ಕನ್ನಡದ ಪ್ರಥಮ ಪ್ರಯೋಗಶೀಲ ಸಂಗೀತ ನಿರ್ದೇಶಕರು ಯಾರು ?

  ಮೊನ್ನೆ ಹಾಗೆ ಹಳೆಯ ಚಿತ್ರಗೀತೆ ಕೇಳುತ್ತಿದ್ದೆ , “ಆಗದು ಎಂದು ಕೈಲಾಗದು ಎಂದೂ ಕೈಕಟ್ಟಿ ಕುಳಿತರೆ” ಹಾಡು ಬರುತ್ತಿತ್ತು , ಪಕ್ಕದಲ್ಲಿ ಕುಳಿತಿದ್ದ ನನ್ನ ಮಗ [ ಆಧುನಿಕ ಸಂಗೀತ ಪ್ರಿಯ ] ಕೇಳಿದ,

  “ಅಪ್ಪ… ಈ ಹಾಡಿನ ಸಂಗೀತ ಚೆನ್ನಾಗಿದೆ ಮ್ಯೂಸಿಕ್ ಕಂಪೋಸರ್ ಯಾರು?” ಅಂತಾ ಕೇಳಿದ.

  ನನಗೂ ಅಚ್ಚರಿಯಾಗಿ ಆ ಸಂಗೀತ ನಿರ್ದೇಶಕರ ಹೆಸರು ಹೇಳಿ “ಈ ಹಾಡಿನ ಸಂಗೀತ ಯಾಕೆ ಇಷ್ಟ ಆಯ್ತು?” ಎಂದು ಕೇಳಿದೆ.

  ಅದಕ್ಕೆ ಅವನು ಈ ಹಾಡನ್ನು ಟಿ.ವಿ.ಯಲ್ಲಿ ನೋಡಿದ್ದೇ, ಅಲ್ಲಿನ ದೃಶ್ಯಗಳಲ್ಲಿ ಬರುವ ಮೆಷಿನ್ ಶಬ್ಧಗಳನ್ನೂ ಹಾಡಿಗೆ ಪೂರಕವಾಗುವಂತೆ ಸಂಗೀತದಲ್ಲಿ ನುಡಿಸಿ ಹಾಡಿನಲ್ಲಿ ತಂದಿದ್ದಾರೆ, ಆ ಹಾಡಿನ ದೃಶ್ಯಕ್ಕೂ ಸಂಗೀತಕ್ಕೂ ಬಹಳ ಹೊಂದಾಣಿಕೆ ಇದೆ, ಅದಕ್ಕೆ ಅವತ್ತಿನಿಂದ ಈ ಹಾಡಿನ ಸಂಗೀತಗಾರ ಯಾರು? ಎಂಬ ಬಗ್ಗೆ ಕುತೂಹಲ ಇತ್ತು ಅದಕ್ಕೆ ಕೇಳಿದೆ ಅಂದಾ ….!

  ಇವತ್ತಿನ ಪೀಳಿಗೆಗೆ ಆ ಅದ್ಭುತ ವ್ಯಕ್ತಿಯ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದಿರಲಾರದು ,ಆದರೆ ಹಾಡಿನ ಪರಿಚಯವಂತೂ ಇದ್ದೆ ಇರುತ್ತದೆ .

  ಆದರೆ ನಿಮಗೆ ತಿಳಿದಿರಬಹುದು ಈ ವ್ಯಕ್ತಿಯ ಬಗ್ಗೆ ಸ್ವಲ್ಪ ಕ್ಲೂ ಬೇಕಾ ???

  1] ಕನ್ನಡ ಚಿತ್ರ ರಂಗದಲ್ಲಿ ಭೀಮ್ ಸೇನ್ ಜೋಷಿ , ಬಾಲ ಮುರಳಿ ಕೃಷ್ಣ , ಮನ್ನಾಡೆ, ಜೇಸುದಾಸ್, ಸುಮನ್ ಕಲ್ಯಾಣ್ ಪುರ್ ರಂತಹ ದಿಗ್ಗಜಗಳಿಂದ ಕನ್ನಡ ಚಿತ್ರಗಳಲ್ಲಿ ಹಾಡು ಹೇಳಿಸಿದ ಸಾಹಸಿ.

  2] ಡಾ./.ರಾಜ್ ಕುಮಾರ್ ಸಾಮಾನ್ಯ ನಟ ಆಗಿದ್ದ ಕಾಲದಲ್ಲಿ ಅವರ ಪ್ರತಿಭೆಗೆ ಮಾರುಹೋಗಿ “ಸಂಪತ್ತಿಗೆ ಸವಾಲ್ “, “ಮಹಿಷಾಸುರ ಮರ್ಧಿನಿ” ಚಿತ್ರಗಳಿಗಿಂತ ಮೊದಲೇ ಹಾಡನ್ನು ಹಾಡಿಸಿದ ಪ್ರಯೋಗಶೀಲ.

  3] ಸಂಗೀತ ನಿರ್ದೇಶನದ ಜೊತೆಗೆ ಕನ್ನಡ ಭಾಷೆಯ ಚೆಲುವಿಗೆ ಸೋತು ತಾನೂ ಕನ್ನಡ ಹಾಡನ್ನು ಹಾಡಿ, ಆ ಸುಂದರ ಹಾಡುಗಳು ಇಂದಿಗೂ ಜನಮನದಲ್ಲಿ ನಿಲ್ಲುವಂತೆ ಮಾಡಿದವರು.

  4] ಕನ್ನಡ ದಲ್ಲಿ ನಿರ್ಮಾಣವಾದ ಬಾಂಡ್ ಚಿತ್ರಗಳಿಗೆ ವಿದೇಶಿ ಸಂಗೀತ ಸಾಧನಗಳ ಮೂಲಕ ಸಂಗೀತ ನೀಡಿದ ಸಂಗೀತ ನಿರ್ದೇಶಕ.

  ಈಗ ಗೊತ್ತಾಗಿರಬೇಕು ??? ಆಲ್ವಾ !!!! ಅಯ್ಯೋ ಗೊತಾಗ್ಲಿಲ್ವಾ ???ಹೋಗ್ಲಿ ಬಿಡಿ, ಕೊನೆಯದಾಗಿ ಒಂದು ಕ್ಲೂ ……………..!!

  5]ಕನ್ನಡ ಚಿತ್ರ ಒಂದಕ್ಕೆ ಅಗತ್ಯ ವಿದ್ದ ಶಹನಾಯಿ ವಾದನಕ್ಕೆ, ಈ ದೇಶದ ಖ್ಯಾತ ಶಹನಾಯಿ ವಾದಕರಾದ ಉಸ್ತಾದ್ ಬಿಸ್ಮಿಲ್ಲಾ ಖಾನ್ ರವರನ್ನು ಕರೆತಂದು ಅವರ ಸಂಗೀತ ಮಾಂತ್ರಿಕತೆಯನ್ನು ಕನ್ನಡಿಗರಿಗೆ ಪರಿಚಯಿಸಿದ ಮಾಂತ್ರಿಕ.

  ಈಗ ಗೊತ್ತಾಗಿರುತ್ತೆ ಬಿಡಿ !!

  ಹೌದು, ನಿಮ್ಮ ಅನಿಸಿಕೆ ಸರಿ ನಾನು ಈಗ ಬರೆಯಲು ಹೊರಟಿರುವುದು ಕನ್ನಡ ಚಿತ್ರ ರಂಗದ ಒಬ್ಬ ಮಹಾನ್ ಸಂಗೀತ ನಿರ್ದೇಶಕ ಜಿ.ಕೆ.ವೆಂಕಟೇಶ್ ಬಗ್ಗೆ.

  ಹೌದು, ನಾನು ಬಾಲ್ಯ ದಿಂದಲೂ ಕನ್ನಡ ಚಿತ್ರ ರಂಗದ ಬಹಳಷ್ಟು ಹಾಡುಗಳನ್ನು ರೇಡಿಯೋ ದಲ್ಲಿ ಕೇಳುತ್ತಾ ಬೆಳೆದವನು.ಚಿಕ್ಕವನಿದ್ದಾಗಿನಿಂದಲೂ ಇವರ ಸಂಗೀತದ ಹಾಡುಗಳು ನನ್ನ ಗಮನ ಸೆಳೆಯುತ್ತಿದ್ದವು. “ಸಂಧ್ಯಾ ರಾಗದ ಈ ಪರಿಯ ಸೊಬಗು ” ” ದೂರದ ಬೆಟ್ಟದ ಪ್ರೀತಿನೆ ಆ ದ್ಯಾವ್ರು ತಂದಾ ” “ಬಂಗಾರದ ಮನುಷ್ಯದ ಎಲ್ಲಾ ಹಾಡುಗಳು ” ಭೂತಯ್ಯನ ಮಗ ಅಯ್ಯು, ಕಸ್ತೂರಿ ನಿವಾಸ, ಹಾಲು ಜೇನು, ಸನಾದಿ ಅಪ್ಪಣ್ಣ ,ಸಂಪತ್ತಿಗೆ ಸವಾಲ್, ಚಿತ್ರದ ಎಲ್ಲಾ ಹಾಡುಗಳು ಇನ್ನೂ ಬಹಳಷ್ಟು ನನ್ನ ಅಚ್ಚುಮೆಚ್ಚಿನ ಹಾಡುಗಳಾಗಿ ಉಳಿದವು, ಹಾಗು ಇಂದಿಗೂ ಉಳಿದಿವೆ. ಬನ್ನಿ ಜಿ.ಕೆ.ವೆಂಕಟೇಶ್ ಬಗ್ಗೆ ತಿಳಿಯೋಣ.

  ಗುರ್ಜದ ಕೃಷ್ಣದಾಸ ವೆಂಕಟೇಶ [ ಜಿ.ಕೆ.ವೆಂಕಟೇಶ್ ಮೂಲ ಹೆಸರು] ಮೂಲತಃ ತೆಲುಗಿನವರು, ೨೧-೦೯-೧೯೨೭ ರಲ್ಲಿ ಜನನ , ಚಿಕ್ಕ ವಯಸ್ಸಿನಲ್ಲಿ ತನ್ನ ಅಣ್ಣ ಜಿ.ಕೆ.ಎಸ್.ಪತಿ ಅವರಿಂದ ವೀಣಾ ವಾದನ ಕಲಿಕೆ , ನಂತರ ಮುಂದಿನ ವರ್ಷಗಳಲ್ಲಿ ಸಹ ವೀಣಾ ವಾದಕರಾಗಿ S. V. ವೆಂಕಟರಾಮನ್ , S. M. ಸುಬ್ಬಯ್ಯ ನಾಯ್ಡು and C. R. ಸುಬ್ಬುರಾಮನ್, ಮುಂತಾದವರಿಗೆ ಸಾಥ್ ನೀಡಿ ಸಂಗೀತದ ಗರಡಿಯಲ್ಲಿ ಪಳಗಿದರು.

  ಕಾಲ ಕ್ರಮೇಣ ಒಳ್ಳೆಯ ಹಾಡುಗಾರ ಆಗಿ ತಯಾರಾಗಿ ಆಕಾಶವಾಣಿಯಲ್ಲೂ ಸಹ ಇವರು ಗಾಯಕರಾಗಿ ಹಾಡಿದ್ದರು . ಆ ನಂತರದ ದಿನಗಳಲ್ಲಿ ಎಂ.ಎಸ್.ವಿಶ್ವನಾಥನ್ , ಎಸ್.ಎಂ ಸುಬ್ಬಯ್ಯ ನಾಯ್ಡು ಮುಂತಾದ ಗೆಳೆಯರ ಗರಡಿಯಲ್ಲಿ ಸಿನಿಮಾಗಳಿಗೆ ರಾಗ ಸಂಯೋಜನೆ ಕೆಲಸ ಕಲಿತರು. ನಂತರ ತಾವೇ ಸಂಗೀತ ನಿರ್ದೇಶನಕ್ಕಿಳಿದು ೧೯೫೨ ರಲ್ಲಿ ಮಲಯಾಳಂ ಭಾಷೆಯಲ್ಲಿ ತಯಾರಾಗಿ ತಮಿಳಿಗೆ ಡಬ್ ಆದ “ನಡಿಗೈ” ಚಿತ್ರಕ್ಕೆ ಮೊದಲ ಸಂಗೀತ ನಿರ್ದೇಶಿಸಿದರು.

  ಮುಂದೆ ೧೯೫೫ ರಲ್ಲಿ ಡಾ// ರಾಜ್ ಕುಮಾರ್ ಅಭಿನಯದ “ಸೋದರಿ” ಚಿತ್ರಕ್ಕೆ ಸ್ವರ ಸಂಯೋಜನೆ ಮಾಡಿದರು, ಈ ಎರಡನೇ ಪ್ರಯತ್ನ ಯಶಸ್ವಿಯಾಗಿ ಕನ್ನಡ ಜನರ ಮನಸ್ಸಿಗೆ ಹತ್ತಿರವಾದರು. ಮುಂದೆ ಅದೇ ವರ್ಷ ” ಓಹಿಲೇಶ್ವರ ” ಎಂಬ ಚಿತ್ರದ ಸಂಗೀತ ನೀಡುವ ಅವಕಾಶ ಸಿಕ್ಕಿತು, ಆ ಚಿತ್ರದಲ್ಲಿ ಅಂದರೆ ೧೯೫೫ ರಲ್ಲೇ ರಾಜಕುಮಾರ್ ಕಂಪನಿ ನಾಟಕದ ಕಲಾವಿದರಾದ ಕಾರಣ ಹಾಡುಗಾರಿಕೆ ಇದ್ದೆ ಇರುತ್ತದೆ ಎಂಬ ಉತ್ಸಾಹದಿಂದ ರಾಜಕುಮಾರ್ ರವರ ದ್ವನಿಯಲ್ಲಿ ” ಶರಣು ” ಎಂಬ ಭಕ್ತಿ ಪ್ರಧಾನ ಗೀತೆಯನ್ನು ಹಾಡಿಸಿದರು. ಇದು ರಾಜಕುಮಾರ ಬದುಕಿನಲ್ಲಿ ಪ್ರಥಮವಾಗಿ ಕನ್ನಡ ಚಿತ್ರರಂಗದ ಲ್ಲಿ ಚಿತ್ರದಲ್ಲಿ ನಟಿಸಿದ ಜೊತೆಗೆ ಹಾಡಿದ ಗಾಯಕ ಎಂಬ ಇತಿಹಾಸಕ್ಕೆ.

  ಅಂದಿನ ದಿನಗಳಲ್ಲಿ ಕನ್ನಡ ಚಿತ್ರಗಳಲ್ಲಿ ತನ್ನ ಪ್ರತಿಭೆ ಮೆರೆದ ಜಿ.ಕೆ.ವೆಂಕಟೇಶ್ , ಟಿ. ಜಿ.ಲಿಂಗಪ್ಪ, ವಿಜಯ ಭಾಸ್ಕರ್ ರವರೊಂದಿಗೆ ಕನ್ನಡ ಚಿತ್ರರಂಗದಲ್ಲಿ ನೆಲೆ ಕಂಡುಕೊಂಡರು. ಅಂದಿನ ದಿನಗಳಲ್ಲಿ ಪಿ.ಬಿ. ಶ್ರೀನಿವಾಸ್ ರಂತ ಹೊಸ ಗಾಯಕರನ್ನು ಹೆಚ್ಚು ಅವಕಾಶ ನೀಡಿ ಬೆಳಸಿದ ಜಿ.ಕೆ.ವೆಂಕಟೇಶ್ , ಕನ್ನಡದಲ್ಲಿ ತಯಾರಾದ ಜೇಮ್ಸ್ ಬಾಂಡ್ ಶೈಲಿಯ ಚಿತ್ರಗಳಿಗೆ ಆಧುನಿಕ ವಾಧ್ಯಗಳೊಂದಿಗೆ ಸಂಗೀತ ನೀಡಿ ದರು. ಇಂತಹ ಪ್ರಯೋಗಕ್ಕೆ ಕನ್ನಡದಲ್ಲಿ ಬಹಳ ಪ್ರೋತ್ಸಾಹ ಸಿಕ್ಕಿತು.

  ಆ ದಿನಗಳಲಿ ವಿಶ್ವಾದ್ಯಂತ ಪ್ರಸಿದ್ದಿ ಹೊಂದಿದ್ದ “ಬೀಟಲ್ಸ್ ” ಹಾಡಿನ ಕಡೆ ಯುವಕರು ಮುಖ ಮಾಡಿದ್ದನ್ನು ಕಂಡು ಕನ್ನಡ ದಲ್ಲಿ ತಾವೂ ಸಹ ಪ್ರಯೋಗ ಮಾಡಿ ಡಾ.ರಾಜಕುಮಾರ್ ಅಭಿನಯಿಸಿದ “ಲಗ್ನ ಪತ್ರಿಕೆ” ಎಂಬ ಹಾಸ್ಯ ಚಿತ್ರದಲ್ಲಿ ಸೀನು ಸುಬ್ಬು ಹಾಡನ್ನು ವೇಗವಾಗಿ ಹಾಡಿಸಿ ಕೇಳಲು ಇಂಗ್ಲೀಷಿನ ಬೀಟಲ್ಸ್ ತಂಡದ ಹಾಡಿನಂತೆ ತಯಾರುಮಾಡಿ ಕೊಟ್ಟು ಗೆದ್ದರು.

  ಇವತ್ತಿಗೂ ಈ ಹಾಡು ವೇಗವಾಗಿ ಹಾಡಲಾದ ಕನ್ನಡ ಪಾಪ್ ಹಾಡು , ಹೀಗೆ ಪ್ರಯೋಗ ಮಾಡುತ್ತಾ ಜಿ.ಕೆ.ವೆಂಕಟೇಶ್ ಬಹಳಷ್ಟು ಹಿಟ್ ಗೀತೆಗಳನ್ನು ನೀಡಿದ್ದಾರೆ. ೧೯೫೫ ರ ವರ್ಷದಲ್ಲಿ ಸಂಗೀತ ನೀಡಿದ ಕನ್ನಡ ದ ಸೋದರಿ ಚಿತ್ರದಿಂದ ೧೯೮೫ ರಲ್ಲಿ ಅಂತಿಮವಾಗಿ ಸಂಗೀತ ನೀಡಿದ ಅದೇ ಕಣ್ಣು ಚಿತ್ರದ ವರೆಗೆ ಕನ್ನಡ ಚಿತ್ರ ರಂಗದಲ್ಲಿ ಸಂಗೀತ ದಿಗ್ಗಜರಾಗಿ ಮೆರೆದು ಅರವತ್ತೊಂದು ಕನ್ನಡ ಚಿತ್ರಗಳಿಗೆ ರಾಗ ಸಂಯೋಜನೆ ಮಾಡಿ ಕನ್ನಡಕ್ಕೆ ಮಧುರ ಹಾಡುಗಳ ಕೊಡುಗೆ ನೀಡಿದ್ದಾರೆ.

  ಮತ್ತೊಂದು ವಿಶೇಷ ಅಂದರೆ ಕನ್ನಡದಲ್ಲಿ ಸಂಗೀತ ನೀಡಿದ ಮೊದಲ ಚಿತ್ರ ಹಾಗು ಕೊನೆಯ ಚಿತ್ರ ಎರಡೂ ಡಾ. ರಾಜಕುಮಾರ್ ರವರ ಚಿತ್ರಗಳೇ ಆಗಿದ್ದು ಇತಿಹಾಸ, ಮತ್ತೊಂದು ವಿಚಾರ ಡಾ. ರಾಜಕುಮಾರ್ ರವರಲ್ಲಿನ ಗಾಯಕನನ್ನು ಪ್ರಥಮವಾಗಿ ಪರಿಚಯಿಸಿದ್ದು , ಓಹಿಲೇಶ್ವರ ಚಿತ್ರದಲ್ಲಿ, ನಂತರ ಎಸ್ . ಜಾನಕಿಯವರ ಜೊತೆ ಮಹಿಷಾಸುರ ಮರ್ಧಿನಿ ಚಿತ್ರದಲ್ಲಿ “ತುಂಬಿತು ಮಾನವ ” ಹಾಡಿನಲ್ಲಿ.

  ಮುಂದುವರಿಯುವುದು……..

  ಭಾಗ ೨ ಓದಲು ಇಲ್ಲಿ ಕ್ಲಿಕ್ ಮಾಡಿ

  ನಿಮ್ಮೊಳಗೊಬ್ಬ ಬಾಲು

   

  -Ad-

  1 COMMENT

  1. “ಆ ದಿನಗಳಲಿ ವಿಶ್ವಾದ್ಯಂತ ಪ್ರಸಿದ್ದಿ ಹೊಂದಿದ್ದ “ಬೀಟಲ್ಸ್ ” ಹಾಡಿನ ಕಡೆ ಯುವಕರು ಮುಖ ಮಾಡಿದ್ದನ್ನು ಕಂಡು ಕನ್ನಡ ದಲ್ಲಿ ತಾವೂ ಸಹ ಪ್ರಯೋಗ ಮಾಡಿ ಡಾ.ರಾಜಕುಮಾರ್ ಅಭಿನಯಿಸಿದ “ಲಗ್ನ ಪತ್ರಿಕೆ” ಎಂಬ ಹಾಸ್ಯ ಚಿತ್ರದಲ್ಲಿ ಸೀನು ಸುಬ್ಬು ಹಾಡನ್ನು ವೇಗವಾಗಿ ಹಾಡಿಸಿ ಕೇಳಲು ಇಂಗ್ಲೀಷಿನ ಬೀಟಲ್ಸ್ ತಂಡದ ಹಾಡಿನಂತೆ ತಯಾರುಮಾಡಿ ಕೊಟ್ಟು ಗೆದ್ದರು.”
   ಲಗ್ನಪತ್ರಿಕೆ ಸಿನೆಮಾಗೆ ಸಂಗೀತ ನೀಡಿದ್ದು ವಿಜಯಭಾಸ್ಕರ್ ಜಿ ಕೆ ವೆಂಕಟೇಶ್ ಅಲ್ಲ. ಚಿತ್ರ ಸಂಗೀತದಲ್ಲಿ ಅನಾವಶ್ಯಕ ಗದ್ದಲವನ್ನು ತರದೆ ಅತ್ಯಂತ ಕಡಿಮೆ ವಾದ್ಯಗಳನ್ನು ಬಳಸಿ, ರಾಗ ಸಂಯೋಜನೆಯಲ್ಲಿ , ಹಾಡಿನ ಸಾಹಿತ್ಯ ಮತ್ತು ಭಾವಗಳಿಗೆ ಹೆಚ್ಚು ಒತ್ತು ಕೊಟ್ಟು ಅತ್ಯಂತ ಶ್ರೇಷ್ಟ ಹಾಡುಗಳನ್ನು ಕನ್ನಡಕ್ಕೆ ನೀಡಿದವರು ಶ್ರೀ ವಿಜಯಭಾಸ್ಕರ್. ಇಲ್ಲಿ ಒಬ್ಬರಿಗೆ ಮತ್ತೊಬ್ಬರನ್ನು ಹೋಲಿಸುವ ಯತ್ನವಲ್ಲ ಅಂದಿನ ಸಂಗೀತ ನಿರ್ದೇಶಕರುತಮ್ಮದೇ ಆದ ದಾಟಿಯನ್ನು ರೂಢಿಸಿಕೊಂಡಿದ್ದರು. ಹಾಡನ್ನು ಕೇಳುತ್ತಿದ್ದ ಹಾಗೆ ಸಂಗೀತ ನಿರ್ದೇಶಕರು ಯಾರು ಎಂದು ಹೇಳಬಹುದಾದಷ್ಟು ವ್ಯಕ್ತಿವ್ಯಶಿಷ್ಟತೆಯನ್ನು ಅವರು ಉಳಿಸಿಕೊಂಡಿದ್ದರು.

  Leave Your Comments