28.1 C
Bangalore, IN
Sunday, November 18, 2018
Home ಸಿನಿಮಾ ನ್ಯೂಸ್ ಸಿನಿಮಾ ರಿವ್ಯೂ / ವಿಮರ್ಶೆ

ಸಿನಿಮಾ ರಿವ್ಯೂ / ವಿಮರ್ಶೆ

“1/4 kg ಪ್ರೀತಿ” ಹಿಂಗೈತಪ್ಪ .

‘1/4 ಕೆಜಿ ಪ್ರೀತಿ” ಹದಿಹರೆಯದಲ್ಲಿ ಪುಟಿಯುವ ಪ್ರೀತಿಯ ಕಥಾನಕ. ಪ್ರೀತಿಯ  ಕಥೆಗಳು ಎಷ್ಟೇ ಬಂದರೂ ಒಂದೊಂದು ಭಾವಾಭಿವ್ಯಕ್ತಿಯು ವಿಭಿನ್ನ . ಇಲ್ಲಿ ಯವ್ವನದಲ್ಲಿ ಜಿಗಿಜಿಗಿವ ಪ್ರೀತಿಯನ್ನು ಪಯಣಿಸುತ್ತಾ ಬೆಳೆಸುವ ಪ್ರಯತ್ನವಿದೆ.

ನಿರ್ದೇಶನ:

16997850_1838088716408062_8961386620895110134_n

ಪ್ರವಾಸವೆಂದರೆ ಕಾಲಿಗೆ ಚಕ್ರ ಕಟ್ಟುವ ನಿರ್ದೇಶಕ ಸತ್ಯಶೌರ್ಯ ಸಾಗರ್ ಯೋಗರಾಜ್ ಭಟ್ಟರ ಸಲಹೆಯಂತೆ ಚಿತ್ರಕ್ಕೆ  ‘1/4 ಕೆಜಿ ಪ್ರೀತಿ” ಅಂತ ಹೆಸರಿಟ್ಟದ್ದು ಸರಿಯಾಗೇ ಇದೆ. ಇದೊಂಥರ ಕಾಲೇಜು ದಿನಗಳಲ್ಲಿ ಸಾಮಾನ್ಯವಾಗಿ ಎಲ್ಲ ಹುಡುಗರಲ್ಲೂ ಹುಟ್ಟುವ ಹಸಿ ಹಸಿ  ಪ್ರೀತಿ. ಅವಳ ಒಂದು ನೋಟಕ್ಕಾಗಿ, ನಗೆಗಾಗಿ, ಸಮ್ಮತಿಗಾಗಿ ಹಾತೊರೆಯುವ ಯುವಕರ ಮನಸ್ಸಿನ ಕನ್ನಡಿ. ಸಾಮಾನ್ಯವಾಗಿ ಕಾಲೇಜು ಅಂದಮೇಲೆ ಹೀರೋ ವಿಲನ್ ಮಧ್ಯೆ ಒಂದಿಷ್ಟು ಗಲಾಟೆ , ಗುದ್ದಾಟ, ಸೇಡು, ಪ್ರತಿಕಾರ ಇವೆಲ್ಲ ಸಿನಿಮಾದಲ್ಲಿ ನೋಡ್ತಾ ಬಂದಿದ್ದೇವಲ್ಲ.  ‘1/4 ಕೆಜಿ ಪ್ರೀತಿ”ಯಲ್ಲಿ ಅದ್ಯಾವುದು ಇಲ್ಲ. ತಣ್ಣಗೆ ಹರಿಯುತ್ತಾ  ಆಗೀಗ ಸಣ್ಣ ಗುಡ್ಡ ಹತ್ತಿಳಿವಾಗ ಕೊಸರಾಡುವ ನದಿಯಂಥಾ ಸಿನಿಮಾ. ಅತಿಯಾಗಿ ನಾಯಕನನ್ನು ವಿಜೃಂಭಿಸದೆ ಸಹಜತೆಗೆ ಒತ್ತುಕೊಡಲು ಪ್ರಯತ್ನಿಸಿದಂತಿದೆ. ಬದುಕಿನ ದೃಷ್ಟಿ ಕೋನವನ್ನೇ ಬದಲಿಸಬಲ್ಲ ಪಯಣದ  ಮೂಲಕ ಪ್ರೀತಿಯನ್ನು ಅರಳಿಸುವ ಪ್ರಯತ್ನಕ್ಕೆ ಸತ್ಯಶೌರ್ಯ ಸಾಗರ್ ಹೊರಟಿದ್ದರೂ  ನೋಡುಗರಿಗೆ ರೋಮಾಂಚನವೆನಿಸುವ ತಿರುವುಗಳನ್ನು ಹೆಣೆಯುವುದರಲ್ಲಿ ಯಶಸ್ಸು ಕಂಡಿಲ್ಲ. ದೃಶ್ಯ ಕಟ್ಟುವ ಕಲೆಯಲ್ಲೂ ಪರಿಣಿತಿ ಸಾಧಿಸಬೇಕಿದೆ. ಭಾವಲೋಕದಲ್ಲಿ ಹಿಡಿದಿಟ್ಟುಕೊಳ್ಳುವ ಸಂಭಾಷಣೆ ಸಾಧಿಸಿಕೊಂಡಿದ್ದರೆ ಚೆನ್ನವಿತ್ತು.

ನಿಹಾನ್ ಎಂಬ ಲವ್ ಲವಿಕೆಯ ನಟ

maxresdefault‘1/4 ಕೆಜಿ ಪ್ರೀತಿ” ಸಿನಿಮಾ ಅಲ್ಪಸ್ವಲ್ಪ ಇಷ್ಟವಾಗಿ ಸಿನಿಮಾ ಮುಗಿಯುವವರೆಗೂ ಪ್ರೇಕ್ಷಕರನ್ನ ಮಂದಿರದಲ್ಲಿ ಪಟ್ಟಾಗಿ ಕೂರಿಸೋ ಲವ್ ಲವಿಕೆಯ ಅಭಿನಯ ನಾಯಕ ನಿಹಾನ್ ಗೌಡ ಅವರದ್ದು.  ಮೂಗಿನ ತುದಿಯಲ್ಲೇ ಕೋಪ ಒಂಥರಾ ಬೇಕಾಬಿಟ್ಟಿ ಅಶಿಸ್ತಿನ ಅವತಾರ ಪುರುಷನಾಗಿದ್ದ ಕಾಲೇಜು ಹುಡುಗ ಗುರು ತಾನು ಮೆಚ್ಚಿದ ಹುಡುಗಿಗಾಗಿ ಶಿಸ್ತಿನ ಸಿಪಾಯಿ..ಕರೆದಲ್ಲಿಗೆ ಬರುವ ಕಾಮಧೇನು.. ಓಹ್ .. ಒಳ್ಳೆ ಹುಡುಗ ಹೀಗೆ ಬದಲಾಗುವ ಭಾವಗಳನ್ನು ಕಣ್ಣಲ್ಲೇ ಬಿಂಬಿಸಿದ್ದಾರೆ ನಿಹಾನ್. ಹುಟ್ಟಿದ ಪ್ರೀತಿಯನ್ನ ಹೇಳಿದರೆಲ್ಲಿ ಸರಿದು ಹೋದಿತೋ ಎಂಬ ಆತಂಕದ ಸನ್ನಿವೇಶದ ಜೊತೆಗೆ ಹೇಳದೆ ಇರಲಾರೆನೆಂಬ ತಹತಹದ ದೃಶ್ಯಗಳಲ್ಲೂ ನಿಹಾನ್ ನೀರು ಕುಡಿದಷ್ಟೇ ಸಹಜವಾಗಿ ಅಭಿನಯಿಸಿದ್ದಾರೆ. ಬಿಗಿದಪ್ಪಿ ಬಾಳಸಂಗಾತಿಯಾಗಬಾರದೇ ಎಂಬ ಕನಸಿನ ಕನ್ಯೆ ತನ್ನ ಪಕ್ಕದಲ್ಲೇ ಕುಳಿತು ಪಯಣಿಸುತ್ತಿದ್ದರೂ ಹೇಳಲಾರದ ,ತಾಳಲಾರದ ಚಡಪಡಿಕೆಯ ಘಳಿಗೆಗಳು, ತನ್ನ ಪ್ರೀತಿ ಗೊತ್ತಾದ ಮೇಲೆಯೂ ಆಟವಾಡಿಸುವ, ಅಪಹಾಸ್ಯ ಮಾಡುವ ನಾಯಕಿ ಶ್ರೀ ಯ ಜೊತೆಗಿನ ಕಚಕಚ ಕಿತ್ತಾಟ , ಸಿಟ್ಟು ,ಸೆಡವು , ಕಿರಿಕಿರಿಪಿರಿಪಿರಿ ಕ್ಷಣಗಳಲ್ಲೂ ವಿಹಾನ್ ನಟನೆ ಇಷ್ಟವಾಗುವಂಥದ್ದು . ಸೇರಿಗೆ ಸವ್ವಾಸೇರಿನಿಸುವಂಥ ಮಾತುಗಳನ್ನು ಪಟಪಟನೆ ಸಿಡಿಸುವಂಥ ಧ್ವನಿಯ ಏರಿಳಿತವಿರುವ ನಿಹಾನ್ ಗೆ ಗಟ್ಟಿ ಸಂಭಾಷಣೆ ಸಿಗಬೇಕಿತ್ತು. ಹೊಳೆಪುಗಣ್ಣಿನ ಚೆಲುವ ನಿಹಾನ್ ಕಣ್ಣಿನಲ್ಲೇ ಕಲೆ ಅರಳಿಸುವ ಕಲಾವಿದನಾಗುವ ಲಕ್ಷಣಗಳನ್ನಂತೂ ತೋರಿದ್ದಾರೆ. ಹಾವಭಾವಗಳು ಮತ್ತಷ್ಟು ಮಸೆಯಬೇಕಿದೆ. ಕಡೆಕಡೆದು ಕಲ್ಲು ಕಲಾಕೃತಿಯಾಗುವ ಹಾಗೆ ಪ್ರತಿಭೆಯನ್ನು ಪಳಗಿಸಿಕೊಳ್ಳಬೇಕಷ್ಟೆ.

ಹಿತವಾದ ಅಭಿನಯ

hqdefault ನಾಯಕಿ “ಶ್ರೀ” ಪಾತ್ರಧಾರಿ ಹಿತಾ ಚಂದ್ರಶೇಖರ್ ಅಭಿನಯ ಚುರುಕಾಗಿ, ಹಿತವಾಗಿಯೂ ಇದೆ. ಮಾತಿನ ಮಾಡ್ಯೂಲೇಷನ್ ಗೆ ಕಮ್ಮಿಯೇನು ಇಲ್ಲ. ತಾಯಿ ಸಿಹಿಕಹಿ ಗೀತಾ ಧ್ವನಿಯ ಪಡಿಯಚ್ಚಿನಂತಿದೆ. ಅಥವಾ ಗೀತಾ ಅವರೇ dabb ಮಾಡಿದ್ದಿರಬಹುದು. ತನ್ನ ರೂಪ, ನಡವಳಿಕೆಗೆ ಮನಸೋತು ಹಿಂದೆ ಬೀಳುವ ಹುಡುಗನನ್ನು ಗೋಳು ಹುಯ್ದುಕೊಳ್ಳುವ ತುಂಟತನದ ,ಆತ್ಮವಿಶ್ವಾಸ ತುಂಬಿದ ಒಳ್ಳೆ ಹುಡುಗಿಯ ಪಾತ್ರದಲ್ಲಿ ಹಿತ ಭಾವಾಭಿನಯ ಭರವಸೆ ಮೂಡಿಸುವಂತಿದೆ.

ಇದ್ದಿದ್ದ್ರೆ ಚೆನ್ನಾಗಿರ್ತಿತ್ತಪ್ಪ

. ಭಾವಕ್ಕೆ ತಕ್ಕ ಸಂಗೀತದ ಲೇಪನ

. ಚುರುಕು ಮುಟ್ಟಿಸುವ ಗಟ್ಟಿಯಾದ ಸಂಭಾಷಣೆ

.ಕಣ್ಣಿಗಬ್ಬವಾಗುವ ದೃಶ್ಯಗಳು

.ಭಾವತೀವ್ರತೆಯ ಸನ್ನಿವೇಶಗಳು

.ಕುತೂಹಲ ಹುಟ್ಟಿಸುವ ತಿರುವುಗಳು

ನೋಡ್ಬೇಕಾ ? ಯಾಕೆ ?

ಫೈಟು , ಕೇಡಿಗಳು, ಅಶ್ಲೀಲ ದೃಶ್ಯಗಳು ಇಲ್ಲದ ಸಿನಿಮಾ. ಚೆನ್ನಾದ ನಟನೆ ಇದೆ. ಕನ್ನಡದ ಹೊಸ ನಿರ್ದೇಶಕರ ಒಳ್ಳೆ  ಪ್ರಯತ್ನ.  ಒಂದ್ಸಲ ನೋಡಬಹುದು. ಕೊಟ್ಟ ಕಾಸಿಗೆ   ‘1/4 ಕೆಜಿ ಮನರಂಜನೆ ಗ್ಯಾರಂಟಿ.

 

 

 

ಹೇಗಿದೆ ಪಟಾಕಿ ಸಿನಿಮಾ ? – ವಿಡಿಯೋ । Pataki Movie Review Video

‘ಟಗರು’ ರೀಲು ಬರಹದಲ್ಲಿ ನಟನೆಯೇ ಹೀರೋ, ಕತೆಯೇ ವಿಲನ್!

‘ರೀಲು ಬರಹ’ ಒಂಚೂರು ಚೇಂಜ್ ಆಗಿರೋ ಪ್ರಯುಕ್ತ ಲಾಂಗ್ ಕಲಾಕಾರ್ ಶಿವಣ್ಣ ಮತ್ತು ದುನಿಯಾ ಸೂರಿ ಕಾಂಬಿನೇಷನ್ “ಕಡ್ಡಿಪುಡಿ’ ಸಿನಿಮಾದಲ್ಲಿ ಮಾಡಿದ ಮೋಡಿ ‘ಟಗರು’ ಚಿತ್ರದಲ್ಲಿ ಕಂಡು ಬಂದಿಲ್ಲ. ಹಾಗಂಥ ಸಿನಿಮಾ ಸಾರಸಗಟು ಚನ್ನಾಗಿಲ್ಲ ಅಂತ ಅರ್ಥ ಅಲ್ಲ. ಆದರೆ ಕಥಾಹಂದರ ನೋಡಿದಾಗ ಕೇಸರಿಬಾತ್ಗೆ ಚಟ್ನಿ ಬೆರೆಸಿ ಕೊಟ್ಟಂಗಿದೆ. ಹೀರೋ ಶಿವು ರೌಡಿ ಚಿಟ್ಟೆ ಪಾತ್ರದ ವಶಿಷ್ಠನನ್ನು ಕೊಚ್ಚಿ ಮಚ್ಚಿನ ತುದಿಯಲ್ಲಿ ಕಾಲರ್ ಸಿಕ್ಕಿಸಿಕೊಂಡು ಬಾಡಿ ಎಳೆದುಕೊಂಡು ಹೋದಂತೆ ಸೂರಿಯೇನಾದರೂ ಪ್ರೇಕ್ಷಕರ ಕುತೂಹಲ ಮತ್ತು ಭಾವನೆಯನ್ನು ಆರಂಭದಿಂದ ಅಂತ್ಯದವರೆಗೂ ಕಾಪಿಟ್ಟುಕೊಂಡಿದ್ದರೆ ಚಿತ್ರ ಸೂಪರ್ ಹಿಟ್ ಆಗುತ್ತಿದ್ದುದರಲ್ಲಿ ಯಾವುದೇ ಅನುಮಾನ ಇರಲಿಲ್ಲ.

ಆದರೆ ಆಗಿರುವುದೇ ಬೇರೆ. ಮಧ್ಯಂತರದವರೆಗೆ ಸಿನಿಮಾ ಯಾವ ದಿಕ್ಕಿನಲ್ಲಿ ಓಡುತ್ತಿದೆ ಎಂದೇ ಅರ್ಥವಾಗುವುದಿಲ್ಲ. ನಂತರ ಕತೆಯ ಎಳೆಗಳು ಒಂದಕ್ಕೊಂದು ಬೆರೆತು ಅರ್ಥ ಆಗುವಷ್ಟರಲ್ಲಿ ಸಿನಿಮಾ ಮುಗಿದು ಹೋಗಿರುತ್ತದೆ. ಇಲ್ಲೇನು ಮಿಸ್ ಹೊಡೀತು ಎಂಬ ಭಾವದೊಂದಿಗೆ ಪ್ರೇಕ್ಷಕ ಹೊರಬಂದಿರುತ್ತಾನೆ. ಇದರ ಸಂಪೂರ್ಣ ಹೊಣೆಗಾರರು ಸೂರಿಯೇ!

ಓಂ, ಜೋಗಿ, ಕಡ್ಡಿಪುಡಿಯಂತೆಯೇ ಟಗರುವಿನಲ್ಲೂ ಮಚ್ಚೇ ಹೀರೋ, ಮಚ್ಚೇ ವಿಲನ್. ಶಿವಣ್ಣ ಪೊಲೀಸ್ ಅಧಿಕಾರಿ ಪಾತ್ರದಲ್ಲಿರುವುದರಿಂದ ಪಿಸ್ತೂಲಿಗೂ ಗೌರವವಿದೆ. ಸ್ಟೈಲೀಸ್ ಬಳಕೆಯಲ್ಲಿ ಮಚ್ಚು, ಪಿಸ್ತೂಲು ಎರಡಕ್ಕೂ ನ್ಯಾಯ ಒದಗಿಸಿರುವ ಶಿವಣ್ಣನ ನಟನೆ ಬಗ್ಗೆ ಮಾತಾಡುವಂತಿಲ್ಲ. ಆದರೆ ವಿಲನ್ ಪಾತ್ರದ ಧನಂಜಯ ಮತ್ತು ವಶಿಷ್ಟ ಪೈಪೋಟಿಗೆ ಬಿದ್ದು ಭೇಷ್, ವಾಹ್ ಅಂತೆನ್ನಿಸಿಕೊಳ್ಳುವಂತೆ ನಟಿಸಿದ್ದಾರೆ. ಧನಂಜಯ ಅವರಂತೂ ತೆಲುಗಿನ ರಾಣಾ ದಗ್ಗುಬಾಟಿ ಹಾಗೂ ಹಿಂದಿಯ ರಣವೀರ್ ಸಿಂಗ್ ದಾರಿಯಲ್ಲಿದ್ದಾರೆ ಎಂದರೆ ಅತಿಶಯೋಕ್ತಿ ಆಗಲಾರದು. ಸ್ವೇಚ್ಛೆಯನ್ನೇ ತನ್ನಿಚ್ಚೆ ಮಾಡಿಕೊಂಡ ಫ್ರೀಬರ್ಡ್ ಹುಡುಗಿ ಪಾತ್ರದಲ್ಲಿ ಮಾನ್ವಿತಾ ರೆಕ್ಕೆ ಮುರಿದು ಬಿದ್ದಿದ್ದಾರೆ .ಅದಕ್ಕೆ ತದ್ವಿರುದ್ಧ ಅಕ್ಕನ ಪಾತ್ರದಲ್ಲಿ ಭಾವನಾ  ಉತ್ತಮ ನಟನೆ ಕೊಟ್ಟಿದ್ದಾರೆ. ಬೇಸಿಗೆ ಮಳೆಯಂತೆ ಚಿತ್ರದಲ್ಲಿ ಸುಳಿಯುವ ಪ್ರೇಮಕತೆ ರೌಡಿಸಂ ಮುಂದೆ ಸೊರಗಿದ ಹೀರೆಕಾಯಿಯಂತಾಗುತ್ತದೆ.

ಕತೆ ವಿಚಾರಕ್ಕೆ ಮರಳುವುದಾದರೆ ಅಮಾಯಕ ಹುಡುಗಿಯರನ್ನು ಪಟಾಯಿಸಿ ಮುಗಿಸುವ ಹನಿ ಟ್ರಾಪ್ ದಂಧೆಗೆ ಕನೆಕ್ಟ್ ಆಗುವ ರೌಡಿಸಂ ವಾರಸುದಾರರಾದ ಕಾಕ್ರೋಚ್ , ಅವರಣ್ಣ ಡಾಲಿ, ‘ರಕ್ತಗೆಳೆಯ’ ಚಿಟ್ಟೆ ಇವರನ್ನೆಲ್ಲ ಕಪಿಮುಷ್ಟಿಯಲ್ಲಿಟ್ಟುಕೊಂಡು ತನ್ನ ಕುಯುಕ್ತಿಯಿಂದಲೇ ಆಳುವ ಅಂಕಲ್ ಬಾಸ್, ಇವರನ್ನೆಲ್ಲ ಮಟ್ಟ ಹಾಕಲು ನಿಯೋಜಿತರಾಗುವ ಪೊಲೀಸ್ ಅಧಿಕಾರಿ ಶಿವು ಒಬ್ಬೊಬ್ಬರನ್ನೇ ಸಫಾ ಮಾಡುವ ಮೊದಲು ಹೊಡೆಯುವ ಡೈಲಾಗ್ ಗಳು ಶಿಳ್ಳೆ, ಚಪ್ಪಾಳೆ ಗಿಟ್ಟಿಸುತ್ತವೆ. ಕೂದಲು ಬಿಟ್ಟೊರೆಲ್ಲ ಗಂಡಸೇ ಆಗುವುದಿದ್ದರೆ ಕರಡಿ ದೊಡ್ಡ ಗಂಡಸು ಆಗಬೇಕಿತ್ತು, ನೀನಾರಿಗಾದೆಯೋ ಎಲೆ ಮಾನವ ಗೀತೆ ರಚನೆಕಾರರ ಹೆಸರೇಳಿದರೇ ಜೀವ ತೆಗೆಯದೇ ಬಿಡುತ್ತೇನೆ ಎಂದು ರೌಡಿಗಳಿಗೆ ಕೊಡುವ ಆಫ್ಸನ್  ಸೇರಿದಂತೆ ರೌಡಿಗಳ ಜತೆ ಶಿವಣ್ಣನ ಶಬ್ದವೈಡೂರ್ಯ ಕತೆ ಮೀರಿ ಪ್ರೇಕ್ಷಕನ ಮನದಲ್ಲಿ ನಿಲ್ಲುತ್ತದೆ. ಜಯಂತ್ ಕಾಯ್ಕಿಣಿ ಅವರ ‘ಗುಮ್ಮ ಬಂದ ಗುಮ್ಮ’ ಸೇರಿದಂತೆ ಕೆಲ ಹಾಡುಗಳು ಸ್ತೃತಿಪಟಲದಲ್ಲಿ ಮಾರ್ಧನಿಸುತ್ತವೆ. ಸಂಗೀತ ಸೊಂಪಾಗಿದೆ. ಮಹೇಂದ್ರ ಸಿಂಹ ಅವರ ಛಾಯಾಗ್ರಹಣ ಹಿತವಾಗಿದೆ. ಆದರೆ ಚಿತ್ರಕ್ಕೆ ಕತೆಯ ಓಘವೇ ವಿಲನ್. ನಟನೆಯೇ ಹೀರೋ. ಹೀಗಾಗಿ ನಿರೀಕ್ಷೆ ಪಕ್ಕಕ್ಕಿಟ್ಟು ಸಿನಿಮಾ ನೋಡಬಹುದು. ಆದರೆ ಯಾವುದೇ ಕಾರಣಕ್ಕೂ ‘ಬಂಗಾರ ಪಂಜರ’ದ ಅಣ್ಣಾವ್ರ ‘ಮೈಲಾರಿ’ ನೆನೆಸಿಕೊಂಡು ‘ಟಗರು’ ಕಲ್ಪಿಸಿಕೊಳ್ಳಬೇಡಿ. ಹಾಗೇನಾದರೂ ಕಲ್ಪಿಸಿಕೊಂಡರೆ ಟಗರುವಿನಿಂದ ಗುದ್ದಿಸಿಕೊಳ್ಳೋದು ಗ್ಯಾರಂಟಿ!
-ಭಾನುಮತಿ

“ಶ್ರೀಕಂಠ” ನೊಡನೆ ಒಂದು ಸುತ್ತು..

ನಮ್ಮ ಸುತ್ತ ನಿತ್ಯ ನಡೆಯುವ , ನಾವು ಕೇಳಿಯೂ ಕಿವುಡರಂತಿರುವ, ಕಂಡರೂ ತಲೆ ಕೆಡಿಸಿಕೊಳ್ಳದೇ  ಉಫ್… ಎಂದು ಗಾಳಿಗೆ ತೂರಿಬಿಟ್ಟ ಸಂಗತಿಗಳಿಗೆ ರಾಚಿದ ಕನ್ನಡಿ “ಶ್ರೀಕಂಠ”.

srikanta-photos-images-43793ನಿರ್ದೇಶನ :

ನಾಗತೀಹಳ್ಳಿ ಚಂದ್ರಶೇಖರ್ ಅವರ ಕಥೆ “ಸ್ಖಲನ” ಆಧರಿಸಿ ಅದರಲ್ಲಿನ ಕೆಲವು ಸಾಲುಗಳನ್ನು ಕೊಂಚ ಮಾರ್ಪಡಿಸಿ ಬಳಸಿಕೊಂಡಿರುವ ಮಂಜು ಸ್ವರಾಜ್ ಚಿತ್ರಕಥೆಯನ್ನು ಚೆನ್ನಾಗಿಯೇ ಹೆಣೆದಿದ್ದಾರೆ.

srikanta-director ಓಟಿಗಾಗಿ ನಮ್ಮ ರಾಜಕಾರಣಿಗಳು ಹೂಡುವ ತಂತ್ರಗಳು, ಅವರಾಟಗಳು ತಿಳಿದ ಮೇಲೂ ಮರೆತು ಮತ್ತೆ ಅಂಥವರನ್ನೇ ಆಯ್ಕೆ ಮಾಡುವ ಜನರ ಮನಃಸ್ಥಿತಿ, ತನ್ನ ಗುರಿಸಾಧನೆಗಾಗಿ ಅಮಾಯಕರನ್ನು ಬಲಿಪಶು ಮಾಡುವ, ಭಾವನಾತ್ಮಕವಾಗಿ ಜನರನ್ನು ಸುಲಿಯುವ ಸೋಗಲಾಡಿಗಳು, ಬೀದಿಬದಿಯ ಅತಂತ್ರ ಬದುಕು ಎಲ್ಲವನ್ನು ಎಳೆಎಳೆಯಾಗಿ ಬಿಚ್ಚಿಟ್ಟಿದ್ದಾರೆ. ಒರಟರನ್ನು ಕಂಡಾಗ ಅದರಲ್ಲೂ ಅನಾಥರನ್ನು ಕಂಡಾಗ ಅಸಹ್ಯಿಸಿಕೊಳ್ಳುವ ಮನಸ್ಸುಗಳಿಗೆ  ಚಿತ್ರ ನೋಡುತ್ತಾ ಅವರೆಡೆಗೆ ಒಂದು ಕನಿಕರ ಹುಟ್ಟುತ್ತದೆ. ತಂದೆ-ತಾಯಿಯ ಆರೈಕೆಯಲ್ಲಿ, ಮಾರ್ಗದರ್ಶನದಲ್ಲಿ  ಬೆಳೆದ ಎಷ್ಟೋ ಮಕ್ಕಳು ಅಡ್ಡದಾರಿ ಹಿಡಿದ ಉದಾಹರಣೆಗಳು ಸಾಕಷ್ಟಿವೆ. ಗುರುವಿಲ್ಲದೆ , ಗುರಿಯಿಲ್ಲದೆ ತುತ್ತುಣಿಸುವ ಕೈಗಳಿಲ್ಲದೆ ಬೆಳೆದ ಜೀವ ಒರಟಾಗುವುದರಲ್ಲಿ ಆಶ್ಚರ್ಯವಿಲ್ಲ. ಇಂಥಾ ಕಥೆಯನ್ನು ಮನಮುಟ್ಟುವ ಹಾಗೆ ನಿರ್ದೇಶಿಸಿದ್ದಾರೆ ಮಂಜು.

srikanta-shivasrikanta-chandini

ಮತ್ತೊಂದು ಮಗ್ಗುಲಲ್ಲಿ ಪ್ರೀತಿಗೆ ಸೋಲದ ಜೀವವೇ ಇಲ್ಲ ಎಂಬುದನ್ನೂ  ದಾಖಲಿಸಿದ್ದಾರೆ. ಹಣ,ಅಧಿಕಾರದ ಬೆಂಬಲವಿಲ್ಲದ  ಸಾಮಾನ್ಯನೊಬ್ಬ ಭ್ರಷ್ಟ ವ್ಯವಸ್ಥೆಯ ವಿರುದ್ಧ ಸಿಡಿದಾಗ ಕಾಣದ ಕೈಗಳ ಕಬಂಧ  ಬಾಹುಗಳು ಹೇಗೆ ಅವನನ್ನ ಅದುಮಲು ನಿಲ್ಲುತ್ತವೆ ಎನ್ನುವುದನ್ನು ಪರಿಣಾಮಕಾರಿಯಾಗಿ ತೋರಿಸಿದ್ದಾರೆ . ಎಷ್ಟೇ ಹೊಡೆತ ಬಿದ್ದರೂ ಸುಲಭಕ್ಕೆ ಚಾಳಿ ಬಿಡದ ಜನರ ಮನಃಸ್ಥಿತಿಯನ್ನು ಬಿಚ್ಚಿಟ್ಟಿದ್ದಾರೆ. ಇಮೇಜ್ಗೆ ತಲೆಕೆಡಿಸಿಕೊಳ್ಳದೆ ಶಿವರಾಜ್ ಕುಮಾರ್  ಅವರನ್ನ ಪಾತ್ರ ಬೇಡುವಂತ ರಸ್ತೆ ಬದಿಯಲ್ಲೂ ಮಲಗಿಸಿದ್ದಾರೆ. ಪಾತ್ರಗಳನ್ನೂ ಚೆನ್ನಾಗಿಯೇ ದುಡಿಸಿಕೊಂಡಿದ್ದಾರೆ. “ಸ್ಖಲನ” ದಂಥ ಪ್ರಯಾಣಿಸುತ್ತಲೇ ಬದಲಾಗುವ ಮನಃಸ್ಥಿತಿಯ ಕಥೆಗೆ ಸಾಮಾನ್ಯನ ಬದುಕಿನ ನಿತ್ಯದ ಸಂಗತಿಗಳನ್ನು ಸೇರಿಸಿ  ಸಮರ್ಥವಾಗಿ ನಿರ್ದೇಶಿಸಿದ್ದಾರೆ.

ಅಭಿನಯ

srikanta-addasrikanta-chandini1

ಸೀದಾ ಸಾದಾ ,ತಗದಾ -ವಗದಾ ಎನ್ನುವಂಥ, ಕಾಸಿಗಾಗಿ ಹಿಂದು ಮುಂದು ನೋಡದೆ ಕೆಲಸ ಮಾಡುವ, ಅಪ್ಪಟ ಒರಟುತನದ ನಡುವೆಯೂ ಕಷ್ಟಕ್ಕೆ ಕರಗುವ, ಅನ್ಯಾಯ, ಸೋಗಲಾಡಿತನದ ವಿರುದ್ಧ ಸಿಡಿದೇಳುವ ಸಾಮಾನ್ಯನ ಪಾತ್ರದಲ್ಲಿ ಶಿವರಾಜ್ ಕುಮಾರ್ ಅಭಿನಯ ಮೆಚ್ಚುವಂಥಾದ್ದು. ಪ್ರೀತಿಸಿ ಮದುವೆಯಾಗಲು ಬಂದ ಹುಡುಗಿಗೆ ತನ್ನ ಅತಂತ್ರ ಬದುಕನ್ನು ಬಯಲಾಗಿಸುವಾಗ, ಮದುವೆಯಾದಮೇಲೂ ಬಿಡದ ಒರಟುತನ, ಪ್ರೀತಿಯ ಅರಿವಾದಾಗ ನಡೆಯುವ ರೀತಿ, ಕಾರು ಓಡಿಸುವಾಗ ಮಡುಗಟ್ಟಿದ ದುಃಖದ ನಡುವೆಯೂ ಗುಟ್ಟು ಬಿಡದ ಗಟ್ಟಿತನ. ಹಣಕ್ಕೆ ತಕ್ಕ ಕೆಲಸದ ಬದ್ಧತೆ ಹೀಗೆ ಎಲ್ಲ ಸನ್ನಿವೇಶಗಳಲ್ಲೂ ಶಿವರಾಜ್ಕುಮಾರ್ ನಟನೆಗೆ ಸಲಾಂ ಹೇಳಲೇ ಬೇಕು.

srikanta-chandini2

ಚಾಂದಿನಿ– ನಾಯಕಿ ಚಾಂದಿನಿ ನಾಯಕನಿಗೆ ಚಿಕ್ಕವಳಂತೆ ಕಂಡರೂ ಅಭಿನಯದಲ್ಲಿ ಸೊಗಸಿದೆ. ಮುಗ್ದತೆ ಯ ಜೊತೆಗೆ ಪ್ರಬುದ್ಧತೆ ಬೇಡುವ ಸನ್ನಿವೇಶಗಳಲ್ಲೂ ನಟನೆ ಚೆನ್ನವಿದೆ.

vijay-raghavendra-20140526101454-3381

ಪತ್ರಕರ್ತನಾಗಿ  ಕಾರಿನಲ್ಲಿ ಊರು ಸೇರುವ ಆಸೆಯಿಂದ ಶ್ರೀಕಂಠನ  ಜೊತೆ ಕೂತು ಪಟಪಟನೆ ಮಾತನಾಡುವ, ಆಸೆಯಾದರು ತೀರಿಸಿಕೊಳ್ಳಲಾಗದ ಸಣ್ಣ ಸೋಗಿನ, ಆಗ್ಗಾಗೆ ಬರುವ ಸಿಟ್ಟನ್ನು ತೋರಲಾಗದೆ ತಡೆಹಿಡಿವ, ಸತ್ಯ ತಿಳಿದ ಮೇಲೆ ಭಾವುಕನಾಗುವ ಎಲ್ಲ ಸನ್ನಿವೇಶಗಳಲ್ಲೂ ವಿಜಯ್ ರಾಘವೇಂದ್ರ ಇಷ್ಟವಾಗುವ ಕಲಾವಿದ.

kirik-achyuth

ಅಚ್ಯುತ– ನೀವೇನೇ ಕೊಟ್ರು ಸೈ. ಮಾಡಿ ತೋರಿಸ್ತೀನಿ ರೈ.. ರೈ.. ಅನ್ನುವಂಥ  ಕಲಾವಿದ. ನಟನೆಯ ಬಗ್ಗೆ ಎರಡು ಮಾತಿಲ್ಲ.

srikanta-aswinikirik-hanumante

ಥೇಟ್ ಸಿದ್ದರಾಮಯ್ಯನವರಂತೆ ಕಾಣುವ,ಮಾತನಾಡುವ  ಹನುಮಂತೇಗೌಡ್ರು, ಜರ್ನಲಿಸ್ಟ್ ಪಾತ್ರಧಾರಿ ಅಶ್ವಿನಿ ಹೀಗೆ ಎಲ್ಲ ಪಾತ್ರಧಾರಿಗಳು  ನ್ಯಾಯ ಒದಗಿಸಿದ್ದಾರೆ.

ಸಂಭಾಷಣೆ– ನಮ್ಮ ನಮ್ಮ ಯೋಚನೆ, ಸಾಮಾಜಿಕವಾಗಿ ನಾವು ನಡೆದುಕೊಳ್ಳುವ ರೀತಿ ಎಲ್ಲವನ್ನು ಎಲ್ಲಿಯೂ ಸಡಿಲಗೊಳಿಸದೆ ಹೆಣೆದ ಸಂಭಾಷಣಾಕಾರನಿಗೆ ಮೆಚ್ಚುಗೆ ಸಲ್ಲಲೇ ಬೇಕು.

“ಶ್ರೀಕಂಠ” ಮನೆಮಂದಿಯೆಲ್ಲ ಕೂತು ನೋಡಬೇಕಾದ, ಪ್ರತಿಯೊಬ್ಬರೂ ನೋಡಲೇ ಬೇಕಾದ ಸಿನಿಮಾ.

 

 

 

ತರ್ಲೆ ವಿಲೇಜ್ ಎಂಬ ಕಿತ್ತುಹೋದ ಸಿನಿಮಾ

ಸರ್ಕಾರೀ ಕೆಲಸನೇ ದೇವರ ಕೆಲಸ ಸಿನಿಮಾ ವಿಮರ್ಶೆ । Sarkari Kelasa Devara Kelasa Movie Review

ಸರ್ಕಾರೀ ಕೆಲಸನೇ ದೇವರ ಕೆಲಸ ಸಿನಿಮಾ ವಿಮರ್ಶೆ । Sarkari Kelasa Devara Kelasa Movie Review

ಕೆಂಪಿರ್ವೆ ಸಿನಿಮಾ ವಿಮರ್ಶೆ ವಿಡಿಯೋ

Maasthigudi Movie Review | ಮಾಸ್ತಿಗುಡಿ ಚಿತ್ರ ವಿಮರ್ಶೆ

Maasthigudi Movie Review | ಮಾಸ್ತಿಗುಡಿ ಚಿತ್ರ ವಿಮರ್ಶೆ

ಟಗರು ವಿಡಿಯೋ ವಿಮರ್ಶೆ

Like Us, Follow Us !

120,916FansLike
1,826FollowersFollow
1,563FollowersFollow
3,414SubscribersSubscribe

Trending This Week