕುತ್ತು ಬಂದಾಗ ಸಾಮಾನ್ಯ ಅಪ್ಪನಾಗಿಬಿಡುವ, ಪಶ್ಚಾತಾಪ ಪಡುವ ಪಾತ್ರದಲ್ಲಿ ಅಚ್ಚುತ ಅಭಿನಯಕ್ಕೆ ಮೆಚ್ಚುಗೆಯಲ್ಲದೆ ಮತ್ತೇನು !

ತಬಲಾ ನಾಣಿ, ಪ್ರಶಾಂತ್ ಸಿದ್ದಿ .. ಹೀಗೆ ಎಲ್ಲರು ಎಲ್ಲೂ ಎಲ್ಲೆಮೀರದೆ ಸಹಜವಾಗಿ ನಟಿಸಿದ್ದಾರೆ.

ತಾಂತ್ರಿಕವಾಗಿ ಅದ್ದೂರಿತನವಿಲ್ಲದಿದ್ದರೂ ಎಲ್ಲ.. ಎಲ್ಲರೂ ನೋಡಲೇಬೇಕಾದ ನೋಡಿ ಅರಿಯಬೇಕಾದ  ಸಿನಿಮಾ “ಬ್ಯುಟಿಫುಲ್ ಮನಸ್ಸುಗಳು”

-Ad-

Leave Your Comments