ಅಮಾಯಕ ನಟರಿಗೆ ಮತ್ತೊಬ್ಬ ನಿರ್ದೇಶಕನ “ಹಾಲುತುಪ್ಪ”

ಗಡ್ಡಪ್ಪ ಮತ್ತು ಸೆಂಚುರಿ ಗೌಡ ಎಂಬಿಬ್ಬರು ಅಮಾಯಕ ನಟರು ಕನ್ನಡ ಚಿತ್ರರಂಗಕ್ಕೆ ಸಿಕ್ಕಿದ್ದು ತಿಥಿ ಚಿತ್ರದ ಮೂಲಕ. ಅನಂತರ ಅನೇಕ ನಿರ್ದೇಶಕರು ಅವರನ್ನು ನಾನಾ ರೀತಿಯಲ್ಲಿ ಬಳಸಿಕೊಂಡಿದ್ದಾರೆ. ಕಡೆಯದಾಗಿ ಈಗ ಹಾಲು ತುಪ್ಪ ಕೂಡ ಆಗಿ ಹೋಗಿದೆ.

ಈ ಇಬ್ಬರನ್ನು ಬಳಸಿಕೊಂಡು ಹಾಲು ತುಪ್ಪ ಸಿನಿಮಾ ಮಾಡುತ್ತಾರೆ ಅಂತನ್ನುವಾಗಲೇ ನಿರ್ದೇಶಕ ಶಶಾಂಕ್ ರಾಜ್ ಎಂತಹ ಸಿನಿಮಾ ಪ್ರೇಮಿ ಅನ್ನುವ ಅಂದಾಜು ಸಿನಿಮಾ ಪ್ರೇಮಿಗಳಿಗೆ ಸಿಕ್ಕಿರಬಹುದು. ಅದನ್ನು ಒಂದಿಷ್ಟೂ  ಬದಲಿಸುವ ಪ್ರಯತ್ನವನ್ನು ನಿರ್ದೇಶಕರು ಮಾಡಿಲ್ಲ.

ಇಲ್ಲೊಂದು ಹಳ್ಳಿ ಇದೆ. ಹಳ್ಳಿಯಲ್ಲಿ ನಾಲ್ಕೈದು ಮಂದಿ ಪ್ರತಿಷ್ಟಿತ ವ್ಯಕ್ತಿಗಳಿದ್ದಾರೆ. ಅವರಲ್ಲಿ ಗಡ್ಡಪ್ಪ, ಸೆಂಚುರಿ ಗೌಡ, ಕೋಟೆ ನಾಗರಾಜ್, ತಮ್ಮಣ್ಣ, ಹೊನ್ನವಳ್ಳಿ ಕೃಷ್ಣ ಮುಖ್ಯರು. ಅವರೊಂದಿಗೆ ಆಗೊಮ್ಮೆ ಈಗೊಮ್ಮೆ ಬರುವ ನಾಯಕ ಪವನ್ ಸೂರ್ಯ ಇರುತ್ತಾರೆ. ಲವ್ವಿಗೆ ಪಕ್ಕದೂರಿನ ಹುಡುಗಿ ಮೌನ ಇದ್ದಾಳೆ. ಈ ಹಳ್ಳಿಗೂ ಆ ಹಳ್ಳಿಗೂ ದ್ವೇಷವಿದೆ ಅಂತಲೇ ಕತೆ ಶುರು ಮಾಡುವ ನಿರ್ದೇಶಕರು ಅನಂತರ ಈ ಹಳ್ಳಿಗೊಂದು ಕಂಪ್ಯೂಟರ್ ಟೀಚರ್ ಅನ್ನು ಕರೆದುಕೊಂಡು ಬರುತ್ತಾರೆ. ನಿರ್ದೇಶಕರ ಕಲ್ಪನೆ ಎಷ್ಟು ಅದ್ಭುತವಾಗಿದೆ ಎಂದರೆ ಆ ಟೀಚರ್ ಶಾಲೆಗೆ ಹೋಗುವುದೇ ಇಲ್ಲ. ಅದರ ಬದಲಿಗೆ ಹಳ್ಳಿಯ ಪ್ರತಿಷ್ಟಿತರ ಜೊತೆ ತೋಟ ಸುತ್ತುತ್ತಾ ಕಂಪ್ಯೂಟರ್ ಪಾಠ ಹೇಳುತ್ತಾ ಕಾಲ ಕಳೆಯುತ್ತಾರೆ. ಯಾವ ಊರಲ್ಲೂ ಸಿಗದ ಕಂಪ್ಯೂಟರ್ ಟೀಚರ್ ಇಲ್ಲಿ ಸಿಗುತ್ತಾರೆ ಅಂದರೆ ಲೆಕ್ಕ ಹಾಕಿ ಎಂಥಾ ತಲೆ ಈ ಚಿತ್ರದ ನಿರ್ದೇಶಕರದು ಎಂದು.

ಆ ಪಾತ್ರಗಳಂತೂ ಟೀಚರ್‌ನ ಹಿಂದಕ್ಕೂ ಮುಂದಕ್ಕೂ ಓಡಾಡಿ ,ಅಡ್ಡಾಡಿ, ಮಾತಾಡಿ.. ನುಲಿದಾಡಿ ನೋಡುತ್ತಿದ್ದವರನ್ನು ಗಾಬರಿಗೊಳಿಸಿಬಿಡುತ್ತಾರೆ. ಇವನ್ನೆಲ್ಲಾ ನೋಡುತ್ತಿದ್ದರೆ ಸಹೃದಯ ನೋಡುಗರು ಸಂಕಟ ಬಂದಾಗ ವೆಂಕಟರಮಣ ಅನ್ನೋ ಥರ ನಿರ್ದೇಶಕರನ್ನು ನೂರಾರು ಬಾರಿ ನೆನೆಯದೇ(ಉಗಿಯುತ್ತಾ ) ಇದ್ದರೆ ಕೇಳಿ. ಅದು ಶಶಾಂಕ್ ರಾಜ್ ಅವರ ಶಕ್ತಿ.

ಇಲ್ಲಿ ಗಡ್ಡಪ್ಪ ಪಾತ್ರವೊಂದನ್ನು ಬಿಟ್ಟರೆ ಯಾವ ಪಾತ್ರಕ್ಕೂ ಘನತೆ ಇಲ್ಲ. ಕತೆ, ಚಿತ್ರಕತೆಯ ಮೇಲಂತೂ ಕಿಂಚಿತ್ತೂ  ಗೌರವ ಇಲ್ಲ. ಟಾರ್ಚ್ ಹಾಕಿ ಹುಡುಕಿದರೂ ಒಳ್ಳೆಯ ದೃಶ್ಯ ಸಿಗುವುದಿಲ್ಲ. ನಗಿಸಬೇಕೆಂದೇ ಹೇಳುವ ಡಬಲ್ ಮೀನಿಂಗ್ ಡೈಲಾಗ್‌ಗಳನ್ನು ಕೇಳಿದರೆ ನಗು ಬರುವುದಿಲ್ಲ.ಮೈ ಉರಿದುಹೋಗತ್ತೆ ಅಷ್ಟೇ . ಕೀಳು ಅಭಿರುಚಿಯ ಪ್ರತೀಕವಷ್ಟೇ . ಹಾಗಾಗಿ ಈ ಸಿನಿಮಾಗೆ ಹಾಲು ತುಪ್ಪ ಎಂಬ ಟೈಟಲ್ಲು ಸರಿಯಾಗಿ ಹೊಂದುತ್ತದೆ.

ಈ ಚಿತ್ರದಲ್ಲಿ ನಿಮಗೆ ಏನಾದರೂ ಇಷ್ಟವಾದರೆ ಅದು ಇಬ್ಬರೇ. ಅದು ಗಡ್ಡಪ್ಪ ಮತ್ತು ಸೆಂಚುರಿ ಗೌಡ. ಅವರ ಉಪಸ್ಥಿತಿಯೇ ಖುಷಿ ಕೊಡುವುದು. ಆದರೆ ಅವರನ್ನು ನೋಡುವಾಗ ಪಾಪ ಅನ್ನಿಸುತ್ತದೆ. ತಿಥಿ ಸಿನಿಮಾದಲ್ಲಿ ಅವರು ನಟಿಸಿರಲಿಲ್ಲ, ಕಾಣಿಸಿಕೊಂಡಿದ್ದರು. ಆದರೆ ಅನಂತರ ಬಂದ ಎಲ್ಲಾ ಸಿನಿಮಾದಲ್ಲೂ ಅವರಿಂದ ನಟನೆ ತೆಗೆಯುವ ಪ್ರಯತ್ನ ನಡೆಯಿತು. ಅಲ್ಲದೇ ಈ ಸಿನಿಮಾದಲ್ಲಿ ಸೆಂಚುರಿ ಗೌಡರನ್ನು ನೋಡಿದರೆ ಪಾಪ ಅನ್ನಿಸದೇ ಇರದು.

ಕಡೆಯದಾಗಿ ಹೇಳುವುದಾದರೆ ಈ ಸಿನಿಮಾದ ಕತೆಯಲ್ಲೇ ದೋಷವಿದೆ. ಚಿತ್ರಕತೆಯಂತೂ ರಾಮಾ .. ರಾಮಾ.. ಕನ್ನಡ ಚಿತ್ರರಂಗಕ್ಕೆ ಎಂಥೆಂಥ ಅರೆಬೆಂದವರು ಬರ್ತಾರಪ್ಪ ಅನ್ನಿವಷ್ಟು ಕಷ್ಟ ಕಷ್ಟ. ಯಾರೇ ಆಗಲಿ ಸಿನಿಮಾ ಮಾಡುವವರು ಮೊದಲು ಶ್ರದ್ಧೆಯಿಂದ ಕತೆ, ಚಿತ್ರಕತೆ ಮಾಡಿಕೊಳ್ಳಬೇಕು. ಅದರಲ್ಲಿ ಸೋಮಾರಿತನ- ತೋರಿಸಬಾರದು.ಸಿನಿಮಾ ಮಾಡುವ ಕಲೆ  ಗೊತ್ತಿರಬೇಕು . ಇಲ್ಲಿ ಯಾವ ದೃಶ್ಯವೂ ನಿಮ್ಮನ್ನು ಕಾಡುವುದಿಲ್ಲ ಮತ್ತು ನೆನಪಲ್ಲಿ ಉಳಿಯುವುದಿಲ್ಲ. ಹಾಗಾಗಿ ನಾನು ಈ ಚಿತ್ರಕ್ಕೆ ಐದರಲ್ಲಿ ಒಂದು ಸ್ಟಾರ್ ನೀಡುತ್ತೇನೆ.

– ರಿಚ್ಚೀ

 

-Ad-

Leave Your Comments