31 C
Bangalore, IN
Wednesday, March 21, 2018
Home ಸಿನಿಮಾ ನ್ಯೂಸ್

ಸಿನಿಮಾ ನ್ಯೂಸ್

CiniAdda.com -  Kannada New Movies

  • Get latest Kannada New Movies & Films Releases from CiniAdda.com.
  • Trailers & Teasers.
  • Reviews & Ratings

ದಂಡುಪಾಳ್ಯ ೨ ಅಫೀಷಿಯಲ್ ಟ್ರೈಲರ್

ಒನ್ಸ್ ಮೋರ್ ಕೌರವನನ್ನ ಕೈ ಹಿಡಿಯದ ಕನ್ನಡಿಗರು

ಸುಮಾರು 20 ವರ್ಷಗಳ ಹಿಂದೆ ನಿರ್ದೇಶಕ ಎಸ್.ಮಹೇಂದರ್ ಅವರ ನಿರ್ದೇಶನದಲ್ಲಿ ಮೂಡಿ ಬಂದ ಬಿ.ಸಿ ಪಾಟೀಲ್ ಹಾಗೂ ಪ್ರೇಮಾ ಅವರ ಅಭಿನಯದ ಕೌರವ ಚಿತ್ರ ಸಾಕಷ್ಟು ಯಶಸ್ವಿಯಾಗಿತ್ತು. ಈಗ ಮಹೇಂದರ್ ಅವರು ‘ಒನ್ಸ್ ಮೋರ್ ಕೌರವ’ ಚಿತ್ರದ ಮೂಲಕ ಮತ್ತೆ ಸಿನಿಮಾ ಕ್ಷೇತ್ರಕ್ಕೆ ಮರಳಿದ್ದು, ಈ ಬಾರಿ ಜನರು ಕೈ ಹಿಡಿಯದೇ ನಿರಾಕರಿಸಿದ್ದಾರೆ.

ಹೌದು, ಇಂದು ಚಿತ್ರ ತೆರೆಕಂಡಿದ್ದು ಮಾಗಡಿ ರಸ್ತೆಯ ಇಟಾ ಮಾಲ್ ನಲ್ಲಿರುವ ಮಲ್ಟಿಪ್ಲೆಕ್ಸ್ ನಲ್ಲಿ ಯಾವುದೇ ಪ್ರೇಕ್ಷಕರಿಲ್ಲದ ಕಾರಣ ಮೊದಲ ಪ್ರದರ್ಶನವನ್ನೇ ರದ್ದು ಮಾಡಲಾಗಿದೆ. ಚಿತ್ರ ಬಿಡುಗಡೆಯಾದ ಮೊದಲ ಪ್ರದರ್ಶನಕ್ಕೆ ಜನರು ಬಾರದಿರುವುದು ತೀವ್ರ ನಿರಾಸೆ ಮೂಡಿಸಿದೆ. ನವೆಂಬರ್ ತಿಂಗಳಲ್ಲಿ ರಾಜ್ಯೋತ್ಸವದ ಅಲೆ ಇದ್ದು ಕನ್ನಡ ಭಾಷೆ, ಚಿತ್ರಗಳಿಗೆ ಪ್ರಾಮುಖ್ಯತೆ ಬೇಕು ಎಂಬ ಕೂಗು ಹೆಚ್ಚುವ ಸಂದರ್ಭದಲ್ಲೇ ಈ ರೀತಿಯ ಬೆಳವಣಿಗೆ ವಿಪರ್ಯಾಸವಾಗಿದೆ.

ಒನ್ಸ್ ಮೋರ್ ಕೌರವ ಎನ್ನುತ್ತಲೇ ಬಂದಿರುವ ಈ ಚಿತ್ರವನ್ನು ಒಂದು ಸಾರಿ ನೋಡಲು ಪ್ರೇಕ್ಷಕರು ಬಾರದಿರುವುದು ಹಾಗೂ ಪ್ರಥಮ ಚುಂಬನಂ ದಂತ ಭಗ್ನಂ ಎನ್ನುವಂತೆ ಮೊದಲ ದಿನದ ಮೊದಲ ಪ್ರದರ್ಶನದಲ್ಲಿ ಚಿತ್ರಮಂದಿರದ ಖಾಲಿ ಕುರ್ಚಿಗಳೇ ಪ್ರೇಕ್ಷಕನಾಗಿರೋದು ನಿಜಕ್ಕೂ ಬೇಸರದ ಸಂಗತಿ.

ಒಂದೇ ಸಿನಿಮಾದಲ್ಲಿ ಯಶ್ ಹಾಗೂ ರಶ್ಮಿಕಾ

ರಾಕಿಂಗ್ ಸ್ಟಾರ್ ಯಶ್ ಹಾಗೂ ಕಿರಿಕ್ ಪಾರ್ಟಿಯ ರಶ್ಮಿಕಾ ಮಂದಣ್ಣ ಒಟ್ಟಿಗೆ ನಟಿಸಲಿದ್ದಾರೆ ಎಂಬ ಮಾತು ಗಾಂಧಿನಗರದಲ್ಲಿ ಹರಿದಾಡುತ್ತಿದೆ.

ಹೌದು, ಕನ್ನಡದ ಸ್ಟಾರ್ ನಟರಿಗೆ ನಾಯಕಿಯಾಗಿ ನಟಿಸುತ್ತಿರುವ ರಶ್ಮಿಕಾ ಈಗ ಯಶ್ ಅವರ ಸಿನಿಮಾಗೂ ನಾಯಕಿಯಾಗಲಿದ್ದಾರೆ. ನೃತ್ಯ ಸಂಯೋಜಕ ಹಾಗೂ ನಿರ್ದೇಶಕ ಹರ್ಷ ತಮ್ಮ ಮುಂದಿನ ಚಿತ್ರವನ್ನು ರಾಕಿಂಗ್ ಸ್ಟಾರ್ ಜೊತೆ ಮಾಡುತ್ತಿದ್ದಾರೆ. ಈ ಚಿತ್ರಕ್ಕೆ ‘ರಾಣಾ’ ಎಂದು ಹೆಸರಿಡಲಾಗಿದೆ. ಈ ಚಿತ್ರದಲ್ಲಿ ರಶ್ಮಿಕಾ ಯಶ್ ಅವರೊಂದಿಗೆ ತೆರೆ ಹಂಚಿಕೊಳ್ಳಲಿದ್ದಾರಂತೆ.

ಅಂದ್ಹಾಗೆ, ಯಶ್ ಅವರ ಜೊತೆ ಸಿನಿಮಾ ಮಾಡಬೇಕೆಂಬ ಆಸೆ ಇದೆ ಎಂದು ಹಲವು ಬಾರಿ ರಶ್ಮಿಕಾ ಹೇಳಿಕೊಂಡಿದ್ದರು. ಈಗ ರಶ್ಮಿಕಾ ಅವರ ಈ ಆಸೆ ನೆರವೇರುತ್ತಿದೆ.

ಸದ್ಯ, ಹರ್ಷ ನಿರ್ದೇಶನ ಮಾಡುತ್ತಿರುವ ‘ಅಂಜನಿಪುತ್ರ’ ಚಿತ್ರದಲ್ಲಿ ರಶ್ಮಿಕಾ ನಾಯಕಿ ಆಗಿ ಅಭಿನಯಿಸುತ್ತಿದ್ದಾರೆ. ಇನ್ನು ಹರ್ಷ ತಮ್ಮ ಮುಂದಿನ ಚಿತ್ರದಲ್ಲಿ ಯಶ್ ಜೊತೆ ಅಭಿನಯಿಸಲು ಹೊಸ ಜೋಡಿಗಾಗಿ ಹುಡುಕಾಟ ನಡೆಸುತ್ತಿದ್ದಾರಂತೆ. ಹೀಗಾಗಿ, ರಶ್ಮಿಕಾ ಅವರನ್ನ ಹರ್ಷ ಆಯ್ಕೆ ಮಾಡಿಕೊಂಡಿದ್ದಾರಂತೆ.

ಹರ್ಷ ನಿರ್ದೇಶನದ ‘ರಾಣಾ’ ಚಿತ್ರದಲ್ಲಿ ರಶ್ಮಿಕಾ ನಾಯಕಿ ಎಂದು ಅಧಿಕೃತ ಘೋಷಣೆ ಆಗಿಲ್ಲ. ರಶ್ಮಿಕಾ ಮಂದಣ್ಣ ಸದ್ಯ ‘ಅಂಜನಿಪುತ್ರ’ ಹಾಗೂ ‘ಚಮಕ್’ ಚಿತ್ರಗಳಲ್ಲಿ ಅಭಿನಯಿಸುತ್ತಿದ್ದಾರೆ. ಇದರ ಜೊತೆ ಎರಡು ತೆಲುಗು ಸಿನಿಮಾಗಳಲ್ಲಿ ಬಣ್ಣ ಹಚ್ಚಿದ್ದಾರೆ. ಈ ಮಧ್ಯೆ ಡೇಟ್ಸ್ ಹೊಂದಾಣಿಕೆ ಆದರೆ, ಖಂಡಿತ ಯಶ್ ಸಿನಿಮಾದಲ್ಲಿ ನಟಿಸುತ್ತಾರೆ ಎನ್ನುತ್ತಿವೆ ಮೂಲಗಳು.

ಜೋಗಿ ಜಗತ್ತಿನಲ್ಲಿ ಏನೇನಿದೆ ? ನಟಿಸುತ್ತಾರಾ ? ನಿರ್ದೇಶನಕ್ಕೆ ಅಣಿಯಾಗುತ್ತಿದ್ದಾರಾ ?

ಮಧ್ಯಂತರ ಮುಗಿದು ಉಳಿದರ್ಧದ ಹೊಸ್ತಿಲಿಗೆ ಬಂದರು ಬರವಣಿಗೆಯ ಬಿಸಿ ಕಾಯ್ದುಕೊಂಡಿರುವ ಅಕ್ಷರ ದಾಹಿ ಜೋಗಿ . ಕಥೆ, ಕಾದಂಬರಿ , ಸಿನಿಮಾ, ಧಾರಾವಾಹಿ,ಪತ್ರಿಕೆ ,ಫೇಸ್ಬುಕ್  ಹೀಗೆ ಎಲ್ಲ ಕಡೆಯೂ ಸಲ್ಲುವ  ಹಸನಾದ ಭಂಡಾರ   ಜೋಗಿಯ ಜೋಳಿಗೆಯಲ್ಲಿ ಬೆಚ್ಚಗಿದೆ . ನಮಗೆ ಕಂಡಿರುವುದಿಷ್ಟು. ಮುಂದೆ ಏನೇನು ಕಾಣಲಿದೆಯೋ ಯಾರಿಗೆ ಗೊತ್ತು ? ೫೨ ರ ಹೊಸ್ತಿಲಲ್ಲಿದ್ದರೂ ಕರಗದ ಕುತೂಹಲ , ಬದುಕಿನೆಡೆಗೊಂದು ಬತ್ತದ ಬೆರಗು ಉಳಿಸಿಕೊಂಡು ನಿತ್ಯ ಸುಖಿಯಂತೆ ಕಾಣುವ ಜೋಗಿಯ ಜೊತೆಯಲ್ಲಿ ಕಳೆದ ಹೊತ್ತನ್ನು ನಿಮಗೂ ದಾಟಿಸುವ ಪ್ರಯತ್ನವಿದು . ನೀವು ಕೊಟ್ಟ ಸಮಯಕ್ಕೆ ಮೋಸವಿಲ್ಲ ಓದಿಕೊಳ್ಳಿ.

‘ಸಮಯದ ಹಿಂದೆ ಸವಾರಿ’ ನನ್ನ ಮೊದಲ  ಕಾದಂಬರಿ ಸಿನಿಮಾವಾಗುತ್ತಿದೆ. ರಾಜ್ ಗುರು-ನಯನ ಸೂಡ ಹೊಸ ಹುಡುಗರ ತಂಡ ಈಗಾಗಲೇ ಆಡಿಯೋ  ರಿಲೀಸ್ ಮಾಡಿದೆ.

jogi-kathe 

“ಕಥೆ -ಚಿತ್ರಕಥೆ -ಸಂಭಾಷಣೆ “ ನನ್ನ ಹೊಸ ಕನಸು. ಹೊಸದಾಗಿ ಸಿನಿಮಾ ಮಾಡುವವರಿಗೆ ನನ್ನ ಮೂವತ್ತು ವರುಷಗಳ ಅನುಭವ ಹಂಚಿಕೊಳ್ಳುವ ಪುಸ್ತಕ. ಇದರ ಜೊತೆಗೆ ಅದ್ಭುತವಾದ ಸಿನಿಮಾಗಳನ್ನು ಗ್ರಹಿಸುವ ಯೋಗರಾಜ್ ಭಟ್, ಪವನ್, ಹೇಮಂತ್ ,ರಘುಶಾಸ್ತ್ರಿ ಬಿ ಸುರೇಶ ,ಲಿಂಗದೇವರು ಒಂದು ಕಥೆಯನ್ನ ಹೇಗೆ ಚಿತ್ರಕ್ಕೆ ಒಗ್ಗಿಸುವುದು ,ಸಂಭಾಷಣೆ ಹೇಗೆ ಕಟ್ಟಬೇಕು ಇಂಥಾ ಅನೇಕ ಸಂಗತಿಗಳನ್ನ ದಾಖಲಿಸುತ್ತಾರೆ. ಇದು ಪಠ್ಯ ಪುಸ್ತಕವಾಗದೆ ಎಂಥವರಿಗೂ ಅರ್ಥವಾಗುವ ಹಾಗೆ ಸರಳವಾಗಿ ರೂಪಿಸಬೇಕು .ಅನುಭವ ಕಥನವಾಗಬೇಕು ಇದು ಸದ್ಯದ ನನ್ನ ಯೋಜನೆ .

ಸಮಯದ ಹಿಂದೆ ಸವಾರಿಯಲ್ಲಿ ನಿಮ್ಮ ಪಾತ್ರವೆಷ್ಟು ?

ಇಲ್ಲಿ ಕಥೆಯಷ್ಟೇ ನನ್ನದು. ಸಂಭಾಷಣೆ ನನ್ನದಲ್ಲ. 6-7  ಜನ ಸೇರಿ ಚಿತ್ರ ಕಥೆ ಮಾಡುವುದರಲ್ಲಿ ನನಗೆ ನಂಬಿಕೆ ಇಲ್ಲ. ನಾನು ಮಾಡಿದರೆ ಮಾತ್ರ ಅದು ನನ್ನ ಸಿನಿಮಾ. ಇನ್ಯಾರೋ ಮಾಡಿದರೆ ಅದು ಅವ್ರದ್ದು ಅಷ್ಟೆ. ಕಥೆ ಹುಟ್ಟುವುದು ಧ್ಯಾನಸ್ಥ ಸ್ಥಿತಿಯಲ್ಲಿ ಮಾತ್ರ. ಪ್ರತಿಯೊಬ್ಬರಲ್ಲೂ ಒಂದೊಂದು ಕಥೆ ಇದೆ ನಿಜ. ಹಾಗಂತ ಎಲ್ಲರದನ್ನು ಕೇಳಿ ಚಿತ್ರಕಥೆ ಮಾಡುವುದಾದ್ರೆ ಒಂದು ಸಿನಿಮಾ ಆಗಲಿಕ್ಕೆ ಹತ್ತು ವರುಷ ಬೇಕು. ನಾನು ಸುಮ್ಮನೆ ಗೀಚುವವನಲ್ಲ .ನನ್ನ ಆಯಸ್ಸಿನ ಅಮೂಲ್ಯ ಕ್ಷಣ ಬರವಣಿಗೆಯಲ್ಲಿರುತ್ತದೆ ಅಂದಾಗ ಅದಕ್ಕೆ ಬೆಲೆ ಇರಲೇ ಬೇಕಲ್ಲ.

ಕಥೆಗಿಂತ ಹೀರೋ ವಿಜೃಂಭಣೆಯ  ಚಿತ್ರಗಳೇ ಮೆರೆಯುತ್ತಿವೆಯಲ್ಲ ?

ಹೀರೋಯಿಸಂ ಚಿತ್ರಗಳು ವರ್ಷಕ್ಕೆ 5-6 ಬರ್ತಾ ಇವೆ. ಇಂಡಸ್ಟ್ರಿ ಉಳಿಯಲಿಕ್ಕೆ ಅಂಥಾ ಚಿತ್ರಗಳು ಬೇಕು. ದೊಡ್ಡ ಬಜೆಟ್ ಇರುವಲ್ಲಿ 300-3000 ಮಂದಿಗೆ ಕೆಲಸ ಸಿಗುತ್ತಲ್ಲ.

ಹಾಗಾದ್ರೆ ಕಥೆ ಕಾಣದೆ ನಾಯಕನ ಮೆರೆದಾಟವಿದ್ರೆ ಪ್ರೇಕ್ಷಕನಿಗೆ ಸಾಕು ಅಂತೀರಾ ?

ಒಬ್ಬ ಹೀರೋನ ಸಿನಿಮಾಕ್ಕೆ ಹೋದಾಗ  ಬಹಳಷ್ಟು ಜನ ನೋಡುವುದು ನಾಯಕನನ್ನೇ ಹೊರತು ಕಥೆಯನ್ನಲ್ಲ.ಕೆಲವು ಕಡೆ ನಿರ್ದೇಶಕನ ಕನಸು ಕಲ್ಪನೆಗೆ ಯಾವ ಕಿಮ್ಮತ್ತು ಇರೋದಿಲ್ಲ. ಹೀರೋ ವಿಜೃಂಭಿಸುವ ಸಂಭಾಷಣೆಗಳೇ ತುಂಬಿ ತುಳುಕಾಡುತ್ತವೆ. ಹಾಗೆ ಮೆರೆಸದಿದ್ದರೆ ಸಿನಿಮಾಗಳು ಓಡುವುದಿಲ್ಲ . ಯುವಜನರಿಗೆ ಇಂಥಾ ಚಿತ್ರಗಳೇ ಬೇಕು. ವೇದಾಂತ, ಫಿಲಾಸಫಿ ಕೊಡೋಕ್ಕಾಗಲ್ಲ. ಅವ್ರಿಗೆ ಕಥೆಗಿಂತ ಹೆಚ್ಚು ರಂಜನೆ ಬೇಕು.

ಜನ ಇಂಥವನ್ನ ನಿಜವಾಗ್ಲೂ ಬಯಸ್ತಾ ಇದ್ದಾರಾ ? ಅಥವಾ ಅವ್ರ ಮೇಲೆ  ಹೇರಾಟ ನಡೆದಿದೆಯಾ ?

ನಾನು ಆ ವಯಸ್ಸಲ್ಲಿ ಸಿಡಿದೆದ್ದ ಸಹೋದರ, ಸಾಹಸಸಿಂಹ, ಶಂಕರ್ ಗುರು ,ಗುರಿ ಇಂಥಾ ಸಿನಿಮಾಗಳನ್ನೇ ನೋಡ್ತಾ ಇದ್ದಿದ್ದು.ವಯಸ್ಸಿಗೆ ತಕ್ಕದ್ದನ್ನೆ ಕೊಡ್ಬೇಕು . ಇಲ್ಲದಿದ್ರೆ ಓವರ್ ಡೋಸ್ ಆಗಲ್ವ ? ಆ ಕಾರಣಕ್ಕೆ ಯಶ್ ,ಸುದೀಪ್ ,ದರ್ಶನ್ ,ಪುನೀತ್ ಸಿನಿಮಾಗಳು ಬೇಕು. ಜೊತೆಗೆ ಕಾಸರವಳ್ಳಿ ಇದ್ದಾರಲ್ಲ.

ಮನುಷ್ಯನಿಗೆ ಮನರಂಜನೆ ಬೇಕು. ಆಟಗಳು ಬೇಕು ,ಪಾರ್ಕ್ನಲ್ಲಿ ಸುತ್ತಾಡಬೇಕು ,ಪ್ರೇಮಿಸಬೇಕು,ಸಂಭ್ರಮಗಳು ಬೇಕು ಅದಕ್ಕೆ ಇಂಥಾ ಸಿನಿಮಾಗಳು. ಗಾಢವಾದ ಕಥೆಗಳು ಬೇಕು ಅನ್ನಿಸುವುದು 50 ದಾಟಿದ ಮೇಲೆ.

ರಾಜ್ಕುಮಾರ್ ಚಿತ್ರಗಳಲ್ಲಿ ಕಥೆ ,ಹೀರೋಯಿಸಂ ಎರಡು ಇತ್ತಲ್ಲ . ಅವತ್ತಿಗೂ ಗೆದ್ದು ಇವತ್ತಿಗೂ ಕಾಡುತ್ತವಲ್ಲ . ಇಂದಿನವರಿಗೆ ಯಾಕೆ ಸಾಧ್ಯವಾಗುತ್ತಿಲ್ಲ ?

ಆಗ ತಂತ್ರಜ್ನಾನದ ಬೆಂಬಲ ಇರಲಿಲ್ಲ. ಕಥೆಗಳಲ್ಲೇ ಎಲ್ಲವನ್ನೂ ಕಟ್ಟಿಕೊಡಬೇಕಿತ್ತು. ಜೊತೆಗೆ ಪಾತ್ರಗಳ ವೈಭವೀಕರಣವೂ ಇತ್ತು. ಆಗಿನ ಪೌರಾಣಿಕ, ಐತಿಹಾಸಿಕ ಚಿತ್ರಗಳಲ್ಲಿ ಏನಿತ್ತೋ ಇಲ್ಲೂ ಅದೇ ಇದೆ. ಬಬ್ರುವಾಹನದಲ್ಲಿ ಹೊಡೆದಾಟವಿತ್ತು. ಇವತ್ತಿಗೂ ಹೊಡೆದಾಟವಿದೆ.

ಅಮಿತಾಬ್ ಬಂದಿದ್ದು ಜಮೀನ್ದಾರನ ವಿರುದ್ಧ ಹೋರಾಡುವ angry young man ರೂಪದಲ್ಲಿ. ಸಂಪತ್ತಿಗೆ ಸವಾಲ್ ಕೂಡ ಅಷ್ಟೇ . ಇಂದಿನವರು ಯಾರ ವಿರುದ್ಧ ಹೋರಾಡಬೇಕು? ನಾವೇ ಆರಿಸಿ ಕಳುಹಿಸಿದ ಸರ್ಕಾರದ ವಿರುದ್ಧ ಬಡಿದಾಡಬೇಕು. ಜಾತಿ ಪದ್ಧತಿ , ಅಂತರ್ಜಾತಿ ವಿವಾಹ ಇವೆಲ್ಲ ಹಿಂದಿನಷ್ಟು ಗಾಢವಾಗಿ ಇಲ್ಲದಿರೋದ್ರಿಂದ ಇಂತಹ  ಕಥೆ ಇಟ್ಕೊಂಡು ಸಿನಿಮಾ ಮಾಡೋಕ್ಕಾಗಲ್ಲ.

ನೀವು ಸೋಷಿಯಲ್ ಮೀಡಿಯಾದಲ್ಲಿ active ಆಗಿದ್ದೀರಿ . ಅಲ್ಲಿ ದಿನ ಬೆಳಗಾದರೆ ಜಾತಿ,ಧರ್ಮದ ಜಟಾಪಟಿಗಳು ನಡೀತಾನೇ ಇವೆಯಲ್ಲ ?

ಜಾತಿ ಹೆಸರಿನಿಂದ ಹಿಂದಿನಂತೆ ಅವಮಾನಕ್ಕೆ ಈಡಾಗುವುದು ಕೆಡಿಮೆ ಆಗಿದೆ. ಅಂದ್ರೆ ಹೋಟೆಲ್ ನಿಂದ ಆಚೆಗೆ ಅಟ್ಟುವುದು, ಮಣ್ಣಿನ ತಟ್ಟೆಯಲ್ಲಿ ಊಟ ಹಾಕುವುದು ಈಗಿಲ್ಲ .ಗಾಂಧೀಜಿಯನ್ನ ರೈಲಿನಿಂದ ದೂಡಿದಂಥಾ ಘಟನೆಗಳು ಈಗ ನೆಡೆಯುತ್ತಿಲ್ಲ .ಎಲ್ಲೋ ಒಂದು ಕಡೆ ಮರ್ಯಾದಾ ಹತ್ಯೆ ಸುದ್ದಿ ಕೇಳಬಹುದು ಅಷ್ಟೆ. ಹಾಗಾಗಿ ಪ್ರೇಮ ಕಥೆಯುಳ್ಳ ಸಿನಿಮಾಗಳನ್ನ ಮಾಡ್ಬೇಕು . ಮಾಡ್ತಿದ್ದಾರೆ .

ಒಂದು ವಲಯದ ಪ್ರಕಾರ ಜೋಗಿ ಬರವಣಿಗೆ ತೆಳು ಅಂತಲ್ಲ ? ನಿಮಗೆ ಏನನ್ನಿಸುತ್ತೆ ?

jogi-books-35

ನಾನು ಬರೆಯುವುದು ನನ್ನ ಖುಷಿಗಾಗಿ. ನನ್ನ ಓದುಗರು ನಾಳೆಯವರೇ ಹೊರತು ನಿನ್ನೆಯವರಲ್ಲ.ಈಗ ತಾನೇ ಕನ್ನಡ ಓದಲು ಕಲಿತವರೂ ನನ್ನ ಪುಸ್ತಕಗಳನ್ನ ಓದಬೇಕು. ನನಗೀಗ 51. 25 ರ ಆಸುಪಾಸಿನವರು ನನ್ನ ಪುಸ್ತಕಗಳನ್ನ ಓದಬೇಕು .ಮುಖ್ಯವಾಗಿ ಸರಳವಾಗಿ ಬರೆಯಬೇಕು. ಈಗ ಎಲ್ಲವೂ ಮೊಬೈಲ್ನಲ್ಲಿ ಸಿಗುವ ಕಾಲ. ಹೇಳುವುದನ್ನ ಕಡಿಮೆ ಕಾಲದಲ್ಲಿ ಹೇಳಬೇಕು. ಬರವಣಿಗೆ ಚಿಕ್ಕದಾಗಿ ಸರಳವಾಗಿರಬೇಕು.

ಹಾಗಾದ್ರೆ ಜನಪ್ರಿಯ ಸಾಹಿತ್ಯ ನಿಮ್ಮದು ?

jogi-books-43

ನಾನದನ್ನು “ಜನಪ್ರಿಯ ” “ಜನಪರ ” ಅಂತೆಲ್ಲ ಕರೆಯುವುದಿಲ್ಲ.ನನಗೆ ನಂಬಿಕೆ ಇರುವುದು ಬದುಕಿನ ಉಲ್ಲಾಸದಲ್ಲಿ. ನೋವುಗಳೂ ಕೂಡ ಉಲ್ಲಾಸದ ಒಂದು ಭಾಗ. ನಮ್ಮ ನೋವುಗಳನ್ನು ಸಂಭ್ರಮಿಸಬೇಕು. ಯಶವಂತ ಚಿತ್ತಾಲರ “ಶಿಖಾರಿ ” ಖಾಸನೀಸರ ಕಥೆಗಳು ನೋವಿನಿಂದಲೇ ಹುಟ್ಟಿದ ಕೃತಿಗಳು .ಜಯಂತ್ ಕಾಯ್ಕಿಣಿ ಜನರಿಗೆ ಹತ್ತಿರವಾಗಿರುವುದು ಸಿನಿಮಾ ಹಾಡುಗಳಿಂದಾನೆ. ಅವ್ರ ಗಾಢ  ಸಾಹಿತ್ಯದಿಂದಲ್ಲ. ಲಂಕೇಶರು ನೀಲು ಪದ್ಯಗಳನ್ನು ಜನಪ್ರಿಯ ಧಾಟಿಯಲ್ಲೇ ಬರೆದದ್ದು.

ನನ್ನೆಲ್ಲ ಕಥೆಗಳು ,ಕಾದಂಬರಿಗಳು ನಾನು ನೋಡಿದ ,ಅನುಭವಿಸಿದ  ಘಟನೆಗಳೆ.

ಸಿನಿಮಾ ನಿರ್ದೇಶನ ? ನಟಿಸುವ ಯೋಚನೆ ,ಯೋಜನೆ ಇದೆಯಾ ?

12795379_10153928595149941_5454798166570350231_n

ಯಾವುದು ನನ್ನದಲ್ಲ ಎನ್ನುವ ಸ್ಪಷ್ಟ ಕಲ್ಪನೆ ನನಗಿದೆ. ನಿರ್ದೇಶನ ಮಾಡುವ ತಾಳ್ಮೆ ನಂಗಿಲ್ಲ. ನಟನೆ ಆಗಿ ಬರಲ್ಲ. ಒಂದು ಸಣ್ಣ ಪಾತ್ರಕ್ಕಾಗಿ ದಿನವಿಡೀ ಕಾಯುವ ವ್ಯವಧಾನ ನನಗಿಲ್ಲ.

 

ಧಾರವಾಹಿಗಳಲ್ಲಿ ಇತ್ತೀಚೆಗಂತು ಕೆಟ್ಟ ಅತ್ತೆ, ಕೆಟ್ಟ ಸೊಸೆ , ಕೇಡಿಗ ಬಾಸ್ ಅಂದ್ರೆ ಹೆಣ್ಣನ್ನ ಕೆಟ್ಟದಾಗಿ ತೋರಿಸುವ ಕಥೆ ನಡೀತಿದೆಯಲ್ಲ . ನೋಡುವವರು ಹೆಚ್ಚಾಗಿ ಹೆಣ್ಣುಮಕ್ಕಳೇ .ಅದರಲ್ಲೂ ಹೆಚ್ಚು ತಿಳುವಳಿಕೆ ಇಲ್ಲದವರು . ಇಂಥವು ಮತ್ತಷ್ಟು ಕೆಟ್ಟ ಪರಿಣಾಮ ಬೀರುವುದಿಲ್ಲವೇ ?

ಎಲ್ಲರ ಬುದ್ಧಿಮಟ್ಟ ಒಂದೇ ಆಗಿರುವುದಿಲ್ಲ . ಇವತ್ತಷ್ಟೇ ಅಲ್ಲ ಅವತ್ತೂ ಮನೆ ಮುರಿಯುವಂಥ ಮಂಥರೆ ಇದ್ದಳು .ಮಹಾಭಾರತದಲ್ಲಿ ಎಂಥೆಂಥಾ ಕೇಡಿಗರಿಲ್ಲ? ಇಲ್ಲಿರುವುದು ಎರಡೇ .ಒಳ್ಳೆಯದು -ಕೆಟ್ಟದ್ದು .

ಸಾಯಿಸುತೆ ಕಾದಂಬರಿಯಲ್ಲೂ ಕೆಟ್ಟ ಅತ್ತೆ,ನಾದಿನಿ ಇದ್ದರು. ಇವತ್ತು ಸುದ್ದಿ ವಾಹಿನಿಗಳ ವಿಶೇಷ ವರದಿಗಳನ್ನ ನೋಡಿ  ಅತ್ತೆ -ಸೊಸೆ ಕಾಟ ,ಕಡಿದಾಟ. ವಿವಾಹಬಾಹಿರ ಸಂಬಂಧಗಳ ಬಡಿದಾಟ ಇಂಥದ್ದೇ ಇದೆ. ಅಂದ್ರೆ ಇದು ಸಮಾಜದ ಪ್ರತಿಬಿಂಬ ಅಷ್ಟೆ .

ಇವತ್ತಿಗೂ ನಿಮ್ಮನ್ನ exite ಮಾಡೋದು ಯಾವುದು?

14022232_10154410149029941_1263563818442436497_n

ಆಕಾಶ !! ಅದರ ವೈಶಾಲ್ಯ ನನಗಿಷ್ಟ. ಕಣ್ಣತುಂಬ ಆಕಾಶವೇ ಕಾಣುವಂಥ ಬಯಲಲ್ಲಿ ಬದುಕುವುದು ನನ್ನಾಸೆ.

 

 

 

ಈಗೇನು ಓದುತ್ತಿದ್ದೀರಿ ? ಯಾವ ಸಿನಿಮಾ ನೋಡಿದ್ರಿ ?

ಮೊನ್ನೆ ಯಾರೋ “ಭಿನ್ನ ” ಅಂತ ಒಂದು ಕಾದಂಬರಿ ತಂದು ಕೊಟ್ಟಿದ್ದಾರೆ. ಓದ್ತಾ ಇದ್ದೇನೆ. ನಾನೇ ಆರಂಭಿಸಿದ ಅಪರಿಚಿತರಿಗೊಂದು ಪುಸ್ತಕ ನನಗೂ ಬಂದಿದೆ . ಲಕ್ಷ್ಮಿಕಾಂತ್ ಇಟ್ನಾಳ್ ಅನುವಾದದ ಗುಲ್ಜಾರ್  ಹೊತ್ತಿಗೆ ಬಂದಿದೆ. ಓದಬೇಕು. ಜೇಮ್ಸ್ ಬಾಂಡ್ ನಿಂದ ಹಿಡಿದು ಎಲ್ಲ ರೀತಿಯ ಸಿನಿಮಾ ನೋಡ್ತೀನಿ. ಎಲ್ಲವನ್ನು ನೋಡುವ, ಗ್ರಹಿಸುವ ಗುಣ ಬಂದಿದ್ದು ವೈಎನ್ಕೆ ಇಂದ. ಎಲ್ಲ ತರಹದ ಸಂಗೀತ ಕೇಳ್ತೀನಿ. ಈಗಲೂ ಚೆಂದಮಾಮ ಸಿಕ್ಕಿದ್ರೆ ಓದದೆ ಬಿಡಲ್ಲ. ನನ್ನ ಹತ್ತಿರ 500 ಚಂದಮಾಮ ಇದೆ.

ಕಾಡು ಸೇರುವ ವಾಸನೆ ನಿಮ್ಮ FB ಪೋಸ್ಟ್ನಲ್ಲಿ ಬಡಿದಿತ್ತಲ್ಲ.ಬೆಂಗಳೂರು ಬಿಡುವ ಯೋಚನೆ ಇದೆಯಾ ?

ಇಲ್ಲ. ಊರುಗಳೆಲ್ಲ ಸಣ್ಣ ನಗರಗಳಂತಾಗಿ ಬಿಟ್ಟಿವೆ. ಇಲ್ಲಿ ಸಿಗುವ ಪಾನಿಪುರಿ, ಕುರ್ಕುರೆ ಎಲ್ಲ ಅಲ್ಲೂ ಸಿಗುತ್ತೆ. ನಮ್ಮ ಹಳ್ಳಿಗಳು ವೈಶಿಷ್ಯ ಕಳೆದುಕೊಂಡಿವೆ. ಕಾಡನಲ್ಲಿ ಧ್ಯಾನಿಸುತ್ತೇನೆ ಅಂತಾನೂ ಹೇಳಕ್ಕಾಗಲ್ಲ.ಅಲ್ಲಿ ಇರುವವರು ಆಚೆ ಬರಲಿಕ್ಕೆ ಕಾಯ್ತಾ ಇದ್ದಾರೆ. ಮನುಷ್ಯನಿಗೆ ತಾನಿರುವ ಜಾಗ ಯಾವತ್ತೂ ಇಷ್ಟವಾಗಲ್ಲ. ನಮ್ಮ ಜೀವನ ಇನ್ನೆಲ್ಲೋ ಇದೆ ಅಂತ ಸದಾ ಹುಡುಕುವುದೇ ಕೆಲಸ. ನಾನು ಇಲ್ಲಿದ್ದರೆ ಇಲ್ಲೇ ಅಲ್ಲಿದ್ದರೆ ಅಲ್ಲೇ ಜೀವನ ಇದೆ ಅಂದುಕೊಂಡಿದ್ದೇನೆ.

“ಜೋಗಿಯ ಹೊತ್ತು ” ಹೇಗಿತ್ತು ಹೇಳಿ ? ಕಾಯ್ತಿರ್ತೆನೆ .

-ಭಾನುಮತಿ ಬಿ ಸಿ

 

ಆಹಾ ನನ್ನ ರಾಜಕುಮಾರ !! ಅವಳನ್ನು ಇಂದಿಗೂ ಕಾಡುತ್ತಿರುವ ರಸಿಕರ ರಾಜ

ರಾಜ್ ಕುಮಾರ್ ಯಾರನ್ನ ಮೋಹಗೊಳಿಸಿಲ್ಲ ಹೇಳಿ ? ಸಿಕ್ಕ್ರೆ ಇಂಥಾ ಪ್ರೇಮಿ,ಕಟ್ಟಿಕೊಂಡರೆ ರಾಜಕುಮಾರನಂಥ ಗಂಡ , ಹಡೆದರೆ ಅವನಂಥ ಮಗ ಹೀಗೆ ಎಲ್ಲ ಕಡೆಯೂ ಆವರಿಸಿಕೊಂಡು ಕಾಡಿದ , ಕಾಡುತ್ತಿರುವ ಮತ್ತೆ ಮತ್ತೆ ಬೇಕೆನಿಸುವ ಮುತ್ತಿನಂಥ ರಾಜ . ಇನ್ನಿಲ್ಲದಂತೆ ತನ್ನ ಒಳಮನಸ್ಸಿಗೆ ಲಗ್ಗೆ ಇಟ್ಟಿದ್ದು ಯಾವಾಗ? ಇಂದಿಗೂ ಅವರನ್ನ ಹೇಗೆ ಹೃದಯಾಂತರಾಳದಲ್ಲಿ ಬಚ್ಚಿಟ್ಟುಕೊಂಡಿದ್ದೇನೆ   ಎಂಬುದನ್ನು ಆಕಾಶವಾಣಿ fm.Rainbow ರೇಡಿಯೋ ಜಾಕಿ ,ಮಾನಸಿಕ ಸಲಹೆಗಾರ್ತಿ ಆಶಾ ಆರ್ ವಿಶ್ವನಾಥ್ ಬೊಂಬಾಟ್ ಆಗಿ ಬರೆದಿದ್ದಾರೆ ಓದ್ಕೊಳ್ಳಿ ..

2006 ಏಪ್ರಿಲ್ 12 ರ ಮಟಮಟ ಮಧ್ಯಾಹ್ನ ಸುಮಾರು 02:50.
3 ಗಂಟೆಗೆ ಸರಿಯಾಗಿ “ಹಾಡು ಆಟ ಆಡು” ಗೇಮ್ ಶೋ ನೇರಪ್ರಸಾರ ನಡೆಸಿಕೊಡಲು ನಾನು ಆಕಾಶವಾಣಿ fm.Rainbow ಸ್ಟುಡಿಯೋದಲ್ಲಿ ಕೂತಿದ್ದಂಥಾ ಹೊತ್ತು.

“ಹಾಡು ಆಟ ಆಡು” ಅನ್ನೋದು ಆಕಾಶವಾಣಿ fm.Rainbow ದಲ್ಲಿ ಮೂಡಿಬರೋಂಥ ಒಂದು ಅತ್ಯಂತ ಲವಲವಿಕೆಯ, ಜೀವಂತಿಕೆಯ ಮತ್ತು ನಡೆಸಿಕೊಡಲು ಅಪಾರವಾದಂತ ಹುಮ್ಮಸ್ಸು energy ಹಾಗೂ ತೀಕ್ಷ್ಣ ಸಮಯ ಪ್ರಜ್ಞೆ ಬಯಸುವಂತ ಒಂದು ಜನಪ್ರಿಯ ಆಟದ ಕಾರ್ಯಕ್ರಮ. ಕೇಳುಗರಿಗೆ ಪ್ರಶ್ನೆಗಳನ್ನು ಕೊಡುತ್ತಾ ಲೈವ್-ಫೋನ್-ಇನ್‍ನಲ್ಲಿ ಉತ್ತರಪಡೆದು, ಅವರ ಸಂದೇಶಗಳನ್ನು ಓದಿ ಸರಿಯಾಗಿ ಉತ್ತರ ಕೊಟ್ಟ ನೂರಾರು ಕೇಳುಗರ ಹೆಸರುಗಳನ್ನು ’ON-AIR’ ಹೇಳಿ ಅವರ ಮೆಚ್ಚುಗೆಯ ಗೀತೆಗಳನ್ನು ಪ್ರಸಾರ ಮಾಡುವಂತ ಕಾರ್ಯಕ್ರಮ.

ಇಂಥಾ ಕ್ರೂಷಲ್ ಟೈಮ್‍ನಲ್ಲಿ ನನ್ನ ಮೊಬೈಲಿಗೊಂದು ಸಂದೇಶ.

“ಆಶಾ, ನಿನ್ನ ರಾಜಕುಮಾರ ಇನ್ನಿಲ್ಲ!” ಓಹ್ ದೇವ್ರೇ……..

ಇದೇನಾಯ್ತು! ಕಾರ್ಯಕ್ರಮ ನಡೆಸಿಕೊಡ್ಲಾ, ಬಂದ ಆಘಾತಕಾರೀ ಸುದ್ದಿಯ ಸತ್ಯಾಸತ್ಯತೆಗಳ ಬೆನ್ನು ಹತ್ತಲಾ, ಸಂದೇಶ ಓದಿ ನೋವಿನಿಂದ ಅಳ್ತಿದ್ದ ಮನಸ್ಸಿಗೆ ಸಮಾಧಾನ ಹೇಳ್ಲಾ…… ಆ ದಿನ, ಆ ಹೊತ್ತಿನಲ್ಲಿ ಅದೇನು ಮಾಡಿದೆನೋ ಆ ಭಗವಂತನೇ ಬಲ್ಲ!

ಸುದ್ದಿ ನಿಜ ಆಗಿದ್ದೂ ಆಯ್ತು, ಕರುನಾಡ ಕೋಟ್ಯಂತರ ಕಲಾರಸಿಕ ಹೃದಯಗಳನ್ನು ಕದ್ದು ಗೆದ್ದು ಆಳುತ್ತಿದ್ದ ಅನಭಿಶಕ್ತ ರಾಜಕುಮಾರನ ಯುಗಾಂತ್ಯವೂ ಆಗಿತ್ತು, ಆ ದಿಗ್ಗಜ ಪಂಚಭೂತಗಳಲ್ಲಿ ಲೀನವಾಗುವಂತಾ ಮಾರ್ಮಿಕ ಸಂದರ್ಭದಲ್ಲಿ ಸಹನೆ ಕಳೆದುಕೊಂಡು ಹುಚ್ಚೆದ್ದು ತಳಮಳಗೊಂಡ ಕನ್ನಡಿಗರನ್ನೂ ನೋಡಿದ್ದೂ ಆಯಿತು. ಅವೆಲ್ಲ ಈಗ ಇತಿಹಾಸ ನಿಜ. ಆದರೆ, ಈ ನನ್ನೊಳಗೊಬ್ಬ ರಾಜಕುಮಾರ ಇದ್ದಾನಲ್ಲ, ಅವನ ಯುಗಾಂತ್ಯ ಬಹುಶಃ ನನ್ನ ಅಂತ್ಯದೊಂದಿಗೇ ಆಗೋದು ಅನ್ನಿಸುತ್ತೆ! ಅಷ್ಟರಮಟ್ಟಿಗೆ ಇವ ನನ್ನ ಮೈ-ಮನ-ಆತ್ಮಗಳ ಒಡನಾಡಿ ಆಗಿಬಿಟ್ಟಿದ್ದಾನೆ ಅಂದ್ರೆ ಸುಳ್ಳೇ ಅಲ್ಲ.

ರಾಜ ಮುದ್ದು ರಾಜ ..

ಈ ನನ್ನೊಳಗಣ ರಾಜಕುಮಾರ ಅನೇಕರಿಗೆ ಅನೇಕಾನೇಕನಾಗಿ ಕಾಣಬಹುದು, ಆದ್ರೆ ನನಗೆ ಮಾತ್ರ ಅವ ಯಾವಕಾಲಕ್ಕೂ ನನ್ನ ತಾರುಣ್ಯವನ್ನು ಜಾಗೃತವಾಗಿಡಬಲ್ಲ ರಾಜಕುಮಾರ. ಅಷ್ಟೆ. ತೆರೆಯ ಮೇಲೆ ಅವ “MARY MARY MARY I LOVE YOU… ಅಂತ ಆ ಯಾರೋ ಹಿರೋಯಿನ್ನಿಗೆ ಹಾಡ್ತಿದ್ರೆ, ನನ್ನ ಕಿವಿಗೆ ಅದು “ASHA ASHA ASHA I LOVE YOU…. ಅಂತ್ಲೇ ಕೇಳೋದು. ’ಲೇ ಲೇ ಅಪ್ಪನ ಮಗಳೇ… ಅಂದ್ರೆ, ನಾನು ಮುಖ ಉಬ್ಬಿಸಿ ನನ್ನ ಅಪ್ಪನ ಮಗಳೇ ಆಗೋದು. ’ ಚಂದಿರ ತಂದಾ ಹುಣ್ಣಿಮೆ ರಾತ್ರಿ ಅಂತ ಆ ಡುಮ್ಮಿ ಸರಿತಾ ಜೊತೆ ಲಲ್ಲೆ ಆಡ್ತಿದ್ರೆ, ಆ ಡುಮ್ಮಿ ಜಾಗದಲ್ಲಿ ಈ ಆಶಾ ಅನ್ನೋ ಡುಮ್ಮೀನೇ ನನಗೆ ಸ್ಕ್ರೀನ್ ಭರ್ತಿ ಕಾಣೋದು. ಪ್ರತೀ ಬಾರಿ ಕನ್ನಡ ಚಲನಚಿತ್ರ ಗೀತೆಗಳಲ್ಲಿ, ಕ್ಲಾಸಿಕ್ ಹಾಡು ಕೇಳ್ಬೇಕು ಅಂದ್ರೆ, ಫ಼ೇವರೆಟ್ ಗೀತೆ ಮೆಲುಕು ಹಾಕ್ಬೇಕಂದ್ರೆ, ಇದೇ ನನ್ನೊಳಗಿನ ರಾಜಕುಮಾರನೇ ಕಣ್ಮುಂದೆ ಸುಳಿಯೋದು. ಹಾಲು ಜೇನು ಒಂದಾದ ಹಾಗೆ ನನ್ನಾ ನಿನ್ನಾ ಜೀವನ…. ಅಂತ ಮಾಧವಿ ಹಾಡಿಸಿಕೊಂಡ್ರೆ, ಛೆ, ನಂಗೂ ಕ್ಯಾನ್ಸರ್ ಬರಬೇಕು ಈ ರಾಜಕುಮಾರ ನಂಗೂ ಹಿಂಗೆ ಹಾಡಿ ರಮಿಸಬೇಕು……. ನೀನೆಲ್ಲೋ ನಾನಲ್ಲೆ ಅಂತ ಹಾಡ್ಕೊಂಡು ನನ್ನ ಹಿಂದೆ ಬಂದು ಮುದ್ದು ಮಾಡ್ಬೇಕು…. ನಿನ್ನಾ ಮರೆಯಲಾರೆ ಅಂತ ಬೈಕ್ ಹಿಂದೆ ಕೂತು ನನ್ನ ರಾಜಕುಮಾರನ್ನ ನಾನು ಗಟ್ಟಿಯಾಗಿ ತಬ್ಬಿ LONG DRIVE ಹೋಗ್ಬೇ॑ಕು……… ಯಪ್ಪಾ ಇಂಥ ಎಷ್ಟು ನಾಲಿಗೆ ಚಪ್ಪರಿಸುವ ಅದೆಷ್ಟು ಕನಸುಗಳನ್ನು ನನ್ನ ಚಿರ-ಯವ್ವನ ಕಂಡಿದ್ಯೋ! ರಾಜ ಮುದ್ದು ರಾಜ …. ಅಂತ ಉಲಿಯೋ ಮಂಜುಳ….. ಉಹುಂ ಅದು ಬೇರೆ ಯಾರೂ ಅಲ್ಲ, ದುಂಡು ಮೊಗದ, ಮಾದಕ ಕಂಗಳ ಮೈ ಕೈ ತುಂಬಿಕೊಂಡ CURVY ಚೆಲುವೆ….. ನಾನೇ!್

ನಾನು ನನ್ನ “ರಾಜ”

ಇಂಥ imagination ಪ್ರಪಂಚಕ್ಕೆ ಯಾವ ದೊಣೆನಾಯಕನ ಅಪ್ಪಣೆ ಬೇಕು ಅಲ್ವಾ? ಅಲ್ಲಿ ಎಲ್ಲ ನಾನು, ನಾನೇ. ಮನಸ್ಸು ಹೋಗಬಯಸುವಲೆಲ್ಲಾ ಕೈ-ಕೈಹಿಡಿದು ನಡೆಸೋ ಆ ನನ್ನೊಳಗಿನ ರಾಜಕುಮಾರ, ಇರಬೇಕೆಂದು ಬಯಸುವ ಜಾಗದಲೆಲ್ಲ ಚೇಡಿಸೋ ತುಂಟ ಕಣ್ಣೋಟದೊಂದಿಗೆ, ಪ್ರೀತಿ ಉಕ್ಕಿ ಹರಿಸೋ ಮಾತುಗಳ ರಸದೌತಣದೊಂದಿಗೆ, ನೀನೇ ಎಲ್ಲ ನಿನ್ನ ಬಿಟ್ರೆ ಜಗತ್ತೇ ಇಲ್ಲ ಅನ್ನೊ ಅದ್ಭುತ FEEL ಕೊಡೋ ತುಂಟ ಚೆಲುವ ನನ್ನ ರಾಜಕುಮಾರ!

ಇಷ್ಟೆಲ್ಲಾ ಕನಸುಗಳಿಗೆ ನಾನು ಹೊಸ್ತಿಲ ಪೂಜೆ ನೆರವೇರಿಸಿದ್ದು ನನ್ನಪ್ಪನ ವಯಸ್ಸಿನ ರಾಜ್‍ಕುಮಾರ್ ಅನ್ನೋ ಕೋಟಿ ಕನ್ನಡ ಚಿತ್ರ ಪ್ರೇಮಿಗಳ ಆರಾಧ್ಯ ದೈವದ ಚಿತ್ರಗಳನ್ನು ನೋಡಲು ಶುರುವಿಟ್ಟ ವಸಂತಕಾಲದಲ್ಲಿ! ನನಗೆ ಚೆನ್ನಾಗಿ ನೆನಪಿದೆ. ಅದು ’ವಸಂತ ಗೀತ’ ಚಿತ್ರ ಮೈಸೂರಿನ ಲಕ್ಷ್ಮಿ ಟಾಕೀಸಿನಲ್ಲಿ ರೀರಿಲೀಸ್ ಆಗಿ ಓಡ್ತಿದ್ದ ಕಾಲ. ಮಾರನೇ ದಿನ ನನ್ನ 7ನೇ class ನ physics final ಪರೀಕ್ಷೆ. 2nd show ಗೆ ಅಪ್ಪ ಕರ್ಕೊಂಡ್ ಹೋಗಿದ್ದು. ಚಿತ್ರ ನೋಡಿದ್ದು. ಅಷ್ಟೆ. ತೊಗೋಳಪ್ಪ, ಏಳ್ನೇ ಕ್ಲಾಸಲ್ಲೇ ಹಳ್ಳಕ್ ಬಿದ್ದೆ! ಅದೇನು ಮೋಡೀನೋ ಆ ಮನುಷ್ಯಂದು, ಮೈಮನ ಆವರಿಸಿಕೊಂಡು ಲಗಾತಾರ್ ಹತ್ರ ಹತ್ರ 1 ವಾರದವರೆಗೂ ನಾನು ’ವಸಂತ-ಗೀತ’ ಚಿತ್ರದ ನಾಯಕಿ ಗಾಯತ್ರೀನೇ ಆಗ್ಬಿಟ್ಟಿದ್ದೆ! ರಸ್ತೇಲಿ ಕಾಣೋ ಹುಡುಗ್ರೆಲ್ಲಾ ಥೇಟ್ ಆಗಷ್ಟೇ ನನ್ನೊಳಗೆ  ಪ್ರವೇಶ ಮಾಡಿದ್ದ ರಾಜಕುಮಾರ!

ತೆರೆಯ ಮೇಲೆ ಹರೆಯದ ಹುಡುಗೀರನ್ನ ಹುಚ್ಚೆದ್ದುಕುಣಿಸ್ತಿದ್ದ ಈ ಚಲುವ ನಿಜ ಜೀವನದಲ್ಲಿ ಪಕ್ಕಾ ಸಾತ್ವಿಕ, ಸಾಧು, ಸಂತನಂತೆ ಇರೋಕೆ ಹೇಗೆ ಸಾಧ್ಯ ಆಯ್ತೋಪ! 2 ಬಾರಿ ಮುಖತಃ ಭೇಟಿ ಆಗುವ ಭಾಗ್ಯ ನನ್ನ ಪಾಲಿಗೆ ಬಂದೊದಗಿದ್ದ ಅದೃಷ್ಟ. ಆಕಾಶವಾಣಿಯಲ್ಲಿ ನನ್ನ ಆಗಿನ fm.Rainbow Incharge ಆಗಿದ್ದ ಶ್ರೀ. ಶಂಕರನಾರಾಯಣ ಅವರು ರಾಜ್‍ಕುಮಾರ್ ಕಾಲವಾದ ನಂತರದ ಮೊದಲ ಭಾನುವಾರ “ಆಶಾ, ಅವರ ಬಗ್ಗೆ ಒಂದು ವಿಶೇಷ ಕಾರ್ಯಕ್ರಮ ಮಾಡಿ. ಇದು ನಿಮ್ಮ RJ.Career ನ ಬಹುದೊಡ್ಡ ಮೈಲಿಗಲ್ಲಾಗುತ್ತೆ. ಹೇಗೆ ರೂಪಿಸ್ತೇರೋ ನೋಡಿ….” ಅಂತ ಚಾಲೆಂಜ್ ಮಾಡಿದಾಗ ಕೈಲಿದ್ದದ್ದು ಎರಡೇ ದಿನ. ಇಷ್ಟು ಪುಟ್ಟ ಅವಧಿಯಲ್ಲಿ ದುಃಖದ ಮಡುವಿನಲ್ಲಿದ್ದೂ ಸಹಕರಿಸಿದ ದ್ವಾರಕೀಶ್, ಜಯಂತಿ, ನಿರ್ದೇಶಕ ಭಾರ್ಗವ, ರವಿ, ದೊರೆಸ್ವಾಮಿಗಳು, ತುಮಕೂರಿನಲ್ಲಿದ್ದ ಅವರ ಅತ್ಯಂತ ಆಪ್ತ ಸ್ನೇಹಿತ, ರಾಘವೇಂದ್ರ ರಾಜ್‍ಕುಮಾರ್ ಹೀಗೇ ಇನ್ನೂ ಅನೇಕರು ರಾಜಣ್ಣನ ಬಗ್ಗೆಮಾತಾಡಿದ್ದು ಆತನ ಸಾಧುತ್ವಕ್ಕೆ ಹಿಡಿದಿಟ್ಟ ಕನ್ನಡಿಯಾಗಿತ್ತು!

ನನ್ನ ಪ್ರಕಾರ ರಾಜ್ ಹೃದಯಗಳ ಕೋಟ್ಯಾಧೀಶರಾಗಲು ಕಾರಣ ಅವರ ಸಾತ್ವಿಕ ಮೌಲ್ಯ ಮತ್ತು ಗಟ್ಟಿಯಾಗಿ ತಳವೂರಿ ಕಣ್ಣಿಗೆ “ಕುದುರೆ-ಪಟ್ಟಿ” ಕಟ್ಟಿ ಕೈ ಹಿಡಿದು ಮುನ್ನಡೆಸಿದ ಅವರ ಬಾಳ ಸಂಗಾತಿ ಮಾತ್ರ. ಹೀಗಾಗಿಯೇ ಒಬ್ಬ ವ್ಯಕ್ತಿ ಇಷ್ಟು ಭದ್ರವಾಗಿ ನೆಲೆ ನಿಂತು, ತುಂಬು ಸಂಸಾರ ಸಾಗಿಸಿ ಕನ್ನಡಿಗರ, ಕಲಾಪ್ರೇಮಿಗಳ ಹೃನ್ಮನಗಳನ್ನು ನಿಷ್ಕಲ್ಮಶವಾಗಿ ಇಂದಿಗೂ ಆಳೋಕೆ ಸಾಧ್ಯವಾಗಿರೋದು. ಅಲ್ವಾ?

ಏನೇ ಇರ್ಲಿ, ನನ್ನೊಳಗಿನ ರಾಜಕುಮಾರ ಎಷ್ಟೇ ಕೋಟಿ ಹೃದಯಗಳ ಭೂಪತಿಯಾದ್ರೂ ನನ್ನ ವಿಶ್ವದಲ್ಲಿ ನನಗೆ ಮತ್ತು ಕೇವಲ ನನಗೆ ಮಾತ್ರ ಸಲ್ಲುವ ಅಧಿಪತಿ!

_ಆಶಾ ವಿಶ್ವನಾಥ್, ಮಾನಸಿಕ ಸಲಹೆಗಾರ್ತಿ

ಕಷ್ಟ ಕಾಲದಲ್ಲಿ ಕೈ ಹಿಡಿದವರು ಉಪೇಂದ್ರ . ಮುಂದೆ ಯಾರೋ ? -ಸತ್ಯಜಿತ್

೬೫೦ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿ, ಖಳನಾಯಕನ ಪಾತ್ರಗಳಿಂದ ಗುರುತಿಸಿಕೊಂಡಿರುವ ಸತ್ಯಜಿತ್ ಈಗ ಸಂಕಷ್ಟದಲ್ಲಿದ್ದಾರೆ. ಗ್ಯಾಂಗ್ರಿನ್ ನಿಂದ ಕಾಲು ಕಳೆದುಕೊಂಡು ಕಂಗೆಟ್ಟಿದ್ದಾರೆ. ಸದ್ಯದ ಪರಿಸ್ಥಿತಿ ಏನು ? ಸತ್ಯಜಿತ್ ciniadda.com ಜೊತೆ ಹಂಚಿಕೊಂಡಿದ್ದಾರೆ.

ಇವು ನನ್ನ ನೋವಿನ ದಿನಗಳು. ತುಂಬಿದ ಸಂಸಾರದ ಹೊಣೆ ಹೆಗಲ ಮೇಲಿದೆ. ಆಯ್ಕೊಂಡು ತಿನ್ನೋ ಕೋಳಿ ಕಾಲು ಮುರಿದಂತಾಗಿದೆ ನನ್ನ ಪರಿಸ್ಥಿತಿ. ೪-೫  ತಿಂಗಳಿಂದ ಸಂಪಾದನೆ ಇಲ್ಲ. ಸಾಲದ ಶೂಲ ಎದೆಗೆ ಬಿದ್ದಿದೆ. ಅವತ್ತು “ಹಾಯ್ Bros ” ಸಿನಿಮಾ ಶೂಟಿಂಗ್ ಇತ್ತು ಪ್ರಿನ್ಸಿಪಾಲ್ ಪಾತ್ರ ಮುಗಿಸಿ ಮನೆಗೆ ಬಂದೆ. ಸಣ್ಣದಾಗಿ ಶುರುವಾದ ಕಾಲು ನೋವು ನಾಲ್ಕು ದಿನ ಕಳೆಯೋ ಹೊತ್ತಿಗೆ ಯಮಯಾತನೆಯಾಗಿತ್ತು. ಮಹಾವೀರ ಜೈನ್  ಆಸ್ಪತ್ರೆಗೆ ಹೋದ್ವಿ . ರೇಡಿಯೋಲಜಿ ಮತ್ತೊಂದು ಮಗದೊಂದು ಮಾಡಿ ೮೦ ಪರ್ಸೆಂಟ್ ಗ್ಯಾಂಗ್ರಿನ್ ಆಗಿದೆ ಎಡಗಾಲು ತೆಗಿಲೇ ಬೇಕು ಅಂದ್ರು. ಆಪರೇಷನ್ ಗೆ ೬.೪೫ ಲಕ್ಷ ಆಯ್ತು . ಇಷ್ಟೇ ಅಲ್ಲದೆ ಈಗ ಹೊಸ ಕಾಲು ಹಾಕಿಸಿಕೊಳ್ಳಕ್ಕೆ ೩ ಲಕ್ಷ ಬೇಕು. ಅದು ಜರ್ಮನಿದಂತೆ ಹಾಕಿಸಿಕೊಂಡ್ರೆ ಹೆಚ್ಚುಕಡಿಮೆ ನಾರ್ಮಲ್ ಆಗಿ ನಡೆದಾಡಬಹುದು. ಮತ್ತೆ acting ಮಾಡಬಹುದು. ನಮ್ಮದು ಕೂತು ಮಾಡೋ ಕೆಲಸ ಅಲ್ಲವಲ್ಲ ಓಡಾಡ್ಕೊಂಡು ಒದೆತ ತಿನ್ಕೊಂಡು ಮಾಡೋದಲ್ವ ?

ನನ್ನ ಮೂರು ಮಕ್ಕಳಲ್ಲಿ ಯಾರು ಸೆಟ್ಲ್ ಆಗಿಲ್ಲ. ಮಗ ಆಕಾಶ್ ತಬ್ಬಲಿ ಚಿತ್ರದಲ್ಲಿ ನಾಯಕನಾಗಿ ಮಾಡಿದ . ತುಂಬಾ ಚೆನ್ನಾಗಿದ್ದಾನೆ. ಡಾನ್ಸ್ ಚೆನ್ನಾಗಿಮಾಡ್ತಾನೆ. ಆದ್ರೆ ಅವಕಾಶ ಸಿಕ್ಕದೆ ಇನ್ನೂ ಒದ್ದಾಟ. ಮಗಳು ಪೈಲೆಟ್ ಟ್ರೇನಿಂಗ್ ಮಾಡಿ  ಕೆಲಸಕ್ಕಾಗಿ ಅಲೆದಾಡುತ್ತಿದ್ದಾಳೆ. ಇನ್ನೊಬ್ಬ ಮಗ ಸ್ಪೋರ್ಟ್ಸ್ ಟ್ರೈನರ್ ಶಾಲೆಗಳಿಗೆ ಹೋಗಿ ಕೆಲಸ ಮಾಡ್ತಾನೆ . ಅವನಿಗೆ ಸಿಗೋದು ಪುಡಿಗಾಸೆ.ಹೆಂಡತಿ ಮನೆ ನೋಡಿಕೊಳ್ತಾಳೆ. ಇವ್ರೆಲ್ಲರನ್ನ ಸಾಕುವ ಜವಾಬ್ದಾರಿ ಸದ್ಯಕ್ಕೆ ನನ್ನ ಮೇಲೇ ಇದೆ.ಹುಬ್ಬಳ್ಳಿಯಲ್ಲಿ ಕೆ.ಎಸ್.ಆರ್.ಟಿ .ಸಿಯಲ್ಲಿ ಡ್ರೈವರ್  ಆಗಿದ್ದಾಗಲೇ ೧೫-೨೦ ಸಿನಿಮಾ ಮಾಡಿದ್ದೆ .ನನ್ನ ಮೊದಲ ಚಿತ್ರ ನಾನಾಪಾಟೇಕರ್ ಅಭಿನಯದ ಸೂಪರ್ ಹಿಟ್ ಅಂಕುಶ್ . ಅದ್ರಲ್ಲಿ ನಾನು ಮೇನ್ ವಿಲನ್. ಮೂರು  ಸಾವಿರ ಸಂಭಾವನೆ.  ಈಗ ಒಂದು ದಿನಕ್ಕೆ ೨೫ ಸಾವಿರ ತಗೋಳ್ತೀನಿ. ಆದ್ರೆ ಕಾಳಿಲ್ಲದೆ ೨೫ ರೂಪಾಯಿಯೂ ಸಿಗ್ತಾ ಇಲ್ಲ.

upendra_murari3

ಹೆಗಡೆ ನಗರದಲ್ಲಿರುವ ನನ್ನ ಮನೆ ಬಾಡಿಗೆ ಕಟ್ಟೋದಕ್ಕೆ ಆಗದೆ ಉಪೇಂದ್ರ ಅವ್ರಿಗೆ ಫೋನ್ ಮಾಡಿದೆ. ಅವ್ರು ಹೆದರ್ಬೇಡಾ ಅಂದವರೇ ಒಂದು ಲಕ್ಷ ಕಳುಹಿಸಿಕೊಟ್ಟರು. ಅವ್ರ ಸಹಾಯ ಮರೆಯೋಕ್ಕಾಗಲ್ಲ. “ದೊಡ್ಡ ಮನೆ ಹುಡುಗ ” ದಲ್ಲೂ ಆಕ್ಟಿಂಗ್ ಮಾಡಿದ್ದೀನಲ್ಲ ಪುನೀತ್ ಅವ್ರು ಸ್ವಲ್ಪ ಹಣ ಕೊಟ್ರು. ಆಪ್ತಮಿತ್ರ, ವೀರಕನ್ನಡಿಗ , ನಮ್ಮೂರ ರಾಜ,ಮಾಣಿಕ್ಯ ,ರನ್ನ, ದಾಸ ,ಶಿವಮೆಚ್ಚಿದ ಕಣ್ಣಪ್ಪ ಅಂತಿಮ ತೀರ್ಪು ಇನ್ನೂ ಬೇಕಾದಷ್ಟು ಎಲ್ಲಾ ನಾಯಕರ ಜೊತೆಗೂ ನಟಿಸಿದ್ದೀನಿ. ಈಗ ಕಾಲಿಲ್ಲದೆ ಏನ್ ಮಾಡ್ಲಿ ?

ಕಲಾವಿದರ ಸಂಘಕ್ಕೂ ಕೇಳಿಕೊಂಡಿದ್ದೇನೆ ಅವ್ರು ಇನ್ಸೂರೆನ್ಸ್ ಮಾಡಿಸೋದಿಕ್ಕೆ ಪ್ರಯತ್ನ ಮಾಡ್ತಿದ್ದಾರೆ ನೋಡ್ಬೇಕು. ಸರ್ಕಾರ ಸಹಾಯ ಮಾಡಿದ್ರೆ ಜೀವನ ಸ್ವಲ್ಪ ನೇರ್ಪಾಗುತ್ತೆ . ಯಾರಾದ್ರೂ ಸಹಾಯ ಮಾಡೋ ಮನಸಿದ್ರೆ ನನ್ನ ನಂಬರ್ ಕೊಡಿ ದಯವಿಟ್ಟು.

ಇದು ಸತ್ಯಜಿತ್ ಅಳಲು

ಮೊಬೈಲ್ ಸಂಖ್ಯೆ – 9448061424

ಕಲಾವಿದರ ಸಂಘಕ್ಕೆ ಕರೆ ಮಾಡಿದಾಗ ದೊಡ್ಡಣ್ಣ – ನಾವು ಇನ್ಸೂರೆನ್ಸ್ ಮಾಡಿಸೋದಿಕ್ಕೆ ಪ್ರಯತ್ನ ಪಡ್ತಿದೀವಿ. ಸತ್ಯಜಿತ್ ಸಂಘದ ಸದಸ್ಯತ್ವಾನೇ ತಗೊಂಡಿಲ್ಲ. ಒಂದು ವರ್ಷಕ್ಕೆ 5 ಸಾವಿರ ಅಷ್ಟೆ . ನಾವೇನು ಮಾಡೋಣ ಹೇಳಿ? ಆದ್ರೂ ಕಲಾವಿದ ಕಷ್ಟದಲ್ಲಿದ್ದಾನೆ ಕೈಬಿಡಬಾರದು . ಮೀಟಿಂಗ್ನಲ್ಲಿ ಎಲ್ಲರ ಅಭಿಪ್ರಾಯ ತಗೊಂಡು ಏನಾದ್ರೂ ಸಹಾಯ ಮಾಡ್ತೀವಿ.

ವಿಷಯ ನಿಮಗೆ ತಲುಪಿಸಿದ್ದೇವೆ ಮನಸ್ಸಿದ್ದವರು ಮೇಲಿನ ಸಂಖ್ಯೆಗೆ ಕರೆ ಮಾಡಿ ಸಹಾಯ ಮಾಡಬಹುದಾ ನೋಡಿ

-ಭಾನುಮತಿ ಬಿ ಸಿ

ರಮ್ಯಾ @34 ! ನನಗೂ ವ್ಯವಸಾಯ ಹೇಳಿಕೊಡ್ತೀರಾ ?

ಸ್ಯಾಂಡಲ್ ವುಡ್ ಕ್ವೀನ್ ,ಮೋಹಕ ತಾರೆ ಅಂತೆಲ್ಲ ಕರೆಸಿಕೊಳ್ಳುವ ರಮ್ಯಾಗೆ 34ರ ಸಂಭ್ರಮ. ತಾರೆಗಳು ಅಂದಾಕ್ಷಣ ಅವ್ರ ಹವ್ಯಾಸ, ಅಭಿರುಚಿ, ಆಸಕ್ತಿ ಅದ್ರಲ್ಲೂ ಬರ್ತ್ ಡೇ ಹೇಗೆ ಸೆಲೆಬ್ರೇಟ್ ಮಾಡಿಕೊಳ್ತಾರೆ ಇಂಥ ಹಲವು ಕುತೂಹಲಗಳು ಅಭಿಮಾನಿಗಳನ್ನು ಕಾಡುವುದು ಸಹಜ. ಅವರೀಗ ಮನಮೋಹಕ ನಟಿಯಾಗಷ್ಟೇ ಉಳಿದಿಲ್ಲ ರಾಜಕಾರಣಿ ರಮ್ಯಾ ಮೇಡಂ ಆಗಿದ್ದಾರೆ. ಅಲ್ಲಿಂದ ಇಲ್ಲಿಗೆ ಬಂದವರು ಏನಾಗಿದ್ದಾರೆ ?ಇವತ್ತೇನು ಮಾಡಿದ್ದಾರೆ? ಓದಿನೋಡಿರಿಲ್ಲಿ ” ರಮ್ಯಾ ರೌಂಡ್ಸ್ ”

ramya3

ಮಂಡ್ಯದ ಗಣಪತಿ ದೇವಸ್ಥಾನದಲ್ಲಿ ಬೆಳ್ ಬೆಳಿಗ್ಗೆ  ಅಭಿಮಾನಿಗಳು ತಂದಿದ್ದ ಕೇಕ್ ಕತ್ತರಿಸಿ  ಹುಟ್ಟುಹಬ್ಬ ಆಚರಿಸಿಕೊಂಡ್ರು . ಸದ್ಯ ಈಗಲಾದ್ರೂ ನಮ್ಮ ನೆನಪಾಯ್ತಲ್ಲ ಅಂತ ಅಭಿಮಾನಿಯೊಬ್ಬರು ಗೊಣಗಾಡಿಕೊಂಡೇ ಚೆನ್ನಾಗಿರಿ ಅಂತ ಹಾರೈಸಿದ್ರು. ಆಮೇಲೆ ರಮ್ಯಾ ಅಲ್ಲಿಂದ ಹರ್ಷ ಕೆಫೆಗೆ ಹೋಗಿ ಕಾಂಗ್ರೆಸ್ ಮಹಿಳಾ ಮಣಿಗಳ  ಜೊತೆ ಮಸಾಲೆ ದೋಸೆ ಚಪ್ಪರಿಸಿ ಸಾತನೂರ್ ಕಡೆ ಪಯಣ ಬೆಳೆಸಿದ್ರು.

siddu-9siddu-8

ಸಾತನೂರಿನ ಸರ್ಕಾರಿ ಪ್ರೌಢಶಾಲೆಯಲ್ಲಿ ಗಿಡಗಳಿಗೆ ನೀರು ಬಿಟ್ಟು, ತಮ್ಮ ತಂದೆ ಆರ್ ಟಿ ನಾರಾಯಣ್ ಹೆಸರಿನಲ್ಲಿ ಶಾಲೆಯ ಶೌಚಾಲಯಕ್ಕೆ ನೀರಿನ ಮಿತವ್ಯಯ ಬಳಕೆಯ ಸಾಧನ ಕೊಟ್ಟು ತಾವೇ ಚಾಲನೆ ಮಾಡಿದ್ರು. ಆಮೇಲೆ ಒಂದಿಷ್ಟು ಹೊತ್ತು ಭಾಷಣ. ಜಿಲ್ಲೆಯಲ್ಲಿ ಬರಗಾಲ ಇದೆ. ನಿಜ .ಹಾಗಂತ ಊರುಬಿಟ್ಟು ಹೋಗ್ಬೇಡಿ . ಬೆಂಗಳೂರು ಮೊದಲಿನಂತೆ ಸುಂದರವಾಗೇನು ಇಲ್ಲ. ಕೃಷಿ ಬಿಟ್ಟು ಹೋಗ್ಬೇಡಿ. ನೀವೇ ನಮ್ಮ ಅನ್ನದಾತರು. ನನಗು ವ್ಯವಸಾಯಕ್ಕೆ ಬರ್ಬೇಕು ಅಂತ ಆಸೆ ಇದೆ. ಬಂದ್ರೆ ಹೇಳ್ಕೊಡ್ತೀರಾ ? ಅಂದ್ರು . ಪಾಪ ಮಕ್ಕ್ಳು ಏನು ತಾನೇ ಹೇಳಿಯಾವು ? ಓ ಬನ್ನಿ .. ಅನ್ನುವುದನ್ನು ಬಿಟ್ಟು .

siddu-5

ಸರಿ ಮುಂದಿನೂರಿನ ದಾರಿ ಹಿಡಿಯುವ ಯೋಚನೆಯಲ್ಲಿದ್ದ ರಮ್ಯಾಗೆ ಹೇಮಂತ್ ಎಂಬ ಯುವಕ ಬರ್ತ ಡೇ ಮಾಡ್ಕಳಕ್ಕೆ ಬಂದವರೇ ಸುಮ್ನಿರಾನ ಅಂತ ಕನ್ಸೆಷನ್ ಕೊಡದೆ “ಕಾವೇರಿ ಹೋರಾಟದಲ್ಲಿ ಕಾಣಲೇ ಇಲ್ಲ. ಈಗ ಬಂದ್ಬುಟ್ಟಿದ್ದೀರಾ . ಈಗ ನೆನಪಾದ್ವಾ ? ಅಂದ . ರಮ್ಯಾ ಮೇಡಮ್ಮು ಅಯ್ಯೋ ನಿಂಜೊತೆ ಯಾವಾಗ್ಲೂ ಇರ್ತೀನಿ . ರೈತರು ಆತ್ಮಹತ್ಯೆ ಮಾಡಿಕೊಂಡಾಗೆಲ್ಲ ಬಂದಿದ್ನಲ್ಲ ಅಂತ ಹೇಳಿ ಗಾಡಿ ಮುಂದಕ್ಕೆ ಬಿಟ್ರು .

siddu-10-1

ಚನ್ನಪ್ಪನ ದೊಡ್ಡಿಯ ಖಾದಿ ಮತ್ತು ಗ್ರಾಮೋದ್ಯೋಗ ಕೈಮಗ್ಗ ಕೇಂದ್ರಕ್ಕೆ ಭೇಟಿ ಕೊಟ್ಟು ಮಂಡ್ಯಕ್ಕೆ ಮರಳಿ ಮುಗೀತ್ ನನ್ನ ಕೆಲಸ ಅಂತ ಅವ್ರೇ ಭಾಷಣದಲ್ಲಿ ಹೇಳಿದ ಸುಂದರವಲ್ಲದ ಬೆಂಗಳೂರಿಗೆ ಬಂಡಿ ಬಿಟ್ರು.

ramya-cring-2

ರಮ್ಯಾರನ್ನ ಮನೆ ಮಗಳು ಎಂಬಂತೆ ಮಂಡ್ಯದ ಜನ ಅಪ್ಪಿಕೊಂಡು ಮತ ಕೊಟ್ಟು ಮನೆ ತುಂಬಿಸಿಕೊಂಡದ್ದೇನೋ ನಿಜ. ನಾವು ಕೊಟ್ಟ  ಪ್ರೀತಿಯನ್ನ ನಮ್ಮ ರಮ್ಯಕ್ಕ ಉಳಿಸಿಕೊಳ್ಳಲಿಲ್ಲ ಬುಡು. ಬೇಕಾದಾಗ ಬತ್ತಾರೆ ಬ್ಯಾಡದೆ ಇದ್ದಾಗ ಒಯ್ತಾರೆ ಅಷ್ಟೇಯಾ ಅಂತ ಇವತ್ತು ಜನ ಅಲ್ಲಲ್ಲಿ ಮಾತಾಡಿಕೊಳ್ತಿದ್ರು.

ramya-1

ರಮ್ಯಾ ಚಿತ್ರರಂಗದಲ್ಲಿ ಚೆಲುವೆ , ಒಳ್ಳೆ ನಟಿ, ಊರಿಗೊಬ್ಬಳೆ ಪದ್ಮಾವತಿಯಂತೆ ಸ್ಯಾಂಡಲ್ ವುಡ್ ಕ್ವೀನ್ ಅನ್ನಿಸಿಕೊಂಡ್ರು  ವಿವಾದಗಳ ರಾಣಿಯಾಗಿದ್ದು ಸುಳ್ಳಲ್ಲ. ಇನ್ನಷ್ಟು ಕಾಲ ಬಣ್ಣದ ಜಗತ್ತಿನಲ್ಲಿ ವಿಜೃಂಭಿಸುವ ಪ್ರತಿಭೆ ಇದ್ದರೂ ಎದ್ದು ರಾಜಕಾರಣದ ಅಖಾಡಕ್ಕೆ ಹೊರಳೆ ಬಿಟ್ರು. ಅಲ್ಲೂ ಅತ್ತಿದ್ದು ಕರೆದಿದ್ದು ,ಸೋತಿದ್ದಕ್ಕೆ ಅವರೇ ಕಾರಣ ಅಂತ ಚಿಕ್ಕಮಕ್ಕಳ ಹಾಗೆ ಬೆರಳು ತೋರಿಸಿದ್ದು, ಆಮೇಲೆ ನಾಪತ್ತೆ ಆಗಿದ್ದು ,ಮತ್ತೆ ಧಿಡೀರ್ ಅಂತ ಮಂಡ್ಯದ ಮಣ್ಣಲ್ಲಿ ಪ್ರತ್ಯಕ್ಷ ಆಗಿದ್ದು ಎಲ್ಲ ಆಗಿ ಹೋಯ್ತು.

ramya-crying

ಸಿನಿಮಾದಲ್ಲಿ ಆದ್ರೆ ಕ್ಯಾಮರಾ ಮುಂದೆ ಪ್ರತಿಭೆ ಪ್ರದರ್ಶಿಸಿ , ತೆರೆಯ ಮೇಲೆ ಚಪ್ಪಾಳೆ ಗಿಟ್ಟಿಸಿ ಗೆದ್ದು ಬಿಡಬಹುದು .ಆದರೆ ರಾಜಕಾರಣ ಹಾಗಲ್ಲ ಅದು ಬೇರೆಯದೇ ಆದ ಬದ್ಧತೆ, ಬುದ್ಧಿಮತ್ತೆ, ಸಹನೆ,ಸಂಯಮ ಬೇಡುವಂತದ್ದು. ಅವಮಾನಗಳನ್ನ ನುಂಗಿ ನಡೆಯದಿದ್ದರೆ ಊರಿಂದ ಊರಿಗೆ ಹಾರಿದ ಜಯಲಲಿತಾ ಎಂಬ ನಟಿ ರಾಜ್ಯದ ಮುಖ್ಯಮಂತ್ರಿ ಆಗುವುದು ಸಾಧ್ಯವಿತ್ತೇ ?34ರ ಹರೆಯದಲ್ಲಿರುವ ರಮ್ಯಾ ಇದನ್ನೆಲ್ಲ ಅರಿತು ಪ್ರಭುದ್ಧತೆ ಮೆರೆಯಲಿ. ಇದು ನಮ್ಮ ಹಾರೈಕೆಯು ಹೌದು ಕಿವಿಮಾತೂ ಹೌದು .

ನಿಖಿಲ್ ಕುಮಾರ್ ಗೌಡರ ಹೊಸ ಅವತಾರ ಅಭಿಮನ್ಯು

ಮಹಾಭಾರತದಲ್ಲಿ ತಮ್ಮ ತ್ಯಾಗದಿಂದಾಗಿಯೇ ತುಂಬಾ ಕಾಡುವ ಪಾತ್ರಳಿವೆ. ಆ ಪಾತ್ರಗಳು ಯಾವತ್ತೂ ಮನಸ್ಸಲ್ಲೇ ಉಳಿದುಹೋಗುತ್ತವೆಯೇ ಹೊರತು ಬಿಟ್ಟು ಹೋಗುವುದಿಲ್ಲ. ಅಂಥಾ ಒಂದು ಮಹಾಭಾರತದ ಪಾತ್ರ ಅಭಿಮನ್ಯು. ತನ್ನವರಿಗೋಸ್ಕರ ಪ್ರಾಣತ್ಯಾಗ ಮಾಡಿದ ಅದ್ಭುತ ಪಾತ್ರ ಈ ಅಭಿಮನ್ಯುವಿನದು. ಕನ್ನಡದಲ್ಲಿ ಕುರುಕ್ಷೇತ್ರ ಸಿನಿಮಾ ಬರುತ್ತದೆ ಎಂದಾಗ ಆ ಪಾತ್ರವನ್ನು ಮಾಡುವವರು ಯಾರಿದ್ದಾರೆ ಅಂತ ಕೆಲವರಿಗಾದರೂ ಅನ್ನಿಸಿರಬಹುದು. ಈಗ ಆ ಪಾತ್ರಕ್ಕೆ ನಿಖಿಲ್ ಕುಮಾರ್ ಆಯ್ಕೆಯಾಗಿದ್ದಾರೆ.

ನಿಖಿಲ್ ತಮ್ಮ ಮೊದಲ ಸಿನಿಮಾ ಜಾಗ್ವಾರ್ ಬಿಡುಗಡೆ ನಂತರ ಸ್ವಲ್ಪ ಮೌನವಾಗಿದ್ದಾರೆ. ಈ ಮೊದಲು ಎಚ್ ಡಿ ಕುಮಾರಸ್ವಾಮಿ ತಮ್ಮ ಮಗನ ಮೊದಲ 3 ಸಿನಿಮಾವನ್ನು ಹೋಂ ಬ್ಯಾನರ್ ನಲ್ಲೇ ಮಾಡುವ ಆಸೆ ಇದೆ ಎಂದಿದ್ದರು. ಅದಕ್ಕೆ ತಕ್ಕಂತೆ ಕತೆ ಹುಡುಕಾಟವೂ ನಡೆಯುತ್ತಿತ್ತು. ಆದರೆ ಈಗ ದೊಡ್ಡ ಪ್ರೊಜೆಕ್ಟ್ ಆದ ಕುರುಕ್ಷೇತ್ರ ಬಳಿಗೆ ಬಂದಿರುವುದರಿಂದ ನಿಖಿಲ್ ತಕ್ಷಣ ಆ ಸಿನಿಮಾ ಒಪ್ಪಿಕೊಂಡಿದ್ದಾರೆ. ನಿಖಿಲ್ ಕುರುಕ್ಷೇತ್ರ ತಂಡ ಸೇರುವ ಮೂಲಕ ಆ ಸಿನಿಮಾದ ತಾರಾ ಬಳಗ ಮತ್ತಷ್ಟು ದೊಡ್ಡದಾಗಿದೆ.

ಈಗಾಗಲೇ ಕೃಷ್ಣನಾಗಿ ರವಿಚಂದ್ರನ್, ದುರ್ಯೋಧನನಾಗಿ ದರ್ಶನ್, ದ್ರೌಪದಿಯಾಗಿ ಸ್ನೇಹಾ, ಸಾಯಿಕುಮಾರ್, ಶಶಿಕುಮಾರ್ ಮುಂತಾದವರು ನಟಿಸುವುದು ಖಾತ್ರಿಯಾಗಿದೆ. ಕಾರ್ಯನಿರ್ವಾಹಕ ನಿರ್ಮಾಪಕಿಯಾಗಿ ಜಯಶ್ರೀದೇವಿ ಇದ್ದಾರೆ. ಹಾಗಾಗಿ ನಿರ್ದೇಶಕ ನಾಗಣ್ಣ ಸಿಕ್ಕಾಪಟ್ಟೆ ಬ್ಯುಸಿಯಾಗಿದ್ದಾರೆ.

ಬ್ರಿಟಿಷರನ್ನೂ ಬೋಲ್ಡ್ ಮಾಡಿದ ಕಿಚ್ಚ ಸುದೀಪ್ !!

ಸ್ಯಾಂಡಲ್‌ವುಡ್ ನಟ ಕಿಚ್ಚ ಸುದೀಪ್ ಲಂಡನ್‌ನಲ್ಲಿ ನಡೆದ ಕಾರ್ಪೊರೇಟ್ ಕ್ರಿಕೆಟ್ ಡೇ ಟೂರ್ನಿಯಲ್ಲಿ ವಿಜಯಪತಾಕೆ ಹಾರಿಸಿದ್ದಾರೆ. ಮೇ ೧೧ರಂದು ಸೆಲೆಬ್ರಿಟಿ ಕ್ರಿಕೆಟ್ ಲೀಗ್‌ನಲ್ಲಿ ತಂಡವನ್ನ ಮುನ್ನಡೆಸಿದ್ದ ಸುದೀಪ್‌ಗೆ ಕ್ರಿಕೆಟ್ ಕಾಶಿ ಲಾರ್ಡ್ಸ್ ಮೈದಾನದಲ್ಲಿ ಆಡುವ ಅವಕಾಶ ಸಿಕ್ಕಿತ್ತು.

ಈ ಅವಕಾಶವನ್ನು ಬಳಸಿಕೊಂಡ ಸುದೀಪ್ ಫೈನಲ್‌ನಲ್ಲಿ ವಿಜಯ ಸಾಧಿಸಿದ್ದಾರೆ. ಅಲ್ಲದೆ  ವಿಶ್ವದ ಸ್ಟಾರ್ ಕ್ರಿಕೆಟಿಗರ ಸಹಿ ಇರುವ ಬ್ಯಾಟ್ ಉಡುಗೊರೆಯಾಗಿ ಪಡೆದಿದ್ದಾರೆ.

ಈ ಬಗ್ಗೆ ಟ್ವೀಟ್ ಮಾಡಿರುವ ಸುದೀಪ್, ಮೈದಾನದಲ್ಲಿ ಕ್ರಿಕೆಟ್ ಆಡುವ ಅವಕಾಶ ಸಿಕ್ಕಿದ್ದಕ್ಕೆ, ಬೃಹತ್ ಎಲ್‌ಇಡಿ ಮೇಲೆ ಕಾಣಿಸಿಕೊಂಡಿದ್ದಕ್ಕೆ ಸಂತಸ ವ್ಯಕ್ತಪಡಿಸಿದ್ದಾರೆ. ಜೊತೆಗೆ  ಶ್ರೇಷ್ಠ ಆಟಗಾರರನ್ನು ಭೇಟಿ ಮಾಡಲು ಕಾರಣರಾದವರಿಗೆ ಧನ್ಯವಾದ ಹೇಳಿದ್ದಾರೆ.

ಬದುಕಿಗೊಂದು ಅರ್ಥವಿದೆ ‘ದಯವಿಟ್ಟು ಗಮನಿಸಿ’

‘ದಯವಿಟ್ಟು ಗಮನಿಸಿ’, ಮೈಸೂರಿನಿಂದ ಹೊರಟ ರೈಲು ಈಗ ರ್ಫಲಾಟ್ ಫಾರ್ಮ್ ಮೂರರಲ್ಲಿ ಬಂದು ನಿಲ್ಲಲಿದೆ ಅನ್ನೋ ಅನೌನ್ಸ್‌ಮೆಂಟ್‌ನೊಂದಿಗೆ ಶುರುವಾಗುವ ಸಿನಿಮಾ.. ರೈಲಿನ ಪಯಣದಂತೆ ಇಡೀ ಜೀವನ ಪಯಣವನ್ನ ವರ್ಣಿಸುತ್ತಾ ಸಾಗುತ್ತದೆ.. ಸಾಮಾನ್ಯ ಜನರ ಜೀವನದ ಚಿತ್ರಣವನ್ನ ನಾಲ್ಕು ವಿಭಿನ್ನ ರೀತಿಯ ಕಥೆಗಳ ಮೂಲಕ ನಿರ್ದೇಶಕ ರೋಹಿತ್ ಪದಕಿ ತಮ್ಮ ಚಿತ್ರದಲ್ಲಿ ಬಹಳ ಅಚ್ಚುಕಟ್ಟಾಗಿ ಕಟ್ಟಿಕೊಟ್ಟಿದ್ದಾರೆ..

ಮದುವೆಯಾಗದೇ ಮಧ್ಯ ವಯಸ್ಸಿಗೆ ಬಂದಿರೋ ವ್ಯಕ್ತಿಯೊಬ್ಬನಿಗೆ ಆ ನಡುವಯಸ್ಸಿನಲ್ಲಿ ವಿವಾಹವಾಗೋ ಅವಕಾಶ ಒಲಿದು ಬರುತ್ತೆ, ಇನ್ನೊಂದ್ಕಡೆ ಪ್ರಾಕ್ಸಿ ಅನ್ನೋ ಪಿಕ್‌ಪಾಕೆಟರ್, ಭ್ರಾಂತಿಯಿಂದ ಹೊರಬರಬೇಕೆಂದು ಒದ್ದಾಡುವ ಸನ್ಯಾಸಿ ಒಂದ್ಕಡೆ, ಮತ್ತೊಂದ್ಕಡೆ ಈಗಿನ ಮೆಕ್ಯಾನಿಕಲ್ ಲೈಫ್‌ಸ್ಟೈಲ್‌ನಲ್ಲಿ ಸದಾ ಕೆಲಸದಲ್ಲೇ ಮುಳುಗಿದ್ದು, ಹೆಂಡತಿಯೊಂದಿಗೆ ಮನಸ್ಥಾಪ ಮಾಡಿಕೊಂಡಿರುವ ಸಾಫ್ಟ್‌ವೇರ್ ಇಂಜಿನಿಯರ್ ಈ ನಾಲ್ಕೂ ರೀತಿಯ ವಿಭಿನ್ನ ಜನರ ಜೀವನ ಶೈಲಿಯನ್ನ ಒಂದೇ ಚಿತ್ರದಲ್ಲಿ ಹೆಣೆಯಲಾಗಿದೆ..

ಎಲ್ಲರ ಜೀವನದಲ್ಲೂ ಇರುವಂತಹ ಜಾತಿ, ಜಗಳ, ಪ್ರೇಮ, ಕಾಮ, ಕುಟುಂಬ, ಕಟ್ಟುಪಾಡು, ದುಃಖ, ಗೋಳಾಟ ಇವೆಲ್ಲವನ್ನೂ ನಾಲ್ಕು ಬೇರೆ ಬೇರೆ ಕಥೆಗಳ ಮೂಲಕ ತೆರೆ ಮೇಲೆ ತಂದಿದೆ ದಯವಿಟ್ಟು ಗಮನಿಸಿ ಚಿತ್ರತಂಡ.. ಹಾಗಾಗಿ ಚಿತ್ರದ ಪ್ರತಿಯೊಂದು ಕಥೆಗಳೂ ಸಹ ನೋಡುಗರ ಕುತೂಹಲವನ್ನ ಹೆಚ್ಚಿಸುತ್ತಾ, ಅವರ ಗಮನವನ್ನ ಹಿಡಿದಿಟ್ಟುಕೊಳ್ಳುತ್ತೆ.. ಇನ್ನೂ ಈ ವಿಭಿನ್ನ ಕಥೆಗಳಲ್ಲಿ ರಾಜೇಶ್ ನಟರಂಗ, ವಸಿಷ್ಠ ಸಿಂಹ, ರಘು ಮುಖರ್ಜಿ, ಭಾವನಾ ರಾವ್, ಸಂಗೀತಾ ಭಟ್, ಪ್ರಕಾಶ್ ಬೆಳವಾಡಿ, ಸುಕೃತಾ ವಾಗ್ಲೆ, ಸಂಯುಕ್ತ ಹೊರನಾಡು ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.. ಇಲ್ಲಿ ಎಲ್ಲರ ಗಮನ ಸೆಳೆಯೋ ಮತ್ತೊಂದು ಅಂಶ ಅಂದ್ರೆ, ಅನೂಪ್ ಸೀಳಿನ್ ಅವರ ಸಂಗೀತ ಸಂಯೋಜನೆಯ ಸೊಗಸಾದ ಹಾಡುಗಳು.. ಜೊತೆಗೆ ಮೇಘನಾ ರಾಜ್ ಅವರ ಒಂದು ಸ್ಪೆಷಲ್ ಸಾಂಗ್ ಕೂಡ ಈ ಚಿತ್ರ ಸೆಂಟರ್ ಆಫ್ ಅಟ್ರ್ಯಾಕ್ಷನ್..

ಇಲ್ಲಿವರೆಗೂ ಸಾಕಷ್ಟು ಚಿತ್ರಗಳಲ್ಲಿ ವಿಲನ್ ಗೆಟಪ್‌ನಲ್ಲೇ ಹೆಚ್ಚಾಗಿ ಕಾಣಿಸಿಕೊಂಡಿದ್ದ ನಟ ವಸಿಷ್ಠ, ಇದೇ ಮೊದಲ ಬಾರಿಗೆ ದಯವಿಟ್ಟು ಗಮನಿಸಿ ಚಿತ್ರದ ಮೂಲಕ ಹೀರೋ ಲುಕ್‌ನಲ್ಲಿ ಎಂಟ್ರಿ ಕೊಟ್ಟಿರೋದು ವಿಶೇಷ.. ಚಿತ್ರದಲ್ಲಿನ ಎಲ್ಲವೂ ಬೇರೆ ಬೇರೆ ಕಥೆಗಳು ಅನ್ನಿಸಿದ್ರೂ ನಂತ್ರ ಒಂದಕ್ಕೊಂದು ಇಂಟರ್ ಲಿಂಕ್ ಇದೆ ಅನ್ನೋದು ನಿಧಾನವಾಗಿ ನೋಡುಗನ ಗಮನಕ್ಕೆ ಬರುತ್ತೆ.. ಒಟ್ಟಾರೆ ಚಿತ್ರದಲ್ಲಿನ ವಿಭಿನ್ನ ರೀತಿಯ ಕಥೆಗಳು, ಸಂಭಾಷಣೆ, ಸೊಗಸಾದ ಹಾಡುಗಳು, ಅರವಿಂದ್ ಕಶ್ಯಪ್ ಅವರ ಅದ್ಭುತ ಕ್ಯಾಮೆರಾ ವರ್ಕ್‌ನಿಂದಾಗಿ ದಯವಿಟ್ಟು ಗಮನಿಸಿ ಸಿನಿಮಾ ಬಹಳ ಅದ್ಭುತವಾಗಿ ಮೂಡಿಬಂದಿದೆ.. ಇದು ಎಲ್ಲರೂ ಕೂಡ ನೋಡಬೆಕಾದ ಸಿನಿಮಾ…

Like Us, Follow Us !

122,699FansLike
1,826FollowersFollow
1,409FollowersFollow
2,513SubscribersSubscribe

Trending This Week