ಸುದೀಪ್ @44 …

ಶುಭಾಶಯ ನಮ್ಮ ಶುಭಾಶಯ...

ಸೌಮ್ಯ ಮುಖದ ಮುದ್ದು ಹುಡುಗನಂತೆ ಕಾಣ್ತಿದ್ದ ಸುದೀಪ್ ಸಂಜೀವ್ ಕಿಚ್ಚ, ಖಡಕ್ ಕೆಂಪೇಗೌಡ, ವೀರಮದಕರಿ, ಮಾಣಿಕ್ಯ, ಕೋಟಿಗೊಬ್ಬನಾಗಿ ಬಂದ ಹಾದಿ ಕಲ್ಲು ಮುಳ್ಳಿನದೇ. ಅಪಾರ ಶ್ರದ್ಧೆ, ಪರಿಶ್ರಮದಿಂದ ಕಲ್ಲುಗಳನ್ನ ಹೂವಾಗಿ ಅರಳಿಸಿಕೊಂಡ ಪ್ರತಿಭಾವಂತ ಈತ. ಅಭಿನಯಕ್ಕೆ ಮನಸೋತು ಜನರೇ “ ಹೌದು ಸ್ವಾಮಿ” ಅನ್ನುವ ಹಾಗೆ ಒಲಿಸಿಕೊಂಡ ಅಭಿನಯ ಚಕ್ರವರ್ತಿ ಸುದೀಪ್.

44ರ ಹರೆಯಕ್ಕೆ ಕಾಲಿಟ್ಟಿರುವ ಕಿಚ್ಚನ ಸಿನಿಮಾ ಹುಚ್ಚು ಅಂತಿಂಥದ್ದಲ್ಲ. ಒಬ್ಬ ಮೆಕ್ಯಾನಿಕಲ್ ಇಂಜಿನಿಯರ್‍ಗೆ ಹೇಗೆ ವಾಹನದ ಎಲ್ಲಾ ಪಾರ್ಟಗಳು ಗೊತ್ತಿರತ್ತೋ ಹಾಗೆ ಸುದೀಪ್ ಸಿನಿಮಾದ ಎಲ್ಲಾ ತಿರುಳನ್ನ ಅರೆದು ಕುಡಿದವರು. ಕಲಿಕೆಗೆ ಒಡ್ಡಿಕೊಂಡವರು. ಸಾಮಾನ್ಯವಾಗಿ ಹೀರೋಗಳು ಅಂದ್ರೆ ತಮ್ಮ ನಟನೆ, ಇಮೇಜ್ ಇಷ್ಟರ ಬಗ್ಗೆನೇ ತಲೆ ಕೆಡಿಸಿಕೊಳ್ಳೋದ್ರಲ್ಲೇ ಬ್ಯುಸಿಯಾಗಿರ್ತಾರೆ. ಆದ್ರೆ ಸುದೀಪ್ ಎಲ್ಲರಂತಲ್ಲ. ಅವ್ರೇ ಬೇರೆ ಅವ್ರ ಸ್ಟೈಲೇ ಬೇರೆ. ನಟನೆ, ನಿರ್ದೇಶನ, ನಿರ್ಮಾಣ , ಸಂಗೀತ, ಎಡಿಟಿಂಗ್, ಸ್ಕ್ರಿಪ್ಟ್ , ಮಾರ್ಕೆಟಿಂಗ್ ಎಲ್ಲದರಲ್ಲೂ ತೊಡಗಿಸಿಕೊಂಡವರು. ಸುದೀಪ್ ಸಾಮಾನ್ಯರ ಸಾಲಿನಿಂದ ಅಸಾಮಾನ್ಯರ ಸಾಲಿಗೆ ಏರಿದ ಅಪರೂಪದ ಕಲಾವಿದ ಅನ್ನೊದ್ರಲ್ಲಿ ಎರಡು ಮಾತಿಲ್ಲ.

“ಈಗ” ನೋಡಿದವರಿಗೆ ಹೀಗೂ ಸಾಧ್ಯವೇ.. ?ಅನ್ನುವಂಥಾ ಅಮೋಘ ಅಭಿನಯ ನೀಡಿ ತನ್ನ ಸಾಮರ್ಥ್ಯ ಎಂಥಾದ್ದು ಅನ್ನೋದನ್ನ ಸಾಬೀತು ಪಡಿಸಿದ ಸುದೀಪ್ಗೆ ಅವಕಾಶಗಳೇನು ಸಾಲುಗಟ್ಟಿ ನಿಲ್ಲಲಿಲ್ಲ. ಸ್ವತಃ ಅಮಿತಾಭ್ ರಿಂದ ಹೊಗಳಿಸಿಕೊಂಡ್ರು ಬಾಲಿವುಡ್ ಬಾಗಿಲು ತೆರೆಯಲಿಲ್ಲ. ಹಾಗಂತ ಸುದೀಪ್ ಎಂದೂ ಸುಮ್ಮನೆ ಕುಳಿತವರಲ್ಲ. ಸೈಲೆಂಟಾಗೇ ಸಾಧನೆಯತ್ತ ಹೊರಳಿದವ್ರು. ಸಿಕ್ಕ ಅವಕಾಶವನ್ನ ಹೀರಿ ಪ್ರೇಕ್ಷಕನ ಬೆರಗು ಹೆಚ್ಚಿಸಿದವ್ರು. ಬಿಗ್ ಬಾಸ್ ಆಗಿ ಮೋಸ್ಟ್ ಸ್ಟೈಲಿಶ್ ಬಾಡಿಲಾಂಗ್ವೇಜ್, ಡೈಲಾಗ್‍ಗಳಿಂದ ಚಪ್ಪಾಳೆ ಗಿಟ್ಟಿಸಿದವ್ರು.

ಇಷ್ಟೆಲ್ಲಾ ಇದ್ದ ಮೇಲೆ ಕೊಂಚ ಅಹಂ ಇರಬಾರದೇನು? ಅವ್ರ ಸ್ವಾಭಿಮಾನ ಹಲವರ ಕಣ್ಣಿಗೆ ದುರಹಂಕಾರವಾಗಿ ಕಂಡದ್ದು ಸುಳ್ಳಲ್ಲ. ಆ ಕಾರಣಕ್ಕೇ ಸುದೀಪ್‍ರನ್ನ ದೂರವಿಟ್ಟವರೂ ಉಂಟು. ಎಲ್ಲರೂ ರಾಜಣ್ಣನವರ ಹಾಗೆ ಮೃದುಮಾತುಗಳನ್ನೇ ಆಡಬೇಕೆಂದು ಬಯಸೋದಾದ್ರು ಎಷ್ಟು ಸರಿ? ನೇರವಂತಿಕೆಗೆ ಬೆಲೆ ಬೇಡವೇ? ಅಣ್ಣಾವ್ರ ಸುತ್ತ ಪಾರ್ವತಮ್ಮ, ವರದಪ್ಪ, ಚಿ. ಉದಯಶಂಕರ್‍ರಂಥ ಘಟಾನುಘಟಿಗಳಿದ್ರು. ಆದ್ರೆ ಸುದೀಪ್‍ಗೆ? ಈತ ತನ್ನನ್ನ ತಾನೇ ರೂಪಿಸಿಕೊಳ್ಳುತ್ತಾ ನಡೆದ ಸೆಲ್ಫ್ ಮೇಡ್ ಮ್ಯಾನ್!! ಶಂಕರ್‍ನಾಗ್‍ರನ್ನ ನೆನಪಿಸುವಂತ ಚುರುಕುಗಣ್ಣಿನ ಚತುರ.

ಕಾಲ ಸರಿದಂತೆ ಸುದೀಪ್ ಕೂಡ ನಟನೆಯಂತೆ ಮಾತಿನಲ್ಲೂ ಮಾಗಿದ್ದಾರೆ. ದಾಂಪತ್ಯದಲ್ಲಿ ಬಿರುಕುಬಿಟ್ಟಾಗ ನಿಭಾಯಿಸಿದ ರೀತಿಯೇ ಹಲವರಿಗೆ ಪಾಠವೂ ಅಗಿದೆ. ಕಾಲಕ್ಕೆ ತಕ್ಕ ವರಸೆಗಳನ್ನ ಕರಗತ ಮಾಡಿಕೊಳ್ತಿರೋ ಸುದೀಪ್ ಸೆಕೆಂಡ್ ಇನ್ನಿಂಗ್ಸ್‍ನಲ್ಲಿ ಸಿಕ್ಸರ್ ಬಾರಿಸ್ತಾ ಮ್ಯಾಚ್ ಗೆಲ್ತಾನೆ ಇರ್ಲಿ. ಮಾಣಿಕ್ಯನ ಮಹತ್ತು ಸ್ಯಾಂಡಲ್‍ವುಡ್, ಟಾಲಿವುಡ್, ಕಾಲಿವುಡ್, ಬಾಲಿವುಡ್‍ಗಳನ್ನ ದಾಟಿ ಹಾಲಿವುಡ್‍ಗೂ ಹಾರಲಿ. ಇದು ಸುದೀಪ್ ಅಭಿಮಾನಿಗಳ ಪರವಾಗಿ ನಮ್ಮ ಆಶಯ. ಶುಭಾಶಯ!!

-Ad-

Leave Your Comments