ಸೆಂಚುರಿ ಸ್ಟಾರ್ ಎದುರಲ್ಲಿ ಆರಡಿ ಸೂಪರ್ ವಿಲನ್ ಡಾಲಿ

ಸಿನಿಮಾದಲ್ಲಿ ವಿಲನ್ ಭಯಂಕರವಾಗಿದ್ದರೇನೇ ಮಜಾ . ವಿಲನ್ ವೀಕ್ ಇದ್ದರೆ ಕಿಕ್ ಸಿಗೋದೇ  ಇಲ್ಲ. ರಾಜ್ ಕುಮಾರ್ ಹೀರೋ ಆಗಿ ನಟಿಸುತ್ತಿದ್ದಾಗ ನಟ ಭಯಂಕರ ವಜ್ರಮುನಿ ಇದ್ದರು. ಹಾಗಾಗಿ ಅವರ ಕಾಂಬಿನೇಷನ್ ಸಕತ್ತಾಗಿರುತ್ತಿತ್ತು.

ಇತ್ತೀಚೆಗೆ ಅಂಥಾ ಭಯಂಕರ ವಿಲನ್ ಸ್ಥಾನ ತುಂಬಿದ್ದು ರವಿಶಂಕರ್. ದೇಹ ಮತ್ತು ದನಿಯಿಂದಾಗಿ ಆರಡಿ ಹೀರೋಗಳಿಗೆಲ್ಲಾ ಸವಾಲೆಸೆಯುವಂತೆ ಕಾಣಿಸುವ ರವಿಶಂಕರ್ ನಿಂತರೇನೇ ಚಪ್ಪಾಳೆ ಬೀಳುತ್ತಿತ್ತು. ಅವರ ದನಿಯಿಂದಾನೇ ಸಾವಿರಾರು ಅಭಿಮಾನಿಗಳು ಹುಟ್ಟಿಕೊಂಡಿದ್ದರು.

ಈಗಂತೂ ಹೊಸಾ ಟ್ರೆಂಡು. ಸಿಕ್ಸ್ ಪ್ಯಾಕ್ ವಿಲನ್ ಗಳು ಬರುತ್ತಿದ್ದಾರೆ. ಅದರಲ್ಲಿ ಈಗ ಸದ್ದು ಮಾಡುತ್ತಿರುವ ಸೂಪರ್ ವಿಲನ್ ನ ಹೆಸರು ಧನಂಜಯ. ಸಿಕ್ಸ್ ಪ್ಯಾಕ್ ಹೀರೋ ಆಗಿ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ಧನಂಜಯ್ ಆರಂಭದಿಂದಲೂ ಭರವಸೆ ಹುಟ್ಟಿಸಿದವರು. ತನ್ನ ನಟನೆಯಿಂದ, ಗತ್ತಿನಿಂದ ಗಮನ ಸೆಳೆದವರು. ಆದರೆ ಅವರ ಸಾಲು ಸಾಲು ಸಿನಿಮಾಗಳು ಸೋತು ಹೋದವು. ಪ್ರತಿಭೆಗೆ ಸಿಗಬೇಕಾದ ಜನಮನ್ನಣೆ ಸಿಗಲೇ ಇಲ್ಲ.

ಇಂಥಾ ಸಮಯದಲ್ಲೇ ಅವರು ನಿರ್ದೇಶಕ ದುನಿಯಾ ಸೂರಿ ಕಣ್ಣಿಗೆ ಬಿದ್ದಿದ್ದು.

ಪ್ರಪಂಚವನ್ನು ಡಿಫರೆಂಟಾಗಿಯೇ ನೋಡುವ ದುನಿಯಾ ಸೂರಿ ಕಣ್ಣಿಗೆ ಧನಂಜಯ್ ಕೂಡ ಡಿಫರೆಂಟಾಗಿಯೇ ಕಾಣಿಸಿದರು. ಹಾಗಾಗಿ ದುನಿಯಾ ಸೂರಿಯ ಮುಂದಿನ ಸಿನಿಮಾ ಟಗರು ಗೆ ಧನಂಜಯ್ ವಿಲನ್ ಆದರು. ಆ ಪಾತ್ರದ ಹೆಸರೇ ಡಾಲಿ.

ಬೆಕ್ಕಿನ ಕಣ್ಣುಗಳನ್ನು ಹೊಂದಿರುವ ಈ ಡಾಲಿ ಶಿವಣ್ಣನ ಎದುರಿಗೆ ನಿಂತರೆ ಹೇಗಿರಬಹುದು ಅಂತ ನೆನೆಸಿಕೊಳ್ಳುವುದೇ ಚೆಂದ. ಈ ಸಿಕ್ಸ್ ಪ್ಯಾಕ್ ವಿಲನ್ ಹೇಗಿರುತ್ತಾನೆ ಅಂತ ಗೊತ್ತಾಗಬೇಕಾದರೆ ಒಂದ್ಸಲ ಫೋಟೋಗಳನ್ನು ನೋಡಿ.

-Ad-

Leave Your Comments