ಕುಮಾರಸ್ವಾಮಿ ಆಳ್ವಿಕೆ ಇದೀಗ ಸಿನಿಮಾ ರೀಲು

JDLP leader HD Kumaraswamy visits the house of farmer Manjunath Jagapur who committed suicide recently at Amminabavi Village in Dharwad on Wednesday, August 12, 2015. - KPN ### Dharwad: HDK visits farmers families

ಇದುವರೆಗೂ ಕರ್ನಾಟಕದಲ್ಲಿ ಯಾವ ಸಕ್ರಿಯ ರಾಜಕಾರಣಿಯ ಕುರಿತು ಸಿನಿಮಾ ಬಂದ ಉದಾಹರಣೆಗಳಿಲ್ಲ. ಕೆಲವು ಚಿತ್ರಗಳು ಶುರುವಾದರೂ, ಅವು ಬಿಡುಗಡೆಯಾಗಿಲ್ಲ. ಹೀಗಿರುವಾಗ  ಒಂದು ದೊಡ್ಡ ಸಾಹಸಕ್ಕೆ ಹಿರಿಯ ನಿರ್ದೇಶಕ ಎಸ್‌. ನಾರಾಯಣ್‌ ಕೈ ಹಾಕಿದ್ದಾರೆ. ಅವರೀಗ ಮಾಜಿ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ  ಕುರಿತ ಒಂದು ಸಿನಿಮಾ ಮಾಡುವುದಕ್ಕೆ ಹೊರಟಿದ್ದಾರೆ.

ಕುಮಾರಸ್ವಾಮಿ ಅವರ ಆಡಳಿತಾವಧಿಯ 20 ತಿಂಗಳ ಚಿತ್ರಣವನ್ನು ಅವರು ಸಿನಿಮಾ ರೂಪದಲ್ಲಿ ಹಿಡಿಯುವ ಪ್ರಯತ್ನ ಮಾಡುತ್ತಿದ್ದಾರೆ. ಈ ಚಿತ್ರಕ್ಕೆ ಅವರಿಟ್ಟ ಹೆಸರು “ಭೂಮಿಪುತ್ರ’. ಈ ಚಿತ್ರ ಮೇ 8 ರಂದು ನ್ಯಾಷನಲ್‌ ಕಾಲೇಜಿನ ಮೈದಾನದಲ್ಲಿ ದೊಡ್ಡ ಮಟ್ಟದಲ್ಲಿ ಪ್ರಾರಂಭವಾಗಲಿದೆ. ಮಾಜಿ ಪ್ರಧಾನ ಮಂತ್ರಿ ಎಚ್‌.ಡಿ. ದೇವೇಗೌಡ, ಮಾಜಿ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಅಂದು ಹಾಜರಿರಲಿದ್ದಾರೆ. ಅಂದಹಾಗೆ, ಈ ಚಿತ್ರದಲ್ಲಿ ಕುಮಾರಸ್ವಾಮಿ ಅವರ ಪಾತ್ರ ಮಾಡುತ್ತಿರುವ ನಟ  ಅರ್ಜುನ್‌ ಸರ್ಜಾ.

ಎಲ್ಲಾ ಸರಿ, ಕುಮಾರಸ್ವಾಮಿ ಅವರ ಕುರಿತು ಚಿತ್ರ ಮಾಡಬೇಕೆಂದು ಎಸ್‌. ನಾರಾಯಣ್‌ ಅವರಿಗೆ ಯಾಕನಿಸಿತು ಎಂದರೆ, ಅದಕ್ಕೆ ಕಾರಣ ನಿರ್ಮಾಪಕ ಕೆ. ಪ್ರಭು ಕುಮಾರ್‌ ಎನ್ನುತ್ತಾರೆ ನಾರಾಯಣ್‌. “ಈ ಚಿತ್ರವನ್ನು ಪ್ರಭು ಕುಮಾರ್‌ ಅವರು ನಿರ್ಮಿಸುತ್ತಿದ್ದಾರೆ. ಕುಮಾರಸ್ವಾಮಿ ಅವರ ಕುರಿತು ಸಿನಿಮಾ ಮಾಡಬೇಕೆಂಬ ಐಡಿಯಾ ಅವರದ್ದೇ. ಸುಮಾರು ಐದಾರು ತಿಂಗಳ ಕಾಲ ಅವರು ಈ ಚಿತ್ರ ಮಾಡುವ ಪ್ರಯತ್ನ ಮಾಡಿದ್ದಾರೆ. ಕೊನೆಗೆ ಅದು ಕೈಗೂಡಲಿಲ್ಲ.

ಕೊನೆಗೆ ಯಾರೋ ನನ್ನ ಹೆಸರು ಹೇಳಿದ್ದಾರೆ. ಅವರು ನನ್ನನ್ನು ಸಂಪರ್ಕಿಸಿ, ಕುಮಾರಸ್ವಾಮಿ ಅವರ ಕುರಿತು ಚಿತ್ರ ಮಾಡುವುದಕ್ಕೆ ಮೊದಲು ಹೇಳಿದಾಗ, ನನಗೂ ಮೊದಲು ಆಸಕ್ತಿ ಮೂಡಲಿಲ್ಲ. ಆನಂತರ  ಈ ಚಿತ್ರವನ್ನು ಮಾಡುವುದಕ್ಕೆ ತೀರ್ಮಾನಿಸಿದೆ. ಏಕೆಂದರೆ, ಕುಮಾರಸ್ವಾಮಿ ಅವರ 20 ತಿಂಗಳ ಆಡಳಿತವನ್ನು ಬಹಳ ಹತ್ತಿರದಿಂದ ಕಂಡವನು ನಾನು. ಅವರು ಜನರಿಗೆ ಹೇಗೆ ಸ್ಪಂದಿಸುತ್ತಿದ್ದರು? ಸಾಮಾನ್ಯರಲ್ಲಿ ಸಾಮಾನ್ಯರಾಗಿ ಹೇಗೆ ಇರುತ್ತಿದ್ದರು? ಅವರ ದೂರದೃಷ್ಟಿ, ಅವರ ಕನಸುಗಳ ಬಗ್ಗೆ ನನಗೆ ಗೊತ್ತು.

ಇವೆಲ್ಲವೂ ನನಗೆ ಬಹಳ ಹತ್ತಿರದಿಂದ ಗೊತ್ತಿದ್ದಿದ್ದರಿಂದ, ಸಮಾಜಕ್ಕೆ ಒಳ್ಳೆಯದಾಗುತ್ತದೆ ಎಂಬ ಕಾರಣಕ್ಕೆ ಈ ಚಿತ್ರ ಮಾಡುವುದಕ್ಕೆ ಒಪ್ಪಿಕೊಂಡೆ ಎನ್ನುತ್ತಾರೆ ನಾರಾಯಣ್‌. ಈ ವಿಷಯವನ್ನು ಕುಮಾರಸ್ವಾಮಿ ಅವರ ಬಳಿ ಪ್ರಸ್ತಾಪಿಸಿದಾಗ, ಅವರು ಮೊದಲು ನಿರಾಕರಿಸಿದರಂತೆ. “ನಾನು ಈ ವಿಷಯವನ್ನು ಕುಮಾರಸ್ವಾಮಿ ಅವರ ಬಳಿ ಹೇಳಿದಾಗ, ಯಾಕೆ ಬೇಕು? ಎಂದರು. ಕೊನೆಗೆ ಒಪ್ಪಿಕೊಂಡ್ರು.  ಇವತ್ತು ಮೆಟ್ರೋ ಬರುವುದಕ್ಕೆ ಶ್ರಮಪಟ್ಟವರು ಅವರು.

ಅವರ ಬಗ್ಗೆ ಮೆಚ್ಚುಗೆಯ ಮಾತುಗಳನ್ನು ಮಾಜಿ ರಾಷ್ಟ್ರಪತಿ ಅಬ್ದುಲ್‌ ಕಲಾಂ ಆಡಿದ್ದಾರೆ. ಸಾಧನೆ ಮಾಡಿದರೆ ಮಾತ್ರ ಇಂಥದ್ದೊಂದು ಮೆಚ್ಚುಗೆ ದೊಡ್ಡವರಿಂದ ಸಿಗುತ್ತದೆ. ಈ ಸತ್ಯಗಳನ್ನು ಜನರಿಗೆ ತಿಳಿಸಬೇಕು ಎನ್ನುವುದು ಒಂದು ವಿಷಯವಾದರೆ, ಒಬ್ಬ ಮುಖ್ಯಮಂತ್ರಿ ಹೇಗಿರಬೇಕು ಎಂಬುದನ್ನು ತಿಳಿಸಿಕೊಟ್ಟರೆ, ಮಾದರಿ ಆದಂತಾಗುತ್ತದೆ. ಈ ಬಗ್ಗೆ ಅವರಿಗೆ ಹೇಳಿದಾಗ, ಮಾದರಿ ಆಗುವುದಾದರೆ ಚಿತ್ರ ಮಾಡಿ ಎಂದು ಒಪ್ಪಿಗೆ ಕೊಟ್ಟರು.

 

 

ಆದರೆ, ಯಾವುದೇ ಕಾರಣಕ್ಕೂ ತಮ್ಮನ್ನು ವೈಭವೀಕರಿಸಬಾರದು ಎಂದು ಸ್ಪಷ್ಟವಾಗಿ ಹೇಳಿದರು. ನಾವು ವೈಭವೀಕರಿಸುತ್ತಿಲ್ಲ. ನನಗೆ ಗೊತ್ತಿರುವ ಮಾಹಿತಿಯ ಜೊತೆಗೆ, ಇನ್ನಷ್ಟು ಮಾಹಿತಿಯನ್ನು ಸಂಗ್ರಹಿಸಿ ಚಿತ್ರಕಥೆ ಮಾಡುತ್ತಿದ್ದೇನೆ. ನಾಳೆ ಈ ಚಿತ್ರದಿಂದ ಯಾರಿಗೂ ನೋವಾಗಬಾರದು. ಹಾಗಾಗಿ ಸಾಕಷ್ಟು ಮುಂಜಾಗ್ರತೆ ವಹಿಸಿ ಚಿತ್ರಕಥೆ ಮಾಡುತ್ತಿದ್ದೇವೆ. ಈಗಾಗಲೇ ಕೊನೆಯ ಹಂತಕ್ಕೆ ಬಂದಿದೆ. ಮೇ ಎಂಟರಂದು ಚಿತ್ರ ಪ್ರಾರಂಭವಾಗಲಿದೆ’ ಅಂದ್ರು  ಎಸ್ . ನಾರಾಯಣ್‌.

 

 

ಇದೊಂದು ಬಿಗ್‌ ಬಜೆಟ್‌ ಅಷ್ಟೇ ಅಲ್ಲ, ದೊಡ್ಡ ತಾರಾಗಣದ ಚಿತ್ರವಾಗಲಿದೆಯಂತೆ. ಚಿತ್ರದಲ್ಲಿ ಸುಮಾರು 125 ಪಾತ್ರಗಳಿವೆ. ಕನ್ನಡ ಚಿತ್ರರಂಗದ ಎಲ್ಲಾ ಪ್ರಮುಖ ಕಲಾವಿದರು ಸಹ ಈ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಬರೀ ಬಿಗ್‌ ಬಜೆಟ್‌ ಅಷ್ಟೇ ಅಲ್ಲ, ದೊಡ್ಡ ತಾರಾಗಣದ ಚಿತ್ರವೂ ಇದಾಗಲಿದೆ. ಅರ್ಜುನ್‌ ಸರ್ಜಾ ಅವರು ಕುಮಾರಸ್ವಾಮಿ ಅವರ ಪಾತ್ರ ಮಾಡುತ್ತಿದ್ದಾರೆ. ಇನ್ನು ಪಿ.ಕೆ.ಎಚ್‌. ದಾಸ್‌ ಛಾಯಾಗ್ರಹಣ ಮಾಡುತ್ತಿದ್ದಾರೆ. ಮಿಕ್ಕ ಕಲಾವಿದರು ಮತ್ತು ತಂತ್ರಜ್ಞರ ಆಯ್ಕೆ ಸದ್ಯದಲ್ಲೇ ಮಾಡಲಾಗುತ್ತದೆ’ ಎನ್ನುತ್ತಾರೆ ನಾರಾಯಣ್‌.

-Ad-

Leave Your Comments