ವಿಶೇಷ ತನಿಖಾ ತಂಡದ ಮುಂದೆ ಹಾಜರಾದ ಚಾರ್ಮಿ ಕೌರ್

ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ತೆಲುಗು ನಟಿ ಚಾರ್ಮಿ ಕೌರ್ ಬುಧವಾರ ತೆಲಂಗಾಣ ಅಬಕಾರಿ ಇಲಾಖೆಯ ವಿಶೇಷ ತನಿಖಾ ತಂಡ (ಎಸ್ಐಟಿ) ದ ಎದುರು ಬುಧವಾರ ವಿಚಾರಣೆಗೆ ಹಾಜರಾಗಿದ್ದಾರೆ.

ಟಾಲಿವುಡ್ ಚಿತ್ರರಂಗದಲ್ಲಿ ಸಾಕಷ್ಟು ಸುದ್ದಿ ಮಾಡಿರುವ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಶೇಷ ತನಿಖಾ ತಂಡದ ಎದುರು ವಿಚಾರಣೆಗೆ ಹಾಜರಾಗಿರುವ ತೆಲುಗು ಚಿತ್ರರಂಗದ 7ನೇ ವ್ಯಕ್ತಿ ಚಾರ್ಮಿ. ಈ ಕುರಿತು ತೆಲುಗು ಚಿತ್ರರಂಗದ ನಿರ್ದೇಶಕರು ಹಾಗೂ ನಟಿಯರು ಸೇರಿದಂತೆ ಒಟ್ಟು 12 ಮಂದಿಗೆ ಎಸ್ಐಟಿ ಸಮನ್ಸ್ ಜಾರಿ ಮಾಡಿತ್ತು.

ತನ್ನ ವಕೀಲರ ಸಮ್ಮುಖದಲ್ಲಿ ವಿಚಾರಣೆ ನಡೆಸುವಂತೆ ಕೋರಿ ಚಾರ್ಮಿ ಅವರು ಹೈಕೋರ್ಟಿಗೆ ಅರ್ಜಿ ಸಲ್ಲಿಸಿದ್ದರು. ಆದರೆ, ಈ ಅರ್ಜಿಯನ್ನು ಹೈದರಾಬಾದ್ ಹೈಕೋರ್ಟ್ ಮಂಗಳವಾರ ನಿರಾಕರಿಸಿತ್ತು. ಆದರೆ, ಇತರೆ ಬೇಡಿಕೆಗಳಾದ ಬೆಳಿಗ್ಗೆ 10ರಿಂದ ಸಂಜೆ 5ರ ಅವಧಿಯಲ್ಲಿ ವಿಚಾರಣೆ, ಮಹಿಳಾ ಅಧಿಕಾರಿಯ ಸಮ್ಮುಖದಲ್ಲಿ ವಿಚಾರಣೆಗೆ ಹೈಕೋರ್ಟ್ ಸಮ್ಮತಿಸಿದೆ. ಜತೆಗೆ ಕೌರ್ ಸಮ್ಮತಿಯಿಲ್ಲದೆ ಆಕೆಯ ರಕ್ತ, ಕೂದಲು ಹಾಗೂ ಉಗುರಿನ ಸ್ಯಾಂಪಲ್‌ನ್ನು ಸಂಗ್ರಹಿಸಬಾರದು ಎಂದು ಹೈಕೋರ್ಟ್ ಸೂಚಿಸಿದೆ. ಈ ಡ್ರಗ್ಸ್ ದಂಧೆಯ ಪ್ರಮುಖ ಆರೋಪಿ ಕಲ್ವಿನ್ ಮ್ಯಾಸ್ಕರೆನ್ಹಸ್ ನೀಡಿರುವ ಮಾಹಿತಿಯಂತೆ ಚಿತ್ರರಂಗದ ಅನೇಕ ಮಂದಿ ಈತನ ಗ್ರಾಹಕರಾಗಿದ್ದಾರೆ. ಹೀಗಾಗಿ ತೆಲುಗು ಚಿತ್ರರಂಗದ ನಟರನ್ನು ವಿಚಾರಣೆ ಮಾಡಲಾಗುತ್ತಿದೆ.

-Ad-

Leave Your Comments