ಎಲ್ಲರಂತಲ್ಲ ಈ ನಟ

ತಮ್ಮ ಸಂಭಾವನೆ, ಸ್ಟಾರ್ ಗಿರಿ, ಮೋಜು ಮಸ್ತಿ, ಅವಕಾಶವಾದಿತನದಲ್ಲೇ  ಮುಳುಗಿ ಹೋಗುವ  ಹಲವು ನಟರ ಮಧ್ಯೆ  ಕೆಲವೇ ಕೆಲವು ನಟರು ಸಮಾಜಮುಖಿ ಚಿಂತನೆ ಮತ್ತು ಕಾರ್ಯದಲ್ಲಿ ತೊಡಗಿಸಿಕೊಳ್ಳುತ್ತಾರೆ.  ಯಶ್  ಕೆರೆಯ ಕಾಯಕಲ್ಪದಲ್ಲಿ ತೊಡಗಿಕೊಂಡು ಇತರರಿಗೂ ಮಾದರಿಯಾಗಿದ್ದಾರೆ.  
ಪ್ರಕಾಶ್ ರೈ ಹಲವು ಸಂಘಟನೆಗಳ ಜೊತೆ ನಿಲ್ಲಲು ಶುರುವಿಟ್ಟಿದ್ದಾರೆ.
ಹಾಗೆಯೇ ಚೇತನ್ ಕೂಡ ತಮ್ಮ ಸ್ಟಾರ್ ಗಿರಿಯನ್ನ ಪಕ್ಕಕ್ಕಿಟ್ಟು  ಹೋರಾಟಗಳಲ್ಲಿ ಗುರುತಿಸಿಕೊಂಡು ಭಿನ್ನವಾದ ಹೆಜ್ಜೆ ಇಡುತ್ತಿದ್ದಾರೆ.

ಎಲ್ಲರಂತಲ್ಲದ ಚೇತನ ..

ಕೆಲವು ದಿನಗಳ ಹಿಂದೆ ಸರಕಾರ  ಕೊಡಗಿನ ಹತ್ತಿರದ ದಿಡ್ಡಳ್ಳಿಯಲ್ಲಿ ಆದಿವಾಸಿಗಳನ್ನ ಒಕ್ಕಲೆಬ್ಬಿಸುತ್ತಿದ್ದಾಗ ಚೇತನ್ ಅವರ ಪರವಾಗಿ ನಿಂತು ಹಗಲು ರಾತ್ರಿ ಅವರೊಟ್ಟಿಗೆ ಪ್ರತಿಭಟಿಸಿ, ಸರಕಾರಕ್ಕೆ ಬಿಸಿ ಮುಟ್ಟಿಸಿದ “ಹೀರೊ” ಹಾಗೆಯೇ ಗೌರಿ ಲಂಕೇಶ್ ಕೊಲೆಯನ್ನ ಯಾವೊಬ್ಬ ಕನ್ನಡದ ನಟ ಕೂಡ ಖಂಡಿಸದಿದ್ದ ಹೊತ್ತಿನಲ್ಲಿ ಚೇತನ್ ಯಾವ ಮುಲಾಜಿಲ್ಲದೆ  ಖಂಡಿಸಿ, ಹೋರಾಟಕ್ಕೆ ಧುಮುಕಿದಾತ. ಜೊತೆಗೆ  ಲಿಂಗಾಯತ ಪ್ರತ್ಯೇಕ ಧರ್ಮದ ಹೋರಾಟದಲ್ಲೂ ಮುಂಚೂಣಿಯಲ್ಲಿ ಗುರುತಿಸಿಕೊಂಡಿದ್ದಾರೆ..
ಇವರ ಮಾತಿನ ಪ್ರಬುದ್ಧತೆ, ಚಿಂತನೆಯ ಆಳ ಚಕಿತಗೊಳ್ಳುವಂತದ್ದು…
ಜೊತೆಗೆ ಚಿತ್ರಕಾರ್ಮಿಕರ ಶ್ರೇಯೋಭಿವೃದ್ಧಿಗೆ ಸಂಘಟನಾತ್ಮಕ ಕೆಲಸ ಮಾಡುತ್ತಿದ್ದಾರೆ.
ಹಳ್ಳಿಗಳ ಮಹಿಳಾ ಸಶಕ್ತಿಕರಣದ ಬಗ್ಗೆಯೂ ಸಾಕಷ್ಟು ಕೆಲಸ ಮಾಡ್ತಿರುವ ಚೇತನ್ ಮೈಸೂರಿನ ಬಳಿಯ ಮುಳ್ಳೂರಿನ ಶಾಲೆಯೊಂದರಲ್ಲಿ ಮಾರ್ಗದರ್ಶರಾಗಿ ಕೂಡಿ ಕೆಲಸ ಮಾಡ್ತಿದ್ದಾರೆ..

ಐಷಾರಾಮಿ ಬದುಕು ಬಿಟ್ಟುಬಂದವರು ..

ಅಮೆರಿಕಾದ ಚಿಕಾಗೋದಲ್ಲಿ ಹುಟ್ಟಿ ಬೆಳೆದ ಚೇತನ್ ಗೆ ಕನ್ನಡ ನಾಡಿನ ಸಂಸ್ಕಾರ ಮೈಗೂಡಿಬಿಟ್ಟಿದೆ. ಇವರ ತಂದೆ ತಾಯಿ ಮೂಲತಃ ಚಿತ್ರದುರ್ಗದವರು. ಪ್ರತಿಷ್ಠಿತ ಯಾಲೆ ಯೂನಿವರ್ಸಿಟಿಯಲ್ಲಿ ಪದವಿ ಪಡೆದ ಚೇತನ್ ರನ್ನ ಆಕರ್ಷಿಸಿದ್ದು ರಂಗಭೂಮಿ. ನಂತರ ಕನ್ನಡ ನಾಡಿಗೆ ಬಂದ ಚೇತನ್ ವಿಸ್ತಾರ ರಂಗತಂಡದಲ್ಲಿ  ಹಲವು ನಾಟಕಗಳಲ್ಲಿ ಬಣ್ಣ ಹಚ್ಚಿದರು.
ಹೀಗಿರುವಾಗ ಸಿನೆಮಾಗೆ ಎಂಟ್ರಿ ಕೊಟ್ಟಿದ್ದೇ “ಆ ದಿನಗಳು” ಚಿತ್ರದ ಮೂಲಕ. ನಂತರ ಬಿರುಗಾಳಿ, ಸೂರ್ಯಕಾಂತಿ, ಮೈನಾ ಮುಂತಾದ ಹಿಟ್ ಚಿತ್ರಗಳನ್ನ ಕೊಟ್ಟರು,
ಬೇಡಿಕೆ ಬಂದಾಕ್ಷಣ ಹಣದ ಆಸೆಗೆ ಸಿಕ್ಕ ಸಿಕ್ಕ ಚಿತ್ರಗಳನ್ನ ಒಪ್ಪಿಕೊಳ್ಳದೆ, ತಮಗಿಷ್ಟವಾದ ಚಿತ್ರ, ಪಾತ್ರಗಳನ್ನ ಮಾತ್ರ ಶ್ರದ್ಧೆಯಿಂದ ಮಾಡುತ್ತಾರೆ..

ಬಹುತೇಕ ಸ್ಟಾರ್ ಗಳು ಸಾಮಾಜಿಕ, ವೈಚಾರಿಕ ವಿಷಯಗಳ ಬಗ್ಗೆ ಮಾತಾಡುವುದೇ ಇಲ್ಲ. ಕಾರಣ ಬೇರೆ ಬೇರೆ  ರಾಜಕೀಯ ನೆಲೆಗಟ್ಟಿನಲ್ಲಿರುವ ತಮ್ಮ ಅಭಿಮಾನಿಗಳನ್ನು ಎಲ್ಲಿ ಕಳೆದುಕೊಳ್ಳುತ್ತೇವೋ ಎನ್ನುವ ಭಯ.  ಸ್ಟಾರ್ ಗಿರಿ ತಲುಪುವುದು, ಅಪಾರ ಅಭಿಮಾನಿಗಳನ್ನು ಗಳಿಸುವುದು, ಗಳಿಸಿದ್ದನ್ನ ಉಳಿಸಿಕೊಳ್ಳುವುದು ಸುಲಭವೂ ಅಲ್ಲ. ಹಾಗೆ ಭಯ ಪಡುವುದನ್ನು  ಸಂಪೂರ್ಣ ತಪ್ಪು ಎನ್ನಲಿಕ್ಕಾಗುವುದಿಲ್ಲ.
ಆದ್ರೆ ಚೇತನ್ ಇದ್ಯಾವುದಕ್ಕೂ ಮುಲಾಜು ನೋಡದೆ ವಿಭಿನ್ನವಾಗಿ ನಿಲ್ಲುತ್ತಾರೆ.
ಗಾಂಧಿವಾದವನ್ನ ಗೌರವಿಸುವ ಚೇತನ್ ಅಹಿಂಸೆಯನ್ನ ತಮ್ಮ ಹೆಸರಿನೊಂದಿಗೆ ಸೇರಿಸಿಕೊಂಡು ” ಚೇತನ್ ಅಹಿಂಸಾ” ಆಗಿದ್ದಾರೆ….

-ವಿನಯ್ ಕಸ್ವೆ

-Ad-

Leave Your Comments