31 C
Bangalore, IN
Tuesday, May 22, 2018
Home ಸಿನಿಮಾ ನ್ಯೂಸ್ ಸಿನಿಮಾ ರಿವ್ಯೂ / ವಿಮರ್ಶೆ

ಸಿನಿಮಾ ರಿವ್ಯೂ / ವಿಮರ್ಶೆ

ಎದೆಗಾರಿಕೆ ಇದ್ದವರಿಗೆ ಮಾತ್ರ ”ಮಮ್ಮಿ”

ದೆವ್ವ, ಭೂತಗಳ ಸಿನಿಮಾ ಮಾಡಿ ಗೆಲ್ಲುವುದು ಅಷ್ಟೇನೂ ಸುಲಭದ ಮಾತಲ್ಲ.  ನೆಚ್ಚಿನ ನಾಯಕ , ನಾಯಕಿಗೆ ಮುಂದೇನಾಗುವುದೋ ? ಯಾರಿಗೇನು ಕೇಡೋ ? ಎಂಬ ಆತಂಕದಿಂದ ಕ್ಷಣಕ್ಷಣಕ್ಕೂ ಕೈಕೈ ಹಿಸುಕುತ್ತಾ, ಉಗುರು ಕಚ್ಚುತ್ತಾ, ಬಿಟ್ಟ ಕಣ್ಣು ಬಿಟ್ಟ ಹಾಗೆ ನೋಡುವಂತೆ ಪ್ರೇಕ್ಷಕ ಪ್ರಭುವನ್ನ ಹಿಡಿದಿಡುವುದಕ್ಕೆ  ಸಕ್ಕತ್ ತಾಕತ್ತೇ ಬೇಕು. ಇಂಥದೊಂದು ಸಾಹಸಕ್ಕ್ಕೆ ಮೊದಲ ನಿರ್ದೇಶನದಲ್ಲೇ ಅಡಿ ಇಟ್ಟಿದ್ದಾರೆ ಲೋಹಿತ್ .

ನಿರ್ದೇಶನ

lohit 

ಮೊದಲ ಸಲ ಸಾಮಾನ್ಯವಾಗಿ ಆಗುವ “ಲಿಂಕ್ ಮಿಸ್ಸಿಂಗ್ ” ಸಮಸ್ಯೆ ಅಲ್ಲಲ್ಲಿ ಕಾಣುತ್ತದೆ. ಸಣ್ಣ ಸಣ್ಣ ದೋಷಗಳನ್ನು ಮರೆಸುವಂತ ಸಂಗೀತ, ಸೌಂಡ್ ಎಫೆಕ್ಟ್ , ಸಿನಿಮಾಟೋಗ್ರಫಿ ಸಿನಿಮಾದೊಳಗೆ ಸೆಳೆದುಕೊಳ್ಳುತ್ತದೆ. ಪಾತ್ರದಾರಿಗಳು ಹೆದರಿ ನಡುಗುವ ದೃಶ್ಯಗಳು ಬಂದಾಗ ಇತ್ತೀಚಿನ ನೋಡುಗರು ‘ಅಯ್ಯೋ ಹೆದರ್ಕೋಬೇಡ ಡೈರೆಕ್ಟರ್ ಅಲ್ಲೇ ಅವ್ರೆ’ ಅಂತ ಕೂಗ್ತಿದ್ರು ತಾವು ಕೂತ ಕುರ್ಚಿ ಬಿಗಿಯಾಗಿ ಹಿಡ್ಕೊಂಡು ನೋಡುವ ಸಿನಿಮಾವಿದು. ನೋಡುವವರ ಜಂಘಾಬಲ ನಡುಗಿಸುವಂತ ಸೌಂಡ್ನ ಬಳಕೆ ಬೊಂಬಾಟ್! ಕಡೆಕಡೆಯ ದೃಶ್ಯಗಳಂತು ಭಯದಿಂದ ಅವಡುಗಚ್ಚುವಂತೆ ಮಾಡುತ್ತವೆ. ಕಥೆ ಹೇಳುವಲ್ಲಿ ಮತ್ತಷ್ಟು ಪರಿಣಿತಿ ಸಾಧಿಸಿದ್ರೆ ಕನ್ನಡಕೊಬ್ಬ ಒಳ್ಳೆ ನಿರ್ದೇಶಕನಾಗಲಿದ್ದಾರೆ ಲೋಹಿತ್ . ಅಂತರ ಪಿಶಾಚಿಯಾಗಿ ಅಲೆಯುವ ಕುಮಾರಿಯ ಬಗೆಗೂ ಅನುಕಂಪ ಮೂಡಿಸಿದ ಮೇಲೆ ಅಲ್ಲಿಗೇ ನಿಲ್ಲಿಸಿದ್ದರೆ ಸಮಾಧಾನವಿರುತ್ತಿತ್ತೇನೋ . ಮತ್ತೆ ಮೈಗೇರಿಸಿದ್ದು ನೋಡಿದರೆ ಪಾರ್ಟ್ -೨ ತರುವ ಯೋಚನೆ ಕಾಣಿಸುತ್ತದೆ. ಅಥವಾ ಎಂಜಾಯ್ ದಿ ಫಿಯರ್ ಅಂತಾನೂ ಇರಬಹುದು.  ಮೊದಲ ಪ್ರಯತ್ನ ನಿಜಕ್ಕೂ ಚೆನ್ನವಿದೆ.

ಕಲಾವಿದರ ಕರಾಮತ್ತು !!

pri1

ಪ್ರಿಯಾಂಕಾ ಉಪೇಂದ್ರ

ಚೆಲುವಷ್ಟೇ  ಅಷ್ಟೇ ಅಲ್ಲ ಬುದ್ಧಿಮತ್ತೆ ಇರುವ ಪ್ರತಿಭಾವಂತ ನಟಿ. ಚಿತ್ರ ನಿರ್ಮಿಸುವ ಬಹುತೇಕ ಎಲ್ಲ ಹಂತಗಳನ್ನು ಬಲ್ಲ ಅನುಭವಿ. ಹೊಸದನ್ನು ಕಲಿಯುವ , ತೆರೆದುಕೊಳ್ಳುವ ಮನಸುಳ್ಳ ನಟಿ. ಇಲ್ಲಿ ಬಂದು ಕನ್ನಡ ಕಲಿತು ಎಲ್ಲರಲ್ಲಿ ಒಂದಾಗಿ ಬೆರೆತಿದ್ದೆ ಅದಕ್ಕೆ ಸಾಕ್ಷಿ. ‘ಮಮ್ಮಿ ಸೇವ್ ಮಿ’ ಚಿತ್ರದಲ್ಲೂ ಅವರ ಇಂಥಾ ಗುಣವೇ ಕಾಣುತ್ತದೆ. ಪ್ರೀತಿಸಿ ಮದುವೆಯಾದ ಗಂಡನನ್ನು ಕಳೆದುಕೊಂಡು ಹೊಟ್ಟೆಯಲ್ಲೊಂದು ಜೀವ ಹೊತ್ತು, ಕಣ್ಣೆದುರಿನಲ್ಲೇ ಇರುವ ಮತ್ತೊಂದು ಕೂಸನ್ನು ಕಾಪಾಡಿಕೊಳ್ಳಲು ಪರದಾಡುವ ಪಾತ್ರದಲ್ಲಿ ಸಹಜ ಅಭಿನಯದಿಂದ ಇಷ್ಟವಾಗುತ್ತಾರೆ. ಕೆಟ್ಟ ಕನಸು ಬಿದ್ದಾಗ ಪ್ರಿಯಾಂಕಾ ಅಭಿನಯ ನೋಡುತ್ತಿದ್ದರೆ ನಮಗೇ ಅಂಥಾ ಕೆಟ್ಟಾತಿ ಕೆಟ್ಟ ಕನಸು ಬಿದ್ದಹಾಗೆ ಅನ್ನಿಸಿ ಭಯ ಆವರಿಸಿಕೊಳ್ಳುತ್ತದೆ. ಮಗು ತಪ್ಪು ಮಾಡಿದೆ ಅನ್ನಿಸಿದಾಗ ಹೊಡೆಯಲಿಕ್ಕೂ ಸಂಕಟ ಪಡುವ, ಸಂತೈಸುವ ದೃಶ್ಯಗಳಲ್ಲಿ ಸ್ವಂತ ತಾಯಿಯಂತೆ ಕಂಡುಬಿಟ್ಟಿದ್ದಾರೆ. ತನ್ನ ಮಗುವಿಗಾಗಿ ಕುಮಾರಿ ಆತ್ಮದ ಬಳಿ ಕೇಳುವಾಗಿನ ಸನ್ನಿವೇಶದಲ್ಲಿ ಪ್ರಿಯಾಂಕಾ ಮನಕಲಕುತ್ತಾರೆ . ಒಟ್ಟಿನಲ್ಲಿ ಮಮ್ಮಿ ಸೇವ್ ಮಿ ಯಲ್ಲಿ ಪ್ರಿಯಾಂಕಾ ಅಭಿನಯ ಮನೋಜ್ಞವಾಗಿದೆ. 

yuvina

ಮುದ್ದು ಮರಿ ಯುವಿನ ಅಭಿನಯ ಮುದ್ದುಮಾಡುವಷ್ಟು ಇಷ್ಟವಾಗುತ್ತದೆ.

ವತ್ಸಲಾ ಮೋಹನ್

vatsala-mohan

ರಂಗಭೂಮಿ, ಕಿರುತೆರೆ, ಬೆಳ್ಳಿತೆರೆಯಲ್ಲಿ ಹಲವು ವರ್ಷಗಳಿಂದ ಅಭಿನಯಿಸಿದ ಕಲಾವಿದೆ . ಅವ್ರಿಗೂ ಇದು ಮೊದಲ ಹಾರರ್ ಸಿನಿಮಾ. ಪ್ರಿಯಾಂಕಾ ತಾಯಿಯ ಪಾತ್ರದಲ್ಲಿ ನಟಿಸಿರುವ ವತ್ಸಲಾ ನಮ್ಮನೆಯ ಅಮ್ಮನಷ್ಟೇ ಇಷ್ಟವಾಗುತ್ತಾರೆ. ದೆವ್ವದ ವಿಷಯ ಗೊತ್ತಾಗಿ ಮೊಮ್ಮಗಳನ್ನು ಹುಡುಕಲು ಮನೆಗೆ ಬಂದು ಕಾಟಕ್ಕೆ ಒಳಗಾಗುವ ದೃಶ್ಯದಲ್ಲಿ ಅದ್ಭುತವಾಗಿ ಅಭಿನಯಿಸಿದ್ದಾರೆ ವತ್ಸಲಾ ಮೋಹನ್ .

ಲವಲವಿಕೆಯಿಂದ ಓಡಾಡುವ, ಪಟಪಟನೆ ಮಾತನಾಡುವ , ಭಯದಿಂದ ನಡುಗುವ , ಅಕ್ಕನನ್ನು ಸಂತೈಸುವ ತಂಗಿಯ ಪಾತ್ರದಲ್ಲಿ ಐಶ್ವರ್ಯ ಶಿಂಧಗಿ ಇಷ್ಟವಾಗುತ್ತಾರೆ.

ಜಾನ್ ಪಾತ್ರದಾರಿ ಸಂದೀಪ್ 14 ಚಿತ್ರಗಳಲ್ಲಿ, ಅನೇಕ ಧಾರಾವಾಹಿಗಳಲ್ಲಿ ಅಭಿನಯಿಸಿರುವ ಅನುಭವಿ. ಮೊದಲ ದೃಶ್ಯದಲ್ಲೇ ಇದು ಪಳಗಿದ ಪ್ರತಿಭೆ ಅನ್ನಿಸುತ್ತಾರೆ.

ಫಾದರ್ ಪಾತ್ರದಲ್ಲಿ ಮಧುಸೂದನ್  ನಟನೆ ಎಲ್ಲರಿಗು ಇಷ್ಟವಾಗುವುದರಲ್ಲಿ ಎರಡು ಮಾತಿಲ್ಲ.

ಕ್ಯಾಮೆರಾ ಖದರ್ !!

venu-h-c

ವೇಣು ನಾದ ಕೇಳಿದಾಗ ಮನಸ್ಸಿಗೆ ಮುದವಾಗುವಂತೆ ವೇಣು ಅವರ ಸಿನಿಮಾಟೋಗ್ರಫಿ ಪ್ರಾರಂಭದಲ್ಲೇ ಆವರಿಸಿಕೊಳ್ಳುತ್ತದೆ.ಸಮುದ್ರದ ಅಲೆಗಳ ಮೇಲೆ ಟೈಟಲ್ ಕಾರ್ಡ್ ತೋರಿಸುವ ಫಸ್ಟ್ ಶಾಟ್ ಗೆ ಫಿದಾ !! ಕಾಲ ಸರಿಯುವುದನ್ನ ತೋರಿಸಲಿಕ್ಕೆ ಆಕಾಶ ,ಮೋಡಗಳ ಚಲನೆ ತೋರಿಸಿರುವುದು ಅದ್ಭುತ!! ಕುಮಾರಿ ಭೂತವನ್ನು ತೋರಿಸಿರುವ ರೀತಿ, ಕ್ಲೈಮಾಕ್ಸ್ ದೃಶ್ಯಗಳು ಇಂಟರ್ವೆಲ್ನಲ್ಲಿ ಸೂಸು ಮಾಡಿ ಬಂದಿದ್ದರೂ ಭಯದಿಂದ ಮತ್ತೆ ಓಡಿಸುತ್ತವೆ. ಹೆದರಿಕೆಯನ್ನೂ ಎಂಜಾಯಬಲ್ ಆಗಿಸಿದ್ದಾರೆ. ಇಡೀ ಸಿನಿಮಾ ಕಳೆಗಟ್ಟುವಲ್ಲಿ ವೇಣು ಕ್ಯಾಮೆರಾ ಚಾತುರ್ಯಕ್ಕೆ ಫುಲ್ ಮಾರ್ಕ್ಸ್ !!

ಅಜನೀಶ್ ಸಂಗೀತಕ್ಕೆ ಒಂದು ಸಲಾಂ !

ಪ್ರೀತಿ-ಪ್ರೇಮ,ವಿರಹ-ಕೋಪ-ದ್ವೇಷ -ಭಯ ಯಾವುದನ್ನೇ ಆಗಲಿ ತೀವ್ರವಾಗಿ ಅನುಭವಿಸಿದಾಗಲೇ ಅದರ ಸುಖ ಸಿಗೋದು ಅಲ್ವಾ ? ಅಲ್ಪ ಸ್ವಲ್ಪ ಲಾಜಿಕ್ ಪಕ್ಕಕ್ಕಿಟ್ಟು ಭಯದ ತೀವ್ರತೆ ಅನುಭವಿಸುವ ಎದೆಗಾರಿಕೆ ಇದ್ದವರು ನೋಡಬಹುದಾದ ಚಿತ್ರ “ಮಮ್ಮಿ ಸೇವ್ ಮಿ”. 

ಹ್ಯಾಪಿ ಗಡಗಡ !!ಢವ ಢವ !! 

 

ನಟರಾಜ ಸಪ್ಪೆ ಸರ್ವಿಸ್ !

“ನಟರಾಜ ಸರ್ವಿಸ್” ನಡಿಗೆಯಲ್ಲಿ ಗಟ್ಟಿತನ ಕಾಣದ ಪೊಳ್ಳು ಕಥೆ . ಸರಿಯಾಗಿ ಪಿಕ್ ಪ್ಯಾಕೆಟ್ ಮಾಡಲೂ ಬಾರದ ಕಳ್ಳನೊಬ್ಬ ದರೋಡೆ ಮಾಡಿ ಮತ್ತೆ ಜೈಲು ಸೇರಲು ಹೆಣಗಾಡುವ ಪಾತ್ರದಲ್ಲಿ ಶರಣ್  ಅಭಿನಯ ನೋಡಬಹುದಾದಷ್ಟು ಚೆನ್ನಾಗಿದೆ . ಚುರುಕು ಸಂಭಾಷಣೆ ಇದ್ದರೂ ಒಂದೇ ಒಂದು ಸಾಲು ಕಾಡುವುದಿಲ್ಲ.

ಇನ್ನು ನಾಯಕಿ ಸಹನಾ  ತನಗಂಟಿದ ಶಾಪದ ಬಗ್ಗೆ ಹೇಳುವಾಗಲಾಗಲಿ, ತನಗಾಗಿ ಮನೆಮಂದಿಯನ್ನೆಲ್ಲ ಎದುರು ಹಾಕಿಕೊಂಡ ಪ್ರೀತಿಸಿದ ಹುಡುಗನ ಜೇವಕ್ಕೆ ಸಂಚಕಾರವಾದಾಗ ತೋರಬೇಕಿದ್ದ ಭಾವುಕ ಅಭಿನಯದಲ್ಲಾಗಲಿ ಯಶಸ್ಸಿಯಾಗಿಲ್ಲ. ತನ್ನ ಪ್ರಾಣವನ್ನೂ ಲೆಕ್ಕಿಸದೆ ಪ್ರೀತಿಸಿದ ಹುಡುಗ ಸಾವು -ಬದುಕಿನ ನಡುವೆ ಹೋರಾಡುವಾಗ ಮತ್ತೊಬ್ಬನ ಮೇಲೆ (ಅವ ಎಷ್ಟೇ ಒಳ್ಳೆಯವನಾಗಿದ್ದರು ) ಪ್ರೀತಿ ಬರುವುದು ಹೇಗೆ ಸಾಧ್ಯ ? ಗಟ್ಟಿತನದ ಕೊರತೆ ರಾಚುತ್ತದೆ.

ಸಹನಾ ಪ್ರೀತಿಸಿದ ಹುಡುಗ ಸಂಜು ಅಭಿನಯ ಕೂಡ ಅಷ್ಟಕಷ್ಟೆ. ಆತನ ತಂದೆಯ ಪಾತ್ರದಾರಿಯ ಅಭಿನಯವೇ ಇವ್ರೆಲ್ಲರಿಗಿಂತ ವಾಸಿ ಅನ್ನಬಹುದು. ಜ್ಯೋತಿಷಿ ಪಾತ್ರದಲ್ಲಿ ನಾಗರಾಜ ಮೂರ್ತಿ ಅಭಿನಯ ಚೆನ್ನಾಗಿದೆ. ದರ್ಗಾ ದಲ್ಲಿ ನಿಂಬೆ ಹಣ್ಣು ಮಂತ್ರಿಸಿಕೊಡುವ ರವಿಶಂಕರ್ ಕೂಡ ಇಷ್ಟವಾಗುತ್ತಾರೆ.

ಸರಿಯಾಗಿ ಸಣ್ಣ ಚಮಚ ಕದಿಯಲು ಬಾರದ ಪುಕ್ಕಲು ಕಳ್ಳ ನಟರಾಜನನ್ನ  ಬಲಿಪಶುವಾಗದಂತೆ ತಡೆಯುವ ಇನ್ಸ್ಪೆಕ್ಟರ್ ಪಾತ್ರದ ರಾಕ್ಲೈನ್ ಸ್ವಲ್ಪ ಮಟ್ಟಿಗೆ ಸಹನೀಯ .

ದೇವರ ಮೇಲೆ ನಂಬಿಕೆ ಇರದ ನಾಯಕಿಗೆ ಕೊನೆಗೆ ನಂಬಿಕೆ ಹುಟ್ಟುವ ಸನ್ನಿವೇಶಗಳು “ಲತ್ತೆ” .

ಮಾಡಲೇನು ಕೆಲಸವಿಲ್ಲದಿದ್ದಾಗ ಸುಮ್ಮನೆ ಟೈಮ್ ಪಾಸ್ ಮಾಡಲಿಕ್ಕೆ ಬೇರೇನೂ ಕಾಣದಾದಾಗ ನೋಡಬಹುದಾದ ಸಿನಿಮಾ ನಟರಾಜ ಸರ್ವಿಸ್ .

ಹೋಗಿದ್ದಕ್ಕೆ ಸ್ವಲ್ಪ ಸಮಾಧಾನ ಎನಿಸುವುದು ಶರಣ್ ಚುರುಕಾದ ಅಭಿನಯ ಮಾತ್ರ.

-ವಿಭಾ

 

ರಾಮಾ ರಾಮಾ ರೇ …ಸೋಲಿಸಬ್ಯಾಡ ಗೆಲಿಸಯ್ಯಾ

ಕೆಲವು ಚಿತ್ರಗಳೇ ಹಾಗೆ ಮಾತು ಸಾಕು ಮಥಿಸು ಅಂದುಬಿಡುತ್ತವೆ. ರಾಮಾ ರಾಮಾ ರೇ ಕೂಡ ಅಂಥದ್ದೇ . ಸಿನಿಮಾ ನೋಡಿ ಎರಡು ದಿನವಾದ್ರು ಸನ್ನಿವೇಶಗಳು, ಪಾತ್ರಗಳು ಕಾಡುತ್ತಲೇ ಇವೆ. ನಾನಿಲ್ಲಿ ಇಡೀ ಚಿತ್ರದ ಚಿತ್ರವನ್ನು ಯಥಾವತ್ತಾಗಿ ಹೇಳುವುದಿಲ್ಲ. ನೀವು ನೋಡಿ ಅನುಭವಿಸಿದಾಗ್ಲೇ
ಅದರ ನಿಜವಾದ ದರ್ಶನ ನಿಮಗಾಗುವುದು.

ಒಂದು ಸಣ್ಣ ಹೊಡೆದಾಟ , ಬಡಿದಾಟದ ಸುದ್ದಿ ಸಿಕ್ಕರೂ ಬಗೆಬಗೆಯಲ್ಲಿ ಬಿತ್ತರಿಸುವ ಮಾಧ್ಯಮಗಳು ಅದ್ರಲ್ಲೂ ಸುದ್ದಿ ವಾಹಿನಿಗಳು ಗಲ್ಲು ಶಿಕ್ಷೆಗೆ ಗುರಿಯಾದ ಖೈದಿಯೊಬ್ಬ ಜೈಲಿನಿಂದ ಪರಾರಿಯಾದ ಸುದ್ದಿ ಸಿಕ್ಕ್ರೆ ಬಿಟ್ಟಾರೆಯೇ. ಯಾರ್ಯಾರ್ ಬಾಯಿಗೆ ಎಲ್ಲೆಲ್ಲಿ ಮೈಕ್ ಹಿಡೀತಾರೆ ಅನ್ನುವುದನ್ನ ತೆರೆ ಮೇಲೆ ಮಾಧ್ಯಮ ಮಿತ್ರರೇ ನೋಡಿದ್ರೂ ತಮ್ಮ ಕೆಲ್ಸಕ್ಕೆ ತಾವೇ ನಕ್ಕು ಬಿಡುವಂತೆ ದೃಶ್ಯ, ಹಾಡು(ನ್ಯೂಸ್ ನೋಡಿ..ನ್ಯೂಸ್ ನೋಡಿ..) ಕಟ್ಟಿರುವ ನಿರ್ದೇಶಕನ ಜಾಣ್ಮೆ ಮೆಚ್ಚಲೇ ಬೇಕು.

ಗಲ್ಲು ಶಿಕ್ಷೆಗೆ ಗುರಿಯಾದ ಸ್ಯಾಂಡಲ್ ರಾಜ ಜೀವದಾಸೆಯಿಂದ ಜೈಲಿನಿಂದ ಹಾರಿ ತಲೆಮರೆಸಿಕೊಳ್ಳಲು ತಿಣುಕಾಡುತ್ತಾನೆ. ಗೊತ್ತು ಗುರಿಯಿಲ್ಲದ ಪಯಣದಲ್ಲಿ ಟ್ರಕ್ ನಿಂದ ಜೀಪಿಗೆ ಸೇರುವ ತನಕ ಬಸ್ಸಿನಲ್ಲಿ ಕೂತಾಗ ಸರಿದು ಹೋಗುವ ದೃಶ್ಯಗಳಂತೆ ಸರಸರನೆ ಚಿತ್ರ ಸರಿದು ಹೋಗುತ್ತದೆ. ಅಲ್ಲಲ್ಲಿ ನಗ್ತಾ , ಇದೇನಿದು ಇವ್ನ್ ಕಥೆ ಅಂತ ಅವನ ಪಯಣದಲ್ಲಿ ನಾವೂ ಜೊತೆಯಾಗ್ತಾ ಅರ್ಧ ಸಿನಿಮಾ ನೋಡೇಬಿಟ್ಟಿರ್ತೀವಿ.

ಮಧ್ಯಂತರ ಮುಗಿದ ಮೇಲೆ ಪ್ರತೀ ಸಣ್ಣ ಸಣ್ಣ ದೃಶ್ಯಗಳು ನಮ್ಮನ್ನು ಕಲವುದಿಕ್ಕೆ ಶುರುವಿಟ್ಟು ಕೊಳ್ಳುತ್ತವೆ. ಚಿತ್ರ ಕಳೆಗಟ್ಟುತ್ತಾ ಕ್ಷಣಕ್ಷಣಕ್ಕೂ ಆವರಿಸಿಕೊಳ್ಳುತ್ತಾ ಹೋಗುತ್ತದೆ. ಎಲ್ಲಿಗೇ ಪಯಣ ಯಾವುದೋ ದಾರಿ ಅನ್ನುವಂತೆ ಅಲೆಯುವ ಕೈದಿಗೆ ಯಾರನ್ನೂ ನಂಬಲಾಗದ ಸ್ಥಿತಿ, ತಪ್ಪಿಸಿಕೊಂಡ ಸುದ್ದಿ ಹರಡಿ, ತನ್ನ ತಲೆಗೆ ಹತ್ತು ಲಕ್ಷ ಕಟ್ಟಿರುವಾಗ ಕಂಡವರು ಬಿಟ್ಟಾರೆಯೇ ಅನ್ನುವ ಮಡುಗಟ್ಟಿದ ಆತಂಕ, ಅನುಮಾನಗಳನ್ನ ಅಭಿವ್ಯಕ್ತಿಸುವ ಕಲೆಯಲ್ಲಿ ನಟರಾಜ್ ಅವರ ಅಭಿನಯಕ್ಕೆ ನೀವು ಮಣಿಯದೆ ವಿಧಿಯಿಲ್ಲ.

ಗಲ್ಲು ಶಿಕ್ಷೆಯ ನಿರ್ವಾಹಕ ರಾಮಣ್ಣನಿಗೆ ತನ್ನ ಜೀಪಿನಲ್ಲಿ ಪಕ್ಕದಲ್ಲಿ ಕುಳಿತಿರುವಾತ ಜೈಲಿನಿಂದ ಹಾರಿ ಬಂದ ಹಕ್ಕಿ ಅನ್ನುವುದು ತಿಳಿದಾಗ ಅದನ್ನು ಸೂಕ್ಷ್ಮವಾಗಿ ನಿಭಾಯಿಸುವ ರೀತಿ , ಸಣ್ಣ ಸಣ್ಣ ಹಾವಭಾವಗಳು ಈತ ನಿರ್ದೇಶಕನ ನಟ ಅನ್ನಿಸಿಡುತ್ತದೆ. ಪಾತ್ರ ಕಟ್ಟುವ ಸತ್ಯ ಪ್ರಕಾಶ್ ಸೂಕ್ಷ್ಮತೆ ಇಲ್ಲಿ ಎದ್ದು ಕಾಣುತ್ತದೆ.

ಪ್ರೀತಿಸಿದ ಹುಡುಗಿ ಸುಬ್ಬಿಯೊಂದಿಗೆ ಎಲ್ಲರನ್ನು ಎದುರು ಹಾಕಿಕೊಂಡು ಊರಿನಿಂದ ಓಡಿ ಬಂದು ಭಂಡತನದಿಂದ ರಾಮಣ್ಣನ ಜೀಪಿನಲ್ಲಿ ತೂರಿಕೊಳ್ಳುವ ಧರ್ಮನ ಉಡಾಫೆ, ಸ್ವಾರ್ಥದ ಪಾತ್ರದಲ್ಲಿ ಧರ್ಮ ಕಡೂರರ ಸಹಜ ಅಭಿನಯ ಇಷ್ಟವಾಗುತ್ತದೆ. ಅಪ್ಪನ ಹಣ ಕದ್ದು ನಿಯತ್ತಾಗಿ ಪತ್ರ ಬರೆದಿಟ್ಟು ,ಹರೆಯದ ಹುಮ್ಮಸ್ಸಿನಲ್ಲಿ ಪ್ರೀತಿಗೆ ಬೀಳುವ ಅಭಿನಯದಲ್ಲಿ ಬಿಂಬಶ್ರೀಯೂ ಇಷ್ಟವಾಗುತ್ತಾರೆ.

ಓಡಿ ಹೋದ ಜೋಡಿಯನ್ನ ಹಿಡಿಯಲು ಬೈಕಿನಲ್ಲಿ ಬಂದು ಬಾಟಲಿ ಕಂಡಾಕ್ಷಣ ಬಾಯ್ ಬಾಯ್ ಬಿಡುವ ನಟನೆಯಲ್ಲಿ ಮಠ ಮನಸ್ಸಿಗೆ ಇಳಿಯುತ್ತಾರೆ. ಪಾತ್ರ ಚಿಕ್ಕದಾದ್ರು ಚೊಕ್ಕತನವಿದೆ.

ಇಡೀ ಕಥೆ, ಸಿನಿಮಾ ಹರಳುಗಟ್ಟುವ ಹಂತವೆಂದರೆ ದಾರಿಯಲ್ಲಿ ಆಟೋ ಕೆಟ್ಟು ಹೆರಿಗೆ ನೋವಿನಿಂದ ನರಳುತ್ತಿರುವ ತನ್ನ ಕೂಸಿನ ಜೀವ ಉಳಿಸಿ.. ಎಂದು ಅಂಗಾಲಾಚಿ ಬರುವ ಸೈನಿಕನ ಅತ್ತೆಯ ಪ್ರವೇಶ. ಅಷ್ಟೊತ್ತಿಗಾಗಲೇ ರಾಮಣ್ಣ ಹಾಗು ಕೈದಿ ಒಬ್ಬರನ್ನೊಬ್ಬರು ಬಡಿದುಕೊಂಡು ಹೈರಾಣಾಗಿದ್ದವರು ಈ ತಾಯಿಯ ಗೋಗರೆತಕ್ಕೆ ಕರಗಿ ಕೈಕೈ ಸೇರಿಸಿ ಗರ್ಭಿಣಿಯನ್ನ ಹೊತ್ತು ತಂದು ಜೀಪಿನಲ್ಲಿ ಕೂರಿಸುತ್ತಾರೆ. ಹೆರಿಗೆಯೂ ಜೀಪಿನಲ್ಲೇ ಜರುಗುತ್ತದೆ. ಒಂದು ಹುಟ್ಟು ಮತ್ತೊಂದರ ನಾಶಕ್ಕೆ ನಾಂದಿ ಹಾಡುವಂತೆ ಕಾಠಿಣ್ಯ, ಕ್ರೌರ್ಯ ವ ಕರಗಿಸಿ ಮನುಷ್ಯತ್ವದ ಸೆಲೆ ಉಕ್ಕುವುದು ಇಲ್ಲೇ.

ಜೀವ ಉಳಿಸಿದ ಜೀವಗಳಿಗೆ ಕೈತುತ್ತು ಇಟ್ಟು ಮನಕಲಕುವ ಮಾತನಾಡುವ ಸೈನಿಕನ ತಾಯಿಯ ತಾಯ್ತನ ಮುನಿದ ಮನಸುಗಳನ್ನು ಬೆಸೆಯುತ್ತದೆ. ಮಗುವನ್ನು ವರ್ಣಿಸುವಾಗ ”ಕೋಪವಿಲ್ಲ , ದ್ವೇಷವಿಲ್ಲ ಗಾಂಧೀ ತಾತನ ಹಾಗಿದ್ದಾನೆ” ಅಂದುಬಿಡುತ್ತಾಳಲ್ಲ ಅಜ್ಜಿ ಅದು ಒಂದು ಕ್ಷಣ ಅವಾಕ್ಕಾಗಿಸುತ್ತದೆ. ಎರಡೇ ಪದಗಳಲ್ಲಿ ಗಾಂಧಿಯವರನ್ನ ತೋರಿದ ಸಂಭಾಷಣಾಕಾರನಿಗೆ ಶಬ್ಬಾಸ್ !!

ಅಜ್ಜಿ ಅಡುಗೆ ಮಾಡುತ್ತಾ , ತುತ್ತಿಡುತ್ತಾ ” ಈ ಮುನುಷ್ಯ ಭೂಮಿಯಿಂದ ಆಚೆ ಹೋಗೋದನ್ನ ಕಲಿತರೂ ಜಾತಿಯಿಂದ ಆಚೆ ಹೋಗೋದನ್ನ ಕಲೀಲಿಲ್ಲ ” ಅನ್ನುವುದು ಎಂಥಾ ಮಾತಲ್ಲವಾ !? ಮನುಷ್ಯತ್ವ ಮರೆತು ಜಾತಿಯ ಹೆಸರಲ್ಲಿ ಕಚ್ಚಾಡುವವರೆಲ್ಲ ಮುಟ್ಟಿ ನೋಡಿಕೊಳ್ಳಬೇಕು.

ನೇಣು ಬಿಗಿವವ , ಕುತ್ತಿಗೆ ಒಡ್ಡುವವ ಇಬ್ಬರೂ ಜೊತೆಯಾಗಿ ನೇಣಿಗೆ ಬಳಸುವ ಹಗ್ಗವನ್ನು ಕಂದನನ್ನ ತೂಗುವ ಜೋಲಿಗೆ ಕಟ್ಟುವಾಗ ಬರುವ ” ಬದುಕೇ ಬದುಕ ಕಲಿಸು ” ಹಾಡು ಸಮಂಜಸವಾಗಿದೆ. ಆಪ್ತವಾಗಿದೆ. ಇದು ಕಲ್ಲು ಕರಗುವ ಸಮಯ!!

ಮುಂದುವರೆದ ಕೈದಿ ಮತ್ತು ರಾಮಣ್ಣನ ಪಯಣದಲ್ಲಿ ಮತ್ತೆ ಮುಖಾಮುಖಿಯಾಗುವ ಟ್ರೆಕ್ ಡ್ರೈವರ್ “ಪಾಪ ಮಾಡೋದ್ರಲ್ಲೂ ಪುಣ್ಯವಿದೆ ” ಅಂದು ಹೊಟ್ಟೆಪಾಡಿಗಾಗಿ ವೇಷಧರಿಸುವ ಹಾಡುಗಾರರ ಪುಟ್ಟ ತಂಡವನ್ನು ಜೀಪಿಗೆ ಹತ್ತಿಸುತ್ತಾನೆ. ಅವರು ಹಾಡುವ ಭಗವತ್ಗೀತೆಯ ಕೃಷ್ಣ ಅರ್ಜುನ ಸಂಭಾಷಣೆಯಂಥಾ ಸಾಲುಗಳು “ಕೇಳು ಕೃಷ್ಣ .. (ಪಕ್ಕ ಹಳ್ಳಿಗರ ಶೈಲಿಯ ) ಇವರಿಬ್ಬರ ಮನಸ್ಸಿನ ತಳಮಳ, ತೊಯ್ದಾಟ, ಪ್ರಶ್ನೆ, ಉತ್ತರಗಳಿಗೆ ಕನ್ನಡಿಯಂತಿವೆ.

ಇಲ್ಲಿ ಬಹುತೇಕ ಎಲ್ಲವೂ ಆಕಸ್ಮಿಕಗಳ ಸರಣಿ . ಸಮಯ,ಸನ್ನಿವೇಶ , ಸಂದರ್ಭ ನಮ್ಮನ್ನ ಹೇಗೆಲ್ಲ ಆಡಿಸುತ್ತವೆ, ಅಲುಗಾಡಿಸುತ್ತವೆ ,ಅರಳಿಸುತ್ತವೆ ಅನ್ನುವುದನ್ನ ನೋಡಬೇಕು ನೀವಿಲ್ಲಿ.
ಕನ್ನಡದಲ್ಲಿ ವಿಭಿನ್ನ ಪ್ರಯತ್ನ ರಾಮಾ ರಾಮಾ ರೇ .. ರಸ್ತೆಯಲ್ಲೇ ಬಹುಪಾಲು ಚಿತ್ರ ರೂಪಿಸಿದ ಸೂತ್ರದಾರ ಸತ್ಯಪ್ರಕಾಶ ಸಾಹಸ ಪ್ರಶಂಸೆಗೆ ಅರ್ಹ. ಸಂಗೀತ,ಹಾಡುಗಳಿಗೆ ಸತ್ಯಪ್ರಕಾಶ್ ವಾಸುಕಿ ವೈಭವ್ ,ಅನನ್ಯ ಭಟ್ ಎಲ್ಲರೂ ಪ್ರೀತಿಗೆ ಪಾತ್ರರು.

ಹಾಗಾದ್ರೆ ಈ ಸಿನಿಮಾದಲ್ಲಿ ದೋಷಗಳೇ ಇಲ್ಲವೇ ಪರ್ಫೆಕ್ಟ್ ಚಿತ್ರವೇ ಅಂದ್ರೆ ಖಂಡಿತಾ ಇದೆ. ಆದ್ರೆ ಎಣಿಸುವ ಕಾಲವಿದಲ್ಲ. ಹಣ ತೆತ್ತು ಬರುವ ಪ್ರೇಕ್ಷಕ ಮಹಾಪ್ರಭುವಿಗೆ ರಂಜನೆ ,ಬೋಧನೆ ಎರಡನ್ನೂ ಕೊಟ್ಟು ಇಗೋ ನಮ್ಮ ಶ್ರಮ ಬಸಿದಿದ್ದೇವೆ ಒಪ್ಪಿಸಿಕೊಳ್ಳಿ ಅನ್ನುವ ಶ್ರದ್ಧೆ, ಶ್ರಮ, ಪ್ರತಿಭೆಯ ಮುಂದೆ ಉಳಿದೆಲ್ಲವೂ ಪಕ್ಕಕ್ಕೆ ಸರಿಯುತ್ತವೆ.

ರಾಮಾ ರಾಮಾ ರೇ.. ನೀವು ನೋಡಿ ,ಗೆಲ್ಲಿಸಲೇಬೇಕಾದ ಚಿತ್ರ. ನೋಡ್ತಿರಲ್ಲ .

ನಾಗರಹಾವು ಬಿಗಿನಿಂಗ್ ಬುಸ್ಸ್ .. ಎಂಡಿಂಗ್ ?

ವಿಷ್ಣುವರ್ಧನ್ ಅಭಿಮಾನಿಗಳು ಮತ್ತೆ ಸಾಹಸಸಿಂಹನನ್ನು ತೆರೆಯ ಮೇಲೆ  ಕಂಡು ಕಣ್ತುಂಬಿಕೊಳ್ಳುವ ಆಸೆಯಿಂದ  ಹೋದ್ರೆ ಅವ್ರಿಗೆ ಸಿಕ್ಕಿದ್ದೇನು?

ನಾಗರಹಾವು ಚಿತ್ರದ ಪ್ರಾರಂಭದಲ್ಲಿ” ನಾಗರಹಾವು “ಹಾಡಿಗೆ ಹೆಜ್ಜೆ ಹಾಕುವ ದರ್ಶನ್ ಆಮೇಲೆ ಏನಾದ್ರೂ ಅನ್ನುವುದು ಯಾರಿಗಾದ್ರೂ ಗೊತ್ತಾಗಿದ್ರೆ ಅದು ಅವರ ಪುಣ್ಯ ಅಂತಷ್ಟೇ ಹೇಳ್ಬಹುದು. ಇದು ಅಮಾಯಕ ಪ್ರೇಕ್ಷಕರನ್ನು ಯಾಮಾರಿಸುವ ಮೊದಲ ಗಿಮಿಕ್ .

ಕಥೆಯ ವಿಚಾರಕ್ಕೆ ಬಂದ್ರೆ ಇದು ಓಬಿರಾಯನ ಕಾಲದ್ದೇ. ನಮ್ಮ ವಾಹಿನಿಗಳಲ್ಲಿ ಬರುವ ನಾಗಿಣಿ ತರಹದ  ಧಾರಾವಾಹಿಗಳೇ ವಾಸಿ ಅನ್ನಬಹುದೇನೋ . ಒಂದಿಷ್ಟಾದ್ರು ಕುತೂಹಲ ಹುಟ್ಟಿಸದ ಕಥಾಹಂದರ. ಜನರ ನಂಬಿಕೆಯನ್ನು ಬಳಸಿ ಮತ್ತಷ್ಟು ಮೌಢ್ಯಕ್ಕೆ ತಳ್ಳುವ ಚಿತ್ರ.

ಟ್ರಾಯ್ , ೩೦೦ ನಂಥ ಹಾಲಿವುಡ್ ಸಿನಿಮಾ ನೋಡಿದವರಿಗೆ ಇವ್ರ್ ಕಾಪಿ ಕಲೆ ಬಹಳ ಚೆನ್ನಾಗಿ ಅರ್ಥವಾಗಿಬಿಡತ್ತೆ. ಈ ತಂಡ ಕೊಟ್ಟ ಹೈಪ್ ಗೆ ಹೋಲಿಸಿದ್ರೆ ಅದ್ರ ಕಾಲು ಭಾಗಕ್ಕೂ ನಿಲುಕುವುದಿಲ್ಲ.

ಇಲ್ಲಿ ಕೊಟ್ಟ ದುಡ್ಡಿಗೆ ಮೋಸವಿಲ್ಲ ಅನ್ನಿಸುವುದು ರಮ್ಯಾ ಅಭಿನಯ. ಮೋಹಕ ತಾರೆ ಹೆಸರಿಗೆ ತಕ್ಕಂತೆ ಸಮ್ಮೋಹಗೊಳಿಸಿಬಿಡುತ್ತಾರೆ. ಇಂಥಾ ಪ್ರತಿಭೆ ಇರುವಾಗ ನಾಯಕರಿಗೆ ಕೊಡುವಷ್ಟೇ ಸಂಭಾವನೆ ನಂಗೂ ಕೊಡಿ ಅಂಥಾ ಕೇಳೋದ್ರಲ್ಲಿ ತಪ್ಪೇನು ಇಲ್ಲ ಬಿಡಿ. ಬಹುಶಃ ಕಳೆದ ಬಾರಿ ಚುನಾವಣೆಯ ಸಮಯದಲ್ಲೇನಾದ್ರು ಈ ಚಿತ್ರದ ಜನಪರವಾದ ರಮ್ಯಾ ಡೈಲಾಗ್ಗಳನ್ನ ಮಂಡ್ಯದ  ಅಭಿಮಾನಿಗಳು ಕೇಳಿದ್ರೆ  ಗೆಲ್ಲಿಸೇ  ಬಿಡ್ತಿದ್ರೋ  ಏನೋ . ಒಂದೇ ಒಂದು ಸಿನಿಮಾದಲ್ಲೂ ಜನರ ಪರವಾಗಿ ಹೋರಾಟ ಮಾಡುವ ಪಾತ್ರ ಮಾಡಿರದಿದ್ದ ರಮ್ಯಾರನ್ನ ಮೊದಲ ಬಾರಿಗೇ ಸಂಸತ್ತಿಗೆ ಕಳುಹಿಸಿದ ಮಂಡ್ಯದ ಮುಗ್ಧ ಜನ ಇಂಥಾ ಪಾತ್ರಕ್ಕೆ ಮೆಚ್ಚಿ ಮನ್ನಣೆ ಕೊಟ್ಟಿದ್ದರೂ ಆಶ್ಚರ್ಯವಿಲ್ಲ.

ದಿಗಂತ್  ನಟನೆಗೆ ರೈಟ್ ಮಾರ್ಕ್ ಕೊಡಬಹುದು. ಪೋಷಕರ ನಟನೆಯೂ ಓಕೆ .  ಇಂಟರ್ನ್ಯಾಷನಲ್ ಕಾಂಪಿಟೇಷನ್ ನಲ್ಲಿ ಹಾಡುವ ಹಾಡು ಮತ್ತದರ  ಸಂಗೀತವಂತೂ ಸಪ್ಪೆ ಸಪ್ಪೆ .

ಪೋಸ್ಟರ್ ,ಬ್ಯಾನರ್ಗಳಲ್ಲಿ ಆ ಪಾಟಿ ವಿಷ್ಣು ದಾದಾರನ್ನ ತೋರಿಸಿದ್ದಾರಲ್ಲ ಅದನ್ನ ನಂಬಿಕೊಂಡು  ಅವರೇ ಪ್ರಮುಖ ಪಾತ್ರದಲ್ಲಿ ಮಿಂಚಿದ್ದಾರೇನೋ ಅನ್ನೋ ಆಸೆಯಲ್ಲಿ ಹೋದವರಿಗೆ ನಿರಾಸೆ ಕಟ್ಟಿಟ್ಟ ಬುತ್ತಿ. ಈಗ ಬರಬಹುದು ಆಗ ಬರಬಹುದು ಅಂತ ಕಾಯುತ್ತಿದ್ದವರಿಗೆ ಕೊನೇ ಘಳಿಗೆಯವರೆಗೂ ಕಾಯಬೇಕಾದ  ಸ್ಥಿತಿ . ಸದ್ಯ ಬಂದ್ರಲ್ಲ ನಮ್ ಆರಾಧ್ಯ ದೈವ ಅಂತ ಅಭಿಮಾನಿಗಳು ಭಾವುಕರಾಗಿ ಕಣ್ತುಂಬಿಕೊಳ್ಳೋ ಹೊತ್ತಿಗೆ ಮಿಂಚಿ ಮರೆಯಾಗಿ ಹೋಗುತ್ತಾರೆ. ಜೊತೆಗೆ ಅದು ಗ್ರಾಫಿಕ್ಸ್ ಆಗಿರೋದ್ರಿಂದ ಮುಖಭಾವದಲ್ಲಿ ಆಪ್ತತೆ ಕಾಣುವುದಿಲ್ಲ. ವಿಷ್ಣುರ  ಮುದ್ದಾದ ಮುಖಭಾವ ಕಂಡವರಿಗೆ ಛೆ .. ಛೆ.. ಅನ್ನಿಸುವುದು ಖಂಡಿತ . ತಂತ್ರಜ್ಞಾನಕ್ಕೆ ಹೆಚ್ಚು ಹಣ ಬೇಕು ಅನ್ನುವುದು ನಿಜವಾದ್ರೂ  ಇನ್ನು ಎಫೆಕ್ಟಿವ್ ಆಗಿ ತರಬಹುದಿತ್ತೇನೋ ಅನ್ನಿಸದೇ ಇರದು.

ನಾಗರಹಾವು ಅಂದಾಕ್ಷಣ ನೆನಪಾಗುತಿದ್ದದ್ದು ವಿಷ್ಣು ಅಭಿನಯದ ಮರೆಯಲಾಗದ ಸಿನಿಮಾ . ಬಾಲಿವುಡ್ ಘಟಾನುಘಟಿಗಳು ನೋಡಿ ಮೆಚ್ಚಿ  ಶಹಬ್ಬಾಶ್ ಗಿರಿ ಕೊಟ್ಟ ಅದ್ಭುತ ಚಿತ್ರ. ಚಾಮಯ್ಯ ಮೇಷ್ಟ್ರು, ಜಲೀಲ ಮನದಲ್ಲಿ ಇವತ್ತಿಗೂ ಕಾಡುವ ಪಾತ್ರಗಳು. ಹಾಡುಗಳು ಓಹ್ !! ಬಾರೇ  .. ಬಾರೇ.. ಚೆಂದದ ಚೆಲುವಿನ ತಾರೆ ಎಷ್ಟು ಕೇಳಿದ್ರೂ ಮತ್ತೆ ಮತ್ತೆ ಆವಾಹಿಸಿಕೊಳ್ಳುವುದು ನಿಜವಲ್ಲವೇ . ಈ  ನಾಗರಹಾವು ಚಿತ್ರದಲ್ಲಿ ಕಾಡುವಂಥದ್ದು ಕಣ್ಣಿಗೇನು ಬೀಳಲಿಲ್ಲ.  ಮುಂದಿನ ಪೀಳಿಗೆಯವರು ನಾಗರಹಾವು ಸಿನಿಮಾ ಅಂದಾಕ್ಷಣ ಹೊಸ ಸಿನಿಮಾವನ್ನೇ ನೆನಪಿಟ್ಟುಕೊಂಡ್ರೆ ಅದು ಕನ್ನಡ ಚಿತ್ರರಂಗದ ದುರದೃಷ್ಟವೇ ಸರಿ.

ಜನರ ಭಾವನೆಗಳನ್ನು ಬಳಸಿಕೊಳ್ಳುವುದು  ಅಂದ್ರೆ ಇದೇ ಅನಿಸುತ್ತದೆ. ವಿಷ್ಣುವರ್ಧನ್ರನ್ನ ಮುಂದಿಟ್ಟುಕೊಂಡು ಹಳಸಿದ ಕಥೆಗೆ ಕಲರ್ ಕಟ್ಟಿ ಹಣ ಗಳಿಸುವ  ಹುನ್ನಾರವಿದಷ್ಟೆ . ಅಮಾಯಕರ ಭಾವನೆಗಳು ಬಲಿಪಶುಗಳಾಗಿವೆ.

ಹೀಗಿದೆ ನೋಡಿ “ಇದೊಳ್ಳೆ ರಾಮಾಯಣ”

 

ತಾನು ಗಂಡು ,ಯಜಮಾನ ತನ್ನ ಮಾತೇ ಅಂತಿಮ ಅನ್ನುವ ಹಾಗೆ ಮೆರೆದ ನಾಯಕನಿಗೆ ಕತ್ತಲ ಕೋಣೆಯಲ್ಲಿ ಹೆಸರೇ ಗೊತ್ತಿಲ್ಲದ ಹೆಣ್ಣಿನ ಜೊತೆಗೆ ಕಳೆದ ಘಳಿಗೆಗಳು ಮನಸ್ಸನ್ನೇ ತೆರೆಸಿಬಿಡುತ್ತವೆ.   ಪ್ರಕಾಶ್ ರೈರಂಥ ಪ್ರಖರ ಪ್ರತಿಭೆಯ ಎದುರಿಗೆ  ಪಕ್ಕಾ ಪ್ರೊಫೆಷನಲ್  ಲೈಂಗಿಕ ಕಾರ್ಯಕರ್ತೆಯಾಗಿ ನಟಿಸುವುದು ಕಷ್ಟ ಕಷ್ಟ . ಆದ್ರೆ ಪ್ರಿಯಾಮಣಿ  ಸೇರಿಗೆ  ಸವ್ವಾ ಸೇರು ಅನ್ನುವಂತೆ ಸಹಜ ಅಭಿನಯದಿಂದ ಗೆದ್ದಿದ್ದಾರೆ.

ಮೊದಮೊದಲು ಗಯ್ಯಾಳಿಯ ಹಾಗೆ  ಗಂಟೆಗಿಷ್ಟು ಗಂಟು ಇಟ್ಟು ಮಾತಾಡು ಅನ್ನುವ ಆಕೆ ಭುಜಂಗಯ್ಯನ ಭಯ, ಒಂದಿಷ್ಟು ಒಳ್ಳೆಯ ನಡವಳಿಕೆಗಳನ್ನ ಗಮನಿಸುತ್ತಾ ಹೋದಂತೆ ಮಮತಾಮಯಿಯೇ ಆಗಿಬಿಡುತ್ತಾಳೆ . ಹೆಂಡತಿ, ಮಗಳನ್ನು  ಕಂಡಾಗ ಅವಳು ಕೇಳುವ ಪ್ರಶ್ನೆಗಳು ,ಕೊಟ್ಟ  ಸಲಹೆಗಳು  ಭುಜಂಗಯ್ಯನ ಅಹಮಿಕೆಯನ್ನೇ ಅಲ್ಲಾಡಿಸುತ್ತವೆ. ತಾನೂ  ಕರಗಿ ಆತನನ್ನೂ ಕರಗಿಸಿ ಮೈಯ್ಯ  ಹಂಗಿಲ್ಲದೆ ಮನಸ್ಸನ್ನು ಅರಳಿಸಿ ಹೊರಡುತ್ತಾಳೆ .

ಮಾತಿನ ಮಧ್ಯೆ  ಬರುವ  ಸಂದ  ಹಿನ್ನೆಲೆ ಸಂಗೀತ ಮೌನದಲ್ಲೇ ಮನವನ್ನ ಮಥಿಸುತ್ತದೆ. ಸಂಗೀತ ನಿರ್ದೇಶಕ ಸೂಕ್ಷ್ಮಜ್ಞನಾಗಿದ್ದಾಗ ಮಾತ್ರ ಇದು ಸಾಧ್ಯ .

ಸಾಮರ್ಥ್ಯ ಇದ್ದರೂ ಹೀರೋಗಳ ಹಿಂದೆ ಅಲೆಯುವ ನಿರ್ದೇಶಕನ ಪಾತ್ರದಲ್ಲಿ ಅಚ್ಯುತ ಎಂದಿನಂತೆ ತಮ್ಮ ಅಚ್ಚೊತ್ತಿದ್ದಾರೆ . ರಂಗಾಯಣ ರಘು ಇದ್ದಲ್ಲಿ ನಗು ಇರಲೇಬೇಕಲ್ಲ .

ಆಟೋ ಶಿವನ ಮುಗ್ದತೆ ,ಹುಂಬತನ ,ಸ್ವಾಮಿನಿಷ್ಠೆ ಮನಸೆಳೆಯುತ್ತವೆ. ನಿರ್ದೇಶನದ ಜೊತೆಗೆ ನಟನೆಯ ಪಾಠವನ್ನೂ ಶಿವನಿಗೆ ಕಲಿಸಿದ್ದಾರೆ ರೈ .

ಇಂಥಾದ್ದೊಂದು ಕಥೆಯನ್ನ ಕನ್ನಡದ ಪ್ರೇಕ್ಷಕ ಮಹಾಶಯರಿಗೆ ಕೊಡಲಿಕ್ಕೆ ಸೂಕ್ಷ್ಮ ಸಂವೇದನೆಯ ನಟ ,ನಿರ್ದೇಶಕರಿಂದ ಮಾತ್ರ ಸಾಧ್ಯ . ಪ್ರಕಾಶ್ ರೈ ಸಾಧಿಸಿ ತೋರಿಸಿದ್ದಾರೆ . ಅವ್ರ ದೇಹಭಾಷೆ ,ಧ್ವನಿಯ ಏರಿಳಿತ ಮೆಚ್ಚದೆ ಬೇರೆ ದಾರಿ ಇಲ್ಲ.

ಪೋಸ್ಟರ್ಗಳಲ್ಲಿ ಪ್ರಕಾಶ್ ರೈ ಪ್ರಮುಖವಾಗಿ ಕಂಡರೂ ಕಥೆಯ ಆಳಕ್ಕೆ ಹೋದಂತೆಲ್ಲಾ ಕಾಣುವುದು ಹೆಣ್ಣಿನ ಹೆಗ್ಗಳಿಕೆಯೇ .  ಭುಜಂಗಯ್ಯನ ಅಹಮ್ಮಿನ ಅಟ್ಟದಿಂದ ಇಳಿಸಿ ಮನುಷ್ಯನನ್ನಾಗಿಸುವವರು ಮೂವರು ಹೆಣ್ಣು ಮಕ್ಕಳೆ .

ಕನ್ನಡಕ್ಕೊಂದು ಕುಟುಂಬವೆಲ್ಲಾ ಕುಳಿತು ನೋಡುವಂಥಾ ಸದಭಿರುಚಿಯ ಚಿತ್ರ ‘ಇದೊಳ್ಳೆ ರಾಮಾಯಣ ” ಸಿಕ್ಕಿರುವುದು ಸುಳ್ಳಲ್ಲ .

 

ಜಾಗ್ವಾರ್ ಝಲಕ್

ಕನ್ನಡದ ಬಹುಕೋಟಿ ಬಜೆಟ್ ನ ಅದ್ದೂರಿ ಸಿನಿಮಾ ಜಾಗ್ವಾರ್ ತೆರೆಯ ಮೇಲೆ ಝಗಮಗಿಸಿದೆ.
ನಿಖಿಲ್ ಮೊದಲ ಸಿನೆಮಾ ಆದರು ಆಕ್ಷನ್ ,ಡಾನ್ಸ್ ಚೆನ್ನಾಗಿ ಮೂಡಿ ಬಂದಿದೆ. ನಟನೆ ಒಂದೇ ಸಿನೆಮಾಕ್ಕೆ ದಕ್ಕುವ ಕಲೆಯಲ್ಲ. ಆಡ್ತಾ ಆಡ್ತಾ ರಾಗ ಅನ್ನೋ ಹಾಗೆ ಮಾಡ್ತಾ ಮಾಡ್ತಾ ಒಲಿಸಿಕೊಳ್ಳುವೆ ಅನ್ನುವ ಆಕಾಂಕ್ಷೆ ಎದ್ದು ಕಾಣುತ್ತೆ. ರಾಜಣ್ಣನವರ ಬೇಡರ ಕಣ್ಣಪ್ಪ ಸಿನಿಮಾಗೂ ಭಕ್ತಪ್ರಹ್ಲಾದ ಚಿತ್ರದ ಅಭಿನಯಕ್ಕೂ ಅಜಗಜಂತಾರ ವ್ಯತ್ಯಾಸವಿದೆಯಲ್ಲ ಹಾಗೆ.

ನಿಖಿಲ್ ಲುಕ್ ,ಸ್ಟೈಲ್, ಕಾಸ್ಟ್ಯೂಮ್ ಎಲ್ಲದ್ದರಲ್ಲೂ ಎಕ್ಸ್ಪರ್ಟ್ ಗಳ ಕೆಲಸ ಜೋರಾಗಿದೆ.
ನಿಜಕ್ಕೂ ನೋಡುಗರಿಗೆ ಮಸ್ತ್ ಮಜಾ ಕೊಡ್ತಾ ಥ್ರಿಲ್ ಹುಟ್ಟಿಸುವ ಕ್ಯಾಮೆರಾ ವರ್ಕ್ಗೆ ಮನೋಜ್ ಪರಮಹಂಸಗೆ
ಒಂದು ಸೆಲ್ಯೂಟ್ ಹೇಳಲೇಬೇಕು.
ವಿದ್ಯಾರ್ಥಿ ನಾಯಕ ಆರ್ಯ ಅಭಿನಯ ಚೆನ್ನಾಗಿದೆ. ಹುಡುಗನಿಗೆ ಇನ್ನು ಒಳ್ಳೆ ಅವಕಾಶಗಳು ಸಿಗಲಿ.
ಇನ್ನು ಕಥೆ ಟಿವಿ ನ್ಯೂಸ್ ಚಾನೆಲ್ ಗಳು, ಆಸ್ಪತ್ರೆಗಳ ಮುಖಕ್ಕೆ ಕನ್ನಡಿ ಹಿಡಿದ ಹಾಗಿದೆ. ವ್ಯಾಪಾರೀ ಮನೋಭಾವದ ಚಾನೆಲ್ಗಳು ಜನರನ್ನ ಹೇಗೆ ಮುರ್ಖರನ್ನಾಗಿಸುತ್ತಿವೆ ಅನ್ನೋದನ್ನ ಎಳೆಎಳೆಯಾಗಿ ಬಿಚ್ಚಿಟ್ಟಿದ್ದಾರೆ. “ಸುಳ್ಳನ್ನೇ ಹತ್ತಾರು ಬಾರಿ ಹೇಳ್ತಾನೆ ಇದ್ರೆ ಜನ ಅದನ್ನೇ ಸತ್ಯ ಅಂತ ನಂಬಿಬಿಡ್ತಾರೆ ” ಸಿನಿಮಾ ಗಿಂತ ಚೆನ್ನಾಗಿ ಒಳ್ಳೆ ಮ್ಯೂಸಿಕ್” ,”visulas ಹಾಕಿ ತೋರ್ಸಿ ಜನರನ್ನ ಯಾಮಾರಿಸೋದು ಸುಲಭ”, “ಮಾಸ್ ಮೆಮೊರಿ ಈಸ್ ವೆರಿ ಶಾರ್ಟ್ ” ಜನ ಬೇಗ ಮರಿತಾರೆ ಮುಂದಿನ ಸುದ್ದಿ ನೋಡಿ “, ಕ್ರೈಂ ವಿಜೃಂಭಣೆ ಇಂಥವೆಲ್ಲ ನೋಡ್ತಾ ಜನ ಮುಗಿಬಿದ್ದು ಚಪ್ಪಾಳೆ ಹೊಡಿತಾ ನೋಡೋದಂತು ಸುಳ್ಳಲ್ಲ .
ಆಸ್ಪತ್ರೆಗಳು ಅಮಾಯಕರನ್ನ ಸುಲಿಯುವ, ಬಂದಷ್ಟು ಬರಲಿ ಎನ್ನುವ ಬಾಕತನದಿಂದ ಬಡವ ,ಬಲ್ಲಿದರನ್ನು ಬಲೆಗೆ ಬೀಳಿಸಿಕೊಳ್ಳುವ ನೈಜ ಸಂಗತಿಗಳು ಇಲ್ಲಿ ಬಯಲಾಗಿವೆ.
ರಾಜಕಾರಿಣಿಗಳು ,ಅವ್ರ ಪುತ್ರರ ರು ಹಣಬಲದಿಂದ ಹೇಗೆಲ್ಲ ವ್ಯವಸ್ಥೆಯನ್ನ ತಮ್ಮ ಕೈಗೊಂಬೆ ಮಾಡಿಕೊಳ್ಳುತ್ತಾರೆ ಅನ್ನುವುದು ಎಂಥವರಿಗೂ ಅರ್ಥವಾಗುವಷ್ಟು ಸರಳವಾಗಿ ತೆರೆಗೆ ಬಂದಿದೆ.
ರಮ್ಯಾ ಕೃಷ್ಣ ಅಮ್ಮನ ಪಾತ್ರದಲ್ಲಿ ಎಂದಿನಂತೆ ತಮ್ಮ ಅಭಿನಯ ಚಾತುರ್ಯ ಮೆರೆದಿದ್ದಾರೆ.

ಒಟ್ಟಿನಲ್ಲಿ ಜಾಗ್ವಾರ್ ಕೊಟ್ಟ ದುಡ್ಡಿಗೆ ಮೋಸ ಮಾಡದ ಒಳ್ಳೆ ಸಿನಿಮಾ .ತಾಂತ್ರಿಕವಾಗಿ ಬಾಲಿವುಡ್ ಸಿನಿಮಾ ನೋಡಿದ ಅನುಭವ ನಿಮ್ಮದಾಗೋದಂತೂ ಗ್ಯಾರಂಟಿ. ನಿರ್ದೇಶಕ ಮಹಾದೇವ ಕೈಗೆ ಚಿತ್ರದ ಜವಾಬ್ದಾರಿ ಕೊಟ್ಟಿದ್ದು ಸಾರ್ಥಕ ಅನ್ನೋವಷ್ಟು ಸಕ್ಕತ್ತಾಗಿದೆ . ಹೋಗಿ ಜುಮ್ ಜುಮ್ ಅಂತ ಜಾಗ್ವಾರ್ ನೋಡ್ಕೊಂಡ್ ಬನ್ನಿ.
-ಬಿ ಸಿ ಭಾನುಮತಿ

ಕೋಟಿಗೊಬ್ಬ-2 , ಕಿಚ್ಚ ಸುದೀಪ್ ಅಭಿಮಾನಿಗಳಿಗೆ ಫುಲ್ ಮೀಲ್ಸ್ !

kotigobba-2-movie-review

ಕೋಟಿಗೊಬ್ಬ-2 ಅಭಿಮಾನಿಗಳಿಗೊಸ್ಕರವೇ ಹೇಳಿ ಮಾಡಿಸಿದ ಸಿನಿಮಾದಂತಿದೆ.

ಸತ್ಯ ಮಿಥ್ಯಗಳ ನಡುವೆ ನಡೆಯುವ ಒಂದು ಕಥೆಗೆ ಕೆ ಎಸ್ ರವಿಕುಮಾರ್ ಎಂಬ ಖ್ಯಾತ ನಿರ್ದೇಶಕರು ರಚಿಸಿರುವ ಸ್ಕ್ರೀನ್ ಪ್ಲೇ ಸಿನಿಮಾಕ್ಕೊಂದು ವೇಗ ನೀಡಿದೆ. ಸುದೀಪ್ ಅವರ ವಿಭಿನ್ನ ಮ್ಯಾನರಿಸಂ, ಸ್ಟೈಲ್ ನೋಡುಗರಿಗೆ ಕಿಕ್ ಕೊಡುತ್ತದೆ. ಕೆ ಎಸ್ ರವಿಕುಮಾರ್ ಅವರ ಚಿತ್ರಗಳಲ್ಲಿ ನಾಯಕರು ಸ್ಟೈಲ್ ಆಗಿ ಮಿಂಚುತ್ತಾರೆ ಎನ್ನುವುದಕ್ಕೆ ಕೋಟಿಗೊಬ್ಬ -2 ಸಾಕ್ಷಿ.

ದೊಡ್ಡ ಉದ್ಯಮಿಗಳ ಕೋಟಿಗಟ್ಟಲೆ ಕಪ್ಪುಹಣ ದರೋಡೆ ಮಾಡುವ ಶಿವ (ಸುದೀಪ್) ನೋಟಿನ ವಾಸನೆ ಎಂದರೆ ವಿಶ್ವದ ಅದ್ಭುತ ಪರ್ಫ್ಯೂಮ್ ಎಂದು ನಂಬಿರುವವನು. ದರೋಡೆಗೊಳಗಾದ ಉದ್ದಿಮೆದಾರನ ಭಂಟ ಪೊಲೀಸ್ ಅಕಾರಿ ಕಿಶೋರ್ (ರವಿಶಂಕರ್). ಉದ್ದಿಮೆದಾರ ದೂರು ನೀಡದೆ ಇದ್ದರೂ ಸಿಕ್ಕ ವಿಡಿಯೋವೊಂದರ ಆಧಾರದ ಮೇರೆಗೆ ರಿಯಲ್ ಎಸ್ಟೇಟ್ ಉದ್ಯಮ ನಡೆಸುವ ಸತ್ಯನನ್ನ (ಸುದೀಪ್), ಕಿಶೋರ್ ಕರೆತಂದು ಲಾಕಪ್ ನಲ್ಲಿ ಥಳಿಸುತ್ತಾನೆ. ಆದರೆ ತನ್ನ ಅವಳಿ ಸಹೋದರ ಶಿವ ಕಾಣೆಯಾದುದರ ಬಗ್ಗೆ ಸತ್ಯ ಮೊದಲೇ ದೂರು ನೀಡಿರುತ್ತಾನೆ. ಈ ಪಾತ್ರದ ಮುಗ್ಧತೆಯನ್ನು ನಂಬಿದ ಕಿಶೋರ್ ಹಿರಿಯ ಅಧಿಕಾರಿ ಸತ್ಯನಿಗೆ ಆಟೋಗು ಹಣ ಕೊಟ್ಟು ಕಳುಹಿಸುತ್ತಾರೆ.

ಮತ್ತೊಂದು ದೃಶ್ಯದಲ್ಲಿ ಕಿಶೋರ್ ಅವರ ಪೊಲೀಸ್ ಠಾಣೆಯಿಂದಲೇ ಸುರಂಗ ಕೊರೆದು ಮತ್ತೊಬ್ಬ ಉದ್ದಿಮೆದಾರನ ಕಪ್ಪುಹಣದ ದರೋಡೆ ನಡೆಯುತ್ತಾನೆ ಶಿವ. ಸತ್ಯ ಮತ್ತು ಶಿವ ವಿಭಿನ್ನ ವ್ಯಕ್ತಿಗಳೇ ಅಥವಾ ಒಬ್ಬ ವ್ಯಕ್ತಿಯ ವಿಭಿನ್ನ ವ್ಯಕ್ತಿತ್ವಗಳೇ ಎಂಬ ದ್ವಂದ್ವದೊಂದಿಗೆ ಸಿನೆಮಾ ಕಡೆಯವರೆಗೂ ನಡೆಯುತ್ತದೆ. ಇದನ್ನು ಕಂಡು ಹಿಡಿಯಲು ಪೊಲೀಸ್ ಅಧಿಕಾರಿ ಕಿಶೋರ್ ಚಿತ್ರದ ಕಡೇ ದೃಶ್ಯದವರೆಗೂ ಕಷ್ಟಪಡುತ್ತಲೇ ಇರುತ್ತಾನೆ. ಈ ನಡುವೆ ಸೈಟ್ ಕೊಳ್ಳಲು ಸತ್ಯನ ಬಳಿ ಬರುವ ಶುಭಾ(ನಿತ್ಯಾ ಮೆನನ್) ನಿಧಾನವಾಗಿ ಸತ್ಯನೊಂದಿಗೆ ಪ್ರೀತಿಯಲ್ಲಿ ಬೀಳುತ್ತಾಳೆ. ಮುಂದೆ ಸತ್ಯ ಶಿವ ಬೇರೆ ಬೇರೆಯವರಾ, ಶುಭಾ ಸತ್ಯನನ್ನು ಮದುವೆ ಆಗುತ್ತಾಳಾ ಎಂಬುದೇ ಚಿತ್ರದ ಸಸ್ಪೆನ್ಸ್.

ತಮಿಳಿನಲ್ಲಿ ರಜನಿಕಾಂತ್, ಕಮಲಹಾಸನ್‌ನಂತಹ ಸೂಪರ್ ಸ್ಟಾರ್‌ಗಳನ್ನು ನಿರ್ದೇಶಿಸಿ ಅವರಿಗೆ ಸೂಪರ್ ಹಿಟ್ ಕೊಟ್ಟಿದ್ದ ಕೆ ಎಸ್ ರವಿಕುಮಾರ್ ಸುದೀಪ್ ಅವರ ಮ್ಯಾನರಿಸಂನ್ನು ಕಥೆಯಲ್ಲಿ ಎನ್‌ಕ್ಯಾಶ್ ಮಾಡಿಕೊಂಡಿದ್ದಾರೆ. ಮನರಂಜನೆ-ಚಮತ್ಕಾರದ ಕಮರ್ಶಿಯಲ್ ಚಿತ್ರಗಳ ಫಾರ್ಮುಲಾ ಎಕ್ಸ್ಪರ್ಟ್ ನಿರ್ದೇಶಕ ರವಿಕುಮಾರ್ ಭರ್ಜರಿಯಾಗಿ ಕನ್ನಡಕ್ಕೆ ಎಂಟ್ರಿ ಕೊಟ್ಟಿದ್ದಾರೆ.

ತೆರೆಯ ಮೇಲೆ ನಿತ್ಯಾ ಮೆನನ್ ನೋಡುವುದೇ ಆನಂದ.ಅಭಿನಯ, ಕನ್ನಡ ಮಾತನಾಡುವ ಸ್ಪಷ್ಟತೆ ಎಲ್ಲದರಲ್ಲೂ ನಿತ್ಯಾ ಫುಲ್ ಮಾರ್ಕ್ಸ್ ಗಳಿಸುತ್ತಾರೆ. ಇನ್ನು ವಿಲನ್‌ಗಳಾಗಿ ಅಭಿನಯಿಸಿರುವ ಶರತ್ ಲೋಹಿತಾಶ್ವ, ರವಿಶಂಕರ್ ತಮ್ಮ ಆರ್ಭಟವನ್ನು ಎಂದಿನಂತೆ ಮುಂದುವರೆಸಿದ್ದಾರೆ. ಇದೆಲ್ಲವನ್ನೂ ಬಿಟ್ಟರೆ ಇಡೀ ಚಿತ್ರವನ್ನು ಸುದೀಪ್ ಆವರಿಸಿ ಬಿಡುತ್ತಾರೆ. ಹಾಡುಗಳ ಕೋರಿಯೋಗ್ರಾಫಿ ಹಾಡುಗಳಿಗಿಂತಲೂ ಹೆಚ್ಚು ಗಮನ ಸೆಳೆಯುತ್ತದೆ. ಚಿತ್ರದಲ್ಲಿ ಹೋದ ಪುಟ್ಟ ಬಂದ ಪುಟ್ಟ ಪಾತ್ರಗಳಂತೆ ಹಾಸ್ಯ ಪಾತ್ರಗಳು ಬಿಂಬಿತವಾಗಿವೆ. ಚಿಕ್ಕಣ್ಣ , ಸಾಧುಕೋಕಿಲಾ, ತಬಲಾ ನಾಣಿ ಅಲ್ಲಲ್ಲಿ ನಗಿಸುತ್ತಾರೆ ಅಷ್ಟೆ.

ಒಟ್ಟಿನಲ್ಲಿ ಸುದೀಪ್ ಅವರ ಅಭಿಮಾನಿಗಳಿಗೆ ರವಿಕುಮಾರ್ ಮತ್ತು ಸುದೀಪ್ ಜೋಡಿ ರಸದೌತಣ ನೀಡಿದೆ ಎಂದು ಹೇಳಬಹುದು.

ಬುಧಿಯಾ – ಬಾರ್ನ್ ಟು ರನ್ !

ಕ್ರಿ.ಶ 2006  –  ಬುಧಿಯಾಗೆ ಸುಮಾರು 5 ವರ್ಷ

ಬೆಳಿಗ್ಗೆ 04:01 – ಬುಧಿಯಾ ಪುರಿ ಜಗನ್ನಾಥ್ ಮಂದಿರಕ್ಕೆ ನಮಿಸುತ್ತಾನೆ. ತನ್ನ ಜೀವನದ ಐತಿಹಾಸಿಕ ಮ್ಯಾರಾಥಾನ್ ಆರಂಭಿಸುತ್ತಾನೆ.
ಬೆಳಿಗ್ಗೆ 04:07 – ಜನಸಾಗರ ಸೇರಿದೆ. ನೂರಾರು ಪೋಲೀಸರು ರಕ್ಷಣೆಗೆ ನಿಂತಿದ್ದಾರೆ. ಬುಧಿಯಾ ಓಡುತ್ತಿದ್ದಾನೆ. (0 ಕಿ.ಮೀ)
ಬೆಳಿಗ್ಗೆ 05:40 – ಹಳ್ಳಿಗಳಲ್ಲಿ ಜನ ಹಸುಕರುಗಳನ್ನು ಮೇಯಿಸಲು ಹೋಗುತ್ತಿದ್ದಾರೆ. ಬುಧಿಯಾ ಓಡುತ್ತಿದ್ದಾನೆ. (15 ಕಿ.ಮೀ)
ಬೆಳಿಗ್ಗೆ 08:30 – 35 ಡಿಗ್ರಿ ಬಿಸಿಲು. ಮಕ್ಕಳು ಶಾಲಿಗೆ ಹೋಗಲು ದಾರಿಯಲ್ಲಿ ನಿಂತಿದ್ದಾರೆ. ಬುಧಿಯಾ ಓಡುತ್ತಿದ್ದಾನೆ. (26 ಕಿ.ಮೀ)
ಬೆಳಿಗ್ಗೆ 10:30 – ಭುವನೇಶ್ವರದ ಹೆಬ್ಬಾಗಿಲು. ನೂರಾರು ಜನ ಬುಧಿಯಾಗಾಗಿ ಕಾಯುತ್ತಿದ್ದಾರೆ. ಪಟಾಕಿ ಸಿಡಿಸುತ್ತಿದ್ದಾರೆ .ಬುಧಿಯಾ ಓಡುತ್ತಿದ್ದಾನೆ (54 ಕಿ.ಮೀ)
ಬೆಳಿಗ್ಗೆ 11:00 – ಬುಧಿಯಾ ಗುರಿ ಮುಟ್ಟಲು ಕೇವಲ ಒಂದೂವರೆ ಕಿ.ಮೀ ಮೀಡಿಯಾ ಹಾಗು ಸಾವಿರಾರು ಜನ ಹರ್ಷೋದ್ಗಾರ. ಬುಧಿಯಾ ಕುಸಿಯುತ್ತಾನೆ. (63 ಕಿ.ಮೀ)
ಬೆಳಿಗ್ಗೆ 11.20 – ಬುಧಿಯಾಗೆ ಎಚ್ಚರ. “ನನಗೆ ಸುಸ್ತಾಗಿಲ್ಲ, ನಾನು ಇನ್ನೂ ಓಡುತ್ತೇನೆ. ಮುಂದೆಯೂ ಓಡುತ್ತಲೇ ಇರುತ್ತೇನೆ” ಬುಧಿಯಾ ಹೇಳುತ್ತಾನೆ.

 

11

 

ಬುಧಿಯಾ ಓಟಕ್ಕೆ ಸಮಾಜದ ಪ್ರತಿಕ್ರಿಯೆ 
ಪಿ.ಟಿ. ಉಷಾ – ಕೇವಲ ರೆಕಾರ್ಡ್’ಗಳಿಗೋಸ್ಕರ ಬುಧಿಯಾ ಹೀಗೆ ಓಡುವುದರಿಂದ ಭವಿಷ್ಯದಲ್ಲಿ ಅವನ ಆರೋಗ್ಯ ಹಾಗು ಓಟ ಎರಡರ ಮೇಲೂ ಕೆಟ್ಟ ಪರಿಣಾಮ ಬೀಳಲಿದೆ.

ನಾರಾಯಣ್ ಮೂರ್ತಿ – 15-16ವರ್ಷದ ಮಕ್ಕಳು ಒಲಂಪಿಕ್ಸ್ ಗೆದ್ದರೆ ಸ್ವಾಗತಾರ್ಹ. ಆದರೆ ಬುಧಿಯಾಗೆ ಈ ವಯಸ್ಸಿನಲ್ಲಿ 65 ಕಿಮೀ ಓಡಿಸುವುದು ಕ್ರೂರತನ ಆಗುತ್ತದೆ.

ಪ್ರಮಿಳಾ ಮಲ್ಲಿಕ್, ಮಕ್ಕಳ ಕಲ್ಯಾಣ ಇಲಾಖೆ, ಒರಿಸ್ಸಾ – ಬುಧಿಯಾನ ಸುತ್ತಲೂ ಮೀಡಿಯಾವನ್ನು ಆಕರ್ಷಿಸಲು ಪಬ್ಲಿಸಿಟಿ ಸ್ಟಂಟ್ ನಡೆಯುತ್ತಿದೆ. ಬುಧಿಯಾಗೆ ಏನಾದರೂ ತೊಂದರೆ ಆದರೆ ಬಿರಾಂಚಿ ದಾಸ್ ಮೇಲೆ ಕಠಿಣ ಕ್ರಮ ಕೈಗೊಳ್ಳಬೇಕಾಗುತ್ತದೆ.

ಬಿರಾಂಚಿ ದಾಸ್ (ಬುಧಿಯಾನ ಕೋಚ್) – ಪಿ.ಟಿ. ಉಷಾ, ಮಿಲ್ಕಾ ಸಿಂಗ್ ಇಬ್ಬರೂ ಮ್ಯಾರಥಾನ್ ಓಡಲು ಹುಟ್ಟಿದವರಲ್ಲ. ಇನ್ನು ಆ ನಾರಾಯಣ್ ಮೂರ್ತಿಗೆ ಓಟ ಎಂದರೆ ಏನು ಎನ್ನುವುದೇ ಗೊತ್ತಿಲ್ಲ. ಬುಧಿಯಾ ಇತಿಹಾಸ ಸೃಷ್ಠಿಸಲು ಹುಟ್ಟಿರುವವನು. ಅವನು 2016 ರ ಒಲಂಪಿಕ್ಸ್’ನ ಚಿನ್ನದ ಸರದಾರ.

ಮಕ್ಕಳ ಕಲ್ಯಾಣ ಇಲಾಖೆ, ಒರಿಸ್ಸಾ – ಬುಧಿಯಾನನ್ನು ಅವನ ಕೋಚ್ ಬಿರಾಂಚಿ ದಾಸ್ ನಿಂದ ದೂರ ಇರಬೇಕಾಗಿದೆ. ಇನ್ನು ಮುಂದೆ ಬುಧಿಯಾ ಸಿಂಗ್ ಯಾವುದೇ ತರಹದ ವಾಕಥಾನ್ ಆಗಲಿ ಅಥವಾ ಮ್ಯಾರಥಾನ್’ನಲ್ಲಾಗಲಿ ಭಾಗವಹಿಸುವುದನ್ನು ನಿರ್ಭಂದಿಸಲಾಗಿದೆ.

 

ಬಿರಾಂಚಿ ದಾಸ್

wonder-biranchi

ಒರಿಸ್ಸಾದ ಮಕ್ಕಳನ್ನು ಬಂದು ನೋಡಿ. ಚಿಕ್ಕ ಚಿಕ್ಕ ಮಕ್ಕಳು ಪುಟ್ ಪಾತ್ ಹೊಟೆಲುಗಳಲ್ಲಿ ಪಾತ್ರೆ ತೊಳೆಯುತ್ತಿವೆ. ಐದು ವರ್ಷದ ಮಕ್ಕಳು ಗಣಿಗಳಲ್ಲಿ ಕಲ್ಲು ಹೊಡೆಯುತ್ತಿವೆ. ಇನ್ನು ಕೆಲವರು ಕಟ್ಟಿಗೆ ಕಡಿದು ಮಾರುತ್ತಾರೆ. ನೂರಾರು ಮಕ್ಕಳು ರಸ್ತೆಯಲ್ಲಿ ಹಸಿವಿನಿಂದ ಜೀವ ಕಳೆದುಕೊಳ್ಳುತ್ತಿವೆ. ಅವರನ್ನು ಕೇಳುವವರೇ ಇಲ್ಲ. ಆದರೆ ನೀವು ಬುಧಿಯಾನ ಬಗ್ಗೆ ಮಾತಾಡುತ್ತೀರಿ. ಮಕ್ಕಳ ಕಲ್ಯಾಣ ಹಾಗು ಮಾನವ ಹಕ್ಕು ಎಂದು ಬುಧಿಯಾನನ್ನು ನಿಲ್ಲಿಸುತ್ತೀರಿ. ಬುಧಿಯಾ ಓಡುತ್ತಾನೆ.

 

 

 

ಬುಧಿಯಾb2_1466501545_725x725

ನೀವು ಹೆಚ್ಚು ಸತಾಯಿಸಿದಷ್ಟೂ ನಾನು ಹೆಚ್ಚು ಓಡುತ್ತೇನೆ ..

 

 

 

 

 

ಕ್ರಿ ಶ 2016 – ಬುಧಿಯಾ – ಬಾರ್ನ್ ಟು ರನ್ – ಹಿಂದಿ ಚಿತ್ರ 

08budhia-singh1

ಒರಿಸ್ಸಾದ ಅತ್ಯಂತ ಕ್ರಿಮಿನಲ್ ಸ್ಲಂನಲ್ಲಿ ಹುಟ್ಟಿದ ಅಸಾಧಾರಣ ಹುಡುಗನ  ಕಥೆ.

ಭಾಗ್ ಮಿಲ್ಕಾ .. ಮೇರಿ ಕೋಮ್ .. ಚಕ್ ದೇ ಅಂತಾ ಸೂಪರ್ ಸ್ಟಾರ್’ಗಳ ಅಬ್ಬರ ಹಾಗು ತಾಂತ್ರಿಕ ವಿಜೃಂಭಣೆ ಇಲ್ಲದಿದ್ದರೂ ಆ ಎಲ್ಲಾ ಚಿತ್ರಗಳಿಗಿಂತಾ ತೀವ್ರವಾಗಿ ಬುಧಿಯಾ ಕಾಡುತ್ತದೆ. ಯಾಕೆಂದರೆ ಆ ಚಿತ್ರಗಳು ಗೆಲುವಿನ ಬಣ್ಣನೆ. ಆದ್ರೆ ಬುಧಿಯಾ ಸಮಕಾಲೀನ ಹಾಗು ರಾಜಕೀಯ ಪ್ರೇರಿತ ಚಿತ್ರ. ಕೆಲವೊಂದು ದೃಶ್ಯಗಳು ಸತ್ಯ ಘಟನೆಗಳ ಆಧಾರಿತ ಎಂದು ನೆನಪಾಗಿ ನಮ್ಮನ್ನು ತುಂಬಾ ಡಿಸ್ಟರ್ಬ್ ಮಾಡುತ್ತವೆ.

ಈ ಚಿತ್ರಕ್ಕೆ 2016ರ ಅತ್ಯುತ್ತಮ ಮಕ್ಕಳ ಚಿತ್ರ ಎಂದು ರಾಷ್ಟ್ರ ಪ್ರಶಸ್ತಿ ಬಂದಿದೆ. ಮಕ್ಕಳು ಈ ಚಿತ್ರ ನೋಡಿ ಅವರ ಧ್ಯೇಯಗಳು ಗಟ್ಟಿ ಆಗುವುದಂತೂ ನಿಜ. ಆದರೂ ಕೊನೆಯ ಒಂದೆರಡು ದೃಶ್ಯಗಳು ಮಕ್ಕಳಿಗೆ ಜೀರ್ಣಿಸಿಕೊಳ್ಳಲು ಕಷ್ಟವಾಗಬಹುದು.

ಓಟ ನಿಲ್ಲಿಸಿದ ಈ ಬುಧಿಯಾನ ಕಥೆ ನಮ್ಮ ಪ್ರಸ್ತುತ ಸಾಮಾಜಿಕ ರಾಜಕೀಯ ಹಾಗು ರಾಜಕೀಯ ಸಮಾಜದ ಚಿತ್ರಗಳನ್ನು ನಿಷ್ಠುರವಾಗಿ ಬಿಚ್ಚಿಡುತ್ತಾ, ಇಂಥಾ ಕಥೆಗಳಲ್ಲಿ ನಮ್ಮ ಪಾತ್ರವೇನು ಎಂದು ಪದೇ ಪದೇ ಕೇಳಿಕೊಳ್ಳುವಂತೆ ಮಾಡುತ್ತದೆ.

ಬುದಿಯಾ ಚಿತ್ರದ ಟ್ರೈಲರ್ :

‘ಕಬಾಲಿ’ ಹಿಟ್ಟಾ.. ತೋಪಾ .. ???

ಕಲೆ, ಮನೋರಂಜನೆ, ಮಾಧ್ಯಮ ಹೀಗೆ ಅನೇಕ ರೂಪಗಳನ್ನು ಪಡೆದ ಸಿನಿಮಾ, ಇಂದು ಅವೆಲ್ಲವನ್ನೊ ಮೀರಿ ಒಂದು ಮಹಾ ವ್ಯಾವಹಾರಿಕ ಉದ್ಯಮವಾಗಿ ಬೆಳೆದು ನಿಂತಿದೆ.ಹಾಗಾಗಿ ಚಿತ್ರನಿರ್ಮಾಪಕರು ಸಿನಿಮಾದ ಕಥೆಗೆ ತಲೆಕೆಡಿಸಿಕೊಳ್ಳಲು ಶುರು ಮಾಡಿದ ದಿನದಿಂದಲೇ ಅದರ  ಪ್ರಚಾರ ಕಾರ್ಯಕ್ಕೂ ನಿಲ್ಲುತ್ತಿದ್ದಾರೆ.

ಅಂದು ‘ಬಾಹುಬಲಿ’ ತನ್ನ ತಾಂತ್ರಿಕತೆಯಿಂದ ಭಾರತ ಚಿತ್ರರಂಗದ ಲೆಕ್ಕಾಚಾರಗಳನ್ನೆಲ್ಲಾ ಬುಡಮೇಲು ಮಾಡಿಬಿಟ್ಟರೆ, ಇಂದು ಬಂದ ‘ಕಬಾಲಿ’ ತಲೈವನ ಹೆಸರಿನಲ್ಲೇ ಬಿರುಗಾಳಿ ಎಬ್ಬಿಸಿ ಮರೆಯಾಯ್ತು.

‘ಕಬಾಲಿ’ ಬಂದ ಬಿರುಸಿನಲ್ಲಿ ಬಿಚ್ಚಿಟ್ಟು ಹೋದ ಪ್ರಶ್ನೆ ಹಾಗು ಗೊಂದಲಗಳು ಒಂದೆರಡಲ್ಲ.

ಒಂದು ಚಲನಚಿತ್ರವನ್ನು ಹೇಗೆ ಅಳಿಯಬೇಕೋ ಹಾಗೆ ಅಳಿಯಲು ತಿಳಿಯದ ತೀರದಲ್ಲಿ “ಕಬಾಲಿ” ನಿಂತಿದೆ. ಭಾರತ ಚಿತ್ರರಂಗದಲ್ಲೇ ಮೊದಲನೇ ಬಾರಿಗೆ ಇಷ್ಟೊಂದು ರೀತಿಯ  “mixed opinion”ಗಳನ್ನು ಚಿತ್ರ “ಕಬಾಲಿ” ಹುಟ್ಟುಹಾಕಿದೆ.

B Suresh, Film Maker

1ಬಿ. ಸುರೇಶ್

ಕಬಾಲಿ ಮಲೇಶಿಯಾದ ಭಾರತೀಯ ವಲಸಿಗರ ಬಗ್ಗೆ ಮಾಡಿರುವ ಅದ್ಬುತ ಚಿತ್ರ. ಸೂಪರ್ ಸ್ಟಾರ್ ಫಾರ್ಮುಲಾಗೆ ಜೋತು ಬೀಳದೆ ಚಿತ್ರವನ್ನು ರೂಪಿಸಿದ್ದಾರೆ. 70 ಕೋಟಿ ರೂಪಾಯಿಯಲ್ಲಿ ಅಚ್ಚುಕಟ್ಟಾಗಿ ನಿರ್ಮಾಣವಾದ ಈ ಚಿತ್ರದ ಪ್ರಚಾರಕ್ಕೆ ಖರ್ಚಾಗಿದ್ದು ಸುಮಾರು 50 ಕೋಟಿ. ಚಿತ್ರ ಗಳಿಸಿದ್ದು ಭರ್ಜರಿ 600 ಕೋಟಿ. ಇದು ಸಮಕಾಲೀನ ಅದ್ಭುತ ಯಶಸ್ಸಿನ ಚಿತ್ರ ಎಂದು ನಾನು ನಂಬುತ್ತೇನೆ.

Shreenidhi DS, Fiction Head, Udaya TV

2ಶ್ರೀನಿಧಿ ಡಿ.ಎಸ್.

‘ಕಬಾಲಿ’ ಹಂಚಿಕೆದಾರರಿಗೆ ಲಾಭ ತಂದುಕೊಟ್ಟಿರಬಹುದು! ಆದರೆ ನೋಡಿದೋರಿಗೆ ಖುಷಿ ಆಗಿದೆಯಾ?

ಆಮೇಲೆ- ಸಿನಿಮಾಕ್ಕೆ ನಿಜವಾದ ಖರ್ಚಾದ ದುಡ್ಡೆಷ್ಟು ಅನ್ನೋದು ಜನಸಾಮಾನ್ಯನಿಗೆ ಗೊತ್ತಾಗಲ್ಲ, ಆತನಿಗೆ ಇದೊಂದು ದೊಡ್ಡ ಚಿತ್ರ, ಕೋಟ್ಯಂತರ ರೂಪಾಯಿಗಳ ವೆಚ್ಚ ಆಗಿದೆ ಎಂದು ಬಿಂಬಿಸಿ – ಆ ಚಿತ್ರವನ್ನು ಮಿಸ್ ಮಾಡ್ಕೊಳೋದೇ ಅಪರಾಧ ಎಂಬಂತೆ ಬಿಂಬಿಸಿ, ಒತ್ತಾಯ ಪೂರ್ವಕವಾಗಿ ನೋಡೋ ಹಾಗೆ ಮಾಡಲಾಗತ್ತೆ. ಜನಕ್ಕೆ ಈ ಕ್ಷಣದ ಸಂಭ್ರಮ- ಯಶಸ್ಸು ಅಷ್ಟೇ ಬೇಕು. ಸುಮ್ಮನೆ ನೂರಾರು ಥಿಯೇಟರ್ ಗಳಲ್ಲಿ ರಿಲೀಸ್ ಮಾಡಿ, ಧೂಳೆಬ್ಬಿಸಿ-ಗೌಜಿ ಮಾಡಿ ಹೋ ಅಂತ ಅಬ್ಬರ…. ಆಮೇಲೆ ಹೇಳೋರು ಕೇಳೋರು ಇಲ್ಲ!

Aravind SD, Film Maker

3ಅರವಿಂದ್ ಎಸ್. ಡಿ.

ಕಬಾಲಿ ನಿಜಕ್ಕೂ path breaking cinema. ಆದರೆ ಅತಿಯಾಗಿ ಪ್ರಚಾರ ಹಾಗು ನಿರೀಕ್ಷೆಗಳನ್ನು ಹುಟ್ಟಿಸಿತ್ತು. ವ್ಯಯಕ್ತಿಕವಾಗಿ ನನಗೆ ಚಿತ್ರ ಇಷ್ಟವಾಯ್ತು. ರಜನಿ ಅಂಥಾ ಸೂಪರ್ ಸ್ಟಾರ್ ಪ್ರಭೆಯನ್ನು ಮರೆಮಾಡಿ ನಿಜವಾದ ನಟನನ್ನು ತೋರಿಸಿದ್ದಾರೆ. ಒಬ್ಬ ಖ್ಯಾತ ನಾಯಕನನ್ನು ದಲಿತ ನಾಯಕನನ್ನಾಗಿ ಹೆಣೆದಿರುವ  ಕಥೆ ಅದ್ಭುತ. ಇದು ಕೇವಲ ರಜನಿ ಚಿತ್ರವಾಗಿ ಉಳಿಯದೆ, ನೈಜವಾಗಿ ಚಿತ್ರ ಕಟ್ಟಿರುವುದು ಪ್ರಸಂಶನೀಯ.

Vanitha Sathish, Software professional

4 ವನಿತಾ ಸತೀಶ್

ಹೊಸತನ ಬರಿ ಲೊಕೇಶನ್   ಮತ್ತು ಕಥೆಯ ಎಳೆಯಲ್ಲಿದೆ. ಕೆಲವು ನಿರೂಪಣೆ; ಸತ್ತ ಹೆಂಡತಿ  ಎಲ್ಲ ಕಡೆ ಕಾಣಿಸಿ ಅವನನ್ನು ಕಾಡುವುದು ತುಂಬಾ ಸುಂದರವಾಗಿದೆ. ಚಿತ್ರ ಕಥೆ ಪ್ರೇಕ್ಷಕರನ್ನು ಹಿಡಿದು ಕೂರಿಸುವಷ್ಟು ಕಾತುರ ಮತ್ತು ಆಸಕ್ತಿ ಹುಟ್ಟಿಸುವಲ್ಲಿ ಸೋತಿದೆ. ಕಬಾಲಿ ಪಾತ್ರ ಕೂಡ ನಾಯಕನ ದಿಟ್ಟ ಗುಣ ಮತ್ತು ವ್ಯಕ್ತಿತ್ವ ಪ್ರೇಕ್ಷಕರ ಮನದಲ್ಲಿ ನೆಡುವಂಥ ಯಾವುದೇ ದೃಶ್ಯ ಕಟ್ಟಿ ಕೊಟ್ಟಿಲ್ಲ. ನಾವೆ ಪಟ್ಟು ಹಿಡಿದು ಚಿತ್ರದಲ್ಲಿ ಧನಾತ್ಮಕ ಅಂಶಗಳನ್ನು ಹುಡುಕಿದರೆ ಕೆಲವು ಮಾತ್ರ ಸಿಗುತ್ತವೆ. ಒಟ್ಟಾರೆ ಕೊಟ್ಟ ದುಡ್ಡಿಗೆ 80% paisa vasool ಕಾರಣ, ಹೊರ ದೇಶದ ಲೊಕೇಶನ್, ಹೊಸ ನಟ ನಟಿಯರು ಮತ್ತ ರಜನಿ ಸರ್.ಜನರ ಮನ ಮುಟ್ಟುವಲ್ಲಿ ಸಂಪೂರ್ಣವಾಗಿ ಸೋತಿದೆ.

ChandraShekar Shrivastav, Film director

5ಚಂದ್ರಶೇಖರ್ ಶ್ರೀವಾತ್ಸವ್

ರಜನಿಕಾಂತ್ ಸಿನಿಮಾದಲ್ಲಿ ಇದ್ದಮೇಲೆ ಮುಗೀತು, ಅಲ್ಲಿ ಒಪೀನಿಯನ್ ಗಳ ಅವಶ್ಯಕತೆನೇ ಇಲ್ಲ. ಆ ಸಿನಿಮಾ ಸೂಪರ್ ಹಿಟ್ಚೇ.

Vidya Rao, Writer

6ವಿದ್ಯಾ ರಾವ್

ನಾನು ಚಿತ್ರವನ್ನು ನೋಡಿಲ್ಲ.. ಆದರೂ, ಒಬ್ಬ ನಟನ ಪಾಪುಲಾರಿಟಿಯನ್ನೇ ಬಂಡವಾಳವಾಗಿ ಇಟ್ಟುಕೊಂಡು ಮೀಡಿಯಾ ಮೂಲಕ ಅತಿಯಾಗಿ ಪ್ರಚಾರ ಮಾಡಿ ಪ್ರೇಕ್ಷಕರನ್ನು ಚಿತ್ರಮಂದಿರಕ್ಕೆ ಕರೆತರಲಾಗುತ್ತಿದೆ. ಆದರೆ ಒಂದು ಚಿತ್ರಕ್ಕೆ ಅದರ ಕಥೆ, ದೃಶ್ಯಿಕರಣ, ನಟರ ನಟನೆ ಮುಂತಾದವುಗಳೇ ಮೂಲ ಮಾನದಂಡವಾಗಿರಬೇಕು. ಬಿಡುಗಡೆಯ ಮುನ್ನವೇ ಈ ಚಿತ್ರಗಳು ಎಷ್ಟು ಸುದ್ದಿ ಮಾಡುತ್ತವೆ ಎಂದರೆ, ನೈಜ ಮನಸ್ಸಿನಿಂದ ಪ್ರೇಕ್ಷಕ ಚಿತ್ರವನ್ನು ನೋಡಲು ಆಗುವುದೇ ಇಲ್ಲ. ಒಬ್ಬನು ಸಾಧಾರಣವಾಗಿ ಚಿತ್ರವನ್ನು ನೋಡಿ ಅಭಿಪ್ರಾಯ ಹೇಳುವ ಮುನ್ನವೇ ಮೀಡಿಯಾದಲ್ಲಿ ಸೂಪರ್ ಹಿಟ್ ಎಂದು ಬಣ್ಣಿಸಿ ಆಗಿರುತ್ತದೆ. ಕಬಾಲಿ ಎಷ್ಟೇ ಹೈಪ್ ಸೃಷ್ಟಿಸಿದರೂ, ಚಿತ್ರಕಥೆಯ ಬಗ್ಗೆ ಹೆಚ್ಚು ಚರ್ಚೆ ನಡೆಯಲಿಲ್ಲ.

Srinidhi Srivatsa, Software professional

7ಶ್ರೀನಿಧಿ ಶ್ರೀವಾತ್ಸವ್

ಬಾಕ್ಸ್ ಆಫೀಸ್ ಅಬ್ಬರ ನೋಡಿದರೆ ಕಬಾಲಿ ಸೂಪರ್ ಹಿಟ್ , ಅನ್ನುದರಲ್ಲಿ ಸಂಶಯ ಇಲ್ಲ. ಕಥೆಯು ತುಂಬಾ ಪರಿಣಾಮಕಾರಿ ಆಗಿಲ್ಲದಿದ್ದರೂ, ಕೆಟ್ಟ ಕಥೆ ಎನ್ನುವಂತಿಲ್ಲ. ಇಂದಿನ ರಾಜಕೀಯ ಸಾಮಾಜಿಕ ಸ್ಥಿತಿಯನ್ನು ಗಮನದಲ್ಲಿ ಇಟ್ಟುಕೊಂಡು ಹೇಳುವುದಾದರೆ, ದಲಿತನಾಯಕ ಮೂಲಕ ಕಥೆ ಹೇಳಲು ಹೊರಟಿದ್ದು ಕಥಾವಸ್ತುವನ್ನು ಕೆಡಿಸಿದೆ ಎನಿಸುತ್ತದೆ.

Abhishek SN, Film Maker

8ಅಭಿಷೇಕ್ ಎಸ್ ಎನ್

ಹಣ ಗಳಿಕೆಯೇ ಮೇಲೆ ಯಶಸ್ಸನ್ನು ಅಳೆಯುವುದಾದರೆ, ಕಬಾಲಿ ಸಾಧನೆಯ ಅಂಕಿ ಅಂಶಗಳು ನಮ್ಮ ಮುಂದೆಯೇ ಇವೆ. ಆದರೆ ವ್ಯಕ್ತಿಗತವಾಗಿ ಈ ಚಿತ್ರ ಮಿಶ್ರ ಪ್ರತಿಕ್ರಿಯೆಗಳನ್ನು ಪಡೆದಿದೆ. ಒಟ್ಟಾರೆ, ಚಿತ್ರಕಥೆ ಇನ್ನಷ್ಟು ಜವಾಬ್ದಾರಿಯುತವಾಗಿ ಇರಬೇಕಾಗಿತ್ತು ಎಂದು ನನಗೆ ಅನಿಸುತ್ತದೆ. ಆಗ ಕಬಾಲಿಗೆ ಕಲಾತ್ಮಕ ಹಾಗು ಮನೋರಂಜಕ ಚಿತ್ರವಾಗಿಯೂ ಹೆಚ್ಚು ಮನ್ನಣೆ ಸಿಗುತ್ತಿತ್ತು.

 

 

Apoorva, Actress

9ಅಪೂರ್ವ

ರಜನಿ ವ್ಯಕ್ತಿತ್ವವೇ ಸೂಪರ್ ಸ್ಟಾರ್. ಹಾಗಾಗಿ ಕಬಾಲಿ ಕೂಡ ಸೂಪರ್ ಹಿಟ್. ನನಗೆ ಅನಿಸುವಂತೆ ಅವರ ಅಭಿಮಾನಿಗಳು ರಜನಿಗೊಸ್ಕರವೇ ಈ ಚಿತ್ರವನ್ನು ನೋಡುತ್ತಾರೆ. ಮಿಕ್ಕಿದ್ದೆಲ್ಲವೂ ಅವರಿಗೆ ಗೌಣ. ಸೂಪರ್ ರಜನಿ..

Ashok GK, Business consultant

10ಅಶೋಕ್ ಜಿಕೆ

ಕಬಾಲಿ ಚಿತ್ರದ ಬ್ರಾಂಡ್ ವ್ಯಾಲ್ಯೂ ಹಾಗು ಮಾರ್ಕೆಟಿಂಗ್ ಸ್ಟ್ರಾಟಜಿಯನ್ನು ಮೆಚ್ಚಲೇಬೇಕು. ಆದರೆ ಒಂದು ಒಳ್ಳೆಯ ಕಥೆ ಇಲ್ಲದೆ ಇರುವಾಗ ಯಶಸ್ಸು ಸಾಧ್ಯವೂ ಇಲ್ಲ. ಇಂದಿನ ಪ್ರೇಕ್ಷಕರು ಬಲು ಸೂಕ್ಷ್ಮ. ಕಬಾಲಿಗೆ ರಜನಿ ಎಂಬ ಸೂಪರ್ ಸ್ಟಾರ್ ನ ಬ್ರಾಂಡಿಂಗ್ ಇತ್ತು. ಆದರೂ ಇದು ರಜನಿ ಅಭಿಮಾನಿಗಳಿಗೆ ಮೀಸಲಾದ ಚಿತ್ರವಾಗಿ ಉಳಿಯಿತು. ನಾನೂ ಈ ಚಿತ್ರವನ್ನು ನೋಡಿದ್ದು ರಜನಿ ಅಭಿಮಾನಿಯಾಗಿಯೇ.

ನಿಜಕ್ಕೂ ನನಗೆ ನಿರಾಶೆ ಆಯ್ತು. ರಜನಿಯ ಹಳೆ ಚಿತ್ರಗಳಲ್ಲಿನ ವಿಶೇಷತೆ ಇದರಲ್ಲಿ ಕಾಣಲಿಲ್ಲ. ಸ್ಕ್ರಿಪ್ಟ್ ನಲ್ಲಿ ಏನು ಹಿಡಿತ ಇರಲಿಲ್ಲ ಎನಿಸಿತು.

Rashmi Kulakarni, Actress

11ರಶ್ಮಿ ಕುಲಕರ್ಣಿ

ಒಂದ್ಸಲಾ ಖಂಡಿತ ನೋಡ್ಬೇಕು ಯಾಕಂದ್ರೆ ಇದು ರಜನಿಕಾಂತ್ ಅವರ ಚಿತ್ರ. ದೊಡ್ಡ ಬಜೆಟ್ ನ ಸಿನಿಮಾ ಮತ್ತೆ ಅವರು ಈ ವಯಸ್ಸಲ್ಲೂ ಯುವನಟರ ಎನರ್ಜಿಯ ಮೇಲೆ ಸವಾಲ್ ಆಗೋ ರೀತಿಯಲ್ಲಿ ಅಭಿನಯಿಸಿದ್ದಾರೆ. ನೆರುಪ್ಪು ಡಾ ಹಾಡಿಗಾಗಿ ಕಾಯುತಿದ್ದೆ, ಆ ವಿಷಯದಲ್ಲಿ ಸ್ವಲ್ಪ ನಿರಾಸೆ ಆಯ್ತು.

 

ಹೇಳೋದು ಕಷ್ಟ  !

ಪ್ರತಿ ಕ್ಷೇತ್ರದಲ್ಲಿರುವ ಪ್ರತಿಯೊಬ್ಬರ ಅನಿಸಿಕೆ “ಕಬಾಲಿ” ವಿಷಯದಲ್ಲಿ ಬೇರೆ ಆಗಿದೆ. ಸೂಪರ್ ಸ್ಟಾರ್ ರಜನಿ ಸಾರ್ ಅವರ ಎಷ್ಟೋ ಸೂಪರ್ ಡೂಪರ್ ಸಿನಿಮಾಗಳ ಮುಂದೆ “ಕಬಾಲಿ” ಎಲ್ಲಿ ನಿಂತಿದೆ ಅನ್ನೋದು ಕಷ್ಟಕರ ಎಣಿಕೆಯಾಗಿದೆ.

ಕಡೆಯದಾಗಿ “ಕಬಾಲಿ” ಸಿನಿಮಾಗಾಗಿ ಜನ ಥಿಯೇಟರ್ ಮುಂದೆ ನೂಕುನುಗ್ಗಲು ಮಾಡುತ್ತಿದ್ದಾರೋ ಇಲ್ವೋ ಗೊತ್ತಿಲ್ಲ ಆದರೆ ರಜನಿ ಸಾರ್ ಅವರ ಸ್ಟೈಲ್ ಹಾಗು ಖದರ್ ನೋಡಲಂತೂ ಖಂಡಿತ ಮುಂದೆಯೂ ಜನ ಹಾತೊರೆಯುತಿರುತ್ತಾರೆ.

ಅಂದಹಾಗೆ ನೀವೇನಂತೀರಾ?

ಕಲ್ಪನಾ- ೨ ಮೂವೀ ಹೇಗಿದೆ?

ಕಲ್ಪನಾ- ೨ ಫೋಟೋ - ಕಲ್ಪನಾ- ೨ ಚಿತ್ರದಲ್ಲಿ ಉಪೇಂದ್ರ , ಪ್ರಿಯಾಮಣಿ
ಕಲ್ಪನಾ-೨ ಚಿತ್ರದಲ್ಲಿ ಉಪೇಂದ್ರ , ಪ್ರಿಯಾಮಣಿ

ಉಪೇಂದ್ರ ಅಭಿನಯದ ಕಲ್ಪನಾ-೨ ತೆರೆಗೆ ಬಂದಿದೆ.

ಕಲ್ಪನಾ-೨ ತಮಿಳಿನಲ್ಲಿ ಲಾರೆನ್ಸ್ ರಾಘವ ನಟಿಸಿದ್ದ ಕಾಂಚನಾ ಸಿನಿಮಾವನ್ನು ಈ ಹಿಂದೆ ‘ಕಲ್ಪನಾ’ ಹೆಸರಿನಲ್ಲಿ ರಿಮೇಕ್ ಮಾಡಿದ್ದರು. ಚಿತ್ರ ಯಶಸ್ವಿಯಾಗಿತ್ತು. ನಂತರ ಲಾರೆನ್ಸ್ ರಾಘವ ‘ಮುನಿ-೨ ಕಾಂಚನಾ’ ಎನ್ನುವ ಸಿನಿಮಾ ಮಾಡಿದ್ದರು. ಇಲ್ಲೂ ಅದನ್ನು ‘ಕಲ್ಪನಾ-೨’ ಹೆಸರಿನಲ್ಲಿ ತಯಾರು ಮಾಡಲಾಗಿದೆ.

ಈ ಚಿತ್ರವನ್ನು ರಿಮೇಕ್ ಸಿನಿಮಾಗೇ ಫೇಮಸ್ಸಾಗಿರುವ ಅನಂತರಾಜ ನಿರ್ದೇಶಿಸಿದ್ದಾರೆ.

ತಮಿಳಿನಲ್ಲಿ ಹಾಸ್ಯ ಸಿನಿಮಾ ಮಾಡಿದರೂ, ಕಾಮಿಡಿ ಚಿತ್ರ ತೆಗೆದರೂ ಅದರಲ್ಲೊಂದು ಸಾಮಾಜಿಕ ಸಂದೇಶವನ್ನು ಬೆರೆಸುವ ಸಂಪ್ರದಾಯವಿದೆ. ಹೀಗಾಗಿ ಚಿತ್ರ ಹಾರರ್ ಮತ್ತು ಕಾಮಿಡಿ ಬೆರೆತ ಚಿತ್ರವಾದರೂ ಅದರಲ್ಲೊಂದು ಮೆಸೇಜ್ ಇದೆ.

ಕಲ್ಪನಾ ಚಿತ್ರದಲ್ಲೂ ಮಂಗಳಮುಖಿಯರ ಸಮಸ್ಯೆಗಳನ್ನು ಹೇಳುತ್ತಲೇ, ಅವರಿಗಾದ ಅನ್ಯಾಯದ ವಿರುದ್ಧ ರಿವೇಂಜ್ ತೀರಿಸಿಕೊಳ್ಳುವ ಕಥೆ ಹೇಳಲಾಗಿತ್ತು.

ಕಲ್ಪನಾ-೨ ಕಥೆ – ನಿರ್ದೇಶನ

ಕಲ್ಪನಾ-೨ ರಲ್ಲಿ ಸಹಾ ಅಂಗವಿಕಲೆಯೊಬ್ಬಳನ್ನು ಮನೋವೇದನೆಯನ್ನು, ಅವರ ಸಂಕಟ, ಅಸಮಧಾನಗಳನ್ನು ತೆರೆದಿಡಲಾಗಿದೆ.

ತಾನೂ ಎಲ್ಲರಂತೆ ಮದುವೆಯಾಗಬೇಕು’ ಎಂದು ಬಯಸುವ ಕಲ್ಪನಾ ಪ್ರೀತಿಸಿದ ಹುಡುಗ ಜಡೆ ಶಿವ (ಉಪೇಂದ್ರ-೨) ಜೈಲು ಸೇರಿರುತ್ತಾನೆ.

ಅವಳಪ್ಪ ಮತ್ತೊಬ್ಬ ಹುಡುಗನೊಟ್ಟಿಗೆ ಮದುವೆ ಫಿಕ್ಸ್ ಮಾಡುತ್ತಾನೆ. ಕುತಂತ್ರಿಗಳಿಗೆ ಹೆದರಿದ ಹುಡುಗ ಹಸೆಮಣೆಯಿಂದ ಎದ್ದು ಮದುವೆಯನ್ನು ಧಿಕ್ಕರಿಸಿ ಹೊರಡುತ್ತಾನೆ.

ಕಲ್ಪನಾ-೨ ಚಿತ್ರದಲ್ಲಿ ಉಪೇಂದ್ರ ಹಾಗು ಪ್ರಿಯಾಮಣಿ
ಕಲ್ಪನಾ-೨ ಚಿತ್ರದಲ್ಲಿ ಉಪೇಂದ್ರ ಹಾಗು ಪ್ರಿಯಾಮಣಿ

ನಂತರ ಜೈಲಿನಿಂದ ಬಿಡುಗಡೆಯಾದ ಜಡೆ ಶಿವ ಇನ್ನೇನು ಆಕೆಯನ್ನು ಮದುವೆಯಾಗಬೇಕು ಎನ್ನುವಷ್ಟರಲ್ಲಿ ಕ್ರೂರಿಗಳ ಮೋಸಕ್ಕೆ ಬಲಿಯಾಗಿ ತನ್ನ ಹುಡುಗಿ ಸಮೇತ ಜೀವಬಿಡುತ್ತಾನೆ.

ಖಾಸಗಿ ವಾಹಿನಿಯಲ್ಲಿ ಕ್ಯಾಮೆರಾಮನ್ ಆಗಿ ಕಾರ್ಯನಿರ್ವಹಿಸುವ ರಾಘವ (ಉಪೇಂದ್ರ-೧) ಸ್ವಭಾವತಃ ಪರಮ ಪುಕ್ಕಲ, ಆದರೆ ಕಾರ್ಯಕ್ರಮವೊಂದರ ನಿರ್ದೇಶಕಿ ಅವಂತಿಕಾ ಶೆಟ್ಟಿ ಮೇಲಿನ ಪ್ರೀತಿಯ ಕಾರಣಕ್ಕೆ ಭೂತ ಬಂಗಲೆಯ ಕುರಿತ ಕಾರ್ಯಕ್ರಮ ಶೂಟ್ ಮಾಡಲು ತೆರಳುತ್ತಾನೆ.

ಅಲ್ಲಿ ಸತ್ತುಮಲಗಿದ ಕಲ್ಪನಾಳ ಪ್ರೇತ ಮತ್ತು ಜಡೆ ಶಿವನ ಆತ್ಮಗಳು ಒಟ್ಟು ಸೇರಿ ಈ ವಾಹಿನಿಯ ತಂಡದವರನ್ನು ಆಟಾಡಿಸಲು ಶುರು ಮಾಡುತ್ತವೆ.

ಈ ಪ್ರೇಮಿ ಪ್ರೇತಗಳಿಂದ ಎಲ್ಲರೂ ಹೇಗೆ ಪಾರಾಗುತ್ತಾರೆ ಅನ್ನೋದರ ನಡುವೆ ಭಯಂಕರ ಹಾರರ್ ಸನ್ನಿವೇಶಗಳೂ, ಕಾಮಿಡಿ ದೃಶ್ಯಗಳೂ, ಸೆಂಟಿಮೆಂಟೆಲ್ಲವೂ ಬಂದುಹೋಗುತ್ತವೆ.

ಕಲ್ಪನಾ-೨ ಪಾತ್ರವರ್ಗ ಹಾಗು ನಟನೆ

ಪ್ರಿಯಾಮಣಿ ಅಂಗವಿಕಲೆಯ ಪಾತ್ರದಲ್ಲಿ ಮನೋಜ್ಞವಾಗಿ ನಟಿಸಿದ್ದಾರೆ.

ಎರಡೋ ಮೂರೋ ದೃಶ್ಯಗಳಲ್ಲಿ ಕಂಡರೂ ನಟ ಪೆಟ್ರೋಲ್ ಪ್ರಸನ್ನ ನಟನೆ ಫೆಂಟಾಸ್ಟಿಕ್. ಪ್ರಕಾಶ್ ಹೆಗ್ಗೋಡು, ಮುನಿ, ಕುರಿ ರಂಗ, ಕುರಿ ಪ್ರತಾಪ, ಶೋಭರಾಜ್ ಎಲ್ಲರೂ ಎಷ್ಟೋ ಅಷ್ಟು ನಟಿಸಿದ್ದಾರೆ.

ಅವಂತಿಕಾ ತಮ್ಮ ಅಭಿನಯದಿಂದ ಮನ ಸೆಳೆಯುತ್ತಾರೆ.

ಈ ಚಿತ್ರದ ಕಲಾನಿರ್ದೇಶನ ಮಾಡಿರುವ ಬಾಬು ಖಾನ್ ಅವರಿಗೆ ಒಂದು ಮಾರ್ಕು ಹೆಚ್ಚೇ ನೀಡಬಹುದು.

ಚಿತ್ರದ ಮೊದಲರ್ಧ ವೇಗವಾಗಿದೆ ಅನಿಸಿದರು, ಉಳಿದರ್ಧ ಭಾಗ ಸ್ವಲ್ಪ ಹದ ತಪ್ಪಿದೆ  ಹಾಗು ಜಾಳು ಎನಿಸುತ್ತದೆ.

ಕ್ಲೈಮ್ಯಾಕ್ಸ್ ಹಾಡಿನ ಸೆಟ್ ಅಂತೂ ಸಖತ್ತಾಗಿದೆ. ಎಂ.ಆರ್.ಸೀನು ಕ್ಯಾಮೆರಾ ಕೂಡಾ ಸುಂದರವಾಗಿದೆ.

ಅರ್ಜುನ್ ಜನ್ಯ ಅವರ ಸಂಗೀತ ಮತ್ತು ಹಿನ್ನೆಲೆ ಸ್ವಲ್ಪ ಜಾಸ್ತಿ ಅನಿಸುತ್ತೆ. ನಿರ್ದೇಶಕರ ಬಗ್ಗೆ ಹೆಚ್ಚು ಹೇಳುವ ಅಗತ್ಯವಿಲ್ಲ. ಹೆಚ್ಚೂ ಕಮ್ಮಿ ಫ್ರೇಮ್ ಟು ಫ್ರೇಮ್ ಮೂಲ ಸಿನಿಮಾವನ್ನೇ ಯಥಾವತ್ತಾಗಿ ಇಳಿಸಿದ್ದಾರೆ ಎನ್ನಬಹುದು .

ಒಟ್ಟಾರೆ ಪರಿಪೂರ್ಣ ಮನರಂಜನಾ ಸಿನಿಮಾ ಇದಾಗಿದೆ.

ನೀವು ಚಿತ್ರ ನೋಡಿದಿರಾ? ಹೌದಾದರೆ ನಿಮ್ಮ ಅಭಿಪ್ರಾಯವನ್ನು ಕಾಮೆಂಟ್ ನಲ್ಲಿ ತಿಳಿಸಿ , ಧನ್ಯವಾದಗಳು.

ಸಿನಿಮಾ ಹಾಗು ಮನರಂಜನೆ ಸುದ್ದಿಗಳನ್ನು ಓದಲು ಸಿನಿಅಡ್ಡ.ಕಂ ಫಾಲೋ ಮಾಡಿ.

Like Us, Follow Us !

122,699FansLike
1,826FollowersFollow
1,409FollowersFollow
2,513SubscribersSubscribe

Trending This Week