ಹುಚ್ಚ ವೆಂಕಟ್ ಕೇವಲ ವೆಂಕಟ್ ಆಗಿದ್ದಾಗ ಹೇಗಿದ್ದ ?

ಹುಚ್ಚ ವೆಂಕಟ್ ಈ ಹೆಸರು ಇತ್ತೀಚೆಗಂತೂ ಭಾರೀ  ಫೇಮಸ್! ಈತನ ನಡಾವಳಿ  ಎಲ್ಲರಿಗೂ ಚಿರಪರಿಚಿತ. ಯೂ ಟ್ಯೂಬ್ ನಲ್ಲಂತೂ ಇವ್ನದ್ದೇ ಹವಾ..ವೆಂಕಟ್  ಮೇಲೆ ಬಂದಿರುವ ಟ್ರೋಲ್ ಗಳು ಬಹುಶಃ ರಜನಿಕಾಂತ್ ಗೂ ಬಂದಿಲ್ವೇನೋ!! ಒಟ್ಟಿನಲ್ಲಿ ಹುಚ್ಚವೆಂಕಟ್ ಎಲ್ಲರಿಗೂ ಭಾರಿ ಎಕ್ಸ್ ಕ್ಲೂಸಿವ್ !
ಈತನ ಮಾತು, ಗರ್ಜನೆ, ಕೊಡುವ ಖದರ್ ಲುಕ್ಕು ಎಲ್ಲವೂ  ಮಿಮಿಕ್ರಿಗೆ ವಸ್ತು…!

ಇಂಥಾ  ಹುಚ್ಚ ವೆಂಕಟ್ ಬರೀ ವೆಂಕಟ್ ಆಗಿದ್ದಾಗ ಹೇಗಿದ್ದ ಗೊತ್ತಾ?

ಈತ ಬರೀ ವೆಂಕಟ್ ಆಗಿದ್ದಾಗ ನಾನು ಕಂಡ ಕೆಲವು ವಿಷಯಗಳನ್ನ ಹೇಳ್ತೀನಿ. ದಶಕದ ಹಿಂದೆ ಮೆಂಟಲ್ ಮಂಜ ಚಿತ್ರದಲ್ಲಿ ನಾನೂ ವೆಂಕಟ್ ಒಟ್ಟಿಗೆ ಸಹಾಯಕ ನಿರ್ದೇಶಕರಾಗಿ ಕೆಲ್ಸ ಮಾಡಿದ್ವಿ. ಆಗಿದ್ದ ವೆಂಕಟ್
ಇವಾಗಿರೋ ಆತನ ಉಗ್ರ ರೂಪಕ್ಕೆ ಸಂಪೂರ್ಣ ತದ್ವಿರುದ್ಧ.  ಕೆಲವು ತಿಕ್ಕಲುತನಗಳನ್ನ ಹೊರತುಪಡಿಸಿ.
ಮೃದು ಭಾಷಿ. ಎಲ್ಲರನ್ನೂ ಗೌರವದಿಂದ,ಸ್ನೇಹದಿಂದ ಮಾತಾಡಿಸ್ತಾ ಇದ್ದ. ಯಾರಾದರೂ ಅವನ ಮನಸಿಗೆ ನೋವಾಗೋ ರೀತಿಯಲ್ಲಿ  ನಡೆದುಕೊಂಡ್ರೆ, ಮಾತಾಡಿದ್ರೆ ಎದುರಾಡದೆ ಸುಮ್ಮನಾಗಿಬಿಡ್ತಿದ್ದ. ಒಮ್ಮೊಮ್ಮೆ ತುಂಬಾ ಭಾವುಕ ಅನ್ನಿಸ್ತಿದ್ದ. ಅವನ  ಮನಸ್ಸು ತೀರ ಸೆನ್ಸಿಟಿವ್ ಅನ್ನಿಸ್ತಿತ್ತು. ಬಹುಶಃ ಆ ಸೆನ್ಸಿಟಿವ್ ಮನಸ್ಸೇ ಇವಾಗಿನ ಆತನ ನಡವಳಿಕೆಗೆ ಕಾರಣವೇನೊ? ಹಲವು ಸಂದರ್ಭದಲ್ಲಿ ತೀರ ಅಂತರ್ಮುಖಿಯಾಗಿರ್ತಿದ್ದ. ಹೆಣ್ಣಿನ ಬಗ್ಗೆ ಗೌರವ ಅಂದಿಗೂ ಇಂದಿಗೂ ಒಂದೇ… ಕುಡಿತ ಸಿಗರೇಟ್ ಯಾವ ಚಟಗಳನ್ನೂ ಹತ್ರ ಬಿಟ್ಕೊಂಡಿರ್ಲಿಲ್ಲ.

ಒಂದಷ್ಟು ಕೆಟ್ಟ ಗುಣಗಳು ಇದ್ದದ್ದು ನಿಜ

 

ತಾನು ನಂಬಿಕೊಂಡಿದ್ದೇ  ಸತ್ಯ, ತಾನು ಹೇಳ್ತಾ ಇರೋದೇ ವೇದವಾಕ್ಯವಾಗಬೇಕು  ಅನ್ನೋ ಮೆಂಟಾಲಿಟಿ ಇತ್ತು. ಇದೂ ಕೂಡ ಇಂದಿನ ಅವನ  ನಡುವಳಿಕೆಗೆ ಕಾರಣ ಆಗಿರಬಹುದು.
ಮೆಂಟಲ್ ಮಂಜ ಚಿತ್ರದ ಕೆಲಸ  ಮುಗಿದ ನಂತರ ಒಂದಿನ ಬಂದು ನಾನೂ ಡೈರೆಕ್ಷನ್ ಮಾಡ್ತಿದೀನಿ. ಸ್ಕ್ರಿಪ್ಟ್ ಮಾಡೋಣ ಬನ್ನಿ ಅಂತ ನನ್ನನ್ನ ಮತ್ತೆ ನನ್ನ ಗೆಳೆಯನನ್ನೂ ಕರೆದಿದ್ದ. ಆಯ್ತು ನಡಿಯಪ್ಪ  ಅಂತ ಹೋದವ್ರಿಗೆ ನಿಧಾನಕ್ಕೆ ಇನ್ನಷ್ಟು ತಿಕ್ಕಲು ಅನ್ನಿಸುವಂಥಾ  ಗುಣಗಳು ಕಾಣಿಸ್ತಾ ಹೋದವು. ಮಧ್ಯರಾತ್ರಿ ಮೂರು  ಗಂಟೆ ಆದ್ರೂ ಪುಣ್ಯಾತ್ಮ ನಮಗೆ ಮಲಗಲಿಕ್ಕೂ ಬಿಡದೆ ಕತೆ ಹೇಳ್ತಾ ಕೂರ್ತಿದ್ದ! ನಾವೂ ನಿದ್ದೆಗಣ್ಣಲ್ಲೇ  ಊ೦..ಊ೦..ಅಂತ ಕೂತೇ ಇರ್ತಿದ್ವಿ. ಮತ್ತೆ  ಮತ್ತೆ ತಿರುಗಾಮುರುಗಾ ಅದೇ ಕತೆ ಮೊದಲಿಂದ ಹೇಳ್ತಿದ್ದ. ನಮಗಂತೂ ಯಾವಾಗಪ್ಪ ಬಿಡ್ತಾನೆ ಇವ್ನು?? ಬಿಡದೆ ಇದ್ದರೆ ನಾವು ತೀರಿದ ಮಕ್ಕಳ್  ಅನ್ನಿಸಿಬಿಟ್ಟಿತ್ತು.

ಆಗ ಅವನು  ಹೇಳಿದ್ದ ಕತೆಯೇ “ವೆಂಕಟ್” . ನಾನೇ ಹೀರೊ, ನಾನೇ ಗಾಯಕ, ನಾನೇ ಡೈರೆಕ್ರ್ಟು , ನನ್ ಹೆಸರೇ ಟೈಟ್ಲ್ ಹೆಂಗಿದೆ ? ಕೇಳಿದ್ದ . ನಾವು ಕೆಟ್ಟ ನಮ್ಮ ತಲೆ ಸರಿ ಹೋದರೆ ಸಾಕಪ್ಪ ಅಂದುಕೊಳ್ತಿದ್ವಿ. ಎಲ್ಲ ನೀನೇ ಮಾಡಿದ್ರೆ ನಿನ್ ಪಿಕ್ಚರ್ ನೀನೊಬ್ಬನೇ ನೋಡ್ಬೇಕಾಗತ್ತೆ ಗುರು ಅಂತ ಹೇಳೋ ಸ್ಥಿತಿಯಲ್ಲಿ ನಾವಂತೂ  ಇರಲಿಲ್ಲ. ಕೇಳೋ ಮನಃ ಸ್ಥಿತಿ ಅವನಿಗೂ ಇರಲಿಲ್ಲ.

ವೆಂಕಟ್ ಅಣ್ಣ ಕೂಡ ಹೀರೊ

2004ರಲ್ಲಿ ಬಿಡುಗಡೆ ಆಗಿದ್ದ “ಸಮುದ್ರ” ಅನ್ನೊ ಚಿತ್ರವನ್ನ ವೆಂಕಟ್ ಅಣ್ಣ ಕುಶಾಲ್ ಬಾಬು ನಿರ್ಮಿಸಿ, ನಿರ್ದೇಶಿಸಿ ಥ್ರಿಲ್ಲರ್ ಮಂಜು ಜೊತೆಗೆ ಹೀರೊ ಆಗಿ ನಟಿಸಿದ್ದರು . ಆದ್ರೆ ಅವರೊಂದಿಗೆ ವೆಂಕಟ್ ಗೆ ಹೆಚ್ಚಿನ ಬಾಂಧವ್ಯ ಇದ್ದಂತಿರಲಿಲ್ಲ.
ಕೆಲವೇ ದಿನಕ್ಕೆ ನಾನು ಸಹವಾಸ ಸಾಕಪ್ಪಾ ಅಂತ ಬೇರೊಂದು ಫಿಲ್ಮ್ ಗೆ ಶಿಫ್ಟ್ ಆಗ್ಬಿಟ್ಟೆ . ಆಮೇಲೆ ಅವನು ವೆಂಕಟ್  ಅನ್ನೋ ಸಿನಿಮಾವನ್ನ ಅರ್ಧಕ್ಕೇ  ನಿಲ್ಲಿಸಿ  “ಸ್ವತಂತ್ರ ಪಾಳ್ಯ”ಅನ್ನೋ ಸಿನೆಮಾ ಮಾಡಿದ.

ಅವತ್ತು ನೋಡಿದಾಗ ಅವನು ಅವನಾಗಿ ಉಳಿದಿರಲಿಲ್ಲ

ಆಮೇಲೆ ಮತ್ತೆ ನನಗೆ  ವೆಂಕಟ್ ದರ್ಶನ ಆಗಿದ್ದು ಕೆಲವು ವರ್ಷಗಳ ನಂತರ ಗಾಂಧಿನಗರದ ಬಾರ್ ಒಂದರ ಮುಂದೆ! ಅತ್ತಿಂದಿತ್ತ, ಇತ್ತಿಂದತ್ತ ವಿಚಿತ್ರವಾಗಿ ಓಡಾಡ್ತಿದ್ದ. ನಾನು ಎದುರಾದಾಗ ಹಾಯ್ ವಿನಯ್ ಹೇಗಿದೀಯ ಅಂದ. ನಂಗೆ ಮನಸಲ್ಲೇ ಇದೇನ್ ಹಿಂಗಾಗಿದ್ದಾನಲ್ಲ ಅನ್ನೋ ಯೋಚ್ನೆ. ಕೈಲೊಂದು ಕವರ್ ಅದ್ರಲ್ಲಿ ವೆಂಕಟ್ ಫಿಲ್ಮ್ ನ ಪೋಸ್ಟರ್ಸ್ ಇತ್ತು . ನಾನು ಮತ್ತೆ ಏನ್ ನಡೀತಿದೆ ಅಂದೆ. ಶುರುವಾಯಿತು ಚಿತ್ರರಂಗದವ್ರಿಗೆ ಬೈಗುಳಗಳ ಸುರಿಮಳೆ!! ನಡುರಸ್ತೆ ಲಿ ಇದೊಳ್ಳೆ ಸಹವಾಸ ಆಯಿತಲ್ಲ ಅಂತ ನಿಧಾನಕ್ಕೆ ತಪ್ಪಿಸಿಕೊಂಡೆ!!

ಮತ್ತೆ ಕಂಡಿದ್ದು ಟಿವಿಯಲ್ಲಿ ಕನ್ನಡ ಪ್ರೇಕ್ಷಕನನ್ನ ಬಯ್ಯುವ ಎಕ್ಸ್ ಕ್ಲುಸಿವ್ ನ್ಯೂಸ್ ನಲ್ಲಿ! ಅಲ್ಲಿಂದ ವೆಂಕಟ್ ಹುಚ್ಚ ವೆಂಕಟ್ ಆಗಿ ಸೆಲೆಬ್ರಿಟಿ ಆಗಿದ್ದು ನಿಮಗೂ ಗೊತ್ತೇ ಇದೆ.

ಆತನ ಸೂಕ್ಷ್ಮ ಮನಸ್ಸು, ಆತನ ಆತ್ಮರತಿ, ಆತನ ಗೆಲುವಿನ ಹಪಹಪಿತನ, ಆತನ ಕನಸು, ಎಲ್ಲವೂ ಚಿತ್ರರಂಗದಲ್ಲಿ ಅವನ ನಿರೀಕ್ಷೆ ತಲುಪದೇ ಹೀಗೆ ವೈಲೆಂಟ್ ಗುಣಗಳು ಬೆಳೆಯೋಕೆ ಕಾರಣ ಆಗಿರಬಹುದು.

ಈ ರಂಜನೆಯ ಕ್ಷೇತ್ರವೇ ಹಾಗೆನೋ ಎಂಥವರನ್ನೂ ಹುಚ್ಚರನ್ನಾಗಿ ಮಾಡಿಬಿಡುತ್ತೆ. ಹುಚ್ಚರನ್ನೂ ಸೆಲೆಬ್ರಿಟಿಯನ್ನಾಗಿಸುತ್ತೆ.

-ವಿನಯ್

-Ad-

Leave Your Comments