23 C
Bangalore, IN
Tuesday, March 26, 2019

ಮೇರುಪರ್ವತದ ಜೊತೆಗೆ ಹುಲುಮಾನವನ ಅದ್ಬುತ ಕ್ಷಣಗಳು

ಅವತ್ತು ಏಪ್ರಿಲ್ 1 2006, ಇವತ್ತಿಗೆ ಸರಿಯಾಗಿ ಹನ್ನೊಂದು ವರ್ಷದ ಕೆಳಗೆ, ಅಂದ್ರೆ ಅಣ್ಣಾವ್ರು ತೀರಿಕೊಳ್ಳೊಕೆ ಕೇವಲ 12 ದಿನ ಮೊದಲು, ನಾವು ಚಾಮುಂಡೇಶ್ವರಿ ಸ್ಟುಡಿಯೋದಲ್ಲಿ ನಮ್ಮ ‘ತಿಮ್ಮ’ ಸಿನಿಮಾದ ಡಬ್ಬಿಂಗ್ ಮಾಡ್ತಾ ಇದ್ವಿ, ಮೇಲ್ಗಡೆ ಫ್ಲೂರ್ ನಲ್ಲಿ ‘ಅರಸು’ ಸಿನಿಮಾದ ಡಬ್ಬಿಂಗ್ ನಡೀತಾ ಇತ್ತು , ಅಲ್ಲಿ ಸಿಗ್ತಿದ್ದ ದಿನಗಳಲ್ಲಿ ಅಪ್ಪು ಸಾರ್ ಹಾಯ್ ಊಟ ಆಯ್ತಾ, ಕಾಫಿ ಆಯ್ತಾ ಅಂತ ಕೇಳ್ತಾ ಸ್ಮೈಲ್ ಮಾಡ್ಕೊಂಡ್ ಹೊಗೊರು.

ಅವತ್ತು ಬಂದು ತುಂಬಾ ರಿಕ್ವೆಸ್ಟಿಂಗ್ ಟೋನ್ ಅಲ್ಲಿ ನಮ್ ಡೈರೆಕ್ಟರ್ ಸಾಯಿಸಾಗರ್ ಅವ್ರ ಹತ್ರ ಬಂದು

” ಅಪ್ಪಾಜಿ ಅರಸು ಸಾಂಗ್ಸ್ ನೋಡೋಕೆ ಬರ್ತಾ ಇದಾರೆ ಅವ್ರಿಗೆ ಮೇಲ್ಗಡೆ ಫ್ಲೂರ್ ಗೆ ಹತ್ತಿಕೊಂಡ್ ಹೋಗೋಕೆ ಆಗಲ್ಲ ಹಾಗಾಗಿ ಪ್ಲೀಸ್ ನಿಮ್ ಫ್ಲೂರ್ ನ ಒಂದ್ ಅರ್ಧ ಗಂಟೆ ಮಟ್ಟಿಗೆ ಬಿಟ್ ಕೊಡೋಕೆ ಆಗತ್ತಾ “ಅಂದ್ರು .

ಐಯ್ಯೊ ಇದು ನಮ್ ಸೌಭಾಗ್ಯ, ಖಂಡಿತ ಬನ್ನಿ ಅಂದ್ರು,

ಅದಾದ ಅರ್ಧ ಗಂಟೆಲಿ ಅಣ್ಣಾವ್ರು, ಪರ್ವಾತಮ್ಮ, ಶಿವಣ್ಣ ಎಲ್ಲರೂ ಬಂದ್ರು, ಅಣ್ಣಾವ್ರು ಸ್ಟುಡಿಯೋ ಒಳಗಡೆ ಬರ್ತಿದ್ದ ಹಾಗೆ ನಮ್ಮೆಲ್ಲರ ಮೈಯ್ಯಲ್ಲಿ ಮಿಂಚಿನ ಸಂಚಾರ.

ಬಂದವರೇ ಅಲ್ಲಿ ನಿಂತಿದ್ದ ನಮಗೆ ನಮಸ್ಕರಿಸಿ ಎಲ್ಲಾ ಅರಾಮಿದಿರಾ ಅಂದ್ರು.

ನಮಗ್ಯಾರಿಗೂ ಮಾತೆ ಬರ್ಲಿಲ್ಲ, ಇಡೀ ಸ್ಟುಡಿಯೋ ನ ಸುತ್ತಾಡಿ ತುಂಬಾ ಬದ್ಲಾಯಿಸಿದಿರಲ್ಲ ಅಂತ ಸ್ಟುಡಿಯೋ ಮ್ಯಾನೇಜರ್ ಹತ್ರ ಕೇಳಿದ್ರು, ಒಂದು ಟಾಯಿಲೆಟ್ ಹತ್ರ ಹೋಗಿ ಅಪ್ಪು ನೀನು ಚಿಕ್ಕನ್ನಿರೋವಾಗ ತುಂಬಾ ಸಾರಿ ಇಲ್ಲೇ ನಿನ್ನ ತೊಟ್ಟಿಲು ಕಟ್ಟಿ ಮಾಲ್ಗಸ್ತಿದ್ವಿ ಅಂತ ನೆನಪಿಸಿಕೊಂಡರು.

ಈ ಹೊತ್ತಲ್ಲಿ ಅಕ್ಕ ಪಕ್ಕ ಶಿವಣ್ಣ, ಪರ್ವಾತಮ್ಮ ಅವರನ್ನ ಹಿಡ್ಕೊಂಡಿದ್ರು.. ಆ ಟೈಮ್ ಅಲ್ಲಿ ಶಿವಣ್ಣ ಫೋನ್ ಅಟನ್ಡ್ ಮಾಡೋಕೆ ಅಂತ ಸ್ವಲ್ಪ ದೂರ ಹೋದ್ರು. ಅಲ್ಲೇ ಇದ್ದ ನಾನು ಅಣ್ಣಾವ್ರ ಕೈ ಹಿಡ್ಕೊಂಡು ನೆಡ್ಸ್ಕೊಂಡ್ ಬಂದ್ವಿ, ಇದೊಂದು ಅಪೂರ್ವ ಗಳಿಗೆ ನನಗೆ…ಎವೆರೆಸ್ಟ್ ಪರ್ವತಕ್ಕೆ ನನ್ನಂತ ಹುಳುಮಾನವ ಹೆಗಲು ಕೊಡೋದಾ?, ಇವತ್ತಿಗೂ ಕನಸು ಅನ್ನಿಸ್ತಿದೆ.

ಹಾಗೆ ಸೀದಾ ಒಳಗಡೆ ಹೋಗಿ ಅರಸು ಚಿತ್ರದ ಹಾಡುಗಳನ್ನ ನೋಡಿ ಮುಗಿಸಿ ಹೊರಬಂದ್ರು,ಅಸ್ಟ್ರಲ್ಲಿ ನಮ್ ಸಿನಿಮಾ ಹಾಡುಗಳನ್ನೂ ಒಮ್ಮೆ ನೋಡಿ ಅಂತ ಕೇಳಿದ್ರು ನಮ್ ಡೈರೆಕ್ಟರು, ಇಲ್ಲ ಸುಸ್ತಾಗಿದೆ ಅಪ್ಪಾಜಿಗೆ ಮನೆಗೆ ಹೂಗಿಬಿಡ್ತಿವಿ ಅಂದ್ರು ಶಿವಣ್ಣ , ಇಲ್ಲಪ್ಪ ಅವ್ರು ಅಷ್ಟು ಹೇಳ್ತಾ ಇದಾರೆ ನೋಡೋಣ ನಡೀರಿ ಅಂತ ಮತ್ತೆ ಒಳಗಡೆ ಬಂದ್ರು , ಕೆಲವೇ ಕುರ್ಚಿಗಳಿದ್ದ ಅಲ್ಲಿ ಎಲ್ಲರೂ ಕೂತಾಗಿತ್ತು… ಒಂದ್ ಕುರ್ಚಿ ಮಾತ್ರ ಕಾಲಿ ಇತ್ತು, ಅದು ಅಣ್ಣಾವ್ರು ಕೂತಿದ್ದ ಪಕ್ಕದ ಕುರ್ಚಿ… ಸರಿ ನಾನ್ ನಿಂತೇ ಇದ್ದೆ.. ಶಿವಣ್ಣ ನನ್ ನೋಡಿ ಕುತ್ಕೊಅಪ್ಪ ಅಂದ್ರು ನಾನ್ ಪರ್ವಾಗಿಲ್ಲ ಸಾರ್ ಅಂತ ನಿಂತೇ ಇದ್ದೆ ಅಸ್ಟ್ರಲ್ಲಿ ಅಣ್ಣಾವ್ರು ನನ್ ಕೈ ಹಿಡಿದು ಕೂತ್ಕೋ ಮರಿ ಅಂತ ಅವ್ರ ಪಕ್ಕದಲ್ಲಿ ಕೂರಿಸ್ಕೊಂಡ್ರು.

ಸುಮಾರು ಅರ್ಧ ಗಂಟೆ ನಾನು ಟ್ರಾನ್ಸ್ ಗೆ ಹೂಗಿಬಿಟ್ಟಿದ್ದೆ !!!!!

ಹಾಡು ನೋಡುವ ಮದ್ಯೆ ಮದ್ಯೆ ನಮ್ ಸಿನಿಮಾ ಬಗ್ಗೆ ಕೇಳೋರು… ನಾನ್ ಅದೇನ್ ಉತ್ರ ಹೆಳಿದನೂ ದೇವ್ರೇ ಬಲ್ಲ… !!!

ಆ ಅರ್ಧ ಗಂಟೆ ನನ್ ಜೀವನದ ಅತ್ಯಮೂಲ್ಯ ಕ್ಷಣಗಳು !!! ಅಬ್ಬಾ ನನಗೆ ಇಂತ ಅದೃಷ್ಟ, ಒಂತರ ಕನಸಿನ ತರ ಅನ್ನಿಸ್ತಿದೆ ಇವತ್ತಿಗೂ.

ಮುಗಿಸಿ ಹೊರಗೆ ಬಂದವರೇ ನಮ್ ಡೈರೆಕ್ಟರ್ ಹತ್ರ ಇದ್ದ nokia n 70 ಲಿ ಒಂದ್ ಫೋಟೋ ತೆಗೆದುಕೊಂಡ್ವಿ….

 

 

 

 

 

 

 

ಅಂದ ಹಾಗೆ ಈ ಫೋಟೋ ತೆಗೆದವ್ರು ಪವರ್ ಸ್ಟಾರ್ ಪುನೀತ್ ರಾಜಕುಮಾರ😊

ಲೇಖಕರು – ವಿನಯ್ ಕಾಸ್ವೇ

ವಿನಯ್ ಕಾಸ್ವೇ (Vinay Kaswe)

ಅರೆರೆರೆರೆ…ಇಲ್ಲೂ ಗೆದ್ದು ಬಂತೇ ರಾಮಾ ರಾಮಾ ರೇ !!

ಸಂತಸದ ಸುದ್ದಿ ನಿಮ್ಮೊಂದಿಗೆ ಹಂಚಿಕೊಳ್ಳಲೇಬೇಕು. ಇದುವರೆಗೆ ciniadda.com ಮಾಡಿದ ಸಿನಿಮಾ ವಿಮರ್ಶೆಗಳೆಲ್ಲ ವಸ್ತುನಿಷ್ಠವಾಗಿದ್ದ್ದವು .ಮುಂದೆಯೂ ಕೂಡ ಹಾಗೆಯೇ ಇರಲಿದೆ. ನೀವು ಗಮನಿಸಿ, ಬೆಂಬಲಿಸುತ್ತಾ ಬಂದಿದ್ದೀರಿ. ಇಂದು ರಾಜ್ಯ ಚಲನಚಿತ್ರ ಪ್ರಶಸ್ತಿ ಪ್ರಕಟವಾಗಿದೆ. ಸಮಾಜ ಕಡೆಗಣಿಸಿ ಬಿಟ್ಟವರ, ಮಲಹೊರುತ್ತ ಜೀವಸವೆಸಿದವರ ಕಥೆಯಾಧಾರಿತ ಸಿನಿಮಾ ಅಮರಾವತಿ ಪ್ರಥಮ ಅತ್ಯುತ್ತಮ ಚಿತ್ರ ಪ್ರಶಸ್ತಿ ಪಡೆದಿದೆ. “ರಾಮರಾಮರೇ ಸೋಲಿಸ ಬ್ಯಾಡ ಗೆಲಿಸಯ್ಯ” ಅಂತ ನಾವು  ಬರೆದು ಬೆಂಬಲಿಸಿದ, ಒಳಗೊಳಗೆ ಭಯವಯ್ತಯ್ಯ ಅಂದ ಸತ್ಯಪ್ರಕಾಶರ ಚಿತ್ರ ಪ್ರಥಮ ನಿರ್ದೇಶನದ ಪ್ರಶಸ್ತಿ ಗಳಿಸಿದೆ. “ನಿಧಾನಿಸಿ ಯೋಚಿಸಿದಾಗ ಆಳಕ್ಕಿಳಿಯುವ ಬ್ಯೂಟಿಫುಲ್ ಮನಸ್ಸುಗಳು ” ಜಯತೀರ್ಥ ನಿರ್ದೇಶನದ ಚಿತ್ರಕ್ಕೆ  ಹಿನ್ನೆಲೆ ಗಾಯಕ  ಮತ್ತು ನಟಿಗೆ ಪ್ರಶಸ್ತಿ ಲಭಿಸಿದೆ. “ಕಿರಿಕ್ ಪಾರ್ಟಿ ಎಂಬ ಕಲರ್ ಕಲರ್ ಪಾರ್ಟಿ ” ಗೆ ಅತ್ಯುತ್ತಮ ಮನರಂಜನಾ ಚಿತ್ರ ಪ್ರಶಸ್ತಿ ದಕ್ಕಿದೆ. ಎಲ್ಲರಿಗು ಮನಃ ಪೂರ್ವಕ ಅಭಿನಂದನೆಗಳು. ಒಳ್ಳೆ ಸಿನಿಮಾಗಳು ಎಲ್ಲ ಕಡೆಯಲ್ಲೂ ಗೆಲ್ಲಬೇಕಲ್ಲವೇ ?

ಉಳಿದ ವಿವರ ಇಲ್ಲಿದೆ

2016 ನೇ ಕ್ಯಾಲೆಂಡರ್ ವರ್ಷದ ರಾಜ್ಯ ವಾರ್ಷಿಕ ಚಲನಚಿತ್ರ ಪ್ರಶಸ್ತಿಗಳ ವಿವರ
ಪ್ರಶಸ್ತಿಗಳ ವಿವರ ಪ್ರಶಸ್ತಿ ವಿಜೇತರು ಪ್ರಶಸ್ತಿ ಮೊತ್ತದ ವಿವರ

ಮೊದಲನೆ ಅತ್ಯುತ್ತಮ ಚಿತ್ರ : ಅಮರಾವತಿ
ಎ) ನಿರ್ಮಾಪಕ
(ಶ್ರೀ ಕೆ.ಸಿ.ಎನ್. ಗೌಡ ಪ್ರಶಸ್ತಿ) ಮಾಧವರೆಡ್ಡಿ ಇ.
ಒಂದು ಲಕ್ಷ ರೂ. ಗಳ
ನಗದು ಹಾಗೂ 50 ಗ್ರಾಂ
ಚಿನ್ನದ ಪದಕ
1
ಬಿ) ನಿರ್ದೇಶಕ
(ಹೆಚ್.ಎಲ್.ಎನ್. ಸಿಂಹ ಪ್ರಶಸ್ತಿ) ಬಿ.ಎಂ. ಗಿರಿರಾಜ್
ಒಂದು ಲಕ್ಷ ರೂ.ಗಳ
ನಗದು ಹಾಗೂ 50 ಗ್ರಾಂ
ಚಿನ್ನದ ಪದಕ
ಎರಡನೇ ಅತ್ಯುತ್ತಮ ಚಿತ್ರ: ರೈಲ್ವೇ ಚಿಲ್ಡ್ರನ್
ಎ) ನಿರ್ಮಾಪಕ ಪೃಥ್ವಿ ಕೊಣನೂರ್ ಎಪ್ಪತ್ತೈದು ಸಾವಿರ ರೂ. ಗಳ
ನಗದು ಹಾಗೂ 100 ಗ್ರಾಂ
ಬೆಳ್ಳಿ ಪದಕ
2
ಬಿ) ನಿರ್ದೇಶಕ
ಪೃಥ್ವಿ ಕೊಣನೂರ್
ಎಪ್ಪತ್ತೈದು ಸಾವಿರ ರೂ.ಗಳ
ನಗದು ಹಾಗೂ 100 ಗ್ರಾಂ
ಬೆಳ್ಳಿ ಪದಕ
ಮೂರನೇ ಅತ್ಯುತ್ತಮ ಚಿತ್ರ : ಅಂತರ್ಜಲ
ಎ) ನಿರ್ಮಾಪಕ ಬಿ.ನಂದಕುಮಾರ್ ಐವತ್ತು ಸಾವಿರ ರೂ.ಗಳ
ನಗದು ಹಾಗೂ 100 ಗ್ರಾಂ
ಬೆಳ್ಳಿ ಪದಕ
3
ಬಿ) ನಿರ್ದೇಶಕ ಹರೀಶ್ ಕುಮಾರ್ ಎಲ್. ಐವತ್ತು ಸಾವಿರ ರೂ.ಗಳ
ನಗದು ಹಾಗೂ 100 ಗ್ರಾಂ
ಬೆಳ್ಳಿ ಪದಕ
ವಿಶೇಷ ಸಾಮಾಜಿಕ ಕಾಳಜಿಯ ಚಿತ್ರ : ಮೂಡ್ಲ ಸೀಮೆಯಲಿ
ಎ) ನಿರ್ಮಾಪಕ ಅನಿಲ್ ನಾಯ್ಡು
ಅರುಂಧತಿ ಎಂ
ಅಮರಾವತಿ ಎಂ
ಎಪ್ಪತ್ತೈದು ಸಾವಿರ ರೂ.ಗಳ
ನಗದು ಹಾಗೂ 100 ಗ್ರಾಂ
ಬೆಳ್ಳಿ ಪದಕ
4
ಬಿ) ನಿರ್ದೇಶಕ ಶಿವರುದ್ರಯ್ಯ ಕೆ. ಎಪ್ಪತ್ತೈದು ಸಾವಿರ ರೂ.ಗಳ
ನಗದು ಹಾಗೂ 100 ಗ್ರಾಂ
ಬೆಳ್ಳಿ ಪದಕ
ಅತ್ಯುತ್ತಮ ಜನಪ್ರಿಯ ಮನರಂಜನಾ ಚಿತ್ರ: ಕಿರಿಕ್ ಪಾರ್ಟಿ
ಎ) ನಿರ್ಮಾಪಕ
(ಶ್ರೀ ನರಸಿಂಹರಾಜು ಪ್ರಶಸ್ತಿ)
ರಕ್ಷಿತ್ ಶೆಟ್ಟಿ ಐವತ್ತು ಸಾವಿರ ರೂ.ಗಳ
ನಗದು ಹಾಗೂ 100 ಗ್ರಾಂ
ಬೆಳ್ಳಿ ಪದಕ
5
ಬಿ) ನಿರ್ದೇಶಕ ರಿಷಬ್ ಶೆಟ್ಟಿ ಐವತ್ತು ಸಾವಿರ ರೂ.ಗಳ
ನಗದು ಹಾಗೂ 100 ಗ್ರಾಂ
ಬೆಳ್ಳಿ ಪದಕ
ಅತ್ಯುತ್ತಮ ಮಕ್ಕಳ ಚಿತ್ರ : ಜೀರ್ ಜಿಂಬೆ
ಎ) ನಿರ್ಮಾಪಕ ಕಾರ್ತಿಕ್ ಸರಗೂರು ಐವತ್ತು ಸಾವಿರ ರೂ.ಗಳ
ನಗದು ಹಾಗೂ 100 ಗ್ರಾಂ
ಬೆಳ್ಳಿ ಪದಕ
6
ಬಿ) ನಿರ್ದೇಶಕ ಕಾರ್ತಿಕ್ ಸರಗೂರು ಐವತ್ತು ಸಾವಿರ ರೂ.ಗಳ
ನಗದು ಹಾಗೂ 100 ಗ್ರಾಂ
ಬೆಳ್ಳಿ ಪದಕ
ನಿರ್ದೇಶಕರ ಪ್ರಥಮ ನಿರ್ದೇಶನದ ಅತ್ಯುತ್ತಮ ಚಿತ್ರ: ರಾಮ ರಾಮಾ ರೇ
ಎ) ನಿರ್ಮಾಪಕ ಡಿ. ಸತ್ಯ ಪ್ರಕಾಶ್ ಐವತ್ತು ಸಾವಿರ ರೂ.ಗಳ
ನಗದು ಹಾಗೂ 100 ಗ್ರಾಂ
ಬೆಳ್ಳಿ ಪದಕ
7
ಬಿ) ನಿರ್ದೇಶಕ ಡಿ. ಸತ್ಯ ಪ್ರಕಾಶ್ ಐವತ್ತು ಸಾವಿರ ರೂ.ಗಳ
ನಗದು ಹಾಗೂ 100 ಗ್ರಾಂ
ಬೆಳ್ಳಿ ಪದಕ
ಅತ್ಯುತ್ತಮ ಕರ್ನಾಟಕ ಪ್ರಾದೇಶಿಕ ಭಾಷಾ ಚಿತ್ರ : ಮದಿಪು – ತುಳು ಭಾಷೆ
ಎ) ನಿರ್ಮಾಪಕ ಸಂದೀಪ್ ಕುಮಾರ್ ನಂದಲಿಕೆ ಐವತ್ತು ಸಾವಿರ ರೂ.ಗಳ
ನಗದು ಹಾಗೂ 100 ಗ್ರಾಂ
ಬೆಳ್ಳಿ ಪದಕ
8
ಬಿ) ನಿರ್ದೇಶಕ ಚೇತನ್ ಮುಂಡಾಡಿ ಐವತ್ತು ಸಾವಿರ ರೂ.ಗಳ
ನಗದು ಹಾಗೂ 100 ಗ್ರಾಂ
ಬೆಳ್ಳಿ ಪದಕ
9 ಅತ್ಯುತ್ತಮ ನಟ
(ಸುಬ್ಬಯ್ಯ ನಾಯ್ಡು ಪ್ರಶಸ್ತಿ)
ಅಚ್ಚುತ್ ಕುಮಾರ್
(ಚಿತ್ರ: ಅಮರಾವತಿ)
ಇಪ್ಪತ್ತು ಸಾವಿರ ರೂ.ಗಳ
ನಗದು ಹಾಗೂ 100 ಗ್ರಾಂ
ಬೆಳ್ಳಿಯ ಪದಕ
10 ಅತ್ಯುತ್ತಮ ನಟಿ ಶೃತಿ ಹರಿಹರನ್
(ಚಿತ್ರ: ಬ್ಯೂಟಿಪುಲ್ ಮನಸುಗಳು)
ಇಪ್ಪತ್ತು ಸಾವಿರ ರೂ.ಗಳ
ನಗದು ಹಾಗೂ 100 ಗ್ರಾಂ
ಬೆಳ್ಳಿಯ ಪದಕ
11 ಅತ್ಯುತ್ತಮ ಪೋಷಕ ನಟ
(ಕೆ.ಎಸ್.ಅಶ್ವಥ್ ಪ್ರಶಸ್ತಿ)
ನವೀನ್ ಡಿ ಪಡೀಲ್
(ಚಿತ್ರ: ಕುಡ್ಲ ಕೆಫೆ (ತುಳು))
ಇಪ್ಪತ್ತು ಸಾವಿರ ರೂ.ಗಳ
ನಗದು ಹಾಗೂ ಬೆಳ್ಳಿಯ
ಪದಕ
12 ಅತ್ಯುತ್ತಮ ಪೋಷಕ ನಟಿ ಅಕ್ಷತಾ ಪಾಂಡವಪುರ
(ಚಿತ್ರ: ಪಲ್ಲಟ)
ಇಪ್ಪತ್ತು ಸಾವಿರ ರೂ.ಗಳ
ನಗದು ಹಾಗೂ 100 ಗ್ರಾಂ
ಬೆಳ್ಳಿಯ ಪದಕ
13 ಅತ್ಯುತ್ತಮ ಕತೆ ನಂದಿತಾ ಯಾದವ್
(ಚಿತ್ರ: ರಾಜು ಎದೆಗೆ ಬಿದ್ದ ಅಕ್ಷರ)
ಇಪ್ಪತ್ತು ಸಾವಿರ ರೂ.ಗಳ
ನಗದು ಹಾಗೂ 100 ಗ್ರಾಂ
ಬೆಳ್ಳಿಯ ಪದಕ
14 ಅತ್ಯುತ್ತಮ ಚಿತ್ರಕತೆ ಅರವಿಂದ ಶಾಸ್ತ್ರಿ
(ಚಿತ್ರ: ಕಹಿ)
ಇಪ್ಪತ್ತು ಸಾವಿರ ರೂ.ಗಳ
ನಗದು ಹಾಗೂ 100 ಗ್ರಾಂ
ಬೆಳ್ಳಿಯ ಪದಕ
15 ಅತ್ಯುತ್ತಮ ಸಂಭಾಷಣೆ ಬಿ.ಎಂ.ಗಿರಿರಾಜ್
(ಚಿತ್ರ: ಅಮರಾವತಿ)
ಇಪ್ಪತ್ತು ಸಾವಿರ ರೂ.ಗಳ
ನಗದು ಹಾಗೂ 100 ಗ್ರಾಂ
ಬೆಳ್ಳಿಯ ಪದಕ
16 ಅತ್ಯುತ್ತಮ ಛಾಯಾಗ್ರಹಣ ಶೇಖರ್ ಚಂದ್ರ
(ಚಿತ್ರ: ಮುಂಗಾರು ಮಳೆ-2)
ಇಪ್ಪತ್ತು ಸಾವಿರ ರೂ.ಗಳ
ನಗದು ಹಾಗೂ 100 ಗ್ರಾಂ
ಬೆಳ್ಳಿಯ ಪದಕ
17 ಅತ್ಯುತ್ತಮ ಸಂಗೀತ ನಿರ್ದೇಶನ ಎಂ.ಆರ್.ಚರಣ್ ರಾಜ್
(ಚಿತ್ರ: ಜೀರ್ ಜಿಂಬೆ)
ಇಪ್ಪತ್ತು ಸಾವಿರ ರೂ.ಗಳ
ನಗದು ಹಾಗೂ 100 ಗ್ರಾಂ
ಬೆಳ್ಳಿಯ ಪದಕ
18 ಅತ್ಯುತ್ತಮ ಸಂಕಲನ ಸಿ.ರವಿಚಂದ್ರನ್
(ಚಿತ್ರ: ಮಮ್ಮಿ)
ಇಪ್ಪತ್ತು ಸಾವಿರ ರೂ.ಗಳ
ನಗದು ಹಾಗೂ 100 ಗ್ರಾಂ
ಬೆಳ್ಳಿಯ ಪದಕ
19 ಅತ್ಯುತ್ತಮ ಬಾಲ ನಟ ಮಾಸ್ಟರ್ ಮನೋಹರ್ ಕೆ.
(ಚಿತ್ರ: ರೈಲ್ವೇ ಚಿಲ್ಡ್ರನ್)
ಇಪ್ಪತ್ತು ಸಾವಿರ ರೂ.ಗಳ
ನಗದು ಹಾಗೂ ಬೆಳ್ಳಿಯ
ಪದಕ
20 ಅತ್ಯುತ್ತಮ ಬಾಲ ನಟಿ ಬೇಬಿ ಸಿರಿವಾನಳ್ಳಿ
(ಚಿತ್ರ: ಜೀರ್ ಜಿಂಬೆ)
ಬೇಬಿ ರೇವತಿ
(ಚಿತ್ರ: ಬೇಟಿ)
ತಲಾ ಹತ್ತು ಸಾವಿರ ರೂ.ಗಳ
ನಗದು ಹಾಗೂ ತಲಾ 50
ಗ್ರಾಂ ಬೆಳ್ಳಿಯ ಪದಕ
21 ಅತ್ಯುತ್ತಮ ಕಲಾ ನಿರ್ದೇಶನ ಶಶಿಧರ ಅಡಪ
(ಚಿತ್ರ: ಉಪ್ಪಿನ ಕಾಗದ)
ಇಪ್ಪತ್ತು ಸಾವಿರ ರೂ.ಗಳ
ನಗದು ಹಾಗೂ 100 ಗ್ರಾಂ
ಬೆಳ್ಳಿಯ ಪದಕ
22 ಅತ್ಯುತ್ತಮ ಗೀತ ರಚನೆ ಕಾರ್ತಿಕ್ ಸರಗೂರು
(ಚಿತ್ರ: ಜೀರ್ ಜಿಂಬೆ)
ಹಾಡು: ದೊರೆ ಓ ದೊರೆ
ಇಪ್ಪತ್ತು ಸಾವಿರ ರೂ.ಗಳ
ನಗದು ಹಾಗೂ 100 ಗ್ರಾಂ
ಬೆಳ್ಳಿಯ ಪದಕ
23 ಅತ್ಯುತ್ತಮ ಹಿನ್ನೆಲೆ ಗಾಯಕ ವಿಜಯ್ ಪ್ರಕಾಶ್
(ಚಿತ್ರ: ಬ್ಯೂಟಿಪುಲ್ ಮನಸುಗಳು)
ಹಾಡು: ನಮ್ಮೂರಲ್ಲಿ ಚಳಿಗಾಲದಲ್ಲಿ
ಇಪ್ಪತ್ತು ಸಾವಿರ ರೂ.ಗಳ
ನಗದು ಹಾಗೂ 100 ಗ್ರಾಂ
ಬೆಳ್ಳಿಯ ಪದಕ
24 ಅತ್ಯುತ್ತಮ ಹಿನ್ನೆಲೆ ಗಾಯಕಿ ಸಂಗೀತಾ ರವೀಂದ್ರನಾಥ್
(ಚಿತ್ರ: ಜಲ್ಸ)
ಹಾಡು: ನನ್ನೆದೆ ಬೀದಿಗೆ
ಇಪ್ಪತ್ತು ಸಾವಿರ ರೂ.ಗಳ
ನಗದು ಹಾಗೂ ಬೆಳ್ಳಿಯ
ಪದಕ
ತೀರ್ಪುಗಾರರ ವಿಶೇಷ ಪ್ರಶಸ್ತಿ ಚಿನ್ಮಯ್
(ಚಿತ್ರ: ಸಂತೆಯಲ್ಲಿ ನಿಂತ ಕಬೀg)À
ವಿಭಾಗ: ವಸ್ತ್ರಾಲಂಕಾರ
ಇಪ್ಪತ್ತು ಸಾವಿರ ರೂ.ಗಳ
ನಗದು ಹಾಗೂ 100 ಗ್ರಾಂ
ಬೆಳ್ಳಿಯ ಪದಕ
25
(ಅ) ಅತ್ಯುತ್ತಮ ನಿರ್ಮಾಣ ನಿರ್ವಾಹಕ ಕೆ.ವಿ.ಮಂಜಯ್ಯ
(ಚಿತ್ರ: ಮುಂಗಾರು ಮಳೆ-2)
ಇಪ್ಪತ್ತು ಸಾವಿರ ರೂ.ಗಳ
ನಗದು ಹಾಗೂ 100 ಗ್ರಾಂ
ಬೆಳ್ಳಿಯ ಪದಕ

ಪ್ರಥಮ – ಪಾಪ!

ಪ್ರಥಮ್ -ಸಂಜನಾ ನಡುವೆ  ಅಫೇರ್ ಇತ್ತಾ ಅನ್ನುವ ಸುದ್ದಿ ಎಗ್ಗಿಲ್ಲದಂತೆ ಹರಿದಾಡುತ್ತಿದೆ . ಅದರ ಸತ್ಯಾಸತ್ಯತೆ ಒಂದು ಕಡೆಗಿರಲಿ. ಪ್ರಥಮ್ ನ ಮಾತು ,ಉಡಾಫೆ ಗಳ ಪ್ರದರ್ಶನವನ್ನ  ಗಮನಿಸುತ್ತಾ  ಬಂದ ಆಶಾ ವಿಶ್ವನಾಥ್ ಆತನ ಹುಚ್ಚಾಟಗಳ ಹಿಂದಿನ ಮನಃಸ್ಥಿತಿಯ ಬಗ್ಗೆ ತಮ್ಮ ಅನಿಸಿಕೆ ದಾಖಲಿಸಿದ್ದಾರೆ ಓದಿ ನೋಡಿ .
ಒಳ್ಳೇ ಹುಡುಗ, ಲೋಕಲ್, ಮೆಂಟಲ್, ಕಿರಿಕ್, ಹುಚ್ಚ , ಕಿಚ್ಚ……….
ಇಂಥ ಹತ್ತು ಹಲವು ಚಿತ್ರ ವಿಚಿತ್ರ ಟೈಟಲ್‍ಗಳನ್ನ ಹೆಸರಿನ ಹಿಂದೆ ಅಂಟಿಸೋದು ಯಾರು?
ಹೀಗೆ ಕೇವಲ ಹೆಸರುಗಳ ಬೆನ್ನು ಹತ್ತಿ ಪ್ರಸಿದ್ಢಿ ಪಡೆಯೋದಕ್ಕೆ ಸಾಧ್ಯವಾ?
ಏನಾದ್ರೂ ಮಾಡಿ ಒಟ್ಟಾರೆ famous ಆಗ್ಬೇಕು ಅನ್ನೋ ಹಪಹಪಿಯಲ್ಲಿ extraordinary ಮಾರ್ಗದಲ್ಲಿ ಹೋಗಿ ಪಡೆದುಕೊಳ್ಳೋ publicity ಎಷ್ಟು ದಿನ ಸಾಥ್ ಕೊಡುತ್ತೆ?
ನಾಲ್ಕು ಜನರ ಮಧ್ಯೆ ನಾನೇ ಬೇರೆ, ನನ್ನ ಸ್ಟೈಲೇ ಬೇರೆ ಅಂತ ಛಾಪು ಮೂಡಿಸಬೇಕು ಅನ್ನೋ ತರಾತುರಿಯಲ್ಲಿ ಉತ್ತೇಜಿತರಾಗಿ ಮುನ್ನಡೆದ್ರೆ famous ಆಗಬಹುದೇನೋ ಆದ್ರೆ ಆ ಪ್ರಸಿದ್ಢಿ, ಹೆಸರು ಎಷ್ಟು ದಿನ ನಮ್ಮೊಂದಿಗಿರುತ್ತೆ?
ರಿಯಾಲಿಟಿ ಷೋಗಳಲ್ಲಿ ಗೆದ್ದ ಮಾತ್ರಕ್ಕೆ ಜೀವನ ಗೆಲ್ಲುವ ಕಲೆ ಕರಗತವಾಗುತ್ತಾ?
ರಾತ್ರೋರಾತ್ರಿ ದಕ್ಕುವಂಥ popularity ಯ ಸತ್ವ ಎಷ್ಟು?
ಉಫ಼್……………….. ಇಂಥ ಹಲವಾರು ಪ್ರಶ್ನೆಗಳು ನನ್ನನ್ನು ಕಳೆದ 2 ದಿನಗಳಿಂದ ಮತ್ತೆ ಕಾಡ್ತಿರೋದಕ್ಕೆ ಕಾರಣ once again, BIGG BOSS ಮತ್ತು ಈ ಸೀಸನ್ನಿನ ವಿಜೇತ ಪ್ರಥಮ.
ಪಾಪ, ಇನ್ನೂ ಮಾಗದ ವಯಸ್ಸು, ಜೀವನದ ಜಂಜಾಟದಲ್ಲಿ ಏನೇನೂ ಇಲ್ಲದ ಅನುಭವ, ಆಗಸಕ್ಕೇ ಲಗ್ಗೆ ಇಟ್ಟು ಕೆಳಗೆ ಕಂಡಿದನ್ನೆಲ್ಲವನ್ನ ಖಂಡಿಸಿ ದಕ್ಕಿಸಿಕೊಳ್ಳಬಲ್ಲೆ ಎಂಬ ಹುಚ್ಚು ಹುಂಬತನ. ಇವೆಲ್ಲವೂ ಮೇಳೈಸಿರುವ ಪ್ರಥಮನ ಈಗಿನ ಸ್ಥಿತಿಗೆ ಅವನಿಗೆ ಓಟು ಹಾಕಿ ಗೆಲ್ಲಿಸಿ ತಪ್ಪು ಮಾರ್ಗ ತೋರಿಸಿದ ನಮ್ಮೆಲ್ಲರ ಬೇಜವಾಬ್ದಾರಿಯೇ ಕಾರಣ ಅನ್ನಿಸೋಲ್ವಾ?
ಏನೇನೂ ಸತ್ವವೇ ಇಲ್ಲದೆ ಕೇವಲ ಜೊಳ್ಳು ಆರ್ಭಟದ ಮಾತುಗಾರಿಕೆಯನ್ನೇ ಬಂಡವಾಳ ಮಾಡಿಕೊಂಡವನನ್ನು ಗೆಲ್ಲಿಸಿ ಹುಚ್ಚು ಆಸೆಯ ಮರೀಚಿಕೆಯ ಬೆನ್ನಮೇಲೇರಿಸಿದ್ದಕ್ಕೆ ಓಟು ಮಾಡಿದವರೇ ಕಾರಣವಾಗೋದಿಲ್ವೆ?
ಉದ್ಭವ ಮೂರ್ತಿಗಳೇ “ಉತ್ಸವ-ಮೂರ್ತಿ”ಗಳಾಗುತ್ತಿರುವ ಸಾಧ್ಯತೆ ಹೆಚ್ಚಾಗಿರುವ ಈ ದಿನಗಳಲ್ಲಿ,  ಕಲಾಕಾರನ ಕೈಗೆ ಸಿಕ್ಕು ನೊಂದು ಬೆಂದು ಕೆತ್ತಿಸಿಕೊಂಡು ಹೊರಹೊಮ್ಮಿದ ಮೂರ್ತಿಗಳು ಮಾತ್ರವೇ ನಿತ್ಯ ಪೂಜೆ ಮಾಡಿಸಿಕೊಳ್ಳಲು ಶ್ರೇಷ್ಠ ಅನ್ನೋದನ್ನು ನಾವು ಮರೆತಂತಿದೆ.
ಪ್ರಥಮ ಪಾಪ, attention seeking, extraordinary exhibition of self success,  ಕೀಳರಿಮೆ, ಅದನ್ನು ಮುಚ್ಚಿಕೊಳ್ಳಲೊಂದಿಷ್ಟು ಆರ್ಭಟಭರಿತ ಮಾತಿನ ಮೋಡಿ, ಎಲ್ಲವನ್ನೂ ಅತಿಯಾದ ವೈಭವಕ್ಕೆ ಒಳಗಾಗಿಸುವ ಬಾಲಿಶ ಮನಸ್ಸು, ಸಮಯೋಚಿತ ನಿರ್ಧಿಷ್ಟ ನಿರ್ಧಾರ ತೆಗೆದುಕೊಳ್ಳಲಾರದ ಡೋಲಾಯಮಾನತೆ, ಹೀಗೆ ತನ್ನೆಲ್ಲ ಸ್ವಂತಿಕೆ ಇಲ್ಲದ  ವ್ಯಕ್ತಿತ್ವ-ಕೊರತೆಗಳೊಂದಿಗೆ ಹೇಗೋ ನಾಲ್ಕರೊಳಗೊಂದಾಗಿ ತನ್ನ ಪಾಡಿಗೆ ತಾನಿದ್ದವ. ಬಿಗ್‍ಬಾಸ್ ಅನ್ನುವ ರಿಯಾಲಿಟಿ ಷೋಗೆ ಉಬ್ಬಿಸಿ ಕೊಬ್ಬಿಸಿ ಕರೆತಂದು ಗೆಲ್ಲಿಸಿ ಆಚೆಗಟ್ಟಿದ ಮಂದಿ ಈಗ ಅವನ ಜೀವನಕ್ಕೊದಗುವರೇ?
ಮುಖವಾಡದ ಜೀವನ ತುಂಬ ದಿನ ಜೊತೆಗೊದಗದು! ’ಪ್ರಸಿದ್ಧಿ’ಗಿಂತ ’ಸಾಧನೆ’ ಬೇಕು. ಪ್ರಥಮ, ಬಿಗ್‍ಬಾಸ್ ಅನ್ನೋ ಉಫ಼ಿ ಆಟದಲ್ಲಿ ಗೆದ್ದೆ. ಬದುಕೆಂಬ ಲೆಕ್ಕಾಚಾರದ ಆಟದಲ್ಲೂ ಗೆದ್ದು ಸಮತೋಲನದ ಸಂತಸದ ನೆಮ್ಮದಿಯ ಬಾಳು ಬಾ………………..
-ಆಶಾ ವಿಶ್ವನಾಥ್
ಮಾನಸಿಕ ಸಲಹೆಗಾರರು .

ರಾಷ್ಟ್ರಪ್ರಶಸ್ತಿ ವಿಜೇತ “ಪಿಂಕ್” ಸಿನಿಮಾದ ಸ್ಕ್ರಿಪ್ಟ್ ಇಲ್ಲಿದೆ

ಸಿನಿಮಾ ವ್ಯಾಮೋಹಿಗಳು ಓದಿ ಮತ್ತು ಶೇರ್ ಮಾಡಿ
ಸಿನಿಮಾ ಅತ್ಯಂತ  ಮೋಡಿ ಮಾಡುವ ಮಾಧ್ಯಮ. ಹಾಗಾಗಿಯೇ ಯುವಜನತೆ ಸಿನಿಮಾಗೆ ಮರುಳಾಗ್ತಾರೆ. ಈ ಆಧುನಿಕ ಯುಗದಲ್ಲಂತೂ  ಯಂಗ್ ಸ್ಟರ್ ಗಳು ಎಷ್ಟು ಬೇಗ ಸಿನಿಮಾಗೆ ಮೋಹಗೊಳ್ತಾರೋ  ಅಷ್ಟೇ ಬೇಗ ನಾನು ಸಿನಿಮಾ ಮಾಡಿಬಿಡಬೇಕು  ಅಂದುಕೊಳ್ಳುತ್ತಾರೆ. ಅಟ್ ಲೀಸ್ಟ್ ಶಾರ್ಟ್ ಫಿಲ್ಮ್ ಆದರೂ ಮಾಡ್ತಾರೆ. ಇಂಥಾ ಸಿನಿಮಾ ಕಡು ಮೋಹಿಗಳಿಗಾಗಿಯೇ ಸಿನಿ ciniadda.com  ತಂಡ ರಾಷ್ಟ್ರ ಪ್ರಶಸ್ತಿ ವಿಜೇತ ಪಿಂಕ್ ಸಿನಿಮಾದ ಸ್ಕ್ರಿಪ್ಟ್ ಹುಡುಕಿ ಕೊಟ್ಟಿದೆ.
ಶೂಜಿತ್ ಸರ್ಕಾರ್ ನಿರ್ಮಾಣದ, ಅನಿರುದ್ಧ ರಾಯ್ ಚೌಧುರಿ ನಿರ್ದೇಶನದ ಪಿಂಕ್ ಸಿನಿಮಾ ಬಿಡುಗಡೆಯಾದಾಗ ದೇಶದ ಜನರನ್ನೇ ಬೆಚ್ಚಿ ಬೀಳಿಸಿತ್ತು. ಈ ಕಾಲದ ಹೆಣ್ಣುಮಕ್ಕಳ ಖಡಕ್  ಕತೆಯನ್ನೊಳಗೊಂಡ ಸಿನಿಮಾ ವ್ಯಾಪಕ ಚರ್ಚೆಗೆ ಒಳಗಾಗಿತ್ತು.  ರಾಷ್ಟ್ರಪ್ರಶಸ್ತಿಯನ್ನೂ ಪಡೆದುಕೊಂಡಿತ್ತು.
ಸಿನಿಮಾ ವ್ಯಾಮೋಹಿಗಳು, ಸಿನಿಮಾ ಮಾಡುವ ಆಸೆ -ಅಭಿಲಾಷೆ ಉಳ್ಳವರು  ಈ ಸಿನಿಮಾದ ಸ್ಕ್ರಿಪ್ಟ್  ಓದಬೇಕು. ಯಾಕೆ ಓದಬೇಕು ಅಂದರೆ ಮುಂದೊಂದು ದಿನ ತಾವು ಸ್ಕ್ರಿಪ್ಟ್ ಬರೆಯಬೇಕಾಗಿ ಬಂದಾಗ ಹೇಗೆ ಬರೆಯಬಹುದು ಅನ್ನುವ ಐಡಿಯಾ ಸಿಗಬಹುದು.
ಈ ಸ್ಕ್ರಿಪ್ಟ್  ಎಷ್ಟು ವಿವರವಾಗಿ ಬರೆದಿದ್ದಾರೆ ಅಂದ್ರೆ ಯಾವ್ಯಾವ ನಿಮಿಷದಲ್ಲಿ ಏನೇನು ನಡೆಯಿತು ಅನ್ನುವುದನ್ನೂ ಸ್ಪಷ್ಟವಾಗಿ ಬರೆದಿದ್ದಾರೆ. ವಿದ್ಯಾರ್ಥಿಗಳಿಗೆ ಈ ಸ್ಕ್ರಿಪ್ಟ್ ನೆರವಾಗುವುದರಲ್ಲಿ ಡೌಟೇ ಇಲ್ಲ.
ಸೋ ನೀವು ಸಿನಿಮಾಸಕ್ತರಾಗಿದ್ದರೆ ಈ ಸ್ಕ್ರಿಪ್ಟ್ ಓದಿ ಮತ್ತು ಶೇರ್ ಮಾಡಿ. ಬೇರೆಯವರಿಗೂ ಗೊತ್ತಾಗಲಿ. ಆಸಕ್ತರಿಗೆ ತಲುಪಿ ಒಳ್ಳೊಳ್ಳೆ ಚಿತ್ರಗಳು ಬರಲಿ ಅಲ್ವೇ .
ಸ್ಕ್ರಿಪ್ಟ್ ಲಿಂಕ್ ಇಲ್ಲಿದೆ . ಡೌನ್ ಲೋಡ್ ಮಾಡಿಕೊಳ್ಳಲು ಲಿಂಕ್ ಮೇಲೆ ಕ್ಲಿಕ್ ಮಾಡಿ.

ಮಜಾ ಟಾಕೀಸ್ .. ಈಗ ಹೊಸ ಟಾಕೀಸ್.

ಯಾವುದೇ ಸೂಪರ್ ಹಿಟ್ ರಿಯಾಲಿಟೀ ಶೋ ಅನ್ನು ಕನ್ನಡಕ್ಕೆ ತಂದು ಗೆಲ್ಲುವುದು ಸುಲಭದ ಮಾತಲ್ಲ. ಕಲರ್ಸ್ ಕನ್ನಡ ವಾಹಿನಿಯಲ್ಲಿ, ಲೋಕೇಶ್ ಪ್ರೋಡಕ್ಷನ್ಸ್ ಮೂಲಕ ಸೃಜನ್ ಲೋಕೇಶ್ “ಮಜಾ ಟಾಕೀಸ್” ಕಾರ್ಯಕ್ರಮವನ್ನು ನೀಡಿ ಗೆದ್ದು ತೋರಿಸಿದ್ದಾರೆ. ಅಪರ್ಣ, ಮನೋಹರ್ ಹಾಗೂ ಇಂದ್ರಜೀತ್ ಅಂತಹ ಗಂಭೀರ ವ್ಯಕ್ತಿಗಳನ್ನು ಹಾಸ್ಯಮಯ ಪಾತ್ರಗಳಲ್ಲಿ ಯಶಸ್ವಿಯಾಗಿ ಬಿಂಬಿಸಿದ್ದಾರೆ. ಶ್ವೇತಾ, ದಯಾನಂದ್, ಪವನ್, ವಂದನ  ಹಾಗೂ ರೇಮೋ ಅವರನ್ನೊಳಗೊಂಡ “ಮಜಾ ಟಾಕೀಸ್” ಒಂದು ಅಪರೂಪದ ತಂಡ. ಮಂಡ್ಯ ರಮೇಶ್ ಮತ್ತು ಕುರಿ ಪ್ರತಾಪ್ ಸೇರಿಕೊಂಡ ಮೇಲಂತೂ ಪ್ರೇಕ್ಷಕರಿಗೆ ಡಬ್ಬಲ್ ಬೋನಸ್. ಇತ್ತೀಚಿನ ಸೇರ್ಪಡೆ ನವೀನ್ ಪಡೀಲ್ ಕೂಡ ಅಸಾಮಾನ್ಯ ಪ್ರತಿಭೆ.

DSC_0486

ಮೊದಮೊದಲು ಮಿಶ್ರ ಪ್ರತಿಕ್ರಿಯೆಗಳನ್ನು ಎದುರಿಸಿದ ಮಜಾಟಾಕೀಸ್, ನಂತರದ ದಿನಗಳಲ್ಲಿ  ನಂಬರ್ ಒನ್ ರಿಯಾಲಿಟಿ ಶೋ ಆಗಿ ನಿಂತದ್ದು ಮಾತ್ರ ಪ್ರಶಂಸನೀಯ.

ಕಿರುತೆರೆಯಲ್ಲಿ ಎಂದಿಗೂ ಕಾಮಿಡಿ ಮಾಡದ ಚಿತ್ರರಂಗದ ಅತಿರಥ-ಮಹಾರಥರು ಮಜಾಟಾಕೀಸಿಗೆ ಬಂದು ಮಜಾ ಮಾಡಿ ಹೋಗಿದ್ದಾರೆ.

mt ciniadda

25ನೇ ಎಪಿಸೋಡಿನಲ್ಲಿ ಸುದೀಪ್, 50ನೇ ಎಪಿಸೋಡಿನಲ್ಲಿ ದರ್ಶನ್, 75ನೇ ಎಪಿಸೋಡಿನಲ್ಲಿ ಅರ್ಜುನ್ ಸರ್ಜಾ ಹಾಗೂ ಸೆಂಚುರಿ ಎಪಿಸೋಡಿನಲ್ಲಿ ಸೆಂಚುರಿ ಸ್ಟಾರ್ ಶಿವರಾಜ್ ಕುಮಾರ್ ಅವರನ್ನು ಕರೆತಂದು ಪ್ರೇಕ್ಷಕರಿಗೆ ಮನೋರಂಜನೆ ನೀಡಿದ ಹೆಗ್ಗಳಿಕೆ ಸೃಜನ್ ಅವರದು. ಅರಳು ಹುರಿದಂತೆ ಪಟಪಟನೆ ಮಾತನಾಡುವ ಲೋಕೇಶ್, ಎಣ್ಣೆ ಸಿಡಿದಂತೆ ಚಿಟಚಿಟನೆ ನಗುವ ಲಂಕೇಶ್ ಜೋಡಿ ಇಂದು ಕರ್ನಾಟಕದಲ್ಲಿ ಮಾತ್ರವಲ್ಲ ವಿಶ್ವದಾದ್ಯಂತ ಖ್ಯಾತಿ ಪಡೆದ ಜೋಡಿಯಾಗಿದೆ. ಪ್ರಪಂಚದ ನಾನಾ ದೇಶದಲ್ಲಿ ಬದುಕು ಕಂಡುಕೊಂಡಿರುವ ಕನ್ನಡಿಗರು ತಮ್ಮ ತವರಿಗೆ ಬಂದಾಗ ಮಜಾಟಾಕೀಸ್ ಕಾರ್ಯಕ್ರಮಕ್ಕೂ ಭೇಟಿ ಕೊಡುವುದು ಅವರ ಪ್ರಮುಖ ಆದ್ಯತೆ ಆಗಿರುತ್ತದೆ ಎನ್ನುವುದು ಕಲರ್ಸ್ ಕನ್ನಡ ವಾಹಿನಿಗೆ ಒಂದು ಹಿರಿಮೆಯೇ ಸರಿ.

Desktop19

ನೂರರ ನಂತರ ನೂರೈವತ್ತು ಎಪಿಸೋಡ್ ಗಳನ್ನು ಮಿಂಚಿಸಿ ಕಿರುತೆರೆಯಲ್ಲಿ ಹೊಸ ದಾಖಲೆಯನ್ನು ಸೃಷ್ಟಿಸಿ ಮುನ್ನಡೆಯುತ್ತಿರುವ ಮಜಾಟಾಕೀಸ್ ಮನೆ ಈಗ ಸಂಪೂರ್ಣ ಹೊಸ ರೂಪ ಪಡೆದು ಹೊಸ ಮನೆಯಲ್ಲಿ ಕನ್ನಡದ ಪ್ರೇಕ್ಷಕರನ್ನು ರಂಜಿಸಲಿದೆ. ಹೊಸ ಮನೆಯ ಗೃಹಪ್ರವೇಶಕ್ಕೆ ಸೃಜನ್ ಲೋಕೇಶ್ ಅವರ ಆತ್ಮಿಯರಾದ ನಿರ್ದೇಶಕ ಯೋಗರಾಜ್ ಭಟ್ ಜೊತೆಯಲ್ಲಿ ನಭಾ ನಟೇಶ್, ಶುಭಾ ಪೂಂಜ, ಇಂದು-ಬಿಂದು ನಾಗರಾಜ್ ಮತ್ತು ಹಲವರು ಬರಲಿದ್ದಾರೆ.

ಎಂದಿನಂತೆ ಶನಿವಾರ ಮತ್ತು ಭಾನುವಾರ ರಾತ್ರಿ 8 ಗಂಟೆಗೆ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರೇಕ್ಷಕರಿಗೆ ಅದ್ಧೂರಿಯಾಗಿ ಸೆಟ್ಟೇರಿರುವ ಹೊಸ ಮಜಾಟಾಕೀಸ್ ನ ದರ್ಶನವಾಗಲಿದೆ.

ಏಪ್ರಿಲ್ 14 ಕ್ಕೆ ಅಪ್ಪಳಿಸಲಿದ್ದಾನೆ ಚಕ್ರವರ್ತಿ !!

ವೀರ ಫಿಲ್ಮ್ಸ್ ಅಡಿಯಲ್ಲಿ ತಯಾರಾಗಿರುವ ಏಪ್ರಿಲ್ ತಿಂಗಳ ಬಹು ದೊಡ್ಡ ಸಿನಿಮಾ ಚಿಂತನ್ ಅವರ ಪ್ರಥಮ ನಿರ್ದೇಶನದಲ್ಲಿ ಛಾಲೆಂಜಿಂಗ್ ಸ್ಟಾರ್ ದರ್ಶನ್ ಹಾಗೂ ದೀಪ ಸನ್ನಿದಿ ಅಭಿನಯದ `ಚಕ್ರವರ್ತಿ’.   ಸಿದ್ದಾಂತ್ ಅವರ ನಿರ್ಮಾಣದ ಚಿತ್ರ ಸೆನ್ಸಾರ್ ಮನ್ನಣೆ ಪಡೆದಿದ್ದು 14 ರಂದು ಬಿಡುಗಡೆ ಅಂತ ತೀರ್ಮಾನಿಸಿದೆ.

ದರ್ಶನ್ ಅವರ ಅನೇಕ ಸಿನಿಮಾಗಳಿಗೆ ಸಂಭಾಷಣೆ ಬರೆದು ಅವರ ಅಚ್ಚು ಮೆಚ್ಚಿನ ವ್ಯಕ್ತಿ ಎನಿಸಿಕೊಂಡಿರುವ ಚಿಂತನ್ ಈ ಚಿತ್ರಕ್ಕೆ ಅನೇಕ ಹೊಸ ಬಗೆಯ ಪ್ರಯತ್ನಗಳನ್ನು ಮಾಡಿದ್ದಾರೆ. ದರ್ಶನ್ ಅವರನ್ನು ಮೂರು ವಿಭಿನ್ನ ಸಮಯ, ಮೇಕಪ್ ಅಲ್ಲಿ ಪ್ರೇಕ್ಷಕರು ಕಾಣಬಹುದು

.
`ಚಕ್ರವರ್ತಿ’ ಚಿತ್ರದ ಹಾಡಿನ ತುಣುಕುಗಳು ಹಾಗೂ ಟ್ರೈಲರ್ ಒಂದು ಕಡೆ ಸುದ್ದಿ ಮಾಡುತ್ತಿದ್ದರೆ, ಇತ್ತೀಚಿಗೆ ಕೇವಲ ಸನ್ನಿವೇಶಗಳ ಸಂಗಮವನ್ನು 200 ಶಾಟ್ಸ್ ನಲ್ಲಿ ಪ್ರಯೋಗ ಮಾಡಿ ಮತ್ತೊಂದು ವಿನೂತನ ಬಗೆಯ ಟ್ರೈಲರ್ ಸಹ  ಬಿಡುಗಡೆ ಮಾಡಿ ಚಿಂತನ್  ಮೆಚ್ಚುಗೆ ಪಡೆದುಕೊಂಡಿದ್ದಾರೆ. ಅಂತರ್ಜಾಲ ಮಾಧ್ಯಮದಲ್ಲಿ ಈ ವಿಶೇಷ ಟ್ರೈಲರ್  ಲಕ್ಷಾಂತರ ವ್ಯಕ್ತಿಗಳು ವೀಕ್ಷಿಸಿದ್ದಾರೆ.


ಡಾ ಅಂಬೇಡ್ಕರ್ ಜಯಂತಿ ದಿನ  ಬಿಡುಗಡೆ ಆಗುತ್ತಿರುವ ಚಕ್ರವರ್ತಿ ಸಿನಿಮಾದಲ್ಲಿ ದಿನಕರ್ ತೂಗುದೀಪ ಖಳನಟನ ಪಾತ್ರ ಮಾಡಿದ್ದಾರೆ. ಸಿದ್ದಾಂತ್, ಕುಮಾರ್ ಬಂಗಾರಪ್ಪ, ಸೃಜನ್ ಲೋಕೇಶ್, ಆದಿತ್ಯ, ಯಶಸ್, ಶರತ್ ಲೋಹಿತಾಶ್ವ ಹಾಗೂ ಇನ್ನಿತರರು ತಾರಾಗಣದಲ್ಲಿ ಇದ್ದಾರೆ.
ಅರ್ಜುನ್ ಜನ್ಯ ಅವರ ಸಂಗೀತದಲ್ಲಿ ಹಾಡುಗಳು ಬಹಳಷ್ಟು ಮೆಚ್ಚುಗೆ ಸಂಪಾದಿಸಿದೆ. ಕೆ ಎಸ್ ಚಂದ್ರಶೇಖರ್ ಈ ಚಿತ್ರದ ಛಾಯಾಗ್ರಾಹಕರು. ಕೆ ಎಂ ಪ್ರಕಾಶ್ ಅವರ ಸಂಕಲನ, ಡಾ ವಿ ನಾಗೇಂದ್ರ ಪ್ರಸಾದ್ ಅವರ ಗೀತ ಸಾಹಿತ್ಯ, ಈಶ್ವರಿ ಕುಮಾರ್ ಕಲೆ, ಕಲೈ, ಮದನ್ ಹರಿಣಿ, ಗಣೇಶ್, ಆನಂದ್ ಅವರ ನೃತ್ಯ ನಿರ್ದೇಶನ, ಫಳಣಿ ರಾಜ್ ಅವರ ಸಾಹಸ ಈ `ಚಕ್ರವರ್ತಿ’ ಒಳಗೊಂಡಿದೆ.

ಅಲ್ಲಮನಿಗೆ ಒಲಿಯಲಿಲ್ಲ ಬಾಪು ಕೈ ಬಿಡಲಿಲ್ಲ ರಾಷ್ಟ್ರ ಪ್ರಶಸ್ತಿ.ಇನ್ನಾದರೂ ಬದಲಾದೀತೆ ನಿರ್ದೇಶಕರ ಮನಃಸ್ಥಿತಿ ?

64 ನೇ ಚಲನಚಿತ್ರ ರಾಷ್ಟ್ರ ಪ್ರಶಸ್ತಿಗಳು  ಪ್ರಕಟವಾಗಿವೆ .ಇತ್ತೀಚೆಗೆ  ರಾಜಕೀಯವಾಗಿ ಸಂಚಲನ ಮೂಡಿಸಿರುವ ಉತ್ತರಪ್ರದೇಶ “ಸಿನಿಮಾ ಸ್ನೇಹಿ” ರಾಜ್ಯ ಹೆಗ್ಗಳಿಕೆಗೆ ಪಾತ್ರವಾಗಿದೆ .ಕನ್ನಡ ನಾಡಿಗೆ ಆ ಭಾಗ್ಯ ವೆಂದು ಬರುವುದೋ ? ಇರಲಿ. ಕನ್ನಡದ  ಪಾಲಿಗೆ  ಅತೀವ ಸಂತಸ ಅಲ್ಲದಿದ್ದರೂ ಕರ್ನಾಟಕದ ಮಟ್ಟಿಗೆ  ಸಣ್ಣ ಸಮಾಧಾನ ಸಿಕ್ಕಿದೆ. ತುಳುವಿನ ಮದಿಪು ,ಕೊಂಕಣಿಯ ಕೆ ಸೆರಾ ಸೆರಾ ಪ್ರಶಸ್ತಿ ಬಾಚಿಕೊಂಡಿವೆ. ಅಲ್ಲಮ ಅತ್ಯುತ್ತಮ ಚಲನ ಚಿತ್ರ ಪ್ರಶಸ್ತಿ ಹೊತ್ತು ತರುತ್ತಾನೆಂಬ ನಿರೀಕ್ಷೆ ಸುಳ್ಳಾಗಿದೆ . ಆದರೂ ಚಿತ್ರದ ಹಾಡುಗಳು- ಹಿನ್ನೆಲೆ ಸಂಗೀತಕ್ಕೆ ಬಾಪು ಪದ್ಮನಾಭ ,ಅತ್ಯುತ್ತಮ ಪ್ರಸಾದನಕ್ಕೆ ಹಿರಿಯ ಕಲಾವಿದ ರಾಮಕೃಷ್ಣ ಪ್ರಶಸ್ತಿ ಪಡೆದಿರುವುದು  ಅಲ್ಪತೃಪ್ತಿ .

ಕಳೆದ ಬಾರಿ ರಾಜ್ಯ ಪ್ರಶಸ್ತಿ ಪಡೆದ ಹಜ್ ಚಿತ್ರದ ನಿರ್ದೇಶಕ ನಿಖಿಲ್ ಮಂಜು ಈ ಬಾರಿ “Reservation” ಚಿತ್ರಕ್ಕೆ ರಾಷ್ಟ್ರಪ್ರಶಸ್ತಿಯನ್ನೇ ಗೆದ್ದು ತಂದಿದ್ದಾರೆ.  ಆದ್ರೆ ಹಜ್ ಚಿತ್ರವಾಗಲಿ,  “Reservation” ಆಗಲಿ ಎಷ್ಟು ಜನರನ್ನ ತಲುಪಿದೆ ?ತಲುಪಲಿದೆ ? ಅನ್ನುವುದು ಕಾಡುತ್ತಿರುವ ಪ್ರಶ್ನೆ. ಪ್ರಶಸ್ತಿ ಬಂದರೆ ಸಾಕೆ ? ಸಿನಿಮಾ ಜನರನ್ನು ತಲುಪುವುದು ಬೇಡವೇ ?

ಇರಲಿ , ಒಮ್ಮೆ ಬಾಲಿವುಡ್ ಕಡೆಗೆ ಕಣ್ಣಾಯಿಸಿದರೆ ನಮ್ಮ ನೆಲೆಯ ಅರಿವಾದೀತು .

ನೀರ್ಜಾ -ಈ ಬಾರಿಯ ಅತ್ಯುತ್ತಮ ಹಿಂದಿ ಚಲಚಿತ್ರ . ಅನೇಕ ದಾಖಲೆಗಳನ್ನು ತನ್ನದಾಗಿಸಿಕೊಂಡ ಹೆಗ್ಗಳಿಗೆ ಅದರದ್ದು. ನೈಜ ಕಥೆ ಆಧರಿಸಿ ಪ್ರೇಕ್ಷಕರನ್ನು ಕ್ಷಣಕ್ಷಣಕ್ಕೂ ಅವರಿಸಿಕೊಳ್ಳುವಂತೆ ಉಸಿರು ಬಿಗಿ ಹಿಡಿಯುವಂತೆ,  ಅದೂ  ನಾಯಕಿ ಪ್ರಧಾನವಾಗಿ  ಹಿಡಿದಿಡುವುದು ಸುಲಭದ ಮಾತಲ್ಲ. ನಿರ್ದೇಶಕ ಸಮರ್ಥನಿದ್ದರೆ ಮಾತ್ರ ಇದು ಸಾಧ್ಯವಾಗುವಂತಹದ್ದು.ಬೆರಳೆಣಿಕೆಯಷ್ಟು ಮಂದಿ ಹೊಸರೀತಿಯ ಪ್ರಯತ್ನದಲ್ಲಿದ್ದರೂ ರಾಷ್ಟ್ರಮಟ್ಟ ತಲುಪಿಲ್ಲ. ಮೂರ್ನಾಲು ಮಂದಿಗೇ ಮತ್ತೆ ಮತ್ತೆ ಪ್ರಶಸ್ತಿಗಳು . ಬಂದರೂ ಜನ ನೋಡಿ ಅರ್ಥಮಾಡಿಕೊಳ್ಳಲಾಗದ ಚಿತ್ರಗಳು.  ಕನ್ನಡದಲ್ಲಿ ನಿರ್ಜಾ ರೀತಿಯ  ಪ್ರಯತ್ನಗಳು ಯಾವ ಕಾಲಕ್ಕೋ? ನಮ್ಮಲ್ಲಿ ಸೃಜನಶೀಲತೆ, ಬದ್ಧತೆ , ಗೆದ್ದೇ ತೀರುವ ಛಲದ ಕೊರತೆ ಎದ್ದು ನಿಂತಿದೆ. ಮನರಂಜಿಸುತ್ತಲೇ ಸಾಮಾನ್ಯನನ್ನು ಅಸಾಮಾನ್ಯ ಚಿಂತನೆಯ ಕಡೆಗೆ ಕರೆದೊಯ್ಯುವ ,ಅದರ ರುಚಿ ಹತ್ತಿಸುವ  ತಾಕತ್ತು ಸದ್ಯಕ್ಕಂತೂ ಯಾರಲ್ಲೂ ಕಂಡಿಲ್ಲ. ಪ್ರೇಕ್ಷಕರನ್ನು ಪ್ರಬುದ್ಧರಾಗಿಸುವ ಇಚ್ಚಾಶಕ್ತಿ ಯಾವಕಾಲಕ್ಕೆ ಬರುವುದೋ?  ನಮ್ಮ ಮಾರ್ಕೆಟ್ ಚಿಕ್ಕದು ಎನ್ನುವ ಕಾರಣ ಅವರಿಗಿರುವ ಚಿಂತನೆಯ ಪರಿಧಿಯಷ್ಟೇ ಸಣ್ಣದು.

ಪಿಂಕ್ -ಸಾಮಾಜಿಕ ಪಿಡುಗನ್ನ ಆಧರಿಸಿದ ಅತ್ತ್ಯತ್ತಮ ಚಿತ್ರ ಪಟ್ಟಿಯಲ್ಲಿ ಪ್ರಥಮ ಸ್ಥಾನ ಗಳಿಸಿದೆ.ಹೆಣ್ಣು  ಇಲ್ಲ ಅಂದ್ರೆ ಇಲ್ಲ ಅಂತ ಅರ್ಥ ಅಷ್ಟೆ . ಪೂರ್ವಗ್ರಹ ಪೀಡಿತರಾದ  ಗಂಡು-ಹೆಣ್ಣು ಮನಸ್ಸುಗಳಿಗೂ “ಹೌದು” ನೀವು ಹೇಳುತ್ತಿರುವುದರಲ್ಲಿ ಅರ್ಥವಿದೆ ಅನ್ನಿಸಿದ ಚಿತ್ರ.

ಈ ಎರಡು ಚಿತ್ರಗಳನ್ನ ಅಕಸ್ಮಾತ್ ನೋಡಿಲ್ಲದಿದ್ದರೆ ಮಿಸ್ ಮಾಡದೆ ನೋಡಿಬಿಡಿ. ಕೇವಲ ಪ್ರಶಸ್ತಿಯ ಗೌರವ,ಹಣಕ್ಕಾಗಿ ಸಿನಿಮಾ ಮಾಡದೆ ಜನರ ಮನಸ್ಸಿನಲ್ಲಿ ಉಳಿಯುವ,ಪ್ರೇರೇಪಿಸುವ ,ರಂಜಿಸುವ ಸಿನಿಮಾಕ್ಕೆ ಇವು ಮಾದರಿ.

ಉಳಿದ ಚಿತ್ರಗಳ ಪಟ್ಟಿ ಇಲ್ಲಿದೆ .

 

ಅತ್ಯುತ್ತಮ ಪರಿಸರ ಚಿತ್ರ -The Tiger Who Crossed the Line

ಅತ್ಯುತ್ತಮ ನಟ -ಅಕ್ಷಯ್ ಕುಮಾರ್ (ರುಸ್ತುಮ್ )

ಅತ್ಯುತ್ತಮ ಶೈಕ್ಷಣಿಕ ಚಿತ್ರ – The Waterfalls

ಅತ್ಯುತ್ತಮ ಆತ್ಮಕಥಾನಕ ಚಿತ್ರ -Zikr Uss Parivash Ka

ಅತ್ಯುತ್ತಮ ಸಿನಿಮಾ ಪುಸ್ತಕ -Lata Mangeshkar (ಜೀವನಗಾಥೆ )

ಅತ್ಯುತ್ತಮ ಅನಿಮೇಟೆಡ್ ಚಿತ್ರ -Hum Chitra Banate Hain

ಅತ್ಯುತ್ತಮ ತಮಿಳು ಚಿತ್ರ -ಜೋಕರ್ 

ಅತ್ಯುತ್ತಮ ಗುಜರಾತಿ ಚಿತ್ರ -Wrong Side Raju

ಅತ್ಯುತ್ತಮ ಮರಾಠಿ ಚಿತ್ರ -Dashakriya

ಅತ್ಯುತ್ತಮ ಬಂಗಾಳಿ ಚಿತ್ರ – Bisarjan

ಅತ್ಯುತ್ತಮ ಮಕ್ಕಳ ಚಿತ್ರ -Dhanak, Hindi

ಅತ್ಯುತ್ತಮ ಹಿನ್ನೆಲೆ ಗಾಯಕಿ -Iman Chakraborty

ಅತ್ಯುತ್ತಮ ಹಿನ್ನೆಲೆ ಗಾಯಕ -Sunder Iyer

ಅತ್ಯುತ್ತಮ ಮಲೆಯಾಳಂ ಚಿತ್ರ -Maheshinite Pratikaram

 

 

 

 

ಹಿಂಗಿದ್ದಾನಪ್ಪ ನಮ್ “ರಾಜಕುಮಾರ”

“ರಾಜಕುಮಾರ” ನ ಕಥೆ 

ಸಿರಿವಂತ ಅಪ್ಪ-ಅಮ್ಮನ ಪ್ರೀತಿಯಲ್ಲಿ ಬೆಳೆದ ಅನಾಥನೊಬ್ಬ ಎಲ್ಲರನ್ನೂ ಅಪಘಾತದಲ್ಲಿ ಕಳೆದುಕೊಳ್ಳುತ್ತಾನೆ. ಬುದ್ದಿವಂತ, ಹಣವಂತನಾಗಿದ್ದರೂ ತನ್ನವರಿಲ್ಲದ ದೂರದೇಶದಲ್ಲಿ ಇರಲಾಗದೆ ಮತ್ತೆ ತನ್ನನ್ನು ಸಾಕಿದ  ಮೂಲನೆಲೆಗೇ ಬಂದು ನಿಲ್ಲುತ್ತಾನೆ. ಮಕ್ಕಳ ಅನಾಥಾಲಯವಾಗಿದ್ದ ಕಸ್ತೂರಿ ನಿವಾಸ ಮಕ್ಕಳಿಂದ ಅಸಡ್ಡೆಗೆ ಒಳಗಾದ ವೃದ್ಧರ ನೆಲೆಯಾಗಿರುತ್ತದೆ. ಅಲ್ಲಿನವರ ಜೊತೆಗೆ ಒಡನಾಡುತ್ತಾ, ಅವರ ಕಷ್ಟಗಳಿಗೆ ಕಿವಿಯಾಗುತ್ತಾ ಮತ್ತೆ ಮಕ್ಕಳ ಮನೆಗೆ ಸೇರಿಸುವ ಕಾಯಕದಲ್ಲಿ ಗೆಲ್ಲುತ್ತಾನೆ ರಾಜಕುಮಾರ(ಸಿದ್ದಾರ್ಥ ).ಜೊತೆಗೆ ಅನ್ಯಾಯದ  ವಿರುದ್ಧ ಸಿಡಿದು ಭ್ರಷ್ಟ ಮನಸ್ಥಿತಿಯನ್ನು ಪರಿವರ್ತಿಸುವ ಆದರ್ಶ ಯುವಕನ ಕಥೆ ರಾಜಕುಮಾರ .

ನಿರ್ದೇಶನ:

ಕನ್ನಡಿಗರ ಮನಸ್ಸಿನಲ್ಲಿ ಚಿರಸ್ಥಾಯಿಯಾಗಿರುವ ಡಾ. ರಾಜ್ಕುಮಾರ್  ಅಭಿನಯದ ಕಸ್ತೂರಿ ನಿವಾಸದ ಎಳೆಯನ್ನು  ಎಳೆದು ತಂದು ಭಾವನಾತ್ಮಕವಾಗಿ ಜನರನ್ನು ಗೆಲ್ಲುವ  ಪ್ರಯತ್ನವಿದೆ. ಆದರೆ ಅಲ್ಲಿನ ಕಥೆಯ ಮೇಲಿನ ಹಿಡಿತವಾಗಲಿ, ಮಡುಗಟ್ಟುವ ದುಃಖದ ಸನ್ನಿವೇಶಗಳನ್ನು, ಪ್ರೇಮದ ಪರಿತಾಪವನ್ನು ತೋರಿಸುವಲ್ಲಿ ನಿರ್ದೇಶಕ ಸಂತೋಷ್ ಆನಂದ್ ರಾಮ್ ಪರಿಣಿತಿಯ ಬರ ಎದ್ದು ಕಾಣುತ್ತದೆ. ಚಿತ್ರದ ಮೊದಲಾರ್ಧದಲ್ಲಂತೂ  ಪುನೀತ್ -ರಂಗಾಯಣ ರಘು ಹೊರತಾಗಿ ಮತ್ಯಾರ ಅಭಿನಯವು ಮನಸ್ಸಿಗಿಳಿಯುವುದಿಲ್ಲ. ರಂಗಾಯಣ ರಘು ಪ್ರತಿಭೆ ಬಳಕೆಯಾಗಿರುವುದು ಅಷ್ಟರಲ್ಲೇ ಇದೆ. ತನ್ನನ್ನು ಕಣ್ರೆಪ್ಪೆಯಂತೆ ಸಲಹಿದ ಸಾಕು ತಂದೆ-ತಾಯಿ ಇಡೀ ಕುಟುಂಬ ಇಲ್ಲವಾದಾಗ ನಾಯಕನ ಮುಖದಲ್ಲಿ ನೋವಿನ ತೀವ್ರತೆ ಕಾಣದಿರುವುದಾದರೂ ಹೇಗೆ ? ಮುಖದಲ್ಲೇ ಮುಗ್ದತೆ ತುಂಬಿರುವ ಪುನೀತ್ ರಂತಹ ನಟರಿಂದ ದುಃಖದ ಸನ್ನಿವೇಶಕ್ಕೆ ತಕ್ಕ ಭಾವವನ್ನು ತೆಗೆಯುವುದರಲ್ಲಿ ಸಂತೋಷ್ ನಿಜಕ್ಕೂ ಸೋತಿದ್ದಾರೆ.  ಕಥೆಯ ಕಥೆಯು ಗೋವಿಂದ ಗೋವಿಂದ ..

ಎರಡನೆಯ ಭಾಗದಲ್ಲಿ ಕಥೆಯನ್ನ ಹಿಡಿತಕ್ಕೆ ತೆಗೆದುಕೊಳ್ಳುವ ಪ್ರಯತ್ನ ಕಾಣುವುದು ನಿಜ. ಅನಂತ್ ನಾಗ್ ರಂಥಹ  ಅತ್ಯದ್ಭುತ ಪ್ರತಿಭೆಗೆ ಇನ್ನಷ್ಟು ಅವಕಾಶ ಕಲ್ಪಿಸಿದ್ದರೆ,ಕಥೆ ಹೇಳುವ ಕಲೆಯಲ್ಲಿ ಗಟ್ಟಿತನವಿದ್ದಿದ್ದರೆ ರಾಜಕುಮಾರ ಮತ್ತಷ್ಟು ಸಹನೀಯ. ಇಲ್ಲಿ ಸಂತೋಷ್ ಕಥೆ ಹೇಳುವಲ್ಲಿ,ಸನ್ನಿವೇಶ ಕಟ್ಟುವಲ್ಲಿ ತೋರಿದ ಪ್ರತಿಭೆಗಿಂತ ಹೆಚ್ಚಾಗಿ ಚಿತ್ರಪ್ರೇಮಿಗಳ ಹೃದಯದಲ್ಲಿ ನೆಲೆನಿಂತಿರುವ ಅಣ್ಣಾವ್ರನ್ನ ಕೆಲವೊಮ್ಮೆ ನೇರವಾಗಿ ಮತ್ತೊಮ್ಮೆ ಸಂಭಾಷಣೆಯ ಮೂಲಕ ನೆನಪಿಸಿ ನೋಡುಗರನ್ನ ಭಾವನಾತ್ಮಕವಾಗಿ ಹಿಡಿದಿಟ್ಟುಕೊಳ್ಳುವ ಪ್ರಯತ್ನವೇ ಎದ್ದುಕಾಣುತ್ತದೆ. ಅಲ್ಲಲ್ಲಿ ನಗೆಯುಕ್ಕ್ಕಿಸುವಂಥ ಸಂಭಾಷಣೆ ,ಹಾಸ್ಯಸನ್ನಿವೇಶಗಳನ್ನೂ ಕಟ್ಟಿ ಪ್ರೇಕ್ಷಕರನ್ನು ರಂಜಿಸುವಲ್ಲಿ ಗೆದ್ದಿರುವುದಂತೂ ನಿಜ.

 ಪುನೀತ್ ಅಭಿನಯದ ಕಾಣದಂತೆ ಮಾಯವಾದನು , ನನ್ನ ಉಡುಪು ನಿನ್ನದು ಹಾಡಿನ ದೃಶ್ಯಗಳು ನೋಡಿದಷ್ಟೂ ಖುಷಿಕೊಡುವಂಥವೇ. ಅಂಥವುಗಳನ್ನ ಬಳಸಿಕೊಂಡೇ ಭಾವುಕ,ಮುಗ್ದ ಸಿನಿಮಾ ಪ್ರೇಮಿಗಳನ್ನು ಗೆಲ್ಲುವ ಯೋಜನೆ  ಶುದ್ಧ ಸತ್ಯ. ಆ ಯೋಚನೆ ಸಂತೋಷ್ ಗೆ ಫಲ ಕೊಡುವುದರಲ್ಲೇನು ಸಂಶಯವಿಲ್ಲ. ಯಾಕೆಂದರೆ  ಕನ್ನಡದ ಕಣ್ಮಣಿ ರಾಜಣ್ಣ ಕನ್ನಡಿಗರ ಮನದಲ್ಲಿ ಇವತ್ತಿಗೂ ಮರೆಯಾಗದಿರುವ ಮಾಣಿಕ್ಯ. ಬಿಗಿ ಎನಿಸದ ಕಥಾಹಂದರ ಮಧ್ಯೆಯೂ ಹೆತ್ತಮಕ್ಕಳ ಪ್ರೀತಿಯಿಲ್ಲದೆ ನಲುಗುವ ವೃದ್ಧ ಜೀವಗಳ ಬಗ್ಗೆ ಕನಿಕರ ಹುಟ್ಟುವ ದೃಶ್ಯಗಳನ್ನು ಹೆಣೆದಿರುವ ಸಂತೋಷ್ ಪ್ರಯತ್ನವನ್ನು ಮೆಚ್ಚಲೇಬೇಕು.

 ಅಭಿನಯ:

ಪುನೀತ್ ನಗುವೊಂದೇ ಸಾಕು ಅಭಿಮಾನಿ ದೇವರುಗಳನ್ನು ಮೆಚ್ಚಿಸಲು. ಅಲ್ಲಿ ಮುಗ್ದತೆ ಇದೆ ನಿಜ. ಬಾಲ್ಯದಿಂದಲೂ ತನ್ನ ಮುಗ್ದ,ಸಹಜ ಅಭಿನಯದಿಂದ ಆಪ್ತನೆನಿಸುವ ಪುನೀತ್ ಈ ಚಿತ್ರದ  ಒಂದು ಸನ್ನಿವೇಶದಲ್ಲಿ ಮಾತ್ರ (ಅಪಘಾತದಲ್ಲಿ  ತನ್ನವರನ್ನು ಕಳೆದುಕೊಂಡು ಮತ್ತೆ ಅನಾಥತೆ ಅನುಭವಿಸುವಾಗ) ಇನ್ನು ಅಭಿನಯ ಮಡುಗಟ್ಟಬೇಕಿತ್ತು ಎನ್ನುವಂಥ ಅಸಮಾಧಾನ ಹುಟ್ಟಿಸುತ್ತಾರೆ. ಅದರ ಹೊರತಾಗಿ ಯಾವ ಸನ್ನಿವೇಶದಲ್ಲೂ ಅಪ್ಪು ಆಪ್ತರಾಗದೆ ಉಳಿಯುವುದಿಲ್ಲ. ಪವರ್ ಸ್ಟಾರ್ ಎಂಬ ಬಿರುದಿಗೆ ಕುಂದಿಲ್ಲದಂತಹ ಅಭಿನಯ  ಪ್ರೇಕ್ಷಕರಿಗೆ ಹಬ್ಬವೆನಿಸುವಂತಿವೆ. ಡಾನ್ಸ್ ವಿಷ್ಯ ಬಂದ್ರೆ ಮೆಚ್ಚದೆ ವಿಧಿಯಿಲ್ಲ.

ನಾಯಕಿ ಪ್ರಿಯಾ ಆನಂದ್ ಒಳ್ಳೆಯ ನಟಿ. ಇಂಗ್ಲಿಷ್ -ವಿಂಗ್ಲೀಷ್ ಚಿತ್ರದಲ್ಲಿ ಸೊಗಸಾಗಿ ನಟಿಸಿದ ಅನುಭವಸ್ಥೆ. ಆದ್ರೆ ನಿರ್ದೇಶಕರ ಕೃಪೆ ಅವಕಾಶಕ್ಕೆ ಕೊಕ್ಕೆ ಬಿದ್ದಂತಾಗಿದೆ.

ಅನಂತ್ ನಾಗ್ ಪ್ರಕಾಶ್ ರೈ, ಅಚ್ಯುತ್ ಕುಮಾರ್ , ದತ್ತಣ್ಣ ,ಚಿಕ್ಕಣ್ಣ ,ಭಾರ್ಗವಿ ಎಲ್ಲರದ್ದೂ ಎಂದಿನಂತೆ ಅಭಿನಯದಲ್ಲಿ ಮೇಲುಗೈ . 

ನೃತ್ಯ ನಿರ್ದೇಶನದಲ್ಲಿ  ಹರ್ಷರಿಗೆ ಫುಲ್ ಮಾರ್ಕ್ಸ್ ಕೊಡಲೇಬೇಕು.

ಹರಿಕೃಷ್ಣ ಹಾಡುಗಳಿಗೆ ಕೊಟ್ಟ ಸಂಗೀತ ಚೆನ್ನವಿದೆ. ಚಿತ್ರದ ಮೊದಲಾರ್ಧದ ಸನ್ನಿವೇಶಗಳಿಗೆ ಹಿನ್ನೆಲೆ ಸಂಗೀತದಿಂದ  ಮತ್ತಷ್ಟು ಮೆರೆಗು ತುಂಬಬಹುದಿತ್ತು.

ಪುನೀತ್ ಗಿರುವ ಪ್ರತಿಭೆ ಬಳಸಿ ಚಿತ್ರವನ್ನು ಇನ್ನಷ್ಟು ಗಟ್ಟಿಯಾಗಿ ರೂಪಿಸಬಹುದಿತ್ತು ಅನ್ನಿಸುವುದು ನಿಜ. ಡಾ. ರಾಜ್ಕುಮಾರ್ ತಮ್ಮನ್ನೇ ಮತ್ತೆ ಮತ್ತೆ ಹೊಗಳಿಕೊಳ್ಳುವ ಬಿಲ್ಡ್ ಅಪ್ ಡೈಲಾಗ್ ಗಳಿಂದ ನಟಸಾರ್ವಭೌಮ ಅನ್ನಿಸಿದವರಲ್ಲ. ಅವರ ಚಿತ್ರಗಳಲ್ಲಿ ಗಟ್ಟಿಯಾದ ಕಥಾಹಂದರದಜೊತೆಗೆ ಪ್ರೇಕ್ಷಕರನ್ನು ರಂಜಿಸುತ್ತಲೇ ಸುಸಂಕೃತರಾಗಿಸುವ ಎಲ್ಲ ರೀತಿಯ ಹೂರಣವಿತ್ತು. ಅದಿಲ್ಲಿ ಸಾಧ್ಯವಾಗಿದ್ದರೆ ರಾಜಕುಮಾರ  ಪ್ರೇಕ್ಷಕರು ಎಂದೆಂದೂ  ಮರೆಯದ ಮುತ್ತಿನ ಮಣಿಯಾಗುತ್ತಿದುದರಲ್ಲಿ ಸಂಶಯವಿಲ್ಲ.

ಇಷ್ಟೆಲ್ಲಾ ಹೇಳಿದ ಮೇಲೆ ಹೇಳಲೇಬೇಕಾದ ಬಹುಮುಖ್ಯ ವಿಷಯವೆಂದರೆ ರಾಜಕುಮಾರನನ್ನ ತಪ್ಪದೆ ನೋಡಿ. ಕೊರತೆಗಳ ನಡುವೆಯೂ ನೋಡಿ ಖುಶಿಪಡಬಹುದಾದ ಸಿನಿಮಾವಿದು. ಇಲ್ಲಿ ರಂಜನೆ -ಬೋಧನೆ ಎಲ್ಲವೂ ಇದೆ. ಮನೆಮಂದಿಯಲ್ಲಾ ನೋಡಿ ಮತ್ತೆ ಅಣ್ಣಾವ್ರನ್ನ ಮನತುಂಬಿಕೊಳ್ಳಿ. 

ಚಕ್ರವರ್ತಿ ಟ್ರೈಲರ್’ನಲ್ಲಿ ವಿಶ್ವರೂಪ ದರ್ಶನ!!

ದರ್ಶನ್ ತೂಗುದೀಪ ಹೊಸ ವರ್ಷನ್ ?
ಡಿ ಅಂದ್ರೆ ಡೈಯಲಾಗು.
ದರ್ಶನ್ ಅಂದ್ರೆ ಸೌಂಡು.
ಮಾತೇ ಇಲ್ಲದ ದರ್ಶನ್ ಇಂಟ್ರಡಕ್ಷನ್ ಊಹಿಸೋಕಾಗಲ್ಲ. ದರ್ಶನ್ ಸೈಲೆಂಟಾಗಿದ್ರೆ ನೋಡೋಕಾಗಲ್ಲ. ಅಬ್ಬರಿಸಿ ಬೊಬ್ಬಿರಿಯುವ ವಿಲನ್ ಎದುರು ನಿಂತು ದಬದಬನೆ ನಾಲ್ಕು ಡೈಲಾಗ್ ಹೊಡೆದರೇನೇ ಅವರ ಅಭಿಮಾನಿಗಳಿಗೆ ಸಮಾಧಾನ.
ಅಂಥಾದ್ದೇನಿದೆ ?
ಆದರೆ ಅದ್ಯಾವುದೂ ಇರದೇ ಇರುವ ಕಾರಣದಿಂದಲೇ ಚಕ್ರವರ್ತಿ ಟ್ರೇಲರ್ ಡಿಫರೆಂಟು. ಹೇಳಿ ಕೇಳಿ ಆರಡಿ ಎತ್ತರದ ದರ್ಶನ್ ಬೆಳ್ಳಿತೆರೆ ಮೇಲೆ ಗತ್ತಲ್ಲಿ ನಡೆದುಬಂದರೇನೇ ಹಬ್ಬ. ಅಂಥದ್ದರಲ್ಲಿ ದರ್ಶನ್ ಅಡಿಯಿಂದ ಮುಡಿಯವರೆಗೂ ಕ್ಯಾಮೆರಾ ಇಟ್ಟು ಸೈಲೆಂಟಾಗಿಯೇ ವಿಶ್ವರೂಪ ದರ್ಶನ ಮಾಡಿಸಿದ್ದಾರೆ ನಿರ್ದೇಶಕ ಚಿಂತನ್. ಹಾಗಾಗಿ ಇದನ್ನು ದರ್ಶನ್ ರ ಹೊಸ ವರ್ಷನ್ ಅಂತನ್ನಲು ಅಡ್ಡಿಯೇನಿಲ್ಲ.ಸುಮಾರು ಇನ್ನೂರು ದೃಶ್ಯಗಳನ್ನ ಸರಸರಾಂತ ಸರಿದು ಹೋಗುವಂತೆ ಮಾಡಿ ಹಾ ..?ಏನಿದೆ ಇದರಲ್ಲಿ ನೋಡ್ಬೇಕಲ್ಲ ಅನ್ನೋ ಕುತೂಹಲ ಹುಟ್ಟಿಸಿದ್ದಾರೆ. ದೃಶ್ಯಗಳಂತೂ ಬಹಳ ರಿಚ್ ಆಗಿ ಕಾಣ್ತಾ ಇವೆ.
https://www.facebook.com/ciniadda1/
ಡಾನ್ ಸಿನಿಮಾ ಕತೆಗಳು ನಮಗೆ ಹೊಸದೇನಲ್ಲ. ಹಳೇ ಕಾಲದ ಸಿನಿಮಾಗಳಿಂದ ಹಿಡಿದು ಇತ್ತೀಚಿನ ಕಬಾಲಿವರೆಗೂ ಬೇಕಾದಷ್ಟು ಸಿನಿಮಾಗಳು ಬಂದು ಹೋಗಿವೆ. ಆದರೆ ಅದೇ ಡಾನ್ ಕತೆಯನ್ನು ಹೇಗೆ ತೋರಿಸುತ್ತಾರೆ ಅನ್ನುವುದು ಲೆಕ್ಕಕ್ಕೆ ಬರುತ್ತದೆ.
 ಮತ್ತೆ ಚಾಲೆಂಜಿಂಗ್  ಸ್ಟಾರ್  ಪರ್ವ ಬರಲಿದೆ ಅನ್ನೋ ಸಾಲುಗಳು  ಟ್ರೈಲರ್ನಲ್ಲಿ ಸಕ್ಕತಾಗೆ ಓಡಾಡಿವೆ.
ಯುಗಾದಿ ಹಬ್ಬದ ನೆಪದಲ್ಲಿ ಬಂದಿರೋ ಚಕ್ರವರ್ತಿಯ ಹೊಸ ಟ್ರೈಲರ್ ದರ್ಶನ್  ಅಭಿಮಾನಿಗಳಿಗಂತೂ  ಭರ್ಜರಿ ಹಬ್ಬವಾಗುತ್ತಿದೆ.  ಚಕ್ರವರ್ತಿ ಫ್ರೆಶ್ ಆಗಿ ಕಾಣಿಸುತ್ತಿದ್ದಾನೆ.ಸಿನಿಮಾ ಎಷ್ಟು ಫ್ರೆಶ್ ಆಗಿದೆ ಅಂತ ಕಾದು ನೋಡಬೇಕಷ್ಟೇ.

ದಿ ವಿಲನ್ ಫಸ್ಟ್ ಲುಕ್ ನಲ್ಲಿ ವಿಶೇಷ ಏನಿದೆ ಗೊತ್ತಾ?

ನೋಡಿದಾಕ್ಷಣ ಸೆಳೆಯುವ ಹಸಿರು -ನೀಲಿ ಕಣ್ಣು.
ಕಿವಿ ಮೇಲೆ ಎಕ್ಸ್ ಮಾರ್ಕು.
ಮುಖದಲ್ಲಿ ಚಿಮ್ಮುವ ರೋಷ
ಕಿವಿಯಲ್ಲಿ ಓಲೆ
ಸಿಡಿದು ನಿಂತಿರೋ ಮುಂದಲೆ
ಬಿಗಿದ ತುಟಿಗಳು
ಅಟ್ಯಾಕ್ ಲೈಕ್ ಎ  ಟೈಗರ್ ತರಹದ ಮುಖಭಾವ
 ಎದುರು ನಿಂತವರನ್ನ ಹಿರಿಯುವಂಥ ಸೀಳು ನೋಟ
ಅದು ಸುದೀಪ್!!
ಜಗ ಜಟ್ಟಿಯಂತೆ  ಜುಟ್ಟು ಕಟ್ಟಿರುವ  ಕೂದಲು.
ಗ್ರೀಕ್ ಯೋಧನಂತಹ ತೀಕ್ಷ್ಣ ಗುರಿಕಾರನ ಕಣ್ಣೋಟ.
ಬಿಟ್ಟೂ  ಬಿಡದೆ ಕಾಡುವುದು ಆ  ನೋಟ.
ಪಕ್ಕಾ ಲೆಕ್ಕ ಹಾಕಿ ಎದುರಾಳಿಯನ್ನ ಬಡಿಯುವ ಬಿರುಸು
ಅದು ಹ್ಯಾಟ್ರಿಕ್ ಹೀರೊ ಶಿವರಾಜಕುಮಾರ್ !!
ದಿ ವಿಲನ್ ಎಂಬ ಬಹುನಿರೀಕ್ಷಿತ ಸಿನಿಮಾದ ಫಸ್ಟ್ ಲುಕ್ ನಲ್ಲಿ ಏನೋ ಅಡಗಿದೆ. ಮತ್ತೆ ಮತ್ತೆ ನೋಡುವಂತಿದೆ. ಇಬ್ಬರ ಮುಖ ಕುತ್ತಿಗೆಯ ಸುತ್ತ ಚೈನೀಸ್ ಅಕ್ಷರಗಳು , ಇಂಗ್ಲಿಷ್ ಅಂಕಿಗಳು ಕಾಣ್ತಾ ಇವೆ. ಒಳಗೆ ಏನೇನು ಅಡಗಿದೆಯೋ ಕಾದು ನೋಡೋದಷ್ಟೇ ಚಿತ್ರರಸಿಕರ ಕೆಲಸ .ನಿರ್ದೇಶಕ ಪ್ರೇಮ್ ಸಿನಿಮಾ ಪ್ರೇಮಿಗಳಿಗೆ ಮಸ್ತ್ ಮೋಡಿ ಮಾಡೋ ಮುನ್ಸೂಚನೆಯಂತೂ ಫಸ್ಟ್ ಲುಕ್ ನಲ್ಲಿ ಜೋರಾಗೆ ಕಾಣ್ತಾ ಇದೆ.
 ಸಿನಿಮಾ  ಕಾಡುವಂತಿರಲಿ , ಸೂಪರ್ ಹಿಟ್ ಆಗಲಿ ಅನ್ನೋದು ciniadda.com  ಹಾರೈಕೆ.

Like Us, Follow Us !

120,431FansLike
1,826FollowersFollow
1,573FollowersFollow
4,315SubscribersSubscribe

Trending This Week