ಇಂದಿಗೆ ಬೇಕಿರುವುದು ರಾಮಮಂದಿರವಲ್ಲ “ರಾಮರಾಜ್ಯ “

ಬೆಳೆಯುವ ಪೈರು ಮೊಳಕೆಯಲ್ಲಿ ಅಂತಾರೆ . ಆದ್ರೆ ಮೊಳಕೆಯೊಡೆದು ಹೆಮ್ಮರವಾಗಲಿಕ್ಕೆ   ಕಾಲಕಾಲಕ್ಕೆ ಒಳ್ಳೆಯ ಗೊಬ್ಬರ , ನೀರು, ಔಷಧಿ ಉಣಿಸದಿದ್ದರೆ ಮೊಳಕೆಯಲ್ಲೇ ಸಸಿ ರೋಗಗ್ರಸ್ತವಾಗುವುದಿಲ್ಲವೇ ? ಹಾಗೆಯೇ ಮಕ್ಕಳು ನಾಳಿನ ಹೆಮ್ಮೆಯ ಪ್ರಜೆಗಳಾಗಬೇಕಾದರೆ ನ್ಯಾಯ -ನೀತಿ ,ಧ್ಯೇಯ , ಅಂತಃಕರುಣೆ , ಸಹಾನುಭೂತಿಗಳ ಮೌಲ್ಯ ತಿಳಿಸಿ ಬೆಳೆಸಬೇಕು. ಮಕ್ಕಳ ಬಗ್ಗೆ ಏನೆಲ್ಲಾ ಮಾತನಾಡುವ ನಾವು ಮಕ್ಕಳಿಗಾಗಿ ಸಿನಿಮಾ ಮಾಡುವ ವಿಷಯದಲ್ಲಿ ಮಾತ್ರ ಹಿಂದಿದ್ದೇವೆ. ಬೆರಳೆಣಿಕೆಯಷ್ಟು ನೆನಪಲ್ಲಿ ಉಳಿಯುವ  ಸಿನಿಮಾಗಳು ಮಾತ್ರ ನಮ್ಮ ಕನ್ನಡ ಚಿತ್ರರಂಗದಲ್ಲಿವೆ. ಅನ್ಯಾಯದ ವಿರುದ್ದ ಸಿಡಿದು ನಿಲ್ಲುವ ಪ್ರಚಂಡ ಪುಟಾಣಿಗಳು,ಪುಟಾಣಿ ಏಜೇಂಟ್ 123, ಚಿನ್ನಾರಿ ಮುತ್ತ  ಇನ್ನೂ ನಮ್ಮ ಮನಸ್ಸಿನಲ್ಲಿವೆ. ಯಾವುದೇ ವಯಸ್ಸಿನವರು ಬೇಕಾದರೂ ಇವತ್ತಿಗೂ ನೋಡಿ ಆನಂದಿಸಬಹುದಾದ ಸಿನಿಮಾಗಳವು. ಅಂಥಾ ಸಿನಿಮಾಗಳ ಸಂಖ್ಯೆ ಹೆಚ್ಚಾಗದಿರುವುದು ಕನ್ನಡ ಚಿತ್ರರಂಗದ ಸೃಜನಶೀಲತೆ,ಆಸಕ್ತಿಯ  ಕೊರತೆಯಲ್ಲದೆ ಮತ್ತೇನು ?

ರಾಮನವಮಿಯ ಈ ಹೊತ್ತಿನಲ್ಲಿ ಮಕ್ಕಳ ಸಿನಿಮಾ ರಾಮರಾಜ್ಯ ರೂಪುಗೊಳ್ಳುತ್ತಿರುವುದು ಸಂತಸದ ವಿಷಯ. ಇವತ್ತಿಗೆ ನಿಜಕ್ಕೂ ಬೇಕಿರುವುದು ರಾಮ ಮಂದಿರವಲ್ಲ. ರಾಮರಾಜ್ಯ .

ರಾಮರಾಜ್ಯದ ಸಾರಥಿ  ನೀಲ್ ಕೆಂಗಾಪುರ್  ಡಕೋಟಾ ಎಕ್ಸ್ ಪ್ರೆಸ್ ,ವಿಜಯಸಿಂಹ ಸೇರಿದಂತೆ ಹಲವು ಚಿತ್ರಗಳಿಗೆ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿದ್ದಾರೆ. ಅರಗಿಣಿ ಧಾರಾವಾಹಿಯ ಸಂಚಿಕೆ ನಿರ್ದೇಶಕನಾಗಿ ದುಡಿದ ಅನುಭವ ಇದೆ. ಪುನೀತ್  ನೀಲ್ ಕೆಂಗಾಪುರ್  ನಿರ್ದೇಶಿಸಿದ ಮೊದಲ ಸಿನಿಮಾ. ದೊಡ್ಡವರ ಚಿತ್ರಕ್ಕಿಂತ ಮಕ್ಕಳಿಗಾಗಿ ಮಾಡಬೇಕು ಅದು ದೊಡ್ಡವರೂ ನೋಡುವಂತಿರಬೇಕು ಎನ್ನುವುದು ಬಹುದಿನದ ಆಸೆಯಾಗಿತ್ತಂತೆ.

ಅದಕ್ಕೆ ಪೋಷಣೆ ಸಿಕ್ಕದ್ದು ಮಂಡ್ಯದಿಂದ ಬಣ್ಣದಲೋಕದ ಗೀಳಿನಿಂದ  ಬೆಂಗಳೂರಿಗೆ ಬಂದು ಪಡಬಾರದ ಕಷ್ಟಪಟ್ಟು ಕೊನೆಗೂ ನಿರ್ಮಾಪಕನಾಗುವ ಹಂತಕ್ಕೆ ಬೆಳೆದ ಶಂಕರೇಗೌಡರು. ಹಣ ಹೂಡಿ ಸುಮ್ಮನಾಗದೆ ಸಿನಿಮಾದ ಅನಿವಾರ್ಯ ಸಂದರ್ಭದಲ್ಲಿ ಅಭಿನಯವನ್ನೂ  ಮಾಡಿದ್ದಾರಂತೆ.

ನೀಲ್ ಕೆಂಗಾಪುರ್  ಪ್ರಕಾರ ರಾಮರಾಜ್ಯ ಇಂದಿನ ಮಕ್ಕಳಿಗೆ ಆತ್ಮಸ್ಟೈ ರ್ಯ ತುಂಬುವಂಥ  ಸಿನಿಮಾ. ಅನ್ಯಾಯದ ವಿರುದ್ಧ ಸೆಟೆದು ನಿಂತು, ದೊಡ್ಡವರನ್ನು ಎಚ್ಚರಿಸಿ ರಾಮರಾಜ್ಯವನ್ನು ಕಟ್ಟುವ ದಿಟ್ಟ ಮನಸ್ಸ್ಸಿನ ಮಕ್ಕಳ ಕಥೆ ಇಲ್ಲಿದೆ. ಬರಿಯ ಬೋಧನೆ ಮಾತ್ರವಲ್ಲದೆ ಪ್ರಚೋದನೆ ನೀಡುತ್ತಾ ..ಎಲ್ಲರನ್ನು ರಂಜಿಸುವ ಪ್ರಯತ್ನವಿದೆ.

ಇದುವರೆಗೆ ಬಂದ ಕನ್ನಡದ ಯಾವ ಮಕ್ಕಳ ಸಿನಿಮಾದಲ್ಲೂ ಗ್ರೀನ್ ಮ್ಯಾಟ್ ಬಳಸಿ 3D ಎಫೆಕ್ಟ್ ನಲ್ಲಿ  ತೋರಿಸುವ ಪ್ರಯತ್ನಗಳು ಬಂದಿಲ್ಲ. ಅದಕ್ಕೆ ಹಣ ಹೆಚ್ಛೇ ಬೇಕು .ನಾವಿಲ್ಲಿ ಒಂದು ಹಾಡಿನಲ್ಲಿ ಅಂಥಾ ಪ್ರಯೋಗ ಮಾಡಿದ್ದೇವೆ. ಕಾರಣವಿಷ್ಟೇ ಮಕ್ಕಳ ಸಿನಿಮಾ ಮಾಡಿ ಬರೀ ಅವಾರ್ಡ್ ಗೆ ಕಳಿಸೋದಲ್ಲ. ಎಲ್ಲರು ನೋಡುವಂಥ ಗುಣಮಟ್ಟವೂ ಇರಬೇಕು. ಜನರನ್ನು ತಲುಪದಿದ್ದರೆ ಮಕ್ಕಳ ಚಿತ್ರ ಮಾಡಿಯಾದರೂ ಏನು ಪ್ರಯೋಜನ ? ಮೂಲತಃ ಧಾರಾಳಿಯಾದ ನಿರ್ಮಾಪಕ ಶಂಕರೇಗೌಡರು ಮಕ್ಕಳ ಚಿತ್ರ ಶ್ರೀಮಂತವಾಗಿರಲಿ ಅಂತ ಎಲ್ಲ ರೀತಿಯ ಸಹಕಾರ ಕೊಟ್ಟಿದ್ದಾರೆ.

ವಿ ನಾಗೇಂದ್ರಪ್ರಸಾದ್ ಲಾಯರ್ ಪಾತ್ರದಲ್ಲಿ ಪ್ರೀತಿಯಿಂದ ಮಕ್ಕಳ ಒಡನಾಡಿಯಂತೆ ಸಹಜವಾಗಿ ಅಭಿನಯಿಸಿದ್ದಾರೆ. ಅಶ್ವಿನಿಗೌಡ ತಾಯಿಯ ಪಾತ್ರಕ್ಕೆ ಜೀವ ತುಂಬಿದ್ದಾರೆ. ಕಥೆ ಕೇಳಿದ ಮೇಲೆ ಅರೆಕ್ಷಣವು ಯೋಚಿಸದೆ ಒಪ್ಪಿಕೊಂಡ ಕಲಾವಿದೆ ಅವರು. ಹನುಮಂತೇಗೌಡರ ಅಭಿನಯ ನಿಮಗೆ ಎಂದಿನಂತೆ ಇಷ್ಟವಾಗಲಿದೆ . ಯತಿರಾಜ್ ಸಾಥ್ ಮರೆಯೋಲ್ಲ.

ನಟ ಪ್ರೇಮ್ ಕೂಡ ಕಥೆ ಕೇಳಿದ ತಕ್ಷಣ ತಮ್ಮ ಮಗನನ್ನ ರಾಮರಾಜ್ಯಕ್ಕೆ ಕಳುಹಿಸಲು ಒಪ್ಪಿಕೊಂಡ್ರು .ಅವರ ಪತ್ನಿ ಸದಾ ಸಹಕಾರಿ. ಎಲ್ಲಕಿಂತ ಮುಖ್ಯವಾಗಿ ಚಿನಕುರಳಿಯಂಥ ಮಕ್ಕಳ ಅಭಿನಯ ಎಂದು ಮರೆಯಲಾರೆ. ತೆರೆಯ ಮೇಲೆ ನೋಡಿದಾಗ ನಿಮಗೂ ಮಕ್ಕಳು ಮನಸ್ಸಿನಲ್ಲಿ ಉಳಿದುಬಿಡುತ್ತಾರೆ.

ಏಕಾಂತ್ ಪ್ರೇಮ್(ಪ್ರೇಮ್ ಪುತ್ರ ), ಪುಟಾಣಿ ಪಂಟ್ರು ವಿಜೇತ ಹೇಮಂತ್ , ಹರಿವು ಚಿತ್ರದಲ್ಲಿ ಸಂಚಾರಿ ವಿಜಯ್ ಜೊತೆ ನಟಿಸಿದ ಸೋಹಿಬ್, ಕಾರ್ತಿಕ್ (ದೊಡ್ಮನೆ ಹುಡುಗ ಚಿತ್ರದಲ್ಲಿ ಪುಟ್ಟ ಪುನೀತ್ ) ಇವರೆಲ್ಲ ಐದು -ಆರನೇ ಕ್ಲಾಸ್ ನಲ್ಲಿ ಓದ್ತಿರೋ ಹನ್ನೆರಡು ಹದಿಮೂರು ವಯಸ್ಸಿನವರು. ಆದ್ರೆ ಅವರ ಬದ್ಧತೆ ಮೆಚ್ಚಲೇಬೇಕು.

ಒಂದಂತೂ ಸತ್ಯ ಮಕ್ಕಳ ಸಿನಿಮಾ ಸಂದೇಶ ಹೊತ್ತು ತರುತ್ತಿದೆ.ದೊಡ್ಡವರೆಲ್ಲ ಜಾಣರಲ್ಲ ಚಿಕ್ಕವರೆಲ್ಲ ಕೋಣರಲ್ಲ ಅನ್ನುವುದನ್ನು ಹೇಳುತ್ತೆ. ಜೊತೆಜೊತೆಗೆ ಅನ್ಯಾಯದ ವಿರುದ್ಧ ಹೋರಾಡಲು ಶಾಲೆಯಲ್ಲಿ ಕಲಿತ ಗಾಂಧೀಜಿಯ ತತ್ವ  ದಿವ್ಯ ಮಂತ್ರವಾದ ರೀತಿಯನ್ನು ತೋರಿಸುತ್ತೆ.

ಮಕ್ಕಳಿಗೆ ಮನರಂಜನೆಯನ್ನೂ ಕೊಟ್ಟು ,ಮನುಷ್ಯತ್ವ ಬೆಳೆಸುವ ,ಪ್ರೀತಿ ಹಂಚುವ , ದಿಟ್ಟತನದ ಕಡೆಗೆ ಸೆಳೆಯುವ ಸಿನಿಮಾ ರಾಮರಾಜ್ಯ . ಮುಂದಿನ ತಿಂಗಳು ತೆರೆಗೆ ತರಲಿದ್ದೇವೆ. ನಿಮ್ಮ ಸಹಕಾರವಿರಲಿ.

ನೀಲ್ ಕೆಂಗಾಪುರ್  ಮಾತಿನಲ್ಲಿ ವಿಶ್ವಾಸವಂತೂ  ಕಾಣುತ್ತಿದೆ ನಾವು ಕಾದು ನೋಡೋಣ. ಕನ್ನಡದಲ್ಲಿ ಮಕ್ಕಳ ಸಿನಿಮಾಗಳು ಹೆಚ್ಚೆಚ್ಚು ಬರಲಿ . ವ್ಯಾವಹಾರಿಕ ದೃಷ್ಟಿಯಿಂದಲೂ ಲಾಭ ತರಲಿ. ರಾಮ  ಮಂದಿರಕ್ಕೆ ಮಾತ್ರ ಸೀಮಿತವಾಗದೆ ಸಹನೆ ,ಪ್ರೀತಿಯ  ಸಂಕೇತವಾಗಿ ರಾಮ ಬದುಕಿನ ಆದರ್ಶವಾಗಲಿ. 

ರಾಮನವಮಿಯ ಶುಭಾಶಯಗಳು.

-Ad-

Leave Your Comments