ಜಾನ್-ಜಾನಿ-ಜನಾರ್ಧನ್ ಜಾಳು..ಜಾಳು..ಪೊಳ್ಳು ..ಪೊಳ್ಳು

Amar Akbar Anthony malayalam movie Kannada remake John Jani Janardhan

“ಜಾನ್-ಜಾನಿ-ಜನಾರ್ಧನ್” ಬ್ಯಾಂಕಾಕ್ ಗೆ ಹೋಗಿ ಮಸ್ತ್ ಮಜಾ ಮಾಡಿ ಬರುವುದೇ ತಮ್ಮ ಜೀವನದ ಗುರಿ ಎಂದು ಭಾವಿಸಿ ಬೇಕಾಬಿಟ್ಟಿ ಬದುಕುವ ಮೂವರು ಉಡಾಳರ ಕಥೆ .

ಜಾನ್ -ಜಾನಿ-ಜನಾರ್ಧನ್ ಪರರಂಪಂಪಂಪಂಪಮ್ .. ಹಾಡು ಕೇಳಿ, ಏನೋ ಸಿನಿಮಾ ಮಜವಾಗಿರಬಹುದು ಅಂದ್ಕೊಂಡು ಹೋದರೆ ಪರಪರ ಕೆರೆದುಕೊಂಡು ವಾಪಸು ಬರಬೇಕಷ್ಟೆ . ಸಿನಿಮಾ ಕಡೆಯ 20 ನಿಮಿಷದವರೆಗೂ ಪಕ್ಕಾ ಖಾಲಿ ಪೋಲಿತನವೇ ತುಂಬಿಹೋಗಿದೆ. ಕಂಡ ಕಂಡ ಹೆಣ್ಣುಗಳನ್ನೆಲ್ಲ ಪಟಾಯಿಸಿ, ಆ ಕ್ಷಣದ ಕಾಮತೃಷೆ ತೀರಿಸಿಕೊಳ್ಳುವ ಮನಸ್ಥಿತಿ ಜಾನ್-ಜಾನಿ-ಜನಾರ್ಧನ್ ದು. ಎದುರು ಮನೆಯ ವಿವಾಹಿತ ಚೆಂದದ ಹೆಣ್ಣು ಬಟ್ಟೆ ಒಗೆಯುವುದನ್ನೇ ನೋಡುತ್ತಾ “ಬೆಳ್ ಬೆಳಿಗ್ಗೆ ಎಬ್ಬಿಸಿಬಿಟ್ಟಳಲ್ಲೋ ” ಅಂತ ಬಾಯ್ ಬಾಯ್ ಬಿಡುವ ಈ ಮೂರು ಗಂಡುಗಳು “ಅಪ್ಪಟ ಪೋಲಿಗಳು” ಅನ್ನದೆ ಇನ್ನೇನನ್ನಬೇಕು ?  ಸಂಭಾಷಣೆಯಲ್ಲಿ  “ಗಟ್ಟಿತನ” ಭೂತಗನ್ನಡಿ ಹಿಡಿದರು ಕಾಣುವುದಿಲ್ಲ.ನಿಜ “ಕಾಮ” ಮನುಷ್ಯನ ನಿರಂತರ ಹುಡುಕಾಟ ಆದ್ರೆ ಪಡೆದುಕೊಳ್ಳುವ ರೀತಿನೀತಿಗಳು ಬೇಡವೇ ? ಆಸೆಯನ್ನು ವ್ಯಕ್ತಪಡಿಸುವುದಿಕ್ಕೆ ಅಶ್ಲೀಲ ಮಾತುಗಳೇ ಬೇಕೇ? ಮಾಲಶ್ರೀಯಂಥಾ ಅದ್ಬುತ ನಟಿಗಾದರು ನೋಡುಗರ ಮನಸ್ಸಿಗೆ ನಾಟುವ ಸಂಭಾಷಣೆ ಬರೆಯಬಹುದಿತ್ತು .ಕ್ಷಣ ಹೊತ್ತಾದರೂ ಇನ್ಸೆಪೆಕ್ಟರ್ ದುರ್ಗಿಯಾಗಿ ಮಾಲಾಶ್ರೀ ಅಭಿನಯ ನೋಡಿದ್ದಷ್ಟೇ ಸಣ್ಣ ಸಮಾಧಾನ.

ಪುಟ್ಟ ಬಾಲಕಿಯರ ಅಪಹರಣ, ಅತ್ಯಾಚಾರ,ಕೊಲೆಯಂಥ ಗಂಭೀರ ವಿಷಯವನ್ನು ಸುಮ್ಮನೆ ಚಿತ್ರದ ಕಡೆಯಲ್ಲಿ ತುರುಕಿದಂತಿದೆ.  ಪುಟ್ಟ ಬಾಲಕಿ ಶಾಲು ಶಾಲೆಯಿಂದ ಬರುತ್ತಾ ಚಪ್ಪಡಿ ಕಲ್ಲ ಮೇಲೆ ಬಿದ್ದಾಗ ಬಲೂನು ಹಿಡಿದು ಯಾಮಾರಿಸಲು ಬರುವ ಕಾಮುಕ ಅವಳನ್ನೇನೂ ಮಾಡದೆ ಹಾಗೇ ಬಿಟ್ಟು ಬಿಡುತ್ತಾನೆಯೇ ? ಪ್ರೇಕ್ಷಕರು ನಿರ್ದೇಶಕರ ದಡ್ಡತನ  ಅರ್ಥ ಮಾಡಿಕೊಳ್ಳದಿರುವಷ್ಟು ಹುಂಬರಲ್ಲ.ಇಂಥಾ ಹುಳುಕುಗಳು ಅಲ್ಲಲ್ಲಿ ಎದ್ದೇ ಕಾಣುತ್ತವೆ .ಕಂದಮ್ಮಗಳ ಮುದ್ಗತನಕ್ಕೆ ಮಣ್ಣೆರೆಚುವ ವಿಕೃತಕಾಮಿಗಳು ನಮ್ಮ ನಡುವೆಯೇ ಇರುತ್ತಾರೆ ಎನ್ನುವುದನ್ನು ತೋರಿಸುವುದಕ್ಕೆ ಶ್ರೀನಿವಾಸಮೂರ್ತಿಯವರೇ ಬೇಕಿತ್ತೆ ? ಭೋಜರಾಜ ನಿಜಕ್ಕೂ ಇಂಥಾ ನಿರ್ದೇಶಕರ ಕೈಗೆ ಸಿಕ್ಕಿ ದಿವಂಗತನಾದ .

ಏನೇ ಕೊಟ್ರು ಸೈ 

ಗಿರಿಜಾ ಲೋಕೇಶ್ ಅಮ್ಮ, ಅತ್ತೆ , ಹೆಂಡತಿ,ಅತ್ತಿಗೆ ಹೀಗೆ ..ಎಂಥಾ ಪಾತ್ರ ಕೊಟ್ಟರು ಶಬ್ಬಾಸ್ ಎನ್ನುವಂತೆ ನಟಿಸುವ ಕಲಾವಿದೆ. “ಎಷ್ಟೇ ಕೋಟಿಗಳಾಗಲಿ” ಅಂತ  ಬಿಲ್ಡ್ ಅಪ್ ನಿಂದಲೇ ಮಾತಿಗಿಳಿವ ಜನಾರ್ಧನ್ ಅಮ್ಮನ ಪಾತ್ರದಲ್ಲಿ ಗಿರಿಜಾ ಲೋಕೇಶ್ ಸೈ ಎನ್ನಿಸುವಂತೆ ನಟಿಸಿದ್ದಾರೆ.

ವಿಕಲ ಚೇತನನ ಪಾತ್ರದಲ್ಲಿ ಯೋಗಿ ನಟನೆ ಮೆಚ್ಚಲೇಬೇಕು. ಪಿಜ್ಜಾ ಅಂಗಡಿಯಲ್ಲಿ ಕೇರ್ ಲೆಸ್ ಆಗಿ ಕೆಲಸ ಮಾಡುವ ಮದನ್ ಕೃಷ್ಣ ಅಭಿನಯವೂ ಓಕೆ. ಮಾತೆತ್ತಿದ್ರೆ ಬಿಲ್ಡಪ್ ಬುರುಡೆ ಬಿಡುವ ಅಜಯ್ ರಾವ್ ನಟನೆಯಲ್ಲಿ  ಪಳಗದಿದ್ದರೆ ಕಷ್ಟ ಕಷ್ಟ .. ಕಣ್ಣ ಮುಂದೆ ಬೆಳೆದ ಕೂಸಿನ ಮೇಲೆ ಅತ್ಯಾಚಾರವಾದಾಗ ಎಂಥಾ ಶಂ..ನಿಗೂ .ರೋಷವುಕ್ಕಿ ಬರುತ್ತದೆ. ಜನಾರ್ಧನ್ ಪ್ರೀತಿಪಾತ್ರ ಪುಟ್ಟಿ ಶಾಲು ಅತ್ಯಾಚಾರಕ್ಕೆ ಒಳಗಾಗಿ ಸಾವನ್ನಪ್ಪಿದಾಗ  ಆತನಿಗೆ  ಈಗ ಭಯಂಕರ ರೋಷ ಉಕ್ಕಿ ಬರುತ್ತೆ ಅಂತ ನೋಡುವವರು ಕಾದು ಕಾದು ಸುಸ್ತಾಗಬೇಕಷ್ಟೆ. ಅಜಯ್ ಮುಖದಲ್ಲಿ ಕೋಪ , ದುಃಖದ ಅಭಿನಯ ಕಾಣೋದಿಕ್ಕೆ ಪ್ರೇಕ್ಷಕ ಅದೆಷ್ಟು ವರುಷ ಕಾಯಬೇಕೋ ?

ಹೆಣ್ಣನ್ನು  ಕಂಡಾಗಲೆಲ್ಲ ಜೊಲ್ಲುಸುರಿಸುವ ಜಾನ್-ಜಾನಿ-ಜನಾರ್ಧನ್ ಗು  ಪುಟ್ಟ ಬಾಲಕಿಯರನ್ನು ಅಪಹರಿಸಿ ಅತ್ಯಾಚಾರ ಮಾಡುವ ಕಾಮುಕರಿಗೂ ತುಂಬಾ ದೊಡ್ಡ ವ್ಯತ್ಯಾಸವೇನು ಇಲ್ಲ. ಈ ಮೂವರಿಗೂ ಹೆಣ್ಣನ್ನು ಕಂಡಾಗ ಉಕ್ಕುವುದು ಕಾಮವೇ . ಕೊನೆಯಲ್ಲಿ ಮಹಾ ಪರಿವರ್ತನೆಯಾದವರಂತೆ ಮಾಡಿದ್ದೇನು ? ಬಾಕ್ಸ್ ಹಿಡಿದು “ಸೇವ್ ಗರ್ಲ್ ಚೈಲ್ಡ್ ” ಪೋಸ್ನಲ್ಲಿ ಕಾಸಿಗಾಗಿ ಕೈ ಒಡ್ಡುವ ಕೆಲಸ. ಗಟ್ಟಿಮುಟ್ಟಾದ ಧೃಢ ಮನಸ್ಸಿನ ಗಂಡುಮಕ್ಕಳು ಮಾಡುವ ಕೆಲಸವೇ ? ಮೈ ಬಗ್ಗಿಸಿ ದುಡಿದು ನಾಲ್ಕು ಜನ ಹೆಣ್ಣುಮಕ್ಕಳಿಗೆ ವಿದ್ಯಾಭ್ಯಾಸ ಕೊಡಿಸಿಯೋ , ಅನಾಥ ಹೆಣ್ಣುಮಕ್ಕಳನ್ನು ಸಾಕುವ ಕೆಲಸ ಮಾಡುವಂತಿದ್ದರೆ ಒಪ್ಪಬಹುದಿತ್ತೇನೋ . ಮೊದಲು ತಾವೇನೂ ಮಾಡದೆ ಬೇರೆಯವರ ಹಣದಲ್ಲಿ ಸಮಾಜಸೇವೆ ನೀತಿವಂತ ಮಾರ್ಗವೇ ?

ಜಾನ್-ಜಾನಿ-ಜನಾರ್ಧನ್ ತರಹದ  ಜಾಳು ಜಾಳು, ಪೊಳ್ಳು ಚಿತ್ರಗಳನ್ನುಇನ್ನು ಮುಂದೆಯೂ ನಿರ್ದೇಶಿಸಿದರೆ ಗುರುದೇಶಪಾಂಡೆಯವರನ್ನು ಆ ಗುರುರಾಯರೂ ಕಾಯಲಾರರು.

 

photo credit-onlookers

 

-Ad-

Leave Your Comments