ಪದ್ಮಾವತಿಗೆ ಬಂತು ಮತ್ತೊಂದು ಕುತ್ತು

 ಸಂಜಯ್ ಲೀಲಾ ಬನ್ಸಾಲಿ ನಿರ್ದೇಶನದ ಪದ್ಮಾವತಿಗೆ ಮೇಲಿಂದ ಮೇಲೆ ಹೊಡೆತ ಬೀಳ್ತಿದೆ. ಕೆಲ ದಿನಗಳ ಹಿಂದಷ್ಟೆ ಸೆಟ್ ಗೆ ಯಾರೋ ಕಿಡಿಗೇಡಿಗಳು ದಾಳಿ ನಡೆಸಿ ಇಡೀ ಸೆಟ್ ನ ಹಾನಿ ಮಾಡಿದ್ರು. ಇದರಿಂದ ತಲೆ ಕೆಡಿಸಿಕೊಳ್ಳದ ಬನ್ಸಾಲಿ ಮತ್ತೊಮ್ಮೆ ಸೆಟ್ ರೆಡಿ ಮಾಡಿಸಿ ಶೂಟಿಂಗ್ ನಡೆಸಿದ್ರು. ಆದ್ರೆ ಮತ್ತೊಮ್ಮೆ ಪದ್ಮಾವತಿಗೆ ಹೊಡೆತ ಬಿತ್ತು. ಬನ್ಸಾಲಿ ಅವರ ಮೇಲೆ ಹಲ್ಲೆ ನಡೆಸಿ ಶೂಟಿಂಗ್ ಇನ್ನಷ್ಟು ವಿಳಂಬ ಆಗಿತ್ತು.
ಇಷ್ಟೆಲ್ಲಾ ಆದ್ರೂ  ಎದೆಗುಂದದೆ ಶೂಟಿಂಗ್ ನಡೆಸಿದ ಬನ್ಸಾಲಿ ಅವರಿಗೆ ಮತ್ತೊಂದು ಹಿನ್ನೆಡೆಯಾಗಿದೆ. ಅದಕ್ಕೆ ಕಾರಣ, ನಾಯಕಿಯ  ಬೆನ್ನುನೋವು!
 ‘ಪದ್ಮಾವತಿ’ ಚಿತ್ರದ ಪ್ರಮುಖ ಪಾತ್ರಧಾರಿ, ರಾಣಿ ಪದ್ಮಿನಿದೇವಿಯಾಗಿ ಅಭಿನಯಿಸುತ್ತಿರುವ ದೀಪಿಕಾ ಪಡುಕೋಣೆ ಬೆನ್ನುನೋವಿನಿಂದ ಬಳಲುತ್ತಿದ್ದಾರೆ. ಹೀಗಾಗಿ ಸದ್ಯ ಅವರ ಅಭಿನಯದ ದೃಶ್ಯಗಳನ್ನು ಒಳಗೊಂಡಿರುವ ಚಿತ್ರೀಕರಣ ಮುಂದೂಡಲಾಗಿದೆ.
ಶುಕ್ರವಾರ ಶೂಟಿಂಗ್ ವೇಳೆ ಏಕಾಏಕಿ ಬೆನ್ನುನೋವು ಕಾಣಿಸಿಕೊಂಡಿದೆ. ತಕ್ಷಣ ವೈದ್ಯರನ್ನು ಸಂರ್ಪಸಿ, ಚಿಕಿತ್ಸೆ ಪಡೆಯುತ್ತಿದ್ದಾರೆ. ಪದ್ಮಾವತಿಗಾಗಿ ಭಾರಿ ಉಡುಗೆ- ತೊಡುಗೆಗಳನ್ನು ತೊಟ್ಟು ನಟಿಸಬೇಕಾದ ದೀಪಿಕಾ ಅವರಿಗೆ ಸೋಮವಾರದವರೆಗೂ ವಿಶ್ರಾಂತಿ ಪಡೆಯುವಂತೆ ವೈದ್ಯರು ಸೂಚಿಸಿದ್ದಾರೆ. ಆದರೆ, ಬೆನ್ನುನೋವಿಗೆ ಕಾರಣವೇನು ಎಂಬುದು ಇನ್ನೂ ಖಚಿತವಾಗಿಲ್ಲ ಎಂದು ಮೂಲಗಳು ತಿಳಿಸಿವೆ. ಮತ್ತೊಂದೆಡೆ ದೀಪಿಕಾ ಉಪಸ್ಥಿತಿ ಇರದ ದೃಶ್ಯಗಳ ಚಿತ್ರೀಕರಣ ಮುಂದುವರಿದಿದೆ.
ನವೆಂಬರ್​ನಲ್ಲಿ ಚಿತ್ರ ಬಿಡುಗಡೆ ಮಾಡುವ ಗುರಿ ಇರಿಸಿಕೊಂಡಿರುವ ಚಿತ್ರತಂಡಕ್ಕೆ ಈಗಾಗಲೇ ಉಂಟಾಗಿರುವ ಎರಡು ಅಡೆತಡೆಗಳು ಶೂಟಿಂಗ್​ಗೆ ಸ್ವಲ್ಪ ಅಡ್ಡಿಯನ್ನುಂಟು ಮಾಡಿವೆ. ಈಗ ದೀಪಿಕಾ ವಿಶ್ರಾಂತಿಯಿಂದ ಮತ್ತಷ್ಟು ವಿಳಂಬವಾಗುವ ಸಾಧ್ಯತೆ ಇರುವುದರಿಂದ ಚಿತ್ರೀಕರಣ ಪ್ರಕ್ರಿಯೆಯನ್ನು ತೀವ್ರಗೊಳಿಸಲು ಬನ್ಸಾಲಿ ನಿರ್ಧರಿಸಿದ್ದಾರಂತೆ.
-ಪಲ್ಲವಿ
-Ad-

Leave Your Comments