26 C
Bangalore, IN
Monday, September 24, 2018

ಜನರನ್ನೆಂದೂ ನಿರಾಸೆ ಮಾಡುವುದಿಲ್ಲ ಎಂದ ಉಪೇಂದ್ರ “ರಿಯಲ್ ” ಪಾಲಿಟಿಕ್ಸ್ ಶುರು !

ಆಶ್ವಾಸನೆಗಳನ್ನೇ ಕೇಳಿ ಕೇಳಿ ಬೇಸತ್ತಿರುವ ಜನರಿಗೆ ಹೊಸ ದಾರಿ ತೋರುವ ಭರವಸೆಯಲ್ಲಿರುವ ಉಪೇಂದ್ರ ಸಂಪೂರ್ಣ ಬದಲಾವಣೆ ಎಂಬ ಧ್ಯೇಯದೊಂದಿಗೆ “ಕರ್ನಾಟಕ ಪ್ರಜ್ಞಾವಂತ ಪಕ್ಷ ” ವನ್ನು ಇಂದು ಹುಟ್ಟುಹಾಕಿದ್ದಾರೆ .

ಕುಟುಂಬಸ್ಥರಾದಿಯಾಗಿ ಬೇರೆ ಬೇರೆ ಜಿಲ್ಲೆಗಳಿಂದಲೂ ಬಂದಿದ್ದ ಅಭಿಮಾನಿ ವರ್ಗವೆಲ್ಲ ಖಾಕಿ ಧರಿಸಿದ್ದರು. ಪಕ್ಷದ ಚಿಹ್ನೆ ಆಟೋ ಎಂಬುದರ ಮುನ್ಸೂಚನೆಯೂ ಇದಾಗಿತ್ತು. ಉದ್ಘಾಟನೆಯನ್ನ ಪತ್ರಕರ್ತ ಜೋಗಿ ಸೇರಿದಂತೆ ಹಲವು ಮಾಧ್ಯಮದವರಿಂದ  ಮಾಡಿಸಿದ್ದು  ಉಪೇಂದ್ರ ಬುದ್ಧಿವಂತಿಕೆಗೆ ಸಾಕ್ಷಿ .

 ಉಪೇಂದ್ರ  ನುಡಿದಂತೆ “ಕರ್ನಾಟಕ ಪ್ರಜ್ಞಾವಂತ ಪಕ್ಷ”ದ ಉದ್ದೇಶ, ಕಾರ್ಯವೈಖರಿಯ  ಪ್ರಮುಖ ಅಂಶಗಳು ಹೀಗಿವೆ.

-ಜನರಿಗೆ ಪಾರದರ್ಶಕ ಆಡಳಿತ ನೀಡುವುದೇ ಕೆಪಿಜೆಪಿ ಸಿದ್ಧಾಂತ

-ಸಂವಿಧಾನದ ಪ್ರಕಾರ ಪಕ್ಷದ ಸದಸ್ಯತ್ವ ಅರ್ಜಿಯಲ್ಲಿ ಜಾತಿ ಕಾಲಂ ಇದೆ. ನಮ್ಮ ಪಕ್ಷದಲ್ಲಿ ಜಾತಿಯಿಲ್ಲ. 

-ನನ್ನ ಸಿನಿಮಾ ಬುದ್ಧಿವಂತರಿಗೆ  ಪಕ್ಷ ಪ್ರಜ್ಞಾವಂತರಿಗೆ

-ಎಲ್ಲರಿಗೂ ಉಚಿತ ಶಿಕ್ಷಣ ಸಿಗುವಂತಾಗಬೇಕು

-ಎಲ್ಲ ರಂಗದಲ್ಲೂ ಸಂಪೂರ್ಣ ಬದಲಾವಣೆ ತರಬೇಕು

ಕೌಶಲ್ಯಯುಕ್ತ ಶಿಕ್ಷಣ ವ್ಯವಸ್ಥೆ ತರಬೇಕಿದೆ

-ಚುನಾವಣೆಗೆ ನಿಲ್ಲಲು ಇನ್ನು ಐದು ವರುಷ ಬೇಕಾದರೂ ಕಾಯಲು ಸಿದ್ದ .

-ಜನರಿಗೆ ನಿರಾಸೆಯನ್ನಂತೂ ಮಾಡುವುದಿಲ್ಲ . 

-ಇನ್ನೂರ ಇಪ್ಪತ್ತನಾಲ್ಕು ಕ್ಷೇತ್ರಗಳಲ್ಲಿಯೂ ಅಭ್ಯರ್ಥಿಗಳು ಸಿದ್ದ .

ನಮಗೆ ಸ್ಮಾರ್ಟ್ ಸಿಟಿಯಲ್ಲ, ಸ್ಮಾರ್ಟ್ ವಿಲೇಜ್ ಬೇಕು

ನವೆಂಬರ್ ಹತ್ತನೇ ತಾರೀಕು ಕೆಪಿಜೆಪಿ ಮೊಬೈಲ್ ಅಪ್ಲಿಕೇಷನ್, ವೆಬ್ ಸೈಟ್ ಆರಂಭ

-ನಿಮ್ಮ ಐಡಿಯಾಗಳನ್ನು ನಮಗೆ ಹೇಳಿ, ನಿಮ್ಮ ಪರವಾಗಿ ನಾನು ಪ್ರಚಾರ ಮಾಡ್ತೀನಿ.

ಹೊಸ ಆಶಾವಾದ ಬಿತ್ತಲು  ಹೊರಟಿರುವ ಉಪೇಂದ್ರ ಹೊಸ ಪಕ್ಷದ ಉದ್ಘಾಟನೆಗೆ ಹಾಜರಿದ್ದ ಹೆಸರಾಂತ ನಟಿ ಉಪೇಂದ್ರ ಪತ್ನಿ ಪ್ರಿಯಾಂಕಾ ಜೊತೆಗೆ ಗೆಳೆಯರಾದ ಗುರುಕಿರಣ್ , ವಿ ಮನೋಹರ್ ,ಕುಮಾರ್ ಗೋವಿಂದ್ ಮೊದಲಾದವರ ಉಪಸ್ಥಿತಿ ಕಾರ್ಯಕ್ರಮಕ್ಕೆ ಮೆರಗು ತುಂಬಿತ್ತು .

 

 

 

 

 

 

 

 

 

 

 

ತಾರಕ್ ಸಿನಿಮಾ ವಿಮರ್ಶೆ ವಿಡಿಯೋ ಇಲ್ಲಿದೆ ನೋಡಿ .

ತಾರಕ್ ಸಿನಿಮಾ ಹೇಗಿತ್ತು ? ಸಂಪೂರ್ಣ ವಿಮರ್ಶೆ ಈ ವಿಡಿಯೋದಲ್ಲಿದೆ

ದೀಪಿಕಾ ಪಡುಕೋಣೆಯನ್ನು ಸೂರ್ಪನಖಿ  ಮಾಡ್ತೇವೆ!

ಬಾಲಿವುಡ್​ನ ಮೋಸ್ಟ್​ ಎಕ್ಸ್​ಪೆಕ್ಟೆಡ್​ ಚಿತ್ರ ಪದ್ಮಾವತಿ ಬಿಡುಗಡೆಗೆ ದಿನಗಣನೆ ಆರಂಭವಾಗಿರುವ ಬೆನ್ನಲ್ಲೇ ಸಿನಿಮಾ ವಿರುದ್ಧ ಭಾರೀ ಆಕ್ರೋಶ ಭುಗಿಲೇಳುತ್ತಿದೆ.. ಸಂಜಯ್​ ಲೀಲಾ ಬನ್ಸಾಲಿ ನಿರ್ಮಾಣದ ಈ ಚಿತ್ರ ಬಿಡುಗಡೆ ಆಗಲು ಬಿಡುವುದಿಲ್ಲ ಅಂತಾ ಕರ್ಣಿಸೇನಾ ಸಂಘಟನೆ ಮುಖ್ಯಸ್ಥ ಲೋಕೇಂದ್ರ ಸಿಂಗ್​ ಕಾಲ್ವಿ ತಿಳಿಸಿದ್ದು,  ಒಂದು ವೇಳೆ ನಮ್ಮೆಲ್ಲರ ವಿರೋಧದ ನಡುವೆ ಪದ್ಮಾವತಿ ಚಿತ್ರ ಏನಾದ್ರೂ ರಿಲೀಸ್​ ಆದ್ರೆ, ಡಿಸೆಂಬರ್​ 1ರಂದು ಇಡೀ ಭಾರತ್ ಬಂದ್​ಗೆ ಕರೆ ನೀಡಲಾಗುವುದು ಅಂತಾ ಎಚ್ಚರಿಕೆ ನೀಡಿದ್ದಾರೆ.. ಈ ಚಿತ್ರದಲ್ಲಿ ಇತಿಹಾಸದ ಅಂಶಗಳನ್ನು ತಿರುಚಲಾಗಿದ್ದು, ಚಿತ್ರ ನಿರ್ಮಾಣಕ್ಕೆ ದುಬೈನಿಂದ ಹಣಕಾಸಿನ ನೆರವು ಬಂದಿದೆ ಎಂದು ಲೋಕೇಂದ್ರ ಸಿಂಗ್​​ ಕಾಲ್ವಿ ವಾಗ್ದಾಳಿ ಮಾಡಿದ್ದಾರೆ.
ದೀಪಿಕಾ ಪಡುಕೋಣೆಯನ್ನು ಸೂರ್ಪನಖಿ  ಮಾಡ್ತೇವೆ..!
ಬಾಲಿವುಡ್​ನ ಪದ್ಮಾವತಿ ಚಿತ್ರದಲ್ಲಿ ನಟಿ ದೀಪಿಕಾ ಪಡುಕೋಣೆ ಆಕ್ಟ್​ ಮಾಡಿದ್ದಾರೆ. ಒಂದು ವೇಳೆ ವಿರೋಧ ಲೆಕ್ಕಿಸದೆ ಚಿತ್ರ ಬಿಡುಗಡೆ ಮಾಡಿದರೆ, ಪುರಾಣ ಕಾಲದ ಸೂರ್ಪನಖಿಗೆ ಆದ ಘಟನೆ ನಟಿ ದೀಪಿಕಾ ಪಡುಕೋಣೆಗೆ ಮರುಕಳಿಸಲಿದೆ ಅಂತಾ ಎಚ್ಚರಿಸಿದ್ದಾರೆ. ಅಂದ್ರೆ ಸೂರ್ಪನಖಿ ರೀತಿ ದೀಪಿಕಾ ಪಡುಕೋಣೆಯ ಮೂಗನ್ನು ಕತ್ತರಿಸುತ್ತೇವೆ ಅಂತಾ ಎಚ್ಚರಿಸಿದ್ದಾರೆ.
ಕಾನೂನು ಸುವ್ಯವಸ್ಥೆ ಕಷ್ಟ ಅಂದ್ರು ಯೋಗಿ ಆದಿತ್ಯನಾಥ..!
ಉತ್ತರ ಭಾರತದಲ್ಲಿ ಪದ್ಮಾವತಿ ಬಿಡುಗಡೆಗೆ ತೀವ್ರ ಆಕ್ರೋಶ ವ್ಯಕ್ತವಾಗಿರುವ ಬೆನ್ನಲ್ಲೇ ಉತ್ತರ ಪ್ರದೇಶ ಸರ್ಕಾರ ಒಂದಡಿ ಮುಂದಿಟ್ಟಿದ್ದು, ಡಿಸೆಂಬರ್​ 1ನೇ ತಾರೀಕು ಸಿನಿಮಾ ಬಿಡುಗಡೆ ಆಗೋದ್ರಿಂದ ಕಾನೂನು ಸುವ್ಯವಸ್ಥೆ ನಿರ್ವಹಣೆ ಮಾಡೋದು ಕಷ್ಟ ಅಂತಾ ಹೇಳಿದ್ದು, ಸಿನಿಮಾ ಬಿಡುಗಡೆಗೆ ಮಾಡದಿರುವ ಬಗ್ಗೆ ಕೇಂದ್ರ ಸರ್ಕಾರದ ಮಾಹಿತಿ ಮತ್ತು ಪ್ರಸಾರ ಇಲಾಖೆಗೆ ಉತ್ತರ ಪ್ರದೇಶ ಪ್ರಿನ್ಸಿಪಾಲ್​ ಸೆಕ್ರೇಟ್ರಿ ಪತ್ರ ಬರೆದಿದ್ದಾರೆ..

ಪ್ರಥಮ್ ಮಾಳವಿಕಾ ‘ಸೀಕ್ರೆಟ್” ರೂಮ್ ಸೀಕ್ರೆಟ್ .

ಕಲರ್ಸ್ ವಾಹಿನಿಯ ಬಿಗ್ ಬಾಸ್ ನಲ್ಲಿ ಪ್ರಥಮ್ , ಮಾಳವಿಕಾ ಒಟ್ಟಿಗೆ ಎಲಿಮಿನೇಟ್ ಆಗಿದ್ದಾರಂತೆ ಅನ್ನುವ ಸುದ್ದಿ ಹರಿದಾಡುತ್ತಿದೆ. ಆದ್ರೆ ಆಗಿರುವುದು ಇಷ್ಟೇ.

ಮಾಳವಿಕಾ, ಪ್ರಥಮ್ ಇಬ್ಬರನ್ನೂ ಮನೆಯಿಂದ ಹೊರಗೆ ಅಂದ್ರೆ ಸೀಕ್ರೆಟ್ ರೂಮಿನಲ್ಲಿ ಇರಿಸಲಾಗಿದೆ. ತಾವಿಲ್ಲದ ಹೊತ್ತಲ್ಲಿ ಇಡೀ ಮನೆಯ ಜನ ಏನು ಮಾತಾಡಿಕೊಳ್ತಾರೆ ಅನ್ನುವಂಥದ್ದು ಇಬ್ಬರಿಗು ತಿಳಿಯಲಿದೆ. ಇತ್ತೀಚಿಗೆ ಮಾಳವಿಕಾ ಸ್ವಲ್ಪ ಬದಲಾದಂತೆ ಕಾಣುತ್ತಿದ್ದಾರೆ. ಅದೂ ಕೂಡ ಗೆಲ್ಲುವ ಗೇಮ್ ಪ್ಲಾನ್ ಅಷ್ಟೇ ಅನ್ನುವುದು ಬಲ್ಲವರ ಅನಾಲಿಸಿಸ್.

bigboss-pratham-malavika

“ಮಾಳವಿಕಾ ಗೆಲುವು ಈಗಾಗಲೇ ನಿರ್ಧಾರವಾಗಿದೆ. ಇದೆಲ್ಲ ಸುಮ್ಮನೆ ಗಿಮಿಕ್ ಅಷ್ಟೇ “ಅನ್ನುವುದು ಹೆಸರು ಹೇಳಲು  ಇಚ್ಚಿಸದ ಬಿಗ್ ಬಾಸ್ ಟೀಮ್  ಸದಸ್ಯರೊಬ್ಬರು ciniadda.com ಗೆ ನೀಡಿದ ಸುಳಿವು. ಇದರ ಸತ್ಯಾಸತ್ಯತೆ ಎಷ್ಟಿದೆಯೋ ಕಾದು ನೋಡಬೇಕು.

ಇನ್ನೇನು ಮುಗಿದೇ ಹೋಯ್ತು ಬಿಗ್ ಬಾಸ್ ಅಂದುಕೊಳ್ಳುವಷ್ಟರಲ್ಲೇ ಇಲ್ಲ ಇಲ್ಲ ಇದೇ ತಿಂಗಳು 29ರ ತನಕ ಮುಂದುವರೆಯಲಿದೆ ಅಂತ ಶೂಟಿಂಗ್ ವೇಳೆ  ಸುದೀಪ್ ಘೋಷಿಸಿದ್ದಾರಂತೆ.

ಒಂದಂತೂ ನಿಜ ಕಳೆದ ಸೀಸನ್ಗಳಿಗೆ ಹೋಲಿಸಿದರೆ  ಈ ಬಾರಿಯ ಬಿಗ್ ಬಾಸ್ ನೋಡುವವರ ಸಂಖ್ಯೆ ಕಡಿಮೆಯಾಗಿ ಟಿಆರ್ಪಿ ಕುಸಿದು ಬಿದ್ದಿರುವುದಂತೂ ಸತ್ಯ. ಕಡೆ ದಿನದವರೆಗೂ ಇನ್ನು ಏನೇನು ಗಿಮಿಕ್ ಗಳು ಸೃಷ್ಟಿಯಾಗುತ್ತವೋ ನೋಡಬೇಕು.

 

 

ಹೆಬ್ಬುಲಿ – 2 ಮಾಡೋಲ್ವಾ ? ಎಲ್ಲರಂತೆ ಆಗೋಲ್ವಾ ಕಿಚ್ಚ ಸುದೀಪ್?

ಕಿಚ್ಚ ಸುದೀಪ್

ಎರಡು ಮೂರು ದಿನಗಳಿಂದ ಸುದೀಪ್ ಬಗ್ಗೆ ನಾನಾ ಸುದ್ದಿಗಳು ಹರಿದಾಡುತ್ತಿದ್ದವು.

ಕೆಂಪೇಂಗೌಡ ಭಾಗ 2 ಸಿನಿಮಾ ಬರತ್ತಂತೆ, ಅದನ್ನು ಸುದೀಪ್ ನಿರ್ದೇಶನ ಮಾಡುತ್ತಿದ್ದಾರೆ ಅನ್ನೋದು ಒಂದು ಸುದ್ದಿ. ಆ ಸುದ್ದಿ ಸಿಂಗಂ 2 ಸಿನಿಮಾ ಬಂದಾಗಲೂ ಹರಿದಾಡುತ್ತಿತ್ತು. ಸಿಂಗಂ 1 ಇಲ್ಲಿ ಕೆಂಪೇಗೌಡ ಆಗಿತ್ತು. ಅದೇ ಥರ ಸಿಂಗಂ 2 ಸಿನಿಮಾ ಬಂದಾಗ ಕೆಂಪೇಗೌಡ 2 ಸಿನಿಮಾ ಬರುತ್ತದೆ ಅನ್ನೋ ಕುತೂಹಲ ಸಹಜವಾಗಿತ್ತು. ಆದರೆ ಈಗ ಆ ಸುದ್ದಿ ಹರಿದಾಡಿದ್ದರ ಔಚಿತ್ಯ ಏನು ಅಂತ ಗೊತ್ತಾಗಿರಲಿಲ್ಲ.
ಅದೆಲ್ಲಾ ಆದ ತಕ್ಷಣವೇ ಕೆಂಪೇಗೌಡ ಭಾಗ 2 ಅಲ್ಲ, ಅದಕ್ಕೆ ಬದಲಾಗಿ ಕಿಚ್ಚ ಹೆಬ್ಬುಲಿ ಭಾಗ2 ಸಿನಿಮಾ ನಿರ್ದೇಶಿಸುತ್ತಾರೆ ಅನ್ನುವ ಸುದ್ದಿ ಹರಿದಾಡತೊಡಗಿತು.

ಆ ಸುದ್ದಿ ದಟ್ಟವಾಗಿ ಹಬ್ಬಿದಾಗ ಒಂದಷ್ಟು ಮಂದಿ ಇದೇನಿದು ಅಂತ ಮೂಗಿನ ಮೇಲೆ ಬೆರಳಿಟ್ಟಿದ್ದರು. ಹೇಳಿಕೇಳಿ ಹೆಬ್ಬುಲಿ ಸಿನಿಮಾದ ನಿರ್ದೇಶಕ ಕೃಷ್ಣ. ಆದರೆ ಹೆಬ್ಬುಲಿ ಭಾಗ2 ಸುದೀಪ್ ನಿರ್ದೇಶಿಸುವುದು ಹೇಗೆ ಸಾಧ್ಯ ಅನ್ನೋ ಪ್ರಶ್ನೆ ಕುತೂಹಲಕ್ಕೆ ಎಡೆ ಮಾಡಿತ್ತು. ಅಲ್ಲದೇ ಸುದೀಪ್ ಗೆಲುವಿನ ಮಾಯೆಗೆ ಸಿಲುಕಿಕೊಂಡರೆ ಅನ್ನೋ ಅನುಮಾನ ಕೆಲವರಲ್ಲಿ ಹುಟ್ಟಿದ್ದು ಸುಳ್ಳಲ್ಲ.
ಆದರೆ ಸುದೀಪ್ ಅವನ್ನೆಲ್ಲಾ ಪಕ್ಕಕ್ಕೆ ಸರಿಸಿ ತಾವೊಬ್ಬ ವಿಭಿನ್ನ ವ್ಯಕ್ತಿ ಅನ್ನುವುದನ್ನು ತೋರಿಸಿಕೊಟ್ಟಿದ್ದಾರೆ. ಅವರು ಇವತ್ತು ತಾನು ಹೆಬ್ಬುಲಿ ಭಾಗ2 ಸಿನಿಮಾ ನಿರ್ದೇಶಿಸುತ್ತೇನೆ ಅನ್ನೋ ಸುದ್ದಿ ಹಬ್ಬಿತ್ತು. ಅದು ಸುಳ್ಳು. ಹೆಬ್ಬುಲಿ ಕೃಷ್ಣ ಅವರ ಮಗು. ಎಂದು ಟ್ವೀಟ್ ಮಾಡಿದ್ದರು. ಆ ಮೂಲಕ ತಾನು ಹೆಬ್ಬುಲಿ ಭಾಗ2 ಸಿನಿಮಾ ನಿರ್ದೇಶಿಸುತ್ತಿಲ್ಲರ ಅನ್ನುವುದನ್ನು ಸ್ಪಷ್ಟಪಡಿಸಿದ್ದರು.

ಅಂದಹಾಗೆ ಸುದೀಪ್ ಹೆಬ್ಬುಲಿ ಸಿನಿಮಾದ ನಿರ್ಮಾಪಕ ಉಮಾಪತಿಯವರಿಗೆ ಇನ್ನೊಂದು ಸಿನಿಮಾ ನಿರ್ದೇಶಿಸಿ ಕೊಡಲಿದ್ದಾರಂತೆ.

ನಟ ಸುಂದರಾಂಗನಾಗಿರಬೇಕೆಂಬುದು ‘ಅರ್ಧಸತ್ಯ’

ಕೆಲವರ ಧ್ವನಿಯ ಹಾಗೇ ಅವರನ್ನೆಂದೂ ನೋಡಿರದಿದ್ದರೂ ಅವರ ಧ್ವನಿಯೇ ಅವರ ಇರುವಿಕೆಯನ್ನು ನಮ್ಮ ಗಮನಕ್ಕೆ ತರುತ್ತಿರುತ್ತದೆ. ಆದರೀತ ಹಾಡುಗಾರನಲ್ಲ. ನಟ. ಭಾರತೀಯ ಚಿತ್ರರಂಗದ ಅಪರೂಪದ ಕಂಠಸಿರಿಯ ನಟರಲ್ಲಿ ಈತ ಕೂಡ ಒಬ್ಬ. ದೂರದರ್ಶನದ ಧಾರವಾಹಿ ನೋಡಿದವರು ‘ಭಾರತ್‍ ಏಕ್‍ ಖೋಜ್’ನ ನಿರೂಪಕನ ಧ್ವನಿ ಪಾನ್‍ ಜಗಿಯುತ್ತಾ ಗಹಗಹಿಸಿ ನಗುತ್ತಿದ್ದ ‘ಕಕ್ಕಾಜಿ ಕಹೇಂ’ ಪಾತ್ರವನ್ನು ಮರೆಯುವರೇ? ದೇವಾನಂದ್‍ ಕುರಿತ ಸಾಕ್ಷ್ಯಚಿತ್ರಕ್ಕೆ ನಿರೂಪಕನಾಗಿ ಅವರ ಧ್ವನಿ ವ್ಯಕ್ತಿಚಿತ್ರ ಕಟ್ಟಿಕೊಟ್ಟಿರುವ ರೀತಿ ಅನನ್ಯ. ಹೌದು ಅದೇ ಓಂಪುರಿಯ ವಿಶಿಷ್ಟತೆ.

Actor Om Puri. Express archive photo

ಓಂಪುರಿ ಹುಟ್ಟಿದ್ದು ಪಂಜಾಬಿನ ಅಂಬಾಲ ಅನ್ನುವ ಸಣ್ಣ ಹಳ್ಳಿಯಲ್ಲಿ. ಅವರನ್ನು ಸ್ಕೂಲಿಗೆ ಸೇರಿಸಬೇಕಾದಾಗ ಯಾವುದೇ ಜನ್ಮಪ್ರಮಾಣ ಪತ್ರ ಇರಲಿಲ್ಲವಂತೆ ಸರಿ ಅವರ ಮಾವ ಮಾರ್ಚ್‍ 9, 1950 ಅಂತ ಒಂದು ದಿನಾಂಕ ಕೊಟ್ಟು ಸೇರಿಸಿದ್ದರಂತೆ. ಓಂಪುರಿಗೆ ಅಪ್ಪ ಅಮ್ಮ ಇಟ್ಟ ಹೆಸರು ಓಂ ಪ್ರಕಾಶ್‍ ಪುರಿ. ಆದರೆ ಶಾಲೆಯಲ್ಲಿ ಅದೇ ಹೆಸರಿನ ಬೇರೆ ಹುಡುಗರಿದ್ದದ್ದರಿಂದ ಗೊಂದಲವಾಗುತ್ತೆ ಅಂತ ತಮ್ಮ ಹೆಸರನ್ನು ಬದಲಿಸಿಕೊಂಡರಂತೆ. ಅವರು ಹುಟ್ಟಿದ ದಿನಾಂಕ ನೆನಪಿಲ್ಲದಿದ್ದರೂ ‘ದಸರಾ ಹಬ್ಬವಾದ ಎರಡು ದಿನಕ್ಕೆ ನೀನು ಹುಟ್ಟಿದೆ’ ಅಂತ ಅವರಮ್ಮ ಹೇಳಿದ್ದ ಮಾತನ್ನು ನೆನಪಿನಲ್ಲಿಟ್ಟುಕೊಂಡಿದ್ದ ಓಂಪುರಿ ಬಾಂಬೆಗೆ ಬಂದಮೇಲೆ 1950ರಲ್ಲಿ ದಸರಾ ಹಬ್ಬ ಯಾವಾಗ ಆದದ್ದು ಅನ್ನೋದನ್ನ ಕ್ಯಾಲೆಂಡರ್‍ ಹುಡುಕಿ ನೋಡಿ ತಮ್ಮ ಜನ್ಮದಿನಾಂಕವನ್ನ 18 ಅಕ್ಟೋಬರ್‍ 1950 ಅಂತ ಬದಲಿಸಿಕೊಂಡರಂತೆ. ಅವರ ಬದುಕಿನ ರೀತಿಗೆ ರೂಪಕದಂತಿದೆ ಈ ಘಟನೆ.

 

ಸಂದರ್ಶನವೊಂದರಲ್ಲಿ ಅವರೇ ಹೇಳುವಂತೆ ‘ನೀವು ಏನಾಗಬೇಕು ಅಂತ passionate ಆಗಿ ಬಯಸ್ತಿರೋ ಅದೇ ಆಗ್ತೀರಿ’ ಓಂಪುರಿಯ ಇಡೀ ನಟನಾ ಬದುಕು ಈ ಬಗೆಯ ಪರಿಶ್ರಮ, ಬದ್ಧತೆ ಮತ್ತು passionನಿಂದ ಕಟ್ಟಿದ್ದು.

om-puri-7591

ಅದು ಇಡೀ ಭಾರತ ಹೊಸತನಕ್ಕೆ ಹೊರಳುವ ಹೊಸ್ತಿಲ್ಲಲ್ಲಿ ನಿಂತು ಬದಲಾವಣೆಯ ಗಾಳಿಯಲ್ಲಿ ಮಿಂದೇಳುತ್ತಿದ್ದ ಕಾಲ. ಭಾರತೀಯ ಚಿತ್ರರಂಗದಲ್ಲೂ ಹೊಸತನದ ಅಲೆಯೊಂದು ಮೊಳೆಯುತ್ತಿದ್ದ ಕಾಲ. ಸಮಾಜದ ಓರೆಕೋರೆಗಳು, ದಮನಿತ ದನಿಗಳು ಪ್ರಕಟಗೊಳ್ಳಲು ಹವಣಿಸುತ್ತಿತ್ತು. ಆಗ ಬಂದ ಯುವನಟಿ, ನಟರು ಸ್ಥಾಪಿತ ಬಾಲಿವುಡ್‍ ಚಿತ್ರಮಾಧ್ಯಮದ ಭಾಷೆ, ವ್ಯಾಕರಣ, ರೂಢಿಗತ ನಂಬಿಕೆಗಳನ್ನು ಬದಲಾಯಿಸಿದರು. ಆ ಪಡೆಯ ಮುಂಚೂಣಿಯಲ್ಲಿ ನಿಂತವರು ಸ್ಮಿತ ಪಾಟೀಲ್, ಶಬಾನಾ ಆಜ್ಮಿ, ನಾಸಿರುದ್ದೀನ್‍ ಶಾ, ಓಂ ಪುರಿ..ಯಂತಹ ನಟ – ನಟಿಯರ ದಂಡು. ಸತ್ಯಜಿತ್‍ ರೈ, ಗೋವಿಂದ ನಿಹಲಾನಿ, ಎಂ.ಎಸ್‍.ಸತ್ಯು, ಶ್ಯಾಂಬೆನಗಲ್‍ನಂತಹ ಹೊಸ ಅಲೆಯ ನಿರ್ದೇಶಕರ ಕನಸುಗಳನ್ನು ತೆರೆಯ ಮೇಲೆ ಅಮರಚಿತ್ರವಾಗಿಸಿದ್ದು ಇವರ ನಟನೆ.

 

ಓಂಪುರಿ ಎಫ್‍.ಟಿ.ಐ.ಐ ಮತ್ತು ಎನ್‍.ಎಫ್‍.ಡಿ.ಸಿಯಲ್ಲಿ ತರಬೇತಿ ಪಡೆದ ಮೊದಮೊದಲ ತಂಡದ ವಿದ್ಯಾರ್ಥಿಯಾಗಿದ್ದರು. ನಾಸಿರುದ್ದೀನ್‍ ಶಾ ಸಹಪಾಠಿ. ಅಲ್ಲಿಂದ ತರಬೇತಿ ಪಡೆದು ಹೊರಬಂದ ನಂತರ ಇವರೆಲ್ಲ ನಾಟಕ, ಚಲನಚಿತ್ರ ಎರಡರಲ್ಲೂ ಸಕ್ರಿಯವಾಗಿ ತೊಡಗಿಸಿಕೊಂಡಿದ್ದವರು.

ompuri-filmಮುಖ ನೋಡಿಯಲ್ಲ ಧ್ವನಿ ಕೇಳಿಯೇ ಓಂಪುರಿಯನ್ನು ಗುರುತಿಸುವಷ್ಟು ಇವರ ಧ್ವನಿ ಭಾರತೀಯ ಸಿನಿರಸಿಕರ ಮನದಲ್ಲಿ ಅನುರಣಿಸುತ್ತಿದೆ. ವಿಶಿಷ್ಟ ಧ್ವನಿ ಹಾಗೂ ಪಾತ್ರೆಗೊಗ್ಗುವ ಆಕಾರ ಪಡೆಯಬಲ್ಲ ನೀರಿನಂತೆ ಪಾತ್ರಕ್ಕೆ ಹೊಂದಿಕೊಂಡು ಅದನ್ನು ಜೀವಂತವಾಗಿಸುತ್ತಿದ್ದ ಅವರ ನಟನಾ ಕೌಶಲ ನಿಜಕ್ಕೂ ಅಭಿನಂದನಾರ್ಹ. ‘ಅರ್ಧಸತ್ಯ’, ‘ಆರೋಹಣ್ ‘ ಚಿತ್ರಗಳಿಗೆ ಅತ್ಯುತ್ತಮ ನಟನಾ ಪ್ರಶಸ್ತಿಯನ್ನು ಪಡೆದಾತ. ಭಾರತದ ಪ್ರತಿಷ್ಟಿತ ಪ್ರಶಸ್ತಿಗಳಲ್ಲೊಂದಾದ ಪದ್ಮಶ್ರೀಯನ್ನು ಪಡೆದಾತ.

ಓಂಪುರಿಯ ವೈಶಿಷ್ಟ್ಯವೆಂದರೆ ಈತ ಪೂರ್ವ-ಪಶ್ಚಿಮ ದೇಶಗಳ ಚಿತ್ರಗಳಲ್ಲಿ ನಟಿಸಿದ ಕಲಾವಿದ. ಭಾರತೀಯ ಭಾಷೆಗಳಲ್ಲದೆ ಇಂಗ್ಲೀಷ್‍, ಫ್ರೆಂಚ್, ಪಾಕಿಸ್ತಾನಿ ಚಿತ್ರಗಳಲ್ಲೂ ನಟಿಸಿ ಸೈ ಅನ್ನಿಸಿಕೊಂಡಿದ್ದರು. ಯಾವುದೇ ಹೊಸ ಭಾಷೆಗಾದರೂ ಸರಾಗವಾಗಿ ಒಗ್ಗಿಬಿಡಬಲ್ಲ ಗುಣ ಓಂಪುರಿಗಿತ್ತು. ಅದು ಅವರ ವಿಶಿಷ್ಟತೆಗಳಲ್ಲೊಂದಾಗಿತ್ತು.

ಅರ್ಧಸತ್ಯದ ಖಡಕ್‍ ಯುವ ಪೋಲಿಸ್‍ ಅಧಿಕಾರಿಯಾಗಿ, ಆರೋಹಣ್‍ನ ರೈತನಾಗಿ, ಆಕ್ರೋಶ್‍ನ ಆದಿವಾಸಿಯಾಗಿ ಗಂಭೀರ ಪಾತ್ರಗಳಲ್ಲಿ ಸೈ ಅನ್ನಿಸಿಕೊಂಡಿದ್ದ ಓಂಪುರಿಯೊಳಗಿದ್ದ ಹಾಸ್ಯಕಲಾವಿದನನ್ನು ಪರಿಚಯಿಸಿದ್ದು ಕಕ್ಕಾಜಿ ಕಹೇಂ, ಮಿ.ಯೋಗಿಯಂತಹ ಧಾರವಾಹಿಗಳು. ಅನಂತರದ್ದು ಇತಿಹಾಸ.

ompuri-47

ಹೊಸ ಅಲೆಯ ಚಿತ್ರಗಳಿರಲಿ, ಪಕ್ಕಾ ಮಾಸ್‍ ಚಿತ್ರಗಳಿರಲಿ ತಮ್ಮ ಪಾತ್ರಕ್ಕೆ ಬದ್ಧವಾಗಿ ನಟಿಸುತ್ತಿದ್ದಾತ. ಕನ್ನಡದಲ್ಲೂ ತಬ್ಬಲಿಯು ನೀನಾದೆ ಮಗನೇ, ಎಕೆ47, ಧೃವ ಚಿತ್ರಗಳಲ್ಲಿ ನಟಿಸಿದ್ದಾರೆ. ಎಕೆ47ನಲ್ಲಿ ತಾವೇ ತಮ್ಮ ಪಾತ್ರಕ್ಕೆ ಧ್ವನಿ ನೀಡಿರುವುದು ವಿಶೇಷ.

ಘಾನ್ಸಿರಾಂ ಕೋತ್ವಾಲ್‍ ಓಂಪುರಿಯವರ ಮೊದಲ ಚಿತ್ರ. ಅರ್ಧಸತ್ಯ, ಆರೋಹಣ್‍, ಮಿರ್ಚ್‍ ಮಸಾಲ, ಆಕ್ರೋಶ್‍, ಧಾರ್ವಿ ಅವರ ಆರಂಭಿಕ ಪ್ರಮುಖ ಚಿತ್ರಗಳು. ಮಾಚಿಸ್‍, ಗುಪ್ತ್, ಧೂಪ್, ಹೇರಾ ಪೇರಿ ಮೊದಲಾದ ಕಮರ್ಷಿಯಲ್‍ ಹಿಂದಿ ಸಿನಿಮಾಗಳಲ್ಲೂ ನಟಿಸಿದ್ದಾರೆ. ಈಸ್ಟ್‍ ಈಸ್‍ ಈಸ್ಟ್‍, ಮೈ ಸನ್‍ ದ ಫೆನೆಟಿಕ್‍, ಸಿಟಿ ಆಫ್‍ ಜಾಯ್‍ ಮೊದಲಾದ ವಿದೇಶಿ ಚಿತ್ರಗಳಲ್ಲೂ ನಟಿಸಿದ್ದಾರೆ.

om-puri5

ಆತನೊಳಗಿನ ಕಲಾವಿದನನ್ನು ಹೆಚ್ಚಾಗಿ ಒರೆಗೆ ಹಚ್ಚಿದ್ದು ಹೊಸ ಅಲೆಯ ಚಿತ್ರಗಳು ಅನ್ನುವುದರಲ್ಲಿ ಅನುಮಾನವಿಲ್ಲ. ಓಂಪುರಿಯ ನಟನಾ ಬದುಕಿನ ವೈಶಿಷ್ಟ್ಯವೆಂದರೆ ಧಾರವಾಹಿಗಳಲ್ಲೂ ಆತನ ನಟನೆಗೆ ಹೊಳಪನ್ನು ತಂದುಕೊಡುವಂತಹ ಪಾತ್ರಗಳು ದೊರೆತದ್ದು. ಬಹುಶಃ ಆಗಷ್ಟೇ ದೂರದರ್ಶನ ಭಾರತೀಯ ಜನಮಾನಸವನ್ನು ಪ್ರವೇಶಿಸುತ್ತಿದ್ದ ಸಂಧಿಕಾಲವೂ ಇದಕ್ಕೆ ಕಾರಣವಾಗಿತ್ತು.  ಜನಪ್ರಿಯ ಸಿನೆಮಾಗಳು ಈತನೊಳಗಿನ ಹಾಸ್ಯಕಲಾವಿದನನ್ನಾಗಲಿ, ನಟನನ್ನಾಗಲಿ ಬಳಸಿಕೊಳ್ಳದೇ ಹೋದದ್ದು ಸತ್ಯ. ಅದೇನೆ ಇರಲಿ ಚಿತ್ರಮಾಧ್ಯಮದ ವ್ಯಾಕರಣಕ್ಕೊಂದು ಹೊಸಭಾಷ್ಯ ಬರೆದ ಕಲಾವಿದರ ಸಾಲಿನಲ್ಲಿದ್ದ ಓಂಪುರಿ ಹೊರಟು ಬಿಟ್ಟಿದ್ದಾರೆ  ಬಾರದ ಲೋಕಕ್ಕೆ. ತನ್ನ ಪ್ರತಿಭೆಯಿಂದ ನೋಡುಗರ ಹೃದಯ ಮುಟ್ಟಿದವರ ಹೃದಯವೀಗ ನಿಂತು ಹೋಗಿದೆ. ನಿಜ ಸಾವು ಸಹಜ. ಆದರೆ ಭರಿಸುವುದು ಕಷ್ಟಕಷ್ಟ..  ನಮ್ಮ ಮನಸ್ಸುಗಳಲ್ಲಿ ಸದಾ ಉಳಿವ ಅಪರೂಪದ ಕಲಾವಿದ ಓಂಪುರಿಗೊಂದು ನಮಸ್ಕಾರ. ವಿದಾಯ. 

-ಹೇಮಾ ಹೆಬ್ಬಗೋಡಿ

ಮುಕುಂದ -ಮುರಾರಿ ಸಪ್ಪೆಯಿಂದ ಉಪ್ಪಿಗೆ .

ಹಿಂದಿಯ ಓ ಮೈ ಗಾಡ್ ಕನ್ನಡಕ್ಕೆ ಬರುವಾಗ ಒಂದಿಷ್ಟು ಸಿಂಗಾರ ಬಂಗಾರ  ಮಾಡಿಕೊಂಡು ಮುಕುಂದ ಮುರಾರಿಯಾಗಿ ಬಂದಿದೆ. ಮಧ್ಯಮ ವರ್ಗದ ಕುಟುಂಬಸ್ಥ ನಾಸ್ತಿಕ ಮುಕುಂದ. ತನ್ನ ಬದುಕಿನ ಆಧಾರವಾಗಿದ್ದ “ಮುಕುಂದ್ ಎಂಪೋರಿಯಂ” ನೆಲಸಮವಾದಾಗ ಪರಿಹಾರಕ್ಕಾಗಿ ದೇವರ ಮೇಲೇ ಕೇಸು ಜಡಿದು ಭಗವಂತನನ್ನೇ ಧರೆಗಿಳಿಸಿಕೊಳ್ಳುವ ಜೊತೆ ಜೊತೆಗೆ ಭಕ್ತಿಯ ವ್ಯಾಪಾರ ಮಾಡುವ ಢಾ೦ಭೀಕರನ್ನು ಬಯಲಿಗೆಳೆದು  ಕಂದಾಚಾರದ ಜನರನ್ನು ಬಡಿದೆಚ್ಚರಿಸುವ ಕಥೆ ಮುಕುಂದ ಮುರಾರಿ.

ಇಷ್ಟ -ಕಷ್ಟ :

ವ್ಯವಸ್ಥೆಯ ಎದುರಿಗೆ ತೆರೆಯ ಮೇಲೆ ಜಟಾಪಟಿಗಿಳಿಯುವುದರಲ್ಲಿ ,ಬಿಸಿ ಕಜ್ಜಾಯ ಬಿಸಿ ಕಜ್ಜಾಯ ರುಚಿ ರುಚಿ ಕಜ್ಜಾಯದಂತ ಡೈಲಾಗ್ ಹೊಡೆಯುವುದರಲ್ಲಿ ಉಪೇಂದ್ರ ಪ್ರೇಕ್ಷಕರ ಫೇವರಿಟ್!! ಅವ್ರನ್ನ ಇಷ್ಟ ಪಡದವರೂ ಸಹ ಸಕ್ಕತ್ತಾಗಿ ಕಿಕ್ ಕೊಡ್ತಾನೆ ಕಣ್ರೀ ಅಂತ ತಮ್ಮ ಒಳ ವಲಯದಲ್ಲಿ ಹೇಳಿರುವುದುಂಟು. ಮುಕುಂದ ಮುರಾರಿಗೆ ನಂದಕಿಶೋರ್ ಉಪ್ಪಿಯನ್ನ ಆಯ್ಕೆ ಮಾಡಿಕೊಂಡಿದ್ದು ಇಂಥದೇ ಕಾರಣಕ್ಕಿರಬೇಕು. ಈ ಚಿತ್ರಕ್ಕೆ ಸಂಭಾಷಣೆ ಜೀವಾಳ. ಚಿತ್ರದ ಮೊದಲರ್ಧ ದಲ್ಲಿ ಕೆಲವು ಬಿಲ್ಡಪ್ ಸಾಲುಗಳ ಅವಶ್ಯಕತೆ  ಇತ್ತಾ ? ಮೊದಮೊದಲಿಗೆ ಮುಕುಂದನ ಅಭಿನಯವಂತೂ ಸಾಧಾರಣ . ಮೂಲ ಚಿತ್ರದ ಪರೇಶ್ ರಾವಲ್ ಮುಂದೆ ಪೇಲವ ಅನ್ನಿಸುತ್ತದೆ. ಕುಣಿತಕ್ಕೆ  ಹಾಕಿದ ಒಂದೆರಡು ಹೆಜ್ಜೆಗಳಲ್ಲೂ ಹೊಸದೇನು ಇಲ್ಲ. ಭಾವಾಭಿನಯದ ಕೊರತೆ ಎದ್ದು ಕಾಣುತ್ತದೆ. ಅದು ನಿರ್ದೇಶಕರ ಅಲ್ಪ ತೃಪ್ತಿಯೋ , ಇಷ್ಟು ಮಾಡಿದ್ರೆ ಸಾಕು ಅನ್ನುವ ಯಾರ ಅಸಡ್ಡೆಯೋ ಗೊತ್ತಿಲ್ಲ.

ಪರಮಾತ್ಮನ ಪರಮ ಭಕ್ತೆಯಾದ ತನ್ನ ಹೆಂಡತಿಯ ಒತ್ತಾಯಕ್ಕೆ ಅಲ್ಲದಿದ್ದರೂ ತನ್ನ ಕೆಲಸಗಾರ ದೇವರ ಮೂರ್ತಿಗಳು ಅಲ್ಲಿ ಕಡಿಮೆ ಬೆಲೆಗೆ ಸಿಗುತ್ತವೆ ಹೋಗಿಬರೋಣ ಎಂದಾಗ ಲಾಭದ ಲೆಕ್ಕಾಚಾರದಿಂದ ತೀರ್ಥಕ್ಷೇತ್ರಕ್ಕೆ ಮುಕುಂದ ಹೊರಡುತ್ತಾನೆ.ಮುಕುಂದನ ಹೆಂಡತಿಯ ಸಂಬಂಧಿ ತನ್ನ ತಾಯಿಯ ಆತ್ಮದ ಶಾಂತಿಗಾಗಿ ಬಂಧುಬಳಗವನ್ನೆಲ್ಲ ಬಸ್ಸಿನಲ್ಲಿ ಕರೆದೊಯ್ಯುತ್ತಿದ್ದಾಗ ಮುಕುಂದನ ಕುಚೇಷ್ಟೆಯಿಂದ ವೈನ್ ಕುಡಿದು ವ್ರತ ಭಂಗಿಯಾಗುತ್ತಾನೆ. ಈ  ದೃಶ್ಯ ಓ ಮೈ ಗಾಡ್ ನಲ್ಲಿ  ನೋಡಿದಾಗ ಪರೇಶರ ಹಾವಭಾವವೇ ನಗೆ ಉಕ್ಕಿಸುತ್ತದೆ.  ಮುಕುಂದನ ಮುಖದಲ್ಲಿ ಅಂಥಾ ಭಾವಗಳ ಅಭಾವ.

upendra_murari4-photo

ಅಲ್ಲಲ್ಲಿ ಇಂಥಾ ಕೊರತೆಗಳು ಕಾಣುತ್ತಿರುವಾಗಲೇ ರಿಯಲ್ ಸ್ಟಾರ್  ಮುಂಚೂಣಿಗೆ ಬರುತ್ತಾರೆ. ತನ್ನ ಶಕ್ತಿ, ಸಾಮರ್ಥ್ಯವನ್ನು ಮಾತ್ರ ನಂಬುವ ಮುಕುಂದ ಅಂಗಡಿ ಕಳೆದುಕೊಂಡು ,ಶಾಪಗ್ರಸ್ತ ಭೂಮಿಯನ್ನೂ ಮಾರಲಾಗದೆ ಇನ್ಸೂರೆನ್ಸ್ ಕಂಪನಿ ಕೊಟ್ಟ Act of God ಕಾರಣವನ್ನೂ ಒಪ್ಪಲಾಗದೆ ಕೋರ್ಟ್ ಮೆಟ್ಟಿಲೇರುತ್ತಾನೆ. ಇಲ್ಲಿಂದಲೇ ಹಂತಹಂತವಾಗಿ ಉಪ್ಪಿಯ ರುಚಿ ಸಿಗುವುದು. ದೇವರ ಮೇಲೇ ಕೇಸ್ ಹಾಕಲು  ಹೋದ ಮುಕುಂದನನ್ನ ಮೆಂಟಲ್ ಎಂದು ಜರಿದು ಎಲ್ಲರೂ ತಿರಸ್ಕರಿಸುತ್ತಾರೆ. ಕೊನೆಗೆ ಅಕ್ಬರ್ ಖಾನ್ ಎಂಬ ಹಳೆ ಹುಲಿಯ  (ಅಡ್ವೋಕೇಟ್ ) ಸಲಹೆಯಂತೆ ತನ್ನ ಕೇಸ್ ಗಾಗಿ ತಾನೇ ವಕಾಲತ್ತು ಹಾಕಿ ವ್ಯವಸ್ಥೆಯ ಮುಖಕ್ಕೆ ಕನ್ನಡಿ ಹಿಡಿದಂಥ ಹರಿತ ,ಚಾಣಾಕ್ಷ ಮಾತುಗಳಿಂದ ಕೋರ್ಟ್ ನಲ್ಲಿ ಕೇಸ್ ದಾಖಲಾಗುವಂತೆ ಮಾಡುತ್ತಾನೆ.ಮಡದಿ ,ಮಕ್ಕಳಿಂದಲೂ ತನ್ನದಲ್ಲದ ತಪ್ಪಿಗೆ ದೂರಾಗುತ್ತಾನೆ. ಮುಕುಂದ ಮನಕ್ಕೆ ಹತ್ತಿರವಾಗುತ್ತಾ ಹೋಗುವುದು ಹೀಗೆ. ಮುಕುಂದ ಮೊದಮೊದಲು ಸಪ್ಪೆ ಎನಿಸಿದರೂ ೨ನೆಯ ಭಾಗದೊತ್ತಿಗೆ ಇಷ್ಟವಾಗುತ್ತಾರೆ .

“ನಾನು ನಂಬುವುದು ನನ್ನನ್ನು ಮಾತ್ರ ” ಉಪೇಂದ್ರ ಈ ಸಾಲನ್ನ ನಮಗೂ  ತಟ್ಟುವ ,ಮುಟ್ಟುವ ಹಾಗೆ ಅತ್ಯಂತ ಸಹಜವಾಗಿ  ಹೇಳಲಿಕ್ಕೆ ಸಾಧ್ಯವಾಗಿರುವುದು ಅದು ಅವರ ನಿಜದ  ನಂಬಿಕೆಯೂ ಆಗಿರುವುದರಿಂದ.ಅವ್ರ ಸ್ವಂತಿಕೆ ,ಸಾಮರ್ಥ್ಯ ವೇ ಅವರನ್ನ ಇಷ್ಟೆತ್ತರಕ್ಕೆ ಬೆಳೆಸಿರುವುದು ತೆರೆದಿಟ್ಟ ಸತ್ಯ.  “ಸತ್ಯವಂತರಿಗೆ ನಾಸ್ತಿಕರಿಗೆ ಈ ದೇಶದಲ್ಲಿ ಬೆಲೆಯಿಲ್ಲ” “ಮನುಷ್ಯನಿಗೆ ನಂಬಿಕೆ ಇರಬೇಕು ಮೂಢನಂಬಿಕೆ ಇರಬಾರದು” ಬಡ್ಡಿ ಬ್ರದರ್ಸ್ ಹಾಗೆ ಕಣೋ  ನಮ್ಮ ಆರೋಗ್ಯವೇ ಅವರ ಭಾಗ್ಯ ” ನಾವೇ ದೇವರಾಗೋದು ಬೆಸ್ಟ್ ” ಕಿತ್ತಾಡೋಕೆ ಒಂದು ಧರ್ಮ  ಹೀಗೆ.. ಮೌಲ್ವಿ , ಸ್ವಾಮೀಜಿ ,ಪಾದ್ರಿ, ಮನೆಹಾಳ ಗುರುಗಳ ಬಣ್ಣ ಕಳಚುವಾಗ ಆಡುವ ಬಹಳಷ್ಟು ಸಾಲುಗಳನ್ನು ಕೇಳುವಾಗ ತೆರೆಯ ಮೇಲೆ ಉಪೇಂದ್ರರರನ್ನು ನೋಡುವಾಗ ಹೀಗೆ  ಬೀಸಿ ಬೀಸಿ  ಬಡಿಯುವುದಿಕ್ಕೆ ತಕ್ಕನಾದವರು ಇವರೇ ಅನ್ನಿಸಿಬಿಡುತ್ತದೆ.

mukunda-murari-photos-images-49964

ದೇವ್ರೇ ಧಮ್ ಇದ್ರೆ ಬಾರೋ ಅಂತ ಮುಕುಂದ ದೇವರಿಗೇ ಧಮ್ಕಿ ಹಾಕಿದಾಗ ಬರುವ ಭಗವಂತ ಕಣ್ಣಿನಲ್ಲೇ ಕಲೆ ಅರಳಿಸುವ ಕಲೆಗಾರ ಸುದೀಪ್ ಕಣ್ಣಿಗೆ ಹಬ್ಬ.ಮಾಡ್ರನ್ ಮುರಾರಿ. ಹೆಜ್ಜೆಹೆಜ್ಜೆಗೂ ಜೊತೆಯಾಗುತ್ತಿದ್ದರೂ ನಂಬದ ನಾಸ್ತಿಕ ಮುಕುಂದನನ್ನ  ಕರಗಿಸುವ,ತಿಳಿ ಹೇಳುವ  ಮುರಾರಿಯ ನಡೆಗಳು ನೋಡುಗರನ್ನು ವಿವೇಚನೆಗೆ ಒಡ್ಡುತ್ತವೆ.   “ದಾರಿ ತೋರುವುದು ಮಾತ್ರ ನನ್ನ ಕೆಲಸ ಗುರಿ  ಮುಟ್ಟುವುದು ನೀನೇ  ಮಾಡ್ಬೇಕು. ಗೆಲುವು ಬೇಕು ಅಂದಾಗ ಹಿಡಿಯೋ ದಾರಿ ಕಷ್ಟವೇ . ಅಂಥವರು ಒಂಟಿಯಾಗೇ ಇರ್ತಾರೆ ಇಂಥಾ ಹತ್ತಾರು ನುಡಿಗಳು ಗಟ್ಟಿ ಬೀಜಗಳು. ಮುಕುಂದನ ಅರಿವನ್ನ ವಿಸ್ತರಿಸಲು ಕೊಡುವ ಭಗವದ್ಗೀತೆ,ಕುರಾನ್ ,ಬೈಬಲ್ ಎಲ್ಲ ಕುರಿಗಳಾಗದೆ ಓದಿರೋ..ಅರಿಯಿರೋ.. ಮೌಢ್ಯ ಮೀರಿ ಮನುಷ್ಯರಾಗಿರೋ ಅನ್ನುವ ಸಂದೇಶ ಬೀರಿವೆ. ಮುರಾರಿಯಾಗಿ ಸುದೀಪ್ ಕಣ್ಣಿಗೆ ಕಟ್ಟುವಂಥಾ ಅಭಿನಯ ನೀಡಿದ್ದಾರೆ.

ಸಿದ್ದೇಶ್ವರ ಸ್ವಾಮಿಯಾಗಿ ಅವಿನಾಶರ ನಟನೆ ಅದ್ಭುತವಾಗಿದೆ. ಗುರೂಜಿಯ ಪಾತ್ರವೂ ಓಕೆ. ಮೌಲ್ವಿ ಪಾತ್ರಧಾರಿ ಮಠ ಸಹಜ ಅಭಿನಯ ಚೆನ್ನಿದೆ. ಮುಕುಂದನ ಮಗುವಿನ  ನಟನೆಯೂ ಸೆಳೆಯುತ್ತದೆ.

ಮುಕುಂದ ಮುರಾರಿ  ರಂಜನೀಯವಾಗಿ  ತಿಳಿಹೇಳುವ ಸದಭಿರುಚಿಯ ಚಿತ್ರ. ಸಹಜತೆಗೆ ಒತ್ತುಕೊಟ್ಟಿದ್ದರೆ ಮತ್ತಷ್ಟು ಆಪ್ತವಾಗುತ್ತಿತ್ತು ಅನ್ನುವುದು ಅಷ್ಟೇ ಸತ್ಯ.

 

 

 

ಹೀಗಿದೆ ನೋಡಿ “ಇದೊಳ್ಳೆ ರಾಮಾಯಣ”

 

ತಾನು ಗಂಡು ,ಯಜಮಾನ ತನ್ನ ಮಾತೇ ಅಂತಿಮ ಅನ್ನುವ ಹಾಗೆ ಮೆರೆದ ನಾಯಕನಿಗೆ ಕತ್ತಲ ಕೋಣೆಯಲ್ಲಿ ಹೆಸರೇ ಗೊತ್ತಿಲ್ಲದ ಹೆಣ್ಣಿನ ಜೊತೆಗೆ ಕಳೆದ ಘಳಿಗೆಗಳು ಮನಸ್ಸನ್ನೇ ತೆರೆಸಿಬಿಡುತ್ತವೆ.   ಪ್ರಕಾಶ್ ರೈರಂಥ ಪ್ರಖರ ಪ್ರತಿಭೆಯ ಎದುರಿಗೆ  ಪಕ್ಕಾ ಪ್ರೊಫೆಷನಲ್  ಲೈಂಗಿಕ ಕಾರ್ಯಕರ್ತೆಯಾಗಿ ನಟಿಸುವುದು ಕಷ್ಟ ಕಷ್ಟ . ಆದ್ರೆ ಪ್ರಿಯಾಮಣಿ  ಸೇರಿಗೆ  ಸವ್ವಾ ಸೇರು ಅನ್ನುವಂತೆ ಸಹಜ ಅಭಿನಯದಿಂದ ಗೆದ್ದಿದ್ದಾರೆ.

ಮೊದಮೊದಲು ಗಯ್ಯಾಳಿಯ ಹಾಗೆ  ಗಂಟೆಗಿಷ್ಟು ಗಂಟು ಇಟ್ಟು ಮಾತಾಡು ಅನ್ನುವ ಆಕೆ ಭುಜಂಗಯ್ಯನ ಭಯ, ಒಂದಿಷ್ಟು ಒಳ್ಳೆಯ ನಡವಳಿಕೆಗಳನ್ನ ಗಮನಿಸುತ್ತಾ ಹೋದಂತೆ ಮಮತಾಮಯಿಯೇ ಆಗಿಬಿಡುತ್ತಾಳೆ . ಹೆಂಡತಿ, ಮಗಳನ್ನು  ಕಂಡಾಗ ಅವಳು ಕೇಳುವ ಪ್ರಶ್ನೆಗಳು ,ಕೊಟ್ಟ  ಸಲಹೆಗಳು  ಭುಜಂಗಯ್ಯನ ಅಹಮಿಕೆಯನ್ನೇ ಅಲ್ಲಾಡಿಸುತ್ತವೆ. ತಾನೂ  ಕರಗಿ ಆತನನ್ನೂ ಕರಗಿಸಿ ಮೈಯ್ಯ  ಹಂಗಿಲ್ಲದೆ ಮನಸ್ಸನ್ನು ಅರಳಿಸಿ ಹೊರಡುತ್ತಾಳೆ .

ಮಾತಿನ ಮಧ್ಯೆ  ಬರುವ  ಸಂದ  ಹಿನ್ನೆಲೆ ಸಂಗೀತ ಮೌನದಲ್ಲೇ ಮನವನ್ನ ಮಥಿಸುತ್ತದೆ. ಸಂಗೀತ ನಿರ್ದೇಶಕ ಸೂಕ್ಷ್ಮಜ್ಞನಾಗಿದ್ದಾಗ ಮಾತ್ರ ಇದು ಸಾಧ್ಯ .

ಸಾಮರ್ಥ್ಯ ಇದ್ದರೂ ಹೀರೋಗಳ ಹಿಂದೆ ಅಲೆಯುವ ನಿರ್ದೇಶಕನ ಪಾತ್ರದಲ್ಲಿ ಅಚ್ಯುತ ಎಂದಿನಂತೆ ತಮ್ಮ ಅಚ್ಚೊತ್ತಿದ್ದಾರೆ . ರಂಗಾಯಣ ರಘು ಇದ್ದಲ್ಲಿ ನಗು ಇರಲೇಬೇಕಲ್ಲ .

ಆಟೋ ಶಿವನ ಮುಗ್ದತೆ ,ಹುಂಬತನ ,ಸ್ವಾಮಿನಿಷ್ಠೆ ಮನಸೆಳೆಯುತ್ತವೆ. ನಿರ್ದೇಶನದ ಜೊತೆಗೆ ನಟನೆಯ ಪಾಠವನ್ನೂ ಶಿವನಿಗೆ ಕಲಿಸಿದ್ದಾರೆ ರೈ .

ಇಂಥಾದ್ದೊಂದು ಕಥೆಯನ್ನ ಕನ್ನಡದ ಪ್ರೇಕ್ಷಕ ಮಹಾಶಯರಿಗೆ ಕೊಡಲಿಕ್ಕೆ ಸೂಕ್ಷ್ಮ ಸಂವೇದನೆಯ ನಟ ,ನಿರ್ದೇಶಕರಿಂದ ಮಾತ್ರ ಸಾಧ್ಯ . ಪ್ರಕಾಶ್ ರೈ ಸಾಧಿಸಿ ತೋರಿಸಿದ್ದಾರೆ . ಅವ್ರ ದೇಹಭಾಷೆ ,ಧ್ವನಿಯ ಏರಿಳಿತ ಮೆಚ್ಚದೆ ಬೇರೆ ದಾರಿ ಇಲ್ಲ.

ಪೋಸ್ಟರ್ಗಳಲ್ಲಿ ಪ್ರಕಾಶ್ ರೈ ಪ್ರಮುಖವಾಗಿ ಕಂಡರೂ ಕಥೆಯ ಆಳಕ್ಕೆ ಹೋದಂತೆಲ್ಲಾ ಕಾಣುವುದು ಹೆಣ್ಣಿನ ಹೆಗ್ಗಳಿಕೆಯೇ .  ಭುಜಂಗಯ್ಯನ ಅಹಮ್ಮಿನ ಅಟ್ಟದಿಂದ ಇಳಿಸಿ ಮನುಷ್ಯನನ್ನಾಗಿಸುವವರು ಮೂವರು ಹೆಣ್ಣು ಮಕ್ಕಳೆ .

ಕನ್ನಡಕ್ಕೊಂದು ಕುಟುಂಬವೆಲ್ಲಾ ಕುಳಿತು ನೋಡುವಂಥಾ ಸದಭಿರುಚಿಯ ಚಿತ್ರ ‘ಇದೊಳ್ಳೆ ರಾಮಾಯಣ ” ಸಿಕ್ಕಿರುವುದು ಸುಳ್ಳಲ್ಲ .

 

ನಗುತಾ ನಗುತಾ ಬಾಳೂ ನೀನು ಯಶೋವಂತ ..

ಕನಸುಕಂಗಳ ಚೆಲುವ  ಕನ್ನಡ ಚಿತ್ರರಂಗದ ಯುವರಾಜನಂತೆ ಕಾಣುವ ಯಶ್ ಗೆ ಹುಟ್ಟು ಹಬ್ಬದ ಸಂಭ್ರಮ. ಸಾಧಿಸುವ ಛಲ ಹೊತ್ತ ಮನಸ್ಸಿಗೆ ಪ್ರತಿ ಹುಟ್ಟು ಹಬ್ಬ ಬಂದಾಗಲೂ ಒಮ್ಮೆ ಹಿಂತಿರುಗಿ ನಾನೇನು ಸಾಧಿಸಿದೆ ಎಂದು ನೋಡುವಂತಾಗುತ್ತದೆ. ತನ್ನನು ತಾನು ನೋಡಿಕೊಂಡು ಮುಂದೆ ಮುಂದೆ ನಡೆದು ಬರುತ್ತಿರುವ ಸಾಧಕ ಯಶ್ . ಹಾಗೇ ಒಮ್ಮೆ ತಿರುಗಿ ನೋಡಿದರೆ ಈತ ಅಪರಿಮಿತ ಶ್ರದ್ಧೆಯ ಶಕ್ತಿಯಿಂದ ಬೆಳೆದ ಕಲಾವಿದ ಅನ್ನುವುದು ಢಾಳಾಗಿ ಕಾಣುತ್ತದೆ. ಆತನ ಸುಸ್ಪಷ್ಟ ಕನ್ನಡ ಭಾಷೆ ಕೇಳಲೂ ಬಲು ಚೆನ್ನ.  ಕನ್ನಡ ಚಿತ್ರರಂಗದಲ್ಲಿ ಇತ್ತೀಚೆಗಿನ  ಬಹುತೇಕ ಎಲ್ಲ ನಟರ ಭಾಷೆಗೆ ಹೋಲಿಸಿದರೆ ಈತನದು ಇಷ್ಟವಾಗುವ ಸುಲಲಿತ ನುಡಿ.

yash3

ಅಪ್ಪ- ಅಮ್ಮ ತೋರಿದ ದಾರಿಯಲ್ಲಿ ನಡೆಯದೆ ತನ್ನ ಬದುಕಿನ ದೋಣಿಗೆ ತಾನೇ ಹುಟ್ಟುಗೋಲು ಹಾಕಿ ದಿಕ್ಕು ಕಂಡುಕೊಂಡ ನವೀನ  ಇವತ್ತಿನ ಯಶೋವಂತನಾಗಿದ್ದು ನಿರಂತರ ಅಭ್ಯಾಸ ಬಲದಿಂದ.

yash7

ರಂಗಭೂಮಿಯ ಅಡಿಪಾಯದ ಮೇಲೆ ಅಭಿನಯದಲ್ಲಿ ಸೌಧ ಕಟ್ಟುತ್ತಾ ಕಿರುತೆರೆಯಿಂದ ಬೆಳ್ಳಿತೆರೆಗೆ ಜಿಗಿಜಿಗಿದು ಬಂದ ಯಶ್ ತನ್ನ ಎರಡನೇ ಚಿತ್ರದ ಅಭಿನಯಕ್ಕೇ ಫಿಲಂ ಫೇರ್ ಪ್ರಶಸ್ತಿ ತೆಗೆದುಕೊಂಡು ಭರವಸೆ ಮೂಡಿಸಿದಾತ. ತೆರೆಯ ಮೇಲೆ ಆತನ ಮಾತಿನ ಲವಲವಿಕೆ, ಹಾವಭಾವ ನೋಡಿದಷ್ಟೂ ಚೇತೋಹಾರಿ. ಇತ್ತೀಚೆಗೆ ಬಂದ ಸಂತು straight ಫಾರ್ವರ್ಡ್  ನ ಹಲವು ಆರ್ಭಟ ಹೊರತು ಪಡಿಸಿದರೆ ಮತ್ತೆ ಮತ್ತೆ ನೋಡಬೇಕಿನಿಸುವಷ್ಟು ಹಿತವಾದ ಅಭಿನಯ ಈ ಚೆಲುವನದ್ದು. ಆತನ ಆತ್ಮವಿಶ್ವಾಸ ಕೆಲವೊಮ್ಮೆ ಅಹಂಕಾರದಂತೆ ಕಂಡಿದ್ದೂ ನಿಜ.

yash8yash4

ತನ್ನ ಬದುಕು ಹೇಗಿರಬೇಕು ಎಂದು ನಿರ್ಧರಿಸಿ ಅದಕ್ಕೆ ಬೇಕಾದ ಎಲ್ಲವನ್ನು ತನ್ನ ಸ್ವಂತ ಶಕ್ತಿಯಿಂದ ಪಡೆದುಕೊಳ್ಳುವ ಹಲವರಿಗೆ ಇಂಥಾ ಅಹಂ ತುಸು ಹೆಚ್ಛೇ ಕಾಣುವುದುಂಟು. ಅದಕ್ಕೆ ವಯಸ್ಸೂ ಕಾರಣವಿರಬಹುದು. ಹಾಗೆಂದ ಮಾತ್ರಕ್ಕೆ ವಿನಯವಂತಿಕೆ ಬೆಳೆಸಿಕೊಳ್ಳಬಾರದೆಂದಲ್ಲ. ಅದು ಅವರವರ ತಿಳಿವಿಗೆ ಬಿಟ್ಟ ವಿಚಾರ. ಅವಕಾಶಗಳಿಗಾಗಿ ಅಲೆದು ಕೊನೆಗೂ ಅಪ್ರತಿಮ ನಟನಾದ ಪ್ರಕಾಶ್ ರೈಗೆ ಇವತ್ತಿಗೂ ರಾಜ್ಕುಮಾರ್ ಅವರಿಗಿದ್ದ ವಿನಯ, ವಿಧೇಯತೆಯ ತುಣುಕೂ ತಾಕಿಲ್ಲ. ಯಶ್ ತನ್ನ ಸುತ್ತ ನಡೆಯುವ ಸಂಗತಿಗಳ ಬಗ್ಗೆ ಗಮನಿಸುವ ಎಚ್ಚರದ ಕಣ್ಣಿನ ಹುಡುಗ. ಸಮಾಜದ ಬಗ್ಗೆ ಕಾಳಜಿ ಮಾತಿನಲ್ಲಷ್ಟೇ ಉಳಿಯದೆ  “ಯಶೋ ಮಾರ್ಗ”ದ ಮೂಲಕ ಕೆಲಸವನ್ನು ಮಾಡುತ್ತಿದ್ದಾರೆ. ವೃತ್ತಿ ಬದುಕಿನ ಜೊತೆಗಾತಿಯನ್ನು ಸಂಗಾತಿಯಾಗಿ ವರಿಸಿ ಬಾಳಿನ ಮತ್ತೊಂದು ಮಜಲಿಗೂ ಅಡಿಯಿಟ್ಟಿದ್ದಾರೆ .

yash-5yash-santu

ಈ ಕಲಾವಿದನ  ಇಂದಿನವರೆಗಿನ ಬದುಕನ್ನು ಗಮನಿಸಿದಾಗ ಅನ್ನಿಸುವುದು ಈತ ಬಹುತೇಕ ಎಲ್ಲವನ್ನು ಶಿಸ್ತಿನಿಂದ  ನಿಭಾಯಿಸುವ ವ್ಯಕ್ತಿ. ಹುಟ್ಟು ಹಬ್ಬದ ಈ ಘಳಿಗೆಯಲ್ಲಿ  ಹಾರೈಸುವುದಿಷ್ಟು.ಈ ಕನಸುಗಾರನ ಆತ್ಮವಿಶ್ವಾಸದ ನಡಿಗೆ ಯಶಸ್ಸಿನ ಕಡೆಗೆ ಸಾಗುತ್ತಲೇ ಇರಲಿ. ಕನ್ನಡ ಸೀಮೆಗೂ ಮೀರಿ  ಅಪ್ರತಿಮ ನಟನಾಗಿ ಬೆಳೆಯಲಿ.

yash-photoyash-actor-new-stills-_4_

ನಭಾ ನಟೇಶ್ ಸೌಂದರ್ಯದ ಗುಟ್ಟೇನು ಗೊತ್ತಾ? ವಿಡಿಯೋ ನೋಡಿ .

ಹೀರೋಯಿನ್ ಗಳು ಅಷ್ಟೆಲ್ಲಾ ತೆಳ್ಳಗೆ ಬೆಳ್ಳಗೆ ಇರ್ತಾರೆ, ಹೊಟ್ಟೇಗೇನ್ ತಿಂತಾರೆ?
ಈ ಕುತೂಹಲ ಅನೇಕರಲ್ಲಿರುತ್ತದೆ. ಆದರೆ ಅವರು ಹೊಟ್ಟೆಗೆ ತಿನ್ನೋದಷ್ಟೇ ಅಲ್ಲ. ಜಿಮ್ಮಲ್ಲಿ ಗಂಟೆಗಟ್ಲೆ ಬೆವರು ಹರಿಸುತ್ತಾರೆ. ತಮ್ಮ ಬಗ್ಗೆ ತುಂಬಾ ಕೇರ್ ತೆಗೆದುಕೊಳ್ಳುತ್ತಾರೆ. ಅದಕ್ಕೆ ಸಾಕ್ಷಿ ಇಲ್ಲಿದೆ..
nabha
ಇವರು ಹೆಸರು ನಭಾ ನಟೇಶ್. ವಜ್ರಕಾಯ ಸಿನಿಮಾ ನೋಡಿವರಿಗೆ ಇವರಿಗೆ ಗೊತ್ತಿರುತ್ತದೆ. ತೆಳ್ಳಗೆ ಬೆಳ್ಳಗೆ ಇರುವ ಇವರ ನಟನೆ ನೋಡಿ ಗಂಡು ಅಭಿಮಾನಿಗಳು ಫಿದಾಗೊಂಡಿದ್ದರೆ. ಹೆಣ್ಣು ಅಭಿಮಾನಿಗಳು ಹೆಂಗಿದು ಅಂತ ಬೆರಗಾಗಿದ್ದರು. ಅವರ ಸೌಂದರ್ಯದ ಗುಟ್ಟೇನು ಅಂತ ಅವರೇ ಹೇಳಿದ್ದಾರೆ. ದಿನಾ ಬೆಳಿಗ್ಗೆದ್ದು ವರ್ಕೌಟ್ ಮಾಡುತ್ತಾರೆ. ಅವರ ವರ್ಕೌಟ್ ನ ಒಂದು ಝಲಕ್ ಇಲ್ಲಿದೆ.
ಹೀರೋಯಿನ್ ಆಗೋದು ಅಂದ್ರೆ ಸುಲಭ ಅಲ್ಲ ನೋಡಿ.

 

Like Us, Follow Us !

120,731FansLike
1,826FollowersFollow
1,409FollowersFollow
3,044SubscribersSubscribe

Trending This Week