21 C
Bangalore, IN
Monday, May 27, 2019

ಅತಿಲೋಕ ಸುಂದರಿ ಶ್ರೀದೇವಿ ಆಸ್ತಿ ಎಷ್ಟು ಗೊತ್ತಾ..?

ಅತಿಲೋಕ ಸುಂದರಿ ಶ್ರೀದೇವಿ ನಮ್ಮನ್ನು ಅಗಲಿ ಪಂಚಭೂತಗಳಲ್ಲಿ ಲೀನವಾಗಿದ್ದಾರೆ. ದುಬೈನ ಹೋಟೆಲ್ ಬಾತ್ ಟಬ್ ನಲ್ಲಿ ಮುಳುಗಿ ಸಾವನ್ನಪ್ಪಿರುವ ಸಿರಿದೇವಿಯ ಸಂಪತ್ತು ಎಷ್ಟಿರಬಹುದು ಅನ್ನೋದು ಕೋಟ್ಯಂತರ ಅಭಿಮಾನಿಗಳ ಮನದಾಳದ ಪ್ರಶ್ನೆಯಾಗಿದೆ. ಯಾಕಂದ್ರೆ ಶ್ರೀದೇವಿ ನಮ್ಮ ಸಣ್ಣ ಹುಡುಗರ ಕಾಲದಿಂದಲೂ ನಮ್ಮನ್ನು ರಂಜಿಸಿದ ಸ್ಟಾರ್ ನಟಿ. ಆ ಕಾಲದಲ್ಲೇ ಸ್ಟಾರ್ ಆಗಿದ್ದ ಶ್ರೀದೇವಿ ಅದೇ ಸ್ಟಾರ್ ಪಟ್ಟವನ್ನು ತನ್ನ ಕೊನೆಯ ಯಾತ್ರೆ ತನಕವೂ ಉಳಿಸಿಕೊಂಡೇ ಸಾಗಿದ್ದಾರೆ. ಅಂತಿಮ ಯಾತ್ರೆ ವೇಳೆಯೂ ಕೂಡ ತಾನೊಬ್ಬಳು ಸ್ಟಾರ್ ಅನ್ನೋ ಹಾಗೆ ಸಿಂಗಾರ ಮಾಡಿಕೊಂಡೆ ಸಾಗಿದ ಬಾಲಿವುಡ್ ಸ್ಟಾರ್ ಹೀರೋಯಿನ್ ಶ್ರೀದೇವಿ ಸಂಪತ್ತು ಕಡಿಮೆಯಂತೂ ಇರಲ್ಲ ಻ನ್ನೋದು ಅಭಿಮಾನಿಗಳ ಲೆಕ್ಕಾಚಾರ.
ಸಿರಿದೇವಿ ಶ್ರೀದೇವಿ ಸಂಪಾದಿಸಿರುವ ಆಸ್ತಿ ಬರೋಬ್ಬರಿ 300 ಕೋಟಿಗೂ ಅಧಿಕ. ಅಂದಿನ ಕಾಲದಲ್ಲಿ ಸಾಕಷ್ಟು ಕಡಿಮೆ ಸಂಭಾವನೆಗೆಲ್ಲಾ ನಟನೆ ಮಾಡುತ್ತಿದ್ದ ಶ್ರೀದೇವಿ ಸ್ಟಾರ್ ಪಟ್ಟ ಗಳಿಸಿದ ಮೇಲೆ ಸಂಭಾವನೆ ತುಸು ಹೆಚ್ಚಾಯ್ತು. 1 ಸಿನಿಮಾದಲ್ಲಿ ನಟನೆ ಮಾಡಬೇಕು ಅಂದ್ರೆ ಶ್ರೀದೇವಿ ಪಡೆಯುತ್ತಿದ್ದ ಸಂಭಾವನೆ ಕನಿಷ್ಟ 3 ಕೋಟಿ 40 ಲಕ್ಷ ರೂಪಾಯಿ ಯಿಂದ ಗರಿಷ್ಟ 4 ಕೋಟಿ ರೂಪಾಯಿ ತನಕ ಿತ್ತು ಅನ್ನೋದು ಬಾಲಿವುಡ್ ಅಂಗಳದ ಮಾಹಿತಿ. ನಮ್ಮ ಸ್ಯಾಂಡಲ್ ವುಡ್ ಸ್ಟಾರ್ ನಟರು ಪಡೆಯುವ ಸಂಭಾವನೆ ಅಷ್ಟನ್ನೇ ಶ್ರೀದೇವಿ ಪಡೆಯುತ್ತಿದ್ರು ಅನ್ನೋದು ಗಮನಾರ್ಹ..
ಶ್ರೀದೇವಿ ಬಳಿಯಿದ್ದ 300 ಕೋಟಿ ಆಸ್ತಿಯಲ್ಲಿ 3 ಬಂಗಲೆಗಳು ಸೇರಿವೆ. ನಟಿ ಶ್ರೀದೇವಿ ಹೆಸರಿನಲ್ಲಿ ಒಟ್ಟು ಮೂರು ಬಂಗಲೆಗಳು ಇದ್ದು, ವಾರ್ಸಾ ಹಾಗೂ ಲೋಖಂಡ್ ವಾಲಾದಲ್ಲಿವೆ.. ಈ ಮೂರು ಬಂಗಲೆಗಳ ಮೌಲ್ಯ ಬರೋಬ್ಬರಿ ಅಂದಾಜು 62 ಕೋಟಿ ರೂಪಾಯಿ. ಇನ್ನೂ ಶ್ರೀದೇವಿ ಬಳಿ ವಿವಿಧ ಬ್ರಾಂಡ್ ನ 7 ವಾಹನಗಳು ಇದ್ದು, ವಾಹನಗಳ ಮೌಲ್ಯ ಸುಮಾರು ೯ ಕೋಟಿ ರೂಪಾಯಿಯಾಗಿದೆ. ಲಕ್ಸ್, ತನಿಷ್ಕಾದ ಬ್ರಾಂಡ್ ಅಂಬಾಸಿಡರ್ ಆಗಿದ್ದ ಶ್ರೀದೇವಿ ಜಾಹಿರಾತು ಮೂಲಕವೂ ಸಾಕಷ್ಟು ಹಣ ಗಳಿಸುತ್ತಿದ್ದರು. ಒಟ್ಟಾರೆ ಶ್ರೀದೇವಿ ಅಂತಾ ಹೆಸರಿಟ್ಟುಕೊಂಡಿದ್ದ ಬಾಲಿವುಡ್ ನ ಬೊಂಬೆ ಚಾಂದಿನಿ ಆಸ್ತಿಗಳಿಕೆಯಲ್ಲಿ ಸಿರಿದೇವಿಯೇ ಆಗಿದ್ದಳು..

ಪ್ರಕಾಶ್ ರೈ ಮಾನ ಕೇವಲ 1 ರೂ.. ಅಷ್ಟೇನಾ..?

ಮೈಸೂರು ಕೊಡಗು ಕ್ಷೇತ್ರದ ಬಿಜೆಪಿ ಸಂಸದ ಪ್ರತಾಪ್ ಸಿಂಹ ವಿರುದ್ದ ಬಹುಭಾಷಾ ನಟ ಪ್ರಕಾಶ್ ರೈ ಮಾನಹಾನಿ ಕೇಸು ದಾಖಲು ಮಾಡಿದ್ರು. ನಿನ್ನೆ ಕೋರ್ಟ್‌ಗೆ ಹಾಜರಾಗಿದ್ದ ನಟ ಪ್ರಕಾಶ್ ರೈ, ನೋಟಿಸ್‌ಗೆ ಉತ್ತರ ಕೊಡದ ಹಿನ್ನೆಲೆಯಲ್ಲಿ ಮಾನಹಾನಿ ಪ್ರಕರಣ ದಾಖಲಿಸುತ್ತಿದ್ದೇನೆ. ಅದೂ ಕೇವಲ 1 ರೂಪಾಯಿ ಮಾನಹಾನಿ ಪರಿಹಾರ ಕೇಳುತ್ತಿದ್ದೇನೆ ಎಂದಿದ್ರು. ಇದೀಗ ಸಂಸದ ಪ್ರತಾಪ್ ಸಿಂಹ ವಾಗ್ದಾಳಿ ಮಾಡಿದ್ದು, ಸಮಾಜದಲ್ಲಿ ಪ್ರಕಾಶ್ ರೈ ಅವರ ಮಾನ ಮರ್ಯಾದೆಗೆ ಇರುವ ಮೌಲ್ಯ ಕೇವಲ 1 ರೂಪಾಯಿ ಮಾತ್ರ. ಈ ಸತ್ಯವನ್ನ ಪ್ರಕಾಶ್ ರೈ ನ್ಯಾಯಾಲಯದಲ್ಲಿ ಒಪ್ಪಿಕೊಂಡಿದ್ದಾರೆ ಹಾಗಾಗಿ ನಾನು ಪ್ರಕಾಶ್ ರೈ ಅವರನ್ನ ತುಂಬು ಹೃದಯದಿಂದ ಅಭಿನಂದಿಸುತ್ತೇನೆ ಎಂದು ಚಾಟಿ ಬೀಸಿದ್ದಾರೆ. ಸಮಾಜದಲ್ಲಿ ಅವರ ನಡಾವಳಿಕೆಗೆ ೩ ಕಾಸಿನ ಬೆಲೆ ಇದೆ. 1 ರೂಪಾಯಿ ಮಾನ ಹಾನಿ ಕೇಳಿದ್ದೂ ಕೂಡ ಜಾಸ್ತಿ ಆಯ್ತು ವ್ಯಂಗ್ಯವಾಡಿದ್ದಾರೆ..
ಅಖಾಡಕ್ಕೆ ಬರುವಂತೆ ಸಿಂಹಾಹ್ವಾನ..!
ನಟ ಪ್ರಕಾಶ್ ರೈ ನಿಜ ಜೀವನದಲ್ಲೂ ಕಳನಾಯಕರಾಗಿದ್ದು, ಅವರ ನಿಲುವುಗಳಲ್ಲಿ ದ್ವಂದ ಇದೆ. ಈ ಮುಂಚೆ ಪ್ರಕಾಶ್ ರಾಜ್ ಹೆಸರಿನಲ್ಲಿ ನೋಟೀಸ್ ನೀಡಿದ್ರು. ಆದ್ರೀಗ ಮೈಸೂರಿಗೆ ಬಂದು ಪ್ರಕಾಶ್ ರೈ ಹೆಸರಿನಲ್ಲಿ ಕೇಸ್ ಹಾಕಿದ್ದಾರೆ. ಇದು ಅವರ ದ್ವಂದ ಮನಸ್ಥಿತಿಯನ್ನು ತೋರಿಸುತ್ತದೆ ಎಂದಿದ್ದಾರೆ. ನಮ್ಮ ಕಡೆ ಬೊಟ್ಟು ಮಾಡಿ ಇಂಥವರಿಗೆ ಓಟು ಹಾಕಬೇಡಿ ಅಂತೀರಲ್ಲ, ಬೆಂಗಳೂರಿನ 28 ಕ್ಷೇತ್ರಗಳಲ್ಲಿ ಎಲ್ಲಾದ್ರೂ ಚುನಾವಣೆಗೆ ನಿಲಿ, ನಿಮ್ಮನ್ನ ಸೋಲಿಸಿ ಕಳುಹಿಸ್ತಿವಿ ಅಂತಾ ಸವಾಲು ಹಾಕಿದ್ದಾರೆ.. ನೀವು ಓಟು ಹಾಕಬೇಡಿ ಅಂತ ಹೇಳಿದ ತಕ್ಷಣ ಜನ ನಿಮ್ಮ ಮಾತನ್ನ ಕೇಳಲ್ಲ ಅಂತಾನೂ ಸಂಸದ ಪ್ರತಾಪ್ ಸಿಂಹ ದಾಳಿ ಮಾಡಿದ್ದಾರೆ..
ರೈ ಪ್ರಕಾರ 1 ರೂಪಾಯಿ ಮಾನಹಾನಿ ಯಾಕೆ..? 
ನಟ ಪ್ರಕಾಶ್ ರೈ ಮಾನಹಾನಿ ಕೇಸಿನಲ್ಲಿ ಪರಿಹಾರವಾಗಿ 1 ರೂಪಾಯಿ ಮಾತ್ರ ಹಾಕಿದ್ದಾರೆ. ಇದು ಅವರ ಮಾನಕ್ಕೆ ಇರುವ ಬೆಲೆ ಅಂತಾ ಬಿಜೆಪಿ ಸಂಸದ ವಾಗ್ದಾಳಿ ಮಾಡಿದ್ದಾರೆ. ಆದ್ರೆ ನಟ ಪ್ರಕಾಶ್ ರೈ ಪ್ರಕಾರ ಒಂದು ರೂಪಾಯಿ ಭಾರೀ ಅರ್ಥವಿದೆ. ಯಾಕಂದ್ರೆ ನಾನು ಸಮಾಜದಲ್ಲಿ ಸಾಕಷ್ಟು ಹೆಸರು ಮಾಡಿರುವ ವ್ಯಕ್ತಿ, ಆದ್ರೆ ಈ ವ್ಯಕ್ತಿ ಸಮಾಜದಲ್ಲಿ ನನಗಿರುವ ಮರ್‍ಯಾದೆ ಶೇಕಡ ೧ರಷ್ಟು ಹಾಳು ಮಾಡಿದ್ದಾರೆ. ಹಾಗಾಗಿ ನನಗೆ ಒಂದು ರೂಪಾಯಿ ಭಾಗದಲ್ಲಿ ಮಾನಹಾನಿ ಆಗಿರುವ ಕಾರಣ ಒಂದು ರೂಪಾಯಿ ಪರಿಹಾರ ಸಾಕು ಎನ್ನುವುದಾಗಿದೆ. ಮಾನಹಾನಿಯಿಂದ ಹಣ ಪಡೆಯುವ ಉದ್ದೇಶ ನಟ ಪ್ರಕಾಶ್ ರೈರದ್ದಾಗಿಲ್ಲ. ಬದಲಿಗೆ ೧ ರೂಪಾಯಿ ಮಾನಹಾನಿ ಕೇಸ್ ಹಾಕಿ ಕೋರ್ಟ್ ಕಟಕಟೆಗೆ ತಂದು ನಿಲ್ಲಿಸೋದು ಪ್ರಕಾಶ್ ರೈ ಅವರ ನಿಲುವಾಗಿದೆ.. ಈ ರೀತಿ ಅನ್ನೋದು ಸಂಸದ ಪ್ರತಾಪ್ ಸಿಂಹ ಅವರಿಗೂ ಗೊತ್ತಿದ್ದು, ತಿತುಗೇಟು ನೀಡಲು ಈ ರೀತಿ ಬಳಸಿಕೊಂಡಿದ್ದಾರೆ.

ಕೊನೆಯುಸಿರೆಳೆದ ಸಿರಿಮೊಗದ ಶ್ರೀದೇವಿ

ಬಹುಭಾಷಾ ನಟಿ ಮೋಹಕ ತಾರೆ ಶ್ರೀದೇವಿ ಇನ್ನಿಲ್ಲ.. ದುಬೈನಲ್ಲಿ ಶ್ರೀದೇವಿ ಹೃದಯಾಘಾತದಿಂದ  ತಡರಾತ್ರಿ 11.30ರ ವೇಳೆ ಶ್ರೀದೇವಿಗೆ ಹೃದಯಾಘಾತ ಸಂಭವಿಸಿದ್ದು ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ್ದಾರೆ.. ನಟ ಮೋಹಿತ್​ ಮಾರ್ವ ಮದುವೆಗಾಗಿ ಶ್ರೀದೇವಿ ಪತಿ ಬೋನಿ ಕಪೂರ್​ ಹಾಗೂ ಪುತ್ರಿ ಖುಷಿ ಜೊತೆ ದುಬೈಗೆ ತೆರಳಿದ್ರು.. ಈ ವೇಳೆ ಹೃದಯಾಘಾತವಾಗಿದೆ.. ನಟಿ  ಶ್ರೀದೇವಿ ಇಬ್ಬರು ಪುತ್ರಿಯರು ಹಾಗೂ ಪತಿಯನ್ನ ಅಗಲಿದ್ದಾರೆ.

54 ವರ್ಷದ ಶ್ರೀದೇವಿ 200ಕ್ಕೂ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿದ್ದಾರೆ, ಶ್ರೀದೇವಿ ನಿಧನಕ್ಕೆ ಬಾಲಿವುಡ್​​ ಸೇರಿದಂತೆ ವಿವಿಧ ಕ್ಷೇತ್ರದ ಗಣ್ಯರು ಕಂಬನಿ ಮಿಡಿದಿದ್ದಾರೆ.. ಶ್ರೀ ದೇವಿ ಕನ್ನಡ ಸೇರಿದಂತೆ ಹಿಂದಿ, ತೆಲುಗು, ಮಲೆಯಾಳಂ ಚಿತ್ರಗಳಲ್ಲೂ ನಟಿಸಿದ್ದಾರೆ.. ಕನ್ನಡದಲ್ಲಿ ರೆಬೆಲ್​ಸ್ಟಾರ್ ​ಅಂಬರೀಷ್​ ಅಭಿನಯದ ಪ್ರಿಯಾ ಚಿತ್ರದಲ್ಲಿ ಬಣ್ಣಹಚ್ಚಿದ್ರು.. 1975ರಲ್ಲಿ ತೆರೆಕಂಡ ಚಾಂದಿನಿ ಚಿತ್ರದಲ್ಲಿ ಬಾಲನಟಿಯಾಗಿ ಶ್ರೀದೇವಿ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ರು.. ಜೂಲಿ ಚಿತ್ರದಲ್ಲಿ ಶ್ರೀದೇವಿ ಕಮಾಲ್​ ಮಾಡಿದ್ರು.. 1997ರಲ್ಲಿ ಬಣ್ಣದ ಲೋಕಕ್ಕೆ ಗುಡ್​ಬೈ ಹೇಳಿದ್ದ ಶ್ರೀದೇವಿ, 15 ವರ್ಷಗಳ ಬಳಿಕ 2012ರಲ್ಲಿ ಬಿಡುಗಡೆಯಾದ ಇಂಗ್ಲಿಷ್​ ವಿಂಗ್ಲಿಷ್​ ಚಿತ್ರದ ಮೂಲಕ ಕಮ್​ ಬ್ಯಾಕ್​ ಮಾಡಿದ್ರು.. 2013ರಲ್ಲಿ ಶ್ರೀದೇವಿಗೆ ಪದ್ಮಶ್ರೀ ಪ್ರಶಸ್ತಿ ಕೂಡ ಲಭಿಸಿತ್ತು.

ಕನ್ನಡದಲ್ಲಿ ಶ್ರೀದೇವಿ

ಭಕ್ತ ಕುಂಬಾರ,ಬಾಲ ಭಾರತದಲ್ಲಿ ಬಾಲನಟಿಯಾಗಿ ಅಭಿನಯಿಸಿದ್ದರು. ಹೆಣ್ಣು ಸಂಸಾರದ ಕಣ್ಣು, ಸಂಪೂರ್ಣ ರಾಮಾಯಣ ಚಿತ್ರದಲ್ಲು ನಟಿಸಿದ್ದರು .

 

‘ಟಗರು’ ರೀಲು ಬರಹದಲ್ಲಿ ನಟನೆಯೇ ಹೀರೋ, ಕತೆಯೇ ವಿಲನ್!

‘ರೀಲು ಬರಹ’ ಒಂಚೂರು ಚೇಂಜ್ ಆಗಿರೋ ಪ್ರಯುಕ್ತ ಲಾಂಗ್ ಕಲಾಕಾರ್ ಶಿವಣ್ಣ ಮತ್ತು ದುನಿಯಾ ಸೂರಿ ಕಾಂಬಿನೇಷನ್ “ಕಡ್ಡಿಪುಡಿ’ ಸಿನಿಮಾದಲ್ಲಿ ಮಾಡಿದ ಮೋಡಿ ‘ಟಗರು’ ಚಿತ್ರದಲ್ಲಿ ಕಂಡು ಬಂದಿಲ್ಲ. ಹಾಗಂಥ ಸಿನಿಮಾ ಸಾರಸಗಟು ಚನ್ನಾಗಿಲ್ಲ ಅಂತ ಅರ್ಥ ಅಲ್ಲ. ಆದರೆ ಕಥಾಹಂದರ ನೋಡಿದಾಗ ಕೇಸರಿಬಾತ್ಗೆ ಚಟ್ನಿ ಬೆರೆಸಿ ಕೊಟ್ಟಂಗಿದೆ. ಹೀರೋ ಶಿವು ರೌಡಿ ಚಿಟ್ಟೆ ಪಾತ್ರದ ವಶಿಷ್ಠನನ್ನು ಕೊಚ್ಚಿ ಮಚ್ಚಿನ ತುದಿಯಲ್ಲಿ ಕಾಲರ್ ಸಿಕ್ಕಿಸಿಕೊಂಡು ಬಾಡಿ ಎಳೆದುಕೊಂಡು ಹೋದಂತೆ ಸೂರಿಯೇನಾದರೂ ಪ್ರೇಕ್ಷಕರ ಕುತೂಹಲ ಮತ್ತು ಭಾವನೆಯನ್ನು ಆರಂಭದಿಂದ ಅಂತ್ಯದವರೆಗೂ ಕಾಪಿಟ್ಟುಕೊಂಡಿದ್ದರೆ ಚಿತ್ರ ಸೂಪರ್ ಹಿಟ್ ಆಗುತ್ತಿದ್ದುದರಲ್ಲಿ ಯಾವುದೇ ಅನುಮಾನ ಇರಲಿಲ್ಲ.

ಆದರೆ ಆಗಿರುವುದೇ ಬೇರೆ. ಮಧ್ಯಂತರದವರೆಗೆ ಸಿನಿಮಾ ಯಾವ ದಿಕ್ಕಿನಲ್ಲಿ ಓಡುತ್ತಿದೆ ಎಂದೇ ಅರ್ಥವಾಗುವುದಿಲ್ಲ. ನಂತರ ಕತೆಯ ಎಳೆಗಳು ಒಂದಕ್ಕೊಂದು ಬೆರೆತು ಅರ್ಥ ಆಗುವಷ್ಟರಲ್ಲಿ ಸಿನಿಮಾ ಮುಗಿದು ಹೋಗಿರುತ್ತದೆ. ಇಲ್ಲೇನು ಮಿಸ್ ಹೊಡೀತು ಎಂಬ ಭಾವದೊಂದಿಗೆ ಪ್ರೇಕ್ಷಕ ಹೊರಬಂದಿರುತ್ತಾನೆ. ಇದರ ಸಂಪೂರ್ಣ ಹೊಣೆಗಾರರು ಸೂರಿಯೇ!

ಓಂ, ಜೋಗಿ, ಕಡ್ಡಿಪುಡಿಯಂತೆಯೇ ಟಗರುವಿನಲ್ಲೂ ಮಚ್ಚೇ ಹೀರೋ, ಮಚ್ಚೇ ವಿಲನ್. ಶಿವಣ್ಣ ಪೊಲೀಸ್ ಅಧಿಕಾರಿ ಪಾತ್ರದಲ್ಲಿರುವುದರಿಂದ ಪಿಸ್ತೂಲಿಗೂ ಗೌರವವಿದೆ. ಸ್ಟೈಲೀಸ್ ಬಳಕೆಯಲ್ಲಿ ಮಚ್ಚು, ಪಿಸ್ತೂಲು ಎರಡಕ್ಕೂ ನ್ಯಾಯ ಒದಗಿಸಿರುವ ಶಿವಣ್ಣನ ನಟನೆ ಬಗ್ಗೆ ಮಾತಾಡುವಂತಿಲ್ಲ. ಆದರೆ ವಿಲನ್ ಪಾತ್ರದ ಧನಂಜಯ ಮತ್ತು ವಶಿಷ್ಟ ಪೈಪೋಟಿಗೆ ಬಿದ್ದು ಭೇಷ್, ವಾಹ್ ಅಂತೆನ್ನಿಸಿಕೊಳ್ಳುವಂತೆ ನಟಿಸಿದ್ದಾರೆ. ಧನಂಜಯ ಅವರಂತೂ ತೆಲುಗಿನ ರಾಣಾ ದಗ್ಗುಬಾಟಿ ಹಾಗೂ ಹಿಂದಿಯ ರಣವೀರ್ ಸಿಂಗ್ ದಾರಿಯಲ್ಲಿದ್ದಾರೆ ಎಂದರೆ ಅತಿಶಯೋಕ್ತಿ ಆಗಲಾರದು. ಸ್ವೇಚ್ಛೆಯನ್ನೇ ತನ್ನಿಚ್ಚೆ ಮಾಡಿಕೊಂಡ ಫ್ರೀಬರ್ಡ್ ಹುಡುಗಿ ಪಾತ್ರದಲ್ಲಿ ಮಾನ್ವಿತಾ ರೆಕ್ಕೆ ಮುರಿದು ಬಿದ್ದಿದ್ದಾರೆ .ಅದಕ್ಕೆ ತದ್ವಿರುದ್ಧ ಅಕ್ಕನ ಪಾತ್ರದಲ್ಲಿ ಭಾವನಾ  ಉತ್ತಮ ನಟನೆ ಕೊಟ್ಟಿದ್ದಾರೆ. ಬೇಸಿಗೆ ಮಳೆಯಂತೆ ಚಿತ್ರದಲ್ಲಿ ಸುಳಿಯುವ ಪ್ರೇಮಕತೆ ರೌಡಿಸಂ ಮುಂದೆ ಸೊರಗಿದ ಹೀರೆಕಾಯಿಯಂತಾಗುತ್ತದೆ.

ಕತೆ ವಿಚಾರಕ್ಕೆ ಮರಳುವುದಾದರೆ ಅಮಾಯಕ ಹುಡುಗಿಯರನ್ನು ಪಟಾಯಿಸಿ ಮುಗಿಸುವ ಹನಿ ಟ್ರಾಪ್ ದಂಧೆಗೆ ಕನೆಕ್ಟ್ ಆಗುವ ರೌಡಿಸಂ ವಾರಸುದಾರರಾದ ಕಾಕ್ರೋಚ್ , ಅವರಣ್ಣ ಡಾಲಿ, ‘ರಕ್ತಗೆಳೆಯ’ ಚಿಟ್ಟೆ ಇವರನ್ನೆಲ್ಲ ಕಪಿಮುಷ್ಟಿಯಲ್ಲಿಟ್ಟುಕೊಂಡು ತನ್ನ ಕುಯುಕ್ತಿಯಿಂದಲೇ ಆಳುವ ಅಂಕಲ್ ಬಾಸ್, ಇವರನ್ನೆಲ್ಲ ಮಟ್ಟ ಹಾಕಲು ನಿಯೋಜಿತರಾಗುವ ಪೊಲೀಸ್ ಅಧಿಕಾರಿ ಶಿವು ಒಬ್ಬೊಬ್ಬರನ್ನೇ ಸಫಾ ಮಾಡುವ ಮೊದಲು ಹೊಡೆಯುವ ಡೈಲಾಗ್ ಗಳು ಶಿಳ್ಳೆ, ಚಪ್ಪಾಳೆ ಗಿಟ್ಟಿಸುತ್ತವೆ. ಕೂದಲು ಬಿಟ್ಟೊರೆಲ್ಲ ಗಂಡಸೇ ಆಗುವುದಿದ್ದರೆ ಕರಡಿ ದೊಡ್ಡ ಗಂಡಸು ಆಗಬೇಕಿತ್ತು, ನೀನಾರಿಗಾದೆಯೋ ಎಲೆ ಮಾನವ ಗೀತೆ ರಚನೆಕಾರರ ಹೆಸರೇಳಿದರೇ ಜೀವ ತೆಗೆಯದೇ ಬಿಡುತ್ತೇನೆ ಎಂದು ರೌಡಿಗಳಿಗೆ ಕೊಡುವ ಆಫ್ಸನ್  ಸೇರಿದಂತೆ ರೌಡಿಗಳ ಜತೆ ಶಿವಣ್ಣನ ಶಬ್ದವೈಡೂರ್ಯ ಕತೆ ಮೀರಿ ಪ್ರೇಕ್ಷಕನ ಮನದಲ್ಲಿ ನಿಲ್ಲುತ್ತದೆ. ಜಯಂತ್ ಕಾಯ್ಕಿಣಿ ಅವರ ‘ಗುಮ್ಮ ಬಂದ ಗುಮ್ಮ’ ಸೇರಿದಂತೆ ಕೆಲ ಹಾಡುಗಳು ಸ್ತೃತಿಪಟಲದಲ್ಲಿ ಮಾರ್ಧನಿಸುತ್ತವೆ. ಸಂಗೀತ ಸೊಂಪಾಗಿದೆ. ಮಹೇಂದ್ರ ಸಿಂಹ ಅವರ ಛಾಯಾಗ್ರಹಣ ಹಿತವಾಗಿದೆ. ಆದರೆ ಚಿತ್ರಕ್ಕೆ ಕತೆಯ ಓಘವೇ ವಿಲನ್. ನಟನೆಯೇ ಹೀರೋ. ಹೀಗಾಗಿ ನಿರೀಕ್ಷೆ ಪಕ್ಕಕ್ಕಿಟ್ಟು ಸಿನಿಮಾ ನೋಡಬಹುದು. ಆದರೆ ಯಾವುದೇ ಕಾರಣಕ್ಕೂ ‘ಬಂಗಾರ ಪಂಜರ’ದ ಅಣ್ಣಾವ್ರ ‘ಮೈಲಾರಿ’ ನೆನೆಸಿಕೊಂಡು ‘ಟಗರು’ ಕಲ್ಪಿಸಿಕೊಳ್ಳಬೇಡಿ. ಹಾಗೇನಾದರೂ ಕಲ್ಪಿಸಿಕೊಂಡರೆ ಟಗರುವಿನಿಂದ ಗುದ್ದಿಸಿಕೊಳ್ಳೋದು ಗ್ಯಾರಂಟಿ!
-ಭಾನುಮತಿ

ದಾಸನ ಏಟಿಗೆ ಕಣ್ಸನ್ನೆ ಬೆಡಗಿ ಔಟ್..!!

ಕಳೆದೊಂದು ವಾರದಿಂದ ಸೋಷಿಯಲ್ ಮೀಡಿಯಾ ಸೇರಿದಂತೆ ವಾಟ್ಸಪ್ ಡಿಪಿಗಳಲ್ಲೂ ಭದ್ರವಾಗಿ ಕುಳಿತಿದ್ದ ಪ್ರಿಯಾ ಪ್ರಕಾಶ್ ಎತ್ತಂಗಡಿ ಆಗಿದ್ದಾಳೆ. 4 ದಿನ ಸತತ ಟ್ರೆಂಡಿಂಗ್ ಸೃಷ್ಟಿ ಮಾಡಿದ್ದ ಕಣ್ಸನ್ನೆ ಬೆಡಗಿ ಪ್ರಿಯಾ ಪ್ರಕಾಶ್ ಅಭಿನಯದ ಒರು ಅಡಾರ್ ಲವ್ ಚಿತ್ರದ ಟೀಸರ್ ಟ್ರೆಂಡಿಂಗ್ ನಿಂದ ಕೆಳಕ್ಕಿಳಿಸಿದ್ದು ನಮ್ಮೂರ ಗಂಡು ದಚ್ಚು ದರ್ಶನ್. ಪಡ್ಡೆ ಹೈಕಳ ಹೃದಯದಿಂದ ಪ್ರಿಯಾ ಪ್ರಕಾಶ್ ವಾರಿಯರ್ ಅವರನ್ನು ಜಾಗ ಖಾಲಿ ಮಾಡಿಸಿ, ತಾನೂ ಆ ಸ್ಥಾನ ಕಬಳಿಸಿದ್ದಾರೆ.
 ದೇಶಾದ್ಯಂತ ಪಡ್ಡೆ ಹುಡುಗರನ್ನು ಹಲ್‍ಚಲ್ ಎಬ್ಬಿಸಿದ ಪ್ರಿಯಾ ಪ್ರಕಾಶ್ ವಾರಿಯರ್ ಟ್ರೆಂಡಿಂಗ್, ವ್ಯಾಲಂಟೈನ್ಸ್ ಡೇಗೂ ಹಾಗೇ ಮುಂದುವರಿದಿತ್ತು. ಪ್ರೇಮಿಗಳ ದಿನಕ್ಕೆಂದೇ ತೆರೆಕಂಡ ಕಂಡಿದ್ದ ರಾಮ್ ಚರಣ್ ತೇಜ ಅಭಿನಯದ ರಂಗಸ್ಥಲಂ ಟೀಸರ್ ಕೂಡ ಪ್ರಿಯಾ ಕಣ್ಸನ್ನೆಯ ಮುಂದೆ ನಂಬರ್ ಒನ್ ಪಟ್ಟಕ್ಕೇರುವಲ್ಲಿ ಸೋತಿತ್ತು. ಆದ್ರೆ ನಮ್ಮ ಕನ್ನಡಿಗ ಕೇರಳ ಕುಟ್ಟಿಯನ್ನು ನಂಬರ್ ಒನ್ ಸ್ಥಾನದಿಂದ ಬಡಿದೋಡಿದ್ದು, ದರ್ಶನ್ ಅಭಿನಯದ ಯಜಮಾನ ಚಿತ್ರದ ಟೈಟಲ್ ಟೀಸರ್ ನಂಬರ್ ಒನ್ ಸ್ಥಾನದಲ್ಲಿ ರಾರಾಜಿಸುತ್ತಿದೆ..

ತಲೈವಾ ರಜಿನಿಕಾಂತ್ ಸಿಎಂ ಆಗಬಾರದು.. ಕಾರಣವೇನು..?

ರಜನಿಕಾಂತ್ ಎನ್ನುತ್ತಿದ್ದ ಹಾಗೆ ಕರ್ನಾಟಕದ ಸುಪುತ್ರ ಅನ್ನೋ ಹೆಮ್ಮೆ ಕನ್ನಡಿಗರದ್ದು, ಆದ್ರೆ ರಜನಿಕಾಂತ್ ನಡೆದುಕೊಳ್ಳುತ್ತಿರೋದನ್ನು ನೋಡಿದ್ರೆ ಕರ್ನಾಟಕ ಕಂದನಲ್ಲ, ಕರ್ನಾಟಕದ ಒಳಕ್ಕೆ ರಜನಿಕಾಂತ್ ಬರೋದನ್ನೇ ತಡೆಯಬೇಕು ಎಂದು ಸ್ವಾಭಿಮಾನಿ ಕನ್ನಡಿಗರ ಮನಸು ತುಡಿದರು ತಪ್ಪಲ್ಲ. ಯಾಕಂದ್ರೆ ರಜನಿಕಾಂತ್ ಕನ್ನಡಿಗರನ್ನು ದ್ವೇಷಿಸುವ ಕೆಲಸ ಮಾಡ್ತಿದ್ದಾರೆ. ಎಲ್ಲರೂ ಸಂಭ್ರಮಲ್ಲಿ ಇರುವಾಗ ಸಂಭ್ರಮಕ್ಕೆ ಹುಳಿ ಹಿಂಡುವ ಕೆಲಸವನ್ನು ಸ್ವಹಿತಾಸಕ್ತಿಗಾಗಿ ಮಾಡುತ್ತಿದ್ದಾರೆ ಸೂಪರ್ ಸ್ಟಾರ್ ರಜನಿಕಾಂತ್.
ಎಲ್ಲರೊಳಗೆ ಒಂದಾಗದೆ ರಜನಿ ರಾಜಕೀಯ
ಕಾವೇರಿ ತೀರ್ಪನ್ನು ಇಡೀ ಕರ್ನಾಟವೇ ಒಪ್ಪಿದೆ. ಸುಪ್ರೀಂಕೋರ್ಟ್ ಈಗ ಕೊಟ್ಟಿರುವ ಆದೇಶವನ್ನು ಪಾಲಿಸೋದು ಕಷ್ಟ ಎಂದು ಗೊತ್ತಿದ್ದರೂ ದಾಯಾದಿ ತಮಿಳುನಾಡಿನ ಜೊತೆ ಕಿತ್ತಾಟ ಸೂಕ್ತ ಅಲ್ಲ ಅನ್ನೋ ಕಾರಣಕ್ಕೆ ಕನ್ನಡಿಗರು ಸ್ವಾಗತ ಮಾಡಿದ್ದಾರೆ. ಅದೇ ಕಾರಣಕ್ಕೆ ತಮಿಳುನಾಡಿನ ರೈತರೂ ಕೂಡ ಸ್ವಾಗತ ಮಾಡುತ್ತೇವೆ ಎಂದಿದ್ದಾರೆ. ಆದ್ರೆ ನಮ್ಮ ಮನೆಯ ಮಗ, ಕನ್ನಡಿಗರ ಹೆಮ್ಮೆ ರಜಿನಿಕಾಂತ್ ಕಾವೇರಿ ತೀರ್ಪನ್ನು ಖಂಡಿಸುತ್ತೇನೆ. ತಮಿಳುನಾಡು ಸರ್ಕಾರ ಕೂಡಲೇ ಮೇಲ್ಮನವಿ ಸಲ್ಲಿಸಬೇಕು ಎಂದಿದ್ದಾರೆ.
ರಜಿನಿಕಾಂತ್ ಸಿಎಂ ಆಗಲೇ ಬಾರದು..!
ರಜಿನಿಕಾಂತ್ ತಮಿಳುನಾಡು ರಾಜಕೀಯಕ್ಕೆ ಪ್ರವೇಶ ಮಾಡಿದ್ದು, ಮುಂದಿನ ಚುನಾವಣೆಯಲ್ಲಿ ಉಮೇದುವಾರಿಕೆ ಮೂಲಕ ಸಿಎಂ ಪಟ್ಟಕ್ಕೆ ಏರುವ ಕನಸು ಕಾಣ್ತಿದ್ದಾರೆ. ಒಂದು ವೇಳೆ ರಜಿನಿಕಾಂತ್ ಸಿಎಂ ಪಟ್ಟ ಅಲಂಕರಿಸಿದರೆ ಕರ್ನಾಟಕದ ಪಾಲಿಕೆ ಮತ್ತೊಬ್ಬಳು ಜಯಲಲಿತಾ ಜನನವಾಯಿತು ಎಂದೇ ಅರ್ಥ. ಯಾಕಂದ್ರೆ ತಮಿಳುನಾಡಿನ ಜನರನ್ನು ಓಲೈಸುವ ಉದ್ದೇಶದಿಂದ ಹುಟ್ಟೂರಿನ ಜನರಿಗೆ ಮಣ್ಣು ತಿನ್ನಿಸಲು ಹಿಂಜರಿಕೆ ಇಲ್ಲದ ಮನುಷ್ಯತ್ವ ಇವರದ್ದು. ಜಯಲಲಿತಾ ಕೂಡ ತವರಿಗೆ ಸಹಾಯ ಮಾಡಿದ್ರು ಅನ್ನೋ ಆರೋಪದಿಂದ ತಪ್ಪಿಸಿಕೊಳ್ಳಲು ಕಾವೇರಿ ನದಿ ವಿಚಾರವಾಗಿ ಸದಾ ಕಾಲು ಕೆರೆದು ಜಗಳಕ್ಕೆ ಬರುತ್ತಿದ್ರು. ರಜಿನಿಕಾಂತ್ ಕೂಡ ಅದೇ ಹಾದಿಯಲ್ಲಿ ಸಾಗ್ತಿದ್ದು, ಸಿಎಂ ಆಗಿ ಬಿಟ್ಟರೆ, ಕರ್ನಾಟಕದ ಪಾಲಿಗೆ ಮರಣ ಶಾಸನ ಅನ್ನೋದು ಶತಸಿದ್ಧ. ರಜಿನಿಕಾಂತ್ ಅವರ ಹೇಳಿಕೆಗಳನ್ನು ನೋಡುತ್ತಿದ್ದರೆ ಸಹಬಾಳ್ವೆ, ಅನುಸರಿಸಿಕೊಳ್ಳು ಜಾಯಮಾನ ಇಲ್ಲ ಎನಿಸುವಂತಿದೆ. ಈಗಾಗಲೇ ರಾಮನಗರ ಚೆನ್ನಪಟ್ಟಣ ಸೇರಿ ಹಲವು ಕಡೆ ರಜಿನಿಕಾಂತ್ ಹೇಳಿಕೆ ವಿರೋಧಿಸಿ ಪ್ರತಿಭಟನೆ ನಡೆದಿವೆ. ರಜಿನಿ ಸಿಎಂ ಆಗದೇ ಇದ್ದರೆ ಕರ್ನಾಟಕದ ಪಾಲಿಗೆ ನೆಮ್ಮದಿ ಸಿಗಬಹುದು ಎನ್ನುತ್ತಿದ್ದಾರೆ ಜನ..
ಜ್ಯೋತಿ ಗೌಡ, ನಾಗಮಂಗಲ

ಮಾವನನ್ನೇ ಮೀರಿಸಿದ ಅಳಿಯನ್ಯಾರು..?

ತಮಿಳು ಸೂಪರ್​ಸ್ಟಾರ್​ ರಜನಿಕಾಂತ್​ ಚಿತ್ರರಂಗದ ಜೊತೆ ರಾಜಕೀಯಕ್ಕೂ ಧುಮಿಕಿದ್ದಾರೆ. ಆದ್ರೆ ಸಿನಿಮಾ ರಂಗದಲ್ಲಿ ಕೊನೆಯ ಚಿತ್ರವಾಗಿ ಕಾಳ ರೆಡಿಯಾಗಿದ್ದಾನೆ. ರಾಜಕೀಯಕ್ಕೆ ಎಂಟ್ರಿಯಾಗುವ ಮುನ್ನವೇ ಕಾಳ ಚಿತ್ರಕ್ಕೆ ರಜನಿಕಾಂತ್ ಸಹಿ ಹಾಕಿದ್ರು.. ಇದೀಗ ಚಿತ್ರದ ಚಿತ್ರೀಕರಣ ಬರದಿಂದ ಸಾಗಿದ್ದು  ಬಿಡುಗಡೆ ಮಾಡಲು ನಿರ್ಮಾಪಕರು ಸಂಭ್ರಮದಲ್ಲಿ ಇದ್ದಾರೆ. ರಜನಿಕಾಂತ್ ಫುಲ್ ಟೈಮ್ ರಾಜಕಾರಣಕ್ಕೆ ಹೊರಟರೆ ಕಾಳ ಚಿತ್ರವೇ ರಜನಿಕಾಂತ್ ಅವರ ಕೊನೆಯ ಚಿತ್ರವಾಗಲಿದೆ.
ತನ್ನ ಸ್ಟೈಲ್ ಹಾಗೂ ಹಾವಭಾವಗಳನ್ನೇ ಬಂಡವಾಳ ಮಾಡಿಕೊಂಡ ಕನ್ನಡಿಗ, ತಮಿಳುನಾಡಿನ ರಾಜಕುಮಾರ ಅಂದ್ರು ತಪ್ಪಾಗಲ್ಲ. ಯಾಕಂದ್ರೆ ರಜನಿಕಾಂತ್ ಸಿನಿಮಾ ಅಂದ್ರೆ ರಜನಿಗೋಸ್ಕರ ಚಿತ್ರ ವೀಕ್ಷಣೆ ಮಾಡುವ ಸಿನಿಮಾ ಅಭಿಮಾನಿಗಳ ವರ್ಗವನ್ನೇ ಸೃಷ್ಟಿಮಾಡಿದ್ದಾರೆ. ರಜನಿಕಾಂತ್ ಅಭಿನಯಿಸಿದ ಯಾವುದೇ ಚಿತ್ರಗಳು ಸೋಲುವುದಿಲ್ಲ ಅನ್ನೋದು ನಿರ್ಮಾಪಕರ ನಂಬಿಕೆ. ಅದು ಯಾವುದೇ ಸಿನಿಮಾ ಆದರೂ ಕನಿಷ್ಟಪಕ್ಷ ಹಾಕಿದ ಬಂಡವಾಳ ವಾಪಸ್ ಬರಲಿದೆ ಅನ್ನೋ ಅಷ್ಟಾದರೂ ಗ್ಯಾರಂಟಿ.
ಅಳಿಯ ಹಾಲಿವುಡ್.. ಮಾವ ಕಾಲಿವುಡ್..!
ರಜನಿಕಾಂತ್ ಅಳಿಯ ಧನುಷ್ ಕೂಡ ತಮಿಳು ಚಿತ್ರಗಳಲ್ಲಿ ಒಳ್ಳೆ ಹೆಸರು ಮಾಡಿದ್ದು, ಇದೀಗ ಹಾಲಿವುಡ್ ಗೂ ಜಂಪ್ ಮಾಡಿದ್ದಾರೆ. ಅಳಿಯ ಧನುಷ್​ ಹಾಲಿವುಡ್​ನಲ್ಲಿ ಮಿಂಚಲು ರೆಡಿಯಾಗಿದ್ದು, ದಿ ಎಕ್ಸ್​​ಟ್ರಾರ್ಡಿನರಿ ಜರ್ನಿ ಆಫ್ ಫಕೀರ್ ಎನ್ನು‌ವ ಇಂಗ್ಲಿಷ್ ಮೂವಿಯಲ್ಲಿ ಧನುಷ್​ ಬಣ್ಣ ಹಚ್ಚುತ್ತಿದ್ದಾರೆ.. ಈ ಹಾಲಿವುಡ್ ಚಿತ್ರವನ್ನ ಬೆನ್ ಸ್ಕಾಟ್ ನಿರ್ದೆಶನ ಮಾಡ್ತಿದ್ದಾರೆ. ಈಗಾಗಲೇ ಧನುಷ್ ಅಭಿನಯದ ದಿ ಎಕ್ಸ್ ಟ್ರಾರ್ಡಿನರಿ ಜರ್ನಿ ಆಫ್ ಫಕೀರ ಚಿತ್ರದ ಟ್ರೈಲರ್ ರಿಲೀಸ್ ಆಗಿದ್ದು, ಕಾಲಿವುಡ್​ನ ಕ್ಯೂಟ್​ ಬಾಯ್​ ಧನುಷ್​ ಆ್ಯಕ್ಟಿಂಗ್ ಗೆ ಮೆಚ್ಚುಗೆ ವ್ಯಕ್ತವಾಗ್ತಿದೆ. ಒಟ್ಟಾರೆ ಕರ್ನಾಟಕದಿಂದ ತಮಿಳು ಚಿತ್ರರಂಗಕ್ಕೆ ವಲಸೆ ಹೋದ ರಜನಿಕಾಂತ್, ಸ್ಟಾರ್ ಆಗಿ ಮೆರದಾಡ್ತಿದ್ದಾರೆ. ಅದರೆ ಅದೇ ಸ್ಟಾರ್ ನಟನ ಅಳಿಯ ಮಾವನನ್ನೇ ಮೀರಿಸಿ ಕಾಲಿವುಡ್ ನಿಂದ ಹಾಲಿವುಡ್ ಗೆ ಹಾರಿದ್ದಾರೆ.
ಜ್ಯೋತಿ ಗೌಡ, ನಾಗಮಂಗಲ

ಬಿಗ್‍ಬಾಸ್ ಶೃತಿ ಈಗ ಯಾರ ಜೊತೆಗಾತಿ..? 

ಬಿಗ್‍ಬಾಸ್ ಮನೆಯಲ್ಲಿ ಬ್ಯೂಟಿಯಿಂದಲೇ ಕನ್ನಡಿಗರ ಮನಗೆದ್ದಿದ್ದ ಕುಂದಾನಗರಿ ಚೆಲುವೆ ಶೃತಿ ಪ್ರಕಾಶ್. ಜೆಕೆ ಜೋಡಿಯಾಗಿ ಬಿಗ್‍ಬಾಸ್ ಮನೆಯಲ್ಲಿ ಆಕರ್ಷಣೆಯಾಗಿದ್ರು. ಶೃತಿ ಕನ್ನಡ ಸಿನಿಮಾದಲ್ಲಿ ನಟಿಸಿದ್ರೆ ಅದು ಜಯರಾಮ್ ಕಾರ್ತಿಕ್ ಜೊತೆಯಾಗಿಯೇ ಕಾಣಿಸಿ ಕೊಳ್ಳಬಹುದು ಅನ್ನೋದು ಅಭಿಮಾನಿಗಳ ಮಾತಾಗಿತ್ತು. ಆದ್ರೀಗ ಅಭಿಮಾನಿಗಳ ಲೆಕ್ಕಾಚಾರ ಉಲ್ಟಾ ಆಗಿದೆ.
ಗಾಯಕಿಯಾಗಿ ಹಿಂದಿ ಭಾಷೆಯಲ್ಲಿ ಗುರುತಿಸಿಕೊಂಡಿದ್ದ ಶೃತಿ ಪ್ರಕಾಶ್ ಅವರನ್ನು  ಬಿಗ್‍ಬಾಸ್‍ ಮನೆ ಪ್ರವೇಶಕ್ಕೆ ಕಾಲಿಡಲು ಕಲರ್ಸ್ ಸೂಪರ್ ವಾಹಿನಿ ಅವಕಾಶ ಮಾಡಿಕೊಡ್ತು. ಈ ಚೆಂದುಳ್ಳಿ ಚೆಲುವೆ ಬಿಗ್‍ಬಾಸ್ ಮನೆಯೊಳಗೆ ಜಯರಾಮ್ ಕಾರ್ತಿಕ್ ಜೊತೆಗೆ ತುಂಬಾ ಕ್ಲೋಸ್ ಆಗಿದ್ದರು. ಇಬ್ಬರು ಲವ್ ಮಾಡ್ತಿದ್ದಾರಾ ಅನ್ನೋ ಅನುಮಾನ ಮೂಡುವ ಹಾಗೆ ಜೊತೆಯಾಗಿದ್ರು. ಬಿಗ್ ಬಾಸ್ ಮನೆಯಿಂದ ಹೊರ ಬಂದ ಬಳಿಕ ಇದೇ ಜೋಡಿಯನ್ನು ಹಾಕಿಕೊಂಡು ಯಾರಾದ್ರು ಕನ್ನಡ ಸಿನಿಮಾ ಮಾಡ್ತಾರೆ ಅನ್ನೋ ಮಾತುಗಳು ಕೇಳಿಬಂದಿದ್ವು ಆದ್ರೀಗ ಕಲಾ ಸಾಮ್ರಾಟ್ ಅಂಗಳದಲ್ಲಿ ಶೃತಿ ಕೇಳಿಸುತ್ತಿದೆ.
ಶೃತಿ ಪ್ರಕಾಶ್ ಈಗ ಎಸ್ ನಾರಾಯಣ್ ನಿರ್ದೇಶನದ ಚಿತ್ರಕ್ಕೆ ನಾಯಕಿಯಾಗಿ ಆಯ್ಕೆಯಾಗಿದ್ದು, ಕೆಲವು ದಿನಗಳ ಹಿಂದೆ ಮುಹೂರ್ತ ಕೂಡ ನಡೆದಿದೆ. ಈ ಚಿತ್ರದಲ್ಲಿ ಎಸ್ ನಾರಾಯಣ್  ಅವರ ಪುತ್ರ ಪಂಕಜ್ ಅವರೇ ನಾಯಕನಾಗಿ ಕಾಣಿಸಿಕೊಳ್ತಿರೋದು ವಿಶೇಷ. ಚೊಚ್ಚಲ ಚಿತ್ರದಲ್ಲಿ ಬಿಗ್‍ಬಾಸ್ ಚೆಲುವೆ ಜೆ.ಕೆ ಜೊತೆ ಆಕ್ಟ್ ಮಾಡ್ತಾಳೆ ಅನ್ನೋ ಮಾತು ಸುಳ್ಳಾಗಿದ್ದು ಪಂಕಜ್‍ಗೆ ಜೋಡಿಯಾಗಲು ಸಜ್ಜಾಗಿದ್ದಾಳೆ. ನಾರಾಯಣ್ ನಿರ್ದೇಶನದಲ್ಲಿ ಶೃತಿ ಅಭಿನಯ ಮಾಡ್ತಿರೋದು ಆಕೆಯ ಕೆರಿಯರ್ ಗೆ ಪ್ಲಸ್ ಪಾಯಿಂಟ್ ಆಗಿರೋದೇನೋ ಸತ್ಯ. ಆದ್ರೆ ಜೆಕೆ ಜೊತೆ ಮಿಸ್ ಆದ್ಲಲ್ಲ ಅನ್ನೋದಷ್ಟೆ ಬೇಸರ.
ಜ್ಯೋತಿ ಗೌಡ, ನಾಗಮಂಗಲ

ರಮ್ಯಾ ಕೆಚ್ಚೆದೆ ಹೆಣ್ಣು ಅನ್ನೋದನ್ನು ಸಾರುತ್ತಿದ್ದಾರಾ..? 

ನಟಿ ರಮ್ಯಾ.. ಅಲ್ಲ ರಾಜಕಾರಣಿ ರಮ್ಯಾ ಇತ್ತೀಚಿಗೆ ಭಾರೀ ಸುದ್ದಿ ಆಗ್ತಿದ್ದಾರೆ. ಕಾರಣ ಏನೇ ಇರಬಹುದು ರಮ್ಯಾ ವಿಚಾರಕ್ಕೆ ಬಂದು ನಿಲ್ಲುತ್ತಿದೆ. ಪ್ರಧಾನಿ ನರೇಂದ್ರ ಮೋದಿ ಬೆಂಗಳೂರಿನ ಸಮಾವೇಶದಲ್ಲಿ ಹೇಳಿದ್ದ ಟಾಪ್ ಹೇಳಿಕೆಯನ್ನು ಉಲ್ಟಾ ಮಾಡಿ ಪಾಂಟ್ ಎಂದಿದ್ದ ರಮ್ಯಾ ಟ್ವೀಟ್ ಭಾರೀ ಪ್ರಚಾರ ಪಡೆದಿತ್ತು. ನಟ ಜಗ್ಗೇಶ್ ಸೇರಿದಂತೆ ಹಲವರು ಕಿಡಿಕಾರಿದ್ರು. ಆದ್ರೆ ರಮ್ಯಾ ಎಲ್ಲವನ್ನೂ ನಿಭಾಯಿಸಿದ ರೀತಿ ಹಿರಿಯ ನಾಯಕರನ್ನೂ ದಂಗುಬಡಿಸುವಂತಿದೆ. ಯಾಕಂದ್ರೆ ಮೊನ್ನೆ ಉತ್ತರ ಕೊಟ್ಟಿರುವ ರಮ್ಯಾ, ನಾನು ಮೋದಿ ಹೇಳಿದ್ದ ಮಾತುಗಳನ್ನೆ ರಿವರ್ಸ್ ಆರ್ಡರ್ ನಲ್ಲಿ ಹೇಳಿದ್ದೇನೆ ಹೊರತು ಬೇರೇನು ಇಲ್ಲ. ನೀವು ನಿಮಗೆ ಇಷ್ಟ ಬಂದ ರೀತಿಯಲ್ಲಜ ಅರ್ಥ ಮಾಡಿಕೊಂಡರೆ ನನ್ನ ತಪ್ಪಲ್ಲ ಎಂದಿದ್ದರು.
ನಿರ್ಲಕ್ಷ್ಯದ ಮೂಲಕವೇ ಬಿಸಿ ಮುಟ್ಟಿಸಿದ ನಾಯಕಿ
ಶ್ರಮವಿಲ್ಲದೆ ಪಲ್ಲಂಗ ಏರಿದವರು, ಕ್ಯಾಚ್ ಹಾಕಿ ಆಕ್ಟ್ ಗಿಟ್ಟಿಸಿದವರು, ಮೇಲೇರಲು ಹೈಕಮಾಂಡ್ ಗೆ ಕ್ಯಾಚ್ ಹಾಕಿದವರು ಅಂತ ತುಂಬಾ ಕೀಳುಮಟ್ಟದಲ್ಲಿ ವಾಗ್ದಾಳಿ ಮಾಡಿದ್ದ ಜಗ್ಗೇಶ್ ಬಗ್ಗೆ ರಮ್ಯಾ ಬುದ್ಧಿವಂತಿಕೆ ಮೆರೆದಿದ್ದಾರೆ. ಜಗ್ಗೇಶ್ ತುಂಬಾ ದೊಡ್ಡ ನಟರು ಅವರ ಬಗ್ಗೆ ನಾನು ಮಾತನಾಡುವುದಿಲ್ಲ ಎಂದು ಜಗ್ಗೇಶ್ ಹೇಳಿಕೆಯನ್ನು ಕಸದ ಬುಟ್ಟಿಗೆ ಹಾಕುವ   ಮೂಲಕ ಜಗ್ಗೇಶ್ ನನಗೆ ಸರಿಸಮನಾದ ನಾಯಕನಲ್ಲ ಎಂದು ಪರೋಕ್ಷವಾಗಿಯೇ ಚುಚ್ಚಿದ್ದಾರೆ.
ರಮ್ಯಾ ರಾಜಕೀಯದಲ್ಲಿ ಬೆಳೆಯಲು ಕಾರಣ ಏನು..?
ನಟಿಯಾಗಿದ್ದ ರಮ್ಯಾ ಅಚಾನಕ್ ಆಗಿ ಕಾಂಗ್ರೆಸ್ ಪಕ್ಷದ ಮೂಲಕ ಸಂಸದೆಯಾಗಿ ಆಯ್ಕೆಯಾದವರು. ಬಳಿಕ ತಮ್ಮ ವೃತ್ತಿಯಾದ ನಟನೆಯನ್ನು ಬಿಟ್ಟು ಪೂರ್ಣ ಪ್ರಮಾಣದ ರಾಜಕಾರಣಿ ಆಗಿದ್ದಾರೆ. ಬೇರೆಲ್ಲಾ ನಾಯಕರ ರೀತಿ ಜನಪ್ರತಿನಿಧಿಯಾಗಿ ಜನರ ಕೆಲಸ ಮಾಡುತ್ತಾ ಜನರ ಮನಸ್ಸು ಗೆದ್ದು, ಸ್ವಲ್ಪ ಹಣಾ ಮಾಡಿದ್ರೋ ಇಲ್ಲವೋ ಗೊತ್ತಿಲ್ಲ. ಆದರೆ ವಿದೇಶಕ್ಕೆ ತೆರಳಿ ತರಬೇತಿ ಪಡೆದು ರಾಜಕಾರಣದ ಪಟ್ಟುಗಳನ್ನು ತಿಳಿದುಕೊಂಡು ಬಂದರು. ಅದೇ ಅವರನ್ನು ಹೈಕಮಾಂಡ್ ಸನಿಹಕ್ಕೆ ಬಂದು ನಿಲ್ಲುವಂತೆ ಮಾಡಿತು. ಇದೀಗ ಸಾಮಾಜಿಕ ಜಾಲ ತಾಣದ ಎಐಸಿಸಿ ಅಧ್ಯಕ್ಷೆಯಾಗಿರುವ ರಮ್ಯಾ ರಾಜ್ಯಕ್ಕಿಂತ ಹೆಚ್ಚಾಗಿ ರಾಷ್ಟ್ರ ರಾಜಕಾರಣದಲ್ಲೇ ಉಳಿದುಕೊಂಡಿದ್ದಾರೆ. ವಿರೋಧಿಗಳು ಸೇರಿದಂತೆ ಸ್ವಪಕ್ಷದಲ್ಲೇ ಕಾಲೆಳೆಯುವ ಮಂದಿಗೂ ರೆಬೆಲ್ ಆಗಿಯೇ ಉತ್ತರ ನೀಡುತ್ತಾ ನಾನು ಕೆಚ್ಚೆದೆ ಹೆಣ್ಣು, ರಾಜಕೀಯ ನನಗೂ ಗೊತ್ತಿದೆ ಅನ್ನೋದನ್ನು ತೋರಿಸುತ್ತಿದ್ದಾರೆ. ಆದ್ರೆ ಅಖಾಡ ರಾಜಕೀಯ ಒಂದನ್ನು ಕರಗತ ಮಾಡಿಕೊಂಡ್ರೆ ರಮ್ಯಾಕಾಲ ಬರೋದ್ರಲ್ಲಿ ಯಾವುದೇ ಅನುಮಾನವಿಲ್ಲ. ನೀವೇನಂತೀರಿ..?
ಜ್ಯೋತಿ ಗೌಡ, ನಾಗಮಂಗಲ

ಶ್ರಮವಿಲ್ಲದೆ ಪಲ್ಲಂಗ ಏರಿದವರು ಯಾರು..? ಜಗ್ಗೇಶ್ ವಾಗ್ದಾಳಿ ಮಾಡಿದ್ದೇಕೆ ..?

ಶ್ರಮವಿಲ್ಲದೆ ಪಲ್ಲಂಗ ಏರಿದವರು ಯಾರನ್ನ ಬೇಕಾದರೂ ಹಂಗಿಸ್ತಾರೆ.. ಕನ್ನಡದ ಗೊತ್ತಿಲ್ಲದ ಕಾಡುಪಾಪ.. ಅಪ್ಪನ ದುಡ್ಡಲ್ಲಿ ಪಾರ್ಟಿ ಕೊಟ್ಟು ಪಾರ್ಟು ಗಿಟ್ಟಿಸಿದವರು ಹೀಗೆಲ್ಲಾ ಮನಸೋ ಇಚ್ಛೆ ಟ್ವೀಟ್ ಮಾಡಿ ವಾಗ್ದಾಳಿ ಮಾಡಿರೋದು ನವರಸ ನಾಯಕನೆಂದೇ ಖ್ಯಾತಿ ಗಳಿಸಿರುವ ಬಿಜೆಪಿ ನಾಯಕ ಜಗ್ಗೇಶ್​​.. ಈ ಟ್ವೀಟ್ ಯಾರಿಗೆ ಅನ್ನೋದನ್ನು ನೇರವಾಗಿ ಹೆಸರು ಹಾಕದೇ ಇದ್ದರು ಮಾಡಿರುವ ಟ್ವೀಟ್​ ಯಾರಿಗೆ ಅನ್ನೋದನ್ನು ಆ ಭಾಷೆಯೇ ಸಾರಿ ಹೇಳುತ್ತಿದೆ. ಟ್ವಿಟ್ಟರ್ ನಲ್ಲೇ ಮುಂದುವರಿದು, ದೊಡ್ಡವರ ನೆರಳಲ್ಲಿ ರಾಜಕೀಯಕ್ಕೆ ಬಂದ್ರಿ, ಮೆಟ್ಟಿಲು ಏರೋಕೆ ಹೆಡ್​ ಆಫೀಸ್​ಗೆ ಕ್ಯಾಚ್​ ಹಾಕಿದ್ರಿ.. ಕ್ಯಾಚ್​ ಹಾಕಿದವರಿಗೆ ಮೋದಿ ಆದರೇನು, ಗಾಂಧಿ ಆದರೇನು ಹಂಗಿಸ್ತಾರೆ.. ಶ್ರಮವಿಲ್ಲದೆ ಪಲ್ಲಂಗ ಏರಿದವರಲ್ಲವೇ ನೀವು ಎಂದು ನಟ ಜಗ್ಗೇಶ್​ ಪ್ರಶ್ನಿಸಿದ್ದಾರೆ..
ನರೇಂದ್ರ ಮೋದಿ ಬೆಂಗಳೂರಿನಲ್ಲಿ ಪ್ರಚಾರ ಮಾಡಿದ್ದಕ್ಕೆ ಟ್ವೀಟ್ ನಲ್ಲಿ ತಿರುಗೇಟು ನೀಡಿದ ರಮ್ಯಾ ಪ್ರಧಾನಿ ನಶೆಯಲ್ಲಿ ಮಾತನಾಡ್ತಿದ್ದಾರೆ ಎನ್ನುವ ಅರ್ಥದಲ್ಲಿ ವಾಗ್ದಾಳಿ ಮಾಡಿದ್ರು. ಅದೇ ಟ್ವಿಟರ್ ಗೆ ತಿರುಗೇಟು ಕೊಡುವ ರೀತಿಯಲ್ಲಿ ಟ್ವೀಟ್ ದಾಳಿ ಮಾಡಿರುವ ಜಗ್ಗೇಶ್, ರಮ್ಯಾ ಹೆಸರು ಹೇಳದೆ ವೈಯಕ್ತಿಕವಾಗಿ ದಾಳಿ ನಡೆಸಿದ್ದಾರೆ. ಪಾರ್ಟಿ ಕೊಟ್ಟು ಪಾರ್ಟು ಗಿಟ್ಟಿಸಿದ್ರಿ, ಹೆಡ್ ಆಫೀಸ್ ಅನ್ನೇ ಕ್ಯಾಚ್ ಹಾಕಿಕೊಂಡ್ರಿ,  ಮೋದಿ ಬಗ್ಗೆ ಮಾತನಾಡೋದಕ್ಕೆ ಈಕೆ ಯಾರು..? ಶ್ರಮವಿಲ್ಲದೆ ಪಲ್ಲಂಗ ಏರಿದವರು ಯಾರನ್ನು ಬೇಕಾದರೂ ಹಂಗಿಸ್ತಾರೆ ಅಂತಾ ಸಣ್ಣತನ ಪ್ರದರ್ಶನ ಮಾಡಿದ್ದಾರೆ.
ಜಗ್ಗೇಶ್ ವಾಗ್ದಾಳಿ ಹಿಂದಿನ ಕಾರಣ ಏನು..?
ನಟ ಜಗ್ಗೇಶ್ ರಮ್ಯಾ ಜೊತೆ ನೀರ್ ದೋಸೆ ಹಾಕಲು ರೆಡಿಯಾಗಿದ್ರು. ಆದ್ರೆ ಶೂಟಿಂಗ್ ಸ್ಪಾಟ್ ಗೆ ಹೋಗ್ತಿದ್ದ ಹಾಗೆ ರಮ್ಯಾ ಹೊಸ ವರಸೆ ಶುರು ಮಾಡಿದ್ರು. ನಾನು ಜಗ್ಗೇಶ್ ಜೊತೆಯಲ್ಲಿ ಸಿನಿಮಾ ಮಾಡೋದಿಲ್ಲ ಅಂತ ಅವತ್ತು ಕಿತ್ತು ಹೋದ ನೀರ್ ದೋಸೆ ಇಲ್ಲೀ ತನಕ ಕೂಡಿಸೋಕೆ ಆಗಿಲ್ಲ. ನೀರ್ ದೋಸೆಯನ್ನ ಬೇರೆಯವರು ಬಂದು ಹಾಕಿ ಬೇಯಿಸಿ ತಿಂದಿದ್ದೂ ಆಯ್ತು ಆದ್ರೆ‌ ಕಿತ್ತು ಹೋದ ನೀರ್ ದೋಸೆ ಹಾಗೇ ತಟ್ಟೆಯಲ್ಲೆ ಬಿದ್ದಿದ್ದು ಇಂದು ಹಳಸಿ ಗಬ್ಬುನಾಥ ಬೀರಿದೆ ಅಷ್ಟೇ ಅಂತಿದೆ ಗಾಂಧಿ ನಗರ.
 ಆದರೂ ವೈಯಕ್ತಿಕ ದ್ವೇಶ ಏನೇ ಇರಲಿ ಟೀಕೆ ಮಾಡಲು ಸಾವಿರ ದಾರಿಗಳಿದ್ದವು. ಅದೂ ಅಲ್ಲದೇ‌ ಹೆಣ್ಣುಮಕ್ಕಳಿಗೆ ಮಾತೃಭಾವ ತೋರುತ್ತೇವೆ ಅನ್ನುವ ಬಿಜೆಪಿ ಪಕ್ಷದಲ್ಲಿ ಇದ್ದುಕೊಂಡು ಓರ್ವ ಹೆಣ್ಣನ್ನು ಶ್ರಮವಿಲ್ಲದೆ ಮಂಚಕ್ಕೆ ಏರಿದವರಲ್ಲವೇ ಎಂದರೆ ಏನರ್ಥ..? ಓರ್ವ ಹೆಣ್ಣು ಮಗಳಿಗೆ ಗೌರವ ಕೊಡದ ಈ ರೀತಿಯ ವ್ಯಕ್ತಿಗಳನ್ನು ಬಿಜೆಪಿ ಇನ್ನೂ ಉಳಿಸಿಕೊಂಡಿದೆ ಅಂದರೆ, ಜಗ್ಗೇಶ್ ಮಾತಿಗೆ ಸಹಮತ ಇದೇ ಅಂತ ಅರ್ಥವೆ ಅನ್ನೊದು ಸಾಕಷ್ಟು ಜನರ ಪ್ರಶ್ನೆಯಾಗಿದೆ. ಪಾರ್ಟಿ ಕೊಟ್ಟು ಪಾರ್ಟು ಗಿಟ್ಟಿಸಿದವರು ಅಂದರೆ ರಮ್ಯಾಗೆ ಆಕ್ಟಿಂಗ್ ಬರೋದಿಲ್ಲ ಎಂದು ಅರ್ಥವೇ..? ಹೆಡ್ ಆಫೀಸ್ ಕ್ಯಾಚ್ ಹಾಕೊಂಡ್ರಿ ಅಂದ್ರೆ ಹೈಕಮಾಂಡ್ ರನ್ನೇ ಬುಟ್ಟಿಗೆ ಹಾಕಿಕೊಂಡಿರಿ ಅಂದ್ರೆ ಏನರ್ಥ.. ಹೆಣ್ಣಿನ ಬಗ್ಗೆ ಮಾತನಾಡುವಾಗ ಕನಿಷ್ಟ ಸೌಜನ್ಯ ತೋರುವ ಬುದ್ಧಿಯೂ ಇಲ್ಲ ಅಂದ್ರೆ ರಾಜಕೀಯದಲ್ಲಿ ಬದುಕೋದು ಕಷ್ಟ ಅಂತಿದೆ ರಾಜಕೀಯ ವಲಯ.. ಮುಂದೆ ಅದ್ಯಾವ ತಿರುವ ಪಡೆಯುತ್ತೋ ಅನ್ನೋ ಕುತೂಹಲ ಉಳಿದುಕೊಂಡಿದೆ
 ಜ್ಯೋತಿ ಗೌಡ, ನಾಗಮಂಗಲ

Like Us, Follow Us !

120,177FansLike
1,826FollowersFollow
1,573FollowersFollow
4,884SubscribersSubscribe

Trending This Week