22.5 C
Bangalore, IN
Friday, October 19, 2018
Home ಸಿನಿಮಾ ನ್ಯೂಸ್

ಸಿನಿಮಾ ನ್ಯೂಸ್

CiniAdda.com -  Kannada New Movies

  • Get latest Kannada New Movies & Films Releases from CiniAdda.com.
  • Trailers & Teasers.
  • Reviews & Ratings

ಕಣ್ಬಿಟ್ಟು ನೋಡು ಕಾಣ್ತಾನೆ ಸಕತ್ “ಸಂತು”

ಸಾಕಷ್ಟು ವಿವಾದಗಳ ಜೊತೆ ಜೊತೆಗೆ ಬಿಡುಗಡೆಯಾದ ಕನ್ನಡದ ಸಿನಿಮಾ ಸಂತು. ಕನ್ನಡದಲ್ಲಿ ಹವಾ ಕ್ರಿಯೇಟ್ ಮಾಡಿರೋ ರಾಕಿಂಗ್ ಸ್ಟಾರ್ ಯಶ್ ಅಭಿನಯಿಸಿದರುವ ಈ ಚಿತ್ರ ಅಬ್ಬರದ ಫೈಟಿಂಗ್ ಹಾಗೂ ಕಲರ್ ಫುಲ್ ಡೈಲಾಗ್ ಗಳ ಮೂಲಕ ಗಮನಸೆಳೆದಿದೆ. ಯಶ್ ನನ್ನು ಫಾಲೋ ಮಾಡುವ ಯುವಕ ಯುವತಿಯರು ಈ ಸಂತು ಸಿನಿಮಾ ನೋಡಿ ಫಿದಾ ಆಗೋದಂತು ಗ್ಯಾರಂಟಿ. ಇನ್ನು ಯಶ್ ಅಭಿಮಾನಿಗಳಲ್ಲದಿದ್ದರೂ ಅಕಸ್ಮಾತ್ ಸಿನಿಮಾ ನೋಡಿದ್ರೆ, ನಷ್ಟವಂತೂ ಆಗಲ್ಲ. ನೀವು ಕೊಟ್ಟ ಹಣಕ್ಕೆ ಭರಪೂರ ಮನರಂಜನೆ ಇದೆ. ಆದ್ರೆ ನೀವು ಮನಸ್ಸು ಬಿಚ್ಚಿ ಎಂಜಾಯ್ ಮಾಡ್ಬೇಕು ಅಷ್ಟೆ. ಮೊದಲಾರ್ಧ ಸಿನಿಮಾ ಮುಗಿಯೋದೇ ಗೊತ್ತಾಗಲ್ಲ ಅಷ್ಟೊಂದು ಮಜಾ ಕೊಡುವ ಮಾತುಗಳಿವೆ. ಸಂತು, ಅನನ್ಯ ಹಿಂದೆ ಬೀಳೋದು. ಅವಳು ಕಳ್ಳಿ ಎಂದುಕೊಳ್ಳೋದು, ಅದೇ ಸಮಯಕ್ಕೆ ಸಂತು ಹಾಗೂ ಆತನ ಸ್ನೇಹಿತನನ್ನ ಇವನು ರೇಪಿಸ್ಟ್ ಅಂತಾ ತಿಳಿದುಕೊಳ್ಳೋದು ವಿಭಿನ್ನ ರೀತಿಯ ಥಿಂಕಿಂಗ್ ನಡೆದಿದೆ. ಯಶ್ ಹಾಗೂ ರಾಧಿಕಾ ಪಂಡಿತ್ ಕೆಮಿಸ್ಟ್ರೀ ಚೆನ್ನಾಗಿದೆ. ಕೆಲವೊಂದು ಡೈಲಾಗ್ಗಳು ಯಶ್ ಗೋಸ್ಕರನೇ ಬರೆದಿರೋದು ಅನ್ನಿಸಿದ್ರೆ, ಇನ್ನೂ ಕೆಲವು ಕಡೆ ಸ್ಯಾಂಡಲ್ವುಡ್ ನ ಹೀರೋಗಳ ಬಗ್ಗೆಯೂ ಇರಬಹುದು ಅನ್ನಿಸುತ್ತದೆ. ಇದೆಲ್ಲಾ ಗಿಮಿಕ್ ಗಳು ಯಶ್ ಅಭಿಮಾನಿಗಳಿಗಾಗಿ ಮಾಡಿದ್ದು, ಚಿತ್ರ ಬಿಲ್ಡಪ್ ಮೇಲೇಯೇ ಸಾಗುತ್ತೆ. ದ್ವಿತಿಯಾರ್ಧದಲ್ಲಿ ಮೊದಲಿಗೇ ಎಮೋಷನ್ ಕಥೆ ಇಟ್ಟು ಬಳಿಕ ಮತ್ತೆ ಹಳೇ ಟ್ರಾಕ್ ಗೆ ಕಥೆಯನ್ನು ಎಳೆದಿದ್ದಾರೆ. ಅನನ್ಯ ಸ್ನೇಹಿತೆ ಗರ್ಭಿಣಿಯಾಗಿದ್ದು ಹೆರಿಗೆ ಸಮಯದಲ್ಲಿ ಮುಷ್ಕಾನ್ ಮನೆಗೆಂದು ಹೊರಟರೆ ಅದೇ ರೈಲಿನಲ್ಲಿ ಸಂತು ಕೂಡ ಹೋಗುವುದು ಅಲ್ಲಿ ನಡೆಯುವ ಕೆಲವು ಕಾಮಿಡಿ ದೃಶ್ಯಗಳು ಕಚಗುಳಿ ಇಡೋದ್ರಲ್ಲಿ ಅನುಮಾನವಿಲ್ಲ. ಮುಷ್ಕಾನ್ ಗಂಡನಿಗೆ ಪ್ರೀತಿ ಅನ್ನೋದೇನು? ಹೆಂಡ್ತಿಯನ್ನು ಹೇಗೆ ನೋಡಿಕೊಳ್ಳಬೇಕು? ಅನ್ನೋ ಬಗ್ಗೆ ಸಂತು ಇನ್ ಡೈರೆಕ್ಟ್ ಆಗಿ ಹೇಳಿಕೊಡೋದು. ಹೆರಿಗೆ ಸಮಯದಲ್ಲಿ ಮುಷ್ಕಾನ್ ಗಂಡನ ಕೈಲಿ ಅನನ್ಯಗೆ ಹೇಳಬೇಕಿದ್ದ ಮಾತುಗಳನ್ನು ಮುಷ್ಕಾನ್ ಗೆ ಹೇಳಿಸಿ ನೀರಿನಲ್ಲಿ ಹೆರಿಗೆ ಮಾಡಿಸೂದು ಹೊಸತನದಿಂದ ಕೂಡಿದೆ.. ಅಲ್ಲಿಂದ ಕೊನೆಭಾಗಕ್ಕೆ ಬಂದ್ರೆ ಮತ್ತದೇ ಹೊಡೆದಾಟ ಬಡಿದಾಟ.. ಅನನ್ಯನನ್ನು ಮದ್ವೆಯಾಗ್ಬೇಕು ಅಂತ ಹೊಂಚು ಹಾಕಿದ್ದ ಆಕೆಯ ಮಾವ ದೇವನಿಗೆ ಸವಾಲು ಹಾಕಿ ಮದ್ವೆ ಮನೆಯಲ್ಲೇ ಇದ್ದುಕೊಂಡು ತನ್ನವರನ್ನು ಉಳಿಸಿಕೊಂಡು ಹುಡುಗಿಯನ್ನೂ ಪಡೆದುಕೊಳ್ಳುವ ಯಶ್, ತಾಳಿಕಟ್ಟುವ ವೇಳೆ ಎಲ್ಲವನ್ನೂ ನಾನೇ ಮಾಡಿಸಿದ್ದು, ಯಾವ ಹೊಡೆದಾಟ ಬಡಿದಾಟವನ್ನೂ ಮಾಡಲಿಲ್ಲ ಅಂತಾ ಸಿನಿಮಾದೊಳಗೆ ಮತ್ತೊಂದು ಕಥೆ ಕಟ್ಟಿರೋದು ಮನಸ್ಸಿಗೆ ಮುದ ನೀಡಲಿದೆ.. ಕೆಲವೊಂದು ಭಾಗಗಳಲ್ಲಿ ಸಿನಿಮಾ ಸ್ಟೋರಿ ಹಿಡಿತ ತಪ್ಪಿದ್ದು ಮುಂದಿನ ಭಾಗವನ್ನು ಪ್ರೇಕ್ಷಕರೇ ಊಹೆ ಮಾಡಬಹುದು ಯಾಕಂದ್ರೆ ಹಲವು ಸಿನಿಮಾಗಳಲ್ಲಿ ಜನ ನೋಡಿದ್ದಾರೆ.. ಇಷ್ಟೆಲ್ಲಾ ಹೇಳಿದ ಮೇಲೆ ಸಂತು ಸಿನಿಮಾದ ನೆಗೆಟಿವ್ ಪಾಯಿಂಟ್ ಕೂಡ ಹೇಳ್ಬೇಕು..

1) ಮೊದಲರ್ಧ ಭಾಗದಲ್ಲಿ ಹೀರೋನನ್ನು ಬಿಲ್ಡಪ್ ಕೊಟ್ಟು ಮತ್ತಷ್ಟು ಎತ್ತರಕ್ಕೆ ಏರಿಸಲು ಯತ್ನಿಸಿರೋದು ಕೆಲವು ಕಡೆ ಕೆಲವರಿಗೆ ಕಿರಿಕಿರಿ ಎನಿಸಬಹುದು.
2) ಮೊದಲು ಒಂದು ಸೀನ್ ನಲ್ಲಿ ಕಾಣಿಸುವ ಪೊಲೀಸ್ ಅಧಿಕಾರಿ ಮತ್ತೆ ಸಿನಿಮಾದ ಯಾವ ಫ್ರೇಮ್ ನಲ್ಲೂ ಬರೋದಿಲ್ಲ. ಅಷ್ಟೊಂದು ಅನ್ಯಾಯ ನಡೀತಿದ್ರು, ಸರ್ಕಾರ ಏನ್ಮಾಡ್ತಿತ್ತು ಅನ್ನೋ ಪ್ರಶ್ನೆ ಮೂಡುತ್ತೆ.
3) ಸಾಂಗ್ ಗಳು ಸಿಂಕ್ ಆಗುವ ಹಾಗೆ ಇರಲಿಲ್ಲ. ಸಂದರ್ಭಗಳನ್ನು ಕ್ರಿಯೇಟ್ ಮಾಡುವಾಗ ತಪ್ಪಾಗಿದೆ. ಕಡೆಯ ಎರಡು ಸಾಂಗ್ ಗಳ ಬಳಕೆ ಆಗಿದೆ..
4) ಸಾಮಾಜಿಕ ಜವಾಬ್ದಾರಿ ಬಗ್ಗೆ ಸಿನಿಮಾದಲ್ಲೇ ಮೊದಲು ಮಾತನಾಡುವ ಹೀರೋ, ಸಿನಿಮಾದಲ್ಲಿ ಯಾವುದೇ ಸಾಮಾಜಿಕ ಜವಾಬ್ದಾರಿ ಮೆರೆದಿದ್ದು ಕಂಡುಬಂದಿಲ್ಲ. ಹುಡುಗಿಗಾಗಿ ಕಾನೂನಿಗೂ ಬೆಲೆ ಕೊಡದೆ ಸರ್ವಾಧಿಕಾರಿ ವರ್ತನೆ ನಡೆದಿದೆ.
5) ತಂದೆ ದೇವರಾಜ್ ಕೈಯಲ್ಲೂ ಯಶ್ ಗೆ ಬಿಲ್ಡಪ್ ಕೊಡಿಸುವ ಕೆಲಸ ಮಾಡಿದ್ದಾರೆ. ಯಾವುದೇ ಮನೆಯಲ್ಲಿ ತಂದೆ ಅಥವಾ ತಾಯಿ ಮಗನನ್ನು ಸರಿದಾರಿಗೆ ತರುವ ಕೆಲಸ ಮಾಡಬೇಕಿದ್ದು ಇಲ್ಲಿ ಆ ಕೆಲಸ ಆಗಿಲ್ಲ.

ಕೊನೆ ಮಾತು: ತಾರಾಗಣದಲ್ಲಿ ಕಾಣಿಸಿಕೊಂಡಿರುವ ಎಲ್ಲರ ಅಭಿನಯವೂ ಉತ್ತಮವಾಗಿದ್ದು, ಒಮ್ಮೆ ಸಿನಿಮಾ ನೋಡಿ ಮನಸ್ಸನ್ನು ಹಗುರ ಮಾಡಿಕೊಳ್ಳಬಹುದು.. ಕೊಟ್ಟ ಕಾಸಿಗೆ ಮೋಸವಿಲ್ಲ..

ಸರ್ವಸಮರ್ಥ, ನಾಗಮಂಗಲ

“ಕಿರಿಕ್ ಪಾರ್ಟಿ “ಗೆ ಬಂದ್ರು ಉಪೇಂದ್ರ ಏನಂದ್ರು ?

“ಕಿರಿಕ್ ಪಾರ್ಟಿ ” ಕೆಲವರಿಗೆ ಅಳಿದುಳಿದ ಮತ್ತಲವರಿಗೆ ಅಳಿಯದೇ ಉಳಿದ ಕಾಲೇಜು ದಿನಗಳನ್ನ ನೆನಪಿಸುತ್ತಾ, ಹರೆಯದ ಮನಸ್ಸುಗಳಿಗೆ ಓಹೋ ನಮ್ಮದೇ ಕಥೆ ಅಂತ ಕುಣಿಸುವ ಕೆಲಸಕ್ಕೆ ಕೈ ಹಾಕಿದೆ. ಯವ್ವನ ಉಕ್ಕುವ ದಿನಗಳಲ್ಲಿ ಅದೂ ಹುಡುಗರು ಆಡುವ ಆಟಗಳು , ಕೊಡುವ ಕಾಟಗಳು, ಮಾಡುವ ತಲೆಹರಟೆಗಳು ಒಂದೇ ಎರಡೇ .ಅಪ್ಪ ಅಮ್ಮನಿಗೆ ಸುಳ್ಳು ಹೇಳಿ ಕಾಸು ಗಿಟ್ಟಿಸಿಕೊಳ್ಳುವುದರಿಂದ ಹಿಡಿದು , ಮೊದಲ ಹುಡುಗಿಯನ್ನ ಪಟಾಯ್ಸಿ, ಪಲ್ಟಿ ಹೊಡೆಸಿ , ಅವಳಿಗಾಗಿ ಎರಡೆರಡು ಗುಂಪುಗಳು ಕಿತ್ತಾಡಿ, ಫೈಟಿಂಗ್ ಮಾಡಿ ಪೌರುಷ ತೋರಿಸಿ ,ಕ್ಲಾಸಿಗೆ ಚಕ್ಕರ್ ಹೊಡೆದು, ಮೇಷ್ಟ್ರಿಗೆ ಚಳ್ಳೆ ಹಣ್ಣು ತಿನ್ನಿಸಿ , ಜ್ಯೂನಿಯರ್ಗಳನ್ನ ಗುರಾಯ್ಸಿ,ಸೀನಿಯರ್ಗಳಿಗೆ ಸಲಾಂ ಹೊಡೆದು ಹೀಗೆ ಎಷ್ಟೆಲ್ಲಾ ಸಾಹಸಕ್ಕೆ ,ಸರಸಕ್ಕೆ ಕಾಲೇಜು ಅನ್ನೋ ಕಲರ್ ಕಲರ್ ರಂಗ ಸಾಕ್ಷಿ ಅಲ್ವಾ.

ಇಂಥಾ ಬಿಸಿಬಿಸಿ ದಿನಗಳ , ಹಸಿಹಸಿ ಭಾವಗಳ, ಬಣ್ಣ ಬಣ್ಣದ ,ಕಿರಿಕಿರಿ ಪಿರಿಪಿರಿಗಳ ಕಥೆ ಇದು ನೋಡೋಕೆ ಮಜವಿದು ಅಂತ “‘ಕಿರಿಕ್ ಪಾರ್ಟಿ ” ಚಿತ್ರದ ಟ್ರೇಲರ್ ನೋಡ್ತಿದ್ದ ಹಾಗೆ ಅನ್ನಿಸುವುದುಂಟು . ಟ್ರೇಲರ್ ಬಿಡುಗಡೆ ಮಾಡಿದ ಉಪೇಂದ್ರ ಕೂಡ ನನಗೆ ಮತ್ತೆ ಕಾಲೇಜಿಗೆ ಹೋಗಬೇಕು ಅನ್ನಿಸುತ್ತಿದೆ. ಟ್ರೈಲರ್ ನೋಡಿದ್ರೆ ಸಿನಿಮಾ ಚೆನ್ನಾಗಿ ಮಾಡಿದ್ದಾರೆ ಅನ್ಸತ್ತೆ . ಮ್ಯೂಸಿಕ್ ಚೆನ್ನಾಗಿದೆ. ಇಬ್ಬರು ಹೀರೋಯಿನ್ ಗಳು ಚೆನ್ನಾಗಿದ್ದಾರೆ. ನನಗು ಈ ರಕ್ಷಿತ್ ಶೆಟ್ಟಿಗೂ ಏನು ವ್ಯತ್ಯಾಸ ಅಂದ್ರೆ ನಾನು ಹೀರೋ ಆಗ್ಬೇಕು ಅಂತ ಸ್ಕ್ರಿಪ್ಟ್ ಬರೆದು, ಡೈರೆಕ್ಟ್ ಮಾಡಿ , ಎಲ್ಲ ಥರ ಒದ್ದಾಡಿ ಹೀರೋ ಆದೆ. ಆದ್ರೆ ಇವ್ರು ಹೀರೋ ಆಗಿರೋದೇ ಡೈರೆಕ್ಟ್ ಮಾಡಕ್ಕೋಸ್ಕರ . ಮುಂದೆ ಏನ್ ರಕ್ಷಿತ್ ಅಂದ್ರೆ ೨-೩ ಸಿನಿಮಾದಲ್ಲಿ act ಮಾಡ್ತಿದೀನಿ ಅದಾದ ಮೇಲೆ ಒಂದು ಸಿನಿಮಾ ಡೈರೆಕ್ಟ್ ಮಾಡ್ಬೇಕು ಅಂತಾರೆ. ಅದ್ರಲ್ಲೂ ಡೈರೆಕ್ಟ್ ಅನ್ನೋದನ್ನ ಸ್ಟ್ರೆಸ್ ಮಾಡ್ತಾರೆ. ಇನ್ನೊಂದು ಕಡೆ ಈ ರಿಷಬ್ ಶೆಟ್ಟಿ ಕಾಲೇಜಲ್ಲಿ ತುಂಬಾ ಹೊಡೆದಾಡ್ತಿದ್ವಿ ಇಲ್ಲಿ ಏನಾದ್ರೂ ಸಾಧಿಸೋಣ ಅಂತ ಬಂದಿದ್ದೀವಿ ಅಂತಾರೆ. ಆದ್ರೆ ಇಲ್ಲಿ ಸಿಕ್ಕಾಪಟ್ಟೆ ಬಡಿದಾಡಬೇಕ್ರಪ್ಪ ಅನ್ನುವ ಕಿವಿಮಾತನ್ನು ಹೇಳಿದ್ರು. ಅಷ್ಟೇ ಅಲ್ಲದೆ ಈ ಆಲದ ಮರ ತನ್ನ ಬಿಳಿಲುಗಳನ್ನ ಎಷ್ಟು ವಿಸ್ತಾರವಾಗಿ ಹಬ್ಬಿಸುತ್ತೆ ಅಂದ್ರೆ ನಾವ್ ಆಮೇಲೆ ಮೂಲ ಮರ ಹುಡುಕೋದೇ ಕಷ್ಟ ಅದೇ ಆಲದ ಹೆಗ್ಗಳಿಕೆ . ನೀವು ಹಾಗೆ ಬೆಳೀಬೇಕು ,ಹಬ್ಬಿಕೊಳ್ಳಬೇಕು .ನಿಮ್ಮನ್ನ ನೋಡಿ ಇನ್ನಷ್ಟು ಜನ ಚಿತ್ರರಂಗಕ್ಕೆ ಬರಬೇಕು . ಕಿರಿಕ್ ಪಾರ್ಟಿ ದೊಡ್ಡ ಹಿಟ್ ಆಗ್ಬೇಕು ಅಂತ ರಿಯಲ್ ಸ್ಟಾರ್ ಉಪೇಂದ್ರ ರಿಯಲ್ ಸ್ಟೈಲಲ್ಲಿ ಹಾರೈಸಿದ್ರು.

ನಿರ್ದೇಶಕ ರಿಷಬ್ ಹಾಗು ನಾಯಕ ರಕ್ಷಿತ್ ಶೆಟ್ಟಿ ಪ್ರಕಾರ ಇದು ಸಂಗೀತಮಾಯವಾದ ಮನೋರಂಜನಾ ಚಿತ್ರ . ಥ್ಯಾಕ್ಸ್ ಹೇಳಿ ವಯಸ್ಸಿಗೆ ಅಂತ ಎಲ್ಲರೂ ಖುಷಿಯಾಗಿ ನೋಡಬಹುದಾದ ಸಿನಿಮಾ .

ಪತ್ರಿಕೆಯೊಂದರ ಸ್ಪರ್ಧೆಯಲ್ಲಿ ಗೆದ್ದು ರಿಷಬ್ ಕಣ್ಣಿಗೆ ಬಿದ್ದ ಕೊಡಗಿನ ಬೆಡಗಿ ರಶ್ಮಿಕಾಗೆ ಸ್ಪಷ್ಟ ಕನ್ನಡ ಬಾರದಿದ್ರೂ ಕಿರಿಕ್ ಪಾರ್ಟಿ ಯಲ್ಲಿ ಕಿರಿಕ್ ಮಾಡದೆ ನಿರ್ದೇಕರು ಕಲಿಸಿದಂತೆ ಕಲಿತು ತಾವೇ ಡಬ್ ಕೂಡ ಮಾಡಿದ್ದಾರಂತೆ. . ಅರಳು ಉರಿದಂತೆ ಮಾತಾಡುವ ಮತ್ತೊಬ್ಬ ನಾಯಕಿ ಸಂಯುಕ್ತ ಉಪೇಂದ್ರರ ಪಕ್ಕಾ ಫ್ಯಾನ್ !!ಅದರಲ್ಲೂ ಅವ್ರ ಹೇರ್ ಸ್ಟೈಲ್ ಕಾಪಿ ಹೊಡೆಯೋದ್ರಲ್ಲಿ ಎಕ್ಸ್ಪರ್ಟ್ . ರಿಷಬ್ ,ರಕ್ಷಿತ್ ತಂಡದಲ್ಲಿ ಕೆಲಸ ಮಾಡಿದ ಖುಷಿಯಲ್ಲಿದ್ದಾರೆ.

ಸಂಭಾಷಣಕಾರರಾದ ಅಭಿಜಿತ್ ಮಹೇಶ್, ಧನಂಜಯ್ (೩ ಹಾಡುಗಳನ್ನು ಬರೆದಿದ್ದಾರೆ.) ಎಡಿಟರ್ ಸಚಿನ್ ಹೀಗೆ ಒಟ್ಟಾರೆ ಇಡೀ ತಂಡಕ್ಕೆ ಚಿತ್ರದ ಬಗ್ಗೆ ಹೆಮ್ಮೆ ಇದೆ.

ಮುಂದಿನ ತಿಂಗಳು ಕಿರಿಕ್ ಪಾರ್ಟಿಯ ಹಾಡುಗಳನ್ನ ಕೇಳಿಸಿ, ಡಿಸಂಬರ್ ನಲ್ಲಿ ತೆರೆಯ ಮೇಲೆ ಚಿತ್ರ ಹರಿಸಿ ಸಿನಿ ರಸಿಕರ ಮನಗೆಲ್ಲುವ ಉತ್ಸಾಹದಲ್ಲಿದೆ ಉಳಿದವರು ಕಂಡಂತ ಪ್ರತಿಭಾವಂತರ ತಂಡ .

ಶುಭಾಪುಂಜ ಮದುವೆಯಂತೆ … ಊರಲ್ಲೆಲ್ಲಾ ಸುದ್ದಿಯಂತೆ

ಆಗತಾನೆ ಮಾಂಗಲ್ಯ ಧಾರಣೆ ಆಗಿ ಹೊರಬಂದ ಮದುಮಕ್ಕಳಂತಿದ್ದ ಶುಭಾಪುಂಜ ,ನಾಗೇಂದ್ರ ಪ್ರಸಾದ್ ಫೋಟೋ ಹರಿದಾಡುತ್ತಿದ್ದ ಹಾಗೆ ಹಾ… ಶುಭಾಪುಂಜ ಮದುವೆ ಆದ್ರಾ ?ಅದೂ ನಾಗೇಂದ್ರ ಪ್ರಸಾದ್ ಜೊತೆ !? ಅಲ್ಲಾ ಅವ್ರಿಗೆ ಮದುವೆ ಆಗಿತ್ತಲ್ಲ . ಎರಡನೇ ಮದುವೆ ಯಾಕ್ ಮಾಡ್ಕೊಂಡ್ರು ನಾಗೇಂದ್ರ ಪ್ರಸಾದ್ ? ಅವರಿಬ್ಬರು ಒಟ್ಟಿಗೆ ಓಡಾಡಿದ್ದು ,ಲವ್ ಗಿವ್ ಏನೂ ಸುದ್ದಿ ಇರ್ಲಿಲ್ವಲ್ಲ . ಇದ್ದಕ್ಕಿದ್ದ ಹಾಗೆ ಇದೇನಪ್ಪ ಕಥೆ ? ಇದು ಸಿನಿಮಾ ಮಂದಿಯ ಹಲವರ ಪ್ರಶ್ನೆ ಆದ್ರೆ ಕೆಲವರು ಅದರಲ್ಲೂ ಸುಧೀಂದ್ರ ವೆಂಕಟೇಶ್ ಇದು ನಿಜದ ಮದುವೆ ಆಗಿರಲಿಕ್ಕಿಲ್ಲ ಯಾವುದಾದ್ರೂ ಸಿನಿಮಾದ ದೃಶ್ಯ ಇರಬಹುದಾ ಚೆಕ್ ಮಾಡಿ ನೋಡಿ ಅಂತಿದ್ರು .

ಇತ್ತ ನಾಗೇಂದ್ರ ಪ್ರಸಾದರ ಹಾಡುಗಳನ್ನ ಸವಿದ , ಶುಭ ಅಭಿನಯ ,ಅಂದ ಚೆಂದಕ್ಕೆ ಬೆರಗಾದ ಅಭಿಮಾನಿಗಳು ಅಯ್ಯಯ್ಯೋ ಅದ್ಯಾಕೆ ಹಂಗ್ ಮಾಡ್ಕೊಂಡರಂತೆ ? ನಮ್ ನಾಗೇಂದ್ರಪ್ರಸಾದ್ ಹೀಗ್ ಮಾಡಬಾರದಿತ್ತಪ್ಪ ಛೆ .. ಛೆ.. ಅನ್ನುವುತ್ತಿರುವಾಗಲೇ ತಡೀರಪ್ಪ ಹೇಳಿದ್ದು ಸುಳ್ಳಾಗಬಹುದು , ಕೇಳಿದ್ದು ಸುಳ್ಳಾಗಬಹುದು ನಿಧಾನಿಸಿ ಯೋಚಿಸಿದಾಗ ನಿಜವು ತಿಳಿವುದು ಅಂತ ciniadda.com ನಾಗೇಂದ್ರ ಪ್ರಸಾದ್ ಸಂಪರ್ಕಕ್ಕೆ ಹೋದಾಗ ಅವರಾಗಲೇ ಸುಸ್ತಾಗಿ ಹೋಗಿದ್ರು.

ಆಗಿದ್ದಿಷ್ಟು..

ಮೈಸೂರು ರಸ್ತೆಯಲ್ಲಿರೋ ಗಾಳಿ ಆಂಜನೇಯನ ಗುಡಿಯಲ್ಲಿ ಇವತ್ತು ಮದುವೆ ಆಯ್ತು ಆದ್ರೆ ಅದು ನನ್ನ ಇನ್ನೂ ಹೆಸರಿಡದ ಹೊಸ ಚಿತ್ರದ ದೃಶ್ಯ. ಶೂಟಿಂಗ್ ನಡೆಯೋವಾಗ ಯಾರೋ ಫೋಟೋ ತೆಗೆದು ಸಾಮಾಜಿಕ ಜಾಲತಾಣದಲ್ಲಿ ಹಾಕಿದ್ದಾರೆ ಅಷ್ಟೆ . ಈಗ ೪೦ ಪರ್ಸೆಂಟ್ ಚಿತ್ರೀಕರಣ ಮುಗಿದಿದೆ. ಪಕ್ಕಾ ಕೌಟುಂಬಿಕ ಸಿನಿಮಾ . ಇಲ್ಲಿ ನಗು ,ದುಃಖ ,ಸುಖ ಎಲ್ಲಾ ಇದೆ. ನನ್ನದೇ ಡೈರೆಕ್ಷನ್ನು.ಚಿತ್ರ ಕಥೆಯೂ ನನ್ನದೇ . ನಾನೇ ನಾಯಕ. ಮತ್ತೊಂದು ಯುವ ಜೋಡಿಯೂ ಇದೆ. ಅಮೃತ ಹಾಗು ದೀಪಕ್ . ಬದುಕೇ ಈ ಚಿತ್ರದ ಜೀವಾಳ ನನ್ನ ಇನ್ಸ್ಪಿರೇಷನ್ ಅಂದ್ರು.
ಜೊತೆಗೆ ಶುಭಾ ಅವ್ರ ಜೊತೆ ಮದುವೆ ಅದ್ರಂತೆ ನಿಜವೆ ? ಅಂತ ಕೇಳಿದವರಿಗೆಲ್ಲಾ ಉತ್ತರ ಹೇಳಿ.. ಹೇಳೀ.. ಸುಸ್ತಪ್ಪಾ ಸುಸ್ತು ಅಂದ್ರು.

ಇದೀಗ ಲೊಕೇಶನ್ ನೈಸ್ ರೋಡ್ಗೆ ಶಿಫ್ಟ್ ಆಗಿದೆ.ಶೂಟಿಂಗ್ ಭರದಿಂದ ಸಾಗುತ್ತಿದೆ . ಇದೆಲ್ಲ ಗಾಳಿ ಆಂಜನೇಯನ ಮಹಿಮೆ ಇದ್ದರೂ ಇರಬಹುದೇನೋಪಾ . ಒಟ್ಟಿನಲ್ಲಿ ಶುಭಾ ವಿವಾಹ ಗಾಳಿಯಲ್ಲಿಆಡಿದ ಗಾಸಿಪ್ ಅಷ್ಟೆ .

ಏನೇ ಇರಲಿ ಸಿನಿಮಾ ಚೆನ್ನಾಗಿ ಮೂಡಿ ಬರಲಿ . ಶುಭವಾಗಲಿ .

ಗಾಂಧಿನಗರ ಖಾಲಿ ಮಾಡಿಸೋದು ಗೊತ್ತು – ಎಚ್ಡಿಕೆ

ನಮ್ಮೂರ ಹೈಕ್ಳು ಆಡಿಯೋ ರಿಲೀಸ್ಗೆ ಬಂದಿದ್ದ ಎಚ್ ಡಿ ಕುಮಾರಸ್ವಾಮಿ ಜಾಗ್ವಾರ್ ಜಾಗ ಖಾಲಿ ಮಾಡಿಸಲಿಕ್ಕೆ ಹಂಚಿಕೆದಾರರು ಸಂಚು ಹೂಡಿದ್ದಾರೆ ಅಂತ ಅರೋಪಿಸಿದ್ದಾರೆ.

“ಜಾಗ್ವಾರ್ ” ನ ಜನ ನೋಡ್ತಿದ್ದಾರೆ . ಸಿನಿಮಾ ಓಡ್ತಾ ಇದೆ. ಆದ್ರೂ ಥಿಯೇಟರ್ ಗಳಿಂದ ತೆಗೆದು ಹಾಕ್ತಾ ಇದ್ದಾರೆ.ಕೆಲವರು ತಮ್ಮದೇ ರಾಜ್ಯಭಾರ ಮಾಡ್ತಾ ಇದ್ದಾರೆ. ಈ ಮೊನೊಪಾಲಿಯನ್ನ ಬ್ರೇಕ್ ಮಾಡಲಿಕ್ಕೆ ಅಂತಾನೆ ಮತ್ತೆ ಸಿನಿಮಾಕ್ಕೆ ಬಂದಿದ್ದೇನೆ. ಮತ್ತೆ distribution office ಶುರುಮಾಡ್ತೀನಿ.ಅವತ್ತು ಅವ್ರು ಏನೂ ಆಗಿರದಿದ್ದ ಕಾಲದಲ್ಲಿ ನನ್ನ ಚಂದ್ರಚಕೋರಿ ಚಿತ್ರವನ್ನ ಅವ್ರಿಗೆ ಫ್ರೀ ಆಗೇ ಕೊಟ್ಟಿದ್ದೆ. ಇವತ್ತು ದೊಡ್ಡದಾಗಿ ಬೆಳೆದಿದ್ದಾರೆ. ಕರ್ನಾಟಕದಲ್ಲಿ ೬೦ ಪರ್ಸೆಂಟ್ ಚಿತ್ರಮಂದಿರಗಳು ಅವರ ಕೈಯಲ್ಲೇ ಇವೆ. ನಿರ್ಮಾಪಕರಿಂದ ಬದುಕಿದ್ದೀರಿ ಅವ್ರ ಮನೆ ಹಾಳು ಮಾಡಬೇಡಿ. ಕನ್ನಡ ಸಿನಿಮಾಗಳನ್ನ ಕಿತ್ತು ತೆಲುಗು,ತಮಿಳು ಚಿತ್ರಗಳಿಗೆ ಜಾಗ ಕೊಡ್ತೀರಿ.ಇನ್ನು ನಾವು ಕೂರುವ ಪ್ರಶ್ನೆಯೇ ಇಲ್ಲ. ಸಣ್ಣ ಪುಟ್ಟ ನಿರ್ಮಾಪಕರನ್ನ ಆಟ ಆಡಿಸಿದ ಹಾಗೆ ನನ್ನನ್ನ ಆಡಿಸಲಿಕ್ಕೆ ಬರ್ಬೇಡಿ. ಈ ರಾಜ್ಯದಲ್ಲಿ ಇಷ್ಟೊಂದು ಜನ ಸಂಪಾದನೆ ಮಾಡಿದ್ದೇನೆ. ನಾನು ಹೆದರಿಕೊಳ್ತಿನಾ ? ನಿಮ್ಮನ್ನ ಗಾಂಧಿನಗರದಿಂದ ಖಾಲಿ ಮಾಡಿಸೋದು ಗೊತ್ತಿದೆ ನನಗೆ ಅಂತ ಹಂಚಿಕೆದಾರರ ಹೆಸರು ಹೇಳದೆ ಎಚ್ಡಿಕೆ ದಬಾಯಿಸಿದರು.

”ದೊಡ್ಮನೆ ಹುಡುಗ ” ನಡೆಯುತ್ತಿದ್ದ ಚಿತ್ರಮಂದಿರಗಳ ಕಡೆಗೆ ಹೋಗ್ಲೇ ಇಲ್ಲ ನಾನು. ಕನ್ನಡದ ಸಿನಿಮಾ ಓಡ್ಲಿ . ಆದ್ರೆ ಇನ್ಮೇಲೆ ೧೫೦-೨೦೦ ಕಡೆ ತೆಲುಗು, ತಮಿಳು ಬಿಡುಗಡೆ ಮಾಡೋ ಪ್ರಶ್ನೆನೇ ಇಲ್ಲ. ಹೀಗೆ ಜಾಗ್ವಾರ್ ಗೆ ಜಾಗ ಬಿಡದಿರುವ ಕೋಪದಲ್ಲಿ ಅಬ್ಬರಿಸಿರುವ ಕುಮಾರಸ್ವಾಮಿಯವರು ಕನ್ನಡ ಚಿತ್ರಗಳ ಪರವಾಗಿ ಎಷ್ಟರ ಮಟ್ಟಿಗೆ ನಿಲ್ತಾರೆ ಅನ್ನುವುದು ಕಾದು ನೋಡಬೇಕಾದ ವಿಷಯ. ಹಾಗೆಯೇ ಹಂಚಿಕೆದಾರರಿಂದ ಹೈರಾಣಾಗಿರುವ ಸಣ್ಣ ಸಣ್ಣ ನಿರ್ಮಾಪಕರಿಗೆ ವ್ಯವಸ್ಥೆ ಬದಲಾದ್ರೆ ಸಾಕಪ್ಪ ಅನ್ನೋ ನಿರೀಕ್ಷೆ ಇರೋದು ಸುಳ್ಳಲ್ಲ .

ರಾಮಾ ರಾಮಾ ರೇ …ಸೋಲಿಸಬ್ಯಾಡ ಗೆಲಿಸಯ್ಯಾ

ಕೆಲವು ಚಿತ್ರಗಳೇ ಹಾಗೆ ಮಾತು ಸಾಕು ಮಥಿಸು ಅಂದುಬಿಡುತ್ತವೆ. ರಾಮಾ ರಾಮಾ ರೇ ಕೂಡ ಅಂಥದ್ದೇ . ಸಿನಿಮಾ ನೋಡಿ ಎರಡು ದಿನವಾದ್ರು ಸನ್ನಿವೇಶಗಳು, ಪಾತ್ರಗಳು ಕಾಡುತ್ತಲೇ ಇವೆ. ನಾನಿಲ್ಲಿ ಇಡೀ ಚಿತ್ರದ ಚಿತ್ರವನ್ನು ಯಥಾವತ್ತಾಗಿ ಹೇಳುವುದಿಲ್ಲ. ನೀವು ನೋಡಿ ಅನುಭವಿಸಿದಾಗ್ಲೇ
ಅದರ ನಿಜವಾದ ದರ್ಶನ ನಿಮಗಾಗುವುದು.

ಒಂದು ಸಣ್ಣ ಹೊಡೆದಾಟ , ಬಡಿದಾಟದ ಸುದ್ದಿ ಸಿಕ್ಕರೂ ಬಗೆಬಗೆಯಲ್ಲಿ ಬಿತ್ತರಿಸುವ ಮಾಧ್ಯಮಗಳು ಅದ್ರಲ್ಲೂ ಸುದ್ದಿ ವಾಹಿನಿಗಳು ಗಲ್ಲು ಶಿಕ್ಷೆಗೆ ಗುರಿಯಾದ ಖೈದಿಯೊಬ್ಬ ಜೈಲಿನಿಂದ ಪರಾರಿಯಾದ ಸುದ್ದಿ ಸಿಕ್ಕ್ರೆ ಬಿಟ್ಟಾರೆಯೇ. ಯಾರ್ಯಾರ್ ಬಾಯಿಗೆ ಎಲ್ಲೆಲ್ಲಿ ಮೈಕ್ ಹಿಡೀತಾರೆ ಅನ್ನುವುದನ್ನ ತೆರೆ ಮೇಲೆ ಮಾಧ್ಯಮ ಮಿತ್ರರೇ ನೋಡಿದ್ರೂ ತಮ್ಮ ಕೆಲ್ಸಕ್ಕೆ ತಾವೇ ನಕ್ಕು ಬಿಡುವಂತೆ ದೃಶ್ಯ, ಹಾಡು(ನ್ಯೂಸ್ ನೋಡಿ..ನ್ಯೂಸ್ ನೋಡಿ..) ಕಟ್ಟಿರುವ ನಿರ್ದೇಶಕನ ಜಾಣ್ಮೆ ಮೆಚ್ಚಲೇ ಬೇಕು.

ಗಲ್ಲು ಶಿಕ್ಷೆಗೆ ಗುರಿಯಾದ ಸ್ಯಾಂಡಲ್ ರಾಜ ಜೀವದಾಸೆಯಿಂದ ಜೈಲಿನಿಂದ ಹಾರಿ ತಲೆಮರೆಸಿಕೊಳ್ಳಲು ತಿಣುಕಾಡುತ್ತಾನೆ. ಗೊತ್ತು ಗುರಿಯಿಲ್ಲದ ಪಯಣದಲ್ಲಿ ಟ್ರಕ್ ನಿಂದ ಜೀಪಿಗೆ ಸೇರುವ ತನಕ ಬಸ್ಸಿನಲ್ಲಿ ಕೂತಾಗ ಸರಿದು ಹೋಗುವ ದೃಶ್ಯಗಳಂತೆ ಸರಸರನೆ ಚಿತ್ರ ಸರಿದು ಹೋಗುತ್ತದೆ. ಅಲ್ಲಲ್ಲಿ ನಗ್ತಾ , ಇದೇನಿದು ಇವ್ನ್ ಕಥೆ ಅಂತ ಅವನ ಪಯಣದಲ್ಲಿ ನಾವೂ ಜೊತೆಯಾಗ್ತಾ ಅರ್ಧ ಸಿನಿಮಾ ನೋಡೇಬಿಟ್ಟಿರ್ತೀವಿ.

ಮಧ್ಯಂತರ ಮುಗಿದ ಮೇಲೆ ಪ್ರತೀ ಸಣ್ಣ ಸಣ್ಣ ದೃಶ್ಯಗಳು ನಮ್ಮನ್ನು ಕಲವುದಿಕ್ಕೆ ಶುರುವಿಟ್ಟು ಕೊಳ್ಳುತ್ತವೆ. ಚಿತ್ರ ಕಳೆಗಟ್ಟುತ್ತಾ ಕ್ಷಣಕ್ಷಣಕ್ಕೂ ಆವರಿಸಿಕೊಳ್ಳುತ್ತಾ ಹೋಗುತ್ತದೆ. ಎಲ್ಲಿಗೇ ಪಯಣ ಯಾವುದೋ ದಾರಿ ಅನ್ನುವಂತೆ ಅಲೆಯುವ ಕೈದಿಗೆ ಯಾರನ್ನೂ ನಂಬಲಾಗದ ಸ್ಥಿತಿ, ತಪ್ಪಿಸಿಕೊಂಡ ಸುದ್ದಿ ಹರಡಿ, ತನ್ನ ತಲೆಗೆ ಹತ್ತು ಲಕ್ಷ ಕಟ್ಟಿರುವಾಗ ಕಂಡವರು ಬಿಟ್ಟಾರೆಯೇ ಅನ್ನುವ ಮಡುಗಟ್ಟಿದ ಆತಂಕ, ಅನುಮಾನಗಳನ್ನ ಅಭಿವ್ಯಕ್ತಿಸುವ ಕಲೆಯಲ್ಲಿ ನಟರಾಜ್ ಅವರ ಅಭಿನಯಕ್ಕೆ ನೀವು ಮಣಿಯದೆ ವಿಧಿಯಿಲ್ಲ.

ಗಲ್ಲು ಶಿಕ್ಷೆಯ ನಿರ್ವಾಹಕ ರಾಮಣ್ಣನಿಗೆ ತನ್ನ ಜೀಪಿನಲ್ಲಿ ಪಕ್ಕದಲ್ಲಿ ಕುಳಿತಿರುವಾತ ಜೈಲಿನಿಂದ ಹಾರಿ ಬಂದ ಹಕ್ಕಿ ಅನ್ನುವುದು ತಿಳಿದಾಗ ಅದನ್ನು ಸೂಕ್ಷ್ಮವಾಗಿ ನಿಭಾಯಿಸುವ ರೀತಿ , ಸಣ್ಣ ಸಣ್ಣ ಹಾವಭಾವಗಳು ಈತ ನಿರ್ದೇಶಕನ ನಟ ಅನ್ನಿಸಿಡುತ್ತದೆ. ಪಾತ್ರ ಕಟ್ಟುವ ಸತ್ಯ ಪ್ರಕಾಶ್ ಸೂಕ್ಷ್ಮತೆ ಇಲ್ಲಿ ಎದ್ದು ಕಾಣುತ್ತದೆ.

ಪ್ರೀತಿಸಿದ ಹುಡುಗಿ ಸುಬ್ಬಿಯೊಂದಿಗೆ ಎಲ್ಲರನ್ನು ಎದುರು ಹಾಕಿಕೊಂಡು ಊರಿನಿಂದ ಓಡಿ ಬಂದು ಭಂಡತನದಿಂದ ರಾಮಣ್ಣನ ಜೀಪಿನಲ್ಲಿ ತೂರಿಕೊಳ್ಳುವ ಧರ್ಮನ ಉಡಾಫೆ, ಸ್ವಾರ್ಥದ ಪಾತ್ರದಲ್ಲಿ ಧರ್ಮ ಕಡೂರರ ಸಹಜ ಅಭಿನಯ ಇಷ್ಟವಾಗುತ್ತದೆ. ಅಪ್ಪನ ಹಣ ಕದ್ದು ನಿಯತ್ತಾಗಿ ಪತ್ರ ಬರೆದಿಟ್ಟು ,ಹರೆಯದ ಹುಮ್ಮಸ್ಸಿನಲ್ಲಿ ಪ್ರೀತಿಗೆ ಬೀಳುವ ಅಭಿನಯದಲ್ಲಿ ಬಿಂಬಶ್ರೀಯೂ ಇಷ್ಟವಾಗುತ್ತಾರೆ.

ಓಡಿ ಹೋದ ಜೋಡಿಯನ್ನ ಹಿಡಿಯಲು ಬೈಕಿನಲ್ಲಿ ಬಂದು ಬಾಟಲಿ ಕಂಡಾಕ್ಷಣ ಬಾಯ್ ಬಾಯ್ ಬಿಡುವ ನಟನೆಯಲ್ಲಿ ಮಠ ಮನಸ್ಸಿಗೆ ಇಳಿಯುತ್ತಾರೆ. ಪಾತ್ರ ಚಿಕ್ಕದಾದ್ರು ಚೊಕ್ಕತನವಿದೆ.

ಇಡೀ ಕಥೆ, ಸಿನಿಮಾ ಹರಳುಗಟ್ಟುವ ಹಂತವೆಂದರೆ ದಾರಿಯಲ್ಲಿ ಆಟೋ ಕೆಟ್ಟು ಹೆರಿಗೆ ನೋವಿನಿಂದ ನರಳುತ್ತಿರುವ ತನ್ನ ಕೂಸಿನ ಜೀವ ಉಳಿಸಿ.. ಎಂದು ಅಂಗಾಲಾಚಿ ಬರುವ ಸೈನಿಕನ ಅತ್ತೆಯ ಪ್ರವೇಶ. ಅಷ್ಟೊತ್ತಿಗಾಗಲೇ ರಾಮಣ್ಣ ಹಾಗು ಕೈದಿ ಒಬ್ಬರನ್ನೊಬ್ಬರು ಬಡಿದುಕೊಂಡು ಹೈರಾಣಾಗಿದ್ದವರು ಈ ತಾಯಿಯ ಗೋಗರೆತಕ್ಕೆ ಕರಗಿ ಕೈಕೈ ಸೇರಿಸಿ ಗರ್ಭಿಣಿಯನ್ನ ಹೊತ್ತು ತಂದು ಜೀಪಿನಲ್ಲಿ ಕೂರಿಸುತ್ತಾರೆ. ಹೆರಿಗೆಯೂ ಜೀಪಿನಲ್ಲೇ ಜರುಗುತ್ತದೆ. ಒಂದು ಹುಟ್ಟು ಮತ್ತೊಂದರ ನಾಶಕ್ಕೆ ನಾಂದಿ ಹಾಡುವಂತೆ ಕಾಠಿಣ್ಯ, ಕ್ರೌರ್ಯ ವ ಕರಗಿಸಿ ಮನುಷ್ಯತ್ವದ ಸೆಲೆ ಉಕ್ಕುವುದು ಇಲ್ಲೇ.

ಜೀವ ಉಳಿಸಿದ ಜೀವಗಳಿಗೆ ಕೈತುತ್ತು ಇಟ್ಟು ಮನಕಲಕುವ ಮಾತನಾಡುವ ಸೈನಿಕನ ತಾಯಿಯ ತಾಯ್ತನ ಮುನಿದ ಮನಸುಗಳನ್ನು ಬೆಸೆಯುತ್ತದೆ. ಮಗುವನ್ನು ವರ್ಣಿಸುವಾಗ ”ಕೋಪವಿಲ್ಲ , ದ್ವೇಷವಿಲ್ಲ ಗಾಂಧೀ ತಾತನ ಹಾಗಿದ್ದಾನೆ” ಅಂದುಬಿಡುತ್ತಾಳಲ್ಲ ಅಜ್ಜಿ ಅದು ಒಂದು ಕ್ಷಣ ಅವಾಕ್ಕಾಗಿಸುತ್ತದೆ. ಎರಡೇ ಪದಗಳಲ್ಲಿ ಗಾಂಧಿಯವರನ್ನ ತೋರಿದ ಸಂಭಾಷಣಾಕಾರನಿಗೆ ಶಬ್ಬಾಸ್ !!

ಅಜ್ಜಿ ಅಡುಗೆ ಮಾಡುತ್ತಾ , ತುತ್ತಿಡುತ್ತಾ ” ಈ ಮುನುಷ್ಯ ಭೂಮಿಯಿಂದ ಆಚೆ ಹೋಗೋದನ್ನ ಕಲಿತರೂ ಜಾತಿಯಿಂದ ಆಚೆ ಹೋಗೋದನ್ನ ಕಲೀಲಿಲ್ಲ ” ಅನ್ನುವುದು ಎಂಥಾ ಮಾತಲ್ಲವಾ !? ಮನುಷ್ಯತ್ವ ಮರೆತು ಜಾತಿಯ ಹೆಸರಲ್ಲಿ ಕಚ್ಚಾಡುವವರೆಲ್ಲ ಮುಟ್ಟಿ ನೋಡಿಕೊಳ್ಳಬೇಕು.

ನೇಣು ಬಿಗಿವವ , ಕುತ್ತಿಗೆ ಒಡ್ಡುವವ ಇಬ್ಬರೂ ಜೊತೆಯಾಗಿ ನೇಣಿಗೆ ಬಳಸುವ ಹಗ್ಗವನ್ನು ಕಂದನನ್ನ ತೂಗುವ ಜೋಲಿಗೆ ಕಟ್ಟುವಾಗ ಬರುವ ” ಬದುಕೇ ಬದುಕ ಕಲಿಸು ” ಹಾಡು ಸಮಂಜಸವಾಗಿದೆ. ಆಪ್ತವಾಗಿದೆ. ಇದು ಕಲ್ಲು ಕರಗುವ ಸಮಯ!!

ಮುಂದುವರೆದ ಕೈದಿ ಮತ್ತು ರಾಮಣ್ಣನ ಪಯಣದಲ್ಲಿ ಮತ್ತೆ ಮುಖಾಮುಖಿಯಾಗುವ ಟ್ರೆಕ್ ಡ್ರೈವರ್ “ಪಾಪ ಮಾಡೋದ್ರಲ್ಲೂ ಪುಣ್ಯವಿದೆ ” ಅಂದು ಹೊಟ್ಟೆಪಾಡಿಗಾಗಿ ವೇಷಧರಿಸುವ ಹಾಡುಗಾರರ ಪುಟ್ಟ ತಂಡವನ್ನು ಜೀಪಿಗೆ ಹತ್ತಿಸುತ್ತಾನೆ. ಅವರು ಹಾಡುವ ಭಗವತ್ಗೀತೆಯ ಕೃಷ್ಣ ಅರ್ಜುನ ಸಂಭಾಷಣೆಯಂಥಾ ಸಾಲುಗಳು “ಕೇಳು ಕೃಷ್ಣ .. (ಪಕ್ಕ ಹಳ್ಳಿಗರ ಶೈಲಿಯ ) ಇವರಿಬ್ಬರ ಮನಸ್ಸಿನ ತಳಮಳ, ತೊಯ್ದಾಟ, ಪ್ರಶ್ನೆ, ಉತ್ತರಗಳಿಗೆ ಕನ್ನಡಿಯಂತಿವೆ.

ಇಲ್ಲಿ ಬಹುತೇಕ ಎಲ್ಲವೂ ಆಕಸ್ಮಿಕಗಳ ಸರಣಿ . ಸಮಯ,ಸನ್ನಿವೇಶ , ಸಂದರ್ಭ ನಮ್ಮನ್ನ ಹೇಗೆಲ್ಲ ಆಡಿಸುತ್ತವೆ, ಅಲುಗಾಡಿಸುತ್ತವೆ ,ಅರಳಿಸುತ್ತವೆ ಅನ್ನುವುದನ್ನ ನೋಡಬೇಕು ನೀವಿಲ್ಲಿ.
ಕನ್ನಡದಲ್ಲಿ ವಿಭಿನ್ನ ಪ್ರಯತ್ನ ರಾಮಾ ರಾಮಾ ರೇ .. ರಸ್ತೆಯಲ್ಲೇ ಬಹುಪಾಲು ಚಿತ್ರ ರೂಪಿಸಿದ ಸೂತ್ರದಾರ ಸತ್ಯಪ್ರಕಾಶ ಸಾಹಸ ಪ್ರಶಂಸೆಗೆ ಅರ್ಹ. ಸಂಗೀತ,ಹಾಡುಗಳಿಗೆ ಸತ್ಯಪ್ರಕಾಶ್ ವಾಸುಕಿ ವೈಭವ್ ,ಅನನ್ಯ ಭಟ್ ಎಲ್ಲರೂ ಪ್ರೀತಿಗೆ ಪಾತ್ರರು.

ಹಾಗಾದ್ರೆ ಈ ಸಿನಿಮಾದಲ್ಲಿ ದೋಷಗಳೇ ಇಲ್ಲವೇ ಪರ್ಫೆಕ್ಟ್ ಚಿತ್ರವೇ ಅಂದ್ರೆ ಖಂಡಿತಾ ಇದೆ. ಆದ್ರೆ ಎಣಿಸುವ ಕಾಲವಿದಲ್ಲ. ಹಣ ತೆತ್ತು ಬರುವ ಪ್ರೇಕ್ಷಕ ಮಹಾಪ್ರಭುವಿಗೆ ರಂಜನೆ ,ಬೋಧನೆ ಎರಡನ್ನೂ ಕೊಟ್ಟು ಇಗೋ ನಮ್ಮ ಶ್ರಮ ಬಸಿದಿದ್ದೇವೆ ಒಪ್ಪಿಸಿಕೊಳ್ಳಿ ಅನ್ನುವ ಶ್ರದ್ಧೆ, ಶ್ರಮ, ಪ್ರತಿಭೆಯ ಮುಂದೆ ಉಳಿದೆಲ್ಲವೂ ಪಕ್ಕಕ್ಕೆ ಸರಿಯುತ್ತವೆ.

ರಾಮಾ ರಾಮಾ ರೇ.. ನೀವು ನೋಡಿ ,ಗೆಲ್ಲಿಸಲೇಬೇಕಾದ ಚಿತ್ರ. ನೋಡ್ತಿರಲ್ಲ .

ಹೊಂಬಣ್ಣ ದಲ್ಲಿ ಬಂತು ಜೋಗಿ ಸುನೀತಾ ಜಬರ್ದಸ್ತ್ ಹಾಡು !

ಆ ಧ್ವನಿ ಮಾತ್ರ ನಿಮ್ಮನ್ನು ಕಾಡದೆ ಬಿಡಲಾರದು. ಹೊಂಬಣ್ಣದಲ್ಲಿ ಒಂಭತ್ತು ಹಾಡುಗಳಿದ್ದರೂ “ಘಟ್ಟದಾ ಮೇಲೇರಿ”  ಹಾಡು ಮತ್ತೆ ಕೇಳು ,ಇನ್ನೊಮ್ಮೆ ಕೇಳು ಎನ್ನುವಂತೆ ಮಾಡಿಬಿಡುವುದು.

ಸಾವಿರಾರು ಮಧುರ ಗೀತೆಗಳನ್ನ ಹಾಡಿದ್ದರೂ ಈಕೆಯ ಖಡಕ್ ಕಂಠಕ್ಕೆ ಜನ ಮಾರು ಹೋಗಿದ್ದು ಸುಳ್ಳಲ್ಲ.  ಉತ್ತುಪ್ ಗಿತ್ತುಪ್ ಎಲ್ಲ ಪಕ್ಕಕ್ಕಿಡ್ರಿ ನಾನಿಲ್ವಾ ಕನ್ನಡದ  ಕಂಚಿನ ಕಂಠ ಅಂತ ‘ಎಲ್ಲೋ ಜೋಗಪ್ಪ ನಿನ್ ಅರಮನೆ’ ಹಾಡು ಹಾಡಿ ಜೋಗಿ ಸುನೀತಾ ಅಂತಾನೇ ಸುವಿಖ್ಯಾತರಾದ ಸುನೀತಾ ‘ಹೊಂಬಣ್ಣ’ ಚಿತ್ರದ ಹಾಡಿಗೆ ಹೊಳಪು  ತುಂಬಿದ್ದಾರೆ.

‘ಅಂಬಿಗನಿರದೆ ಸಾಗನೆ  ಬಲುದೂರ’ ಅನುರಾಧಭಟ್ ಕಂಠದಲ್ಲಿ ಕೇಳುವುದು ಹಿತವೆನಿಸುತ್ತದೆ. ‘ನವಭಾವದ ಅಲೆಯ ಏರಿ ಬಂದು’ ಮಾದಕ ಧ್ವನಿಯ ಮಾನಸ ಹೊಳ್ಳ ಚಂದ ಹಾಡಿದ್ದಾರೆ .’ ನೋವಿರದ ಸಾವಿಲ್ಲ ,ಸಾವಿರದ ಬದುಕಿಲ್ಲ , ಪ್ರೀತಿಗೆ ಇದು ಹೊರತಲ್ಲ’ ಗೀತೆಯಲ್ಲಿ ಸಂತೋಷ್ ವೆಂಕಿ ಮನಮುಟ್ಟುತ್ತಾರೆ. ಉಳಿದ ಹಾಡುಗಳನ್ನ ಕೇಳುವುದು ನಿಮಗೆ ಬಿಟ್ಟದ್ದು. ಎಲ್ಲ ಗಾಯಕರು ಕನ್ನಡದವರೇ .  ವಿನು ಮನಸು ಸಂಗೀತ ನಿರ್ದೇಶನ ಕೇಳಿದ ಕಿವಿಗಳಿಗೆ ತಂಪುಣಿಸುವುದಂತೂ ನಿಜ.

”ಹೊಂಬಣ್ಣ ” ಹೊಸಬರ ಚಿತ್ರ . ಆದ್ರೆ ಶ್ರದ್ದೆ ಯಿಂದ ಪ್ರೇಕ್ಷಕರ ಮಡಿಲಿಗಿಡುವ ಪ್ರಯತ್ನ ಮಾಡಿದ್ದೇವೆ.  ಕಥೆಯೇ ಚಿತ್ರದ ನಿಜ ನಾಯಕ. ಬಹುತೇಕ ಮಲೆನಾಡ ದಟ್ಟ ಅರಣ್ಯದ ನಡುವೆ ಚಿತ್ರೀಕರಿಸಿದ್ದೇವೆ. ಸುಚೇಂದ್ರ ಪ್ರಸಾದ್ ,ದತ್ತಾತ್ರೇಯ ಅಂಥಾ ಕೆಲವರನ್ನ ಹೊರತು ಪಡಿಸಿದರೆ ಉಳಿದವರೆಲ್ಲ ಮಲೆನಾಡ ಕಲಾವಿದರೆ. ಅರಣ್ಯ ಒತ್ತುವರಿಯ ಸಾಧಕ -ಭಾಧಕಗಳೇ ಸಿನಿಮಾದ ಜೀವಾಳ ಅಂತಾರೆ ನಿರ್ದೇಶಕ  ರಕ್ಷಿತ್ ತೀರ್ಥಹಳ್ಳಿ .

ಕಥೆ ಕೇಳಿ ಪ್ರೇರಿತರಾದ ಸಾಫ್ಟ್ವೇರ್ ಉದ್ಯೋಗಿ ಬಾಗಲಕೋಟೆಯ ರಾಮಕೃಷ್ಣ ನಿಗಡೆ ಹಣ ಹೂಡಿ ಒಳ್ಳೆ ಚಿತ್ರ ಮಾಡಿದ್ದೇವೆ ಅನ್ನುವ ಹುಮ್ಮಸ್ಸಿನಲ್ಲಿದ್ದಾರೆ.

ಬಿಗ್ ಬಜೆಟ್ ಚಿತ್ರಗಳೆಲ್ಲ ಬದಿಗೆ ಸರಿದ ಮೇಲೆ ಚಿತ್ರ ಬಿಡುಗಡೆ ಮಾಡುವ ಯೋಜನೆ ತಂಡದ್ದು. ನವೆಂಬರ್ ತಿಂಗಳ ಕೊನೆಯಲ್ಲಿ ತೆರೆಗೆ ತರುತ್ತೇವೆ ಅಲ್ಲಿವರೆಗೂ “ಹೊಂಬಣ್ಣ “ದ ಹಾಡುಗಳನ್ನ ಕೇಳುತ್ತಲಿರಿ ಅನ್ನುವುದು ಅವ್ರ ಮನವಿ.

ಕೇಳಿ .. ಇಷ್ಟವಾದ್ರೆ ಉಳಿದವರಿಗೂ ಕೇಳಿಸಿ.

ನಾಗರಹಾವು ಬಿಗಿನಿಂಗ್ ಬುಸ್ಸ್ .. ಎಂಡಿಂಗ್ ?

ವಿಷ್ಣುವರ್ಧನ್ ಅಭಿಮಾನಿಗಳು ಮತ್ತೆ ಸಾಹಸಸಿಂಹನನ್ನು ತೆರೆಯ ಮೇಲೆ  ಕಂಡು ಕಣ್ತುಂಬಿಕೊಳ್ಳುವ ಆಸೆಯಿಂದ  ಹೋದ್ರೆ ಅವ್ರಿಗೆ ಸಿಕ್ಕಿದ್ದೇನು?

ನಾಗರಹಾವು ಚಿತ್ರದ ಪ್ರಾರಂಭದಲ್ಲಿ” ನಾಗರಹಾವು “ಹಾಡಿಗೆ ಹೆಜ್ಜೆ ಹಾಕುವ ದರ್ಶನ್ ಆಮೇಲೆ ಏನಾದ್ರೂ ಅನ್ನುವುದು ಯಾರಿಗಾದ್ರೂ ಗೊತ್ತಾಗಿದ್ರೆ ಅದು ಅವರ ಪುಣ್ಯ ಅಂತಷ್ಟೇ ಹೇಳ್ಬಹುದು. ಇದು ಅಮಾಯಕ ಪ್ರೇಕ್ಷಕರನ್ನು ಯಾಮಾರಿಸುವ ಮೊದಲ ಗಿಮಿಕ್ .

ಕಥೆಯ ವಿಚಾರಕ್ಕೆ ಬಂದ್ರೆ ಇದು ಓಬಿರಾಯನ ಕಾಲದ್ದೇ. ನಮ್ಮ ವಾಹಿನಿಗಳಲ್ಲಿ ಬರುವ ನಾಗಿಣಿ ತರಹದ  ಧಾರಾವಾಹಿಗಳೇ ವಾಸಿ ಅನ್ನಬಹುದೇನೋ . ಒಂದಿಷ್ಟಾದ್ರು ಕುತೂಹಲ ಹುಟ್ಟಿಸದ ಕಥಾಹಂದರ. ಜನರ ನಂಬಿಕೆಯನ್ನು ಬಳಸಿ ಮತ್ತಷ್ಟು ಮೌಢ್ಯಕ್ಕೆ ತಳ್ಳುವ ಚಿತ್ರ.

ಟ್ರಾಯ್ , ೩೦೦ ನಂಥ ಹಾಲಿವುಡ್ ಸಿನಿಮಾ ನೋಡಿದವರಿಗೆ ಇವ್ರ್ ಕಾಪಿ ಕಲೆ ಬಹಳ ಚೆನ್ನಾಗಿ ಅರ್ಥವಾಗಿಬಿಡತ್ತೆ. ಈ ತಂಡ ಕೊಟ್ಟ ಹೈಪ್ ಗೆ ಹೋಲಿಸಿದ್ರೆ ಅದ್ರ ಕಾಲು ಭಾಗಕ್ಕೂ ನಿಲುಕುವುದಿಲ್ಲ.

ಇಲ್ಲಿ ಕೊಟ್ಟ ದುಡ್ಡಿಗೆ ಮೋಸವಿಲ್ಲ ಅನ್ನಿಸುವುದು ರಮ್ಯಾ ಅಭಿನಯ. ಮೋಹಕ ತಾರೆ ಹೆಸರಿಗೆ ತಕ್ಕಂತೆ ಸಮ್ಮೋಹಗೊಳಿಸಿಬಿಡುತ್ತಾರೆ. ಇಂಥಾ ಪ್ರತಿಭೆ ಇರುವಾಗ ನಾಯಕರಿಗೆ ಕೊಡುವಷ್ಟೇ ಸಂಭಾವನೆ ನಂಗೂ ಕೊಡಿ ಅಂಥಾ ಕೇಳೋದ್ರಲ್ಲಿ ತಪ್ಪೇನು ಇಲ್ಲ ಬಿಡಿ. ಬಹುಶಃ ಕಳೆದ ಬಾರಿ ಚುನಾವಣೆಯ ಸಮಯದಲ್ಲೇನಾದ್ರು ಈ ಚಿತ್ರದ ಜನಪರವಾದ ರಮ್ಯಾ ಡೈಲಾಗ್ಗಳನ್ನ ಮಂಡ್ಯದ  ಅಭಿಮಾನಿಗಳು ಕೇಳಿದ್ರೆ  ಗೆಲ್ಲಿಸೇ  ಬಿಡ್ತಿದ್ರೋ  ಏನೋ . ಒಂದೇ ಒಂದು ಸಿನಿಮಾದಲ್ಲೂ ಜನರ ಪರವಾಗಿ ಹೋರಾಟ ಮಾಡುವ ಪಾತ್ರ ಮಾಡಿರದಿದ್ದ ರಮ್ಯಾರನ್ನ ಮೊದಲ ಬಾರಿಗೇ ಸಂಸತ್ತಿಗೆ ಕಳುಹಿಸಿದ ಮಂಡ್ಯದ ಮುಗ್ಧ ಜನ ಇಂಥಾ ಪಾತ್ರಕ್ಕೆ ಮೆಚ್ಚಿ ಮನ್ನಣೆ ಕೊಟ್ಟಿದ್ದರೂ ಆಶ್ಚರ್ಯವಿಲ್ಲ.

ದಿಗಂತ್  ನಟನೆಗೆ ರೈಟ್ ಮಾರ್ಕ್ ಕೊಡಬಹುದು. ಪೋಷಕರ ನಟನೆಯೂ ಓಕೆ .  ಇಂಟರ್ನ್ಯಾಷನಲ್ ಕಾಂಪಿಟೇಷನ್ ನಲ್ಲಿ ಹಾಡುವ ಹಾಡು ಮತ್ತದರ  ಸಂಗೀತವಂತೂ ಸಪ್ಪೆ ಸಪ್ಪೆ .

ಪೋಸ್ಟರ್ ,ಬ್ಯಾನರ್ಗಳಲ್ಲಿ ಆ ಪಾಟಿ ವಿಷ್ಣು ದಾದಾರನ್ನ ತೋರಿಸಿದ್ದಾರಲ್ಲ ಅದನ್ನ ನಂಬಿಕೊಂಡು  ಅವರೇ ಪ್ರಮುಖ ಪಾತ್ರದಲ್ಲಿ ಮಿಂಚಿದ್ದಾರೇನೋ ಅನ್ನೋ ಆಸೆಯಲ್ಲಿ ಹೋದವರಿಗೆ ನಿರಾಸೆ ಕಟ್ಟಿಟ್ಟ ಬುತ್ತಿ. ಈಗ ಬರಬಹುದು ಆಗ ಬರಬಹುದು ಅಂತ ಕಾಯುತ್ತಿದ್ದವರಿಗೆ ಕೊನೇ ಘಳಿಗೆಯವರೆಗೂ ಕಾಯಬೇಕಾದ  ಸ್ಥಿತಿ . ಸದ್ಯ ಬಂದ್ರಲ್ಲ ನಮ್ ಆರಾಧ್ಯ ದೈವ ಅಂತ ಅಭಿಮಾನಿಗಳು ಭಾವುಕರಾಗಿ ಕಣ್ತುಂಬಿಕೊಳ್ಳೋ ಹೊತ್ತಿಗೆ ಮಿಂಚಿ ಮರೆಯಾಗಿ ಹೋಗುತ್ತಾರೆ. ಜೊತೆಗೆ ಅದು ಗ್ರಾಫಿಕ್ಸ್ ಆಗಿರೋದ್ರಿಂದ ಮುಖಭಾವದಲ್ಲಿ ಆಪ್ತತೆ ಕಾಣುವುದಿಲ್ಲ. ವಿಷ್ಣುರ  ಮುದ್ದಾದ ಮುಖಭಾವ ಕಂಡವರಿಗೆ ಛೆ .. ಛೆ.. ಅನ್ನಿಸುವುದು ಖಂಡಿತ . ತಂತ್ರಜ್ಞಾನಕ್ಕೆ ಹೆಚ್ಚು ಹಣ ಬೇಕು ಅನ್ನುವುದು ನಿಜವಾದ್ರೂ  ಇನ್ನು ಎಫೆಕ್ಟಿವ್ ಆಗಿ ತರಬಹುದಿತ್ತೇನೋ ಅನ್ನಿಸದೇ ಇರದು.

ನಾಗರಹಾವು ಅಂದಾಕ್ಷಣ ನೆನಪಾಗುತಿದ್ದದ್ದು ವಿಷ್ಣು ಅಭಿನಯದ ಮರೆಯಲಾಗದ ಸಿನಿಮಾ . ಬಾಲಿವುಡ್ ಘಟಾನುಘಟಿಗಳು ನೋಡಿ ಮೆಚ್ಚಿ  ಶಹಬ್ಬಾಶ್ ಗಿರಿ ಕೊಟ್ಟ ಅದ್ಭುತ ಚಿತ್ರ. ಚಾಮಯ್ಯ ಮೇಷ್ಟ್ರು, ಜಲೀಲ ಮನದಲ್ಲಿ ಇವತ್ತಿಗೂ ಕಾಡುವ ಪಾತ್ರಗಳು. ಹಾಡುಗಳು ಓಹ್ !! ಬಾರೇ  .. ಬಾರೇ.. ಚೆಂದದ ಚೆಲುವಿನ ತಾರೆ ಎಷ್ಟು ಕೇಳಿದ್ರೂ ಮತ್ತೆ ಮತ್ತೆ ಆವಾಹಿಸಿಕೊಳ್ಳುವುದು ನಿಜವಲ್ಲವೇ . ಈ  ನಾಗರಹಾವು ಚಿತ್ರದಲ್ಲಿ ಕಾಡುವಂಥದ್ದು ಕಣ್ಣಿಗೇನು ಬೀಳಲಿಲ್ಲ.  ಮುಂದಿನ ಪೀಳಿಗೆಯವರು ನಾಗರಹಾವು ಸಿನಿಮಾ ಅಂದಾಕ್ಷಣ ಹೊಸ ಸಿನಿಮಾವನ್ನೇ ನೆನಪಿಟ್ಟುಕೊಂಡ್ರೆ ಅದು ಕನ್ನಡ ಚಿತ್ರರಂಗದ ದುರದೃಷ್ಟವೇ ಸರಿ.

ಜನರ ಭಾವನೆಗಳನ್ನು ಬಳಸಿಕೊಳ್ಳುವುದು  ಅಂದ್ರೆ ಇದೇ ಅನಿಸುತ್ತದೆ. ವಿಷ್ಣುವರ್ಧನ್ರನ್ನ ಮುಂದಿಟ್ಟುಕೊಂಡು ಹಳಸಿದ ಕಥೆಗೆ ಕಲರ್ ಕಟ್ಟಿ ಹಣ ಗಳಿಸುವ  ಹುನ್ನಾರವಿದಷ್ಟೆ . ಅಮಾಯಕರ ಭಾವನೆಗಳು ಬಲಿಪಶುಗಳಾಗಿವೆ.

ಹೀಗಿದೆ ನೋಡಿ “ಇದೊಳ್ಳೆ ರಾಮಾಯಣ”

 

ತಾನು ಗಂಡು ,ಯಜಮಾನ ತನ್ನ ಮಾತೇ ಅಂತಿಮ ಅನ್ನುವ ಹಾಗೆ ಮೆರೆದ ನಾಯಕನಿಗೆ ಕತ್ತಲ ಕೋಣೆಯಲ್ಲಿ ಹೆಸರೇ ಗೊತ್ತಿಲ್ಲದ ಹೆಣ್ಣಿನ ಜೊತೆಗೆ ಕಳೆದ ಘಳಿಗೆಗಳು ಮನಸ್ಸನ್ನೇ ತೆರೆಸಿಬಿಡುತ್ತವೆ.   ಪ್ರಕಾಶ್ ರೈರಂಥ ಪ್ರಖರ ಪ್ರತಿಭೆಯ ಎದುರಿಗೆ  ಪಕ್ಕಾ ಪ್ರೊಫೆಷನಲ್  ಲೈಂಗಿಕ ಕಾರ್ಯಕರ್ತೆಯಾಗಿ ನಟಿಸುವುದು ಕಷ್ಟ ಕಷ್ಟ . ಆದ್ರೆ ಪ್ರಿಯಾಮಣಿ  ಸೇರಿಗೆ  ಸವ್ವಾ ಸೇರು ಅನ್ನುವಂತೆ ಸಹಜ ಅಭಿನಯದಿಂದ ಗೆದ್ದಿದ್ದಾರೆ.

ಮೊದಮೊದಲು ಗಯ್ಯಾಳಿಯ ಹಾಗೆ  ಗಂಟೆಗಿಷ್ಟು ಗಂಟು ಇಟ್ಟು ಮಾತಾಡು ಅನ್ನುವ ಆಕೆ ಭುಜಂಗಯ್ಯನ ಭಯ, ಒಂದಿಷ್ಟು ಒಳ್ಳೆಯ ನಡವಳಿಕೆಗಳನ್ನ ಗಮನಿಸುತ್ತಾ ಹೋದಂತೆ ಮಮತಾಮಯಿಯೇ ಆಗಿಬಿಡುತ್ತಾಳೆ . ಹೆಂಡತಿ, ಮಗಳನ್ನು  ಕಂಡಾಗ ಅವಳು ಕೇಳುವ ಪ್ರಶ್ನೆಗಳು ,ಕೊಟ್ಟ  ಸಲಹೆಗಳು  ಭುಜಂಗಯ್ಯನ ಅಹಮಿಕೆಯನ್ನೇ ಅಲ್ಲಾಡಿಸುತ್ತವೆ. ತಾನೂ  ಕರಗಿ ಆತನನ್ನೂ ಕರಗಿಸಿ ಮೈಯ್ಯ  ಹಂಗಿಲ್ಲದೆ ಮನಸ್ಸನ್ನು ಅರಳಿಸಿ ಹೊರಡುತ್ತಾಳೆ .

ಮಾತಿನ ಮಧ್ಯೆ  ಬರುವ  ಸಂದ  ಹಿನ್ನೆಲೆ ಸಂಗೀತ ಮೌನದಲ್ಲೇ ಮನವನ್ನ ಮಥಿಸುತ್ತದೆ. ಸಂಗೀತ ನಿರ್ದೇಶಕ ಸೂಕ್ಷ್ಮಜ್ಞನಾಗಿದ್ದಾಗ ಮಾತ್ರ ಇದು ಸಾಧ್ಯ .

ಸಾಮರ್ಥ್ಯ ಇದ್ದರೂ ಹೀರೋಗಳ ಹಿಂದೆ ಅಲೆಯುವ ನಿರ್ದೇಶಕನ ಪಾತ್ರದಲ್ಲಿ ಅಚ್ಯುತ ಎಂದಿನಂತೆ ತಮ್ಮ ಅಚ್ಚೊತ್ತಿದ್ದಾರೆ . ರಂಗಾಯಣ ರಘು ಇದ್ದಲ್ಲಿ ನಗು ಇರಲೇಬೇಕಲ್ಲ .

ಆಟೋ ಶಿವನ ಮುಗ್ದತೆ ,ಹುಂಬತನ ,ಸ್ವಾಮಿನಿಷ್ಠೆ ಮನಸೆಳೆಯುತ್ತವೆ. ನಿರ್ದೇಶನದ ಜೊತೆಗೆ ನಟನೆಯ ಪಾಠವನ್ನೂ ಶಿವನಿಗೆ ಕಲಿಸಿದ್ದಾರೆ ರೈ .

ಇಂಥಾದ್ದೊಂದು ಕಥೆಯನ್ನ ಕನ್ನಡದ ಪ್ರೇಕ್ಷಕ ಮಹಾಶಯರಿಗೆ ಕೊಡಲಿಕ್ಕೆ ಸೂಕ್ಷ್ಮ ಸಂವೇದನೆಯ ನಟ ,ನಿರ್ದೇಶಕರಿಂದ ಮಾತ್ರ ಸಾಧ್ಯ . ಪ್ರಕಾಶ್ ರೈ ಸಾಧಿಸಿ ತೋರಿಸಿದ್ದಾರೆ . ಅವ್ರ ದೇಹಭಾಷೆ ,ಧ್ವನಿಯ ಏರಿಳಿತ ಮೆಚ್ಚದೆ ಬೇರೆ ದಾರಿ ಇಲ್ಲ.

ಪೋಸ್ಟರ್ಗಳಲ್ಲಿ ಪ್ರಕಾಶ್ ರೈ ಪ್ರಮುಖವಾಗಿ ಕಂಡರೂ ಕಥೆಯ ಆಳಕ್ಕೆ ಹೋದಂತೆಲ್ಲಾ ಕಾಣುವುದು ಹೆಣ್ಣಿನ ಹೆಗ್ಗಳಿಕೆಯೇ .  ಭುಜಂಗಯ್ಯನ ಅಹಮ್ಮಿನ ಅಟ್ಟದಿಂದ ಇಳಿಸಿ ಮನುಷ್ಯನನ್ನಾಗಿಸುವವರು ಮೂವರು ಹೆಣ್ಣು ಮಕ್ಕಳೆ .

ಕನ್ನಡಕ್ಕೊಂದು ಕುಟುಂಬವೆಲ್ಲಾ ಕುಳಿತು ನೋಡುವಂಥಾ ಸದಭಿರುಚಿಯ ಚಿತ್ರ ‘ಇದೊಳ್ಳೆ ರಾಮಾಯಣ ” ಸಿಕ್ಕಿರುವುದು ಸುಳ್ಳಲ್ಲ .

 

ದನ ಕಾಯೋನಿಗೆ ಕಾದು ಕಾದು ಸಿಟ್ಟಿಗೆದ್ದ ಸಿನಿ ರಸಿಕರು. ಏನಂದ್ರು ಭಟ್ಟ್ರು ?

ಮಾಡೋದಿಕ್ಕೆ ಬೇರೆ ಕೆಲಸವಿಲ್ಲದೇ ಬೆಳಿಗ್ಗೆನೇ ಬಂದಿದ್ದೀವಾ ? ನಮ್ ಟಿಕೆಟ್ ಹಣ ವಾಪಾಸ್ ಕೊಡು ಇಲ್ಲ ಈಗಿಂದೀಗಲೇ ಪಿಕ್ಚರ್ ಬಿಡು ಅಂತ ಕೂಗಾಡಿದ್ರು . ಇನ್ನೇನು ಬಂತು ಬಂತು ತಡೀರಿ ಅಂತ ಸಮಾಧಾನ ಮಾಡೋದ್ರಲ್ಲಿ ಟಿಕೆಟ್ ಹಂಚುವವರು ಸುಸ್ತಾಗಿದ್ದಾರೆ.
ದನಕಾಯೋನು ಬರ್ತಾನೋ ಇಲ್ವೋ ಹೇಳಿ ಸ್ವಾಮಿ ಅಂತ ಮ್ಯಾನೇಜರ್ ಬೆನ್ನು ಬಿದ್ದ ಜನ ಕೊನೆಗೂ ನಿರಾಸೆ ಅನುಭವಿಸುವಂತಾಗಿದೆ . i am sorry ನಮಗೆ ಬಾಂಬೆ ಇಂದ ಕೀ ಅಂದ್ರೆ ಪಾಸ್ವರ್ಡ್ ಬರ್ಬೇಕು ಬಂದಿಲ್ಲ. ನಿಮ್ಮ ಹಣ ವಾಪಾಸ್ ಕೊಡ್ತೀವಿ ಹೊರಡಿ ಅಂದ್ರು. ಜೊತೆಗೆ ನಮ ಕನ್ನಡ ಚಿತ್ರಗಳ ಹಣೆಬರಹ ಯಾವಾಗಲೂ ಇದೇನೇ ಅನ್ನೋ ಮಾತನ್ನೂ ಸೇರಿಸಿದ್ರು.
ಯಾಕ್ ಸ್ವಾಮಿ ಹಂಗಂತೀರಾ ಅಂದ್ರೆ ಇನ್ನೇನ್ ಮತ್ತೆ ಈ ಪ್ರೊಡ್ಯೂಸರ್ಗಳು ದುಡ್ಡು ಕೊಟ್ಟಿರಲ್ಲ .ತಕರಾರು ಮಾಡ್ಕೊಂಡಿರ್ತಾರೆ. ಬಾಂಬೆ ಯವರು ಬೀಗದ ಕೀ ಕೊಡಲ್ಲ ಅಷ್ಟೆ . ನಮಗೆ 6 ಗಂಟೆಗೆ ತಾವರೆಕೆರೆ ಲಕ್ಷ್ಮಿ ಥೇಟರ್ನವರು ಕಾಲ್ ಮಾಡಿದ್ರು. ಕೀ ಬಂದಿಲ್ಲ ನೋಡ್ಕೊಳಿ ಅಂತ. ಅವ್ರುಗೂ ಇಲ್ಲ ನಮಗೂ ಇಲ್ಲ. ನಿಮಗೂ ಇಲ್ಲ.11 ಗಂಟೆ ಶೋ ಹೊತ್ತಿಗೆ ಬರುತ್ತಾ ಅದೂ ಗೊತ್ತಿಲ್ಲ ಅಂದ್ರು.
ಥೂ ಥ ರೀ ಕೆ ಈ “ದನಕಾಯೋನು” ನಮ್ಮನ್ನ ಥಿಯೇಟರ್ ಕಾಯೋ ಹಾಗ್ ಮಾಡಿದ್ನಲ್ಲ ಥೂ..ಥೂ ..ಅಂತ ಜನ ಮನೆ ಕಡೆಗೆ ಮುಖ ಮಾಡಿದ್ರು.

20161007_080657

ಹಣ ವಾಪಾಸ್ ಕೊಡ್ತೀರಾ ಸರಿ ನಮ್ಮ ಪ್ರೇಕ್ಷಕ ಪ್ರಭುವಿನ ಸಮಯ ಕೊಡಿ ನೋಡೋಣ. ಕೆಲಸ ಕಾರ್ಯಬಿಟ್ಟು ಕನ್ನಡ ಸಿನಿಮಾ ನೋಡಲಿಕ್ಕೆ ಬಂದವರ ಟೈಮ್ ಖಾಲಿ ಮಾಡಿ ಕಳ್ಸಿದ್ರಲ್ಲ ಅನ್ನುವುದು ಬೇಸರದ ವಿಷಯ.
ನಿಜಕ್ಕೂ ಏನಾಗಿದೆ ಸರ್ ಅಭಿಮಾನಿಗಳಿಗೆ ನಿರಾಶೆ ಆಯಿತಲ್ಲ ಅಂತ ciniadda .com ಯೋಗರಾಜ್ ಭಟ್ಟರನ್ನು ವಿಚಾರಿಸಿದಾಗ,ಅದು ಥಿಯೇಟರ್ ಟೆಕ್ನಿಕಲ್ ಸಮಸ್ಯೆ ಜಾಗ್ವಾರ್ ಗೂ ಸೈನ್ ಮಾಡಿ ನಮಗೂ ಸೈನ್ ಮಾಡಿದ್ದಾರೆ . ಬೇರೆ ಎಲ್ಲಾ ಕಡೆ ಶುರು ಆಗ್ತಾ ಇದೆ. ತೊಂದ್ರೆ ಆಗಿದ್ದಕ್ಕೆ ಕ್ಷಮೆ ಇರಲಿ. ಸಿನಿಮಾ ನೋಡಿ ಅಂತ ಅಭಿಮಾನಿಗಳಿಗೆ ಕೇಳಿಕೊಳ್ತೀನಿ ಅಂದ್ರು .
ಭಟ್ಟರು ಮತ್ತೆ ಜನಮನ ಗೆಲ್ಲಲಿ. ಕನ್ನಡದ ಸಿನಿಮಾಗಳು ಸಮಯಕ್ಕೆ ಸರಿಯಾಗಿ ಸಿನಿರಸಿಕರನ್ನ ತಲುಪಲಿ .

ಜಾಗ್ವಾರ್ ಝಲಕ್

ಕನ್ನಡದ ಬಹುಕೋಟಿ ಬಜೆಟ್ ನ ಅದ್ದೂರಿ ಸಿನಿಮಾ ಜಾಗ್ವಾರ್ ತೆರೆಯ ಮೇಲೆ ಝಗಮಗಿಸಿದೆ.
ನಿಖಿಲ್ ಮೊದಲ ಸಿನೆಮಾ ಆದರು ಆಕ್ಷನ್ ,ಡಾನ್ಸ್ ಚೆನ್ನಾಗಿ ಮೂಡಿ ಬಂದಿದೆ. ನಟನೆ ಒಂದೇ ಸಿನೆಮಾಕ್ಕೆ ದಕ್ಕುವ ಕಲೆಯಲ್ಲ. ಆಡ್ತಾ ಆಡ್ತಾ ರಾಗ ಅನ್ನೋ ಹಾಗೆ ಮಾಡ್ತಾ ಮಾಡ್ತಾ ಒಲಿಸಿಕೊಳ್ಳುವೆ ಅನ್ನುವ ಆಕಾಂಕ್ಷೆ ಎದ್ದು ಕಾಣುತ್ತೆ. ರಾಜಣ್ಣನವರ ಬೇಡರ ಕಣ್ಣಪ್ಪ ಸಿನಿಮಾಗೂ ಭಕ್ತಪ್ರಹ್ಲಾದ ಚಿತ್ರದ ಅಭಿನಯಕ್ಕೂ ಅಜಗಜಂತಾರ ವ್ಯತ್ಯಾಸವಿದೆಯಲ್ಲ ಹಾಗೆ.

ನಿಖಿಲ್ ಲುಕ್ ,ಸ್ಟೈಲ್, ಕಾಸ್ಟ್ಯೂಮ್ ಎಲ್ಲದ್ದರಲ್ಲೂ ಎಕ್ಸ್ಪರ್ಟ್ ಗಳ ಕೆಲಸ ಜೋರಾಗಿದೆ.
ನಿಜಕ್ಕೂ ನೋಡುಗರಿಗೆ ಮಸ್ತ್ ಮಜಾ ಕೊಡ್ತಾ ಥ್ರಿಲ್ ಹುಟ್ಟಿಸುವ ಕ್ಯಾಮೆರಾ ವರ್ಕ್ಗೆ ಮನೋಜ್ ಪರಮಹಂಸಗೆ
ಒಂದು ಸೆಲ್ಯೂಟ್ ಹೇಳಲೇಬೇಕು.
ವಿದ್ಯಾರ್ಥಿ ನಾಯಕ ಆರ್ಯ ಅಭಿನಯ ಚೆನ್ನಾಗಿದೆ. ಹುಡುಗನಿಗೆ ಇನ್ನು ಒಳ್ಳೆ ಅವಕಾಶಗಳು ಸಿಗಲಿ.
ಇನ್ನು ಕಥೆ ಟಿವಿ ನ್ಯೂಸ್ ಚಾನೆಲ್ ಗಳು, ಆಸ್ಪತ್ರೆಗಳ ಮುಖಕ್ಕೆ ಕನ್ನಡಿ ಹಿಡಿದ ಹಾಗಿದೆ. ವ್ಯಾಪಾರೀ ಮನೋಭಾವದ ಚಾನೆಲ್ಗಳು ಜನರನ್ನ ಹೇಗೆ ಮುರ್ಖರನ್ನಾಗಿಸುತ್ತಿವೆ ಅನ್ನೋದನ್ನ ಎಳೆಎಳೆಯಾಗಿ ಬಿಚ್ಚಿಟ್ಟಿದ್ದಾರೆ. “ಸುಳ್ಳನ್ನೇ ಹತ್ತಾರು ಬಾರಿ ಹೇಳ್ತಾನೆ ಇದ್ರೆ ಜನ ಅದನ್ನೇ ಸತ್ಯ ಅಂತ ನಂಬಿಬಿಡ್ತಾರೆ ” ಸಿನಿಮಾ ಗಿಂತ ಚೆನ್ನಾಗಿ ಒಳ್ಳೆ ಮ್ಯೂಸಿಕ್” ,”visulas ಹಾಕಿ ತೋರ್ಸಿ ಜನರನ್ನ ಯಾಮಾರಿಸೋದು ಸುಲಭ”, “ಮಾಸ್ ಮೆಮೊರಿ ಈಸ್ ವೆರಿ ಶಾರ್ಟ್ ” ಜನ ಬೇಗ ಮರಿತಾರೆ ಮುಂದಿನ ಸುದ್ದಿ ನೋಡಿ “, ಕ್ರೈಂ ವಿಜೃಂಭಣೆ ಇಂಥವೆಲ್ಲ ನೋಡ್ತಾ ಜನ ಮುಗಿಬಿದ್ದು ಚಪ್ಪಾಳೆ ಹೊಡಿತಾ ನೋಡೋದಂತು ಸುಳ್ಳಲ್ಲ .
ಆಸ್ಪತ್ರೆಗಳು ಅಮಾಯಕರನ್ನ ಸುಲಿಯುವ, ಬಂದಷ್ಟು ಬರಲಿ ಎನ್ನುವ ಬಾಕತನದಿಂದ ಬಡವ ,ಬಲ್ಲಿದರನ್ನು ಬಲೆಗೆ ಬೀಳಿಸಿಕೊಳ್ಳುವ ನೈಜ ಸಂಗತಿಗಳು ಇಲ್ಲಿ ಬಯಲಾಗಿವೆ.
ರಾಜಕಾರಿಣಿಗಳು ,ಅವ್ರ ಪುತ್ರರ ರು ಹಣಬಲದಿಂದ ಹೇಗೆಲ್ಲ ವ್ಯವಸ್ಥೆಯನ್ನ ತಮ್ಮ ಕೈಗೊಂಬೆ ಮಾಡಿಕೊಳ್ಳುತ್ತಾರೆ ಅನ್ನುವುದು ಎಂಥವರಿಗೂ ಅರ್ಥವಾಗುವಷ್ಟು ಸರಳವಾಗಿ ತೆರೆಗೆ ಬಂದಿದೆ.
ರಮ್ಯಾ ಕೃಷ್ಣ ಅಮ್ಮನ ಪಾತ್ರದಲ್ಲಿ ಎಂದಿನಂತೆ ತಮ್ಮ ಅಭಿನಯ ಚಾತುರ್ಯ ಮೆರೆದಿದ್ದಾರೆ.

ಒಟ್ಟಿನಲ್ಲಿ ಜಾಗ್ವಾರ್ ಕೊಟ್ಟ ದುಡ್ಡಿಗೆ ಮೋಸ ಮಾಡದ ಒಳ್ಳೆ ಸಿನಿಮಾ .ತಾಂತ್ರಿಕವಾಗಿ ಬಾಲಿವುಡ್ ಸಿನಿಮಾ ನೋಡಿದ ಅನುಭವ ನಿಮ್ಮದಾಗೋದಂತೂ ಗ್ಯಾರಂಟಿ. ನಿರ್ದೇಶಕ ಮಹಾದೇವ ಕೈಗೆ ಚಿತ್ರದ ಜವಾಬ್ದಾರಿ ಕೊಟ್ಟಿದ್ದು ಸಾರ್ಥಕ ಅನ್ನೋವಷ್ಟು ಸಕ್ಕತ್ತಾಗಿದೆ . ಹೋಗಿ ಜುಮ್ ಜುಮ್ ಅಂತ ಜಾಗ್ವಾರ್ ನೋಡ್ಕೊಂಡ್ ಬನ್ನಿ.
-ಬಿ ಸಿ ಭಾನುಮತಿ

Like Us, Follow Us !

120,526FansLike
1,826FollowersFollow
1,409FollowersFollow
3,304SubscribersSubscribe

Trending This Week