“ಎಚ್ಡಿಕೆ ” ನಗುತ ನಗುತ ಬಾಳಿ ನೀವು ನೂರು ವರುಷ…

ಈ ಸಿನಿಮಾಕ್ಕೆ ಅದೆಂಥ ಶಕ್ತಿ ಇದೆಯೋ?! “ನನಗೆ ಸಿನಿಮಾ ಕಂಡ್ರಾಗಲ್ಲ” ನೋಡು ಅಂತನ್ನುವ ಒಬ್ಬೇ ಒಬ್ಬರು ಭೂತ ಗಾಜು ಹಿಡಿದು ಹುಡುಕಿದರೂ ಸಿಗುವುದಿಲ್ಲ. ಕೂಲಿಕಾರನಿಂದ ಹಿಡಿದು ಕಾರ್ಖಾನೆಯ ಒಡೆಯನ ತನಕ, ಮತದಾರನಿಂದ -ಆಳುವವನ ತನಕ, ಮಕ್ಕಳಿಂದ ಮುದುಕರ ತನಕ ಎಲ್ಲರನ್ನು ಸಾರಾಸಗಾಟಾಗಿ ತೀವ್ರವಾಗಿ ಸೆಳೆಯುವ ಮಾಂತ್ರಿಕತೆ ಈ ಚಲಿಸುವ ಚಿತ್ರಗಳಿಗಿದೆ. ಇದರ ಮಾಯಾಜಾಲಕ್ಕೆ ಸಿಕ್ಕು ಸುಕ್ಕಾಗದೆ ಒಂದಿಷ್ಟು ಒಳ್ಳೆಯ ಸಿನಿಮಾಗಳನ್ನು ಕೊಟ್ಟ ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿಯವರ ಹುಟ್ಟುಹಬ್ಬಕ್ಕೆ ಸಿನಿಮಾ ಗೀತೆಯಿಂದಲೇ ಶುಭ ಹಾರೈಸೋಣ

ನೂರು ವರುಷ ಬಾಳಿರಿ ನೂರು ದೀಪ ಬೆಳಗಿರಿ. ನೂರು ಬಾಳು ಬೆಳಗಲು ನೀವೆ ಜ್ಯೋತಿ ಆಗಿರಿ.

ದಿನದ ಇಪ್ಪತ್ನಾಲ್ಕು ಗಂಟೆಯೂ ರಾಜಕೀಯವನ್ನೇ ಉಸಿರಾಡುವ ತಂದೆ, ಮಕ್ಕಳು ಚೆನ್ನಾಗಿ ಓದಿ ಸರ್ಕಾರಿ ಉದ್ಯೋಗ ಹಿಡಿದು ಅವರ ಕಾಲ ಮೇಲೆ ಅವರು ನಿಂತು ಬದುಕಿದರೆ ಸಾಕೆನ್ನುವ ತಾಯಿ. ಓದಿನಲ್ಲಿ ಮುಂದೆ, ರಾಜಕೀಯದಲ್ಲಿ ಚುರುಕಾಗಿದ್ದ ಅಣ್ಣಂದಿರು ತಂಗಿಯರ  ಮಧ್ಯೆ ಚಿಕ್ಕಂದಿನಿಂದಲೇ ಚಲಿಸುವ ಚಿತ್ರದ ಹಿಂದೆ ನಡೆದವರು ಕುಮಾರಸ್ವಾಮಿ. ಅಯ್ಯೋ.. ಸಿನಿಮಾ ಹುಚ್ಚು ಬಿಟ್ಟು  ಚೆನ್ನಾಗಿ ಓದಿ ಎಂಜಿನಿಯರ್  ಆಗೋ ಮಗನೆ ಎನ್ನುತ್ತಿದ್ದ ತಾಯಿಗೆ ಅಣ್ಣಾವ್ರ  “ಬಾನಿಗೊಂದು ಎಲ್ಲೆ ಎಲ್ಲಿದೆ ? ನಿನ್ನಾಸೆಗೆಲ್ಲಿ ಕೊನೆ ಇದೆ… ಏಕೆ ಕನಸು ಕಾಣುವೆ ನಿಧಾನಿಸು ನಿಧಾನಿಸು” ಹಾಡು ಹೇಳಿ ನಕ್ಕು ನಗಿಸುತ್ತಿದ್ದ ಸಿನಿಮಾ ಪ್ರೇಮಿ ಕುಮಾರಸ್ವಾಮಿ.

kumaraswamy-kasturinivasakumaraswamy-bangarada-manushya

5-6ನೇ  ಕ್ಲಾಸಿನಿಂದಲೂ ಸಿಕ್ಕ ಸಿಕ್ಕ ಸಿನಿಮಾ ಅದರಲ್ಲೂ ರಾಜಕುಮಾರ್ ಅವ್ರ ಎಲ್ಲಾ ಸಿನಿಮಾಗಳನ್ನು ಬಿಡದೆ ನೋಡುತ್ತಿದ್ದವರು.ನಟಸಾರ್ವಭೌಮನ ಬಂಗಾರದ ಮನುಷ್ಯ ತರಹದ ಅನೇಕ ಚಿತ್ರಗಳನ್ನು 50-75 ಸಾರಿ ನೋಡಿದ್ದೂ ಉಂಟು. ನೋಡ್ತಾ ನೋಡ್ತಾ ತಾನೂ ಸಿನಿಮಾ ಮಾಡುವ ಆಸೆ ಹುಟ್ಟಿ ಪಿಯುಸಿ ಯಲ್ಲೇ “ಮೋಹನ ಮುರಳಿ” ಗೆ ಪ್ರಯತ್ನಿಸಿದ್ದರು.

ಯಾವ ಕೆಲಸಕ್ಕೆ ಕೈ ಇಟ್ಟರೂ ಅದೊಂದು ರೀತಿಯ ಹುಚ್ಚಿನಂತೆ ಆವರಿಸಿಕೊಳ್ಳದಿದ್ದರೆ ಏನನ್ನೂ ಸಾಧಿಸಲಾಗದು. ಕುಮಾರಸ್ವಾಮಿ ಸಿನಿಮಾ ಪ್ರೀತಿ ನೋಡಿದವರಿಗೆ ಹುಂಬ ಹುಚ್ಚಿನಂತೆ ಕಂಡಿರಬಹುದು. ಆದರೆ ನೋಡನೋಡುತ್ತಿದ್ದಂತೆ ಚಿತ್ರಗಳ ಹಂಚಿಕೆದಾರರಾದರು.ಸಿನಿರಸಿಕರು ಬಾಚಿ ಅಪ್ಪಿಕೊಳ್ಳುವಂಥ  “ಚಂದ್ರ ಚಕೋರಿ” ಯನ್ನು ನಿರ್ಮಿಸಿದರು. ಸೂರ್ಯ ವಂಶ , ಗಲಾಟೆ ಅಳಿಯಂದಿರು ಇನ್ನು ಅನೇಕ ಸದಭಿರುಚಿಯ ಚಿತ್ರಗಳನ್ನು ಕೊಟ್ಟ ಕುಮಾರಸ್ವಾಮಿಯವರನ್ನ ಬನ್ನಿ ಸ್ವಾಮಿ ನಿಮ್ಮ ಜಾಗ ಇಲ್ಲಿದೆ ಅಂತ ಕರೆದು ಕೂರಿಸೋ ಹಾಗೆ ರಾಜಕೀಯ ರಂಗ ಕರೆಯಿತು. ಅಲ್ಲೂ ಅತ್ಯಂತ ಕಡಿಮೆ ಅವಧಿಯಲ್ಲೇ ರಾಜ್ಯದ ಮುಖ್ಯಮಂತ್ರಿಯಾಗಿ ಮಯೂರ,ಬಂಗಾರದ ಮನುಷ್ಯ , ಬಡವರ ಬಂಧು  ಚಿತ್ರಗಳ  ಪ್ರೇರೇಪಣೆಯೋ ಏನೋ ಎನ್ನುವಂತೆ ಬಡವರ ಮನೆಯ ಅತಿಥಿಯಾಗಿ ಗ್ರಾಮವಾಸ್ತವ್ಯ ಮಾಡಿದರು.

kumaraswamy-mayura

ರಾಜಕೀಯದ ನೀತಿ, ನಿರ್ಧಾರಗಳು ಈ ಘಳಿಗೆಯಲ್ಲಿ ಪಕ್ಕಕ್ಕಿರಲಿ. ತಾನು ಬಡವರ ಪರವಾದ ಯೋಚನೆ, ಯೋಜನೆ ಮಾಡಲಿಕ್ಕೆ ರಾಜಕುಮಾರ್ ಅವರ ಚಿತ್ರಗಳು ಪ್ರೇರಣೆ. ಆ ಕಥೆಗಳು,  ಪಾತ್ರ, ಅಭಿನಯ ನನ್ನಲ್ಲಿ ಅಂತಃಕರಣ ಬೆಳೆಸಿದವು ಅಂತ ಸ್ವತಃ ಕುಮಾರಸ್ವಾಮಿ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ. ಅಣ್ಣಾವ್ರು ಅಂದ್ರೆ ಅದೆಂಥಾ ಅಭಿಮಾನವೆಂದರೆ ಸಿನಿಮಾಗಳಲ್ಲಿ ಅವರು ಹಾಕುತ್ತಿದ್ದ ಬೆಲ್ಬಾಟಂ ಪ್ಯಾಂಟು, ಶರ್ಟ್ ಗಳನ್ನ ತಾವು ಯಥಾವತ್ತು ಹಾಕುವುದಲ್ಲದೆ ತನ್ನ ಸ್ನೇಹಿತನಿಗೂ ಕೊಡಿಸುತ್ತಿದ್ದರಂತೆ.

kumarswamy-rajkumarswamy-village-lady

ತಮ್ಮ ನೆಚ್ಚಿನ ನಾಯಕನ ಬಟ್ಟೆ, ಸ್ಟೈಲ್ ,ಸ್ಮೈಲ್ ಕಾಪಿ ಮಾಡುವುದು ದೊಡ್ಡ ವಿಷಯವೇನಲ್ಲ ಆದ್ರೆ ಇಲ್ಲಿ ಕುಮಾರಸ್ವಾಮಿಯವರು ಆ ಚಿತ್ರಗಳಲ್ಲಿದ್ದ ಸಾಮಾಜಿಕ ಕಳಕಳಿ, ದೀನರ ಬಗ್ಗೆ ಕರುಣೆ ಬೆಳೆಸಿಕೊಳ್ಳಲು ಪ್ರಯತ್ನಿಸಿದ್ದು ದೊಡ್ಡ ವಿಷಯ. 

ಕುಮಾರಸ್ವಾಮಿಯವರಿಗೆ ಎಷ್ಟೇ ಸಿನಿಮಾ ಪ್ರೇಮವಿದ್ದರೂ ನಟನಾಗಲಿಲ್ಲ. ಆಗಲೇಬೇಕು ಅಂತೇನು ಇಲ್ಲ. ಅವರ ಮಗ ನಿಖಿಲ್ ಗೆ ಆ ಕಲೆ ಒಲಿಯುವಂತಿದೆ. ಮೊದಲ ಸಿನಿಮಾ ಜಾಗ್ವಾರ್ ನೋಡಿದವರಿಗೆ ಅದರ ಅನುಭವ ಸಿಕ್ಕಿರಬೇಕು. ಇಲ್ಲಿ ನಿರಂತರ ಕಲಿಕೆ ಬೇಕೇ ಬೇಕು. ಜಾಗ್ವರ್ ಅದ್ದೂರಿ ಚಿತ್ರವಾಗಿದ್ದು ಎಷ್ಟು ನಿಜವೋ ಕುಮಾರಸ್ವಾಮಿಯವರ ಕಥೆಯ ಆಯ್ಕೆ ಮೆಚ್ಚುವಂತಾದ್ದು ಅನ್ನುವುದು ಅಷ್ಟೇ ಸತ್ಯ.

jaagwar

ಮತ್ತೆ ಮಗನಿಗಾಗಿ ಹೊಸ ಚಿತ್ರ ಮಾಡುವ ಯೋಜನೆಯಲ್ಲಿರುವ ಕುಮಾರಸ್ವಾಮಿಯವರಿಂದ ಒಳ್ಳೆಯ ಚಿತ್ರಗಳು ಬರಲಿ. ಚಿತ್ರರಂಗ ಹೊಸರೀತಿಯ ಚಿತ್ರಗಳಿಂದ ಸಮೃದ್ಧವಾಗಲಿ.

ಕುಮಾರಸ್ವಾಮಿಯವರ ಹುಟ್ಟುಹಬ್ಬಕ್ಕೆ ಅವರು  ಆರಾಧಿಸಿದ ಅಣ್ಣಾವ್ರ ಹಾಡಿನಿಂದಲೇ ಮತ್ತೊಮ್ಮೆ ಹಾರೈಸಿಬಿಡೋಣ.

ನಗುತ ನಗುತ ಬಾಳೂ ನೀನು ನೂರು ವರುಷ . ಎಂದೂ ಹೀಗೇ ಇರಲೀ ಇರಲೀ ಹರುಷ ಹರುಷ ..

-Ad-

Leave Your Comments