ಉದಯ್ – ಅನಿಲ್ ಕುಟುಂಬಕ್ಕೆ ಸಿದ್ಧರಾಮಯ್ಯ ಸಾಥ್ !! . ಇಲ್ಲಿಗೇ ಕೈ ತೊಳೆದುಕೊಳ್ಳುತ್ತಾ ಚಿತ್ರರಂಗ?

ನಿನ್ನೆ ಸಂಜೆ ನಡೆದ ೨೦೧೪-೨೦೧೫  ನೇ ಸಾಲಿನ ರಾಜ್ಯ ಚಲನಚಿತ್ರ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅಗಲಿದ ಅನಿಲ್ ಹಾಗು ಉದಯ್  ಕುಟುಂಬಗಳಿಗೆ ಸರ್ಕಾರ ತಲಾ 5 ಲಕ್ಷ ಕೊಡುವುದಾಗಿ ಪ್ರಕಟಿಸಿದ್ದಾರೆ .

 

“ನಿರ್ದೇಶಕ ಹಾಗು ಸಾಹಸ ನಿರ್ದೇಶಕರ ನಿರ್ಲಕ್ಷ್ಯಕ್ಕೆ ಎರಡು ಜೀವಗಳು ಬಲಿಯಾಗಿದ್ದಾವೆ. ಕುಟುಂಬಕ್ಕೆ  ಆಧಾರವಾಗಿದ್ದ ದುಡಿಯುವ ಜೀವಗಳನ್ನು ಕಳೆದುಕೊಂಡು ಇಬ್ಬರ ಮನೆಯವರು ಅದೆಷ್ಟುಕಷ್ಟದಲ್ಲಿದ್ದಾರೊ . ಅವರ ಕಷ್ಟದ ಪರಿಸ್ಥಿತಿಗೆ ಪರಿಹಾರವಾಗಿ ಈ ಧನ ಸಹಾಯ” ಮುಖ್ಯಮಂತ್ರಿಯವರ ಈ ಭರವಸೆ ನೊಂದವರಿಗೆ ಸಕಾಲಕ್ಕೆ ಸಂದ ಸಹಾಯವಾಗಲಿದೆ ಅನ್ನುವುದರಲ್ಲಿ ಎರಡು ಮಾತಿಲ್ಲ.

ಎರಡು ದಿನಗಳ ಹಿಂದಷ್ಟೇ ciniadda.com ಜೊತೆ ಮಾತನಾಡಿದ್ದ ಹಿರಿಯ ನಿರ್ದೇಶಕ ಹಾಗು ಕರ್ನಾಟಕ ಚಲಚಿತ್ರ ಅಕಾಡೆಮಿಯ ಅಧ್ಯಕ್ಷ ರಾಜೇಂದ್ರ ಸಿಂಗ್ ಬಾಬು ನಾನು ಮತ್ತು ಸಾ .ರಾ .ಗೋವಿಂದು ಮುಖ್ಯಮಂತ್ರಿಗಳೊಂದಿಗೆ ಮಾತಾಡಿದ್ದೇವೆ .ಅವ್ರಿಗೂ ಕೈ ಕಟ್ಟಿ ಹಾಕಿದಂತಾಗಿದೆ.  ಇದು ಕ್ರಿಮಿನಲ್ ಅಫೆನ್ಸ್ ಅಂತಾದರೆ ಸರ್ಕಾರದಿಂದ ಪರಿಹಾರ ಕೊಡಲಿಕ್ಕೆ ಬರುತ್ತೋ ಇಲ್ಲವೋ  ಅನ್ನುವ ಆತಂಕ ವ್ಯಕ್ತ ಪಡಿಸಿದ್ದರು.

ಆದರೀಗ ಉಳಿದೆಲ್ಲ ಸಂಗತಿಗಳನ್ನು ಕಾಲಕ್ಕೆ ಬಿಟ್ಟು ಮಾನವೀಯ ನೆಲೆಗಟ್ಟಿನಲ್ಲಿ ಎರಡೂ ಕುಟುಂಬಗಳ ಕೈ ಹಿಡಿದಿದ್ದಾರೆ ಸಿದ್ದರಾಮಯ್ಯನವರು. ಅನ್ನ ಹಾಕುವ ಜೀವಗಳು ಅಸುನೀಗಿದಾಗ ಉಳಿದವರ ಪಾಡೇನು ?ನಮ್ಮ ಅನುಕಂಪ ಹೊಟ್ಟೆ ತುಂಬಿಸುವುದಿಲ್ಲವಲ್ಲ.  ಬದುಕಿನ ಬಂಡಿ ಸಾಗಲು ಹಣದ ಆಧಾರ ಬೇಕೇ ಬೇಕಲ್ಲ. ಕಪ್ಪು -ಬಿಳಿಯ ಪರದಾಟದಲ್ಲಿರುವ ಈ ಹೊತ್ತಿನಲ್ಲಿ ಮುಚ್ಚಿಟ್ಟ,ಬಚ್ಚಿಟ್ಟ ನೋಟುಗಳ ಉಳಿಸಿಕೊಳ್ಳುವುದರಲ್ಲೇ ಮುಳುಗಿಹೋಗಿರುವ ಮಂದಿ ಅಮಾಯಕರಿಗೆ ಆಸರೆಯಾಗುವುದು ಅಷ್ಟರಲ್ಲೇ ಇದೆ.

ಸಿದ್ದರಾಮಯ್ಯನವರೇನೋ ಸಾಥ್ ಕೊಟ್ಟರು ಸರಿ . ಅದರ  ಜವಾಬ್ದಾರಿ ಹೊರಬೇಕಾದ್ದು ಯಾರು ? ಅನಿಲ್ -ಉದಯ್ ಕುಟುಂಬಕ್ಕೆ ೫ ಲಕ್ಷ ಸಾಕೆ ? ಮಕ್ಕಳ ಓದು , ಮನೆವಾಳ್ತನಕ್ಕೆ  ಏನು ಮಾಡಬೇಕು ? ಒಳ್ಳೆಯ ಶಾಲೆಯಲ್ಲಿ ಓದಿಸಬೇಕೆಂದರೆ ೫ ಲಕ್ಷ ೩-೪ ವರುಷಕ್ಕೆ ಕರಗಿಹೋಗುತ್ತಲ್ಲ ?  ಈಗಿನ ಕಾಯಿಲೆಗಳ ಖರ್ಚು ಗೊತ್ತಲ್ಲ ?  ಚಿತ್ರರಂಗದವರು ಏನ್ ಮಾಡ್ತಾರೆ ? ಇಂಥ ಹಲವು ಪ್ರಶ್ನೆಗಳನ್ನು ರಾಜೇಂದ್ರ ಸಿಂಗ್ ಬಾಬು ಅವ್ರ ಮುಂದಿಟ್ಟಾಗ –

rajendra-sing-baabu

ವಾಣಿಜ್ಯ ಮಂಡಳಿಯ ಸಭೆಯಲ್ಲಿ ನೀವೂ ಇದ್ರಿ . ತಾತ್ಕಾಲಿಕ ಬ್ಯಾನ್ ಮಾಡಿದ್ದೀರಲ್ಲ ಅದು ಜೀವ ತೆತ್ತವರ ಕುಟುಂಬಕ್ಕೆ ಪರಿಹಾರವಾ ?

ನಾನೂ ಮೀಟಿಂಗ್ನಲ್ಲಿ ಇದ್ದೆ. ಒಂದು ನ್ಯಾಯ ಕೊಡಬೇಕಾದ್ರೆ ಎರಡೂ ವರ್ಷನ್ ಕೇಳಬೇಕಲ್ಲ.ಅವರನ್ನೂ ಕರೆಸಬೇಕು . ಅದರಲ್ಲಿ ಇಬ್ಬರನ್ನು ಜೈಲಿಗೆ ಹಾಕಿದ್ದಾರೆ. ಇನ್ನಿಬ್ಬರು ನಾಪತ್ತೆ . ಅವರುಗಳು ಬರದೆ  ನಾವೇನೂ ಮಾತನಾಡುವ ಹಾಗಿಲ್ಲ.ಇಂಡಸ್ಟ್ರಿಯಲ್ಲಿ ಇರೋವ್ರ ಹತ್ತಿರವೂ ಮಾತಾಡಿದ್ದೇವೆ . ಸಿಎಂ ಹತ್ತಿರವೂ ಮಾತಾಡಿದ್ದೆವು ಅದಕ್ಕೆ ಸ್ಪಂದಿಸಿದ್ದಾರೆ . ಪರಿಹಾರವನ್ನೂ ಪ್ರಕಟಿಸಿದ್ದಾರೆ . ಇನ್ನು ಅನಿಲ್ ಕೂಡ ಮಾಸ್ತಿಗುಡಿಯ ನಿರ್ಮಾಪಕರಲ್ಲಿ ಒಬ್ಬರು ಅಂತಿದ್ದಾರೆ . ನಾನು ಅವರನ್ನ ನೋಡಿರ್ಲಿಲ್ಲ . ದುಡಿಯುತ್ತಿದ್ದ ಮನುಷ್ಯ ಹೋಗಿಬಿಟ್ಟಾಗ ಅದನ್ನ ತುಂಬಲಿಕ್ಕೆ ಯಾರಿಂದಾನು ಸಾಧ್ಯವಿಲ್ಲ. ಅವರ ಜೀವನಕ್ಕೆ ತೊಂದರೆ ಆಗದ ಹಾಗೆ ,ಮಕ್ಕಳ ವಿದ್ಯಾಭ್ಯಾಸಕ್ಕೆ ಏನಾದ್ರೂ ಮಾಡ್ಬೇಕು .ಅದು ನಮ್ಮ ಕರ್ತವ್ಯ ಖಂಡಿತ ಮಾಡ್ತೀವಿ .

ಅನಿಲ್ -ಉದಯ್, ದುನಿಯಾ ವಿಜಿಯ ಆಪ್ತ ಸ್ನೇಹಿತರಾಗಿದ್ದ್ರಂತಲ್ಲ. ಜೀವದ ಗೆಳೆಯರ ಕುಟುಂಬಕ್ಕೆ ಏನಾದ್ರೂ ಮಾಡ್ತಾರಂತ ? ಅವ್ರ್ಯಾಕೆ ಮೀಟಿಂಗ್ಗೆ ಬರಲಿಲ್ಲ?

ಅವ್ರು ಡೆಡ್ ಬಾಡಿ ಬಂತು ಅಂತ ಹೋಗಿದ್ರು . ಅಂಥಾ ಸಮಯದಲ್ಲಿ ಬಲವಂತ ಮಾಡಕ್ಕಾಗಲ್ಲ. ಅವರನ್ನು ಕರೆದು ಮಾತಾಡ್ತೀವಿ .ಅವ್ರೇನು ಆಫರ್ ಮಾಡ್ತಾರೋ ನೋಡ್ಬೇಕು .ಮಾಸ್ತಿಗುಡಿ ಮುಗಿಯುತ್ತಾ ಇಲ್ವಾ ಗೊತ್ತಿಲ್ಲ. ಕಾನೂನಿನ ಕುಣಿಕೆ ಯಾರಿಗೆ ಎಷ್ಟು ಕಾಲ ಬಿಗಿಯುತ್ತೋ ಗೊತ್ತಿಲ್ಲ .ಒಂದು ದಿವಸಕ್ಕೆ ಮುಗಿಯುವ ಕೇಸ್ ಅಲ್ಲ .ಮುಂದೆ ದುಡ್ಡು ಹಾಕಿ ಸಿನಿಮಾ ಮುಗಿಸುವವರು ಯಾರು? ನೂರೆಂಟು ಪ್ರಶ್ನೆಗಳಿವೆ. ನಿರ್ಮಾಪಕ ಆಚೆ ಬರೋವರೆಗೂ ಏನು ಮಾಡೋಕ್ಕಾಗಲ್ಲ.

ನೀವು ಹಿಂದೆ ನಾಗರಹೊಳೆಯಲ್ಲಿ ರಿಸ್ಕ್ ತಗೊಂಡು ನಿಮ್ಮ ತಂದೆ ಶಂಕರ್ ಸಿಂಗ್ ಹತ್ತಿರ ಬೈಸಿಕೊಂಡಿದ್ರಿ . ಜೀವ ತೆಗೆಯೋ ಇಂಥ ಸಾಹಸಗಳು ಬೇಕಾ ?

ನಾನು ಯಾವಾಗ್ಲೂ ಲೊಕೇಶನ್ ನೋಡಿ ,ರಿಹರ್ಸಲ್ ಮಾಡಿ ,ಡ್ಯೂಪ್ ಹಾಕಿ ಆಮೇಲೆ ಒರಿಜಿನಲ್ ಆರ್ಟಿಸ್ಟ್ ಹಾಕಿ ತೆಗೆದಿದ್ದೇನೆ.ಮುಂದೆ ಏನಾಗಬಹುದು ಅನ್ನುವ ದೂರದೃಷ್ಟಿ ಇರ್ಲೇ ಬೇಕು. ಎಷ್ಟೇ ಮುತುವರ್ಜಿ ವಹಿಸಿದರೂ ಕೆಲವೊಮ್ಮೆ ಅಚಾತುರ್ಯ ನಡೆದು ಹೋಗುತ್ತೆ. ಆದ್ರೆ ಇವರದು ಹಾಗಲ್ಲ total negligency.ಅವ್ರು ಈಜು ಬರಲ್ಲ ಅಂದ್ರು ಅದ್ಯಾಕೆ ಬಲವಂತ ಮಾಡಿದ್ರೋ ಗೊತ್ತಿಲ್ಲ.

ಸೇಫ್ಟಿ ಮೆಷರ್ಸ್ ಇಲ್ಲದೆ ಇಂಥಾ ದೊಡ್ಡ ರಿಸ್ಕ್ ತೆಗೆದು ಕೊಳ್ಳೋದು ದೊಡ್ಡ ತಪ್ಪು. ಇವತ್ತಿನ ತಂತ್ರಜ್ಞಾನದಲ್ಲಿ ಏನೆಲ್ಲಾ ಮಾಡಬಹುದು .ಇನ್ನೊಂದು ಬೋಟ್ ಅಥವ ಹತ್ತು ಲಾರಿ ಟ್ಯೂಬ್ ಇಟ್ಕೊಳ್ಳಬಹುದಾಗಿತ್ತು .ಅವ್ರು ಹೆಲಿಕಾಪ್ಟರ್ನಿಂದ ಬೀಳ್ತಿದ್ದ ಹಾಗೆ ಟ್ಯೂಬ್ ತಳ್ಳಿದ್ರೆ  ತೆರೆ ಮೇಲೆ ಕಾಣ್ತಿರಲಿಲ್ಲ .ಜೀವಗಳೂ ಉಳೀತಿದ್ವು.ಅಕಸ್ಮಾತ್ ಕಂಡರೂ ಪೆನ್ಸಿಲ್ ನಿಂದ ಬರೆದದ್ದನ್ನ ಅಳಿಸುವ ಹಾಗೆ ತೆಗೆದು ಬಿಡುವಂತ ಟೆಕ್ನಾಲಾಜಿ ನಮ್ಮ ಹತ್ತಿರವಿದೆ. 

uday-and-anil

ಸಿಕ್ಸ್ ಪ್ಯಾಕ್ ತೋರಿಸಲಿಕ್ಕೆ ಲೈಫ್ ಜಾಕೆಟ್ ಹಾಕಿಲ್ಲ ಅಂತ ಮಾತಿದೆಯಲ್ಲ ?

ಅದನ್ನ ಕಂಪ್ಯೂಟರ್ನಲ್ಲೇ ಜನರೇಟ್ ಮಾಡಬಹುದಿತ್ತಲ್ಲ .ರಜನಿಕಾಂತ್ “ಶಿವಾಜಿ ” ಚಿತ್ರದಲ್ಲಿ ಅಷ್ಟು ಚೆನ್ನಾಗಿ ಕಾಣಲಿಕ್ಕೆ ಕಾರಣ ಮುಖದ ಚೆಲುವನ್ನು ತೆರೆಯ ಮೇಲೆ ಹೆಚ್ಚಿಸಬಹುದಾದ ಸಾಫ್ಟ್ವೇರ್ .ಶಾರುಖ್ ಖಾನ್ಗೆ ಮುಖದ ಮೇಲಿರುವ ಸುಕ್ಕುಗಳನ್ನ ತೆಗಿತಾರೆ . ಅಂಥಾ ಟೆಕ್ನಾಲಜಿ ಇದೆ. ಆದ್ರೆ ಇವರುಗಳು ಅಂಥದ್ದನ್ನೆಲ್ಲ ನೆಗ್ಲೆಕ್ಟ್ ಮಾಡಿ ಅತಿಯಾದ ವಿಶ್ವಾಸದಲ್ಲಿ ಇಂಥಾ ಕೆಲಸ ಮಾಡಿದ್ದು ಅಕ್ಷಮ್ಯ ಅಪರಾಧ .

ಹೋದ ಪ್ರಾಣ ಮರಳಿ ತರಲಾರೆವು ನಿಜ . ಅವರನ್ನು ನಂಬಿದ  ಜೀವಗಳಿಗಾದರು ಚಿತ್ರರಂಗ ಸಾಥ್ ನೀಡಲಿ ಅನ್ನುವುದೇ ciniadda.com  ಮನವಿ.

-ಭಾನುಮತಿ ಬಿ ಸಿ 

ಚಿತ್ರ ಕೃಪೆ –ಡಿ ಸಿ ನಾಗೇಶ್

-Ad-

Leave Your Comments