ಅಯ್ಯೋ.. ಮುಗಿಯಿತೇ …ಮುತ್ತಿನ ಹಾರದ ಕವನ.

ಮುತ್ತಿನ ಹಾರ ಸಿನಿಮಾದ ಜೀವ ಕಲಕುವ "ದೇವರು ಹೊಸೆದ ಪ್ರೇಮದ ದಾರ " ಹಾಡು ಕೇಳಿದವರಿಗೆ ಬಾಲಮುರಳಿಕೃಷ್ಣ ಎಂಬ ಮಹಾನ್ ಪ್ರತಿಭೆಯ ಕಂಚಿನ ಕಂಠ ಕಾಡದಿರಲು ಸಾಧ್ಯವೇ ಇಲ್ಲ. ಮುತ್ತಿನ ಹಾರಕ್ಕೆ ಕಂಠವಿತ್ತ ಅಪ್ರತಿಮ ಕಲಾಕಾರ ಚೆನ್ನೈನಲ್ಲಿ ಕೊನೆಯುಸಿರೆಳೆದಿದ್ದಾರೆ.

ಹಲವು ದಶಕಗಳ ಕಾಲ ಭಾರತೀಯ ಸಂಗೀತ ಲೋಕದಲ್ಲಿ ವಿಜೃಂಭಿಸಿದ ಕಲಾ ತಪಸ್ವಿ ಡಾ .ಬಾಲಮುರಳಿಕೃಷ್ಣ. ಅಭಿಮಾನಿಗಳ ಹೃದಯದಲ್ಲಿ ಸದಾ ಅನುರಣಿಸುವ ಆರಾಧ್ಯ ದೈವ.  7ನೇ ವಯಸ್ಸಿಗೆ ವೇದಿಕೆ ಏರಿ ಕರ್ನಾಟಕ ಸಂಗೀತ ಕಚೇರಿ ನೀಡಿ ದಿಗ್ಗಜರಿಂದ ಪ್ರಶಂಸೆ ಗಳಿಸಿದ್ದ ಅನನ್ಯ ಪ್ರತಿಭೆ . 9 ವರುಷಕ್ಕೆ ರೇಡಿಯೋದಲ್ಲಿ ಹಾಡಿ ಗೆದ್ದ ಛಲಗಾರ. 72 ಮೇಳಕರ್ತ ರಾಗಗಳಲ್ಲೂ ಕೀರ್ತನೆ ರಚಿಸಿದ ಮೊದಲಿಗ . ವೀಣೆ,ಮೃದಂಗ, ಕಂಜಿರ ಹಲವು ವಾದ್ಯಗಲ್ಲಿ ಪರಿಣಿತನಾಗಿ ಸರಸ್ವತಿಯ ವರ ಪುತ್ರರೆನಿಸಿದವರು.

ಬಾಲ್ಯದಲ್ಲೇ ಸಿನಿಮಾ ನಂಟು.ತೆಲುಗಿನಲ್ಲಿ ಭಕ್ತಪ್ರಹ್ಲಾದನಾಗಿ ಅಭಿನಯ. ನಂತರ ಶಾಸ್ತ್ರೀಯ ಸಂಗೀತದ ಭದ್ರ ಬುನಾದಿ ಮೇಲೆ ಸಿನಿಮಾ ಗೀತೆಗಳಿಗೂ ಜೀವತುಂಬಿದ ಗಾರುಡಿಗ . ಮನೆ ಮಾತು ತೆಲುಗಾದರು ಕನ್ನಡ ಹಾಡುಗಳಿಗೆ ಜೀವತುಂಬಿದ ಸಿರಿಕಂಠವದು. ಸಂಧ್ಯಾರಾಗ ಸಿನಿಮಾದಲ್ಲಿ ಭಾರತಿ(ಪಾತ್ರ )ಸಾಯುವಾಗ  ರಾಜ್ಕುಮಾರ್ ರವರು ತಂಬೂರಿ ಹಿಡಿದು ಹಾಡುವ ಪೂರ್ವೀಕಲ್ಯಾಣಿ ರಾಗದ “ನಂಬಿದೆ ನಿನ್ನ ನಾದ ದೇವತೆಯೇ ” ಈಗ ಕೇಳಿದರು ಕಣ್ಣಾಲಿಗಳು ತುಂಬಿಕೊಳ್ಳುತ್ತವೆ.

ಶ್ರೀ ರಾಘವೇಂದ್ರ ವೈಭವ ಚಿತ್ರದ “ಇಂದು ಎನಗೆ ಗೋವಿಂದ ” ಕೇಳಿದರೆ ಹೃದಯ ತುಂಬಿ ಬರುವುದಂತೂ ಖರೆ.

ಹಂಸಗೀತೆ ಚಿತ್ರದ “ಹಿಮಾದ್ರಿ ಸುತೆ ” ಗೆ ಅತ್ಯುತ್ತಮ ಹಿನ್ನೆಲೆ ಗಾಯಕನ ಗೌರವ

ಮುತ್ತಿನ ಹಾರದ್ದು ಮತ್ತೊಂದು ಕಥೆ. ಕನ್ನಡ,ತೆಲುಗು ಸಿನಿಮಾಗಳಲ್ಲಿ ಹಾಡಿ ಪ್ರಶಂಸೆ,ಪುರಸ್ಕಾರ ಗಳಿಸಿದರು ಇನ್ನು ನಾನು ಚಿತ್ರಗೀತೆ ಹಾಡುವುದಿಲ್ಲ ಅನ್ನುವ ಹಠಕ್ಕೆ ಬಿದ್ದವರನ್ನು ಮುತ್ತಿನ ಹಾರದ ಕಥೆ ಹೇಳಿ, ಹಾಡು ಕೇಳಿಸಿ ಒಪ್ಪಿಸಿದವ್ರು ನಿರ್ದೇಶಕ ರಾಜೇಂದ್ರ ಸಿಂಗ್ ಬಾಬು. ಮೊದಮೊದಲು ಹಾಡುವುದಿಲ್ಲವೆಂದವರು ಕೊನೆಗೆ ಸಂಗೀತಕ್ಕೆ ಸಾಹಿತ್ಯಕ್ಕೆ ಮನಸೋತು ರಾತ್ರಿ 9.30ರಿಂದ ಬೆಳಗಿನ ಜಾವ 3.30ರ ತನಕ ದಣಿವಿಲ್ಲದೆ ರಾಜೇಂದ್ರ ಸಿಂಗ್ ಬಾಬು ,ಹಂಸಲೇಖಾರನ್ನ ಮೆಚ್ಚಿಕೊಳ್ಳುತ್ತ ಹಾಡಿ ಇವತ್ತಿಗೂ ಸಂಗೀತ ರಸಿಕರ ನಾದ ದೇವತೆಯಾಗಿ ಉಳಿದವರು  ಬಾಲಮುರಳಿ.

ಕನ್ನಡ ಸಿನಿಮಾ ಹಾಡುಗಳ ಜೊತೆಗೆ ದಾಸವಾಣಿಯಲ್ಲೂ ಕನ್ನಡಿಗರ ಮನದಲ್ಲಿ ಮನೆಮಾಡಿದ್ದಾರೆ. ಕನ್ನಡ, ತೆಲುಗಷ್ಟೇ ಅಲ್ಲ ಇಡೀ ಭಾರತೀಯ ಸಂಗೀತ ಲೋಕ ಮರೆಯಲಾರದ ಮಾಣಿಕ್ಯ ಬದುಕಿರುವಾಗಲೇ ಭಾರತರತ್ನ ಕೊಡಲಾಗದಿದ್ದದ್ದು ನಮ್ಮ ಅಲ್ಪತನವಷ್ಟೆ.

ಮುತ್ತು ಪೋಣಿಸಿದಂತೆ ಸ್ವರ ಸೌಧ ಕಟ್ಟಿದ ಬಾಲಮುರಳಿ ಎಂಬ ಮುತ್ತಿನ ಹಾರದ ಕವನ ಕೊನೆಗೂ ಮುಗಿದು ಹೋಗಿದೆ . ಅವರಿನ್ನು  ನೆನಪಾದರೂ, ಹೊಳೆಹೊಳೆವ ಮುತ್ತಿನಂಥ ಅವರ ಗಾಯನ ಅಭಿಮಾನಿಗಳ ಎದೆಯಲ್ಲಿ ಅಜರಾಮರ.

-ಭಾನುಮತಿ ಬಿ ಸಿ

-Ad-

Leave Your Comments