ತನ್ನದಲ್ಲದ ಕನಸನ್ನು ಕೆಚ್ಚಿನಿಂದ ಬದುಕಿದ “ಅಮ್ಮ”

ಓಡುವ ಓಘಕ್ಕೆ ಕನಿಷ್ಠ ಎರಡು ಆಯಾಮಗಳಿವೆ. ಮೊದಲನೆಯದು, ಯಾವ ಏರುಪೇರಿಲ್ಲದೆ ಸುಮ್ಮನೆ ದಾರಿ ಕಂಡಂತೆ ಓಡುವುದು. ಅಡ್ಡಿಗಳು ಬಂದಲ್ಲಿ ವೇಗ ಕಡಿಮೆ ಮಾಡಿಕೊಳ್ಳುವುದು, ಅದು ನಿವಾರಣೆಯಾದ ನಂತರ ಮತ್ತೆ ಯಾವುದೋ ಒಂದು ದಿಕ್ಕಿಗೆ ಓಡುವುದು.

ಎರಡನೆಯ ಪರಿಯಲ್ಲಿ ಓಟದ ವೇಗ ಯಾವ ಕಾರಣಕ್ಕೂ ಕಡಿಮೆಯಾಗುವಂತಿಲ್ಲ. ಅಡ್ಡಿ ಆತಂಕಗಳು ಕುತ್ತಿಗೆಯವರೆಗೆ ಬಂದರೂ ಜಿಗಿದು ಓಡಬೇಕು. ಓಡುತ್ತಲೇ ಇರಬೇಕು. ಕಣ್ಣಿಗೆ ಕಂಡಷ್ಟೇ ದಾರಿ. ತಿರುವು, ಓರೆಕೋರೆ ಯಾವುದೂ ಲೆಕ್ಕಕ್ಕಿಲ್ಲ. ಓಡಬೇಕು, ಓಡಿ ಸೈ ಎನ್ನಿಸಿಕೊಳ್ಳಬೇಕು. ಕೆಲವರಿಗೆ ಜೀವನ ಮೊದಲನೆಯ ಓಟದ ಮಾದರಿಯಾದರೆ, ಇನ್ನು ಕೆಲವರಿಗೆ ಬದುಕು ಎರಡನೆಯ ಮಾದರಿಯ ಓಟ. ಬದುಕಿನುದ್ದಕ್ಕೂ ’ಕುಮಾರಿ’ಯಾಗಿ ನಡೆದ ತಮಿಳುನಾಡಿನ ’ಅಮ್ಮ’ನಿಗೆ ಜೀವನ ವೈರುಧ್ಯಗಳ ಮೂಟೆ. ಹಾಗಂತ ಅವರೇನೂ ತಮ್ಮ ಬದುಕುವ ಉತ್ಸಾಹವನ್ನು ಕಡಿಮೆ ಮಾಡಿಕೊಳ್ಳಲಿಲ್ಲ. ಬದಲಿಗೆ ತನ್ನ ವೈಯಕ್ತಿಕ ಜೀವನದ ಮಿತಿ ಅರಿವಾದಾಗ ತಮ್ಮ ಚೌಕಟ್ಟನ್ನು ಹಿಗ್ಗಿಸಿಕೊಂಡು ಜನಗಳೊಂದಿಗೆ ಸೇರಿಬಿಟ್ಟರು. ಆ ಮೂಲಕ ’ಕುಮಾರಿ’ಯೊಬ್ಬಳು ಧಿಡೀರ್ ಅಂತ ’ಅಮ್ಮ’ ಅಗಿಬಿಟ್ಟಳು.

img-20161206-wa0065

ಅಚ್ಚ ಕನ್ನಡ ನೆಲದಲ್ಲಿ, ಸಂಪ್ರದಾಯಸ್ಥ ಬ್ರಾಹ್ಮಣ ಕುಟುಂಬದಲ್ಲಿ ಹುಟ್ಟಿದ ಹೆಣ್ಣೊಬ್ಬಳು ಎಲ್ಲಾ ಕಟ್ಟುಪಾಡುಗಳನ್ನೂ ಮೀರಿ ಬದುಕಿದ ಪರಿಗೆ ಶತ್ರುಗಳೂ ಮೆಚ್ಚಬೇಕು. ಅಡ್ಡಿಗಳು ಕಂಡಾಗಲೆಲ್ಲ ಅವನ್ನು ನೆಗೆನೆಗೆದು ದಾಟಿ ವೇಗ ಹೆಚ್ಚಿಸಿಕೊಳ್ಳುತ್ತಾ ಸಾಗಿದ ಪುರುಚ್ಚಿ ತಲೈವಿ, ಸೆಲ್ವಿ ಜಯಲಲಿತಾ ಮುಂದೆಂದೋ ದಂತಕಥೆಯ ಥರ ಭಾಸವಾಗಬಹುದು.

jayala-3

ಮೊದಲ ಗುರುತು ಅಳಿಸಿಹಾಕಿದ್ದು ತನ್ನ ಕನ್ನಡತನದ್ದು. ಆಳಿಸಿದ ರಭಸ ಹೇಗಿತ್ತೆಂದರೆ ತಮಿಳರಿಗಿಂತ ಹೆಚ್ಚು ತಮಿಳುನಿಷ್ಟೆಯನ್ನು ಜಯಲಲಿತಾ ತಮ್ಮ ಜೀವಮಾನದಲ್ಲಿ ಮೆರೆದರು. ಆ ಅಡ್ಡಿಯ ನಂತರ ಮುರಿದು ನಿಂತ ಇನ್ನೊಂದು ಅಡ್ಡಗೋಲು ಸಂಪ್ರದಾಯದ್ದು. ವಿಧವೆ ತಾಯಿಯೊಂದಿಗೆ ಬೆಂಗಳೂರಿಗೆ ಬಂದ ಜಯಲಲಿತಾ ತನ್ನ ಸಿದ್ಧ-ಪ್ರಸಿದ್ಧ ಕುಟುಂಬಸ್ಥರ ಹೆಗ್ಗಳಿಕೆಯ ನೆರಳಲ್ಲಿ ಕುಗ್ಗಿಹೋಗದೆ ಕಲಿಕೆಯಲ್ಲಿ ಭೇಷ್ ಅನ್ನಿಸಿಕೊಂಡರು. ನಂತರ ಸಿನಿಮಾ ಪ್ರವೇಶ. ಒಳ್ಳೆಯ ಕುಟುಂಬದ ಹೆಣ್ಣು ಮಕ್ಕಳು ಸಿನಿಮಾದಲ್ಲಿ ಅಭಿನಯಿಸುವುದನ್ನು ಅವಮಾನ ಎನ್ನುವಂತೆ ಪರಿಭಾವಿಸುತ್ತಿದ್ದ ಕಾಲದಲ್ಲಿ ಭರತನಾಟ್ಯ ಪ್ರವೀಣೆ ಜಯಲಲಿತಾ ಬೆಳ್ಳಿತೆರೆಯನ್ನು ಮನೆಯಾಗಿಸಿಕೊಂಡರು. ಅಲ್ಲಿ ಆದ ಅನಾಚಾರ, ಹುಟ್ಟಿದ ಸಂಬಂಧಗಳು, ಆದ ಅವಮಾನಗಳು ತನ್ನ ತಾಕತ್ತಿಗೆ ಸಮವಲ್ಲ ಎಂಬಂತೆ ಎಲ್ಲವನ್ನೂ ಅನುಭವಿಸುತ್ತಲೇ, ನಿವಾರಿಸಿಕೊಳ್ಳುತ್ತಲೇ ಸಾಗಿದರು. ಎಂ ಜಿ ಆರ್ ಅವರ ಪರಿಚಯ, ಸ್ನೇಹ, ಅವರಿಬ್ಬರ ನಡುವಿನ ವಯಸ್ಸಿನ ಅಂತರ ಯಾವುದೂ ದೊಡ್ಡ ಸವಾಲಾಗಲೇ ಇಲ್ಲ. ಮುಂದೆ ಮುಂದೆ ಮುಂದೆ, ನುಗ್ಗಿ ನಡೆ ಮುಂದೆ ಎನ್ನುವಂತೆ ಹೊಸ ಹೊಸ ಪಾಠಗಳನ್ನು ಉಸಿರಾಗಿಸಿಕೊಳ್ಳುತ್ತಲೇ ನಡೆದ ತಮಿಳರ ’ಅಮ್ಮ’ ಮುಂದೆ ಎಂ ಜಿ ಆರ್ ತೀರಿಕೊಂಡಾಗ ಅವಮಾನಕ್ಕೊಳಗಾದರು. ಆದರೆ ಮುಂದೆ ನಡೆಯುವ ವಿದ್ಯಮಾನಗಳಿಗೆ ದಿಕ್ಸೂಚಿಯೋ ಎಂಬಂತೆ ಎಂ ಜಿ ಆರ್ ಪಾರ್ಥೀವ ಶರೀರದ ಬಳಿ ಕುಳಿತುಬಿಟ್ಟರು. ತಮಿಳುನಾಡಿನ ವಿಧಾನಸಭೆಯಲ್ಲಿ ಜನಪ್ರತಿನಿಧಿಯೊಬ್ಬ ಸೀರೆ ಎಳೆದಾಡಿದ ಅವಮಾನ ಅವರೆಂದೂ ಮರೆತಿರಲಾರರು. ಹಾಗಂತಲೇ ಏನೋ ಅವರಿಗೆ ಸ್ವ-ಆರಾಧನೆ ವ್ಯಕ್ತಿಪೂಜೆಯ ಮಟ್ಟಕ್ಕೆ ಹೋದಾಗಲೂ ಹಿಂಜರಿಕೆ ಇರಲೇ ಇಲ್ಲ. ಕಾಲಿಗೆ ಬೀಳುತ್ತಿದ್ದ ಗಂಡಸರು ಹೆಂಗಸರನ್ನು ನೀರ ಮೇಲಣ ಗುಳ್ಳೆಯನ್ನು ನಂಬುವಷ್ಟೇ ನಂಬುತ್ತಿದ್ದರು.

ಎಲ್ಲ ಕಡೆಯಿಂದಲೂ ಮೋಸ ಅನುಭವಿಸಿದ ಮನಸ್ಸಿಗೆ ’ನಂಬಿಕೆ’ ಒಂದು ಮರೀಚಿಕೆಯೇ ಸರಿ. ಹಾಗಂತ ನಿಷ್ಠರನ್ನು, ತಮಿಳು ಜನರ ವಿಶ್ವಾಸವನ್ನು ಅವರು ಎಂದೂ ಕಳೆದುಕೊಳ್ಳಲಿಲ್ಲ. ಅವಮಾನಗಳು ಸುತ್ತುವರೆದಾಗಲೆಲ್ಲ, ತಮಿಳರಿಗೆ ಅಮ್ಮನ ಮೇಲಿನ ಪ್ರೀತಿ ಹೆಚ್ಚಾಗುತ್ತಲೇ ಹೋಯಿತು. ಕನ್ನಡದ ಹೆಣ್ಣೊಬ್ಬಳು ಹುಟ್ಟಿದ ನೆಲದ ’ಋಣ’ ’ಸಂಬಂಧ’ ಇಂಥ ಯಾವ ಮುಲಾಜೂ ಇಲ್ಲದೆ ತಮಿಳು ಅಸ್ಮಿತೆಯ ಪ್ರತೀಕವಾಗಿ ನಿಂತದ್ದು ಮಾತ್ರ ಕಾಲದ ಚೋದ್ಯವೆಂದೇ ಹೇಳಬೇಕು.

jaya4jaya5

ತಾವೇ ಬಹಳ ಸಂದರ್ಶನಗಳಲ್ಲಿ ಹೇಳಿಕೊಂಡಂತೆ ಜಯಲಲಿತಾ ನಡೆದ ದಾರಿ ಅವರ ಆಯ್ಕೆಯದ್ದಲ್ಲ. ನಟನೆಗೆ ಬಂದದ್ದು ತಾಯಿ ಸಂಧ್ಯಾ ಅವರ ಒತ್ತಾಸೆಯಿಂದ. ಹಾಡು, ಹಸೆ, ಮನೆ, ಮಕ್ಕಳು ಅಂತ ಇರಬೇಕಿದ್ದ ಉಚ್ಚಕುಲದ ಹೆಣ್ಣೊಂದು ತನಗೆ ತಿಳಿಯದ ವೃತ್ತಿಯನ್ನು ಒಪ್ಪಿಕೊಂಡು ಹಿಂಸೆ, ಅವಮಾನ, ಹೆಂಗಸಿಗೆ ಆಗಬಲ್ಲ ದೌರ್ಜನ್ಯ ಎಲ್ಲವನ್ನೂ ತನ್ನೊಳಗೆ ಜೀರ್ಣಿಸಿಕೊಳ್ಳುತ್ತಾ ಮಿನುಗುತಾರೆಯಂತೆ ಕಂಗೊಳಿಸಲು ಹೇಗೆ ಸಾಧ್ಯ? ಜಯಾ ಅದನ್ನು ಮಾಡಿ ತೋರಿಸಿದರು.

jaya6 mgr_jaya

ರಾಜಕೀಯ ಕೂಡ ಅವರ ಆಯ್ಕೆಯದ್ದಲ್ಲ. ಒಳ್ಳೆಯ ಮಾತುಗಾರಿಕೆಯಿದ್ದ ಚಂದದ ಹೆಣ್ಣುಮಗಳು ತನ್ನ ರಾಜಕೀಯ ಸಂಗಾತಿಯಾಗಬಲ್ಲಳು ಅಂತ ಅನ್ನಿಸಿದ್ದೇ ತಡ ಎಂ ಜಿ ಆರ್ ಹರೆಯದ ಜಯಲಲಿತಾಳನ್ನು ತಮ್ಮೊಂದಿಗೆ ರಾಜಕೀಯ ಜೈತ್ರಯಾತ್ರೆಯಲ್ಲಿ ಸಹಭಾಗಿಯಾಗಿಸಿದರು. ಅದೂ ಕೂಡ ತನ್ನ ಆಯ್ಕೆಯದ್ದಲ್ಲ ಅಂತ ಹೇಳಿಕೊಂಡರೂ ಜಯಲಲಿತಾ ಎಂದೂ ತಡವರಿಸಲಿಲ್ಲ. ತನ್ನ ಹಣೆಬರಹ ಎಲ್ಲೆಲ್ಲಿಗೆ ಕರೆದೊಯ್ಯಿತೋ ಅಲ್ಲೆಲ್ಲ ಎದೆ ಸೆಟೆಸಿ, ತಲೆ ಎತ್ತಿ, ನಗುಮುಖದಿಂದ ಎಂದೂ ತಮ್ಮ ಗತ್ತು, ಠೀವಿ ಕಳೆದುಕೊಳ್ಳದೆ ನಡೆದರು. ರಾಜಕೀಯ ನಿರ್ಧಾರಗಳಲ್ಲಿ ಎಡವಿದಾಗ ಏಕಲವ್ಯನಂತೆ ಧೇನಿಸಿ ಪಾಠಗಳನ್ನು ಕಲಿತುಕೊಂಡರು. ಆಮೇಲೆ ಮತ್ತೆ ಎದ್ದು ನಡೆಯುತ್ತಲೇ ಇದ್ದರು.

ಬೇಡದ ಕೆಲಸ ಮಾಡುವಾಗಿನ ಶ್ರದ್ಧೆಯಾದರೂ ಎಂಥದ್ದು ಎನ್ನುವ ಘನ ಸತ್ಯವೊಂದನ್ನು ಜಯಲಲಿತಾ ಮಾತ್ರ ತೋರಿಸಿಕೊಡಲು ಸಾಧ್ಯ. ಕಾಣ್ಕೆಯ ಮನಸ್ಸಿರಬೇಕಷ್ಟೇ.

ಅರವತ್ತೆಂಟಾಗಿ ಆರೋಗ್ಯದ ಸಮಸ್ಯೆ ಬಿಗಡಾಯಿಸುತ್ತಿದ್ದರೂ ತನ್ನ ದನಿ ಕಳೆದುಕೊಳ್ಳದ, ತಮಿಳು ಜನರ ಕೈ ಬಿಡದ, ಮುಖದ ಮೇಲೆ ಒಂದು ಗೆರೆಯನ್ನೂ ಮೂಡಿಸಿಕೊಳ್ಳದೆ ಹೊಳೆಹೊಳೆಯುವ ಚರ್ಮದ, ನಕ್ಷತ್ರದ ಕಣ್ಣಿನ, ವ್ಯಂಗದಲ್ಲೋ, ವಿಶ್ವಾಸದಲ್ಲೋ ಮಿನುಗುವ ತುಟಿಗಳನ್ನು ಅರಳಿಸುತ್ತಾ ಇದ್ದ ಅಮ್ಮನಿಗೂ ಸಾವು ಬಂತು. ಆದರೆ ೭೫ ದಿನಗಳ ಹೋರಾಟದ ನಂತರ. ಯಮನೂ ಅವಳ ಕಾಲಡಿಯಲ್ಲಿ ಕೂತು ಅವಳಿಗೆ ಕರುಣೆ ಹುಟ್ಟಿ ’ನಡಿ ಹೋಗೋಣ’ ಅಂತ ಹೇಳುವವರೆಗೂ ಕಾದ ಅಂತ ಕಾಣ್ಸುತ್ತೆ. ಹೋಗಿ ಬಾ ಅಮ್ಮ. ಸ್ವರ್ಗವೋ, ನರಕವೋ ನಿನ್ನ ದಾರಿ ಕಾಯಲಿ.
14907665_10153800613052364_9096013075769157885_n

 

-ಪ್ರೀತಿ ನಾಗರಾಜ್ ,ಪತ್ರಕರ್ತೆ

-Ad-

1 COMMENT

Leave Your Comments