ಸಿನಿಮಾ ಪ್ರಿಯರಿಗೆ ಹೈಕೋರ್ಟ್ ಕೊಟ್ಟ ಶಾಕ್ ?!

ಕರ್ನಾಟಕದ ಮಲ್ಟಿಪ್ಲೆಕ್ಸ್ ಗಳಲ್ಲಿ ಗರಿಷ್ಠ ಟಿಕೆಟ್ ಬೆಲೆ 200 ರೂಪಾಯಿ .ಇದು ರಾಜ್ಯ  ಸರ್ಕಾರ ಹೊರಡಿಸಿದ ಆದೇಶ. ಬಾಹುಬಲಿ ರಿಲೀಸ್ ಗೂ ಮುನ್ನವೇ ಸರ್ಕಾರ ಆದೇಶ ಮಾಡಿದ್ದರೂ  ಟಿಕೆಟ್ ದರ ಅಧಿಕೃತವಾಗಿ ಜಾರಿ ಮಾಡದೆ ಪಟ್ಟು ಹಿಡಿದು ಸಿಕ್ಕಷ್ಟು ಬಾಚುವ ದಾರಿ ಹಿಡಿದಿತ್ತು .  ದುಬೈ ಪ್ರವಾಸ ಮುಗಿಸಿ ಬಂದ ಸಿಎಂ ಅದೇ ಮಲ್ಟಿಪ್ಲೆಕ್ಸ್ ನಲ್ಲಿ 1050 ರೂಪಾಯಿ ಟಿಕೆಟ್ ತೆಗೆದುಕೊಂಡು ಬಾಹುಬಲಿ  ನೋಡಿದ್ರು. ಮಾಧ್ಯಮಗಳೆಲ್ಲಾ ಮುಗಿಬಿದ್ದಿದ್ರಿಂದ ಎಚ್ಚೆತ್ತುಕೊಂಡು ಮಾರನೆ ದಿನ ಅಧಿಕೃತವಾಗಿ ಆದೇಶ ಹೊರಡಿಸಿದ್ರು..

ಸರ್ಕಾರದ ಆದೇಶ ಪಕ್ಕಕ್ಕಿಟ್ಟ  ಹೈಕೋರ್ಟ್

ಸರ್ಕಾರ ಭಾರೀ ಬೇಡಿಕೆಯ ನಂತರ  200 ರೂಪಾಯಿ ಟಿಕೆಟ್ ದರ ಜಾರಿ ಮಾಡಿತ್ತು. ಅದಕ್ಕೆ ಸಹಮತವಿರದ  ಮಲ್ಟಿಪ್ಲೆಕ್ಸ್ ಮಾಲೀಕರ ಸಂಘ ಇಂದು ಹೈಕೋರ್ಟ್ ನಲ್ಲಿ ರಿಟ್ ಅರ್ಜಿ ಸಲ್ಲಿಸಿತ್ತು.  ಸರ್ಕಾರದ ಆದೇಶದಿಂದ ತಮಗೆ ಬಹಳ ನಷ್ಟವಾಗಲಿರುವ ಕಾರಣ ನೀಡಿ  ಆದೇಶಕ್ಕೆ ತಡೆ ನೀಡುವಂತೆ ಮನವಿ ಮಾಡಿತ್ತು . ಮನವಿಗೆ ಸ್ಪಂದಿಸಿರುವ ಹೈಕೋರ್ಟ್ ಸರ್ಕಾರದ ಆದೇಶಕ್ಕೆ ತಡೆ ನೀಡಿದೆ.

ರಜಾ ದಿನಗಳಲ್ಲಿ ಮಲ್ಟಿಪ್ಲೆಕ್ಸ್ ಆಡಿದ್ದೇ ಆಟ

ಸರ್ಕಾರದ  ಆದೇಶವನ್ನು ಸಂಪೂರ್ಣವಾಗಿ ಹೈಕೋರ್ಟ್ಸ ಒಪ್ಪಿಕೊಂಡಿಲ್ಲ.  ಶನಿವಾರ, ಭಾನುವಾರ  ಹಾಗು  ಸರ್ಕಾರಿ ರಜಾ ದಿವಸ ಸರ್ಕಾರದ ಆದೇಶ ಪಾಲಿಸುವ ಅವಶ್ಯಕತೆ ಇಲ್ಲ. ಉಳಿದ ದಿನಗಳು ಸರ್ಕಾರದ ಆದೇಶ ಪಾಲನೆ ಮಾಡಿ ಅಂತ ಹೈಕೋರ್ಟ್ ಆದೇಶ  ಕೊಟ್ಟಿದೆ.

ಎರಡೇ ದಿನಕ್ಕೆ ಕೊಳ್ಳೆ ಹೊಡೆಯಲಿರುವ  ಮಲ್ಟಿಪ್ಲೆಕ್ಸ್ !

ಸಾಮಾನ್ಯವಾಗಿ ಸಿನಿಮಾ ರಿಲೀಸ್ ಆಗೋದು  ಶುಕ್ರವಾರ. ವೀಕ್ ಎಂಡ್ ನಲ್ಲಿ  ಸಿನಿಮಾ ನೋಡೋ ಮಂದಿನೂ ಹೆಚ್ಚಿರ್ತಾರೆ . ಶನಿವಾರ, ಭಾನುವಾರ ಸಿನಿಮಾ ರೇಟ್ ತಮಗೆ ಬೇಕಾದಂತೆ  ಏರಿಸಿ ವಾರದ ದಿನಗಳಲ್ಲಿ ಆಗುವ ನಷ್ಟ ತುಂಬಿಕೊಳ್ಳೋಕೆ ಮಲ್ಟಿಪ್ಲೆಕ್ಸ್ ಗಳು ಮುಂದಾಗುವುದು ಗ್ಯಾರಂಟಿ .

ಶುಕ್ರ ದೆಸೆ ಹೋಗಿ  ಶನಿ ದೆಸೆ ಬರುತ್ತಾ ?

ಹೀಗಾದ್ರು  ಆಶ್ಚರ್ಯ ಪಡಬೇಕಿಲ್ಲ . ಶುಕ್ರವಾರ ಶೋಗೆ  200 ರೂಪಾಯಿ ಕೊಟ್ಟು ಶನಿವಾರ ರೇಟ್ ಜಾಸ್ತಿ ಮಾಡಿದ್ರೆ  ಜನ ಥಿಯೇಟರ್  ಬರುವುದು ಕಷ್ಟ. ಕಟ್ಟಾಭಿಮಾನಿಗಳು  ಮಾತ್ರ ಥಿಯೇಟರ್ ಗೆ  ಹೋಗ್ತಾರೆ. ಉಳಿದವರು  ವಾರದ ದಿನಗಳಿಗೆ ಕಾಯ್ತಾರೆ . ಈ ಸವಾಲನ್ನ ಎದುರಿಸೋಕೆ  ಶುಕ್ರವಾರದ ಬದಲು ಶನಿವಾರ ಸಿನಿಮಾ ಬಿಡುಗಡೆ ಮಾಡುವ ಸಾಧ್ಯತೆ ಇದೆ. ಎರಡು ದಿನಗಳು  ಲೂಟಿ ಮಾಡಿ ಆಮೇಲೆ ವಾರದ ದಿನಗಳಲ್ಲಿ 200 ರೂಪಾಯಿಗೆ ಇಳಿಸುವ ಸಾಧ್ಯತೆಯಿದೆ.

ಆದ್ರೆ ಮಹೂರ್ತ ,ಘಳಿಗೆ ,ಶುಭ ದಿನ ಅಂತೆಲ್ಲ ನಂಬುವ ಸ್ಯಾಂಡಲ್ ವುಡ್ ಮಂದಿ ಶುಭ ಶುಕ್ರವಾರ ಬಿಟ್ಟು ನಿಜಕ್ಕೂ ಶನಿವಾರ ಸಿನಿಮಾ ಬಿಡುಗಡೆಗೆ ಒಪ್ತಾರಾ ಅನ್ನೋದು ಸದ್ಯದ ಕೂತೂಹಲ .

ಏನೇ ಆಗಲಿ ಜಾಗ ಕೊಟ್ಟು , ಎಲ್ಲ ಅನುಕೂಲ ಕೊಟ್ಟು ಕೊನೆಗೆ ಮಲ್ಟಿಪ್ಲೆಕ್ಸ್ ನವರು ಕೇಳಿದಷ್ಟು ಹಣ ಕೊಟ್ಟು ಸಿನಿಮಾ ನೋಡೋ ಕನ್ನಡಿಗರ ದುರಂತಕ್ಕೆ ಕನ್ನಡಿಗರೇ ಹೊಣೆ .

_ವಿನೋದ್ ಕೊತ್ತನಹಳ್ಳಿ

 

-Ad-

Leave Your Comments