ಮಲಯಾಳಂನಲ್ಲಿ ಹರ್ಷಿಕಾ ಪೂಣಚ್ಚ ಹವಾ !

ಶ್ವೇತಕನ್ಯೆ ಹರ್ಷಿಕಾ ಪೂಣಚ್ಚ ಕನ್ನಡ ಪ್ರೇಕ್ಷಕರ ಮನಸೆಳೆದಿದ್ದು ತನ್ನ ಮುದ್ದು ಮಾತುಗಳಿಂದಲೇ. ತೆಳ್ಳಗೆ ಬೆಳ್ಳಗೆ ಇದ್ದು ನಗುತ್ತಾ ಮಾತನಾಡುವ ಹರ್ಷಿಕಾಗೆ ಕನ್ನಡದಲ್ಲಷ್ಟೇ ಅಲ್ಲ ಬೇರೆ ಭಾಷೆಗಳಲ್ಲೂ ಭಾರಿ ಬೇಡಿಕೆ ಅನ್ನುವುದು ಈಗ ನಿರೂಪಿಕವಾಗಿದೆ. ಕೆಲವು ತಿಂಗಳುಗಳ ಹಿಂದೆ ತೆಲುಗಿನಲ್ಲಿ ನಟಿಸಿ ಮೆಚ್ಚುಗೆ ಗಳಿಸಿದ ಈ ಹುಡುಗಿ ನಂತರ ಕಾಲಿಟ್ಟಿದ್ದು ತಮಿಳಿಗೆ. ಆಕೆ ನಟಿಸಿದ ಉನ್ ಕಾದಲ್ ಎರಿಂದಾಲ್ ಸಿನಿಮಾ ಬಿಡುಗಡೆಗೆ ಸಿದ್ಧವಾಗಿದೆ. ಸಂದರ್ಭ ಹೀಗಿರುವಾಗಲೇ ಹರ್ಷಿಕಾಗೆ ಮಲಯಾಳಂನಿಂದ ಕರೆ ಬಂದಿದೆ. ಆ ಕರೆಗೆ ಓಗೊಟ್ಟ ಹರ್ಷಿಕಾ ಮಲಯಾಳಂ ಚಿತ್ರರಂಗಕ್ಕೆ ಬಲಗಾಲಿಟ್ಟು ಒಳಗೆ ಹೋಗಿದ್ದಾರೆ.
ಅಜಿತ್ ಲೋಕೇಶ್ ನಿರ್ದೇಶನದ ಚಾರ್ ಮಿನಾರ್ ಚಿತ್ರದಲ್ಲಿ ಹರ್ಷಿಕಾ ನಾಯಕಿ. ಇಂಟರೆಸ್ಟಿಂಗ್ ಅಂದ್ರೆ ಈ ಚಿತ್ರದಲ್ಲಿ ಇವರಿಗೆ ಎರಡು ಶೇಡ್ ಇರುವ ಪಾತ್ರ. ಒಂದು ಕನ್ನಡಕ ಹಾಕಿಕೊಂಡ ಮುಗ್ಧ ಹುಡುಗಿ. ಇನ್ನೊಂದು ಸೂಪರ್ ಮಾಡೆಲ್. ಇನ್ನೂ ಒಂದು ವಿಶೇಷ ಅಂದ್ರೆ ಅದು ಕನ್ನಡ ಹುಡುಗಿಯ ಪಾತ್ರ. ಮಲಯಾಳಂ ಚಿತ್ರದಲ್ಲಿ ಕನ್ನಡದಲ್ಲಿ ಮಾತನಾಡಲಿದ್ದಾರೆ ಹರ್ಷಿಕಾ ಪೂಣಚ್ಚ. ಈ ಚಿತ್ರದಲ್ಲಿ ಕೃಷ್ಣ ಮೆನನ್ ಮತ್ತು ಅಶ್ವಿನ್ ಕುಮಾರ್ ಎಂಬ ಇಬ್ಬರು ಹೀರೋಗಳು. ಆ ಇಬ್ಬರು ಹೀರೋಗಳಿಗೆ ಹರ್ಷಿಕಾ ಅಂದ್ರೆ ಇಷ್ಟ. ಸದ್ಯ ಈ ಚಿತ್ರದ ಚಿತ್ರೀಕರಣ ಕೊಚ್ಚಿನ್ ನಲ್ಲಿ ನಡೆಯುತ್ತಿದೆ.
ಸದ್ಯ ಹರ್ಷಿಕಾ ಮಾಲಿವುಡ್ ಮಂದಿಯನ್ನು ತನ್ನ ನಟನೆಯಿಂದ ಮಂತ್ರಮುಗ್ಧಗೊಳಿಸುತ್ತಿದ್ದಾರೆ. ಈ ಹಿಂದೆ ಅವರು ಬಾಲಿವುಡ್ ಮಂದಿಯ ಗಮನವನ್ನೂ ಸೆಳೆದಿದ್ದರು. ಆದರೆ ಮುಂಬೈಗೆ ಶಿಫ್ಟ್ ಆಗಲು ಸಾಧ್ಯವಾಗದೇ ಇದ್ದಿದ್ದರಿಂದ ಅವಕಾಶಗಳನ್ನು ಕೈಬಿಡಬೇಕಾಗಿ ಬಂದಿತ್ತು. ಈಗ ದಕ್ಷಿಣ ಭಾರತ ಎಲ್ಲಾ ಭಾಷೆಯ ಚಿತ್ರರಂಗಕ್ಕೂ ಈಕೆ ಕಾಲಿಟ್ಟಾಗಿದೆ. ಕನ್ನಡದ ಕಂಪನ್ನು ಎಲ್ಲಾ ಕಡೆ ಪಸರಿಸುತ್ತಿರುವ ಹರ್ಷಿಕಾಗೆ ಒಳ್ಳೆಯದಾಗಲಿ.
-Ad-

Leave Your Comments