ಅಪ್ಪಾ ..ಐ ಲವ್ ಯು ಪಾ.. ಹಾಡಿನ ಹುಟ್ಟಿನ ಗುಟ್ಟು

“ನಾನು ನೋಡಿದ ಮೊದಲ ವೀರ. ಬಾಳು ಕಲಿಸಿದ ಸಲಹೆಗಾರ…. ಅಪ್ಪಾ ..ಐ ಲವ್ ಯು ಪಾ..” ಚೌಕ ಚಿತ್ರದ ಈ ಹಾಡು ಹತ್ತಾರು ದಿನ ಕಳೆದರೂ  ಕಾಡಿದ, ಕಾಡುತ್ತಿರುವ ಪರಿ ಅಷ್ಟಿಷ್ಟಲ್ಲ.

appa love u pa

ಈಗಿನ ಹಾಡುಗಳೇನು ಬಿಡ್ರಿ ತಲೆ ಬುಡ ಇರಲ್ಲ ನಮ್ ಕಾಲದ ಹಾಡುಗಳೇ ಹಾಡುಗಳು. ಅದೇನು ಸಾಹಿತ್ಯ ಏನ್ ಮಾಧುರ್ಯ ಅಂತ ಮೆಲುಕು ಹಾಕುತ್ತಿದ್ದವರ ಕಣ್ಣಾಲಿಗಳು ತುಂಬುವಂತೆ, ಜೀವದಾತ ಅಪ್ಪನ ಅವಿನಾಭಾವ ಸಂಬಂಧದ ಬಗ್ಗೆ ಹಿಂದೆಂದೂ  ಬಂದಿರದ ಭಾವಬಂಧವನ್ನ ಪದಗಳಲ್ಲಿ ಬೆಸೆದು ಕೊಟ್ಟಿದ್ದಾರೆ  ನಾಗೇಂದ್ರ ಪ್ರಸಾದ್.

nagendra prasad1

 

ಅಮ್ಮಾ ಎಂದರೆ ಏನೋ ಹರುಷವು … ಅಂದ ನಮಗೆ ಅಪ್ಪಾ ಎಂದರೆ … ? ಹುಡುಕಿ ತಡಕಾಡಿದರು ಬೆರಳೆಣಿಕೆಯಷ್ಟು ಹಾಡುಗಳು ಚಿತ್ರಗಳಲ್ಲಿ ಸಿಗಲಿಕ್ಕಿಲ್ಲ. ದಾಖಲೆ ಬರೆದ ಅಪ್ಪಾ.. ಲವ್ ಯು ಪಾ ಹಾಡು ಇದ್ದಕ್ಕಿದ್ದ ಹಾಗೆ ಹುಟ್ಟಿದ್ದಾದ್ರೂ ಹೇಗೆ ? ಯಾವಾಗ ? ಯಾವ ಘಳಿಗೆಯಲ್ಲಿ ? ಇಂಥಾ ಕೂತೂಹಲದೊಂದಿಗೆ ಅಪ್ಪನ  ಬಗ್ಗೆ ಅಪರೂಪದ ಹಾಡು ಬರೆದ ನಾಗೇಂದ್ರ ಪ್ರಸಾದ್ ಎಂಬ ಮಾಯಕಾರನನ್ನ ಕೆದಕಿದಾಗ ಹಾಡಿನ ಹುಟ್ಟಿನ ಗುಟ್ಟು ಬಿಚ್ಚಿಟ್ಟರು. ಅವರ ಅನುಭವ ಅವರದೇ ಮಾತುಗಳಲ್ಲಿ ಹರಿದಿದೆ ಇಲ್ಲಿ.

bramha vishnu song

ಬ್ರಹ್ಮಾ, ವಿಷ್ಣು,ಶಿವ ಎದೆ ಹಾಲು ಕುಡಿದರೋ  ನಾನು ಬರೆದ ಸಾವಿರಾರು ಹಾಡುಗಳಲ್ಲಿ ಅತ್ಯಂತ ಯಶಸ್ವೀ  ಹಾಡು. ನೀವೆಲ್ಲ ಕೇಳಿದ್ದೀರಿ . ಈ ಕಿವಿಯಿಂದ ಕೇಳಿ ಆ ಕಿವಿಯಿಂದ ತೇಲಿ ಹೋದ ಹಾಡಲ್ಲ ಅದು. ಕೇಳಿದ ಹಲವಾರು ಜನರ ಮೇಲೆ ಪರಿಣಾಮ ಬೀರಿದ ಹಾಡು ಅದು. ಆ ಹಾಡು ಕೇಳಿ ವೃದ್ಧಾಶ್ರಮದಲ್ಲಿ ತಾಯಿಯನ್ನು ಬಿಟ್ಟಿದ್ದ ಆರು ಜನ ಗಂಡುಮಕ್ಕಳು ಮತ್ತೆ ಮನೆಗೆ ಕರೆದುಕೊಂಡು ಹೋಗಿ  ನೋಡಿಕೊಳ್ಳುತ್ತಿದ್ದಾರೆ. ಅವರು ಕರೆ ಮಾಡಿ ಹೇಳಿದಾಗ ಬರೆದದ್ದು ಸಾರ್ಥಕ ಎನಿಸಿತ್ತು.

ಕರಿಯ ಐ ಲವ್ ಯು

kariya i love u ಕಪ್ಪಗಿದ್ದ ಗಂಡ, ಬೆಳ್ಳಗಿದ್ದ ಹೆಂಡತಿಯ  ನಡುವೆ ಬಣ್ಣದ ಬಗ್ಗೆ ಒಳಗೊಳಗೇ ಹೇಳಿಕೊಳ್ಳಲಾಗದ ಕೀಳರಿಮೆ ಇತ್ತಂತೆ. ಒಬ್ಬರಿಗೊಬ್ಬರು ಕಣ್ಣಲ್ಲಿ ಕಣ್ಣಿಟ್ಟು ನೋಡಿಕೊಳ್ಳಲಾಗದಷ್ಟು ಅಂತರವೂ ಏರ್ಪಟ್ಟಿದ್ದ ಹೊತ್ತಲ್ಲಿ ಕರಿಯ ಐ ಲವ್ ಯು ಕಿವಿಗೆ  ಬಿದ್ದಿದೆ. ಹಾಡು ಕೇಳಿದ ಮೇಲೆ ಅದೇನನ್ನಿಸಿತೋ ಕೀಳರಿಮೆ ಹೊರಟು  ಹೋಗಿ ಮತ್ತೆ ದಾಂಪತ್ಯ ಅರಳಿದೆ. ಅವರಿಗೀಗ ಎರಡು ಮಕ್ಕಳು. ಇದಕ್ಕಿಂತ ಸಂತೋಷ ಬೇರೇನಿದೆ?

“ಅಪ್ಪ ಲೂಸಾ” ಹಾಡು ಬರೆದಿದ್ದೂ ನಾನೇ. ಈ ಹಾಡು ಕೇಳಿ ಯಾರೂ  ಅಪ್ಪ ಅಮ್ಮನನ್ನ ಮನೆಯಿಂದ ಹೊರಗಟ್ಟಲಿಲ್ಲ. ನನ್ನ ಬರವಣಿಗೆ ಸಾಮಾಜಿಕ ಬದಲಾವಣೆ ತರಲಿ ಎಂಬುದೇ ನನ್ನಾಸೆ. ಪಾಸಿಟಿವ್ ಆಗಿ ಪರಿಣಾಮ ಬೀರಬೇಕು.

ಅಪ್ಪನಿಗಾಗಿ ಬರೆದ ಹಾಡು ಬದಲಿಸಿದ ಭಾವ 

ನನಗೆ ಅತ್ಯಂತ ತೃಪ್ತಿ ಕೊಟ್ಟ ಹಾಡು ಅಪ್ಪಾ ..ಐ ಲವ್ ಯು ಪಾ. ಯಶಸ್ಸನ್ನ ಎಂಜಾಯ್ ಮಾಡಿಸಿದ ನನ್ನ ಪ್ರೀತಿಯ ಹಾಡಿದು. ಸಾವಿರಾರು ಫೋನ್ ಕಾಲ್ಗಳು, fb ಯಲ್ಲಿ ಕಾಮೆಂಟ್ಗಳು,ಮೆಸೇಜ್ಗಳು ,whatsapp ಸಂದೇಶಗಳು. ನೋಡ್ತಾ, ಕೇಳ್ತಾ ಹೋದ್ರೆ ಅದೆಷ್ಟು ಮನಸ್ಸುಗಳಲ್ಲಿ ಪರಿವರ್ತನೆ ತಂದುಬಿಟ್ಟಿದೆ ಅನ್ನೋದು ಗೊತ್ತಾಗುತ್ತೆ.

ಆ ಮೂರು ಜನರ ಕಥೆ ಆಶ್ಚರ್ಯ,ಸಂತಸ ಎರಡನ್ನೂ ಕೊಟ್ಟಿದೆ. “ನಮ್ಮಪ್ಪ ನಾನು ಮಾತಾಡಿ ತುಂಬಾ ದಿನವಾಯ್ತು.ಜಗಳವಾಡಿ ಮಾತು ಬಿಟ್ಟಿದ್ದೇವೆ. ಕೆಲಸ ಬಿಟ್ಟು ಊರಿಗೆ ಹೋಗಿ ನಮ್ಮಪ್ಪನಿಗೆ ಈ ಹಾಡು ಕೇಳಿಸಬೇಕು. ಮಾತಾಡಿಸಬೇಕು. ತಪ್ಪಾಯಿತು ಅನ್ನಬೇಕು . ಹೊರಟಿದ್ದೇನೆ ಸರ್ “ಅಂದ. ಮತ್ತೊಬ್ಬ “ನಮ್ಮಪ್ಪನ್ನ ನಾನು ನೆಗ್ಲೆಕ್ಟ್ ಮಾಡಿದ್ದೆ ಇನ್ನು ಮಾಡಲ್ಲ” ಅಂದ. ಮಗದೊಬ್ಬ “ಸರ್ ಆ ಸಾಲು ಮನಸನ್ನ ಕಲಕಿಬಿಡ್ತು “ನಿನ್ನ ಅಂಗಿ ಬೆವರಲ್ಲಿ ನಮ್ಮ ಅನ್ನ ಅಡಗಿದೆ”. ನಮ್ಮಪ್ಪ ನಮಗೇನು ಮಾಡಿದ ಅಂತ ನೆನಪು ಮಾಡಿಕೊಟ್ರಿ ಅಪ್ಪನ್ನ ಬಿಡಲ್ಲ”ಅಂದ.

ಹೆಣ್ಣುಮಕ್ಕಳಂತೂ “ನಿಮ್ಮ ಕಾಲಿಗೆ ಬೀಳಬೇಕು ತಬ್ಬಿ ಅಳಬೇಕು ಅನ್ನಿಸುತ್ತಿದೆ ಸರ್ ” ಹೀಗೆ ಕರೆ ಮಾಡಿ ಕಣ್ಣೀರಿಟ್ಟವರೆಷ್ಟೋ. ನೀವೇ ವಿಡಿಯೋ ನೋಡಿದೀರಲ್ಲ  ನಟಿಯರ ಕಣ್ಣಲ್ಲಿ ಹಾಡು ಉಕ್ಕಿಸಿದ ಅಪ್ಪನ ನೆನಪನ್ನ.

ನಿಮ್ಮನ್ನೇ ಅಪ್ಪಾ ಅನ್ನಲಾ?

ಹೀಗೆ ಕೇಳಿದ್ದು ಪುಟ್ಟ ಮಕ್ಕಳಲ್ಲ ಬೆಳೆದು ನಿಂತ ವಿದ್ಯಾವಂತ ಹೆಣ್ಣುಮಕ್ಕಳು . ನಂಗೆ ಅಪ್ಪ ಇಲ್ಲ ನಿಮ್ಮನ್ನೇ ಅಪ್ಪಾ ಅನ್ನಲಾ ? ಕೆಲವರಂತೂ ನಂಗೆ ಚಿಕ್ಕಂದಿನಿಂದಲೂ ಅಪ್ಪ ಅಂದ್ರೆ ಆಗಲ್ಲ. ಕಾರಣ ಗೊತ್ತಿಲ್ಲ ಈ ಹಾಡು ಕೇಳಿದ ಮೇಲೆ ಹೋಗಿ ಸಾರೀ ಕೇಳಿಬಿಟ್ಟೆ. ನಮಗೋಸ್ಕರ ಏನೆಲ್ಲಾ ಕಷ್ಟ ಭರಿಸೋ ಅಪ್ಪ ಅರ್ಥವೇ ಆಗಿರಲಿಲ್ಲ . ಈ ಹಾಡು ನಮ್ಮ ಸಂಬಂಧವನ್ನು ಸರಿಮಾಡ್ತು.

ನಂಗೂ ಜಾಗ ಸಿಕ್ತಲ್ಲ ಸದ್ಯ

ವಯಸ್ಸಾದವರು, ಮಕ್ಕಳು ,ಕುಟುಂಬವನ್ನೇ ಸರ್ವಸ್ವವೆಂದು ದುಡಿದು ದಣಿದ ಅಪ್ಪಂದಿರು ಹೇಳಿದ್ದು: ನಮ್ಮನ್ನು  ಸಿನಿಮಾ ರಂಗ ಕಡೆಗಣಿಸಿತ್ತು. ಎಲ್ಲ ಹಾಡುಗಳಲ್ಲೂ ತಾಯಿ ಇದ್ದಾಳೆಯೇ ಹೊರತು ತಂದೆಗೆ ಜಾಗವೇ ಇರಲಿಲ್ಲ. ಅಪ್ಪನ ಮೇಲೆ ಹಾಡು ಬರೆದು ನಮಗೊಂದು ಸ್ಥಾನ ಕಲ್ಪಿಸಿಕೊಟ್ರಿ .

ಇಷ್ಟೆಲ್ಲಾ ಮನಸ್ಸುಗಳನ್ನು ತಟ್ಟಿದ ಹಾಡು ಹುಟ್ಟಿದ್ದು ಕೇವಲ  ಬೆರಳೆಣಿಕೆಯ  ಹೊತ್ತಿನಲ್ಲಿ.

ಹತ್ತೇ ನಿಮಿಷದಲ್ಲಿ ಹುಟ್ಟಿತಲ್ಲ !

ನನ್ನ ವಿಜಯನಗರ ಆಫೀಸ್ನಲ್ಲಿದ್ದಾಗ  ಸಂಜೆ 4ರ ಹೊತ್ತಿಗೆ ಚೌಕ ಚಿತ್ರದ ನಿರ್ದೇಶಕ ತರುಣ್ ಫೋನ್ ಮಾಡಿ ಹಾಡಿನ ಸನ್ನಿವೇಶ ಹೇಳಿದರು. ಅಪ್ಪನಿಗಾಗಿ ಹಾಡು ಬೇಕು ಅಂದ್ರು. ನನಗೂ ಬಹಳ ವರ್ಷಗಳಿಂದ ಅಪ್ಪನ ಮೇಲೆ ಚೆಂದದೊಂದು ಹಾಡು ಬರೆಯುವ ಆಸೆ ಇತ್ತು. ಅಂಥಾ ಅವಕಾಶಕ್ಕಾಗಿ ಕಾಯುತ್ತಿದ್ದೆ. ಅವರು ಕೇಳಿದ ತಕ್ಷಣ ಅಯ್ಯೋ ಕೊಡ್ರಪ್ಪ ಹಾಡಿಗೆ  ಬೇಕಿರುವ ಎಲ್ಲ ಸಿದ್ದತೆಗಳು ಮನಸ್ಸಿನಲ್ಲಿ ಮಡುಗಟ್ಟಿವೆ. ಸಂತೋಷವಾಗಿ ಬರೆದುಕೊಡುತ್ತೇನೆ ಅಂದೆ. ನನ್ನಪ್ಪ ನನ್ನನ್ನು ಬೆಳೆಸಲು  ಪಟ್ಟ ಕಷ್ಟ ಎಲ್ಲವು ಜೀವನಾನುಭವವೇ ಆಗಿತ್ತಲ್ಲ. ಬರೆಯಲಿಕ್ಕೆ ಶುರುವಿಟ್ಟ ಹತ್ತೇ ನಿಮಿಷಕ್ಕೆ ಹಾಡಿನಲ್ಲಿ ಅಪ್ಪ ಬಂದೇ ಬಿಟ್ಟ. ಹತ್ತೇ ನಿಮಿಷದಲ್ಲಿ  ಹುಟ್ಟಿದ ಹಾಡು ಕೋಟ್ಯಂತರ ಮನಸ್ಸುಗಳನ್ನು ಮುಟ್ಟಿದೆ.

ಬದಲಾದ ಆ ಎರಡು ಸಾಲು 

ಒಮ್ಮೆ ಹಾಡು ಬರೆದ ಮೇಲೆ ಮುಗಿಯಿತು .ಮತ್ತೆ ತಿರುಗಿ ನೋಡಲ್ಲ ನಾನು. ಒಂದೇ ಸಲಕ್ಕೆ ಬರೆದು ಮುಗಿಸಿಬಿಡೋದಷ್ಟೆ. ಈ ಹಾಡಿಗೆ ಅರ್ಜುನ್ ಜನ್ಯರ ಇಂಪಾದ ಸಂಗೀತ ಸೇರಿ ಅನುರಾಧ ಭಟ್ ಮಧುರವಾಗಿ  ಹಾಡಿದ ಮೇಲೆ ಎರಡು ಲೈನ್ ಚೇಂಜ್ ಮಾಡಿಕೊಡ್ತಿರಾ ಅಂದ್ರು ತರುಣ್. ನನಗೂ ಭಾವಗಳು ರಿಪೀಟ್ ಆಗಿವೆ ಅನ್ನಿಸ್ತು. ಒಂದು ತಿಂಗಳ ನಂತರ ಆಡಿಯೋ ರಿಲೀಸ್ ಮಾಡ್ಬೇಕು ಕೊಡಿ ಅಂದ್ರು. ಐದೇ ನಿಮಿಷದಲ್ಲಿ “ತಾಯಿ ಮಾತ್ರ ತವರಲ್ಲ . ತಂದೆ ಇರದೆ ತಾಯಿಲ್ಲ”  ಬರೆದುಕೊಟ್ಟೆ. ಈ ಸಾಲು ತುಂಬಾ ಜನರಿಗೆ ಮೆಚ್ಚುಗೆ ಆಗಿದೆ.

nagendra prasad cinema

ನಾಗೇಂದ್ರ ಪ್ರಸಾದ್  ಬಹಳಷ್ಟು ಒಳ್ಳೆಯ ಹಾಡುಗಳನ್ನು ಕೊಟ್ಟಿರುವ ಗೀತರಚನೆಕಾರ. ಅವರ ಅರಿವಿನ ಆಳವೂ ದೊಡ್ಡದು. ಅವರೇ ನಿರ್ದೇಶಿಸಿ ,ನಾಯಕನಾಗಿ ನಟಿಸಿರುವ ಹೊಸ ಚಿತ್ರಕ್ಕೆ  ಒಂದು ಹಾಡಿನ ಶೂಟಿಂಗ್ ಮಾತ್ರ ಬಾಕಿ ಉಳಿದಿದೆ. ಒಂದೊಳ್ಳೆ ಸಿನಿಮಾ ನೋಡುವ ಕುತೂಹಲವಂತೂ ನಮಗಿದೆ.

 

-Ad-

Leave Your Comments