23 C
Bangalore, IN
Tuesday, March 26, 2019

ಮುಕುಂದ -ಮುರಾರಿ ಸಪ್ಪೆಯಿಂದ ಉಪ್ಪಿಗೆ .

ಹಿಂದಿಯ ಓ ಮೈ ಗಾಡ್ ಕನ್ನಡಕ್ಕೆ ಬರುವಾಗ ಒಂದಿಷ್ಟು ಸಿಂಗಾರ ಬಂಗಾರ  ಮಾಡಿಕೊಂಡು ಮುಕುಂದ ಮುರಾರಿಯಾಗಿ ಬಂದಿದೆ. ಮಧ್ಯಮ ವರ್ಗದ ಕುಟುಂಬಸ್ಥ ನಾಸ್ತಿಕ ಮುಕುಂದ. ತನ್ನ ಬದುಕಿನ ಆಧಾರವಾಗಿದ್ದ “ಮುಕುಂದ್ ಎಂಪೋರಿಯಂ” ನೆಲಸಮವಾದಾಗ ಪರಿಹಾರಕ್ಕಾಗಿ ದೇವರ ಮೇಲೇ ಕೇಸು ಜಡಿದು ಭಗವಂತನನ್ನೇ ಧರೆಗಿಳಿಸಿಕೊಳ್ಳುವ ಜೊತೆ ಜೊತೆಗೆ ಭಕ್ತಿಯ ವ್ಯಾಪಾರ ಮಾಡುವ ಢಾ೦ಭೀಕರನ್ನು ಬಯಲಿಗೆಳೆದು  ಕಂದಾಚಾರದ ಜನರನ್ನು ಬಡಿದೆಚ್ಚರಿಸುವ ಕಥೆ ಮುಕುಂದ ಮುರಾರಿ.

ಇಷ್ಟ -ಕಷ್ಟ :

ವ್ಯವಸ್ಥೆಯ ಎದುರಿಗೆ ತೆರೆಯ ಮೇಲೆ ಜಟಾಪಟಿಗಿಳಿಯುವುದರಲ್ಲಿ ,ಬಿಸಿ ಕಜ್ಜಾಯ ಬಿಸಿ ಕಜ್ಜಾಯ ರುಚಿ ರುಚಿ ಕಜ್ಜಾಯದಂತ ಡೈಲಾಗ್ ಹೊಡೆಯುವುದರಲ್ಲಿ ಉಪೇಂದ್ರ ಪ್ರೇಕ್ಷಕರ ಫೇವರಿಟ್!! ಅವ್ರನ್ನ ಇಷ್ಟ ಪಡದವರೂ ಸಹ ಸಕ್ಕತ್ತಾಗಿ ಕಿಕ್ ಕೊಡ್ತಾನೆ ಕಣ್ರೀ ಅಂತ ತಮ್ಮ ಒಳ ವಲಯದಲ್ಲಿ ಹೇಳಿರುವುದುಂಟು. ಮುಕುಂದ ಮುರಾರಿಗೆ ನಂದಕಿಶೋರ್ ಉಪ್ಪಿಯನ್ನ ಆಯ್ಕೆ ಮಾಡಿಕೊಂಡಿದ್ದು ಇಂಥದೇ ಕಾರಣಕ್ಕಿರಬೇಕು. ಈ ಚಿತ್ರಕ್ಕೆ ಸಂಭಾಷಣೆ ಜೀವಾಳ. ಚಿತ್ರದ ಮೊದಲರ್ಧ ದಲ್ಲಿ ಕೆಲವು ಬಿಲ್ಡಪ್ ಸಾಲುಗಳ ಅವಶ್ಯಕತೆ  ಇತ್ತಾ ? ಮೊದಮೊದಲಿಗೆ ಮುಕುಂದನ ಅಭಿನಯವಂತೂ ಸಾಧಾರಣ . ಮೂಲ ಚಿತ್ರದ ಪರೇಶ್ ರಾವಲ್ ಮುಂದೆ ಪೇಲವ ಅನ್ನಿಸುತ್ತದೆ. ಕುಣಿತಕ್ಕೆ  ಹಾಕಿದ ಒಂದೆರಡು ಹೆಜ್ಜೆಗಳಲ್ಲೂ ಹೊಸದೇನು ಇಲ್ಲ. ಭಾವಾಭಿನಯದ ಕೊರತೆ ಎದ್ದು ಕಾಣುತ್ತದೆ. ಅದು ನಿರ್ದೇಶಕರ ಅಲ್ಪ ತೃಪ್ತಿಯೋ , ಇಷ್ಟು ಮಾಡಿದ್ರೆ ಸಾಕು ಅನ್ನುವ ಯಾರ ಅಸಡ್ಡೆಯೋ ಗೊತ್ತಿಲ್ಲ.

ಪರಮಾತ್ಮನ ಪರಮ ಭಕ್ತೆಯಾದ ತನ್ನ ಹೆಂಡತಿಯ ಒತ್ತಾಯಕ್ಕೆ ಅಲ್ಲದಿದ್ದರೂ ತನ್ನ ಕೆಲಸಗಾರ ದೇವರ ಮೂರ್ತಿಗಳು ಅಲ್ಲಿ ಕಡಿಮೆ ಬೆಲೆಗೆ ಸಿಗುತ್ತವೆ ಹೋಗಿಬರೋಣ ಎಂದಾಗ ಲಾಭದ ಲೆಕ್ಕಾಚಾರದಿಂದ ತೀರ್ಥಕ್ಷೇತ್ರಕ್ಕೆ ಮುಕುಂದ ಹೊರಡುತ್ತಾನೆ.ಮುಕುಂದನ ಹೆಂಡತಿಯ ಸಂಬಂಧಿ ತನ್ನ ತಾಯಿಯ ಆತ್ಮದ ಶಾಂತಿಗಾಗಿ ಬಂಧುಬಳಗವನ್ನೆಲ್ಲ ಬಸ್ಸಿನಲ್ಲಿ ಕರೆದೊಯ್ಯುತ್ತಿದ್ದಾಗ ಮುಕುಂದನ ಕುಚೇಷ್ಟೆಯಿಂದ ವೈನ್ ಕುಡಿದು ವ್ರತ ಭಂಗಿಯಾಗುತ್ತಾನೆ. ಈ  ದೃಶ್ಯ ಓ ಮೈ ಗಾಡ್ ನಲ್ಲಿ  ನೋಡಿದಾಗ ಪರೇಶರ ಹಾವಭಾವವೇ ನಗೆ ಉಕ್ಕಿಸುತ್ತದೆ.  ಮುಕುಂದನ ಮುಖದಲ್ಲಿ ಅಂಥಾ ಭಾವಗಳ ಅಭಾವ.

upendra_murari4-photo

ಅಲ್ಲಲ್ಲಿ ಇಂಥಾ ಕೊರತೆಗಳು ಕಾಣುತ್ತಿರುವಾಗಲೇ ರಿಯಲ್ ಸ್ಟಾರ್  ಮುಂಚೂಣಿಗೆ ಬರುತ್ತಾರೆ. ತನ್ನ ಶಕ್ತಿ, ಸಾಮರ್ಥ್ಯವನ್ನು ಮಾತ್ರ ನಂಬುವ ಮುಕುಂದ ಅಂಗಡಿ ಕಳೆದುಕೊಂಡು ,ಶಾಪಗ್ರಸ್ತ ಭೂಮಿಯನ್ನೂ ಮಾರಲಾಗದೆ ಇನ್ಸೂರೆನ್ಸ್ ಕಂಪನಿ ಕೊಟ್ಟ Act of God ಕಾರಣವನ್ನೂ ಒಪ್ಪಲಾಗದೆ ಕೋರ್ಟ್ ಮೆಟ್ಟಿಲೇರುತ್ತಾನೆ. ಇಲ್ಲಿಂದಲೇ ಹಂತಹಂತವಾಗಿ ಉಪ್ಪಿಯ ರುಚಿ ಸಿಗುವುದು. ದೇವರ ಮೇಲೇ ಕೇಸ್ ಹಾಕಲು  ಹೋದ ಮುಕುಂದನನ್ನ ಮೆಂಟಲ್ ಎಂದು ಜರಿದು ಎಲ್ಲರೂ ತಿರಸ್ಕರಿಸುತ್ತಾರೆ. ಕೊನೆಗೆ ಅಕ್ಬರ್ ಖಾನ್ ಎಂಬ ಹಳೆ ಹುಲಿಯ  (ಅಡ್ವೋಕೇಟ್ ) ಸಲಹೆಯಂತೆ ತನ್ನ ಕೇಸ್ ಗಾಗಿ ತಾನೇ ವಕಾಲತ್ತು ಹಾಕಿ ವ್ಯವಸ್ಥೆಯ ಮುಖಕ್ಕೆ ಕನ್ನಡಿ ಹಿಡಿದಂಥ ಹರಿತ ,ಚಾಣಾಕ್ಷ ಮಾತುಗಳಿಂದ ಕೋರ್ಟ್ ನಲ್ಲಿ ಕೇಸ್ ದಾಖಲಾಗುವಂತೆ ಮಾಡುತ್ತಾನೆ.ಮಡದಿ ,ಮಕ್ಕಳಿಂದಲೂ ತನ್ನದಲ್ಲದ ತಪ್ಪಿಗೆ ದೂರಾಗುತ್ತಾನೆ. ಮುಕುಂದ ಮನಕ್ಕೆ ಹತ್ತಿರವಾಗುತ್ತಾ ಹೋಗುವುದು ಹೀಗೆ. ಮುಕುಂದ ಮೊದಮೊದಲು ಸಪ್ಪೆ ಎನಿಸಿದರೂ ೨ನೆಯ ಭಾಗದೊತ್ತಿಗೆ ಇಷ್ಟವಾಗುತ್ತಾರೆ .

“ನಾನು ನಂಬುವುದು ನನ್ನನ್ನು ಮಾತ್ರ ” ಉಪೇಂದ್ರ ಈ ಸಾಲನ್ನ ನಮಗೂ  ತಟ್ಟುವ ,ಮುಟ್ಟುವ ಹಾಗೆ ಅತ್ಯಂತ ಸಹಜವಾಗಿ  ಹೇಳಲಿಕ್ಕೆ ಸಾಧ್ಯವಾಗಿರುವುದು ಅದು ಅವರ ನಿಜದ  ನಂಬಿಕೆಯೂ ಆಗಿರುವುದರಿಂದ.ಅವ್ರ ಸ್ವಂತಿಕೆ ,ಸಾಮರ್ಥ್ಯ ವೇ ಅವರನ್ನ ಇಷ್ಟೆತ್ತರಕ್ಕೆ ಬೆಳೆಸಿರುವುದು ತೆರೆದಿಟ್ಟ ಸತ್ಯ.  “ಸತ್ಯವಂತರಿಗೆ ನಾಸ್ತಿಕರಿಗೆ ಈ ದೇಶದಲ್ಲಿ ಬೆಲೆಯಿಲ್ಲ” “ಮನುಷ್ಯನಿಗೆ ನಂಬಿಕೆ ಇರಬೇಕು ಮೂಢನಂಬಿಕೆ ಇರಬಾರದು” ಬಡ್ಡಿ ಬ್ರದರ್ಸ್ ಹಾಗೆ ಕಣೋ  ನಮ್ಮ ಆರೋಗ್ಯವೇ ಅವರ ಭಾಗ್ಯ ” ನಾವೇ ದೇವರಾಗೋದು ಬೆಸ್ಟ್ ” ಕಿತ್ತಾಡೋಕೆ ಒಂದು ಧರ್ಮ  ಹೀಗೆ.. ಮೌಲ್ವಿ , ಸ್ವಾಮೀಜಿ ,ಪಾದ್ರಿ, ಮನೆಹಾಳ ಗುರುಗಳ ಬಣ್ಣ ಕಳಚುವಾಗ ಆಡುವ ಬಹಳಷ್ಟು ಸಾಲುಗಳನ್ನು ಕೇಳುವಾಗ ತೆರೆಯ ಮೇಲೆ ಉಪೇಂದ್ರರರನ್ನು ನೋಡುವಾಗ ಹೀಗೆ  ಬೀಸಿ ಬೀಸಿ  ಬಡಿಯುವುದಿಕ್ಕೆ ತಕ್ಕನಾದವರು ಇವರೇ ಅನ್ನಿಸಿಬಿಡುತ್ತದೆ.

mukunda-murari-photos-images-49964

ದೇವ್ರೇ ಧಮ್ ಇದ್ರೆ ಬಾರೋ ಅಂತ ಮುಕುಂದ ದೇವರಿಗೇ ಧಮ್ಕಿ ಹಾಕಿದಾಗ ಬರುವ ಭಗವಂತ ಕಣ್ಣಿನಲ್ಲೇ ಕಲೆ ಅರಳಿಸುವ ಕಲೆಗಾರ ಸುದೀಪ್ ಕಣ್ಣಿಗೆ ಹಬ್ಬ.ಮಾಡ್ರನ್ ಮುರಾರಿ. ಹೆಜ್ಜೆಹೆಜ್ಜೆಗೂ ಜೊತೆಯಾಗುತ್ತಿದ್ದರೂ ನಂಬದ ನಾಸ್ತಿಕ ಮುಕುಂದನನ್ನ  ಕರಗಿಸುವ,ತಿಳಿ ಹೇಳುವ  ಮುರಾರಿಯ ನಡೆಗಳು ನೋಡುಗರನ್ನು ವಿವೇಚನೆಗೆ ಒಡ್ಡುತ್ತವೆ.   “ದಾರಿ ತೋರುವುದು ಮಾತ್ರ ನನ್ನ ಕೆಲಸ ಗುರಿ  ಮುಟ್ಟುವುದು ನೀನೇ  ಮಾಡ್ಬೇಕು. ಗೆಲುವು ಬೇಕು ಅಂದಾಗ ಹಿಡಿಯೋ ದಾರಿ ಕಷ್ಟವೇ . ಅಂಥವರು ಒಂಟಿಯಾಗೇ ಇರ್ತಾರೆ ಇಂಥಾ ಹತ್ತಾರು ನುಡಿಗಳು ಗಟ್ಟಿ ಬೀಜಗಳು. ಮುಕುಂದನ ಅರಿವನ್ನ ವಿಸ್ತರಿಸಲು ಕೊಡುವ ಭಗವದ್ಗೀತೆ,ಕುರಾನ್ ,ಬೈಬಲ್ ಎಲ್ಲ ಕುರಿಗಳಾಗದೆ ಓದಿರೋ..ಅರಿಯಿರೋ.. ಮೌಢ್ಯ ಮೀರಿ ಮನುಷ್ಯರಾಗಿರೋ ಅನ್ನುವ ಸಂದೇಶ ಬೀರಿವೆ. ಮುರಾರಿಯಾಗಿ ಸುದೀಪ್ ಕಣ್ಣಿಗೆ ಕಟ್ಟುವಂಥಾ ಅಭಿನಯ ನೀಡಿದ್ದಾರೆ.

ಸಿದ್ದೇಶ್ವರ ಸ್ವಾಮಿಯಾಗಿ ಅವಿನಾಶರ ನಟನೆ ಅದ್ಭುತವಾಗಿದೆ. ಗುರೂಜಿಯ ಪಾತ್ರವೂ ಓಕೆ. ಮೌಲ್ವಿ ಪಾತ್ರಧಾರಿ ಮಠ ಸಹಜ ಅಭಿನಯ ಚೆನ್ನಿದೆ. ಮುಕುಂದನ ಮಗುವಿನ  ನಟನೆಯೂ ಸೆಳೆಯುತ್ತದೆ.

ಮುಕುಂದ ಮುರಾರಿ  ರಂಜನೀಯವಾಗಿ  ತಿಳಿಹೇಳುವ ಸದಭಿರುಚಿಯ ಚಿತ್ರ. ಸಹಜತೆಗೆ ಒತ್ತುಕೊಟ್ಟಿದ್ದರೆ ಮತ್ತಷ್ಟು ಆಪ್ತವಾಗುತ್ತಿತ್ತು ಅನ್ನುವುದು ಅಷ್ಟೇ ಸತ್ಯ.

 

 

 

Like Us, Follow Us !

120,431FansLike
1,826FollowersFollow
1,573FollowersFollow
4,315SubscribersSubscribe

Trending This Week