31 C
Bangalore, IN
Friday, May 25, 2018
Home ಸಿನಿಮಾ ನ್ಯೂಸ್ ಸಿನಿಮಾ ಇತಿಹಾಸ

ಸಿನಿಮಾ ಇತಿಹಾಸ

ಸುಬ್ಬಯ್ಯ ನಾಯ್ಡು: ಕನ್ನಡ ಚಿತ್ರರಂಗದ ಮೊದಲ ನಾಯಕ ನಟ

ಸುಬ್ಬಯ್ಯ ನಾಯ್ಡು: ಕನ್ನಡ ಚಿತ್ರರಂಗದ ಮೊದಲ ನಾಯಕ ನಟ

ಕನ್ನಡದ ಮೊದಲ ವಾಕ್ಚಿತ್ರ ‘ಸತಿ ಸುಲೋಚನ’ದಲ್ಲಿ ನಾಯಕನಟರಾಗಿ ಅಭಿನಯಿಸಿದ ಹೆಗ್ಗಳಿಕೆ ಸುಬ್ಬಯ್ಯ ನಾಯ್ಡು ಅವರದ್ದು. ಅವರು ಕನ್ನಡದ ಮೊದಲ ನಾಟಕ ನಟ ಅನ್ನುವುದು ಕೇವಲ ಅಂಕಿ-ಅಂಶಗಳ ಮೂಲಕ ಮಾತ್ರ ಗುರುತಿಸಲ್ಪಡೋ ಸಂಗತಿ ಅಲ್ಲ ನಾಯಕ ನಟರ ಅಭಿನಯಕ್ಕೆ ಒಂದು ರೀತಿಯಲ್ಲಿ ಮಾದರಿಯಾಗಿ ನಿಂತವರು ಅವರು. ವರನಟ ಡಾ.ರಾಜ್ ಕುಮಾರ್ ಅವರು ಸುಬ್ಬಯ್ಯ ನಾಯ್ಡು ಅವರ ಕಂಪನಿಯಲ್ಲಿ ಅಭಿನಯಿಸಿದ್ದವರು ಮಾತ್ರವಲ್ಲ ಅವರ ಅಭಿನಯ ಕ್ರಮವನ್ನೇ ಅನುಸರಿಸಿದವರೂ ಕೂಡ ಹೌದು. ಅಷ್ಟೇ ಅಲ್ಲ ಕನ್ನಡ ಚಿತ್ರರಂಗದ ಕನಿಷ್ಠ ಮೂರು ತಲೆಮಾರಿನ ಕಲಾವಿದರು ಸುಬ್ಬಯ್ಯ ನಾಯಡು ಅವರ ಅಭಿನಯ ಕ್ರಮವನ್ನೇ ಅನುಸರಿಸಿದ್ದರು.

ಎರಡನೇ ವಯಸ್ಸಿಗೆ ತಂದೆಯನ್ನು ಕಳೆದು ಕೊಂಡ ಸುಬ್ಬಯ್ಯ ನಾಯ್ಡು ಬಲು ಕಷ್ಟದ ಬಾಲ್ಯವನ್ನು ಕಂಡವರು. ಶಾಲೆಯ ಮುಖವನ್ನೇ ಕಾಣದೆ ಎಮ್ಮೆ ಮೇಯಿಸಿಕೊಂಡಿದ್ದರೂ ನಾಟಕಗಳನ್ನು ನೋಡಿ ಶುದ್ದ ಸಂಭಾಷಣೆಯನ್ನು ಬಾಲಕ ಸುಬ್ಬಯ್ಯ ನಾಯ್ಡು ಕಲಿತಿದ್ದರು. ಇದೇ ರಂಗಭೂಮಿಯ ಕಡೆ ಬರಲು ಪ್ರೇರಣೆ ನೀಡಿತು. ಗಿರಿಧರ್ಲಾಲ್ ಕಂಪನಿ ಮೂಲಕ ಪ್ರವೇಶ ಪಡೆದರೂ ಹೆಸರು ಮಾಡಿದ್ದು ಸುಬ್ಬು ಗುರಿಕಾರ್ ಅವರ ‘ಭಾರತ ಜನ ಮನೋವಿಲಾಸಿನಿ’ಕಂಪನಿಯ ಮೂಲಕ. ಅದರಲ್ಲೂ ‘ವಿರಾಟ ಪರ್ವ’ನಾಟಕದ ಸುದೇಷ್ಟೆ ಪಾತ್ರ ಹೆಸರು ತಂದು ಕೊಟ್ಟಿತು. ಇದನ್ನು ಮಾಡೋಳು ಹುಡುಗಿ ಅಂದುಕೊಂಡು ಮೋಹಿಸಿದ ಶ್ರೀಮಂತರೂ ಕೂಡ ಇದ್ದರು. ಗಂಗಾಧರ ರಾಯರ ಕಂಪನಿಯಲ್ಲಿ ನಾಯಕನ ಪಾತ್ರಗಳ ಮೂಲಕ ಹೆಸರು ಮಾಡಿದರು. ಇಲ್ಲಿಂದ ಮುಂದಿನ ಸ್ಟಾಪ್ ಗುಬ್ಬಿ ಕಂಪನಿ. ಇಲ್ಲಂತೂ ‘ಸುಭದ್ರಾ ಕಲ್ಯಾಣ’ದ ಶ್ರೀಕೃಷ್ಣನಾಗಿ ಹೆಸರು ಮಾಡಿದರು. ಅಷ್ಟು ಹೊತ್ತಿಗಾಗಲೇ ನಾಯಕನ ಪಾತ್ರವನ್ನು ನಿರ್ವಹಿಸುವುದರಲ್ಲಿ ಅವರು ಮಾದರಿ ಆಗಿ ಬಿಟ್ಟಿದ್ದರು. ಗುಬ್ಬಿ ಕಂಪನಿಯವರೇ ನಿರ್ಮಿಸಿದ ‘ಹಿಸ್ ಲವ್ ಆಪೇರ್’ ಅನ್ನೋ ಮೂಕಿ ಚಿತ್ರದಲ್ಲಿ ಕೂಡ ಸುಬ್ಬಯ್ಯ ನಾಯ್ಡು ಅಭಿನಯಿಸಿದರು.

ಈ ವೇಳೆಗೆ ಸುಬ್ಬಯ್ಯ ನಾಯ್ಡು ಅವರಿಗೆ ಆರ್.ನಾಗೇಂದ್ರ ರಾಯರ ಪರಿಚಯವಾಯಿತು. ರಾಯರು ಮುಂಬೈಗೆ ತೆರಳಿ ವಾಕ್ಚಿತ್ರಗಳಲ್ಲಿ ಅಭಿನಯಿಸಿ ಅನುಭವವನ್ನು ಪಡೆದುಕೊಂಡು ಬಂದಿದ್ದರು.ರಂಗಭೂಮಿಯ ಕುರಿತೂ ಅವರಿಗೆ ಹೊಸ ಐಡಿಯಾಗಳಿದ್ದವು. ಇದನ್ನು ಕೇಳಿ ಸುಬ್ಬಯ್ಯ ನಾಯ್ಡು ಅವರಿಗೆ ಅವರಿವರ ಕಂಪನಿಯಲ್ಲಿ ಕೆಲಸ ಮಾಡೋ ಬದಲಿಗೆ ರಾಯರ ಜೊತೆಯಲ್ಲಿ ಸ್ವಂತ ಕಂಪನಿ ಮಾಡಬಾರದು ಏಕೆ ಅನ್ನೋ ವಿಚಾರ ಬಂದಿತು. ರಾಯರ ಮೊದಲಿಗೆ ಒಪ್ಪದಿದ್ದರೂ ತಾಯಿ ರುಕ್ಮಿಣಿ ಬಾಯಿ ಮಾತಿಗೆ ಕಟ್ಟು ಬಿದ್ದು ಒಪ್ಪಿಕೊಂಡರು. ಹೀಗೆ ‘ಶ್ರೀಸಾಮ್ರಾಜ್ಯ ನಾಟಕ ಮಂಡಳಿ’ರೂಪುಗೊಂಡಿತು. ಇಲ್ಲಿ ರೂಪುಗೊಂಡ ‘ಭೂಕೈಲಾಸ’ ನಾಟಕ ಕನ್ನಡ ರಂಗಭೂಮಿಯ ಇತಿಹಾಸದಲ್ಲೇ ಮೈಲಿಗಲ್ಲು ಎನ್ನಿಸಿಕೊಂಡಿತು. ರಂಗದ ಮೇಲೆ ಮೊಟ್ಟ ಮೊದಲ ಸಲ ಡಿಮ್ಮರ್ಗಳು ಸ್ಪಾಟ್ ಲೈಟ್ಗಳು ಬಳಕೆಯಾದವು. ರಾವಣನಾಗಿ ಸುಬ್ಬಯ್ಯ ನಾಯ್ಡು ಅವರು ಅಭಿನಯದಲ್ಲಿ ಹೊಸತನವನ್ನು ತಂದಿದ್ದರು.

 15bg_bgkpm_SUCH_17_1847890e

ಇದೇ ವೇಳೆಗೆ ಚಮನ್ ಲಾಲ್ ಡುಂಗಾಜಿಯವರು ನಾಗೇಂದ್ರ ರಾಯರ ಬಳಿ ಕನ್ನಡ ಚಿತ್ರವನ್ನು ನಿರ್ಮಿಸುವ ಪ್ರಸ್ತಾಪವನ್ನು ಮುಂದಿಟ್ಟಿದ್ದರು. ನಾಗೇಂದ್ರ ರಾಯರು ಹಾಕಿದ್ದು ಒಂದೇ ಶರತ್ತು ‘ಸುಬ್ಬಯ್ಯ ನಾಯ್ಡು ಅವರು ನಾಯಕರಾಗ ಬೇಕು’ ಹೀಗೆ ಕನ್ನಡದ ಮೊದಲ ವಾಕ್ಚಿತ್ರ ‘ಸತಿ ಸುಲೋಚನ’ದಲ್ಲಿ ನಾಯಕ ಇಂದ್ರಜಿತುವಿನ ಪಾತ್ರವನ್ನು ಸುಬ್ಬಯ್ಯ ನಾಯ್ಡು ನಿರ್ವಹಿಸಿದರು. ರಂಗ ಭೂಮಿಗಿಂತಲೂ ಸಿನಿಮಾ ಭಿನ್ನ ಕ್ಷೇತ್ರವಾಗಿದ್ದು. ಆಗ ಕಲಾವಿದರು ಅಭಿನಯಿಸುತ್ತಲೇ ಹಾಡ ಬೇಕಿತ್ತು. ಸ್ಟುಡಿಯೋ ಇರಲೇ ಇಲ್ಲ. ಇಂತಹ ಸವಾಲಿನಲ್ಲಿ ಸುಬ್ಬಯ್ಯ ನಾಯ್ಡು ತಮ್ಮ ಸ್ವಂತಿಕೆಯನ್ನು ತೋರಿಸಿದರು ಅಲ್ಲಿಂದ ಮುಂದೆ ‘ವಸಂತ ಸೇನ’ ‘ಹರಿಶ್ಚಂದ್ರ’ ‘ಮಹಾತ್ಮ ಕಬೀರ್’ಚಿತ್ರಗಳ ನಾಯಕರಾಗಿ ಸುಬ್ಬಯ್ಯ ನಾಯ್ಡು ಅಭಿನಯಿಸಿ ಅಪಾರ ಜನಪ್ರಿಯತೆ ಪಡೆದರು. ಆದರೆ ಅವರ ಒಲವು ಇದ್ದಿದ್ದು ರಂಗಭೂಮಿಯ ಕಡೆಗೇ.

ಮದ್ರಾಸಿನಲ್ಲಿ ‘ಶ್ರೀಸಾಮ್ರಾಜ್ಯ ಮಂಡಳಿ’ ಕ್ಯಾಂಪ್ ಹಾಕಿದ್ದಾಗ. ಚಾಂಮ್ರವರ್ಣ ಅಣೆಕಟ್ಟು ಒಡೆದು ಅಪಾರ ನಷ್ಟವಾಯಿತು. ನಾಗೇಂದ್ರ ರಾಯರು ರಂಗಭೂಮಿ ಸಾಕು ಎಂದು ನಿರ್ಧರಿಸಿ ಚಿತ್ರರಂಗದಲ್ಲಿ ಭವಿಷ್ಯವನ್ನು ಕಾಣಲು ತೀರ್ಮಾನಿಸಿದರು. ಆದರೆ ಸುಬ್ಬಯ್ಯ ನಾಯಡು ಅವರು ರಂಗಭೂಮಿಯಲ್ಲೇ ಇಳಿಯಲು ಬಯಸಿದರು. ಇಲ್ಲಿ ಗೆಳೆಯರ ಹಾದಿ ಬೇರೆಯಾಯಿತು. ಇದರಿಂದ ಕನ್ನಡ ಚಿತ್ರರಂಗಕ್ಕೆ ದೊರಕ ಬಹುದಾಗಿದ್ದ ಸುಬ್ಬಯ್ಯ ನಾಯ್ಡು ಅವರ ವಿಶಿಷ್ಠ ಪಾತ್ರಗಳು ತಪ್ಪಿ ಹೋದವು. ಮುಂದೆ ಅವರು ಚಿತ್ರ ನಿರ್ಮಿಸಿದ್ದು ಮಗ ಲೋಕೇಶ್ಗಾಗಿ. ‘ಭಕ್ತಪ್ರಹ್ಲಾದ’ಚಿತ್ರವನ್ನು ನಿರ್ಮಿಸಿ ತಾವೇ ಹಿರಣ್ಯ ಕಶಪುವಿನ ಪಾತ್ರವನ್ನು ಅಮೋಘವಾಗಿ ಮಾಡಿದರು. ಅಲ್ಲಿ ಕೂಡ ಅವರ ಪ್ರತಿಭೆಯನ್ನು ಗುರುತಿಸುವ ಮನೋಭಾವ ಕೆಲಸ ಮಾಡಿತ್ತು. ಲೀಲಾವತಿಯವರು ಚಿತ್ರರಂಗಕ್ಕೆ ಬಂದಿದ್ದು ಈ ಚಿತ್ರದ ಮೂಲಕವೇ.

ರಂಗಭೂಮಿಯಲ್ಲೇ ಉಳಿಯಲು ತೀರ್ಮಾನಿಸಿದ ಸುಬ್ಬಯ್ಯ ನಾಯಡು ಹಲವು ಹೊಸ ಪ್ರಯೋಗಗಳನ್ನು ಮಾಡಿದರು. ‘ತಿರುಗುವ ರಂಗಸಜ್ಜಿಕೆ’ಮಾಡಿದರು. ರಾಷ್ಟ್ರಮಟ್ಟದಲ್ಲೇ ಇಂತಹ ಪ್ರಯೋಗ ನಡೆದಿದ್ದು ಅದೇ ಮೊದಲು. ಹೊಸ ಕಲಾವಿದರನ್ನು ಹುಡುಕಿದರು. ಶ್ರೀಕಂಠ ಮೂರ್ತಿಗಳು ಅವರ ಕಂಪನಿಯ ಪ್ರಮುಖ ನಟರಾಗಿದ್ದರು.

ಒಮ್ಮೆ ಅವರಿಗೆ ಅನಾರೋಗ್ಯ ಉಂಟಾಯಿತು. ನಾಟಕಕ್ಕೆ ಟಿಕೇಟ್ ವಿತರಿಸಿಯಾಗಿತ್ತು. ಒಬ್ಬ ಕಲಾವಿದನ ಸಲುವಾಗಿ ನಾಟಕ ನಿಲ್ಲಿಸುವುದು ಸರಿಯಲ್ಲ ಎಂದು ಸುಬ್ಬಯ್ಯ ನಾಯಡು ನಿರ್ಧರಿಸಿದರು. ಆದರೆ ‘ಭಕ್ತ ಅಂಬರೀಷ’ದಲ್ಲಿ ರಮಾಕಾಂತನ ಪಾತ್ರವನ್ನು ವಹಿಸುವುದು ಸುಲಭವಾಗಿರಲಿಲ್ಲ. ಯೋಚಿಸಿ ನಾಯಡು ಅವರು ತಮ್ಮ ಕಂಪನಿಯಲ್ಲಿದ್ದ ಗಾಯನವನ್ನೂ ಬಲ್ಲ ಸುಂದರ ಯುವಕನಿಂದ ಆ ಪಾತ್ರವನ್ನು ಮಾಡಿಸಿದರು. ಆ ಯುವಕ ಮುತ್ತುರಾಜ್ ಮುಂದೆ ಡಾ.ರಾಜ್ ಕುಮಾರ್ ಆಗಿ ಹೆಸರು ಮಾಡಿದರು. ವೈವಿಧ್ಯಮಯ ಪಾತ್ರಗಳನ್ನು ನೀಡಿ ರಾಜ್ ಕುಮಾರ್ ಅವರು ಮೇರು ಕಲಾವಿದರಾಗಿ ಬೆಳೆಯುವಲ್ಲಿ ಸುಬ್ಬಯ್ಯ ನಾಯಡು ಅವರ ಕೊಡುಗೆ ಬಹಳ ದೊಡ್ಡದು. ಅದರಂತೆ ನರಸಿಂಹ ರಾಜು, ಬಾಲಕೃಷ್ಣ, ಢಿಕ್ಕಿ ಮಾದವರಾವ್, ಬೇಲೂರು ರಾಘವೇಂದ್ರ ರಾವ್ ಸೇರಿದಂತೆ ಅನೇಕ ಪ್ರಮುಖ ಕಲಾವಿದರನ್ನು ಅವರು ಬೆಳೆಸಿದರು.

1962ರ ಜುಲೈ 21ರಂದು ಮಂಡ್ಯದಲ್ಲಿ ಅಭಿನಯಿಸುತ್ತಿರುವಾಗಲೇ ಹೃದಯಾಘಾತದಿಂದ ಸುಬ್ಬಯ್ಯ ನಾಯಡು ನಿಧನರಾದರು. ಅಭಿನಯದ ಅನುಪಮ ತಾರೆ ಕಳಚಿತು. ಅವರ ತಾರಾಪತ್ನಿ ಲಕ್ಷ್ಮಿಬಾಯಿ. ಮೂಕಿ ಚಿತ್ರದ ಸ್ಟಾರ್ ಎನ್ನಿಸಿಕೊಂಡಿದ್ದರು. ಚಿತ್ರರಂಗದಲ್ಲಿ ಕೂಡ ಮಹತ್ತರ ಪಾತ್ರಗಳನ್ನು ಅಭಿನಯಿಸಿದ್ದರು. ಮೊದಲ ಮಡದಿ ವೆಂಕಟಮ್ಮ ಗಂಡನ ಸಾವಿನ ಸುದ್ದಿ ಕೇಳಿದ ಕೂಡಲೇ ಸಾವನ್ನಪ್ಪಿದರು. ಈ ದಂಪತಿಗಳ ಜೋಡಿ ಪಾರ್ಥಿವ ಶರೀರದ ಮೆರವಣಿಗೆ ನೋಡಿ ಕಣ್ಣೀರು ಸುರಿಸದವರೇ ಇಲ್ಲ. ಸುಬ್ಬಯ್ಯ ನಾಯಡು ಅವರ ಮಗ ಲೋಕೇಶ್ ಕನ್ನಡ ಚಿತ್ರರಂಗದ ಪ್ರಮುಖ ಕಲಾವಿದರಾಗಿದ್ದರು. ಸೊಸೆ ಗಿರಿಜಾ ಲೋಕೇಶ್, ಮೊಮ್ಮಕ್ಕಳಾದ ಸೃಜನ್ ಲೋಕೇಶ್, ಪೂಜಾ ಚಿತ್ರರಂಗದಲ್ಲಿ ಹಿರಿಯ ಪರಂಪರೆಯನ್ನು ಮುಂದುವರಿಸಿದ್ದಾರೆ.

ಮುಖಭಾವದಲ್ಲೇ ಹೊಸ ಸಾಧ್ಯತೆ ನೀಡುವ ಕ್ರಮ, ಸಂಭಾಷಣೆ ಹೇಳುವ ಶೈಲಿ, ನಡಿಗೆಯ ಗತ್ತು ಎಲ್ಲವೂ ಸುಬ್ಬಯ್ಯ ನಾಯಡು ಅವರಿಂದ ನಾಯಕ ಪಾತ್ರಕ್ಕೆ ಮಾದರಿಯಾಗಿ ಬಂದಿತು. ಅವರ ಮಗಳು ಬಂಗಾರಮ್ಮ ತಂದೆಯ ಕುರಿತು ‘ನಟ ರತ್ನ’ಎನ್ನು ಕೃತಿಯನ್ನು ಬರೆದಿದ್ದಾರೆ. ಅದು ಒಂದು ರೀತಿಯಲ್ಲಿ ರೂಪಕ ಕೂಡ ಹೌದು.

ಡಾ.ರಾಜ್ ಕುಮಾರ್ ಕೊನೆಯವರೆಗೂ ಸುಬ್ಬಯ್ಯ ನಾಯಡು ಅವರ ಮಾದರಿಯಿಂದ ತಾನು ಚಿತ್ರನಟನಾಗಿ ಬೆಳೆದೆ ಎಂದು ಹೇಳಿ ಕೊಳ್ಳುತ್ತಿದ್ದರು.

ಬಿ ಸುರೇಶ , ಸತ್ಯ ಪ್ರಕಾಶರ “ನಮ್ಮ ಶಂಕರ “

ಶಂಕರ್ ನಾಗ್  ಎಂದೂ ಮಾಸದ ಮರಳಿ ಮರಳಿ ಉಕ್ಕುವ ನೆನಪು . ಅಗಲಿ ಹತ್ತಾರು ವರುಷಗಳು ಉರುಳಿದರೂ ಜನರ ಮನಸ್ಸಿನಿಂದ ಜಾರದೆ ಕನಸುಗಳಿಗೆ ಕಸುವು ತುಂಬುವ ಚೈತನ್ಯ . ಬದುಕಿನ ಕಡೆಯ ಕ್ಷಣದವರೆಗೂ ನಿಂತನೀರಾಗದೆ ಚಲಶೀಲರಾಗಿದ್ದ ಶಂಕರ್ ನಾಗ್ ಚಲಿಸುತ್ತಿದ್ದ ಕಾರಿನಲ್ಲೇ ಕರಗಿ ಹೋದವರು . ತನ್ನನ್ನು ನಿಕಟವಾಗಿ ಕಂಡವರಿಗಷ್ಟಲ್ಲದೆ ಕಾಣದಿದ್ದವರಿಗೂ ಕನವರಿಕೆಯಾದವರು. ಇಂದು ಅವ್ರ ಹುಟ್ಟಿದ ದಿನ. ಇಲ್ಲಿ  ಪ್ರತಿಭಾವಂತ ಹಿರಿ -ಕಿರಿಯ ಮನಸ್ಸುಗಳು  ಮಾತಾಡಿವೆ .

ಶಂಕರ, ಶಂಕರಣ್ಣ , ಶಂಕರ್ ನಾಗ್ ಹೀಗೆ ಅನೇಕ ಹೆಸರುಗಳಿಂದ ನಮ್ಮ ನೆನಪಿನ ಕೋಶದಲ್ಲಿ ಶಾಶ್ವತತೆಯನ್ನು ಪಡೆದುಕೊಂಡಿರುವ ನನ್ನ ಗೆಳೆಯರಲ್ಲಿ ಒಬ್ಬ ಶಂಕರ್ ನಾಗ್ . ನಮ್ಮಿಬ್ಬರ ಪರಿಚಯವಾಗಿದ್ದೇ ರಂಗಭೂಮಿಯ ಮೂಲಕ. ನಾನು ಅವರ ನಾಟಕಗಳಿಗೆ ನೇಪಥ್ಯದಲ್ಲಿ ಕೆಲಸ ಮಾಡುತ್ತಿದ್ದೆ. ಅವರು ನನ್ನ ನಾಟಕಗಳ ಅಭ್ಯಾಸದ ಸಮಯದಲ್ಲಿ ಬಂದು ತಿದ್ದಿ, ಸಲಹೆಗಳನ್ನು ಕೊಡುತ್ತಿದ್ದರು. ಅವ್ರು ಗೆಳೆಯರೂ ಹೌದು ಅನೇಕ ವಿಷಯಗಳಲ್ಲಿ ನನ್ನ ಗುರುವೂ ಹೌದು.

ಸಂಕೇತ್ ಸ್ಟುಡಿಯೋ ಬಾಗಿಲಲ್ಲಿ ನಿಂತು ” ಏಯ್ ಸುರೇಶ ನನಗೆ ಜೀವಂತದಂತೆ  ಕಾಣಿಸುವ ದೊಡ್ಡ ನಾಯಿ,ಹಾವಿನ ಬೊಂಬೆ ಮಾಡಿಕೊಡಲಿಕ್ಕೆ ಆಗುತ್ತೇನೋ” ಕೇಳಿದ್ದರು . ಆಗಬಹುದು ಅಂದವನೇ ಸಮಯಕ್ಕೆ ಸರಿಯಾಗಿ ಮಾಡಿ ಕೊಟ್ಟಿದ್ದೆ.  ಅದಾಗಿ ಎಷ್ಟೋ  ದಿವಸಗಳ ನಂತರ ನಾಗಮಂಡಲ ನಾಟಕದಲ್ಲಿ  ಎರಡೂ ಬೊಂಬೆಗಳನ್ನೂ ಬಳಸಿದ್ದರು . ಚಿತ್ರಕಲಾ ಪರಿಷತ್ತಿನಲ್ಲಿ ಶಂಕರ್ನಾಗ್ ಅಭಿನಯಿಸಿದ್ದ ಆ ನಾಟಕ ನೋಡಿದವರಿಗಷ್ಟೇ ಅದರ ಆನಂದ ದಕ್ಕಿರಲಿಕ್ಕೆ ಸಾಧ್ಯ.

ಅವ್ರ ಜೋಕುಮಾರ ಸ್ವಾಮಿ ನಾಟಕ ಅವರದೇ ಸಂಸ್ಥೆ ಅಡಿಯಲ್ಲಿ ನಾನು ಸಿನಿಮಾಕ್ಕಾಗಿ ನಿರ್ದೇಶನ ಮಾಡಬೇಕಿತ್ತು . ಅವ್ರ ಸಾವಿನಿಂದ ಅದೂ ಅಲ್ಲಿಗೇ ನಿಂತು ಹೋಯಿತು . ಮತ್ತೆ ನಾನು ನನ್ನಮೊದಲ ಚಿತ್ರ ನಿರ್ದೇಶನಕ್ಕೆ ಎಷ್ಟೋ ವರ್ಷ ಕಾಯಬೇಕಾಯ್ತು .

ಒಬ್ಬರಿಗೊಬ್ಬರು ಆತುಕೊಂಡು , ಒಬ್ಬರಿಗೊಬ್ಬರು  ಬೆಳೆಸುತ್ತಾ ಜೀವನ ನಡೆಸಬೇಕೆನ್ನುವುದಕ್ಕೆ ಶಂಕರ್ ನಾಗ್ ಬಹು ದೊಡ್ಡ ಉದಾಹರಣೆ .ರಸ್ತೆಯಲ್ಲಿ ಹೋಗುವಾಗ ಯಾರಾದರೂ ನಾಟಕದ ರಿಹರ್ಸಲ್ಗೆ ಹೋಗ್ತಾ ಇದ್ದೇವೆ ಅಂದ್ರೆ ಅಲ್ಲೇ ೧೦೦ ರೂಪಾಯಿ ಅವರ ಕೈಗಿತ್ತು ಎಲ್ಲರಿಗೂ ಕಾಫಿ ಕೊಡ್ಸು ಅಂದುಬಿಡ್ತಿದ್ರು. ನಾನು ಇಂಥಾ ಅವರ ಉದಾರತೆಯನ್ನ ಪ್ರತ್ಯಕ್ಷ ಕಂಡಿದ್ದೇನೆ. ಒಂದು ಪ್ರತಿಭೆಯನ್ನ ಶಂಕರ್ ನಂತೆ  ಬೆನ್ನು ತಟ್ಟಿ ಪೋಷಿಸುವ ,ಗೌರವಿಸುವ ಮತ್ತೊಬ್ಬ ವ್ಯಕ್ತಿಯನ್ನು ನಾನು ಕಂಡಿರುವುದು ಅಪರೂಪ .

ಆತನನ್ನು ನಾನು ಸದಾ ನೆನಪಿಸಿಕೊಳ್ಳುವುದು ಆತನ ಕನಸಿನ ಶಕ್ತಿ ಜೊತೆಗೆ ನನಸಾಗಿಸಿಕೊಳ್ಳುವ ಸಾಮರ್ಥ್ಯ. ಪ್ರತಿ ಕ್ಷಣ ಹೊಸದನ್ನು ಆಲೋಚಿಸುವ ಗುಣ. ನಾವೀಗ ಶಂಕರ್ ಹೆಸರಿನಲ್ಲಿ ಇದೇ ತಿಂಗಳು ೧೩ಕ್ಕೆ ಒಬ್ಬ ಹೊಸ ಪ್ರತಿಭಾವಂತ ರಂಗನಿರ್ದೇಶನಿಗೆ ಪ್ರಶಸ್ತಿ ಕೊಡುತ್ತಿದ್ದೇವೆ. ಹೊಸ ನಾಟಕ ತಂಡವನ್ನೂ ಅವರ ಹೆಸರಿನಲ್ಲಿ ಕಟ್ಟುತ್ತಿದ್ದೇವೆ. ೧೫ ಜನ ಹುಡುಗರು ಸಿದ್ಧವಾಗಿದ್ದಾರೆ.ಇವರೆಲ್ಲಾನಾಳೆ ಏನೇನು ಸಾಧಿಸುತ್ತಾರೋ ಅದೆಲ್ಲ ಶಂಕರ್ ನೆನಪಿಗೆ ನಾವು ದಾಟಿಸುತ್ತಿದ್ದೇವಷ್ಟೆ .

ಶಂಕರ್ ನಾಗ್ ಭೌತಿಕವಾಗಿ ಇಲ್ಲದಿರಬಹುದು ನಮ್ಮ ಮನಸ್ಸಿನಲ್ಲಿ ಮಾತ್ರ ಸದಾ ಜೀವಂತವಾಗಿದ್ದಾರೆ .ಕನಸನ್ನು ಹಂಚುವ ಅಣ್ಣನಾಗಿ ಇದ್ದೇ ಇರ್ತಾರೆ .

-ಬಿ ಸುರೇಶ್

ನಿರ್ದೇಶಕರು

ಶಂಕರ್ ನಾಗ್ ಅವ್ರ ಯೋಚನೆ,ಕೆಲಸಗಳ ಮೂಲಕವೇ ಒಬ್ಬ ಕಥೆಗಾರ, ನಿರ್ಮಾಪಕ ,ನಿರ್ದೇಶಕನ ಜೊತೆ ಯಾವತ್ತಿಗೂ ಇರ್ತಾರೆ .ನಂಗೆ ತುಂಬಾ ವಿಸ್ಮಯ ಅನ್ನಿಸುವುದು ೮೦ ರ ದಶಕದಲ್ಲೇ ಒಂದು ಚಿತ್ರ ನಿರ್ಮಾಣದ ಎಲ್ಲ ಕೆಲಸಗಳು ಒಂದೇ ಸೂರಿನಡಿಯಲ್ಲಿ ಸಾಧ್ಯವಾಗಿಸುವ ಅವ್ರ ಯೋಚನೆ . ಇದರಿಂದ ಸಮಯ, ಹಣ ಎಲ್ಲವು ಉಳಿತಾಯ .ಅಳೆದಾಟ ತಪ್ಪಿ ನಿರ್ಮಾಪಕನ ಆತಂಕ ,ನಿರ್ದೇಶಕನ ಒತ್ತಡ ೯೦ ಪರ್ಸೆಂಟ್ ಕಡಿಮೆ ಆಗಿಬಿಡುತ್ತೆ.

ಅವರು ಮಾಡಿರುವ ಕೆಲಸಗಳಲ್ಲಿ ಒಂದೆರಡು ಪರ್ಸೆಂಟ್ ನಾವುಗಳು ಮಾಡಿದ್ರೆ ಅವೇ ಒಂದೊಂದು ಮುತ್ತಿನ ಕಥೆಗಳಾಗಿ ಬಿಡುತ್ತವೆ. ನನ್ನಂಥ ಹೊಸ ನಿರ್ದೇಶಕರಿಗೆ ಶಂಕರ್ ನಾಗ್ ಇಂದಿಗೂ ಬತ್ತದ ಸ್ಪೂರ್ತಿಯ ಸೆಲೆ . ಅವರ ನೆನಪಿನಲ್ಲೇ ಇನ್ನು ಒಳ್ಳೆಯ ಸಿನಿಮಾ ಮಾಡಲು ಪ್ರಯತ್ನಿಸುತ್ತೇನೆ .

ಸತ್ಯಪ್ರಕಾಶ್

ರಾಮಾ ರಾಮಾ ರೇ..

ನಿರ್ದೇಶಕರು

Like Us, Follow Us !

122,699FansLike
1,826FollowersFollow
1,409FollowersFollow
2,513SubscribersSubscribe

Trending This Week