ರಮೇಶ್, ಪಾರುಲ್ “ಬಟರ್‌ಫ್ಲೈ” ಫಸ್ಟ್ ಲುಕ್ ಹೇಗಿದೆ ಗೊತ್ತಾ?

ರಮೇಶ್ ಅರವಿಂದ್ ಈಗ ಮತ್ತೊಂದು ಸಿನಿಮಾ ನಿರ್ದೇಶನ ಮಾಡುತ್ತಿದ್ದಾರೆ. ಅದರ ಹೆಸರು ಬಟರ್ ಫ್ಲೈ. ಕಂಗನಾ ರಾಣಾವತ್ ಅಭಿನಯಿಸಿದ್ದ ಹಿಂದಿಯ ಕ್ವೀನ್ ಸಿನಿಮಾದ ರಿಮೇಕ್ ಇದು. ಈ ಸಿನಿಮಾ ಕನ್ನಡ, ತಮಿಳು, ತೆಲುಗು ಮತ್ತು ಮಲಯಾಳಂಗೆ ರಿಮೇಕ್ ಆಗುತ್ತಿದೆ. ಅದರ ಕನ್ನಡ ಮತ್ತು ತಮಿಳು ರೀಮೇಕ್ ಅನ್ನು ರಮೇಶ್ ನಿರ್ದೇಶಿಸಲಿದ್ದಾರೆ. ಪಾರುಲ್ ಯಾದವ್ ಅವರು ಕಂಗನಾ ಪಾತ್ರದಲ್ಲಿ ಅಭಿನಯಿಸಲಿದ್ದಾರೆ. ತಮಿಳು ಸಿನಿಮಾದಲ್ಲಿ ಕಂಗನಾ ಮಾಡಿದ ಪಾತ್ರವನ್ನು ಕಾಜಲ್ ಅಗರ್‌ವಾಲ್ ಮಾಡಲಿದ್ದಾರೆ. ಇನ್ನು ಹಿಂದಿಯಲ್ಲಿ ಲೀಸಾ ಹೇಡನ್ ಮಾಡಿದ ಪಾತ್ರವನ್ನು ಎರಡೂ ಭಾಷೆಯಲ್ಲಿ ಆಮಿ ಜಾಕ್ಸನ್ ನಿರ್ವಹಿಸಲಿದ್ದಾರೆ.
ಇಂಟರೆಸ್ಟಿಂಗ್ ಅಂದ್ರೆ ಆ ಸಿನಿಮಾದಲ್ಲಿ ನಟಿಸಬೇಕು ಅಂತ ಮೊದಲು ಆಫರ್ ಬಂದಿದ್ದು ಪಾರುಲ್ ಯಾದವ್ ಅವರಿಗೆ. ಆಗ ಪಾರುಲ್ ಮೊದಲು ಯೋಗರಾಜ ಭಟ್ಟರಿಗೆ ಸಿನಿಮಾ ನಿರ್ದೇಶಿಸುತ್ತೀರಾ ಎಂದು ಕೇಳಿದ್ದಾರೆ. ಆದರೆ ಭಟ್ಟರು ರಮೇಶ್ ಅವರ ಹೆಸರು ಸೂಚಿಸಿದರಂತೆ. ರಮೇಶ್ ಈ ಅವಕಾಶವನ್ನು ಒಪ್ಪಿಕೊಂಡು ಡೈರೆಕ್ಟರ್ ಸೀಟಲ್ಲಿ ಕೂತಿದ್ದಾರೆ. “ಸುಂದರಾಂಗಜಾಣ”ನನ್ನ ತೋರಿಸಿ ಸೈ ಅನ್ನಿಸಿಕೊಂಡಿರುವ ರಮೇಶ್ ಪಾತರಗಿತ್ತಿಯನ್ನ ಪಸಂದಾಗಿ ತೋರಿಸ್ತಾರೆ ಅನ್ನೋ ಭರವಸೆಯಂತೂ ಇದ್ದೇ ಇದೆ.ಸದ್ಯ ಬಟರ್‌ಫ್ಲೈ ಅರ್ಥಾತ್ ಪಾತರಗಿತ್ತಿಯ ಫಸ್ಟ್ ಲುಕ್ ಬಿಡುಗಡೆಯಾಗಿದೆ.
ಕೈಯಲ್ಲಿ ಮದರಂಗಿ ಹಚ್ಚಿದ ಬೆಡಗಿಯೊಬ್ಬಳು ಪ್ಯಾರಿಸ್‌ನಲ್ಲಿರುವ ಐಫೆಲ್ ಟವರ್ ಕನಸು ಕಾಣುವುದನ್ನು ಈ ಫಸ್ಟ್ ಲುಕ್ ವಿವರಿಸುತ್ತದೆ. ಕ್ವೀನ್ ಚಿತ್ರದಲ್ಲಿ ಕಂಗನಾ ಮದುವೆ ಮುರಿದು ಪ್ಯಾರಿಸ್‌ಗೆ ತಿರುಗಲು ಹೋಗುತ್ತಾಳೆ. ಅಲ್ಲಿ ಆತ್ಮವಿಶ್ವಾಸ ಗಳಿಸಿಕೊಂಡು ಬದುಕು ಗೆಲ್ಲುತ್ತಾಳೆ. ಈ ಸಿನಿಮಾ ಬಿಡುಗಡೆಯಾದಾಗ ದೇಶದ ಅನೇಕರು ಸ್ಫೂರ್ತಿ ಪಡೆದಿದ್ದರು. ಕಂಗನಾಳನ್ನು ಸಿಕ್ಕಾಪಟ್ಟೆ ಮೆಚ್ಚಿಕೊಂಡಿದ್ದರು. ಈಗ ಆ ಸಿನಿಮಾ ಕನ್ನಡದಲ್ಲಿ ಸಿದ್ಧವಾಗುತ್ತಿದೆ. ಪ್ರೇಕ್ಷಕರ ಪ್ರತಿಕ್ರಿಯೆ ಹೇಗಿರುತ್ತದೋ ಕಾದು ನೋಡಬೇಕು.
-Ad-

Leave Your Comments