ಬಿ ಸುರೇಶ , ಸತ್ಯ ಪ್ರಕಾಶರ “ನಮ್ಮ ಶಂಕರ “

ಶಂಕರ್ ನಾಗ್  ಎಂದೂ ಮಾಸದ ಮರಳಿ ಮರಳಿ ಉಕ್ಕುವ ನೆನಪು . ಅಗಲಿ ಹತ್ತಾರು ವರುಷಗಳು ಉರುಳಿದರೂ ಜನರ ಮನಸ್ಸಿನಿಂದ ಜಾರದೆ ಕನಸುಗಳಿಗೆ ಕಸುವು ತುಂಬುವ ಚೈತನ್ಯ . ಬದುಕಿನ ಕಡೆಯ ಕ್ಷಣದವರೆಗೂ ನಿಂತನೀರಾಗದೆ ಚಲಶೀಲರಾಗಿದ್ದ ಶಂಕರ್ ನಾಗ್ ಚಲಿಸುತ್ತಿದ್ದ ಕಾರಿನಲ್ಲೇ ಕರಗಿ ಹೋದವರು . ತನ್ನನ್ನು ನಿಕಟವಾಗಿ ಕಂಡವರಿಗಷ್ಟಲ್ಲದೆ ಕಾಣದಿದ್ದವರಿಗೂ ಕನವರಿಕೆಯಾದವರು. ಇಂದು ಅವ್ರ ಹುಟ್ಟಿದ ದಿನ. ಇಲ್ಲಿ  ಪ್ರತಿಭಾವಂತ ಹಿರಿ -ಕಿರಿಯ ಮನಸ್ಸುಗಳು  ಮಾತಾಡಿವೆ .

ಶಂಕರ, ಶಂಕರಣ್ಣ , ಶಂಕರ್ ನಾಗ್ ಹೀಗೆ ಅನೇಕ ಹೆಸರುಗಳಿಂದ ನಮ್ಮ ನೆನಪಿನ ಕೋಶದಲ್ಲಿ ಶಾಶ್ವತತೆಯನ್ನು ಪಡೆದುಕೊಂಡಿರುವ ನನ್ನ ಗೆಳೆಯರಲ್ಲಿ ಒಬ್ಬ ಶಂಕರ್ ನಾಗ್ . ನಮ್ಮಿಬ್ಬರ ಪರಿಚಯವಾಗಿದ್ದೇ ರಂಗಭೂಮಿಯ ಮೂಲಕ. ನಾನು ಅವರ ನಾಟಕಗಳಿಗೆ ನೇಪಥ್ಯದಲ್ಲಿ ಕೆಲಸ ಮಾಡುತ್ತಿದ್ದೆ. ಅವರು ನನ್ನ ನಾಟಕಗಳ ಅಭ್ಯಾಸದ ಸಮಯದಲ್ಲಿ ಬಂದು ತಿದ್ದಿ, ಸಲಹೆಗಳನ್ನು ಕೊಡುತ್ತಿದ್ದರು. ಅವ್ರು ಗೆಳೆಯರೂ ಹೌದು ಅನೇಕ ವಿಷಯಗಳಲ್ಲಿ ನನ್ನ ಗುರುವೂ ಹೌದು.

ಸಂಕೇತ್ ಸ್ಟುಡಿಯೋ ಬಾಗಿಲಲ್ಲಿ ನಿಂತು ” ಏಯ್ ಸುರೇಶ ನನಗೆ ಜೀವಂತದಂತೆ  ಕಾಣಿಸುವ ದೊಡ್ಡ ನಾಯಿ,ಹಾವಿನ ಬೊಂಬೆ ಮಾಡಿಕೊಡಲಿಕ್ಕೆ ಆಗುತ್ತೇನೋ” ಕೇಳಿದ್ದರು . ಆಗಬಹುದು ಅಂದವನೇ ಸಮಯಕ್ಕೆ ಸರಿಯಾಗಿ ಮಾಡಿ ಕೊಟ್ಟಿದ್ದೆ.  ಅದಾಗಿ ಎಷ್ಟೋ  ದಿವಸಗಳ ನಂತರ ನಾಗಮಂಡಲ ನಾಟಕದಲ್ಲಿ  ಎರಡೂ ಬೊಂಬೆಗಳನ್ನೂ ಬಳಸಿದ್ದರು . ಚಿತ್ರಕಲಾ ಪರಿಷತ್ತಿನಲ್ಲಿ ಶಂಕರ್ನಾಗ್ ಅಭಿನಯಿಸಿದ್ದ ಆ ನಾಟಕ ನೋಡಿದವರಿಗಷ್ಟೇ ಅದರ ಆನಂದ ದಕ್ಕಿರಲಿಕ್ಕೆ ಸಾಧ್ಯ.

ಅವ್ರ ಜೋಕುಮಾರ ಸ್ವಾಮಿ ನಾಟಕ ಅವರದೇ ಸಂಸ್ಥೆ ಅಡಿಯಲ್ಲಿ ನಾನು ಸಿನಿಮಾಕ್ಕಾಗಿ ನಿರ್ದೇಶನ ಮಾಡಬೇಕಿತ್ತು . ಅವ್ರ ಸಾವಿನಿಂದ ಅದೂ ಅಲ್ಲಿಗೇ ನಿಂತು ಹೋಯಿತು . ಮತ್ತೆ ನಾನು ನನ್ನಮೊದಲ ಚಿತ್ರ ನಿರ್ದೇಶನಕ್ಕೆ ಎಷ್ಟೋ ವರ್ಷ ಕಾಯಬೇಕಾಯ್ತು .

ಒಬ್ಬರಿಗೊಬ್ಬರು ಆತುಕೊಂಡು , ಒಬ್ಬರಿಗೊಬ್ಬರು  ಬೆಳೆಸುತ್ತಾ ಜೀವನ ನಡೆಸಬೇಕೆನ್ನುವುದಕ್ಕೆ ಶಂಕರ್ ನಾಗ್ ಬಹು ದೊಡ್ಡ ಉದಾಹರಣೆ .ರಸ್ತೆಯಲ್ಲಿ ಹೋಗುವಾಗ ಯಾರಾದರೂ ನಾಟಕದ ರಿಹರ್ಸಲ್ಗೆ ಹೋಗ್ತಾ ಇದ್ದೇವೆ ಅಂದ್ರೆ ಅಲ್ಲೇ ೧೦೦ ರೂಪಾಯಿ ಅವರ ಕೈಗಿತ್ತು ಎಲ್ಲರಿಗೂ ಕಾಫಿ ಕೊಡ್ಸು ಅಂದುಬಿಡ್ತಿದ್ರು. ನಾನು ಇಂಥಾ ಅವರ ಉದಾರತೆಯನ್ನ ಪ್ರತ್ಯಕ್ಷ ಕಂಡಿದ್ದೇನೆ. ಒಂದು ಪ್ರತಿಭೆಯನ್ನ ಶಂಕರ್ ನಂತೆ  ಬೆನ್ನು ತಟ್ಟಿ ಪೋಷಿಸುವ ,ಗೌರವಿಸುವ ಮತ್ತೊಬ್ಬ ವ್ಯಕ್ತಿಯನ್ನು ನಾನು ಕಂಡಿರುವುದು ಅಪರೂಪ .

ಆತನನ್ನು ನಾನು ಸದಾ ನೆನಪಿಸಿಕೊಳ್ಳುವುದು ಆತನ ಕನಸಿನ ಶಕ್ತಿ ಜೊತೆಗೆ ನನಸಾಗಿಸಿಕೊಳ್ಳುವ ಸಾಮರ್ಥ್ಯ. ಪ್ರತಿ ಕ್ಷಣ ಹೊಸದನ್ನು ಆಲೋಚಿಸುವ ಗುಣ. ನಾವೀಗ ಶಂಕರ್ ಹೆಸರಿನಲ್ಲಿ ಇದೇ ತಿಂಗಳು ೧೩ಕ್ಕೆ ಒಬ್ಬ ಹೊಸ ಪ್ರತಿಭಾವಂತ ರಂಗನಿರ್ದೇಶನಿಗೆ ಪ್ರಶಸ್ತಿ ಕೊಡುತ್ತಿದ್ದೇವೆ. ಹೊಸ ನಾಟಕ ತಂಡವನ್ನೂ ಅವರ ಹೆಸರಿನಲ್ಲಿ ಕಟ್ಟುತ್ತಿದ್ದೇವೆ. ೧೫ ಜನ ಹುಡುಗರು ಸಿದ್ಧವಾಗಿದ್ದಾರೆ.ಇವರೆಲ್ಲಾನಾಳೆ ಏನೇನು ಸಾಧಿಸುತ್ತಾರೋ ಅದೆಲ್ಲ ಶಂಕರ್ ನೆನಪಿಗೆ ನಾವು ದಾಟಿಸುತ್ತಿದ್ದೇವಷ್ಟೆ .

ಶಂಕರ್ ನಾಗ್ ಭೌತಿಕವಾಗಿ ಇಲ್ಲದಿರಬಹುದು ನಮ್ಮ ಮನಸ್ಸಿನಲ್ಲಿ ಮಾತ್ರ ಸದಾ ಜೀವಂತವಾಗಿದ್ದಾರೆ .ಕನಸನ್ನು ಹಂಚುವ ಅಣ್ಣನಾಗಿ ಇದ್ದೇ ಇರ್ತಾರೆ .

-ಬಿ ಸುರೇಶ್

ನಿರ್ದೇಶಕರು

ಶಂಕರ್ ನಾಗ್ ಅವ್ರ ಯೋಚನೆ,ಕೆಲಸಗಳ ಮೂಲಕವೇ ಒಬ್ಬ ಕಥೆಗಾರ, ನಿರ್ಮಾಪಕ ,ನಿರ್ದೇಶಕನ ಜೊತೆ ಯಾವತ್ತಿಗೂ ಇರ್ತಾರೆ .ನಂಗೆ ತುಂಬಾ ವಿಸ್ಮಯ ಅನ್ನಿಸುವುದು ೮೦ ರ ದಶಕದಲ್ಲೇ ಒಂದು ಚಿತ್ರ ನಿರ್ಮಾಣದ ಎಲ್ಲ ಕೆಲಸಗಳು ಒಂದೇ ಸೂರಿನಡಿಯಲ್ಲಿ ಸಾಧ್ಯವಾಗಿಸುವ ಅವ್ರ ಯೋಚನೆ . ಇದರಿಂದ ಸಮಯ, ಹಣ ಎಲ್ಲವು ಉಳಿತಾಯ .ಅಳೆದಾಟ ತಪ್ಪಿ ನಿರ್ಮಾಪಕನ ಆತಂಕ ,ನಿರ್ದೇಶಕನ ಒತ್ತಡ ೯೦ ಪರ್ಸೆಂಟ್ ಕಡಿಮೆ ಆಗಿಬಿಡುತ್ತೆ.

ಅವರು ಮಾಡಿರುವ ಕೆಲಸಗಳಲ್ಲಿ ಒಂದೆರಡು ಪರ್ಸೆಂಟ್ ನಾವುಗಳು ಮಾಡಿದ್ರೆ ಅವೇ ಒಂದೊಂದು ಮುತ್ತಿನ ಕಥೆಗಳಾಗಿ ಬಿಡುತ್ತವೆ. ನನ್ನಂಥ ಹೊಸ ನಿರ್ದೇಶಕರಿಗೆ ಶಂಕರ್ ನಾಗ್ ಇಂದಿಗೂ ಬತ್ತದ ಸ್ಪೂರ್ತಿಯ ಸೆಲೆ . ಅವರ ನೆನಪಿನಲ್ಲೇ ಇನ್ನು ಒಳ್ಳೆಯ ಸಿನಿಮಾ ಮಾಡಲು ಪ್ರಯತ್ನಿಸುತ್ತೇನೆ .

ಸತ್ಯಪ್ರಕಾಶ್

ರಾಮಾ ರಾಮಾ ರೇ..

ನಿರ್ದೇಶಕರು

-Ad-

Leave Your Comments