ದರ್ಶನ್ ಅಭಿನಯದ ಒಡೆಯರ್ ಗೆ ವಿರೋಧ!

ಚಾಲೆಂಜಿಂಗ್ ಸ್ಟಾರ್ ದರ್ಶನ್ ಇತ್ತಿಚಿಗೆ ಯಜಮಾನ ಚಿತ್ರದಲ್ಲಿ ಅಭಿನಯ ಮಾಡ್ತಿದ್ದು, ಅವರ ಹುಟ್ಟುಹಬ್ಬದ ದಿನ ಟೀಸರ್ ಕೂಡ ಬಿಡುಗಡೆ ಮಾಡಿದ್ರು. ಯಜಮಾನ ಯೂಟ್ಯೂಬ್ ಟ್ರೆಂಡಿಂಗ್ ನಲ್ಲಿ ಮಲಯಾಳಂನ ಪ್ರಿಯಾ ವಾರಿಯರ್ ಪ್ರಕಾಶ ಕಣ್ಮಿಂಚನ್ನು ಸೈಡಿಗೆ ತಳ್ಳಿ ನಾನೇ ಯಜಮಾನ ಎಂದಿದ್ದ ಸ್ಟೋರಿಯನ್ನ ಸಿನಿಅಡ್ಡಾ ಡಾಟ್ ಕಾಂ ನಿಮ್ಮ ಮುಂದಿಟ್ಟಿತ್ತು. ಇದೀಗ ಒಡೆಯರ್ ಚಿತ್ರ ವಿವಾದದ ಸರದಿ.
ದರ್ಶನ್ ಅಭಿನಯ ಮಾಡ್ತಿರೋ ಯಜಮಾನ ಚಿತ್ರದ ಬಳಿಕ ಸೆಟ್ಟೆರೋ ಹೊಸ ಸಿನಿಮಾ ಒಡೆಯರ್. ಮೈಸೂರಿನ ರಾಜಮನೆತನದ ಒಡೆಯರ್ ಹೆಸರಿನಲ್ಲಿ ಮೂಡಿಬರಲು ಯೋಜನೆ ರೆಡಿಯಾಗಿದೆ. ಆದ್ರೆ ಈ ಚಿತ್ರ ಶುರುವಾಗುವ ಮೊದಲೇ ವಿರೋಧ ಎದುರಿಸಿದೆ. ಈಗಾಗಲೇ ಬಾಲಿವುಡ್ ನ ಪದ್ಮಾವತ್ ಸೇರಿದಂತೆ ಸಾಕಷ್ಟು ವ್ಯಕ್ತಿ ಆಧಾರಿತ ಚಿತ್ರಗಳನ್ನು ಜನ ವಿರೋಧಿಸುತ್ತಿದ್ದು, ಇದೀಗ ಮೈಸೂರಿನ ರಾಜ ಒಡೆಯರ್ ಹೆಸರಿನ ಚಿತ್ರಕ್ಕೆ ವಿರೋಧ ಶುರುವಾಗಿದೆ.
ಮೈಸೂರಿನ ಕನ್ನಡ ಕ್ರಾಂತಿ ದಳ ಒಡೆಯರ್ ಚಿತ್ರ ಟೈಟಲ್‌ಗೆ ವಿರೋಧ ವ್ಯಕ್ತಪಡಿಸಿದ್ದು, ಈ ಶೀರ್ಷಿಕೆಯನ್ನ ಹಿಂಪಡೆಯುವಂತೆ ಎಚ್ಚರಿಕೆ ನೀಡಿದೆ. ಈ ಕುರಿತು ಮೈಸೂರಿನಲ್ಲಿ ಪತ್ರಿಕಾಗೋಷ್ಟಿ ನಡೆಸಿರುವ ಸಂಘಟನೆ ಒಂದು ವೇಳೆ ದರ್ಶನ್ ಚಿತ್ರದ ಟೈಟಲ್ ಅನ್ನು ಹಿಂಪಡೆಯದಿದ್ದರೆ ಬೆಂಗಳೂರಿನ ದರ್ಶನ್ ಮನೆ ಮುಂದೆ ಧರಣಿ ಕೂರುವುದಾಗಿ ಎಚ್ಚರಿಕೆ ನೀಡಿದೆ. ನಾಡು ನುಡಿ ಸೇವೆಗಾಗಿ ಮೈಸೂರು ಒಡೆಯರ್ ವಂಶಸ್ಥರ ಸೇವೆ ಅಪಾರವಾಗಿದೆ. ಹೀಗಾಗಿ ಒಡೆಯರ್ ಹೆಸರಲ್ಲಿ ಕಮರ್ಷಿಯಲ್ ಸಿನಿಮಾ ಮಾಡೋದು ಖಂಡನೀಯ ಎಂಬುದು ಸಂಘಟನೆಯ ವಿರೋಧಕ್ಕೆ ಕಾರಣವಾಗಿದೆ.
ಸದ್ಯ ನಟ ದರ್ಶನ್  ‘ಯಜಮಾನ’ ಚಿತ್ರದ ಶೂಟಿಂಗ್‌ನಲ್ಲಿ ಭಾಗಿಯಾಗಿದ್ದಾರೆ. ದರ್ಶನ್ ಹುಟ್ಟುಹಬ್ಬದ ದಿನ ದರ್ಶನ್ ಮುಂದಿನ ಚಿತ್ರ ಒಡೆಯರ್ ಎಂಬ ಶೀರ್ಷಿಕೆ ಬಹಿರಂಗವಾಗಿತ್ತು, ಸಂದೇಶ್ ನಾಗರಾಜ್ ನಿರ್ಮಿಸುತ್ತಿರುವ ಒಡೆಯರ್ ಚಿತ್ರವನ್ನ ಎಂ.ಡಿ ಶ್ರೀಧರ್ ನಿರ್ದೇಶಿಸಲಿದ್ದಾರೆ. ಈ ಚಿತ್ರ ಸೆಟ್ಟೇರೋಕೆ ಇನ್ನೂ ಕೆಲವು ತಿಂಗಳು ಬಾಕಿ ಇರುವಾಗಲೇ ವಿರೋಧ ವ್ಯಕ್ತವಾಗಿದೆ. ಮುಂದೆ ಡಿ-ಕಂಪನಿ ಹೇಗೆ ನಿಬಾಯಿಸುತ್ತೆ ಕಾದು ನೋಡ್ಬೇಕು..
ಜ್ಯೋತಿ ಗೌಡ, ನಾಗಮಂಗಲ
-Ad-

Leave Your Comments