ಸುದೀಪ್ -ಪ್ರಿಯ ಜೋಡಿಗೆ ಬಂದ ಬೆಸ್ಟ್ ವಿಷ್ ಯಾವುದು ?

ಪ್ರೀತಿಸಿ ಮದುವೆಯಾಗಿ ಹದಿನಾರು ವಸಂತಗಳನ್ನು ಕಂಡ ದಂಪತಿಗಳು ಕಿಚ್ಚ ಸುದೀಪ್ ಹಾಗು ಪ್ರಿಯ . ಇಲ್ಲಿ ನೋವು -ನಲಿವು ಎಲ್ಲವೂ ಇತ್ತು . ಬಿರುಗಾಳಿ ಬೀಸಿ ಬೇರಾದದ್ದು ಉಂಟು. ಮತ್ತೆ ತಂಗಾಳಿ ಬೀಸಿ, ಮುದುಡಿದ  ತಾವರೆ ಅರಳಿದಂತೆ ಮನಸ್ಸುಗಳು ನಳನಳಿಸಿ ಸುದೀಪ್-ಪ್ರಿಯಾರ ಪ್ರೇಮ ಪಯಣ ನವವಸಂತಕ್ಕೆ ಕಾಲಿರಿಸಿದೆ .

ಅಭಿಮಾನಿಗಳ  ಹಾರೈಕೆ ಮಹಾಪೂರ ಒಂದೆಡೆಯಾದರೆ  ಹತ್ತಿರದಿಂದ ಬಲ್ಲವರ ಹಿತವಚನ ಮಗದೊಂದು ಕಡೆ .

ಸುಮಲತಾ ಅಂಬರೀಷ್ ಪ್ರಬುದ್ಧ ಹೆಣ್ಣುಮಗಳು. ಸಂಸಾರ ಗುಟ್ಟು ವ್ಯಾದಿ ರಟ್ಟು ಎನ್ನುವುದನ್ನ ಅರ್ಥಮಾಡಿಕೊಂಡ ಸೂಕ್ಷ್ಮಜ್ಞೆ. ಸುದೀಪ್ ಅವರಿಗೆ ಅಚ್ಚುಮೆಚ್ಚು . ಟ್ವಿಟ್ಟರ್ ನಲ್ಲಿ ಸದಾ ಸ್ಪಂದಿಸುವ ಸುಮಲತಾ, ಸುದೀಪ್ ಗೆ ಪ್ರಿಯಾರ ದಂಪತಿಗಳು  ಸಂತೋಷವಾಗಿದ್ದಷ್ಟೂ ಅಂಬರೀಷ್ ಹಾಗು ತಮಗೆ ಸಂತೋಷ ಎಂದಿದ್ದಾರೆ .

ನಿಜಕ್ಕೂ ಎಲ್ಲರ ಹಾರೈಕೆಯ ನಡುವೆ ಎದ್ದು ಕಾಣುವ, ಸುದೀಪ್ ಮಾತ್ರವಲ್ಲದೆ ಎಲ್ಲರಿಗೂ ಅನ್ವಯಿಸುವಂಥ ಅರ್ಥಪೂರ್ಣ ನುಡಿಮುತ್ತುಗಳನ್ನು   ಟ್ವಿಟ್ಟರ್ ನಿಂದ ಹೊಮ್ಮಿಸಿದ್ದು ನವರಸನಾಯಕ ಜಗ್ಗೇಶ್ !

ಜಗ್ಗೇಶ್ ಹಿರಿಯಣ್ಣನಂತೆ ಆಡಿರುವ ಮಾತುಗಳು ಮನಸ್ಸಿಗೆ ತಾಕುವಂತವೇ . ಯಾರು ಎಷ್ಟೇ  ಬೆಳೆದರೂ, ಪಾತಾಳಕ್ಕೆ ಇಳಿದರೂ ನಿಜದ ಪ್ರೀತಿಯ ಮುಂದೆ ಎಲ್ಲವು ಗೌಣ . ಮೆಚ್ಚಿನ ಮಡದಿಯ ಪ್ರೇಮದ ಆಸರೆಗಿಂತ  ಮಿಗಿಲು ಯಾವುದಿದೆ ? ಆಕೆ ಮಾತ್ರ ಮನೆ -ಮನವನ್ನು ಬೆಳಗಬಲ್ಲಳು ಅಲ್ಲವೇ …

ಅಪ್ಪಟ ಪ್ರತಿಭೆಯನ್ನೇ ನೆಚ್ಚಿ ಬೆಳೆದ ನಟ ಸುದೀಪ್ ಏರಬೇಕಾದ ಎತ್ತರ ಇನ್ನೂ ಇದೆ. ಆ ಪಯಣಕ್ಕೆ ಪ್ರಿಯಾರ ಪ್ರೀತಿಯ ಸುಧೆಯೂ ಸೇರಲಿ. ದಾಂಪತ್ಯ ಮತ್ತೆ ಮತ್ತೆ ಅರಳುತ್ತಲೇ ಇರಲಿ.

-Ad-

Leave Your Comments