ನಾನೇನು ಮಹಾ ನಿರ್ದೇಶಕನಲ್ಲ ಎಂದಿದ್ದ ಪುಟ್ಟಣ್ಣ ಕಣಗಾಲ್ .

ಚಿತ್ರರಂಗ , ಚಿತ್ರರಸಿಕರು ಮರೆಯಲಾಗದ ನಿರ್ದೇಶಕ ಪುಟ್ಟಣ್ಣ ಕಣಗಾಲ್ . ಹೆಸರಿನಲ್ಲಿ ಪುಟ್ಟಣ್ಣನಾದರೂ ಪ್ರತಿಭೆಯಲ್ಲಿ ದೊಡ್ಡಣ್ಣ . ಕನ್ನಡ ಚಿತ್ರಗಳನ್ನು ಬಾಲಿವುಡ್ ನಿರ್ದೇಶಕರು, ನಟರು ಮೆಚ್ಚಿಕೊಳ್ಳುವಂತೆ, ಬೆರಗಿನಿಂದ ಗಮನಿಸುವಂತೆ ಮಾಡಿದ ಅಪರೂಪದ ನಿರ್ದೇಶಕ. ಇಂದು ಪುಟ್ಟಣ್ಣರ  ಹುಟ್ಟುಹಬ್ಬ. ಈ ಹೊತ್ತಲ್ಲಿ ಅಂದು ಆಡಿ, ಇಂದಿಗೂ ವಾಸ್ತವಾಗಿ ಉಳಿದಿರುವ ಅವರ  ಮಾತುಗಳನ್ನು ಇಲ್ಲಿ ಹರಡಿದ್ದೇವೆ . ಓದುಗರ ಎದೆಯಲ್ಲಿ ಹರಳುಗಟ್ಟಿದರೆ ciniaddaa.com ಪ್ರಯತ್ನ ಸಫಲ .

ನನ್ನ ನಿರ್ದೇಶನ

puttanna-movies

ನಾನೇನು ಮಹಾ ನಿರ್ದೇಶಕನಲ್ಲ. ಇನ್ನೂ ವಿದ್ಯಾರ್ಥಿ. ಪ್ರತಿದಿನವೂ ಕಲಿಯುತ್ತಿದ್ದೇನೆ. ಚಲನಚಿತ್ರ ಸೃಜನಾತ್ಮಕ ಮಾಧ್ಯಮ. ಈ ಚಿತ್ರ ಮಹಾ ಸಾಗರದಲ್ಲಿ ಕಲಿಯುವುದಕ್ಕೆ ಕೊನೆಯೇ ಇಲ್ಲ.ಯಾವುದೇ ಚಿತ್ರದ ಯಶಸ್ಸು ನಿರ್ದೇಶನ ಮತ್ತು ಕಥೆಯನ್ನು ಅವಲಂಬಿಸಿರುತ್ತದೆ. ಊಟ ಮುಖ್ಯವೇ ಹೊರತು, ತಟ್ಟೆ ಇಟ್ಟಿರುವ ಮೇಜು ಕುರ್ಚಿಗಳಲ್ಲ. ಹಾಗೆಯೇ  ಚಿತ್ರದ ಮೂಲಕ ಒಬ್ಬ ನಿರ್ದೇಶಕ ಹೇಳಬೇಕಾಗಿರುವ ವಿಷಯ ಮುಖ್ಯವೇ ಹೊರತು ಅಳತೆ ಮೀರಿದ ಆಡಂಬರ ಅಥವಾ ಚಿತ್ರೀಕರಣದ ಸೆಟ್ಟುಗಳಲ್ಲ.

ನಾನು ನನ್ನ ಚಿತ್ರಗಳಲ್ಲಿ ಸಲ್ಲದ, ನಕಾರಾತ್ಮಕ ಅಂಶಗಳನ್ನೂ, ಅವಗುಣಗಳನ್ನೂ ವೈಭವೀಕರಿಸಲಿಲ್ಲ. ನನ್ನ ಅಭಿರುಚಿಯನ್ನು ಜನ ಒಪ್ಪದಿದ್ದರೆ ಎಂಬ ಅಳುಕಿದೆ. ಆದರೂ ನನಗೆ ಗೊತ್ತಿರುವ, ನಾನು ನಂಬಿರುವ ಇದೊಂದನ್ನು ಮಾಡುತ್ತಲೇ ಹೋಗುತ್ತೇನೆ. ನಾನು ಮಾಡಿದ ಚಿತ್ರಗಳು ಏನು ಅಂತ ಜನಕ್ಕೆ ನಾಳೆ ಅರ್ಥವಾಗುತ್ತದೆ.

ನನ್ನ ಚಿತ್ರ

puttanna-gejje

ನಮ್ಮ ಚಿತ್ರ ನಿರ್ಮಾಪಕರಿಗೆ ಯುವ ಪೀಳಿಗೆಯೇ ಆಶ್ರಯದಾತರು. ಅವರ ಅಭಿರುಚಿಯಂತೆ ಪ್ರಣಯ, ಕಾಮ, ಹಿಂಸೆ, ಕೊಲೆ ಮತ್ತು ಬೆಡ್ ರೂಂ ದೃಶ್ಯಗಳನ್ನು ತೋರಿಸಿ ಅವರ ನೈತಿಕ ಅಧಃಪತನಕ್ಕೆ ಕಾರಣರಾಗುತ್ತಾರೆ. ನಾನು ಯುವಕರನ್ನು ಪ್ರಚೋದಿಸುವ ಚಿತ್ರಗಳನ್ನು ತೆಗೆಯುವ ಬದಲು ವಿಚಾರ ಪ್ರಚೋದಕ ಚಿತ್ರಗಳನ್ನು ತೆಗೆಯಲು ಇಚ್ಛಿಸುತ್ತೇನೆ .

ನಿರ್ದೇಶಕನ ಕೆಲಸ ಥ್ಯಾಂಕ್ ಲೆಸ್ ಜಾಬ್ .ಹೆಸರಿರುವಾಗ ನಡೆಯುತ್ತದೆ. ನನ್ನಿಂದ ಒಂದು ಚಿತ್ರ ಸೋತರೂ ಆಮೇಲೆ ನನ್ನ ಕಡೆ ತಿರುಗಿಯೂ ನೋಡೋ ಜನ ಇರುವುದಿಲ್ಲ. ಇನ್ನು ನಿಜ ಹೇಳಬೇಕೆಂದರೆ ಒಂದು ಲೋಟ ಕಾಫಿಯೂ ಸಿಗುವುದಿಲ್ಲ.ಒಟ್ಟಿನಲ್ಲಿ ಯಶಸ್ಸಿನ ತಕ್ಕಡಿಯಲ್ಲಿ ನಾವು ಪ್ರತಿಕ್ಷಣವೂ ತೂಗಲ್ಪಡುತ್ತೇವೆ.

ನಾನೆಂದರೆ..

ನನಗೆ ಚಲನ ಚಿತ್ರ ಮಾಡುವುದನ್ನು ಬಿಟ್ಟು ಬೇರಾವ ವಿದ್ಯೆಯೂ ಗೊತ್ತಿಲ್ಲ.ನನ್ನ ಕೊನೆ ಉಸಿರಿರುವ ತನಕ ಚಿತ್ರ ಮಾಡುತ್ತಲೇ ಇರುತ್ತೇನೆ. ಇದೇ ನನ್ನ ಉಸಿರು. ಇದೇ ನನ್ನ ಪ್ರಾಣ .

ಇದು ನಮ್ಮ ದುರಂತ

sakshathkaaraನಮ್ಮ ಉದ್ಯಮದ್ದು ಪೂರ್ತಿ ವ್ಯಾಪಾರ ಮನೋಭಾವ. ಸೇಲೇಬಲ್ ಕಮಾಡಿಟಿ ಏನಿದೆಯೋ ಅದನ್ನೇ ಹಾಕಿ ಆದಷ್ಟು ಬೇಗ ದುಡ್ಡು ಮಾಡಿಕೋಬೇಕು ಅನ್ನುವುದೊಂದೇ ಉದ್ಯಮದ ಉದ್ದೇಶ. ಇಲ್ಲಿ ಎಲ್ಲರಿಗು ಹಣದ ಭೂತ ಹಿಡಿದಿದೆ. ನಿಜವಾಗಿ ಪ್ರಾಮಾಣಿಕವಾಗಿ ದುಡಿಯುವವ,ಉದ್ಯಮ ತಿಳಿದವ, ಏನಾದರೂ ಸಾಧಿಸಬೇಕಾದರೆ ಅಂಥವನಿಗೆ ಹಣವಿಲ್ಲ. ಚಿತ್ರ ಮಂದಿರದಲ್ಲಿ ಚೆನ್ನಾಗಿ ಪ್ರದರ್ಶನವಾಗುತ್ತಿದ್ದ ಚಿತ್ರಗಳನ್ನು ಯಾವ ಮುನ್ಸೂಚನೆ ಇಲ್ಲದೆ ಧಿಡೀರನೆ ತೆಗೆದು ಹಾಕಿ ಬೇರೆ ಚಿತ್ರಗಳನ್ನು ಪ್ರದರ್ಶಿಸುತ್ತಿರುವುದು ನಮ್ಮ ರಂಗದ ದುರಂತ.

ಯಾರೂ ಅಳುಕಬೇಕಿಲ್ಲ

ಚಿತ್ರ ನಿರ್ದೇಶಕ, ದೇಶಪ್ರೇಮಿ, ಕಲೆಗಾರ, ಯೋಧ ಇವರಲ್ಲಿ ಯಾರೂ  ಸೋಲಿನಿಂದ ಅಳುಕಬೇಕಾಗಿಲ್ಲ.ಬದಲಾಗಿ ಪ್ರತಿ ಸೋಲೂ ಗೆಲುವಿನ ಹಾದಿಗೆ ದಾರಿ ಮಾಡಿಕೊಡುತ್ತದೆ. ಅವರವರ ಸೇವಾ ಕ್ಷೇತ್ರದಲ್ಲಿ ಮಿನುಗುವಂತೆ ಮಾಡುತ್ತದೆ.

ಹೋರಾಟ ಅತ್ಯಗತ್ಯ

puttanna-nagara

ನಮಗೆ ಸ್ವಾತಂತ್ರ್ಯ ಬಂದಿದೆ ಅನ್ನುತ್ತೇವೆ. ಹಿಂದೆ ಆಂಗ್ಲರ ಆಡಳಿತದಲ್ಲಿದ್ದೆವು.ಈಗ ಉತ್ತರಭಾರತದ ಆಡಳಿತದಲ್ಲಿದ್ದೇವೆ. ವರ್ಣದ್ವೇಷವನ್ನು ಕಾಣಲು ನಾವು ಇಂಗ್ಲೆಂಡ್,ಅಮೇರಿಕಾಗಳಿಗೆ ಹೋಗ್ಬೇಕಿಲ್ಲ. ಭಾರತದಲ್ಲಿಯೇ ಇದೆ. ಕಪ್ಪು ಕನ್ನಡಿಗನಿಗೆ ದಿಲ್ಲಿಯಲ್ಲಿ ಮೂರು ಕಾಸಿನ ಬೆಲೆಯೂ ಇಲ್ಲ.ಇದನ್ನೆಲ್ಲಾ ಸಾಧಿಸಲು ಹೋರಾಟ ಅತ್ಯಗತ್ಯ .

ಚಿತ್ರರಂಗದಲ್ಲಿ ಇತಿಹಾಸ ನಿರ್ಮಿಸಿದ ಪುಟ್ಟಣ್ಣರ ನೆನಪು ಇತಿಹಾಸ ನಿರ್ಮಿಸಲು ಹೊರಡುವ ಎಲ್ಲರನ್ನು ಕಾಡುವಂತದ್ದು. ಚಿತ್ರರಸಿಕರ ಎದೆಯಲ್ಲಿ ಉಳಿಯುವಂತದ್ದು. ಅಂಥಾ ಛಲದ ಚಿಲುಮೆಯ ಸಾಧನೆಗೆ ನಮನ.

-ಭಾನುಮತಿ ಬಿ ಸಿ

-ಆಧಾರ :ಬೆಳ್ಳಿ ತೆರೆಯ ಭಾವಶಿಲ್ಪಿ

-Ad-

Leave Your Comments