18 C
Bangalore, IN
Tuesday, December 19, 2017
Home ಸಿನಿಮಾ ನ್ಯೂಸ್ ಸಿನಿಮಾ ರಿವ್ಯೂ / ವಿಮರ್ಶೆ

ಸಿನಿಮಾ ರಿವ್ಯೂ / ವಿಮರ್ಶೆ

ನಿಧಾನಿಸಿ ಯೋಚಿಸಿದಾಗ ಆಳಕ್ಕಿಳಿಯುವ “ಬ್ಯುಟಿಫುಲ್ ಮನಸ್ಸುಗಳು”

“ಕೇಳಿದ್ದೂ ಸುಳ್ಳಾಗಬಹುದು ನೋಡಿದ್ದೂ ಸುಳ್ಳಾಗಬಹುದು ನಿಧಾನಿಸಿ ಯೋಚಿಸಿದಾಗ ನಿಜವು  ತಿಳಿವುದು” ಈ ಸಾಲನ್ನ ಮತ್ತೆ ಮತ್ತೆ ನೆನಪಿಸುವ ಸಿನಿಮಾ  “ಬ್ಯುಟಿಫುಲ್ ಮನಸ್ಸುಗಳು”. ಕಥೆಯೇ ಇಲ್ಲಿ ಜೀವಾಳ. ೨೦೧೩ರರಲ್ಲಿ ನಡೆದ ಸತ್ಯ ಘಟನೆಯನ್ನ ಅಬ್ಬರವಿಲ್ಲದೆ, ಹೊಡಿಬಡಿಗಳ ಹಾರಾಟವಿಲ್ಲದೆ ನಿಧನಿಧಾನವಾಗಿ ಒಳ ಒಳ.. ಒಳ ಮನಸ್ಸಿಗೆ ಮುಟ್ಟಿಸುವ ಚಿತ್ರವಿದು.

beautiful cinema 3

ನಿರ್ದೇಶನ:

ಮೊದಲಾರ್ಧದಲ್ಲಿ ಮಾಮೂಲಿ ಪ್ರೇಮ ಕಥೆ ಥರ ಇದೆಯಲ್ಲ ಅನ್ನಿಸುವ ಹಾಗೆ ತೋರಿಸುತ್ತ ಮಧ್ಯೆ ಮಧ್ಯೆ ಮಾಧ್ಯಮಗಳ  (ನ್ಯೂಸ್ ಚಾನೆಲ್) ಕೆಲವು ಮಕ್ಕಿಕಾಮಕ್ಕಿ, ಪೆಕರುತನದ  ಜೊತೆಗೆ “ಬ್ಯುಟಿಫುಲ್ ಮನಸ್ಸುಗಳು”ಅನ್ನೋ ಒಂದೊಳ್ಳೆ ಕಾರ್ಯಕ್ರಮವನ್ನು ತೆರೆಯ ಮೇಲೆ ತಿರುಗಾಡಿಸುತ್ತ ಕುತೂಹಲವನ್ನು ಕಾದಿಟ್ಟುಕೊಳ್ಳುತ್ತಾರೆ ಜಯತೀರ್ಥ.

jayathirtha

ಕೇವಲ ಮೊದಲ ನೋಟದ ಆಕರ್ಷಣೆಯೇ ಪ್ರೀತಿ . ಅಥವಾ ಇಷ್ಟ ಆಗಿಬಿಟ್ರೆ ಸಾಕು ಅದೇ ಪ್ರೀತಿ ಅನ್ನೋ ಭ್ರಮೆಯಲ್ಲಿ ಉಡಾಫೆ ಬದುಕು ದೂಡೋದು ಅಲ್ಲ. ಪ್ರೀತಿ ಅಂದ್ರೆ ನಂಬಿಕೆ, ಜವಾಬ್ದಾರಿ, ಪರಸ್ಪರ ಗೌರವ, ತಾಳುವಿಕೆ ಅನ್ನುವುದನ್ನು ಸಮರ್ಥವಾಗಿ ಕಟ್ಟಿದ್ದಾರೆ. ಯಾರದೋ ಮನೆಯ ಜಗಳ, ಮತ್ಯಾರದೋ ಬದಿಯ ಬದುಕನ್ನು ಬೀದಿಗೆ ತಂದು ಹಿಂದು -ಮುಂದು ಯೋಚಿಸದೆ ಪರಿಣಾಮವನ್ನು ಲೆಕ್ಕಿಸದೆ ಮತ್ತೆ ಮತ್ತೆ ದೃಶ್ಯರೂಪದಲ್ಲಿ ಬಿತ್ತರಿಸಿ ಸಾಮಾಜಿಕ ಬದ್ಧತೆಯನ್ನು ಬದಿಗೊತ್ತುವ ಕೆಲ ವಾಹಿನಿಗಳ ಪೊಳ್ಳುತನ, ಭ್ರಷ್ಟತನವನ್ನ ತೆರೆಗೆಳೆದು ತಂದಿದ್ದಾರೆ ಜಯತೀರ್ಥ.

beautiful cinema 5

ಹೆಣ್ಣುಮಕ್ಕಳ ಮೇಲೆ ಆರೋಪಗಳು ಬಂದಾಗ ಅದರಲ್ಲೂ ವೇಶ್ಯಾವಾಟಿಕೆಯಂಥವು ಕೇಳಿದಾಗ ಸ್ವಲ್ಪವೂ ವಿವೇಚಿಸದೆ ರೋಚಕವಾಗಿ ಪದೇ ಪದೇ ತೋರಿಸುವ ಕೆಲ ಮಾಧ್ಯಮಗಳ ಬಗ್ಗೆ ಅಸಹ್ಯವುಟ್ಟಿದರೂ ಹೆಣ್ಣುಮಕ್ಕಳ ವಿಷಯದಲ್ಲಿ ಸಣ್ಣ ಸತ್ಯವಲ್ಲದ ಚಾಡಿ ಮಾತು ಕೇಳಿದಾಗಲೂ  ಬಾಯಿಂದ ಬಾಯಿಗೆ ಹರಿಯಬಿಟ್ಟು ಅವಳ ಬಾಳಿನ ಬಣ್ಣಗೆಡಿಸುವ ನಮ್ಮ ಜನರ ಮನಸ್ಥಿತಿಯ ಮುಖಕ್ಕೂ ಭೂತಗಾಜು ಬಿಟ್ಟು ನೋಡಿಕೊಳ್ಳಿ ನಿಮ್ಮ ಕೊಳಕು ಮನಃಸ್ಥಿಯನ್ನ ಎನ್ನುವಂತೆ ತೋರಿಸಿದ್ದಾರೆ. ರಕ್ಷಕ ಭಕ್ಷಕನಾದಾಗ ಅಮಾಯಕರ ಪಾಡು ಇಲ್ಲಿ ಕಣ್ಣಿಗೆ ಕಟ್ಟುತ್ತದೆ. ಭಂಡರನ್ನ ಸರಿದಾರಿಗೆ ತರಲು ಮಾತಿನ ಪೆಟ್ಟಿಗಿಂತ ಬ್ರಹ್ಮಾಸ್ತ್ರದ ಪ್ರಯೋಗವೇ ಬೇಕು ಅನ್ನುವುದನ್ನೂ ಯಶಸ್ವಿಯಾಗಿ ಕಟ್ಟಿದ್ದಾರೆ. ಕೊಲೆಗಡುಕನ ಮನಸ್ಸನ್ನೂ  ಬದಲಿಸಿ ಬ್ಯುಟಿಫುಲ್ ಮನಸ್ಸುಗಳಾಗಿಸಿದ್ದಾರೆ. 

ಅಭಿನಯ :

beautiful cinema 4

ನೀನಾಸಂ ಸತೀಶ್ ಚಿತ್ರದಲ್ಲಿ ನಟಿಸಿದ್ದಾರೆ ಅಂತನ್ನಿಸುವುದಿಲ್ಲ. ನಮ್ಮೆದುರೇ ನಡೆಯುತ್ತಿರುವ ಘಟನೆಯಂತೆ, ಪಕ್ಕದಲ್ಲೇ ಇರುವ ಪೊರಕಿಯಂತೆ, ತಪ್ಪಾದಾಗ ತಿದ್ದಿಕೊಂಡು ಬೆಳೆವ ಒಳ್ಳೆ ಹುಡುಗನಂತೆ, ಪ್ರೀತಿಸಿದ ಜೀವಕ್ಕಾಗಿ ಏನನ್ನು ಬೇಕಾದರೂ ಮಾಡಿಬಿಡುವ ಧೈರ್ಯಸ್ಥನಂತೆ ಸಹಜವಾಗಿ ಕಾಣುತ್ತಾರೆ. ನಟಿಸಿದರೂ  ನಟಿಸದಂತೆ ಕಾಣುವುದು ಕಷ್ಟದ ಕೆಲಸ. ಇಷ್ಟ ಪಟ್ಟು ಸೊಗಸಾಗಿ ಮಾಡಿದಂತಿದೆ ಸತೀಶ್ ಅಭಿನಯ.

beautiful cinema 1

ಶ್ರುತಿ ಹರಿಹರನ್ ಪಾತ್ರಕ್ಕೆ ಹೇಳಿಮಾಡಿಸಿದ ನಟಿ. ಆಕೆಯ ಮುಖದಲ್ಲಿ, ಮಾತಿನಲ್ಲಿ ಪ್ರೌಢಿಮೆ ಮಿಂಚುತ್ತದೆ. ಹುಟ್ಟಿದ ಮನೆಯ ನೊಗ ಹೊತ್ತು, ಪ್ರೀತಿಯ ಕರೆಗೆ ಓಗೊಟ್ಟು ಮತ್ತೆ ಅವಮಾನಿತೆಯಾಗುವ ಸನ್ನಿವೇಶಗಳಲ್ಲೂ ಶ್ರುತಿಯದ್ದು ಮೆಚ್ಚುವ ಅಭಿನಯ.

ಅಚ್ಯುತ ಎಂದ್ರೆ ಮೆಚ್ಚುತಾ…

beautiful_manasugalu1

ಭ್ರಷ್ಟ ಪೊಲೀಸ್ ಅಧಿಕಾರಿಯಾಗಿದ್ದವ ತನ್ನದೇ ಮಗಳ ಜೀವಕ್ಕೆ ಕುತ್ತು ಬಂದಾಗ ಸಾಮಾನ್ಯ ಅಪ್ಪನಾಗಿಬಿಡುವ, ಪಶ್ಚಾತಾಪ ಪಡುವ ಪಾತ್ರದಲ್ಲಿ ಅಚ್ಚುತ ಅಭಿನಯಕ್ಕೆ ಮೆಚ್ಚುಗೆಯಲ್ಲದೆ ಮತ್ತೇನು !

ತಬಲಾ ನಾಣಿ, ಪ್ರಶಾಂತ್ ಸಿದ್ದಿ .. ಹೀಗೆ ಎಲ್ಲರು ಎಲ್ಲೂ ಎಲ್ಲೆಮೀರದೆ ಸಹಜವಾಗಿ ನಟಿಸಿದ್ದಾರೆ.

ತಾಂತ್ರಿಕವಾಗಿ ಅದ್ದೂರಿತನವಿಲ್ಲದಿದ್ದರೂ ಎಲ್ಲ.. ಎಲ್ಲರೂ ನೋಡಲೇಬೇಕಾದ ನೋಡಿ ಅರಿಯಬೇಕಾದ  ಸಿನಿಮಾ “ಬ್ಯುಟಿಫುಲ್ ಮನಸ್ಸುಗಳು”

“ಶ್ರೀಕಂಠ” ನೊಡನೆ ಒಂದು ಸುತ್ತು..

ನಮ್ಮ ಸುತ್ತ ನಿತ್ಯ ನಡೆಯುವ , ನಾವು ಕೇಳಿಯೂ ಕಿವುಡರಂತಿರುವ, ಕಂಡರೂ ತಲೆ ಕೆಡಿಸಿಕೊಳ್ಳದೇ  ಉಫ್… ಎಂದು ಗಾಳಿಗೆ ತೂರಿಬಿಟ್ಟ ಸಂಗತಿಗಳಿಗೆ ರಾಚಿದ ಕನ್ನಡಿ “ಶ್ರೀಕಂಠ”.

srikanta-photos-images-43793ನಿರ್ದೇಶನ :

ನಾಗತೀಹಳ್ಳಿ ಚಂದ್ರಶೇಖರ್ ಅವರ ಕಥೆ “ಸ್ಖಲನ” ಆಧರಿಸಿ ಅದರಲ್ಲಿನ ಕೆಲವು ಸಾಲುಗಳನ್ನು ಕೊಂಚ ಮಾರ್ಪಡಿಸಿ ಬಳಸಿಕೊಂಡಿರುವ ಮಂಜು ಸ್ವರಾಜ್ ಚಿತ್ರಕಥೆಯನ್ನು ಚೆನ್ನಾಗಿಯೇ ಹೆಣೆದಿದ್ದಾರೆ.

srikanta-director ಓಟಿಗಾಗಿ ನಮ್ಮ ರಾಜಕಾರಣಿಗಳು ಹೂಡುವ ತಂತ್ರಗಳು, ಅವರಾಟಗಳು ತಿಳಿದ ಮೇಲೂ ಮರೆತು ಮತ್ತೆ ಅಂಥವರನ್ನೇ ಆಯ್ಕೆ ಮಾಡುವ ಜನರ ಮನಃಸ್ಥಿತಿ, ತನ್ನ ಗುರಿಸಾಧನೆಗಾಗಿ ಅಮಾಯಕರನ್ನು ಬಲಿಪಶು ಮಾಡುವ, ಭಾವನಾತ್ಮಕವಾಗಿ ಜನರನ್ನು ಸುಲಿಯುವ ಸೋಗಲಾಡಿಗಳು, ಬೀದಿಬದಿಯ ಅತಂತ್ರ ಬದುಕು ಎಲ್ಲವನ್ನು ಎಳೆಎಳೆಯಾಗಿ ಬಿಚ್ಚಿಟ್ಟಿದ್ದಾರೆ. ಒರಟರನ್ನು ಕಂಡಾಗ ಅದರಲ್ಲೂ ಅನಾಥರನ್ನು ಕಂಡಾಗ ಅಸಹ್ಯಿಸಿಕೊಳ್ಳುವ ಮನಸ್ಸುಗಳಿಗೆ  ಚಿತ್ರ ನೋಡುತ್ತಾ ಅವರೆಡೆಗೆ ಒಂದು ಕನಿಕರ ಹುಟ್ಟುತ್ತದೆ. ತಂದೆ-ತಾಯಿಯ ಆರೈಕೆಯಲ್ಲಿ, ಮಾರ್ಗದರ್ಶನದಲ್ಲಿ  ಬೆಳೆದ ಎಷ್ಟೋ ಮಕ್ಕಳು ಅಡ್ಡದಾರಿ ಹಿಡಿದ ಉದಾಹರಣೆಗಳು ಸಾಕಷ್ಟಿವೆ. ಗುರುವಿಲ್ಲದೆ , ಗುರಿಯಿಲ್ಲದೆ ತುತ್ತುಣಿಸುವ ಕೈಗಳಿಲ್ಲದೆ ಬೆಳೆದ ಜೀವ ಒರಟಾಗುವುದರಲ್ಲಿ ಆಶ್ಚರ್ಯವಿಲ್ಲ. ಇಂಥಾ ಕಥೆಯನ್ನು ಮನಮುಟ್ಟುವ ಹಾಗೆ ನಿರ್ದೇಶಿಸಿದ್ದಾರೆ ಮಂಜು.

srikanta-shivasrikanta-chandini

ಮತ್ತೊಂದು ಮಗ್ಗುಲಲ್ಲಿ ಪ್ರೀತಿಗೆ ಸೋಲದ ಜೀವವೇ ಇಲ್ಲ ಎಂಬುದನ್ನೂ  ದಾಖಲಿಸಿದ್ದಾರೆ. ಹಣ,ಅಧಿಕಾರದ ಬೆಂಬಲವಿಲ್ಲದ  ಸಾಮಾನ್ಯನೊಬ್ಬ ಭ್ರಷ್ಟ ವ್ಯವಸ್ಥೆಯ ವಿರುದ್ಧ ಸಿಡಿದಾಗ ಕಾಣದ ಕೈಗಳ ಕಬಂಧ  ಬಾಹುಗಳು ಹೇಗೆ ಅವನನ್ನ ಅದುಮಲು ನಿಲ್ಲುತ್ತವೆ ಎನ್ನುವುದನ್ನು ಪರಿಣಾಮಕಾರಿಯಾಗಿ ತೋರಿಸಿದ್ದಾರೆ . ಎಷ್ಟೇ ಹೊಡೆತ ಬಿದ್ದರೂ ಸುಲಭಕ್ಕೆ ಚಾಳಿ ಬಿಡದ ಜನರ ಮನಃಸ್ಥಿತಿಯನ್ನು ಬಿಚ್ಚಿಟ್ಟಿದ್ದಾರೆ. ಇಮೇಜ್ಗೆ ತಲೆಕೆಡಿಸಿಕೊಳ್ಳದೆ ಶಿವರಾಜ್ ಕುಮಾರ್  ಅವರನ್ನ ಪಾತ್ರ ಬೇಡುವಂತ ರಸ್ತೆ ಬದಿಯಲ್ಲೂ ಮಲಗಿಸಿದ್ದಾರೆ. ಪಾತ್ರಗಳನ್ನೂ ಚೆನ್ನಾಗಿಯೇ ದುಡಿಸಿಕೊಂಡಿದ್ದಾರೆ. “ಸ್ಖಲನ” ದಂಥ ಪ್ರಯಾಣಿಸುತ್ತಲೇ ಬದಲಾಗುವ ಮನಃಸ್ಥಿತಿಯ ಕಥೆಗೆ ಸಾಮಾನ್ಯನ ಬದುಕಿನ ನಿತ್ಯದ ಸಂಗತಿಗಳನ್ನು ಸೇರಿಸಿ  ಸಮರ್ಥವಾಗಿ ನಿರ್ದೇಶಿಸಿದ್ದಾರೆ.

ಅಭಿನಯ

srikanta-addasrikanta-chandini1

ಸೀದಾ ಸಾದಾ ,ತಗದಾ -ವಗದಾ ಎನ್ನುವಂಥ, ಕಾಸಿಗಾಗಿ ಹಿಂದು ಮುಂದು ನೋಡದೆ ಕೆಲಸ ಮಾಡುವ, ಅಪ್ಪಟ ಒರಟುತನದ ನಡುವೆಯೂ ಕಷ್ಟಕ್ಕೆ ಕರಗುವ, ಅನ್ಯಾಯ, ಸೋಗಲಾಡಿತನದ ವಿರುದ್ಧ ಸಿಡಿದೇಳುವ ಸಾಮಾನ್ಯನ ಪಾತ್ರದಲ್ಲಿ ಶಿವರಾಜ್ ಕುಮಾರ್ ಅಭಿನಯ ಮೆಚ್ಚುವಂಥಾದ್ದು. ಪ್ರೀತಿಸಿ ಮದುವೆಯಾಗಲು ಬಂದ ಹುಡುಗಿಗೆ ತನ್ನ ಅತಂತ್ರ ಬದುಕನ್ನು ಬಯಲಾಗಿಸುವಾಗ, ಮದುವೆಯಾದಮೇಲೂ ಬಿಡದ ಒರಟುತನ, ಪ್ರೀತಿಯ ಅರಿವಾದಾಗ ನಡೆಯುವ ರೀತಿ, ಕಾರು ಓಡಿಸುವಾಗ ಮಡುಗಟ್ಟಿದ ದುಃಖದ ನಡುವೆಯೂ ಗುಟ್ಟು ಬಿಡದ ಗಟ್ಟಿತನ. ಹಣಕ್ಕೆ ತಕ್ಕ ಕೆಲಸದ ಬದ್ಧತೆ ಹೀಗೆ ಎಲ್ಲ ಸನ್ನಿವೇಶಗಳಲ್ಲೂ ಶಿವರಾಜ್ಕುಮಾರ್ ನಟನೆಗೆ ಸಲಾಂ ಹೇಳಲೇ ಬೇಕು.

srikanta-chandini2

ಚಾಂದಿನಿ– ನಾಯಕಿ ಚಾಂದಿನಿ ನಾಯಕನಿಗೆ ಚಿಕ್ಕವಳಂತೆ ಕಂಡರೂ ಅಭಿನಯದಲ್ಲಿ ಸೊಗಸಿದೆ. ಮುಗ್ದತೆ ಯ ಜೊತೆಗೆ ಪ್ರಬುದ್ಧತೆ ಬೇಡುವ ಸನ್ನಿವೇಶಗಳಲ್ಲೂ ನಟನೆ ಚೆನ್ನವಿದೆ.

vijay-raghavendra-20140526101454-3381

ಪತ್ರಕರ್ತನಾಗಿ  ಕಾರಿನಲ್ಲಿ ಊರು ಸೇರುವ ಆಸೆಯಿಂದ ಶ್ರೀಕಂಠನ  ಜೊತೆ ಕೂತು ಪಟಪಟನೆ ಮಾತನಾಡುವ, ಆಸೆಯಾದರು ತೀರಿಸಿಕೊಳ್ಳಲಾಗದ ಸಣ್ಣ ಸೋಗಿನ, ಆಗ್ಗಾಗೆ ಬರುವ ಸಿಟ್ಟನ್ನು ತೋರಲಾಗದೆ ತಡೆಹಿಡಿವ, ಸತ್ಯ ತಿಳಿದ ಮೇಲೆ ಭಾವುಕನಾಗುವ ಎಲ್ಲ ಸನ್ನಿವೇಶಗಳಲ್ಲೂ ವಿಜಯ್ ರಾಘವೇಂದ್ರ ಇಷ್ಟವಾಗುವ ಕಲಾವಿದ.

kirik-achyuth

ಅಚ್ಯುತ– ನೀವೇನೇ ಕೊಟ್ರು ಸೈ. ಮಾಡಿ ತೋರಿಸ್ತೀನಿ ರೈ.. ರೈ.. ಅನ್ನುವಂಥ  ಕಲಾವಿದ. ನಟನೆಯ ಬಗ್ಗೆ ಎರಡು ಮಾತಿಲ್ಲ.

srikanta-aswinikirik-hanumante

ಥೇಟ್ ಸಿದ್ದರಾಮಯ್ಯನವರಂತೆ ಕಾಣುವ,ಮಾತನಾಡುವ  ಹನುಮಂತೇಗೌಡ್ರು, ಜರ್ನಲಿಸ್ಟ್ ಪಾತ್ರಧಾರಿ ಅಶ್ವಿನಿ ಹೀಗೆ ಎಲ್ಲ ಪಾತ್ರಧಾರಿಗಳು  ನ್ಯಾಯ ಒದಗಿಸಿದ್ದಾರೆ.

ಸಂಭಾಷಣೆ– ನಮ್ಮ ನಮ್ಮ ಯೋಚನೆ, ಸಾಮಾಜಿಕವಾಗಿ ನಾವು ನಡೆದುಕೊಳ್ಳುವ ರೀತಿ ಎಲ್ಲವನ್ನು ಎಲ್ಲಿಯೂ ಸಡಿಲಗೊಳಿಸದೆ ಹೆಣೆದ ಸಂಭಾಷಣಾಕಾರನಿಗೆ ಮೆಚ್ಚುಗೆ ಸಲ್ಲಲೇ ಬೇಕು.

“ಶ್ರೀಕಂಠ” ಮನೆಮಂದಿಯೆಲ್ಲ ಕೂತು ನೋಡಬೇಕಾದ, ಪ್ರತಿಯೊಬ್ಬರೂ ನೋಡಲೇ ಬೇಕಾದ ಸಿನಿಮಾ.

 

 

 

ಮನಸ್ಸನ್ನು ಮುಳುಗಿಸದೆ ತೇಲಿಸುವ ಪುಷ್ಪಕ ವಿಮಾನ

“ಸೂರ್ಯ ನ್ನ ನೋಡು ಅವನು ಕೂಡ ಒಂಟಿ. ಆದ್ರೆ ಎಷ್ಟು ಪ್ರಖರವಾಗಿ ಹೊಳೀತಾನೆ. ಹಾಗೆ ನೀನು ಒಂಟಿಯಾದರು ಅವನ ಹಾಗೆ ಹೊಳೆಯಬೇಕು.ಬೆಳಗಬೇಕು.” ಅಪ್ಪನ ಕಡೆಕ್ಷಣದ ಇಂಥಾ ಮಾತು ತಾನಿಲ್ಲದೆಯೂ ಮಗಳನ್ನ ಉಳಿಸಿ, ಬೆಳೆಸುವ ಮಂತ್ರದ ಕತೆ ಪುಷ್ಪಕ ವಿಮಾನ. ಮಮತೆ  ಎಂದರೆ ಮೊದಲು ನೆನಾಪಾಗುವುದೇ ಮಾತೆ ಅಂದ್ರೆ ಅಮ್ಮ. ಆದರಿಲ್ಲಿ ಅಪ್ಪ  ಅಮ್ಮನಂತೆ, ಕಣ್ರೆಪ್ಪೆಯಂತೆ  ಮಗಳನ್ನು ಕಾದು,ಪೊರೆದು ಅವಳಿಗಾಗಿ ತನ್ನ ಜೀವವನ್ನೇ ಅರ್ಪಿಸಿಬಿಡುವ, ಜೀವ ಹಿಂಡುವ ಕಥೆಯಿದೆ. ಬುದ್ಧಿಮಾಂದ್ಯ ತಂದೆ- ಮುದ್ದು ಮಗಳ ನಡುವಿನ ಭಾವುಕ ಕ್ಷಣಗಳನ್ನು ತೋರುವ ಸಿನಿಮಾ ಪುಷ್ಪಕ ವಿಮಾನ. 

pushpaka-vimana_1479274244190

ನಿರ್ದೇಶನ:

-ಮೈನಸ್ -ಪ್ಲಸ್ 

ಮೊದಲ ಚಿತ್ರಕ್ಕೇ ಪರದೇಶದ “ಮಿರಾಕಲ್ ಇನ್ ಸೆಲ್ ನಂ.7”  ಸಿನಿಮಾದ ಮೊರೆಹೋಗಿ ತಮ್ಮ ಕ್ರಿಯಾಶೀಲತೆಗೆ ಆದಷ್ಟೂ ಕಡಿಮೆ  ಕೆಲಸ ಕೊಟ್ಟಿದ್ದಾರೆ ನಿರ್ದೇಶಕ ರವೀಂದ್ರನಾಥ್. ಮಗಳೇ ತನ್ನ ಸರ್ವಸ್ವ ವೆಂದು ಭಾವಿಸಿಕೊಂಡ  ಬುದ್ದಿಮಾಂದ್ಯ ತಂದೆಯೊಬ್ಬ ಅಪಾರ್ಥಕ್ಕೆ ಒಳಗಾಗಿ ಅಪರಾಧಿಯಾಗಿ ಜೈಲು ಸೇರುತ್ತಾನೆ. ಅಲ್ಲಿಯೂ ತನ್ನ ಮುಗ್ದತೆ , ಒಳ್ಳೆಯತನಗಳಿಂದ ಜೈಲರ್ ಆದಿಯಾಗಿ ಸೆಲ್ ನಲ್ಲಿದ್ದ ಕ್ರೂರ ಮನಸ್ಸಿನವರನ್ನು ಗೆಲ್ಲುತ್ತಾನೆ.ಇಂಥ ಕಥೆಯನ್ನ ರವೀಂದ್ರನಾಥ್ ಇನ್ನೂ ಭಾವನಾತ್ಮಕಾವಾಗಿ ಹೆಣೆಯಬಹುದಿತ್ತು. ತೀವ್ರತೆಯ ಕೊರತೆ ಕಾಣುತ್ತದೆ. ಸೆಲ್ನಲ್ಲಿರುವ ಖೈದಿಗಳಿಗೆ ಯಾವತ್ತಿಗೂ ಕೊಳೆಯೇ ಆಗದಂತ ಬಟ್ಟೆ ತೊಡಿಸಿ ಸಹಜತೆಯಿಂದ ದೂರಸರಿದಿದ್ದಾರೆ. ಮೊದಲಾರ್ಧ ಮುಗಿಯುವವರೆಗೂ ಕಥೆ ಚೆನ್ನಾಗಿದೆ ಸರಿ ಆದ್ರೆ ಹೇಳುವ ರೀತಿಯಲ್ಲಿ ಅಲ್ಲಲ್ಲಿ ಬೋರ್ ಹೊಡೆಸುತ್ತಾರೆ.

ಚಿತ್ರದಲ್ಲಿ ಭಾವಗೀತೆಯಂತ ಸುಮಧುರ ಗೀತೆಗಳ ಬಳಕೆ ಮುದನೀಡುವಂತಿದೆ. ಕಡೆಯ ಕಡೆಯ ಸನ್ನಿವೇಶಗಳಂತು  ಕರುಳು ಹಿಂಡುತ್ತವೆ. ರವೀಂದ್ರನಾಥ್ ಮುಂದಿನ ಚಿತ್ರಗಳಲ್ಲಿ ಸಹಜತೆಗೆ,ಸ್ವಂತಿಕೆಯನ್ನು ದುಡಿಸಿಕೊಂಡರೆ ಇನ್ನು ಸೊಗಸಾದ ಚಿತ್ರ ಮಾಡಬಹುದು.

ಅಭಿನಯ

pushpaka-vimana_145310009350

ರಮೇಶ್ ಅರವಿಂದರ ಪಾಲಿಗೆ ನೂರನೇ ಚಿತ್ರ ಒಳ್ಳೆಯ ಕಥೆಯೇ ಸಿಕ್ಕಿದೆ ಅನ್ನಬಹುದು (ರಿಮೇಕ್ ) ಇದುವರೆಗೆ ಅವರ ಬಹುತೇಕ ಎಲ್ಲ ಚಿತ್ರಗಳು ಸದಭಿರುಚಿಯ ಚಿತ್ರಗಳೇ. ‘ತ್ಯಾಗರಾಜ” ನ ಪಟ್ಟ ಕಳಚಿ, ತಾನೇ ನಿರ್ದೇಶನಕ್ಕೂ ನಿಂತು,ಅಭಿನಯಿಸಿ ಪ್ರೇಕ್ಷಕರನ್ನು ನಗೆಯಲ್ಲಿ ತೇಲಿಸಿದವರು ರಮೇಶ್. ಪುಷ್ಪಕ ವಿಮಾನದ ಬುದ್ಧಿಮಾಂದ್ಯ, ಮುಗ್ದ ,ಒಳ್ಳೆಯತನವೇ ಮೈವೆತ್ತಂಥ ಅಪ್ಪನಾಗಿ ಚೆನ್ನಾಗಿ ಅಭಿನಯಿಸಿದ್ದಾರೆ. ಮಗಳು 1..2..3 ಅಂದಾಗ ಕುಣಿಯುವ ದೃಶ್ಯದಲ್ಲಂತೂ ಕಣ್ಣುತುಂಬಿಸುತ್ತಾರೆ ರಮೇಶ್. ತನ್ನ ಕಂದನಿಗಾಗಿ ತನ್ನನ್ನೇ ಅರ್ಪಿಸಿಕೊಳ್ಳುವ ಅಪ್ಪನಾಗಿ ರಮೇಶ್ರನ್ನು ನೋಡುವಾಗ ನಮಗೂ ಇಂಥಾ ಅಪ್ಪ ಬೇಕು ಅನ್ನಿಸುತ್ತದೆ. ತನ್ನ ಕಟ್ಟ ಕಡೆಯ ಘಳಿಗೆಯಲ್ಲಿ “ಇಬ್ಬರಾ ಋಣ ತೀರಿತೆಂದು ತಬ್ಬಿಕೊಂಡಿತು ಕಂದನ” ಪುಣ್ಯಕೋಟಿಯ ಹಾಡು ನೆನಪಾಗುವಂತೆ ಅಭಿನಯಿಸಿದ್ದಾರೆ. ತನ್ನ ಮಗಳ ಭವಿಷ್ಯಕ್ಕಾಗಿ ತಾನಿಲ್ಲದೆಯೂ ಅವಳನ್ನು ಉಳಿಸುವ ಸಲುವಾಗಿ ಆಡುವ ಮಾತು  ಆಳಕ್ಕಿಳಿಯುತ್ತದೆ. ಆದರೆ ಒಂದು ಮಾತು ನೂರನೇ ಚಿತ್ರಕ್ಕಾದರೂ ರಮೇಶ್ ಅರವಿಂದ್ ಗೆ ಇದ್ದು ಗೆದ್ದು ಬರುವ ಬಲಿಷ್ಠ ಅಪ್ಪನ ಪಾತ್ರ ಸಿಗಬೇಕಿತ್ತು. ಅವರೊಳಗಿನ ಅದ್ಭುತ ನಟನಿಗೆ ರೆಕ್ಕೆ ಬಿಚ್ಚಿ ಹಾರಾಡುವ ಅವಕಾಶ ದೊರೆಯಬೇಕಿತ್ತು.

pushpaka-vimana_145310009320

ಯುವಿನ – ಮುದ್ದಾದ ಮಗು ನಿಜ. ಆದ್ರೆ ಅಭಿನಯದಲ್ಲಿ ತಲ್ಲೀನತೆ ಕಾಣುವುದಿಲ್ಲ. ಬೇಬಿ ಇಂದಿರಾಗೆ ಇಂಥಾ ಚೆಲುವಿರಲಿಲ್ಲ ನಿಜ. ಆದರೆ ನಟನೆ ! ಕೆಲವೊಮ್ಮೆ ಕೊಂಚ ಅತಿಯೆನಿಸಿದರು ಭಾವಪೂರ್ಣ ಅಭಿನಯವಿತ್ತು. ಯುವಿನಾಳಲ್ಲಿ ಅಂತ ತೀವ್ರತೆ ಕಾಣುವುದಿಲ್ಲ.

ಜೈಲರ್ ಪಾತ್ರದಲ್ಲಿ ರವಿ ಕಾಳೆ ಅಭಿನಯ ಚೆಂದವಿದೆ. ಭಾವಗಳನ್ನು ಉಕ್ಕಿಸುವ ಕಲೆಯು ಚೆನ್ನವಿದೆ.ಲಾಯರ್ ಪಾತ್ರದಲ್ಲಿ ರಚಿತಾ ರಾಮ್ ಅಭಿನಯವು ಓಕೆ.  ಸಂಗೀತ – ಚರಣ್ ಸಂಗೀತದ ಇಂಪು ಕಾಡುತ್ತದೆ.

ಸಂಭಾಷಣೆ – ಅಲ್ಲಲ್ಲಿ ಅವಶ್ಯಕವಿಲ್ಲದ, ನಗೆಯು ತರಿಸದ ಕೆಲವು ಸಾಲುಗಳನ್ನ ಹೊರತು ಪಡಿಸಿದರೆ ಗುರುಪ್ರಸಾದ್ ಸಂಭಾಷಣೆ ಚೆನ್ನಾಗಿದೆ.  ಅಪ್ಪ ಮಗಳಿಗೆ ಹೇಳುವ “ಸೂರ್ಯನ” ಉದಾಹರಣೆ  ಅದ್ಬುತ.

ದೋಷಗಳ ನಡುವೆಯೂ ನೋಡಬಹುದಾದ ಸಿನಿಮಾ ಪುಷ್ಪಕ ವಿಮಾನ.

 

 

ಕಿರಿಕ್ ಪಾರ್ಟಿ ಎಂಬ ಕಲರ್ ಕಲರ್ ಪಾರ್ಟಿ !!

2016ಕ್ಕೆ ವಿದಾಯ ಹೇಳುವ , ಹೊಸ ವರುಷವನ್ನು ಸ್ವಾಗತಿಸುವ ಹೊತ್ತಲ್ಲಿ ಬಂದಿದೆ ಕಿರಿಕ್ ಪಾರ್ಟಿ .ರಕ್ಷಿತ್ ಶೆಟ್ಟಿ ರಿಷಬ್ ಶೆಟ್ಟಿ ತಂಡ “ಥ್ಯಾಂಕ್ಸ್ ಹೇಳಿ  ವಯಸ್ಸಿಗೆ ಹೋಗೋಣ ಕಾಲೇಜಿಗೆ” (ಪ್ರೇಮಲೋಕ)ಅಂತ ಎಲ್ಲರನ್ನು ಕರೆದು ಕಿರಿಕ್ ಪಾರ್ಟಿ ಯಲ್ಲಿ ಕಿಲಕಿಲ ನಗುತುಂಬಿ ಕೊಡ್ತಿದ್ದಾರೆ.

kirik-2 ಕೊಂಚ ಮಟ್ಟಿಗೆ ಪ್ರೇಮಲೋಕ, ಥ್ರೀ ಈಡಿಯಟ್ಸ್ ನೆನಪಿಸುವ ಕಿರಿಕ್ ಪಾರ್ಟಿ  ಹೊಸತನದಿಂದ ತನ್ನ ತನವನ್ನೂ ಕಾಯ್ದುಕೊಂಡಿದೆ. ಕಾಲೇಜುರಂಗದಲ್ಲಿ ನಡೆಯುವ ಬಾಸಿಸಂ, ಎಲೆಕ್ಷನ್, ಒಬ್ಬಳೇ ಹುಡುಗಿಯ ಮೇಲೆ ಇದ್ದಬದ್ದವರೆಲ್ಲ ಕಣ್ಣು ಹಾಕುವುದು, ಆಟ-ಹುಡುಗಾಟ,ಹುಡುಕಾಟ ,ಹೊಡೆದಾಟ ,ಬಡಿದಾಟ  ಚೇಷ್ಟೆ ,ತುಂಟಾಟ, ಮೇಷ್ಟ್ರಿಗೆ ನಿಲ್ಲದ ಕಾಟ, ಎಲ್ಲ ಎಲ್ಲವನ್ನೂ ಒಂದು ಕ್ಷಣವೂ ಬೋರ್ ಎನಿಸದ ಹಾಗೆ ಕಟ್ಟಿಕೊಟ್ಟಿದೆ ಕಿರಿಕ್ ಪಾರ್ಟಿ. ನೀವು ಎಂಜಿನಿಯರ್ ಕಾಲೇಜ್ ಗಾದರೂ ಹೋಗಿ ಮೆಡಿಕಲ್ ಕಾಲೇಜ್ ಗಾದರೂ ಹೋಗಿ ಎಲ್ಲೇ ಹೋದರು ಮನಸ್ಥಿತಿಗಳೇನು ಬದಲಾಗಲ್ಲ. ಆ ವಯಸ್ಸೇ ಅಂಥಾದ್ದು. ಕಾಲೇಜು  ಮುಗಿದವರಿಗೆ ನೆನಪುಗಳ ಸಂತೆಗೆ ಕರೆದೊಯ್ಯುವ ಕಿರಿಕ್ ಪಾರ್ಟಿ ಈಗ ಕಾಲೇಜಿನ ಕಲರ್ ಕಲರ್ ದಿನಗಳಲ್ಲಿ ಇರೋವಂತವರಿಗೂ ಮಜಾ ಕೊಟ್ಟು ಮತ್ತೆ ಬನ್ನಿ ಅಂತ ಕರೆಯುತ್ತೆ.

ನಿರ್ದೇಶನ

kirik-rishab  ಕಥೆ ಹೇಳುವ ಕಲೆಗೆ ಮೆಚ್ಚುಗೆ ಕೊಡಲೇಬೇಕು. ಎರಡು ಗಂಟೆ ನಲವತ್ತು ನಿಮಿಷ ಸರಸರನೆ ಸರಿದು ಅಂಗೈಯೊಳಗಿನ ನೀರಿನಂತೆ ಹರಿದು ಹೋಗುವುದು ಗೊತ್ತೇ ಆಗುವುದಿಲ್ಲ. ಈ ಕಾಲದಲ್ಲಿ ಕನ್ನಡ ಪ್ರೇಕ್ಷಕನನ್ನ ಇಷ್ಟು ಕಾಲ ಹಿಡಿದಿಟ್ಟುಕೊಳ್ಳುವುದು ಸುಲಭವಲ್ಲ. ಪಾತ್ರವೊಂದನ್ನು ಬೆಳೆಸುತ್ತಾ ಹೋಗುವ ರೀತಿಯು ಪ್ರಶಂಸನೀಯ. ನಾಯಕ ಕರ್ಣನ ವ್ಯಕ್ತಿತ್ವ ವನ್ನು ಅರಳಿಸುವ ಸಣ್ಣ ಸಣ್ಣ ತಿರುವುಗಳು ಮನಸ್ಸಿಗೆ ತಟ್ಟುತ್ತವೆ. ಪ್ರತಿ ಪಾತ್ರವನ್ನು ಅದ್ಭುತವಾಗಿ ದುಡಿಸಿಕೊಂಡಿದ್ದಾರೆ ರಿಷಬ್. ಕರ್ಣ ,ಸಾನ್ವಿ ಪ್ರೀತಿ ಕ್ಷಣ ಕಾಲವಾದರು ಇಡೀ ಸಿನಿಮಾ ಆಕೆಯನ್ನು ಮಿಸ್ ಮಾಡಿಕೊಳ್ಳುವಂತೆ ಮಾಡುತ್ತದೆ. ಪ್ರೀತಿ ಶುರುವಾಗುವ ಘಳಿಗೆಯ ಮುಗ್ದತೆ ಆಹಾ..ಅಲ್ಲೊಂದು ಕಾಡುವ ತಂಗಾಳಿಯಂಥ ಎಚ್ ಎಸ್ ವೆಂಕಟೇಶ್ ಮೂರ್ತಿಯವರ “ತೂಗು ಮಂಚದಲ್ಲಿ ಕೂತು ” ಹಾಡು . ನಿಜಕ್ಕೂ ತಿಳಿಗಾಳಿ ಸವರಿದಂಥ  ಅನುಭವ ಕೊಡುವುದರಲ್ಲಿ ಸಂಶಯವಿಲ್ಲ.  ಆಕೆ  ಇಲ್ಲವಾದ  ಮೇಲೆ ಇಲ್ಲಸಲ್ಲದ ಅಪವಾದ, ಸಂಕುಚಿತ ಮನಸ್ಥಿತಿಯ ಮಾತುಗಳು ಇಂದಿನ ಸಮಾಜಕ್ಕೂ ಕನ್ನಡಿ. ಅಲ್ಲಿ ಬಳಸಿರುವ ಹಾಡು “ನೀಚ ಸುಳ್ಳು ಸುತ್ತೋ ನಾಲಿಗೆ ನಿನ್ನ ಸೀಳುವ ರೋಷ ಉಕ್ಕಿದೆ” ಅದ್ಬುತ. ಫೈಟಿಂಗ್ ದೃಶ್ಯದ ಕ್ರಿಕೆಟ್ ಕಾಮೆಂಟ್ರಿಯಂತೂ ಹೊಡೆದಾಟ ಬಡಿದಾಟ ಇಷ್ಟಪಡದವರಿಗೂ ಒಂದಿಷ್ಟು ಮಜಾ ಕೊಡುತ್ತವೆ. ಸದಭಿರುಚಿಯ ತಿಳಿತಿಳಿ ಹಾಸ್ಯ,ವಿನೋದ ಪ್ರಜ್ಞೆ ಹೇಗಿರಬೇಕು ಅನ್ನೋದಕ್ಕೆ ಈಗಿನ ಹಲವರಿಗೆ ಕಿರಿಕ್ ಪಾರ್ಟಿ ಅತ್ಯುತ್ತಮ ಮಾದರಿ. ಮುಜುಗರ ಅನ್ನೋ ಮಾತಿಗೆ ಇಲ್ಲ ತಾವಿಲ್ಲ.

ಅಭಿನಯ 

ರಕ್ಷಿತ್ ಶೆಟ್ಟಿ ಕನ್ನಡ ಸ್ವಲ್ಪ ತೇಲುಗನ್ನಡ. ರಶ್ಮಿಕಾ ಕನ್ನಡವೂ ಹಾಗೇ ಇದೆ. ಆದರೆ ಅದೆಲ್ಲವನ್ನೂ ಮೀರಿ ಮಿರಿ ಮಿರಿ ಮಿಂಚುವಂಥ  ನಟನೆ ರಕ್ಷಿತ್ ಶೆಟ್ಟಿಯದ್ದು. ಮೊದಲಾರ್ಧದ ತುಂಟ ಹುಡುಗನ ಪಾತ್ರದ ಹಾವಭಾವ ನಂಗೆ ನೀ ಇಷ್ಟ ಕಣೋ ಅಂತ ಚಿತ್ರ ನೋಡ್ತಿರೋ ಬಹುತೇಕರು ತಮ್ಮತಮ್ಮಲ್ಲೇ ಅಂದುಕೊಳ್ಳುವಂತೆ ಮಾಡುತ್ತದೆ. ದ್ವೀತೀಯಾರ್ಧದಲ್ಲಿ ಕಟ್ಟು ಮಸ್ತಾಗಿ ಖಡಕ್ ಆಗಿ ಕಾಣುವ ರಕ್ಷಿತ್ ಅಭಿನಯದಲ್ಲಿ ಸಿಕ್ಸ್ರರ್ ಬಾರಿಸಿದ್ದಾರೆ. ಸಿನಿಮಾ ನೋಡ್ತಾ ನೋಡ್ತಾ ಈ ಹುಡುಗ ಅಮೀರ್ ಖಾನ್ ಥರ ಬೆಳೀಬೇಕು ಅಂತನ್ನಿಸಿತು. ಆತನ ಬಾಡಿ ಲಾಂಗ್ವೆಜ್ ನಿಜಕ್ಕೂ ಚೆನ್ನ.

kirik-rashmika

ಸಾನ್ವಿಯಾಗಿ ರಶ್ಮಿಕಾದು ತುಂಬಾ ಒಳ್ಳೆಯ ಪಾತ್ರ. ಆಕೆಯ ಅಭಿನಯದ ಸೊಗಸು ಚೆಂದ. ನಾಯಕನ ಸಮಸಮಕ್ಕ್ಕೆ ನಟಿಸುತ್ತಿರುವಾಗ ಕನ್ನಡಕ್ಕೆ ಒಳ್ಳೆ ಸೊಗಸಾದ ನಟಿ ಸಿಕ್ತಿದ್ದಾಳೆ ಅನ್ನೋ ಭರವಸೆ ಮೂಡಿಸಿದ್ದಾರೆ.

kirik-party-heroins

ಆರ್ಯಳಾಗಿ ಪ್ರವೇಶ ಪಡೆದುಕೊಳ್ಳುವ ಸಂಯುಕ್ತಾ ಹೆಗಡೆ ಲವಲವಿಕೆಯಿಂದ ಸವಾಲು ಸ್ವೀಕರಿಸಿದಂತೆ ನಟಿಸಿದ್ದಾರೆ . ರಿಷಬ್ ಕನ್ನಡಕ್ಕೆ ಇಬ್ಬರು ಒಳ್ಳೆಯ ನಟಿಯರನ್ನು ಕೊಟ್ಟಂತಾಗಿದೆ.

kirik-hanumantekirik-achyuth

ಯಾವ ಪಾತ್ರ ಕೊಟ್ರು ಸೈ ಸೈ ಅನ್ನಿಸುವಂತೆ ನಟಿಸುವ ಅಚ್ಯುತ್ ಕುಮಾರ್ ಇಲ್ಲೂ ಇಷ್ಟವಾಗುತ್ತಾರೆ. ಮಂಗಳೂರಿನ ಉಚ್ಚಾರಣೆ ಇನ್ನು ಸ್ಪಷ್ಟವಾಗಿದ್ದರೆ ಹಿತವಿರುತ್ತಿತ್ತು. ಪ್ರಿನ್ಸಿಪಾಲ್ ಪಾತ್ರದ ಹನುಮಂತೇ ಗೌಡರು ಪಾತ್ರಕ್ಕೆ ಹೇಳಿ ಮಾಡಿಸಿದಂತಿದ್ದಾರೆ. ಅವರ ಧ್ವನಿ ಶಕ್ತಿಯ ಬಗ್ಗೆಯಂತೂ ಹೇಳಲೇ ಬೇಕಿಲ್ಲ.

kirik-party-team

ಕರ್ಣನ ಸ್ನೇಹಿತರ ಪಾತ್ರ ಮಾಡಿರುವ ಪ್ರತಿಯೊಬ್ಬರ ಅಭಿನಯವು ಚೆಂದ ಚೆಂದ . ಇಲ್ಲಿ ಎಲ್ಲರೂ ಮುಖ್ಯರಂತೆ ಕಾಣುತ್ತಾರೆ.

kirik-ajaneesh

ಸಂಗೀತ ನಿರ್ದೇಶನಕ್ಕೆ ಅಜನೀಶ್ ಗೆ ಒಂದು ನಮಸ್ಕಾರ . ಹಿತವಾದ ಹಿನ್ನೆಲೆ ಸಂಗೀತದ ಜೊತೆಗೆ ಹಾಡುಗಳ ಸಂಯೋಜನೆಯು ಮಧುರ. ಗೀತರಚನೆಕಾರರು, ಹಾಡುಗಾರರು ಮೆಚ್ಚುಗೆಗೆ  ಅರ್ಹರು.

ಪ್ರತೀ  ಫ್ರೇಮ್ ಇಷ್ಟವಾಗುವ ಹಾಗೆ ಪೋಣಿಸಿರುವ ಸಿನಿಮ್ಯಾಟೊಗ್ರಾಫರ್ ಮನೋಹರ್ , ಒಂದಿಷ್ಟೂ ಇರುಸು ಮುರುಸಾಗಿಸದೆ ನಗುವಿನ ಅಲೆಯಲ್ಲಿ ತೇಲಿಸುವ ಸಂಭಾಷಣಕಾರನಿಗೂ ಒಂದು ಸಲಾಂ.

ಈ ಹುಡುಗರು ಕನ್ನಡ ಚಿತ್ರರಂಗಕ್ಕೆ ಹೊಸತನ ತುಂಬಿಕೊಟ್ಟಿದ್ದಾರೆ. ಕಿರಿಕ್ ಪಾರ್ಟಿ ಅಂತ ಹೆಸರಿಟ್ಟು ಬಣ್ಣ ಬಣ್ಣಗಳ ಕಲರ್ ಫುಲ್ ಪಾರ್ಟಿ ಕೊಟ್ಟಿದ್ದಾರೆ. ಟ್ರೈಲರ್ ಬಿಡುಗಡೆ ಸಂದರ್ಭದಲ್ಲಿ ciniadda.com ಜೊತೆ ಮಾತಾಡಿದಾಗ  ಒಂದು  ಒಳ್ಳೆ  ಚಿತ್ರ ಕೊಡ್ತೀವಿ ಅಂತ ಹೇಳಿದ್ದ ರಕ್ಷಿತ್ ಶೆಟ್ಟಿ ಮಾತು ಉಳಿಸಿಕೊಂಡಿದ್ದಾರೆ . ಶುಭವಾಗಲಿ ತಂಡಕ್ಕೆ.

kirik-party-1 ಕಿರಿಕ್ ಪಾರ್ಟಿ ನೋಡಿ . ಕಿಲ ಕಿಲ ನಗು ತುಂಬಿಕೊಳ್ಳಿ. ಹಗುರಾಗಿ ಹೊಸ ವರುಷವನ್ನು ಸ್ವಾಗತಿಸಿ.

-ಭಾನುಮತಿ ಬಿ ಸಿ

 

ತರ್ಲೆ ವಿಲೇಜ್ ಎಂಬ ಕಿತ್ತುಹೋದ ಸಿನಿಮಾ

ಎದೆಗಾರಿಕೆ ಇದ್ದವರಿಗೆ ಮಾತ್ರ ”ಮಮ್ಮಿ”

ದೆವ್ವ, ಭೂತಗಳ ಸಿನಿಮಾ ಮಾಡಿ ಗೆಲ್ಲುವುದು ಅಷ್ಟೇನೂ ಸುಲಭದ ಮಾತಲ್ಲ.  ನೆಚ್ಚಿನ ನಾಯಕ , ನಾಯಕಿಗೆ ಮುಂದೇನಾಗುವುದೋ ? ಯಾರಿಗೇನು ಕೇಡೋ ? ಎಂಬ ಆತಂಕದಿಂದ ಕ್ಷಣಕ್ಷಣಕ್ಕೂ ಕೈಕೈ ಹಿಸುಕುತ್ತಾ, ಉಗುರು ಕಚ್ಚುತ್ತಾ, ಬಿಟ್ಟ ಕಣ್ಣು ಬಿಟ್ಟ ಹಾಗೆ ನೋಡುವಂತೆ ಪ್ರೇಕ್ಷಕ ಪ್ರಭುವನ್ನ ಹಿಡಿದಿಡುವುದಕ್ಕೆ  ಸಕ್ಕತ್ ತಾಕತ್ತೇ ಬೇಕು. ಇಂಥದೊಂದು ಸಾಹಸಕ್ಕ್ಕೆ ಮೊದಲ ನಿರ್ದೇಶನದಲ್ಲೇ ಅಡಿ ಇಟ್ಟಿದ್ದಾರೆ ಲೋಹಿತ್ .

ನಿರ್ದೇಶನ

lohit 

ಮೊದಲ ಸಲ ಸಾಮಾನ್ಯವಾಗಿ ಆಗುವ “ಲಿಂಕ್ ಮಿಸ್ಸಿಂಗ್ ” ಸಮಸ್ಯೆ ಅಲ್ಲಲ್ಲಿ ಕಾಣುತ್ತದೆ. ಸಣ್ಣ ಸಣ್ಣ ದೋಷಗಳನ್ನು ಮರೆಸುವಂತ ಸಂಗೀತ, ಸೌಂಡ್ ಎಫೆಕ್ಟ್ , ಸಿನಿಮಾಟೋಗ್ರಫಿ ಸಿನಿಮಾದೊಳಗೆ ಸೆಳೆದುಕೊಳ್ಳುತ್ತದೆ. ಪಾತ್ರದಾರಿಗಳು ಹೆದರಿ ನಡುಗುವ ದೃಶ್ಯಗಳು ಬಂದಾಗ ಇತ್ತೀಚಿನ ನೋಡುಗರು ‘ಅಯ್ಯೋ ಹೆದರ್ಕೋಬೇಡ ಡೈರೆಕ್ಟರ್ ಅಲ್ಲೇ ಅವ್ರೆ’ ಅಂತ ಕೂಗ್ತಿದ್ರು ತಾವು ಕೂತ ಕುರ್ಚಿ ಬಿಗಿಯಾಗಿ ಹಿಡ್ಕೊಂಡು ನೋಡುವ ಸಿನಿಮಾವಿದು. ನೋಡುವವರ ಜಂಘಾಬಲ ನಡುಗಿಸುವಂತ ಸೌಂಡ್ನ ಬಳಕೆ ಬೊಂಬಾಟ್! ಕಡೆಕಡೆಯ ದೃಶ್ಯಗಳಂತು ಭಯದಿಂದ ಅವಡುಗಚ್ಚುವಂತೆ ಮಾಡುತ್ತವೆ. ಕಥೆ ಹೇಳುವಲ್ಲಿ ಮತ್ತಷ್ಟು ಪರಿಣಿತಿ ಸಾಧಿಸಿದ್ರೆ ಕನ್ನಡಕೊಬ್ಬ ಒಳ್ಳೆ ನಿರ್ದೇಶಕನಾಗಲಿದ್ದಾರೆ ಲೋಹಿತ್ . ಅಂತರ ಪಿಶಾಚಿಯಾಗಿ ಅಲೆಯುವ ಕುಮಾರಿಯ ಬಗೆಗೂ ಅನುಕಂಪ ಮೂಡಿಸಿದ ಮೇಲೆ ಅಲ್ಲಿಗೇ ನಿಲ್ಲಿಸಿದ್ದರೆ ಸಮಾಧಾನವಿರುತ್ತಿತ್ತೇನೋ . ಮತ್ತೆ ಮೈಗೇರಿಸಿದ್ದು ನೋಡಿದರೆ ಪಾರ್ಟ್ -೨ ತರುವ ಯೋಚನೆ ಕಾಣಿಸುತ್ತದೆ. ಅಥವಾ ಎಂಜಾಯ್ ದಿ ಫಿಯರ್ ಅಂತಾನೂ ಇರಬಹುದು.  ಮೊದಲ ಪ್ರಯತ್ನ ನಿಜಕ್ಕೂ ಚೆನ್ನವಿದೆ.

ಕಲಾವಿದರ ಕರಾಮತ್ತು !!

pri1

ಪ್ರಿಯಾಂಕಾ ಉಪೇಂದ್ರ

ಚೆಲುವಷ್ಟೇ  ಅಷ್ಟೇ ಅಲ್ಲ ಬುದ್ಧಿಮತ್ತೆ ಇರುವ ಪ್ರತಿಭಾವಂತ ನಟಿ. ಚಿತ್ರ ನಿರ್ಮಿಸುವ ಬಹುತೇಕ ಎಲ್ಲ ಹಂತಗಳನ್ನು ಬಲ್ಲ ಅನುಭವಿ. ಹೊಸದನ್ನು ಕಲಿಯುವ , ತೆರೆದುಕೊಳ್ಳುವ ಮನಸುಳ್ಳ ನಟಿ. ಇಲ್ಲಿ ಬಂದು ಕನ್ನಡ ಕಲಿತು ಎಲ್ಲರಲ್ಲಿ ಒಂದಾಗಿ ಬೆರೆತಿದ್ದೆ ಅದಕ್ಕೆ ಸಾಕ್ಷಿ. ‘ಮಮ್ಮಿ ಸೇವ್ ಮಿ’ ಚಿತ್ರದಲ್ಲೂ ಅವರ ಇಂಥಾ ಗುಣವೇ ಕಾಣುತ್ತದೆ. ಪ್ರೀತಿಸಿ ಮದುವೆಯಾದ ಗಂಡನನ್ನು ಕಳೆದುಕೊಂಡು ಹೊಟ್ಟೆಯಲ್ಲೊಂದು ಜೀವ ಹೊತ್ತು, ಕಣ್ಣೆದುರಿನಲ್ಲೇ ಇರುವ ಮತ್ತೊಂದು ಕೂಸನ್ನು ಕಾಪಾಡಿಕೊಳ್ಳಲು ಪರದಾಡುವ ಪಾತ್ರದಲ್ಲಿ ಸಹಜ ಅಭಿನಯದಿಂದ ಇಷ್ಟವಾಗುತ್ತಾರೆ. ಕೆಟ್ಟ ಕನಸು ಬಿದ್ದಾಗ ಪ್ರಿಯಾಂಕಾ ಅಭಿನಯ ನೋಡುತ್ತಿದ್ದರೆ ನಮಗೇ ಅಂಥಾ ಕೆಟ್ಟಾತಿ ಕೆಟ್ಟ ಕನಸು ಬಿದ್ದಹಾಗೆ ಅನ್ನಿಸಿ ಭಯ ಆವರಿಸಿಕೊಳ್ಳುತ್ತದೆ. ಮಗು ತಪ್ಪು ಮಾಡಿದೆ ಅನ್ನಿಸಿದಾಗ ಹೊಡೆಯಲಿಕ್ಕೂ ಸಂಕಟ ಪಡುವ, ಸಂತೈಸುವ ದೃಶ್ಯಗಳಲ್ಲಿ ಸ್ವಂತ ತಾಯಿಯಂತೆ ಕಂಡುಬಿಟ್ಟಿದ್ದಾರೆ. ತನ್ನ ಮಗುವಿಗಾಗಿ ಕುಮಾರಿ ಆತ್ಮದ ಬಳಿ ಕೇಳುವಾಗಿನ ಸನ್ನಿವೇಶದಲ್ಲಿ ಪ್ರಿಯಾಂಕಾ ಮನಕಲಕುತ್ತಾರೆ . ಒಟ್ಟಿನಲ್ಲಿ ಮಮ್ಮಿ ಸೇವ್ ಮಿ ಯಲ್ಲಿ ಪ್ರಿಯಾಂಕಾ ಅಭಿನಯ ಮನೋಜ್ಞವಾಗಿದೆ. 

yuvina

ಮುದ್ದು ಮರಿ ಯುವಿನ ಅಭಿನಯ ಮುದ್ದುಮಾಡುವಷ್ಟು ಇಷ್ಟವಾಗುತ್ತದೆ.

ವತ್ಸಲಾ ಮೋಹನ್

vatsala-mohan

ರಂಗಭೂಮಿ, ಕಿರುತೆರೆ, ಬೆಳ್ಳಿತೆರೆಯಲ್ಲಿ ಹಲವು ವರ್ಷಗಳಿಂದ ಅಭಿನಯಿಸಿದ ಕಲಾವಿದೆ . ಅವ್ರಿಗೂ ಇದು ಮೊದಲ ಹಾರರ್ ಸಿನಿಮಾ. ಪ್ರಿಯಾಂಕಾ ತಾಯಿಯ ಪಾತ್ರದಲ್ಲಿ ನಟಿಸಿರುವ ವತ್ಸಲಾ ನಮ್ಮನೆಯ ಅಮ್ಮನಷ್ಟೇ ಇಷ್ಟವಾಗುತ್ತಾರೆ. ದೆವ್ವದ ವಿಷಯ ಗೊತ್ತಾಗಿ ಮೊಮ್ಮಗಳನ್ನು ಹುಡುಕಲು ಮನೆಗೆ ಬಂದು ಕಾಟಕ್ಕೆ ಒಳಗಾಗುವ ದೃಶ್ಯದಲ್ಲಿ ಅದ್ಭುತವಾಗಿ ಅಭಿನಯಿಸಿದ್ದಾರೆ ವತ್ಸಲಾ ಮೋಹನ್ .

ಲವಲವಿಕೆಯಿಂದ ಓಡಾಡುವ, ಪಟಪಟನೆ ಮಾತನಾಡುವ , ಭಯದಿಂದ ನಡುಗುವ , ಅಕ್ಕನನ್ನು ಸಂತೈಸುವ ತಂಗಿಯ ಪಾತ್ರದಲ್ಲಿ ಐಶ್ವರ್ಯ ಶಿಂಧಗಿ ಇಷ್ಟವಾಗುತ್ತಾರೆ.

ಜಾನ್ ಪಾತ್ರದಾರಿ ಸಂದೀಪ್ 14 ಚಿತ್ರಗಳಲ್ಲಿ, ಅನೇಕ ಧಾರಾವಾಹಿಗಳಲ್ಲಿ ಅಭಿನಯಿಸಿರುವ ಅನುಭವಿ. ಮೊದಲ ದೃಶ್ಯದಲ್ಲೇ ಇದು ಪಳಗಿದ ಪ್ರತಿಭೆ ಅನ್ನಿಸುತ್ತಾರೆ.

ಫಾದರ್ ಪಾತ್ರದಲ್ಲಿ ಮಧುಸೂದನ್  ನಟನೆ ಎಲ್ಲರಿಗು ಇಷ್ಟವಾಗುವುದರಲ್ಲಿ ಎರಡು ಮಾತಿಲ್ಲ.

ಕ್ಯಾಮೆರಾ ಖದರ್ !!

venu-h-c

ವೇಣು ನಾದ ಕೇಳಿದಾಗ ಮನಸ್ಸಿಗೆ ಮುದವಾಗುವಂತೆ ವೇಣು ಅವರ ಸಿನಿಮಾಟೋಗ್ರಫಿ ಪ್ರಾರಂಭದಲ್ಲೇ ಆವರಿಸಿಕೊಳ್ಳುತ್ತದೆ.ಸಮುದ್ರದ ಅಲೆಗಳ ಮೇಲೆ ಟೈಟಲ್ ಕಾರ್ಡ್ ತೋರಿಸುವ ಫಸ್ಟ್ ಶಾಟ್ ಗೆ ಫಿದಾ !! ಕಾಲ ಸರಿಯುವುದನ್ನ ತೋರಿಸಲಿಕ್ಕೆ ಆಕಾಶ ,ಮೋಡಗಳ ಚಲನೆ ತೋರಿಸಿರುವುದು ಅದ್ಭುತ!! ಕುಮಾರಿ ಭೂತವನ್ನು ತೋರಿಸಿರುವ ರೀತಿ, ಕ್ಲೈಮಾಕ್ಸ್ ದೃಶ್ಯಗಳು ಇಂಟರ್ವೆಲ್ನಲ್ಲಿ ಸೂಸು ಮಾಡಿ ಬಂದಿದ್ದರೂ ಭಯದಿಂದ ಮತ್ತೆ ಓಡಿಸುತ್ತವೆ. ಹೆದರಿಕೆಯನ್ನೂ ಎಂಜಾಯಬಲ್ ಆಗಿಸಿದ್ದಾರೆ. ಇಡೀ ಸಿನಿಮಾ ಕಳೆಗಟ್ಟುವಲ್ಲಿ ವೇಣು ಕ್ಯಾಮೆರಾ ಚಾತುರ್ಯಕ್ಕೆ ಫುಲ್ ಮಾರ್ಕ್ಸ್ !!

ಅಜನೀಶ್ ಸಂಗೀತಕ್ಕೆ ಒಂದು ಸಲಾಂ !

ಪ್ರೀತಿ-ಪ್ರೇಮ,ವಿರಹ-ಕೋಪ-ದ್ವೇಷ -ಭಯ ಯಾವುದನ್ನೇ ಆಗಲಿ ತೀವ್ರವಾಗಿ ಅನುಭವಿಸಿದಾಗಲೇ ಅದರ ಸುಖ ಸಿಗೋದು ಅಲ್ವಾ ? ಅಲ್ಪ ಸ್ವಲ್ಪ ಲಾಜಿಕ್ ಪಕ್ಕಕ್ಕಿಟ್ಟು ಭಯದ ತೀವ್ರತೆ ಅನುಭವಿಸುವ ಎದೆಗಾರಿಕೆ ಇದ್ದವರು ನೋಡಬಹುದಾದ ಚಿತ್ರ “ಮಮ್ಮಿ ಸೇವ್ ಮಿ”. 

ಹ್ಯಾಪಿ ಗಡಗಡ !!ಢವ ಢವ !! 

 

ನಟರಾಜ ಸಪ್ಪೆ ಸರ್ವಿಸ್ !

“ನಟರಾಜ ಸರ್ವಿಸ್” ನಡಿಗೆಯಲ್ಲಿ ಗಟ್ಟಿತನ ಕಾಣದ ಪೊಳ್ಳು ಕಥೆ . ಸರಿಯಾಗಿ ಪಿಕ್ ಪ್ಯಾಕೆಟ್ ಮಾಡಲೂ ಬಾರದ ಕಳ್ಳನೊಬ್ಬ ದರೋಡೆ ಮಾಡಿ ಮತ್ತೆ ಜೈಲು ಸೇರಲು ಹೆಣಗಾಡುವ ಪಾತ್ರದಲ್ಲಿ ಶರಣ್  ಅಭಿನಯ ನೋಡಬಹುದಾದಷ್ಟು ಚೆನ್ನಾಗಿದೆ . ಚುರುಕು ಸಂಭಾಷಣೆ ಇದ್ದರೂ ಒಂದೇ ಒಂದು ಸಾಲು ಕಾಡುವುದಿಲ್ಲ.

ಇನ್ನು ನಾಯಕಿ ಸಹನಾ  ತನಗಂಟಿದ ಶಾಪದ ಬಗ್ಗೆ ಹೇಳುವಾಗಲಾಗಲಿ, ತನಗಾಗಿ ಮನೆಮಂದಿಯನ್ನೆಲ್ಲ ಎದುರು ಹಾಕಿಕೊಂಡ ಪ್ರೀತಿಸಿದ ಹುಡುಗನ ಜೇವಕ್ಕೆ ಸಂಚಕಾರವಾದಾಗ ತೋರಬೇಕಿದ್ದ ಭಾವುಕ ಅಭಿನಯದಲ್ಲಾಗಲಿ ಯಶಸ್ಸಿಯಾಗಿಲ್ಲ. ತನ್ನ ಪ್ರಾಣವನ್ನೂ ಲೆಕ್ಕಿಸದೆ ಪ್ರೀತಿಸಿದ ಹುಡುಗ ಸಾವು -ಬದುಕಿನ ನಡುವೆ ಹೋರಾಡುವಾಗ ಮತ್ತೊಬ್ಬನ ಮೇಲೆ (ಅವ ಎಷ್ಟೇ ಒಳ್ಳೆಯವನಾಗಿದ್ದರು ) ಪ್ರೀತಿ ಬರುವುದು ಹೇಗೆ ಸಾಧ್ಯ ? ಗಟ್ಟಿತನದ ಕೊರತೆ ರಾಚುತ್ತದೆ.

ಸಹನಾ ಪ್ರೀತಿಸಿದ ಹುಡುಗ ಸಂಜು ಅಭಿನಯ ಕೂಡ ಅಷ್ಟಕಷ್ಟೆ. ಆತನ ತಂದೆಯ ಪಾತ್ರದಾರಿಯ ಅಭಿನಯವೇ ಇವ್ರೆಲ್ಲರಿಗಿಂತ ವಾಸಿ ಅನ್ನಬಹುದು. ಜ್ಯೋತಿಷಿ ಪಾತ್ರದಲ್ಲಿ ನಾಗರಾಜ ಮೂರ್ತಿ ಅಭಿನಯ ಚೆನ್ನಾಗಿದೆ. ದರ್ಗಾ ದಲ್ಲಿ ನಿಂಬೆ ಹಣ್ಣು ಮಂತ್ರಿಸಿಕೊಡುವ ರವಿಶಂಕರ್ ಕೂಡ ಇಷ್ಟವಾಗುತ್ತಾರೆ.

ಸರಿಯಾಗಿ ಸಣ್ಣ ಚಮಚ ಕದಿಯಲು ಬಾರದ ಪುಕ್ಕಲು ಕಳ್ಳ ನಟರಾಜನನ್ನ  ಬಲಿಪಶುವಾಗದಂತೆ ತಡೆಯುವ ಇನ್ಸ್ಪೆಕ್ಟರ್ ಪಾತ್ರದ ರಾಕ್ಲೈನ್ ಸ್ವಲ್ಪ ಮಟ್ಟಿಗೆ ಸಹನೀಯ .

ದೇವರ ಮೇಲೆ ನಂಬಿಕೆ ಇರದ ನಾಯಕಿಗೆ ಕೊನೆಗೆ ನಂಬಿಕೆ ಹುಟ್ಟುವ ಸನ್ನಿವೇಶಗಳು “ಲತ್ತೆ” .

ಮಾಡಲೇನು ಕೆಲಸವಿಲ್ಲದಿದ್ದಾಗ ಸುಮ್ಮನೆ ಟೈಮ್ ಪಾಸ್ ಮಾಡಲಿಕ್ಕೆ ಬೇರೇನೂ ಕಾಣದಾದಾಗ ನೋಡಬಹುದಾದ ಸಿನಿಮಾ ನಟರಾಜ ಸರ್ವಿಸ್ .

ಹೋಗಿದ್ದಕ್ಕೆ ಸ್ವಲ್ಪ ಸಮಾಧಾನ ಎನಿಸುವುದು ಶರಣ್ ಚುರುಕಾದ ಅಭಿನಯ ಮಾತ್ರ.

-ವಿಭಾ

 

ರಾಮಾ ರಾಮಾ ರೇ …ಸೋಲಿಸಬ್ಯಾಡ ಗೆಲಿಸಯ್ಯಾ

ಕೆಲವು ಚಿತ್ರಗಳೇ ಹಾಗೆ ಮಾತು ಸಾಕು ಮಥಿಸು ಅಂದುಬಿಡುತ್ತವೆ. ರಾಮಾ ರಾಮಾ ರೇ ಕೂಡ ಅಂಥದ್ದೇ . ಸಿನಿಮಾ ನೋಡಿ ಎರಡು ದಿನವಾದ್ರು ಸನ್ನಿವೇಶಗಳು, ಪಾತ್ರಗಳು ಕಾಡುತ್ತಲೇ ಇವೆ. ನಾನಿಲ್ಲಿ ಇಡೀ ಚಿತ್ರದ ಚಿತ್ರವನ್ನು ಯಥಾವತ್ತಾಗಿ ಹೇಳುವುದಿಲ್ಲ. ನೀವು ನೋಡಿ ಅನುಭವಿಸಿದಾಗ್ಲೇ
ಅದರ ನಿಜವಾದ ದರ್ಶನ ನಿಮಗಾಗುವುದು.

ಒಂದು ಸಣ್ಣ ಹೊಡೆದಾಟ , ಬಡಿದಾಟದ ಸುದ್ದಿ ಸಿಕ್ಕರೂ ಬಗೆಬಗೆಯಲ್ಲಿ ಬಿತ್ತರಿಸುವ ಮಾಧ್ಯಮಗಳು ಅದ್ರಲ್ಲೂ ಸುದ್ದಿ ವಾಹಿನಿಗಳು ಗಲ್ಲು ಶಿಕ್ಷೆಗೆ ಗುರಿಯಾದ ಖೈದಿಯೊಬ್ಬ ಜೈಲಿನಿಂದ ಪರಾರಿಯಾದ ಸುದ್ದಿ ಸಿಕ್ಕ್ರೆ ಬಿಟ್ಟಾರೆಯೇ. ಯಾರ್ಯಾರ್ ಬಾಯಿಗೆ ಎಲ್ಲೆಲ್ಲಿ ಮೈಕ್ ಹಿಡೀತಾರೆ ಅನ್ನುವುದನ್ನ ತೆರೆ ಮೇಲೆ ಮಾಧ್ಯಮ ಮಿತ್ರರೇ ನೋಡಿದ್ರೂ ತಮ್ಮ ಕೆಲ್ಸಕ್ಕೆ ತಾವೇ ನಕ್ಕು ಬಿಡುವಂತೆ ದೃಶ್ಯ, ಹಾಡು(ನ್ಯೂಸ್ ನೋಡಿ..ನ್ಯೂಸ್ ನೋಡಿ..) ಕಟ್ಟಿರುವ ನಿರ್ದೇಶಕನ ಜಾಣ್ಮೆ ಮೆಚ್ಚಲೇ ಬೇಕು.

ಗಲ್ಲು ಶಿಕ್ಷೆಗೆ ಗುರಿಯಾದ ಸ್ಯಾಂಡಲ್ ರಾಜ ಜೀವದಾಸೆಯಿಂದ ಜೈಲಿನಿಂದ ಹಾರಿ ತಲೆಮರೆಸಿಕೊಳ್ಳಲು ತಿಣುಕಾಡುತ್ತಾನೆ. ಗೊತ್ತು ಗುರಿಯಿಲ್ಲದ ಪಯಣದಲ್ಲಿ ಟ್ರಕ್ ನಿಂದ ಜೀಪಿಗೆ ಸೇರುವ ತನಕ ಬಸ್ಸಿನಲ್ಲಿ ಕೂತಾಗ ಸರಿದು ಹೋಗುವ ದೃಶ್ಯಗಳಂತೆ ಸರಸರನೆ ಚಿತ್ರ ಸರಿದು ಹೋಗುತ್ತದೆ. ಅಲ್ಲಲ್ಲಿ ನಗ್ತಾ , ಇದೇನಿದು ಇವ್ನ್ ಕಥೆ ಅಂತ ಅವನ ಪಯಣದಲ್ಲಿ ನಾವೂ ಜೊತೆಯಾಗ್ತಾ ಅರ್ಧ ಸಿನಿಮಾ ನೋಡೇಬಿಟ್ಟಿರ್ತೀವಿ.

ಮಧ್ಯಂತರ ಮುಗಿದ ಮೇಲೆ ಪ್ರತೀ ಸಣ್ಣ ಸಣ್ಣ ದೃಶ್ಯಗಳು ನಮ್ಮನ್ನು ಕಲವುದಿಕ್ಕೆ ಶುರುವಿಟ್ಟು ಕೊಳ್ಳುತ್ತವೆ. ಚಿತ್ರ ಕಳೆಗಟ್ಟುತ್ತಾ ಕ್ಷಣಕ್ಷಣಕ್ಕೂ ಆವರಿಸಿಕೊಳ್ಳುತ್ತಾ ಹೋಗುತ್ತದೆ. ಎಲ್ಲಿಗೇ ಪಯಣ ಯಾವುದೋ ದಾರಿ ಅನ್ನುವಂತೆ ಅಲೆಯುವ ಕೈದಿಗೆ ಯಾರನ್ನೂ ನಂಬಲಾಗದ ಸ್ಥಿತಿ, ತಪ್ಪಿಸಿಕೊಂಡ ಸುದ್ದಿ ಹರಡಿ, ತನ್ನ ತಲೆಗೆ ಹತ್ತು ಲಕ್ಷ ಕಟ್ಟಿರುವಾಗ ಕಂಡವರು ಬಿಟ್ಟಾರೆಯೇ ಅನ್ನುವ ಮಡುಗಟ್ಟಿದ ಆತಂಕ, ಅನುಮಾನಗಳನ್ನ ಅಭಿವ್ಯಕ್ತಿಸುವ ಕಲೆಯಲ್ಲಿ ನಟರಾಜ್ ಅವರ ಅಭಿನಯಕ್ಕೆ ನೀವು ಮಣಿಯದೆ ವಿಧಿಯಿಲ್ಲ.

ಗಲ್ಲು ಶಿಕ್ಷೆಯ ನಿರ್ವಾಹಕ ರಾಮಣ್ಣನಿಗೆ ತನ್ನ ಜೀಪಿನಲ್ಲಿ ಪಕ್ಕದಲ್ಲಿ ಕುಳಿತಿರುವಾತ ಜೈಲಿನಿಂದ ಹಾರಿ ಬಂದ ಹಕ್ಕಿ ಅನ್ನುವುದು ತಿಳಿದಾಗ ಅದನ್ನು ಸೂಕ್ಷ್ಮವಾಗಿ ನಿಭಾಯಿಸುವ ರೀತಿ , ಸಣ್ಣ ಸಣ್ಣ ಹಾವಭಾವಗಳು ಈತ ನಿರ್ದೇಶಕನ ನಟ ಅನ್ನಿಸಿಡುತ್ತದೆ. ಪಾತ್ರ ಕಟ್ಟುವ ಸತ್ಯ ಪ್ರಕಾಶ್ ಸೂಕ್ಷ್ಮತೆ ಇಲ್ಲಿ ಎದ್ದು ಕಾಣುತ್ತದೆ.

ಪ್ರೀತಿಸಿದ ಹುಡುಗಿ ಸುಬ್ಬಿಯೊಂದಿಗೆ ಎಲ್ಲರನ್ನು ಎದುರು ಹಾಕಿಕೊಂಡು ಊರಿನಿಂದ ಓಡಿ ಬಂದು ಭಂಡತನದಿಂದ ರಾಮಣ್ಣನ ಜೀಪಿನಲ್ಲಿ ತೂರಿಕೊಳ್ಳುವ ಧರ್ಮನ ಉಡಾಫೆ, ಸ್ವಾರ್ಥದ ಪಾತ್ರದಲ್ಲಿ ಧರ್ಮ ಕಡೂರರ ಸಹಜ ಅಭಿನಯ ಇಷ್ಟವಾಗುತ್ತದೆ. ಅಪ್ಪನ ಹಣ ಕದ್ದು ನಿಯತ್ತಾಗಿ ಪತ್ರ ಬರೆದಿಟ್ಟು ,ಹರೆಯದ ಹುಮ್ಮಸ್ಸಿನಲ್ಲಿ ಪ್ರೀತಿಗೆ ಬೀಳುವ ಅಭಿನಯದಲ್ಲಿ ಬಿಂಬಶ್ರೀಯೂ ಇಷ್ಟವಾಗುತ್ತಾರೆ.

ಓಡಿ ಹೋದ ಜೋಡಿಯನ್ನ ಹಿಡಿಯಲು ಬೈಕಿನಲ್ಲಿ ಬಂದು ಬಾಟಲಿ ಕಂಡಾಕ್ಷಣ ಬಾಯ್ ಬಾಯ್ ಬಿಡುವ ನಟನೆಯಲ್ಲಿ ಮಠ ಮನಸ್ಸಿಗೆ ಇಳಿಯುತ್ತಾರೆ. ಪಾತ್ರ ಚಿಕ್ಕದಾದ್ರು ಚೊಕ್ಕತನವಿದೆ.

ಇಡೀ ಕಥೆ, ಸಿನಿಮಾ ಹರಳುಗಟ್ಟುವ ಹಂತವೆಂದರೆ ದಾರಿಯಲ್ಲಿ ಆಟೋ ಕೆಟ್ಟು ಹೆರಿಗೆ ನೋವಿನಿಂದ ನರಳುತ್ತಿರುವ ತನ್ನ ಕೂಸಿನ ಜೀವ ಉಳಿಸಿ.. ಎಂದು ಅಂಗಾಲಾಚಿ ಬರುವ ಸೈನಿಕನ ಅತ್ತೆಯ ಪ್ರವೇಶ. ಅಷ್ಟೊತ್ತಿಗಾಗಲೇ ರಾಮಣ್ಣ ಹಾಗು ಕೈದಿ ಒಬ್ಬರನ್ನೊಬ್ಬರು ಬಡಿದುಕೊಂಡು ಹೈರಾಣಾಗಿದ್ದವರು ಈ ತಾಯಿಯ ಗೋಗರೆತಕ್ಕೆ ಕರಗಿ ಕೈಕೈ ಸೇರಿಸಿ ಗರ್ಭಿಣಿಯನ್ನ ಹೊತ್ತು ತಂದು ಜೀಪಿನಲ್ಲಿ ಕೂರಿಸುತ್ತಾರೆ. ಹೆರಿಗೆಯೂ ಜೀಪಿನಲ್ಲೇ ಜರುಗುತ್ತದೆ. ಒಂದು ಹುಟ್ಟು ಮತ್ತೊಂದರ ನಾಶಕ್ಕೆ ನಾಂದಿ ಹಾಡುವಂತೆ ಕಾಠಿಣ್ಯ, ಕ್ರೌರ್ಯ ವ ಕರಗಿಸಿ ಮನುಷ್ಯತ್ವದ ಸೆಲೆ ಉಕ್ಕುವುದು ಇಲ್ಲೇ.

ಜೀವ ಉಳಿಸಿದ ಜೀವಗಳಿಗೆ ಕೈತುತ್ತು ಇಟ್ಟು ಮನಕಲಕುವ ಮಾತನಾಡುವ ಸೈನಿಕನ ತಾಯಿಯ ತಾಯ್ತನ ಮುನಿದ ಮನಸುಗಳನ್ನು ಬೆಸೆಯುತ್ತದೆ. ಮಗುವನ್ನು ವರ್ಣಿಸುವಾಗ ”ಕೋಪವಿಲ್ಲ , ದ್ವೇಷವಿಲ್ಲ ಗಾಂಧೀ ತಾತನ ಹಾಗಿದ್ದಾನೆ” ಅಂದುಬಿಡುತ್ತಾಳಲ್ಲ ಅಜ್ಜಿ ಅದು ಒಂದು ಕ್ಷಣ ಅವಾಕ್ಕಾಗಿಸುತ್ತದೆ. ಎರಡೇ ಪದಗಳಲ್ಲಿ ಗಾಂಧಿಯವರನ್ನ ತೋರಿದ ಸಂಭಾಷಣಾಕಾರನಿಗೆ ಶಬ್ಬಾಸ್ !!

ಅಜ್ಜಿ ಅಡುಗೆ ಮಾಡುತ್ತಾ , ತುತ್ತಿಡುತ್ತಾ ” ಈ ಮುನುಷ್ಯ ಭೂಮಿಯಿಂದ ಆಚೆ ಹೋಗೋದನ್ನ ಕಲಿತರೂ ಜಾತಿಯಿಂದ ಆಚೆ ಹೋಗೋದನ್ನ ಕಲೀಲಿಲ್ಲ ” ಅನ್ನುವುದು ಎಂಥಾ ಮಾತಲ್ಲವಾ !? ಮನುಷ್ಯತ್ವ ಮರೆತು ಜಾತಿಯ ಹೆಸರಲ್ಲಿ ಕಚ್ಚಾಡುವವರೆಲ್ಲ ಮುಟ್ಟಿ ನೋಡಿಕೊಳ್ಳಬೇಕು.

ನೇಣು ಬಿಗಿವವ , ಕುತ್ತಿಗೆ ಒಡ್ಡುವವ ಇಬ್ಬರೂ ಜೊತೆಯಾಗಿ ನೇಣಿಗೆ ಬಳಸುವ ಹಗ್ಗವನ್ನು ಕಂದನನ್ನ ತೂಗುವ ಜೋಲಿಗೆ ಕಟ್ಟುವಾಗ ಬರುವ ” ಬದುಕೇ ಬದುಕ ಕಲಿಸು ” ಹಾಡು ಸಮಂಜಸವಾಗಿದೆ. ಆಪ್ತವಾಗಿದೆ. ಇದು ಕಲ್ಲು ಕರಗುವ ಸಮಯ!!

ಮುಂದುವರೆದ ಕೈದಿ ಮತ್ತು ರಾಮಣ್ಣನ ಪಯಣದಲ್ಲಿ ಮತ್ತೆ ಮುಖಾಮುಖಿಯಾಗುವ ಟ್ರೆಕ್ ಡ್ರೈವರ್ “ಪಾಪ ಮಾಡೋದ್ರಲ್ಲೂ ಪುಣ್ಯವಿದೆ ” ಅಂದು ಹೊಟ್ಟೆಪಾಡಿಗಾಗಿ ವೇಷಧರಿಸುವ ಹಾಡುಗಾರರ ಪುಟ್ಟ ತಂಡವನ್ನು ಜೀಪಿಗೆ ಹತ್ತಿಸುತ್ತಾನೆ. ಅವರು ಹಾಡುವ ಭಗವತ್ಗೀತೆಯ ಕೃಷ್ಣ ಅರ್ಜುನ ಸಂಭಾಷಣೆಯಂಥಾ ಸಾಲುಗಳು “ಕೇಳು ಕೃಷ್ಣ .. (ಪಕ್ಕ ಹಳ್ಳಿಗರ ಶೈಲಿಯ ) ಇವರಿಬ್ಬರ ಮನಸ್ಸಿನ ತಳಮಳ, ತೊಯ್ದಾಟ, ಪ್ರಶ್ನೆ, ಉತ್ತರಗಳಿಗೆ ಕನ್ನಡಿಯಂತಿವೆ.

ಇಲ್ಲಿ ಬಹುತೇಕ ಎಲ್ಲವೂ ಆಕಸ್ಮಿಕಗಳ ಸರಣಿ . ಸಮಯ,ಸನ್ನಿವೇಶ , ಸಂದರ್ಭ ನಮ್ಮನ್ನ ಹೇಗೆಲ್ಲ ಆಡಿಸುತ್ತವೆ, ಅಲುಗಾಡಿಸುತ್ತವೆ ,ಅರಳಿಸುತ್ತವೆ ಅನ್ನುವುದನ್ನ ನೋಡಬೇಕು ನೀವಿಲ್ಲಿ.
ಕನ್ನಡದಲ್ಲಿ ವಿಭಿನ್ನ ಪ್ರಯತ್ನ ರಾಮಾ ರಾಮಾ ರೇ .. ರಸ್ತೆಯಲ್ಲೇ ಬಹುಪಾಲು ಚಿತ್ರ ರೂಪಿಸಿದ ಸೂತ್ರದಾರ ಸತ್ಯಪ್ರಕಾಶ ಸಾಹಸ ಪ್ರಶಂಸೆಗೆ ಅರ್ಹ. ಸಂಗೀತ,ಹಾಡುಗಳಿಗೆ ಸತ್ಯಪ್ರಕಾಶ್ ವಾಸುಕಿ ವೈಭವ್ ,ಅನನ್ಯ ಭಟ್ ಎಲ್ಲರೂ ಪ್ರೀತಿಗೆ ಪಾತ್ರರು.

ಹಾಗಾದ್ರೆ ಈ ಸಿನಿಮಾದಲ್ಲಿ ದೋಷಗಳೇ ಇಲ್ಲವೇ ಪರ್ಫೆಕ್ಟ್ ಚಿತ್ರವೇ ಅಂದ್ರೆ ಖಂಡಿತಾ ಇದೆ. ಆದ್ರೆ ಎಣಿಸುವ ಕಾಲವಿದಲ್ಲ. ಹಣ ತೆತ್ತು ಬರುವ ಪ್ರೇಕ್ಷಕ ಮಹಾಪ್ರಭುವಿಗೆ ರಂಜನೆ ,ಬೋಧನೆ ಎರಡನ್ನೂ ಕೊಟ್ಟು ಇಗೋ ನಮ್ಮ ಶ್ರಮ ಬಸಿದಿದ್ದೇವೆ ಒಪ್ಪಿಸಿಕೊಳ್ಳಿ ಅನ್ನುವ ಶ್ರದ್ಧೆ, ಶ್ರಮ, ಪ್ರತಿಭೆಯ ಮುಂದೆ ಉಳಿದೆಲ್ಲವೂ ಪಕ್ಕಕ್ಕೆ ಸರಿಯುತ್ತವೆ.

ರಾಮಾ ರಾಮಾ ರೇ.. ನೀವು ನೋಡಿ ,ಗೆಲ್ಲಿಸಲೇಬೇಕಾದ ಚಿತ್ರ. ನೋಡ್ತಿರಲ್ಲ .

ನಾಗರಹಾವು ಬಿಗಿನಿಂಗ್ ಬುಸ್ಸ್ .. ಎಂಡಿಂಗ್ ?

ವಿಷ್ಣುವರ್ಧನ್ ಅಭಿಮಾನಿಗಳು ಮತ್ತೆ ಸಾಹಸಸಿಂಹನನ್ನು ತೆರೆಯ ಮೇಲೆ  ಕಂಡು ಕಣ್ತುಂಬಿಕೊಳ್ಳುವ ಆಸೆಯಿಂದ  ಹೋದ್ರೆ ಅವ್ರಿಗೆ ಸಿಕ್ಕಿದ್ದೇನು?

ನಾಗರಹಾವು ಚಿತ್ರದ ಪ್ರಾರಂಭದಲ್ಲಿ” ನಾಗರಹಾವು “ಹಾಡಿಗೆ ಹೆಜ್ಜೆ ಹಾಕುವ ದರ್ಶನ್ ಆಮೇಲೆ ಏನಾದ್ರೂ ಅನ್ನುವುದು ಯಾರಿಗಾದ್ರೂ ಗೊತ್ತಾಗಿದ್ರೆ ಅದು ಅವರ ಪುಣ್ಯ ಅಂತಷ್ಟೇ ಹೇಳ್ಬಹುದು. ಇದು ಅಮಾಯಕ ಪ್ರೇಕ್ಷಕರನ್ನು ಯಾಮಾರಿಸುವ ಮೊದಲ ಗಿಮಿಕ್ .

ಕಥೆಯ ವಿಚಾರಕ್ಕೆ ಬಂದ್ರೆ ಇದು ಓಬಿರಾಯನ ಕಾಲದ್ದೇ. ನಮ್ಮ ವಾಹಿನಿಗಳಲ್ಲಿ ಬರುವ ನಾಗಿಣಿ ತರಹದ  ಧಾರಾವಾಹಿಗಳೇ ವಾಸಿ ಅನ್ನಬಹುದೇನೋ . ಒಂದಿಷ್ಟಾದ್ರು ಕುತೂಹಲ ಹುಟ್ಟಿಸದ ಕಥಾಹಂದರ. ಜನರ ನಂಬಿಕೆಯನ್ನು ಬಳಸಿ ಮತ್ತಷ್ಟು ಮೌಢ್ಯಕ್ಕೆ ತಳ್ಳುವ ಚಿತ್ರ.

ಟ್ರಾಯ್ , ೩೦೦ ನಂಥ ಹಾಲಿವುಡ್ ಸಿನಿಮಾ ನೋಡಿದವರಿಗೆ ಇವ್ರ್ ಕಾಪಿ ಕಲೆ ಬಹಳ ಚೆನ್ನಾಗಿ ಅರ್ಥವಾಗಿಬಿಡತ್ತೆ. ಈ ತಂಡ ಕೊಟ್ಟ ಹೈಪ್ ಗೆ ಹೋಲಿಸಿದ್ರೆ ಅದ್ರ ಕಾಲು ಭಾಗಕ್ಕೂ ನಿಲುಕುವುದಿಲ್ಲ.

ಇಲ್ಲಿ ಕೊಟ್ಟ ದುಡ್ಡಿಗೆ ಮೋಸವಿಲ್ಲ ಅನ್ನಿಸುವುದು ರಮ್ಯಾ ಅಭಿನಯ. ಮೋಹಕ ತಾರೆ ಹೆಸರಿಗೆ ತಕ್ಕಂತೆ ಸಮ್ಮೋಹಗೊಳಿಸಿಬಿಡುತ್ತಾರೆ. ಇಂಥಾ ಪ್ರತಿಭೆ ಇರುವಾಗ ನಾಯಕರಿಗೆ ಕೊಡುವಷ್ಟೇ ಸಂಭಾವನೆ ನಂಗೂ ಕೊಡಿ ಅಂಥಾ ಕೇಳೋದ್ರಲ್ಲಿ ತಪ್ಪೇನು ಇಲ್ಲ ಬಿಡಿ. ಬಹುಶಃ ಕಳೆದ ಬಾರಿ ಚುನಾವಣೆಯ ಸಮಯದಲ್ಲೇನಾದ್ರು ಈ ಚಿತ್ರದ ಜನಪರವಾದ ರಮ್ಯಾ ಡೈಲಾಗ್ಗಳನ್ನ ಮಂಡ್ಯದ  ಅಭಿಮಾನಿಗಳು ಕೇಳಿದ್ರೆ  ಗೆಲ್ಲಿಸೇ  ಬಿಡ್ತಿದ್ರೋ  ಏನೋ . ಒಂದೇ ಒಂದು ಸಿನಿಮಾದಲ್ಲೂ ಜನರ ಪರವಾಗಿ ಹೋರಾಟ ಮಾಡುವ ಪಾತ್ರ ಮಾಡಿರದಿದ್ದ ರಮ್ಯಾರನ್ನ ಮೊದಲ ಬಾರಿಗೇ ಸಂಸತ್ತಿಗೆ ಕಳುಹಿಸಿದ ಮಂಡ್ಯದ ಮುಗ್ಧ ಜನ ಇಂಥಾ ಪಾತ್ರಕ್ಕೆ ಮೆಚ್ಚಿ ಮನ್ನಣೆ ಕೊಟ್ಟಿದ್ದರೂ ಆಶ್ಚರ್ಯವಿಲ್ಲ.

ದಿಗಂತ್  ನಟನೆಗೆ ರೈಟ್ ಮಾರ್ಕ್ ಕೊಡಬಹುದು. ಪೋಷಕರ ನಟನೆಯೂ ಓಕೆ .  ಇಂಟರ್ನ್ಯಾಷನಲ್ ಕಾಂಪಿಟೇಷನ್ ನಲ್ಲಿ ಹಾಡುವ ಹಾಡು ಮತ್ತದರ  ಸಂಗೀತವಂತೂ ಸಪ್ಪೆ ಸಪ್ಪೆ .

ಪೋಸ್ಟರ್ ,ಬ್ಯಾನರ್ಗಳಲ್ಲಿ ಆ ಪಾಟಿ ವಿಷ್ಣು ದಾದಾರನ್ನ ತೋರಿಸಿದ್ದಾರಲ್ಲ ಅದನ್ನ ನಂಬಿಕೊಂಡು  ಅವರೇ ಪ್ರಮುಖ ಪಾತ್ರದಲ್ಲಿ ಮಿಂಚಿದ್ದಾರೇನೋ ಅನ್ನೋ ಆಸೆಯಲ್ಲಿ ಹೋದವರಿಗೆ ನಿರಾಸೆ ಕಟ್ಟಿಟ್ಟ ಬುತ್ತಿ. ಈಗ ಬರಬಹುದು ಆಗ ಬರಬಹುದು ಅಂತ ಕಾಯುತ್ತಿದ್ದವರಿಗೆ ಕೊನೇ ಘಳಿಗೆಯವರೆಗೂ ಕಾಯಬೇಕಾದ  ಸ್ಥಿತಿ . ಸದ್ಯ ಬಂದ್ರಲ್ಲ ನಮ್ ಆರಾಧ್ಯ ದೈವ ಅಂತ ಅಭಿಮಾನಿಗಳು ಭಾವುಕರಾಗಿ ಕಣ್ತುಂಬಿಕೊಳ್ಳೋ ಹೊತ್ತಿಗೆ ಮಿಂಚಿ ಮರೆಯಾಗಿ ಹೋಗುತ್ತಾರೆ. ಜೊತೆಗೆ ಅದು ಗ್ರಾಫಿಕ್ಸ್ ಆಗಿರೋದ್ರಿಂದ ಮುಖಭಾವದಲ್ಲಿ ಆಪ್ತತೆ ಕಾಣುವುದಿಲ್ಲ. ವಿಷ್ಣುರ  ಮುದ್ದಾದ ಮುಖಭಾವ ಕಂಡವರಿಗೆ ಛೆ .. ಛೆ.. ಅನ್ನಿಸುವುದು ಖಂಡಿತ . ತಂತ್ರಜ್ಞಾನಕ್ಕೆ ಹೆಚ್ಚು ಹಣ ಬೇಕು ಅನ್ನುವುದು ನಿಜವಾದ್ರೂ  ಇನ್ನು ಎಫೆಕ್ಟಿವ್ ಆಗಿ ತರಬಹುದಿತ್ತೇನೋ ಅನ್ನಿಸದೇ ಇರದು.

ನಾಗರಹಾವು ಅಂದಾಕ್ಷಣ ನೆನಪಾಗುತಿದ್ದದ್ದು ವಿಷ್ಣು ಅಭಿನಯದ ಮರೆಯಲಾಗದ ಸಿನಿಮಾ . ಬಾಲಿವುಡ್ ಘಟಾನುಘಟಿಗಳು ನೋಡಿ ಮೆಚ್ಚಿ  ಶಹಬ್ಬಾಶ್ ಗಿರಿ ಕೊಟ್ಟ ಅದ್ಭುತ ಚಿತ್ರ. ಚಾಮಯ್ಯ ಮೇಷ್ಟ್ರು, ಜಲೀಲ ಮನದಲ್ಲಿ ಇವತ್ತಿಗೂ ಕಾಡುವ ಪಾತ್ರಗಳು. ಹಾಡುಗಳು ಓಹ್ !! ಬಾರೇ  .. ಬಾರೇ.. ಚೆಂದದ ಚೆಲುವಿನ ತಾರೆ ಎಷ್ಟು ಕೇಳಿದ್ರೂ ಮತ್ತೆ ಮತ್ತೆ ಆವಾಹಿಸಿಕೊಳ್ಳುವುದು ನಿಜವಲ್ಲವೇ . ಈ  ನಾಗರಹಾವು ಚಿತ್ರದಲ್ಲಿ ಕಾಡುವಂಥದ್ದು ಕಣ್ಣಿಗೇನು ಬೀಳಲಿಲ್ಲ.  ಮುಂದಿನ ಪೀಳಿಗೆಯವರು ನಾಗರಹಾವು ಸಿನಿಮಾ ಅಂದಾಕ್ಷಣ ಹೊಸ ಸಿನಿಮಾವನ್ನೇ ನೆನಪಿಟ್ಟುಕೊಂಡ್ರೆ ಅದು ಕನ್ನಡ ಚಿತ್ರರಂಗದ ದುರದೃಷ್ಟವೇ ಸರಿ.

ಜನರ ಭಾವನೆಗಳನ್ನು ಬಳಸಿಕೊಳ್ಳುವುದು  ಅಂದ್ರೆ ಇದೇ ಅನಿಸುತ್ತದೆ. ವಿಷ್ಣುವರ್ಧನ್ರನ್ನ ಮುಂದಿಟ್ಟುಕೊಂಡು ಹಳಸಿದ ಕಥೆಗೆ ಕಲರ್ ಕಟ್ಟಿ ಹಣ ಗಳಿಸುವ  ಹುನ್ನಾರವಿದಷ್ಟೆ . ಅಮಾಯಕರ ಭಾವನೆಗಳು ಬಲಿಪಶುಗಳಾಗಿವೆ.

ಹೀಗಿದೆ ನೋಡಿ “ಇದೊಳ್ಳೆ ರಾಮಾಯಣ”

 

ತಾನು ಗಂಡು ,ಯಜಮಾನ ತನ್ನ ಮಾತೇ ಅಂತಿಮ ಅನ್ನುವ ಹಾಗೆ ಮೆರೆದ ನಾಯಕನಿಗೆ ಕತ್ತಲ ಕೋಣೆಯಲ್ಲಿ ಹೆಸರೇ ಗೊತ್ತಿಲ್ಲದ ಹೆಣ್ಣಿನ ಜೊತೆಗೆ ಕಳೆದ ಘಳಿಗೆಗಳು ಮನಸ್ಸನ್ನೇ ತೆರೆಸಿಬಿಡುತ್ತವೆ.   ಪ್ರಕಾಶ್ ರೈರಂಥ ಪ್ರಖರ ಪ್ರತಿಭೆಯ ಎದುರಿಗೆ  ಪಕ್ಕಾ ಪ್ರೊಫೆಷನಲ್  ಲೈಂಗಿಕ ಕಾರ್ಯಕರ್ತೆಯಾಗಿ ನಟಿಸುವುದು ಕಷ್ಟ ಕಷ್ಟ . ಆದ್ರೆ ಪ್ರಿಯಾಮಣಿ  ಸೇರಿಗೆ  ಸವ್ವಾ ಸೇರು ಅನ್ನುವಂತೆ ಸಹಜ ಅಭಿನಯದಿಂದ ಗೆದ್ದಿದ್ದಾರೆ.

ಮೊದಮೊದಲು ಗಯ್ಯಾಳಿಯ ಹಾಗೆ  ಗಂಟೆಗಿಷ್ಟು ಗಂಟು ಇಟ್ಟು ಮಾತಾಡು ಅನ್ನುವ ಆಕೆ ಭುಜಂಗಯ್ಯನ ಭಯ, ಒಂದಿಷ್ಟು ಒಳ್ಳೆಯ ನಡವಳಿಕೆಗಳನ್ನ ಗಮನಿಸುತ್ತಾ ಹೋದಂತೆ ಮಮತಾಮಯಿಯೇ ಆಗಿಬಿಡುತ್ತಾಳೆ . ಹೆಂಡತಿ, ಮಗಳನ್ನು  ಕಂಡಾಗ ಅವಳು ಕೇಳುವ ಪ್ರಶ್ನೆಗಳು ,ಕೊಟ್ಟ  ಸಲಹೆಗಳು  ಭುಜಂಗಯ್ಯನ ಅಹಮಿಕೆಯನ್ನೇ ಅಲ್ಲಾಡಿಸುತ್ತವೆ. ತಾನೂ  ಕರಗಿ ಆತನನ್ನೂ ಕರಗಿಸಿ ಮೈಯ್ಯ  ಹಂಗಿಲ್ಲದೆ ಮನಸ್ಸನ್ನು ಅರಳಿಸಿ ಹೊರಡುತ್ತಾಳೆ .

ಮಾತಿನ ಮಧ್ಯೆ  ಬರುವ  ಸಂದ  ಹಿನ್ನೆಲೆ ಸಂಗೀತ ಮೌನದಲ್ಲೇ ಮನವನ್ನ ಮಥಿಸುತ್ತದೆ. ಸಂಗೀತ ನಿರ್ದೇಶಕ ಸೂಕ್ಷ್ಮಜ್ಞನಾಗಿದ್ದಾಗ ಮಾತ್ರ ಇದು ಸಾಧ್ಯ .

ಸಾಮರ್ಥ್ಯ ಇದ್ದರೂ ಹೀರೋಗಳ ಹಿಂದೆ ಅಲೆಯುವ ನಿರ್ದೇಶಕನ ಪಾತ್ರದಲ್ಲಿ ಅಚ್ಯುತ ಎಂದಿನಂತೆ ತಮ್ಮ ಅಚ್ಚೊತ್ತಿದ್ದಾರೆ . ರಂಗಾಯಣ ರಘು ಇದ್ದಲ್ಲಿ ನಗು ಇರಲೇಬೇಕಲ್ಲ .

ಆಟೋ ಶಿವನ ಮುಗ್ದತೆ ,ಹುಂಬತನ ,ಸ್ವಾಮಿನಿಷ್ಠೆ ಮನಸೆಳೆಯುತ್ತವೆ. ನಿರ್ದೇಶನದ ಜೊತೆಗೆ ನಟನೆಯ ಪಾಠವನ್ನೂ ಶಿವನಿಗೆ ಕಲಿಸಿದ್ದಾರೆ ರೈ .

ಇಂಥಾದ್ದೊಂದು ಕಥೆಯನ್ನ ಕನ್ನಡದ ಪ್ರೇಕ್ಷಕ ಮಹಾಶಯರಿಗೆ ಕೊಡಲಿಕ್ಕೆ ಸೂಕ್ಷ್ಮ ಸಂವೇದನೆಯ ನಟ ,ನಿರ್ದೇಶಕರಿಂದ ಮಾತ್ರ ಸಾಧ್ಯ . ಪ್ರಕಾಶ್ ರೈ ಸಾಧಿಸಿ ತೋರಿಸಿದ್ದಾರೆ . ಅವ್ರ ದೇಹಭಾಷೆ ,ಧ್ವನಿಯ ಏರಿಳಿತ ಮೆಚ್ಚದೆ ಬೇರೆ ದಾರಿ ಇಲ್ಲ.

ಪೋಸ್ಟರ್ಗಳಲ್ಲಿ ಪ್ರಕಾಶ್ ರೈ ಪ್ರಮುಖವಾಗಿ ಕಂಡರೂ ಕಥೆಯ ಆಳಕ್ಕೆ ಹೋದಂತೆಲ್ಲಾ ಕಾಣುವುದು ಹೆಣ್ಣಿನ ಹೆಗ್ಗಳಿಕೆಯೇ .  ಭುಜಂಗಯ್ಯನ ಅಹಮ್ಮಿನ ಅಟ್ಟದಿಂದ ಇಳಿಸಿ ಮನುಷ್ಯನನ್ನಾಗಿಸುವವರು ಮೂವರು ಹೆಣ್ಣು ಮಕ್ಕಳೆ .

ಕನ್ನಡಕ್ಕೊಂದು ಕುಟುಂಬವೆಲ್ಲಾ ಕುಳಿತು ನೋಡುವಂಥಾ ಸದಭಿರುಚಿಯ ಚಿತ್ರ ‘ಇದೊಳ್ಳೆ ರಾಮಾಯಣ ” ಸಿಕ್ಕಿರುವುದು ಸುಳ್ಳಲ್ಲ .

 

Like Us, Follow Us !

121,086FansLike
1,817FollowersFollow
1,347FollowersFollow
1,653SubscribersSubscribe

Trending This Week