29.5 C
Bangalore, IN
Monday, March 18, 2019
Home ಸಿನಿಮಾ ನ್ಯೂಸ್ ಸಿನಿಮಾ ಇತಿಹಾಸ

ಸಿನಿಮಾ ಇತಿಹಾಸ

ಬಿ ಸುರೇಶ , ಸತ್ಯ ಪ್ರಕಾಶರ “ನಮ್ಮ ಶಂಕರ “

ಶಂಕರ್ ನಾಗ್  ಎಂದೂ ಮಾಸದ ಮರಳಿ ಮರಳಿ ಉಕ್ಕುವ ನೆನಪು . ಅಗಲಿ ಹತ್ತಾರು ವರುಷಗಳು ಉರುಳಿದರೂ ಜನರ ಮನಸ್ಸಿನಿಂದ ಜಾರದೆ ಕನಸುಗಳಿಗೆ ಕಸುವು ತುಂಬುವ ಚೈತನ್ಯ . ಬದುಕಿನ ಕಡೆಯ ಕ್ಷಣದವರೆಗೂ ನಿಂತನೀರಾಗದೆ ಚಲಶೀಲರಾಗಿದ್ದ ಶಂಕರ್ ನಾಗ್ ಚಲಿಸುತ್ತಿದ್ದ ಕಾರಿನಲ್ಲೇ ಕರಗಿ ಹೋದವರು . ತನ್ನನ್ನು ನಿಕಟವಾಗಿ ಕಂಡವರಿಗಷ್ಟಲ್ಲದೆ ಕಾಣದಿದ್ದವರಿಗೂ ಕನವರಿಕೆಯಾದವರು. ಇಂದು ಅವ್ರ ಹುಟ್ಟಿದ ದಿನ. ಇಲ್ಲಿ  ಪ್ರತಿಭಾವಂತ ಹಿರಿ -ಕಿರಿಯ ಮನಸ್ಸುಗಳು  ಮಾತಾಡಿವೆ .

ಶಂಕರ, ಶಂಕರಣ್ಣ , ಶಂಕರ್ ನಾಗ್ ಹೀಗೆ ಅನೇಕ ಹೆಸರುಗಳಿಂದ ನಮ್ಮ ನೆನಪಿನ ಕೋಶದಲ್ಲಿ ಶಾಶ್ವತತೆಯನ್ನು ಪಡೆದುಕೊಂಡಿರುವ ನನ್ನ ಗೆಳೆಯರಲ್ಲಿ ಒಬ್ಬ ಶಂಕರ್ ನಾಗ್ . ನಮ್ಮಿಬ್ಬರ ಪರಿಚಯವಾಗಿದ್ದೇ ರಂಗಭೂಮಿಯ ಮೂಲಕ. ನಾನು ಅವರ ನಾಟಕಗಳಿಗೆ ನೇಪಥ್ಯದಲ್ಲಿ ಕೆಲಸ ಮಾಡುತ್ತಿದ್ದೆ. ಅವರು ನನ್ನ ನಾಟಕಗಳ ಅಭ್ಯಾಸದ ಸಮಯದಲ್ಲಿ ಬಂದು ತಿದ್ದಿ, ಸಲಹೆಗಳನ್ನು ಕೊಡುತ್ತಿದ್ದರು. ಅವ್ರು ಗೆಳೆಯರೂ ಹೌದು ಅನೇಕ ವಿಷಯಗಳಲ್ಲಿ ನನ್ನ ಗುರುವೂ ಹೌದು.

ಸಂಕೇತ್ ಸ್ಟುಡಿಯೋ ಬಾಗಿಲಲ್ಲಿ ನಿಂತು ” ಏಯ್ ಸುರೇಶ ನನಗೆ ಜೀವಂತದಂತೆ  ಕಾಣಿಸುವ ದೊಡ್ಡ ನಾಯಿ,ಹಾವಿನ ಬೊಂಬೆ ಮಾಡಿಕೊಡಲಿಕ್ಕೆ ಆಗುತ್ತೇನೋ” ಕೇಳಿದ್ದರು . ಆಗಬಹುದು ಅಂದವನೇ ಸಮಯಕ್ಕೆ ಸರಿಯಾಗಿ ಮಾಡಿ ಕೊಟ್ಟಿದ್ದೆ.  ಅದಾಗಿ ಎಷ್ಟೋ  ದಿವಸಗಳ ನಂತರ ನಾಗಮಂಡಲ ನಾಟಕದಲ್ಲಿ  ಎರಡೂ ಬೊಂಬೆಗಳನ್ನೂ ಬಳಸಿದ್ದರು . ಚಿತ್ರಕಲಾ ಪರಿಷತ್ತಿನಲ್ಲಿ ಶಂಕರ್ನಾಗ್ ಅಭಿನಯಿಸಿದ್ದ ಆ ನಾಟಕ ನೋಡಿದವರಿಗಷ್ಟೇ ಅದರ ಆನಂದ ದಕ್ಕಿರಲಿಕ್ಕೆ ಸಾಧ್ಯ.

ಅವ್ರ ಜೋಕುಮಾರ ಸ್ವಾಮಿ ನಾಟಕ ಅವರದೇ ಸಂಸ್ಥೆ ಅಡಿಯಲ್ಲಿ ನಾನು ಸಿನಿಮಾಕ್ಕಾಗಿ ನಿರ್ದೇಶನ ಮಾಡಬೇಕಿತ್ತು . ಅವ್ರ ಸಾವಿನಿಂದ ಅದೂ ಅಲ್ಲಿಗೇ ನಿಂತು ಹೋಯಿತು . ಮತ್ತೆ ನಾನು ನನ್ನಮೊದಲ ಚಿತ್ರ ನಿರ್ದೇಶನಕ್ಕೆ ಎಷ್ಟೋ ವರ್ಷ ಕಾಯಬೇಕಾಯ್ತು .

ಒಬ್ಬರಿಗೊಬ್ಬರು ಆತುಕೊಂಡು , ಒಬ್ಬರಿಗೊಬ್ಬರು  ಬೆಳೆಸುತ್ತಾ ಜೀವನ ನಡೆಸಬೇಕೆನ್ನುವುದಕ್ಕೆ ಶಂಕರ್ ನಾಗ್ ಬಹು ದೊಡ್ಡ ಉದಾಹರಣೆ .ರಸ್ತೆಯಲ್ಲಿ ಹೋಗುವಾಗ ಯಾರಾದರೂ ನಾಟಕದ ರಿಹರ್ಸಲ್ಗೆ ಹೋಗ್ತಾ ಇದ್ದೇವೆ ಅಂದ್ರೆ ಅಲ್ಲೇ ೧೦೦ ರೂಪಾಯಿ ಅವರ ಕೈಗಿತ್ತು ಎಲ್ಲರಿಗೂ ಕಾಫಿ ಕೊಡ್ಸು ಅಂದುಬಿಡ್ತಿದ್ರು. ನಾನು ಇಂಥಾ ಅವರ ಉದಾರತೆಯನ್ನ ಪ್ರತ್ಯಕ್ಷ ಕಂಡಿದ್ದೇನೆ. ಒಂದು ಪ್ರತಿಭೆಯನ್ನ ಶಂಕರ್ ನಂತೆ  ಬೆನ್ನು ತಟ್ಟಿ ಪೋಷಿಸುವ ,ಗೌರವಿಸುವ ಮತ್ತೊಬ್ಬ ವ್ಯಕ್ತಿಯನ್ನು ನಾನು ಕಂಡಿರುವುದು ಅಪರೂಪ .

ಆತನನ್ನು ನಾನು ಸದಾ ನೆನಪಿಸಿಕೊಳ್ಳುವುದು ಆತನ ಕನಸಿನ ಶಕ್ತಿ ಜೊತೆಗೆ ನನಸಾಗಿಸಿಕೊಳ್ಳುವ ಸಾಮರ್ಥ್ಯ. ಪ್ರತಿ ಕ್ಷಣ ಹೊಸದನ್ನು ಆಲೋಚಿಸುವ ಗುಣ. ನಾವೀಗ ಶಂಕರ್ ಹೆಸರಿನಲ್ಲಿ ಇದೇ ತಿಂಗಳು ೧೩ಕ್ಕೆ ಒಬ್ಬ ಹೊಸ ಪ್ರತಿಭಾವಂತ ರಂಗನಿರ್ದೇಶನಿಗೆ ಪ್ರಶಸ್ತಿ ಕೊಡುತ್ತಿದ್ದೇವೆ. ಹೊಸ ನಾಟಕ ತಂಡವನ್ನೂ ಅವರ ಹೆಸರಿನಲ್ಲಿ ಕಟ್ಟುತ್ತಿದ್ದೇವೆ. ೧೫ ಜನ ಹುಡುಗರು ಸಿದ್ಧವಾಗಿದ್ದಾರೆ.ಇವರೆಲ್ಲಾನಾಳೆ ಏನೇನು ಸಾಧಿಸುತ್ತಾರೋ ಅದೆಲ್ಲ ಶಂಕರ್ ನೆನಪಿಗೆ ನಾವು ದಾಟಿಸುತ್ತಿದ್ದೇವಷ್ಟೆ .

ಶಂಕರ್ ನಾಗ್ ಭೌತಿಕವಾಗಿ ಇಲ್ಲದಿರಬಹುದು ನಮ್ಮ ಮನಸ್ಸಿನಲ್ಲಿ ಮಾತ್ರ ಸದಾ ಜೀವಂತವಾಗಿದ್ದಾರೆ .ಕನಸನ್ನು ಹಂಚುವ ಅಣ್ಣನಾಗಿ ಇದ್ದೇ ಇರ್ತಾರೆ .

-ಬಿ ಸುರೇಶ್

ನಿರ್ದೇಶಕರು

ಶಂಕರ್ ನಾಗ್ ಅವ್ರ ಯೋಚನೆ,ಕೆಲಸಗಳ ಮೂಲಕವೇ ಒಬ್ಬ ಕಥೆಗಾರ, ನಿರ್ಮಾಪಕ ,ನಿರ್ದೇಶಕನ ಜೊತೆ ಯಾವತ್ತಿಗೂ ಇರ್ತಾರೆ .ನಂಗೆ ತುಂಬಾ ವಿಸ್ಮಯ ಅನ್ನಿಸುವುದು ೮೦ ರ ದಶಕದಲ್ಲೇ ಒಂದು ಚಿತ್ರ ನಿರ್ಮಾಣದ ಎಲ್ಲ ಕೆಲಸಗಳು ಒಂದೇ ಸೂರಿನಡಿಯಲ್ಲಿ ಸಾಧ್ಯವಾಗಿಸುವ ಅವ್ರ ಯೋಚನೆ . ಇದರಿಂದ ಸಮಯ, ಹಣ ಎಲ್ಲವು ಉಳಿತಾಯ .ಅಳೆದಾಟ ತಪ್ಪಿ ನಿರ್ಮಾಪಕನ ಆತಂಕ ,ನಿರ್ದೇಶಕನ ಒತ್ತಡ ೯೦ ಪರ್ಸೆಂಟ್ ಕಡಿಮೆ ಆಗಿಬಿಡುತ್ತೆ.

ಅವರು ಮಾಡಿರುವ ಕೆಲಸಗಳಲ್ಲಿ ಒಂದೆರಡು ಪರ್ಸೆಂಟ್ ನಾವುಗಳು ಮಾಡಿದ್ರೆ ಅವೇ ಒಂದೊಂದು ಮುತ್ತಿನ ಕಥೆಗಳಾಗಿ ಬಿಡುತ್ತವೆ. ನನ್ನಂಥ ಹೊಸ ನಿರ್ದೇಶಕರಿಗೆ ಶಂಕರ್ ನಾಗ್ ಇಂದಿಗೂ ಬತ್ತದ ಸ್ಪೂರ್ತಿಯ ಸೆಲೆ . ಅವರ ನೆನಪಿನಲ್ಲೇ ಇನ್ನು ಒಳ್ಳೆಯ ಸಿನಿಮಾ ಮಾಡಲು ಪ್ರಯತ್ನಿಸುತ್ತೇನೆ .

ಸತ್ಯಪ್ರಕಾಶ್

ರಾಮಾ ರಾಮಾ ರೇ..

ನಿರ್ದೇಶಕರು

ಶಂಕರ್ ನಾಗ್ ಎಂಬ ಕನಸುಗಳ ಕಣಜ

ಶಂಕರ್ ನಾಗ್ ತಮ್ಮ ಓದು ಮುಗಿಯುತ್ತಿದ್ದಂತೆಯೇ ಮುಂಬಯಿಗೆ ಹೋದವರು. ಮುಂಬಯಿಯ ಮರಾಠಿ
ರಂಗಭೂಮಿಯತ್ತ ಆಸಕ್ತರಾಗಿ ಸಕ್ರಿಯರಾದವರು. ರಂಗದ ಹಿಂದಿನ, ಮುಂದಿನ ಎಲ್ಲವನ್ನೂ
ಸೂಕ್ಷ್ಮವಾಗಿ ಗಮನಿಸುತ್ತಾ, ಗ್ರಹಿಸುತ್ತಾ ಪಳಗಿದವರು. ಇಷ್ಟಕ್ಕೂ ರಂಗದ ಮೇಲೆ ನಾಟಕ
ನೋಡುವವರಿಗೆ ನೇಪಥ್ಯದಲ್ಲಿನ ಆತಂಕ, ನಾಟಕವೊಂದು ರಂಗಕ್ಕೆ ಬರುವವರೆಗಿನ ಕಷ್ಟ,
ಕಣ್ಣೀರು, ಬೆವರು ಅರ್ಥವಾಗುವುದಿಲ್ಲ. ಪಾತ್ರಕ್ಕೆ ಹೊಂದುವ ವಸ್ತ್ರ ವಿನ್ಯಾಸ,
ಮೇಕಪ್, ಬಾಡಿ ಲಾಂಗ್ವೇಜ್, ಡೈಲಾಗ್ ಹೇಳುವ ಟೈಮಿಂಗ್, ಅವುಗಳ ಹಿಂದೆ ಅಡಗಿರುವ ಒತ್ತಡ
ಗೊತ್ತಿರುವುದಿಲ್ಲ. ಸ್ಟೇಜ್ ಸಿದ್ಧಗೊಳಿಸುವವನು, ಬೆಳಕು ಬಿಡುವವನು, ರಂಗದ
ಮೂಲೆಯೊಂದರಲ್ಲಿ ಕೂತು ವಾದ್ಯ ನುಡಿಸುವವನು, ಹಿನ್ನೆಲೆಯಲ್ಲಿ ರಂಗಗೀತೆ ಹಾಡುವವನು-
ಇವರಿಲ್ಲದೆ ನಾಟಕ ಇಲ್ಲ; ಶಂಕರ್ ನಾಗ್ ಇವುಗಳನ್ನು ಅರಿತಿದ್ದರು.

“ಸತ್ತ ಮೇಲೆ ನಿದ್ರಿಸುವುದು ಇದ್ದೇ ಇದೆ. ಬದುಕಿದ್ದಾಗ ಹಗಲು ರಾತ್ರಿಗಳೆನ್ನದೆ
ದುಡಿಯುವ ಮೂಲಕ ಮಹತ್ವವಾದುದನ್ನು ಸಾಧಿಸಬೇಕು” ಎಂದು ಹೇಳುತ್ತಿದ್ದ ಶಂಕರ್ ನಾಗ್ ಅವರ
ಮಹತ್ವಾಕಾಂಕ್ಷೆಯ ಧೋರಣೆ ಕೂಡ ರಂಗಭೂಮಿಯ ಹಿನ್ನೆಲೆಯಿಂದಲೇ ಪಡೆದದ್ದು.

ಅಲ್ಲಿ ಅಷ್ಟು ಪಕ್ವವಾಗುತ್ತಿದ್ದಂತೆಯೇ ಶಂಕರ್ ನಾಗ್ ಬೆಂಗಳೂರಿಗೆ ಬಂದರು.
ಅಷ್ಟರಲ್ಲಾಗಲೇ ಕನ್ನಡ ಚಿತ್ರರಂಗದಲ್ಲಿ ನೆಲೆ ಕಂಡುಕೊಂಡಿದ್ದ ಸಹೋದರ ಅನಂತ್ ನಾಗ್
ಇಂಗಿತದಂತೆ ಸಿನಿಮಾದಲ್ಲಿ ನಟಿಸಲು ಮುಂದಾದರು. ಗಿರೀಶ್ ಕಾರ್ನಾಡ್ ನಿರ್ದೇಶನದ
‘ಒಂದಾನೊಂದು ಕಾಲದಲ್ಲಿ’ ಚಿತ್ರದ ಮೂಲಕ ಚೊಚ್ಚಲ ಬಾರಿಗೆ ನಾಯಕನ ಪಾತ್ರದಲ್ಲಿ ನಟಿಸಿ
‘ದೆಹಲಿ ಅಂತರರಾಷ್ಟ್ರೀಯ ಚಲನಚಿತ್ರೋತ್ಸವ’ದಲ್ಲಿ ರಾಷ್ಟ್ರೀಯ ಮನ್ನಣೆ ಪಡೆದರು. ಶಂಕರ್
ನಾಗ್ ಗಂಡುಗಲಿ ಪಾತ್ರದಲ್ಲಿ ಜನಪ್ರಿಯರಾದ ಆ ಚಿತ್ರ ಮೂಲತಃ ಜಪಾನಿನ ನಿರ್ದೇಶಕ ಅಕಿರಾ
ಖುರೋಸಾವ ನಿರ್ದೇಶನದ ‘ಸೆವೆನ್ ಸಾಮುರೈ’ ಚಿತ್ರದ ಕನ್ನಡ ಅವತರಣಿಕೆಯಾಗಿತ್ತು.
ಚಂದ್ರಶೇಖರ ಕಂಬಾರರ ಸಾಹಿತ್ಯವಿದ್ದ ಹಾಡುಗಳು ಚಿತ್ರಕ್ಕೆ ಮತ್ತಷ್ಟು ಅರ್ಥ
ತಂದಿದ್ದವು. ಆ ಚಿತ್ರದಲ್ಲಿನ ಅಲ್ಲಿಯ ಜನ, ಆ ಪ್ರಕೃತಿ, ಆ ಕ್ರೌರ್ಯ, ಆ ಸಂಚು, ಆ
ಪ್ರೀತಿ, ಮುಗ್ಧತೆ, ಅನಾಗರೀಕತೆ… ಇಂಥವೆಲ್ಲ ಇಲ್ಲಿ ನೆನಪಿಗೆ ಬರುತ್ತವೆ. ಹೀರೋ
ಆಗಿ ಆ ಚಿತ್ರದಲ್ಲಿ ನಟಿಸಿದಾಗ ಶಂಕರ್ ನಾಗ್ ಕೇವಲ ಇಪ್ಪತ್ತ ನಾಲ್ಕು ವರ್ಷದ ತರುಣ.

ಆಗ ಶಂಕರ್ ನಾಗ್ ಬಿಸಿನೆತ್ತರ ಯುವಕ. ಮಹತ್ವದ ನಾಳೆಗಳನ್ನು ಕನಸುತ್ತಿದ್ದ
ಕನಸುಗಣ್ಣಿನ ಹುಡುಗ. ಅಣ್ಣ ಅನಂತ್ ನಾಗ್ ನೀಡುತ್ತಿದ್ದ ಅಪಾರ ಭ್ರಾತೃತ್ವದ ಸವಿಯನ್ನು
ಕಂಡಾತ. ಅಲ್ಲದೆ ಸಿನಿಮಾದ ರಹಸ್ಯಗಳನ್ನು ಬೇಧಿಸುವಲ್ಲಿ ಅಷ್ಟರಲ್ಲಾಗಲೇ ಪಣ ತೊಟ್ಟು
ನಿಂತಿದ್ದ ಉತ್ಸಾಹಿ. ಭಾರತದ ಬೇರೆ ಬೇರೆ ಭಾಷೆಗಳಲ್ಲಿ ತಯಾರಾಗುತ್ತಿದ್ದ ಚಿತ್ರಗಳ
ಸೂಕ್ಷ್ಮತೆ, ಕ್ರಿಯಾಶೀಲತೆಯನ್ನು ಗಮನಿಸುತ್ತಿದ್ದ ವ್ಯಕ್ತಿ. ಅತ್ತ ರಂಗಭೂಮಿಯ ಗಟ್ಟಿ
ಬುನಾದಿ, ಇತ್ತ ಸಿನಿಮಾ ಎನ್ನುವ ಮಾಯಾಜಗತ್ತಿನ ಹೊಸಬಾನಿನೆಡೆಗೆ ನೆಟ್ಟ ನೋಟ…
ಇವೆಲ್ಲವುಗಳಿಂದ ಶಂಕರ್ ನಾಗ್ ಕಣ್ಣೆದುರು ಭರವಸೆಯ ನಾಳೆಗಳು ಸುಳಿದಾಡತೊಡಗಿದವು.

ಸಿನಿಮಾದ ವಿಸ್ಮಯಕಾರಿ ಸಂಗತಿಗಳ ಬಗ್ಗೆ ಧ್ಯಾನಿಸುವವರು ಮನುಷ್ಯನ ವಿಚಿತ್ರ
ಶೋಧನೆಗಳಲ್ಲಿ ಸಿನಿಮಾ ಕೂಡ ಒಂದೆಂಬುದನ್ನು ಮನಗಾಣಬೇಕು. ಚಲಿಸುವ ಫೋಟೋಗಳ ಮೂಲಕ
ಜಗತ್ತಿಗೆ ಹೇಳಬೇಕಾದುದನ್ನು ಸಮರ್ಥವಾಗಿ ಹೇಳುವುದೇ ಈ ಕಲೆಯ ಮೂಲ ಆಶಯ.
ನಾಟಕದಲ್ಲಾದರೆ ಒಂದೊಳ್ಳೆಯ ಡೈಲಾಗ್ ಹೇಳಿದಾಗ ಅಥವಾ ಒಂದೊಳ್ಳೆ ನೃತ್ಯ ಮಾಡಿದಾಗ ಜನ
ಚಪ್ಪಾಳೆ ಹೊಡೆಯುತ್ತಾರೆ. ಆ ಚಪ್ಪಾಳೆಯ ಪ್ರೋತ್ಸಾಹ ಕಲಾವಿದ ತನ್ನ ಮುಂದಿನ
ದೃಶ್ಯಗಳಲ್ಲಿ ಇನ್ನಷ್ಟು ಚೆನ್ನಾಗಿ, ಉತ್ಸಾಹದಿಂದ ನಟಿಸಲು ಪ್ರೇರೇಪಿಸುತ್ತದೆ. ಆದರೆ
ಸಿನಿಮಾದಲ್ಲಿ ಅಂತಹ ಆವಕಾಶವಿಲ್ಲ. ಕ್ಯಾಮೆರಾವನ್ನೇ ಪ್ರೇಕ್ಷಕ ಎಂದು ತಿಳಿದು ನಟಿಸುವ
ಕಲಾವಿದರ ಚಿತ್ತದಲ್ಲಿ ಒಂದು ಬಗೆಯ ಪರವಶತೆ ಹಾಗೂ ಜಾಗೃತ ಭಾವ ಒಟ್ಟೊಟ್ಟಿಗೆ ಕೆಲಸ
ಮಾಡಬೇಕಾಗುತ್ತದೆ. ಆದ್ದರಿಂದ ನಾಟಕದಲ್ಲಿ ನಟಿಸುವುದು ಎಷ್ಟು ದೊಡ್ಡ ಸವಾಲೋ
ಸಿನಿಮಾಗಳಲ್ಲಿ ನಟಿಸುವುದು ಕೂಡ ಅಷ್ಟೇ ದೊಡ್ಡ ಸವಾಲು. ಆದ್ದರಿಂದಲೇ ಸಿನಿಮಾ
ನಾಟಕಕ್ಕಿಂತ ಭಿನ್ನ. ಆ ಗುಟ್ಟು ನಾಟಕದ ಹಿನ್ನೆಲೆಯಿಂದ ಬಂದ ಶಂಕರ್ ನಾಗ್ ಅವರಿಗೂ
ಗೊತ್ತಿತ್ತು. ಗಿರೀಶ್ ಕಾರ್ನಾಡ್ ಎಂಬ ಎರಡೂ ನೆಲೆಯಲ್ಲಿ ಪಳಗಿದ ನಿರ್ದೇಶಕನ
ಮಾರ್ಗದರ್ಶನದಲ್ಲಿ ನಟಿಸುವಾಗ ನಾಟಕ ಹಾಗೂ ಸಿನಿಮಾ ನಡುವಿನ ಈ ಪುಟ್ಟ ವ್ಯತ್ಯಾಸ
ಶಂಕರ್ ನಾಗ್ ಅವರಿಗೆ ಮತ್ತಷ್ಟು ಗೊತ್ತಾಯಿತು ಅನ್ನಬಹುದು.

ಹೀಗೆ ಅವಲೋಕಿಸುತ್ತಾ ಹೋದಂತೆ, ಶಂಕರ್ ನಾಗ್ ಕಮರ್ಷಿಯಲ್ ಚಿತ್ರಗಳಿಗೆ ಒಗ್ಗಿಕೊಳ್ಳಲು
ಹೆಚ್ಚು ಸಮಯ ಹಿಡಿಯಲಿಲ್ಲ. ಶಂಕರ್ ನಾಗ್ ನಟಿಸಿದ ಚೊಚ್ಚಲ ಮಸಾಲಾ ಚಿತ್ರ
‘ಸೀತಾರಾಮು’. ಅಲ್ಲಿಂದಾಚೆಗೆ ‘ಪ್ರೀತಿ ಮಾಡು ತಮಾಷೆ ನೋಡು’, ‘ಅಟೋ ರಾಜ’, ‘ಮೂಗನ
ಸೇಡು’, ‘ಜನ್ಮಜನ್ಮದ ಅನುಬಂಧ’, ‘ಗೀತಾ’, ‘ಮಿಂಚಿನ ಓಟ’, ‘ಕಾರ್ಮಿಕ ಕಳ್ಳನಲ್ಲ’,
‘ನೋಡಿ ಸ್ವಾಮಿ ನಾವಿರೋದು ಹೀಗೆ’, ‘ಆಕ್ಸಿಡೆಂಟ್’, ‘ಸಿ.ಬಿ.ಐ.ಶಂಕರ್’, ‘ಇದು
ಸಾಧ್ಯ’, ‘ಹೊಸ ಜೀವನ’ ಮುಂತಾದ ಚಿತ್ರಗಳಲ್ಲಿ ವಿಕಸಿಸುತ್ತಾ ಸಾಗಿದಂತೆ ಶಂಕರ್ ನಾಗ್
ಅದ್ಭುತ ಕಲಾವಿದನಾಗಿ ಕಾಣುತ್ತಾರೆ. ಹಾಗೆಯೇ ಕ್ರಿಯಾಶೀಲ ನಿರ್ದೇಶಕರಾಗಿ ಸಹ. ಪೋಲೀಸ್
ಅಧಿಕಾರಿ ಸಾಂಗ್ಲಿಯಾನ ಮುಂತಾದವರು ಶಂಕರ್ ನಾಗ್ ಚಿತ್ರಗಳಿಗೆ ಸ್ಪೂರ್ತಿಯಾಗಿದ್ದಾರೆ.
ರಾಮಕೃಷ್ಣ ಹೆಗಡೆ, ಪ್ರೊತಿಮಾ ಬೇಡಿ ತರಹದವರು ಇವರಿಗೆ ಇಷ್ಟವಾಗುತ್ತಾರೆ. ಜನತಾ ಪಕ್ಷ
ಎಂಬತ್ತರ ಸುಮಾರಿಗೆ ಇವರು ಗುರುತಿಸಿಕೊಳ್ಳುವ ರಾಜಕೀಯ ಪಕ್ಷವಾಗುತ್ತದೆ.

ಇವರ ಚಿತ್ರಗಳಲ್ಲಿ ಹಾಡುಗಳಿವೆ, ಫೈಟುಗಳಿವೆ, ಪಂಚಿಂಗ್ ಡೈಲಾಗ್ಸ್ ಇವೆ; ತಂತ್ರವಿದೆ,
ಬಡವರ ಬಗ್ಗೆ ಕಾಳಜಿ ಇದೆ, ಸಾಮಾಜಿಕ ಪ್ರಜ್ಞೆ ಇದೆ; ಎಲ್ಲವೂ ವಾಸ್ತವಕ್ಕೆ ಹಿಡಿದ
ಕನ್ನಡಿಯಂತಿವೆ. ಚಿತ್ರ ಮಾಡಿ ಕೀರ್ತಿ, ಹಣ ಗಳಿಸುವ ಉದ್ದೇಶಕ್ಕಿಂತ ಮಿಗಿಲಾಗಿ
ಸಿನಿಮಾ ಮಾಧ್ಯಮದ ಮೂಲಕ ನಾಡಿಗೆ ಹೇಳಬೇಕಾದುದನ್ನು ಸ್ಪಷ್ಟವಾಗಿ ಹೇಳಬೇಕೆಂಬ ತುಡಿತ
ಮತ್ತು ವ್ಯವಹಾರದಾಚೆಗೂ ಸಿನಿಮಾವನ್ನು ಕಲೆಯಾಗಿ ನೋಡುವ ಪ್ರಾಮಾಣಿಕತೆ- ಇಲ್ಲಿ
ಏಕಕಾಲಕ್ಕೆ ಗ್ರಹಿಕೆಗೆ ಸಿಕ್ಕುತ್ತವೆ. ಈ ಕಾರಣದಿಂದ ಶಂಕರ್ ನಾಗ್ ಅವರ ಹಲವು ಬಗೆಯ
ಪ್ರಯತ್ನಗಳು ಮುಖ್ಯವಾಗಿ ಪರಿಗಣಿಸಲ್ಪಡುತ್ತವೆ. ಇವರು ಮೊದಲು ಕಾಲಾತ್ಮಕ
ಚಿತ್ರಗಳಲ್ಲಿ ನಟಿಸಿದವರು; ಆಮೇಲೆ ಹೆಚ್ಚು ಜನರನ್ನು ತಲುಪುವ ವ್ಯಾಪಾರಿ ಚಿತ್ರಗಳತ್ತ
ಮುಖ ಮಾಡಿದರು. ತಡಮಾಡದೆ ‘ಮಿಂಚಿನ ಓಟ’ದ ಮೂಲಕ ನಿರ್ದೇಶಕರಾದರು; ಚಿತ್ರಕ್ಕೆ ಎರಡನೇ
ಅತ್ಯುತ್ತಮ ಚಿತ್ರ, ಅತ್ಯುತ್ತಮ ಚಿತ್ರಕತೆ ರಾಜ್ಯ ಪ್ರಶಸ್ತಿಗಳೂ ಬಂದವು.

ಹೀಗೆ ಶುರುವಾದ ಶಂಕರ್ ನಾಗ್ ಅವರ ಕಲಾಪಯಣ ಕಡೆಗೆ ತನ್ನ ಸುತ್ತಣ ಸಮಾಜಕ್ಕೆ
ಸ್ಪಂದಿಸುವ ಕಡೆಗೆ ವಾಲಿಕೊಂಡಿತು; ‘ಆಟೋರಾಜ’ ಮೂಲಕ ಆಟೋ ಡ್ರೈವರುಗಳ ಪ್ರೀತಿಯನ್ನೂ,
‘ಲಾರಿ ಡ್ರೈವರ್’ ಮೂಲಕ ಲಾರಿ ಡ್ರೈವರುಗಳ ಅಭಿಮಾನವನ್ನೂ, ‘ಕಾರ್ಮಿಕ ಕಳ್ಳನಲ್ಲ’
ಮೂಲಕ ಕಾರ್ಮಿಕರ ಒಲವನ್ನೂ ಗಳಿಸಲು ಸಾಧ್ಯವಾಯಿತು. ಶಂಕರ್ ನಾಗ್ ಎಂಬ ಹೆಸರು ಕೇವಲ
ಒಬ್ಬ ಚಿತ್ರನಟನ ಹೆಸರಾಗದೆ ತುಳಿತಕ್ಕೊಳಗಾದ, ಶೋಷಣೆಯನ್ನು ಎದುರಿಸುವ, ಶ್ರಮಿಕ,
ಬಡವ, ದೀನ ಜನತೆಯ ಪಾಲಿನ ಗಟ್ಟಿಧ್ವನಿಯಾಗುವತ್ತ ತಿರುಗಿಕೊಂಡಿತು…ಈ ಎಲ್ಲ
ಕಾರಣಗಳಿಂದಾಗಿ ತಮ್ಮ ಓವರ್ ಸ್ಪೀಡ್ ನಿಂದಾಗಿ ಶಂಕರ್ ನಾಗ್ ತಮಗೇ ಗೊತ್ತಿಲ್ಲದಂತೆ
ತಮಗಿಂತಲೂ ಮೊದಲೇ ಇಲ್ಲಿ ಸ್ಟಾರ್, ಆರಾಧ್ಯ ದೈವ ಎನಿಸಿಕೊಂಡಿದ್ದವರನ್ನು ಹಿಂದಿಕ್ಕಿ
ಅತ್ಯಂತ ಕಡಿಮೆ ಅವಧಿಯಲ್ಲಿ ಒಂದೆರಡು ಹೆಜ್ಜೆ ಮುಂದಕ್ಕೆ ಹೋಗಿಬಿಟ್ಟಿದ್ದರು!

ಮಹಾನ್ ಕಲಾವಿದ ಶಂಕರ್ ನಾಗ್ ಅವರಲ್ಲಿದ್ದ ಈ ವಿಶೇಷ ಗುಣ, ತೀಕ್ಷ್ಣತೆ, ಚುರುಕುತನ
ಸಾಮಾನ್ಯ ಅನ್ನಿಸದ ಚಿತ್ರಗಳನ್ನು ಮಾಡುವ ರೀತಿ ಅಚ್ಚರಿಗೊಳಿಸುತ್ತಿತ್ತು. ತಮ್ಮ
ನಿರ್ದೇಶನದ ಚಿತ್ರಗಳಿಗೆ ತಾವೇ ಸ್ಕ್ರಿಪ್ಟ್ ಬರೆಯುವುದನ್ನು ರೂಢಿಸಿಕೊಂಡಿದ್ದ ಶಂಕರ್
ನಾಗ್ ಅವರಿಗೆ ಅಸಾಧ್ಯವಾದ ವಾಸ್ತವತೆ, ಪಾರದರ್ಶಕತೆ, ದೂರದೃಷ್ಟಿ ಇತ್ತು; ಇವರ
ನಿರ್ದೇಶನದ ಇವರದೇ ಆದ ಶೈಲಿಯ ಚಿತ್ರಗಳಲ್ಲಿ ಕಮರ್ಷಿಯಲ್ ಎಲಿಮೆಂಟ್ಸ್ ಏನೇನು ಇರಬೇಕೋ
ಅವೆಲ್ಲವೂ ಇರುವುದರ ಜೊತೆಗೆ ಜಗತ್ತಿಗೆ ಹೇಳಲೇಬೇಕಾದ ಒಂದು ಮಹತ್ವಪೂರ್ಣ ಸಂಗತಿ
ಕಲಾತ್ಮಕ ವಿನ್ಯಾಸದೊಳಗೆ ತಪ್ಪದೆ ಅಡಗಿರುತ್ತಿತ್ತು; ಎಷ್ಟು ಮನರಂಜನೆ ಇರುತ್ತಿತ್ತೋ
ಅಷ್ಟೇ ಭಾವುಕತೆ, ಚಿಂತನೆಗೆ ಹಚ್ಚುವ ಗುಣ ಇವರ ಚಿತ್ರಗಳಲ್ಲಿ ಇರುತ್ತಿತ್ತು.

ಹೀಗೆ ಹೇಳುವುದು ಶಂಕರ್ ನಾಗ್ ಅವರನ್ನು ಹೊಗಳುವ ಸಲುವಾಗಿ ಅಲ್ಲ; ಅವರ ಶಕ್ತಿ ಮತ್ತು
ಯುಕ್ತಿಯನ್ನು ಗ್ರಹಿಸುವ ಉದ್ದೇಶದಿಂದ ಮಾತ್ರ. ಪೂರ್ಣಪ್ರಮಾಣದಲ್ಲಿ ಶಂಕರ್ ನಾಗ್
ಗಿರೀಶ್ ಕಾರ್ನಾಡ್, ಸತ್ಯಜಿತ್ ರೇ, ಶ್ಯಾಮ್ ಬೆನಗಲ್, ಗಿರೀಶ್ ಕಾಸರವಳ್ಳಿ ಮುಂತಾದವರ
ಹಾಗೆ ಕಲಾತ್ಮಕ ಚಿತ್ರಗಳ ತೆಕ್ಕೆಗೆ ಸಿಕ್ಕಿಹಾಕಿಕೊಂಡು ಅಲ್ಲೇ ಉಳಿದುಬಿಟ್ಟಿದ್ದರೆ
ಇನ್ನೊಂದಿಷ್ಟು ಮಹತ್ವದ ಪ್ರಶಸ್ತಿಗಳನ್ನು ಕನ್ನಡಕ್ಕೆ ತಂದುಕೊಡುತ್ತಿದ್ದರು
ಅನ್ನುವುದನ್ನು ಬಿಟ್ಟರೆ ಸಾಮಾನ್ಯ ಪ್ರೇಕ್ಷಕನಿಗೂ ತಲುಪುವ ಸರಳತೆಯ ನಡುವೆ
ಸಂಕೀರ್ಣವಾದುದನ್ನು ಪ್ರತಿಪಾದಿಸುವ ನಟ ಅಥವಾ ನಿರ್ದೇಶಕ ಬಹುಷಃ
ಆಗುತ್ತಿರಲಿಲ್ಲವೇನೋ. ಶಂಕರ್ ನಾಗ್ ಅವರ ಹೆಚ್ಚುಗಾರಿಗೆ ಇರುವುದೇ ಹೀಗೆ ಎರಡು
ದಿಕ್ಕುಗಳು ಒಂದೆಡೆ ಸಂಧಿಸುವಂತೆ ಮಾಡುವ ಸಮತೋಲನ ಗುಣ, ಚಾಣಾಕ್ಷತೆ, ಪ್ರತಿಭೆಯಿಂದ.
ಹಾಡು, ನೃತ್ಯ, ಡೈಲಾಗ್ಸ್, ಪ್ರಜ್ಞೆ ಹುಟ್ಟುಹಾಕುವ ಚಿತ್ರಕತೆ ಮೂಲಕ ಹೃದಯ
ಸ್ಪರ್ಶಿಸಬಲ್ಲ ಈತ ಪ್ರೇಕ್ಷಕರ ಆಸಕ್ತಿ, ಅಭಿರುಚಿಗಳನ್ನು, ಅವರಲ್ಲಿ ಅಡಗಿರಬಹುದಾದ
ಕೌತುಕವನ್ನು ಗ್ರಹಿಸಬಲ್ಲವರಾಗಿದ್ದರು, ಅವರಲ್ಲಿನ ಭಾವಜಗತ್ತು, ಪ್ರೇಮಕ್ಕಾಗಿ
ತುಡಿಯುವ ಮನಸು, ಸ್ನೇಹಕ್ಕಾಗಿ ಹಾತೊರೆಯುವ ಹಪಾಹಪಿ, ವ್ಯವಸ್ಥೆಯ ಮೇಲಿನ ಅವರ
ಸಿಟ್ಟು, ಆಕ್ರೋಶ, ಅಸಯಾಕತೆ, ಕನ್ನಡ ನಾಡು ನುಡಿಯ ಬಗೆಗಿನ ಅವರ ಪ್ರೀತಿ, ಅಭಿಮಾನ
ಎಲ್ಲವನ್ನೂ ಅಚ್ಚುಕಟ್ಟಾಗಿ ಹಿಡಿದು ಅವರನ್ನು ರಂಜಿಸಬಲ್ಲ ಮಾಂತ್ರಿಕತೆ ಶಂಕರ್ ನಾಗ್
ಅವರಲ್ಲಿತ್ತು.

ಮೂವತ್ತೈದು ವರ್ಷಕ್ಕೇ ಶಂಕರ್ ನಾಗ್ ಎಷ್ಟು ಸಾಧಿಸಿದ್ದರು? ಚಿತ್ರರಂಗಕ್ಕೆ ಕಾಲಿಟ್ಟ
ಬರೀ ಹನ್ನೆರಡು ವರ್ಷಗಳೊಳಗೆ ಬರೋಬ್ಬರಿ ಎಂಬತ್ತಕ್ಕೂ ಹೆಚ್ಚು ಚಿತ್ರಗಳಲ್ಲಿ
ನಟಿಸಿದ್ದರು. ಹತ್ತಾರು ಚಿತ್ರಗಳನ್ನು ಬರೆದು, ನಿರ್ದೇಶಿಸಿದ್ದರು: ಆಕರ್ಷಕ ಗಡ್ಡ,
ವಿಶಿಷ್ಟ ದ್ವನಿ, ಸ್ಟೈಲಿಶ್ ನಡಿಗೆ ಮತ್ತು ಭರವಸೆಯ ಬೆಳಕನ್ನು ಮೊಗೆಮೊಗೆದು ಕೊಡುವ
ಕಣ್ಣುಗಳು ಅವರ ಕಲೆಯನ್ನು, ವ್ಯಕ್ತಿತ್ವವನ್ನು ಇಡಿಯಾಗಿ ಹಿಡಿಯಬಯಸುವವರಿಗೆ
ಸಹಕರಿಸುತ್ತಿದ್ದವು. ಅಣ್ಣ ಅನಂತ್ ನಾಗ್ ಜೊತೆಗೂಡಿ ಅಂದಿನ ಮುಖ್ಯಮಂತ್ರಿ ರಾಮಕೃಷ್ಣ
ಹೆಗಡೆ ಸ್ನೇಹ ಬೆಳೆಸಿ ಕಟ್ಟಿದ ‘ಸಂಕೇತ್’ ಸ್ಟುಡಿಯೋ, ಆ ಸ್ಟುಡಿಯೋ ಮೂಲಕ
ಕನ್ನಡಕ್ಕೊಂದು ರೆಕಾರ್ಡಿಂಗ್ ಸ್ಟುಡಿಯೋ ಲಭ್ಯವಾಗಬೇಕು ಮತ್ತು ಕನ್ನಡಿಗರು ಹಿಂದಿ
ಧಾರಾವಾಹಿಗಳಲ್ಲಿ ಕಾಣಿಸಿಕೊಳ್ಳಬೇಕು ಅನ್ನುವ ಕನಸುಗಳು, ಕನ್ನಡ ನಾಟಕ ಮತ್ತು ರಂಗ
ಕಲಾವಿದರು ರಾಷ್ಟ್ರಮಟ್ಟದಲ್ಲಿ ಪ್ರಜ್ವಲಿಸಬೇಕು ಅನ್ನುವ ಭರವಸೆಗಳು ಹಾಗೆಯೇ ದೊಡ್ಡ
ಮಟ್ಟದಲ್ಲೊಂದು ಕಂಟ್ರಿ ಕ್ಲಬ್ ಮಾಡುವ ಕನಸು… ಯಾವುದೂ ಹೆಚ್ಚು ಕಾಲ ಉಳಿಯಲಿಲ್ಲ.

ಅದೊಂದು ಬೆಳಗಿನ ಜಾವ ಶಂಕರ್ ನಾಗ್ ದಾವಣಗೆರೆಯಿಂದ ಹತ್ತು ಕಿಲೋಮೀಟರ್ ಈಚೆಗೆ ಕಾರು
ಅಪಘಾತದಲ್ಲಿ ತೀರಿಕೊಂಡರು. ‘ಒಂದಾನೋದು ಕಾಲದಲ್ಲಿ’ ಗಿರೀಶ್ ಕಾರ್ನಾಡ್ ಮೂಲಕ
ಚಿತ್ರನಟನಾದ ಶಂಕರ್ ನಾಗ್ ಅದೇ ಗಿರೀಶ್ ಕಾರ್ನಾಡ್ ಅವರ ‘ಜೋಕುಮಾರಸ್ವಾಮಿ’ ಮಾಡುವ
ಸಂದರ್ಭದಲ್ಲಿ ಕೆಟ್ಟ ಸಾವಿಗೆ ಬಲಿಯಾದರು. ಉತ್ತರಕನ್ನಡ ಜಿಲ್ಲೆಯ ಹೊನ್ನಾವರ ಸಮೀಪದ
ಮಲ್ಲಾಪುರದಲ್ಲಿ 1954ರಲ್ಲಿ ಜನಿಸಿದ ಶಂಕರ್ ನಾಗ್ ತಮ್ಮನ್ನು ಅಪಾರವಾಗಿ
ಪ್ರೀತಿಸುತ್ತಿದ್ದ ಅಸಂಖ್ಯಾತ ಕನ್ನಡಿಗರನ್ನು ಶಾಶ್ವತವಾಗಿ ಬಿಟ್ಟು ಹೋಗುವ ಮುನ್ನ
ಅದೆಷ್ಟೋ ಅದ್ಭುತ ಸಿನಿಮಾಗಳನ್ನು, ‘ಮಾಲ್ಗುಡಿ ಡೇಸ್’ ತರಹದ ಭಾರತ ಮಟ್ಟದಲ್ಲೇ ಬೆರಗು
ಮೂಡಿಸಿದ ಧಾರಾವಾಹಿಯನ್ನು ನೀಡಿದ್ದರ ಜೊತೆಗೆ ಕನ್ನಡಿಗರ ಪಾಲಿಗೆ ಒಂದು ದೊಡ್ಡ
ಶೂನ್ಯವನ್ನು ಉಳಿಸಿಬಿಟ್ಟು ಅರ್ಧದಲ್ಲೇ ದಿಢೀರನೆ ಹೊರಟುಬಿಟ್ಟರು.

 

-ಹೃದಯಶಿವ

12548936_10201284272185325_2026048081419821529_n

Like Us, Follow Us !

120,521FansLike
1,826FollowersFollow
1,573FollowersFollow
4,234SubscribersSubscribe

Trending This Week