18 C
Bangalore, IN
Monday, December 18, 2017
Home ಸಿನಿಮಾ ನ್ಯೂಸ್ ಸಿನಿಮಾ ರಿವ್ಯೂ / ವಿಮರ್ಶೆ

ಸಿನಿಮಾ ರಿವ್ಯೂ / ವಿಮರ್ಶೆ

ಕೆಂಪಿರ್ವೆ ಸಿನಿಮಾ ವಿಮರ್ಶೆ ವಿಡಿಯೋ

ಕಾಲೇಜ್ ಕುಮಾರ ಪಾಸು !

ಚಿತ್ರ: ಕಾಲೇಜ್ ಕುಮಾರ್
ನಿರ್ದೇಶನ: ಹರಿ ಸಂತೋಷ್
ತಾರಾಗಣ: ವಿಕ್ಕಿ ವರುಣ್, ಸಂಯುಕ್ತ ಹೆಗಡೆ, ರವಿಶಂಕರ್, ಶ್ರುತಿ, ಪ್ರಕಾಶ್ ಬೆಳವಾಡಿ, ಅಚ್ಯುತ, ಸಾಧು ಕೋಕಿಲ, ರಾಕ್ ಲೈನ್ ಸುಧಾಕರ್, ಪ್ರಶಾಂತ್ ಸಿದ್ಧಿ, ಅಶ್ವಿನ್ ರಾವ್ ಪಲ್ಲಕ್ಕಿ ಮತ್ತಿತರರು.
ಧಾರಾಕಾರ ಮಳೆ ಸುರಿಯುವ ರಾತ್ರಿ ಒಂದು ಅವಮಾನದಿಂದ ಹುಟ್ಟುವ ಕತೆ ಇದು. ಅಲ್ಲೊಬ್ಬ ಬಾಸು, ಅವನ ಕೈಕೆಳಗೆ ಕೆಲಸ ಮಾಡುವ ಒಬ್ಬ ಮಧ್ಯಮ ವರ್ಗದ ಪ್ರಜೆ. ಆ ಬಾಸ್ ಮಾಡುವ ಅವಮಾನಕ್ಕೆ ಪ್ರತೀಕಾರ ತೀರಿಸಬೇಕು ಅನ್ನುವುದು ಅವನ ಆಸೆ. ಎಲ್ಲಾ ಮಧ್ಯಮ ವರ್ಗದ ತಂದೆಯರಂತೆ ತನ್ನ ಮಗ ತನ್ನ ಆಸೆಯನ್ನು ತೀರಿಸಬೇಕು ಅನ್ನುವುದು ಅವನಿಚ್ಛೆ.
ತನ್ನ ಮಗ ತನ್ನ ಕನಸನ್ನು ನನಸು ಮಾಡಬೇಕು ಅನ್ನುವ ಕಾರಣಕ್ಕೆ ಎಂಥಾ ಕಷ್ಟ ಬಂದರೂ ಎದುರಿಸುವೆ ಅನ್ನುವ ತ್ಯಾಗಮಯಿ ಮಿಡ್ಲ್ ಕ್ಲಾಸ್ ತಂದೆ ಅವನು. ಆದರೆ ಯಾವಾಗ ತನ್ನ ಕನಸು ನೆರವೇರದು ಎಂದು ಅರಿವಾಗಿ ಆರಡಿ ಪ್ರತಿಭೆ, ಮಾತಿನ ಮಲ್ಲ ಅಪ್ಪ ರವಿಶಂಕರ್ ಮಾತು ಸೋತು ಕುಸಿದು ಕೂರುತ್ತಾನೋ ಆಗ ನಿರ್ದೇಶಕ ಹರಿ ಸಂತೋಷ್ ಗೆಲ್ಲುತ್ತಾರೆ.
ಅಪ್ಪ ರವಿಶಂಕರ್ ಆತಂಕದಲ್ಲಿ, ಅಮ್ಮ ಶ್ರುತಿ ಕಳವಳದಲ್ಲಿ, ಮಗ ವಿಕ್ಕಿ ವರುಣ್ ಆಕ್ರೋಶದಲ್ಲಿ ಒಂದು ತಣ್ಣನೆಯ ಮೌನವಿದೆ. ವಿಷಾದವಿದೆ. ಅವೆಲ್ಲವೂ ಪ್ರೇಕ್ಷಕನಿಗೆ ನಾಟುತ್ತದೆ. ಅದು ನಿರ್ದೇಶಕರ ಶಕ್ತಿ.
ಇಲ್ಲಿ ಎರಡು ಜನರೇಷನ್ ಇದೆ. ಒಂದು ತಂದೆ ಒಬ್ಬ ಮಗ. ಅತ್ತ ಪೋಷಕರು ಇತ್ತ ಮಕ್ಕಳು. ಆಕಡೆ ಹಳೇ ಜನರೇಷನ್ ಈ ಕಡೆ ಹೊಸ ಜನರೇಷನ್. ಅವರ ತಳಮಳ, ಇವರ ಒತ್ತಡ, ಅವರ ಆಕಾಂಕ್ಷೆ, ಇವರ ಒದ್ದಾಟ, ಅವರ ಕನಸು, ಇವರ ಟೆನ್ಷನ್, ಅವರ ಶ್ರಮ, ಇವರ ಮೋಜು ಎಲ್ಲವೂ ಇಲ್ಲಿ ಬಂದು ಹೋಗುತ್ತದೆ. ಅವರು ತಪ್ಪಿದ್ದಾರೋ ಇವರು ತಪ್ಪಿದ್ದಾರೋ ಅನ್ನುವುದನ್ನು ನೇರವಾಗಿ ಹೇಳುವುದಿಲ್ಲ. ಒಂದೊಮ್ಮೆ ಪಾತ್ರ ಬದಲಾದಾಗ ಅವರಿಗೆ ಇವರಿಗೆ ಎಲ್ಲರಿಗೂ ಜ್ಞಾನೋದಯ ಮಾಡಿಸುತ್ತಾರೆ ನಿರ್ದೇಶಕರು. ಆದರೆ ಈ ಹಂತದಲ್ಲಿ ಸ್ವಲ್ಪ ಎಡವುತ್ತಾರೆ.
ಕೆಲವು ಕತೆಗಳನ್ನು ತಣ್ಣಗೆ ಹೇಳಿದರೆ ಸೊಗಸು. ಸಣ್ಣ ದನಿಯಲ್ಲಿ ಕಾಡುವಂತೆ ಹೇಳಬೇಕು. ಆದರೆ ಹರಿ ಸಂತೋಷ್ ಇಲ್ಲಿ ಸಣ್ಣ ದನಿಯಲ್ಲಿ ಮೆಲ್ಲಗೆ ಕತೆ ಹೇಳುವ ಹೊತ್ತಲ್ಲಿ ದೊಡ್ಡ ದನಿಯಲ್ಲಿ ಕತೆ ಹೇಳುತ್ತಾರೆ. ಅದು ಕತೆಗೆ ಒಳ್ಳೆಯದಲ್ಲ.
ಮಂದ್ರ ಸ್ಥಾಯಿಯಲ್ಲಿ ಸ್ವಲ್ಪ ಸೂಕ್ಷ್ಮವಾಗಿ ಕತೆ ಹೇಳಿದ್ದರೆ ಬೇರೆಯದೇ ಹಂತಕ್ಕೆ ಹೋಗಬಹುದಾಗಿದ್ದ ಕತೆಗೆ ಮೆಲೋಡ್ರಾಮಾಟಿಕ್ ಗುಣ ದಯಪಾಲಿಸಿ ಅಲ್ಲೇ ನಿಲ್ಲಿಸುತ್ತಾರೆ ಮತ್ತು ಮುಗಿಸುತ್ತಾರೆ. ಅದನ್ನು ಹೊರತು ಪಡಿಸಿದರೆ ನಿರ್ದೇಶಕರು ನಿಜಕ್ಕೂ ಮೆಚ್ಚುಗೆಗೆ ಪಾತ್ರರು.
ವಿಲನ್ ಗಳನ್ನು ಇಷ್ಟ ಪಡುವ ಸಂಯುಕ್ತ ಹೆಗಡೆ, ದುರಹಂಕಾರಿ ಆಡಿಟರ್ ಪ್ರಕಾಶ್ ಬೆಳವಾಡಿ, ಮಗಳನ್ನು ಸಿಕ್ಕಾಪಟ್ಟೆ ಇಷ್ಟಪಡುವ ಮತ್ತು ಅದನ್ನು ತೋರಿಸಿಕೊಳ್ಳದ ತಂದೆ ಅಚ್ಯುತ್, ಗಂಡನ ನೋವಿಗೆ ಹೆಗಲು ಕೊಟ್ಟು ನಗುತ್ತಲೇ ನಿಟ್ಟುಸಿರಾಗುವ ಪತ್ನಿ ಶ್ರುತಿ, ಗೆದ್ದು ಸೋಲುವ ಸೋತು ಗೆಲ್ಲುವ ವಿಕ್ಕಿ ವರುಣ್ ಇಷ್ಟವಾಗುತ್ತಾರೆ. ಅದರಲ್ಲೂ ರವಿಶಂಕರ್ ಎಲ್ಲವನ್ನೂ ಮೀರಿಸಿ ತಾನೇ ಆವರಿಸಿಕೊಳ್ಳುತ್ತಾರೆ. ಕನಸು ನುಚ್ಚುನೂರಾದಾಗ ಅವರ ಹಣೆಯಲ್ಲಿ ಮೂಡುವ ನೆರಿಗೆಗಳು ಸಾಕು ಅವರೊಬ್ಬ ಅದ್ಭುತ ನಟ ಎಂದು ಹೇಳಲು. ಅವರು ಡೈಲಾಗ್ ರಾಜನಷ್ಟೇ ಅಲ್ಲ, ಎಕ್ಸ್ ಪ್ರೆಷನ್ ಬಾದ್ ಷಹಾ ಕೂಡ ಹೌದು. 
ಇನ್ನಿಬ್ಬರನ್ನು ಇಲ್ಲಿ ನೆನೆಯಬೇಕು. ಅವರು ಛಾಯಾಗ್ರಾಹಕ ಅಝಗನ್ ಮತ್ತು ಸಂಗೀತ ನಿರ್ದೇಶಕ ಅರ್ಜುನ್ ಜನ್ಯಾ. ಈ ಚಿತ್ರದ ಮಧ್ಯಂತರದ ದೃಶ್ಯದಲ್ಲಿ ರವಿಶಂಕರ್, ಶ್ರುತಿ, ವಿಕ್ಕಿಯಷ್ಟೇ ಕಾಡುವುದು ಅಝಗನ್ ಮತ್ತು ಅರ್ಜುನ್. ಆ ದೃಶ್ಯವನ್ನು ಅಝಗನ್ ಎಷ್ಟು ಪರಿಣಾಮಕಾರಿಯಾಗಿ ಚಿತ್ರೀಕರಿಸುತ್ತಾರೆ ಅಂದರೆ ಆ ದೃಶ್ಯದಲ್ಲಿ ಪಾತ್ರಧಾರಿ ತಲೆ ತಗ್ಗಿಸಿದಾಗ ನೋಡುಗ ನಿಟ್ಟುಸಿರು ಬಿಡುತ್ತಾನೆ.
ಹರಿ ಸಂತೋಷ್ ನಿರ್ದೇಶನದ ಈ ಕಾಲೇಜ್ ಕುಮಾರನ ಕತೆ ಕಾಲೇಜ್ ನಲ್ಲಿ ಕಳೆದ ದಿನಗಳಷ್ಟೇ ಖುಷಿ ಮತ್ತು ವಿಷಾದವನ್ನು ದಯಪಾಲಿಸುತ್ತದೆ. ಈ ಸಿನಿಮಾ ಸ್ವಲ್ಪ ನಿಧಾನವಾಗಿದ್ದರೂ ಬೋರ್ ಹೊಡೆಸುವುದಿಲ್ಲ.
– ರಿಚ್ಚೀ

ಕಾಲೇಜ್ ಕುಮಾರ್ ಸಿನಿಮಾ ವಿಮರ್ಶೆ ವೀಡಿಯೋ ಇಲ್ಲಿದೆ

ಅಮಾಯಕ ನಟರಿಗೆ ಮತ್ತೊಬ್ಬ ನಿರ್ದೇಶಕನ “ಹಾಲುತುಪ್ಪ”

ಗಡ್ಡಪ್ಪ ಮತ್ತು ಸೆಂಚುರಿ ಗೌಡ ಎಂಬಿಬ್ಬರು ಅಮಾಯಕ ನಟರು ಕನ್ನಡ ಚಿತ್ರರಂಗಕ್ಕೆ ಸಿಕ್ಕಿದ್ದು ತಿಥಿ ಚಿತ್ರದ ಮೂಲಕ. ಅನಂತರ ಅನೇಕ ನಿರ್ದೇಶಕರು ಅವರನ್ನು ನಾನಾ ರೀತಿಯಲ್ಲಿ ಬಳಸಿಕೊಂಡಿದ್ದಾರೆ. ಕಡೆಯದಾಗಿ ಈಗ ಹಾಲು ತುಪ್ಪ ಕೂಡ ಆಗಿ ಹೋಗಿದೆ.

ಈ ಇಬ್ಬರನ್ನು ಬಳಸಿಕೊಂಡು ಹಾಲು ತುಪ್ಪ ಸಿನಿಮಾ ಮಾಡುತ್ತಾರೆ ಅಂತನ್ನುವಾಗಲೇ ನಿರ್ದೇಶಕ ಶಶಾಂಕ್ ರಾಜ್ ಎಂತಹ ಸಿನಿಮಾ ಪ್ರೇಮಿ ಅನ್ನುವ ಅಂದಾಜು ಸಿನಿಮಾ ಪ್ರೇಮಿಗಳಿಗೆ ಸಿಕ್ಕಿರಬಹುದು. ಅದನ್ನು ಒಂದಿಷ್ಟೂ  ಬದಲಿಸುವ ಪ್ರಯತ್ನವನ್ನು ನಿರ್ದೇಶಕರು ಮಾಡಿಲ್ಲ.

ಇಲ್ಲೊಂದು ಹಳ್ಳಿ ಇದೆ. ಹಳ್ಳಿಯಲ್ಲಿ ನಾಲ್ಕೈದು ಮಂದಿ ಪ್ರತಿಷ್ಟಿತ ವ್ಯಕ್ತಿಗಳಿದ್ದಾರೆ. ಅವರಲ್ಲಿ ಗಡ್ಡಪ್ಪ, ಸೆಂಚುರಿ ಗೌಡ, ಕೋಟೆ ನಾಗರಾಜ್, ತಮ್ಮಣ್ಣ, ಹೊನ್ನವಳ್ಳಿ ಕೃಷ್ಣ ಮುಖ್ಯರು. ಅವರೊಂದಿಗೆ ಆಗೊಮ್ಮೆ ಈಗೊಮ್ಮೆ ಬರುವ ನಾಯಕ ಪವನ್ ಸೂರ್ಯ ಇರುತ್ತಾರೆ. ಲವ್ವಿಗೆ ಪಕ್ಕದೂರಿನ ಹುಡುಗಿ ಮೌನ ಇದ್ದಾಳೆ. ಈ ಹಳ್ಳಿಗೂ ಆ ಹಳ್ಳಿಗೂ ದ್ವೇಷವಿದೆ ಅಂತಲೇ ಕತೆ ಶುರು ಮಾಡುವ ನಿರ್ದೇಶಕರು ಅನಂತರ ಈ ಹಳ್ಳಿಗೊಂದು ಕಂಪ್ಯೂಟರ್ ಟೀಚರ್ ಅನ್ನು ಕರೆದುಕೊಂಡು ಬರುತ್ತಾರೆ. ನಿರ್ದೇಶಕರ ಕಲ್ಪನೆ ಎಷ್ಟು ಅದ್ಭುತವಾಗಿದೆ ಎಂದರೆ ಆ ಟೀಚರ್ ಶಾಲೆಗೆ ಹೋಗುವುದೇ ಇಲ್ಲ. ಅದರ ಬದಲಿಗೆ ಹಳ್ಳಿಯ ಪ್ರತಿಷ್ಟಿತರ ಜೊತೆ ತೋಟ ಸುತ್ತುತ್ತಾ ಕಂಪ್ಯೂಟರ್ ಪಾಠ ಹೇಳುತ್ತಾ ಕಾಲ ಕಳೆಯುತ್ತಾರೆ. ಯಾವ ಊರಲ್ಲೂ ಸಿಗದ ಕಂಪ್ಯೂಟರ್ ಟೀಚರ್ ಇಲ್ಲಿ ಸಿಗುತ್ತಾರೆ ಅಂದರೆ ಲೆಕ್ಕ ಹಾಕಿ ಎಂಥಾ ತಲೆ ಈ ಚಿತ್ರದ ನಿರ್ದೇಶಕರದು ಎಂದು.

ಆ ಪಾತ್ರಗಳಂತೂ ಟೀಚರ್‌ನ ಹಿಂದಕ್ಕೂ ಮುಂದಕ್ಕೂ ಓಡಾಡಿ ,ಅಡ್ಡಾಡಿ, ಮಾತಾಡಿ.. ನುಲಿದಾಡಿ ನೋಡುತ್ತಿದ್ದವರನ್ನು ಗಾಬರಿಗೊಳಿಸಿಬಿಡುತ್ತಾರೆ. ಇವನ್ನೆಲ್ಲಾ ನೋಡುತ್ತಿದ್ದರೆ ಸಹೃದಯ ನೋಡುಗರು ಸಂಕಟ ಬಂದಾಗ ವೆಂಕಟರಮಣ ಅನ್ನೋ ಥರ ನಿರ್ದೇಶಕರನ್ನು ನೂರಾರು ಬಾರಿ ನೆನೆಯದೇ(ಉಗಿಯುತ್ತಾ ) ಇದ್ದರೆ ಕೇಳಿ. ಅದು ಶಶಾಂಕ್ ರಾಜ್ ಅವರ ಶಕ್ತಿ.

ಇಲ್ಲಿ ಗಡ್ಡಪ್ಪ ಪಾತ್ರವೊಂದನ್ನು ಬಿಟ್ಟರೆ ಯಾವ ಪಾತ್ರಕ್ಕೂ ಘನತೆ ಇಲ್ಲ. ಕತೆ, ಚಿತ್ರಕತೆಯ ಮೇಲಂತೂ ಕಿಂಚಿತ್ತೂ  ಗೌರವ ಇಲ್ಲ. ಟಾರ್ಚ್ ಹಾಕಿ ಹುಡುಕಿದರೂ ಒಳ್ಳೆಯ ದೃಶ್ಯ ಸಿಗುವುದಿಲ್ಲ. ನಗಿಸಬೇಕೆಂದೇ ಹೇಳುವ ಡಬಲ್ ಮೀನಿಂಗ್ ಡೈಲಾಗ್‌ಗಳನ್ನು ಕೇಳಿದರೆ ನಗು ಬರುವುದಿಲ್ಲ.ಮೈ ಉರಿದುಹೋಗತ್ತೆ ಅಷ್ಟೇ . ಕೀಳು ಅಭಿರುಚಿಯ ಪ್ರತೀಕವಷ್ಟೇ . ಹಾಗಾಗಿ ಈ ಸಿನಿಮಾಗೆ ಹಾಲು ತುಪ್ಪ ಎಂಬ ಟೈಟಲ್ಲು ಸರಿಯಾಗಿ ಹೊಂದುತ್ತದೆ.

ಈ ಚಿತ್ರದಲ್ಲಿ ನಿಮಗೆ ಏನಾದರೂ ಇಷ್ಟವಾದರೆ ಅದು ಇಬ್ಬರೇ. ಅದು ಗಡ್ಡಪ್ಪ ಮತ್ತು ಸೆಂಚುರಿ ಗೌಡ. ಅವರ ಉಪಸ್ಥಿತಿಯೇ ಖುಷಿ ಕೊಡುವುದು. ಆದರೆ ಅವರನ್ನು ನೋಡುವಾಗ ಪಾಪ ಅನ್ನಿಸುತ್ತದೆ. ತಿಥಿ ಸಿನಿಮಾದಲ್ಲಿ ಅವರು ನಟಿಸಿರಲಿಲ್ಲ, ಕಾಣಿಸಿಕೊಂಡಿದ್ದರು. ಆದರೆ ಅನಂತರ ಬಂದ ಎಲ್ಲಾ ಸಿನಿಮಾದಲ್ಲೂ ಅವರಿಂದ ನಟನೆ ತೆಗೆಯುವ ಪ್ರಯತ್ನ ನಡೆಯಿತು. ಅಲ್ಲದೇ ಈ ಸಿನಿಮಾದಲ್ಲಿ ಸೆಂಚುರಿ ಗೌಡರನ್ನು ನೋಡಿದರೆ ಪಾಪ ಅನ್ನಿಸದೇ ಇರದು.

ಕಡೆಯದಾಗಿ ಹೇಳುವುದಾದರೆ ಈ ಸಿನಿಮಾದ ಕತೆಯಲ್ಲೇ ದೋಷವಿದೆ. ಚಿತ್ರಕತೆಯಂತೂ ರಾಮಾ .. ರಾಮಾ.. ಕನ್ನಡ ಚಿತ್ರರಂಗಕ್ಕೆ ಎಂಥೆಂಥ ಅರೆಬೆಂದವರು ಬರ್ತಾರಪ್ಪ ಅನ್ನಿವಷ್ಟು ಕಷ್ಟ ಕಷ್ಟ. ಯಾರೇ ಆಗಲಿ ಸಿನಿಮಾ ಮಾಡುವವರು ಮೊದಲು ಶ್ರದ್ಧೆಯಿಂದ ಕತೆ, ಚಿತ್ರಕತೆ ಮಾಡಿಕೊಳ್ಳಬೇಕು. ಅದರಲ್ಲಿ ಸೋಮಾರಿತನ- ತೋರಿಸಬಾರದು.ಸಿನಿಮಾ ಮಾಡುವ ಕಲೆ  ಗೊತ್ತಿರಬೇಕು . ಇಲ್ಲಿ ಯಾವ ದೃಶ್ಯವೂ ನಿಮ್ಮನ್ನು ಕಾಡುವುದಿಲ್ಲ ಮತ್ತು ನೆನಪಲ್ಲಿ ಉಳಿಯುವುದಿಲ್ಲ. ಹಾಗಾಗಿ ನಾನು ಈ ಚಿತ್ರಕ್ಕೆ ಐದರಲ್ಲಿ ಒಂದು ಸ್ಟಾರ್ ನೀಡುತ್ತೇನೆ.

– ರಿಚ್ಚೀ

 

ಒನ್ಸ್ ಮೋರ್ ಕೌರವ ಸಿನಿಮಾ ವಿಮರ್ಶೆ ವಿಡಿಯೋ ಇಲ್ಲಿದೆ

ನಿರ್ದೇಶಕರ ಕೊಳಕು ಅಭಿರುಚಿಗೆ ಸಾಕ್ಷಿಯೇ ‘ಟೈಗರ್ ಗಲ್ಲಿ’? ವಿಮರ್ಶೆ ವಿಡಿಯೋ ಇಲ್ಲಿದೆ

ಬದುಕಿಗೊಂದು ಅರ್ಥವಿದೆ ‘ದಯವಿಟ್ಟು ಗಮನಿಸಿ’

‘ದಯವಿಟ್ಟು ಗಮನಿಸಿ’, ಮೈಸೂರಿನಿಂದ ಹೊರಟ ರೈಲು ಈಗ ರ್ಫಲಾಟ್ ಫಾರ್ಮ್ ಮೂರರಲ್ಲಿ ಬಂದು ನಿಲ್ಲಲಿದೆ ಅನ್ನೋ ಅನೌನ್ಸ್‌ಮೆಂಟ್‌ನೊಂದಿಗೆ ಶುರುವಾಗುವ ಸಿನಿಮಾ.. ರೈಲಿನ ಪಯಣದಂತೆ ಇಡೀ ಜೀವನ ಪಯಣವನ್ನ ವರ್ಣಿಸುತ್ತಾ ಸಾಗುತ್ತದೆ.. ಸಾಮಾನ್ಯ ಜನರ ಜೀವನದ ಚಿತ್ರಣವನ್ನ ನಾಲ್ಕು ವಿಭಿನ್ನ ರೀತಿಯ ಕಥೆಗಳ ಮೂಲಕ ನಿರ್ದೇಶಕ ರೋಹಿತ್ ಪದಕಿ ತಮ್ಮ ಚಿತ್ರದಲ್ಲಿ ಬಹಳ ಅಚ್ಚುಕಟ್ಟಾಗಿ ಕಟ್ಟಿಕೊಟ್ಟಿದ್ದಾರೆ..

ಮದುವೆಯಾಗದೇ ಮಧ್ಯ ವಯಸ್ಸಿಗೆ ಬಂದಿರೋ ವ್ಯಕ್ತಿಯೊಬ್ಬನಿಗೆ ಆ ನಡುವಯಸ್ಸಿನಲ್ಲಿ ವಿವಾಹವಾಗೋ ಅವಕಾಶ ಒಲಿದು ಬರುತ್ತೆ, ಇನ್ನೊಂದ್ಕಡೆ ಪ್ರಾಕ್ಸಿ ಅನ್ನೋ ಪಿಕ್‌ಪಾಕೆಟರ್, ಭ್ರಾಂತಿಯಿಂದ ಹೊರಬರಬೇಕೆಂದು ಒದ್ದಾಡುವ ಸನ್ಯಾಸಿ ಒಂದ್ಕಡೆ, ಮತ್ತೊಂದ್ಕಡೆ ಈಗಿನ ಮೆಕ್ಯಾನಿಕಲ್ ಲೈಫ್‌ಸ್ಟೈಲ್‌ನಲ್ಲಿ ಸದಾ ಕೆಲಸದಲ್ಲೇ ಮುಳುಗಿದ್ದು, ಹೆಂಡತಿಯೊಂದಿಗೆ ಮನಸ್ಥಾಪ ಮಾಡಿಕೊಂಡಿರುವ ಸಾಫ್ಟ್‌ವೇರ್ ಇಂಜಿನಿಯರ್ ಈ ನಾಲ್ಕೂ ರೀತಿಯ ವಿಭಿನ್ನ ಜನರ ಜೀವನ ಶೈಲಿಯನ್ನ ಒಂದೇ ಚಿತ್ರದಲ್ಲಿ ಹೆಣೆಯಲಾಗಿದೆ..

ಎಲ್ಲರ ಜೀವನದಲ್ಲೂ ಇರುವಂತಹ ಜಾತಿ, ಜಗಳ, ಪ್ರೇಮ, ಕಾಮ, ಕುಟುಂಬ, ಕಟ್ಟುಪಾಡು, ದುಃಖ, ಗೋಳಾಟ ಇವೆಲ್ಲವನ್ನೂ ನಾಲ್ಕು ಬೇರೆ ಬೇರೆ ಕಥೆಗಳ ಮೂಲಕ ತೆರೆ ಮೇಲೆ ತಂದಿದೆ ದಯವಿಟ್ಟು ಗಮನಿಸಿ ಚಿತ್ರತಂಡ.. ಹಾಗಾಗಿ ಚಿತ್ರದ ಪ್ರತಿಯೊಂದು ಕಥೆಗಳೂ ಸಹ ನೋಡುಗರ ಕುತೂಹಲವನ್ನ ಹೆಚ್ಚಿಸುತ್ತಾ, ಅವರ ಗಮನವನ್ನ ಹಿಡಿದಿಟ್ಟುಕೊಳ್ಳುತ್ತೆ.. ಇನ್ನೂ ಈ ವಿಭಿನ್ನ ಕಥೆಗಳಲ್ಲಿ ರಾಜೇಶ್ ನಟರಂಗ, ವಸಿಷ್ಠ ಸಿಂಹ, ರಘು ಮುಖರ್ಜಿ, ಭಾವನಾ ರಾವ್, ಸಂಗೀತಾ ಭಟ್, ಪ್ರಕಾಶ್ ಬೆಳವಾಡಿ, ಸುಕೃತಾ ವಾಗ್ಲೆ, ಸಂಯುಕ್ತ ಹೊರನಾಡು ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.. ಇಲ್ಲಿ ಎಲ್ಲರ ಗಮನ ಸೆಳೆಯೋ ಮತ್ತೊಂದು ಅಂಶ ಅಂದ್ರೆ, ಅನೂಪ್ ಸೀಳಿನ್ ಅವರ ಸಂಗೀತ ಸಂಯೋಜನೆಯ ಸೊಗಸಾದ ಹಾಡುಗಳು.. ಜೊತೆಗೆ ಮೇಘನಾ ರಾಜ್ ಅವರ ಒಂದು ಸ್ಪೆಷಲ್ ಸಾಂಗ್ ಕೂಡ ಈ ಚಿತ್ರ ಸೆಂಟರ್ ಆಫ್ ಅಟ್ರ್ಯಾಕ್ಷನ್..

ಇಲ್ಲಿವರೆಗೂ ಸಾಕಷ್ಟು ಚಿತ್ರಗಳಲ್ಲಿ ವಿಲನ್ ಗೆಟಪ್‌ನಲ್ಲೇ ಹೆಚ್ಚಾಗಿ ಕಾಣಿಸಿಕೊಂಡಿದ್ದ ನಟ ವಸಿಷ್ಠ, ಇದೇ ಮೊದಲ ಬಾರಿಗೆ ದಯವಿಟ್ಟು ಗಮನಿಸಿ ಚಿತ್ರದ ಮೂಲಕ ಹೀರೋ ಲುಕ್‌ನಲ್ಲಿ ಎಂಟ್ರಿ ಕೊಟ್ಟಿರೋದು ವಿಶೇಷ.. ಚಿತ್ರದಲ್ಲಿನ ಎಲ್ಲವೂ ಬೇರೆ ಬೇರೆ ಕಥೆಗಳು ಅನ್ನಿಸಿದ್ರೂ ನಂತ್ರ ಒಂದಕ್ಕೊಂದು ಇಂಟರ್ ಲಿಂಕ್ ಇದೆ ಅನ್ನೋದು ನಿಧಾನವಾಗಿ ನೋಡುಗನ ಗಮನಕ್ಕೆ ಬರುತ್ತೆ.. ಒಟ್ಟಾರೆ ಚಿತ್ರದಲ್ಲಿನ ವಿಭಿನ್ನ ರೀತಿಯ ಕಥೆಗಳು, ಸಂಭಾಷಣೆ, ಸೊಗಸಾದ ಹಾಡುಗಳು, ಅರವಿಂದ್ ಕಶ್ಯಪ್ ಅವರ ಅದ್ಭುತ ಕ್ಯಾಮೆರಾ ವರ್ಕ್‌ನಿಂದಾಗಿ ದಯವಿಟ್ಟು ಗಮನಿಸಿ ಸಿನಿಮಾ ಬಹಳ ಅದ್ಭುತವಾಗಿ ಮೂಡಿಬಂದಿದೆ.. ಇದು ಎಲ್ಲರೂ ಕೂಡ ನೋಡಬೆಕಾದ ಸಿನಿಮಾ…

ಹುಲಿರಾಯ ಸಿನಿಮಾ ವಿಮರ್ಶೆ

ತಾರಕ್ ಸಿನಿಮಾ ವಿಮರ್ಶೆ ವಿಡಿಯೋ ಇಲ್ಲಿದೆ ನೋಡಿ .

ತಾರಕ್ ಸಿನಿಮಾ ಹೇಗಿತ್ತು ? ಸಂಪೂರ್ಣ ವಿಮರ್ಶೆ ಈ ವಿಡಿಯೋದಲ್ಲಿದೆ

Like Us, Follow Us !

121,079FansLike
1,815FollowersFollow
1,346FollowersFollow
1,650SubscribersSubscribe

Trending This Week