ಜೋಗಿ ಜಗತ್ತಿನಲ್ಲಿ ಏನೇನಿದೆ ? ನಟಿಸುತ್ತಾರಾ ? ನಿರ್ದೇಶನಕ್ಕೆ ಅಣಿಯಾಗುತ್ತಿದ್ದಾರಾ ?

ಮಧ್ಯಂತರ ಮುಗಿದು ಉಳಿದರ್ಧದ ಹೊಸ್ತಿಲಿಗೆ ಬಂದರು ಬರವಣಿಗೆಯ ಬಿಸಿ ಕಾಯ್ದುಕೊಂಡಿರುವ ಅಕ್ಷರ ದಾಹಿ ಜೋಗಿ . ಕಥೆ, ಕಾದಂಬರಿ , ಸಿನಿಮಾ, ಧಾರಾವಾಹಿ,ಪತ್ರಿಕೆ ,ಫೇಸ್ಬುಕ್  ಹೀಗೆ ಎಲ್ಲ ಕಡೆಯೂ ಸಲ್ಲುವ  ಹಸನಾದ ಭಂಡಾರ   ಜೋಗಿಯ ಜೋಳಿಗೆಯಲ್ಲಿ ಬೆಚ್ಚಗಿದೆ . ನಮಗೆ ಕಂಡಿರುವುದಿಷ್ಟು. ಮುಂದೆ ಏನೇನು ಕಾಣಲಿದೆಯೋ ಯಾರಿಗೆ ಗೊತ್ತು ? ೫೨ ರ ಹೊಸ್ತಿಲಲ್ಲಿದ್ದರೂ ಕರಗದ ಕುತೂಹಲ , ಬದುಕಿನೆಡೆಗೊಂದು ಬತ್ತದ ಬೆರಗು ಉಳಿಸಿಕೊಂಡು ನಿತ್ಯ ಸುಖಿಯಂತೆ ಕಾಣುವ ಜೋಗಿಯ ಜೊತೆಯಲ್ಲಿ ಕಳೆದ ಹೊತ್ತನ್ನು ನಿಮಗೂ ದಾಟಿಸುವ ಪ್ರಯತ್ನವಿದು . ನೀವು ಕೊಟ್ಟ ಸಮಯಕ್ಕೆ ಮೋಸವಿಲ್ಲ ಓದಿಕೊಳ್ಳಿ.

‘ಸಮಯದ ಹಿಂದೆ ಸವಾರಿ’ ನನ್ನ ಮೊದಲ  ಕಾದಂಬರಿ ಸಿನಿಮಾವಾಗುತ್ತಿದೆ. ರಾಜ್ ಗುರು-ನಯನ ಸೂಡ ಹೊಸ ಹುಡುಗರ ತಂಡ ಈಗಾಗಲೇ ಆಡಿಯೋ  ರಿಲೀಸ್ ಮಾಡಿದೆ.

jogi-kathe 

“ಕಥೆ -ಚಿತ್ರಕಥೆ -ಸಂಭಾಷಣೆ “ ನನ್ನ ಹೊಸ ಕನಸು. ಹೊಸದಾಗಿ ಸಿನಿಮಾ ಮಾಡುವವರಿಗೆ ನನ್ನ ಮೂವತ್ತು ವರುಷಗಳ ಅನುಭವ ಹಂಚಿಕೊಳ್ಳುವ ಪುಸ್ತಕ. ಇದರ ಜೊತೆಗೆ ಅದ್ಭುತವಾದ ಸಿನಿಮಾಗಳನ್ನು ಗ್ರಹಿಸುವ ಯೋಗರಾಜ್ ಭಟ್, ಪವನ್, ಹೇಮಂತ್ ,ರಘುಶಾಸ್ತ್ರಿ ಬಿ ಸುರೇಶ ,ಲಿಂಗದೇವರು ಒಂದು ಕಥೆಯನ್ನ ಹೇಗೆ ಚಿತ್ರಕ್ಕೆ ಒಗ್ಗಿಸುವುದು ,ಸಂಭಾಷಣೆ ಹೇಗೆ ಕಟ್ಟಬೇಕು ಇಂಥಾ ಅನೇಕ ಸಂಗತಿಗಳನ್ನ ದಾಖಲಿಸುತ್ತಾರೆ. ಇದು ಪಠ್ಯ ಪುಸ್ತಕವಾಗದೆ ಎಂಥವರಿಗೂ ಅರ್ಥವಾಗುವ ಹಾಗೆ ಸರಳವಾಗಿ ರೂಪಿಸಬೇಕು .ಅನುಭವ ಕಥನವಾಗಬೇಕು ಇದು ಸದ್ಯದ ನನ್ನ ಯೋಜನೆ .

ಸಮಯದ ಹಿಂದೆ ಸವಾರಿಯಲ್ಲಿ ನಿಮ್ಮ ಪಾತ್ರವೆಷ್ಟು ?

ಇಲ್ಲಿ ಕಥೆಯಷ್ಟೇ ನನ್ನದು. ಸಂಭಾಷಣೆ ನನ್ನದಲ್ಲ. 6-7  ಜನ ಸೇರಿ ಚಿತ್ರ ಕಥೆ ಮಾಡುವುದರಲ್ಲಿ ನನಗೆ ನಂಬಿಕೆ ಇಲ್ಲ. ನಾನು ಮಾಡಿದರೆ ಮಾತ್ರ ಅದು ನನ್ನ ಸಿನಿಮಾ. ಇನ್ಯಾರೋ ಮಾಡಿದರೆ ಅದು ಅವ್ರದ್ದು ಅಷ್ಟೆ. ಕಥೆ ಹುಟ್ಟುವುದು ಧ್ಯಾನಸ್ಥ ಸ್ಥಿತಿಯಲ್ಲಿ ಮಾತ್ರ. ಪ್ರತಿಯೊಬ್ಬರಲ್ಲೂ ಒಂದೊಂದು ಕಥೆ ಇದೆ ನಿಜ. ಹಾಗಂತ ಎಲ್ಲರದನ್ನು ಕೇಳಿ ಚಿತ್ರಕಥೆ ಮಾಡುವುದಾದ್ರೆ ಒಂದು ಸಿನಿಮಾ ಆಗಲಿಕ್ಕೆ ಹತ್ತು ವರುಷ ಬೇಕು. ನಾನು ಸುಮ್ಮನೆ ಗೀಚುವವನಲ್ಲ .ನನ್ನ ಆಯಸ್ಸಿನ ಅಮೂಲ್ಯ ಕ್ಷಣ ಬರವಣಿಗೆಯಲ್ಲಿರುತ್ತದೆ ಅಂದಾಗ ಅದಕ್ಕೆ ಬೆಲೆ ಇರಲೇ ಬೇಕಲ್ಲ.

ಕಥೆಗಿಂತ ಹೀರೋ ವಿಜೃಂಭಣೆಯ  ಚಿತ್ರಗಳೇ ಮೆರೆಯುತ್ತಿವೆಯಲ್ಲ ?

ಹೀರೋಯಿಸಂ ಚಿತ್ರಗಳು ವರ್ಷಕ್ಕೆ 5-6 ಬರ್ತಾ ಇವೆ. ಇಂಡಸ್ಟ್ರಿ ಉಳಿಯಲಿಕ್ಕೆ ಅಂಥಾ ಚಿತ್ರಗಳು ಬೇಕು. ದೊಡ್ಡ ಬಜೆಟ್ ಇರುವಲ್ಲಿ 300-3000 ಮಂದಿಗೆ ಕೆಲಸ ಸಿಗುತ್ತಲ್ಲ.

ಹಾಗಾದ್ರೆ ಕಥೆ ಕಾಣದೆ ನಾಯಕನ ಮೆರೆದಾಟವಿದ್ರೆ ಪ್ರೇಕ್ಷಕನಿಗೆ ಸಾಕು ಅಂತೀರಾ ?

ಒಬ್ಬ ಹೀರೋನ ಸಿನಿಮಾಕ್ಕೆ ಹೋದಾಗ  ಬಹಳಷ್ಟು ಜನ ನೋಡುವುದು ನಾಯಕನನ್ನೇ ಹೊರತು ಕಥೆಯನ್ನಲ್ಲ.ಕೆಲವು ಕಡೆ ನಿರ್ದೇಶಕನ ಕನಸು ಕಲ್ಪನೆಗೆ ಯಾವ ಕಿಮ್ಮತ್ತು ಇರೋದಿಲ್ಲ. ಹೀರೋ ವಿಜೃಂಭಿಸುವ ಸಂಭಾಷಣೆಗಳೇ ತುಂಬಿ ತುಳುಕಾಡುತ್ತವೆ. ಹಾಗೆ ಮೆರೆಸದಿದ್ದರೆ ಸಿನಿಮಾಗಳು ಓಡುವುದಿಲ್ಲ . ಯುವಜನರಿಗೆ ಇಂಥಾ ಚಿತ್ರಗಳೇ ಬೇಕು. ವೇದಾಂತ, ಫಿಲಾಸಫಿ ಕೊಡೋಕ್ಕಾಗಲ್ಲ. ಅವ್ರಿಗೆ ಕಥೆಗಿಂತ ಹೆಚ್ಚು ರಂಜನೆ ಬೇಕು.

ಜನ ಇಂಥವನ್ನ ನಿಜವಾಗ್ಲೂ ಬಯಸ್ತಾ ಇದ್ದಾರಾ ? ಅಥವಾ ಅವ್ರ ಮೇಲೆ  ಹೇರಾಟ ನಡೆದಿದೆಯಾ ?

ನಾನು ಆ ವಯಸ್ಸಲ್ಲಿ ಸಿಡಿದೆದ್ದ ಸಹೋದರ, ಸಾಹಸಸಿಂಹ, ಶಂಕರ್ ಗುರು ,ಗುರಿ ಇಂಥಾ ಸಿನಿಮಾಗಳನ್ನೇ ನೋಡ್ತಾ ಇದ್ದಿದ್ದು.ವಯಸ್ಸಿಗೆ ತಕ್ಕದ್ದನ್ನೆ ಕೊಡ್ಬೇಕು . ಇಲ್ಲದಿದ್ರೆ ಓವರ್ ಡೋಸ್ ಆಗಲ್ವ ? ಆ ಕಾರಣಕ್ಕೆ ಯಶ್ ,ಸುದೀಪ್ ,ದರ್ಶನ್ ,ಪುನೀತ್ ಸಿನಿಮಾಗಳು ಬೇಕು. ಜೊತೆಗೆ ಕಾಸರವಳ್ಳಿ ಇದ್ದಾರಲ್ಲ.

ಮನುಷ್ಯನಿಗೆ ಮನರಂಜನೆ ಬೇಕು. ಆಟಗಳು ಬೇಕು ,ಪಾರ್ಕ್ನಲ್ಲಿ ಸುತ್ತಾಡಬೇಕು ,ಪ್ರೇಮಿಸಬೇಕು,ಸಂಭ್ರಮಗಳು ಬೇಕು ಅದಕ್ಕೆ ಇಂಥಾ ಸಿನಿಮಾಗಳು. ಗಾಢವಾದ ಕಥೆಗಳು ಬೇಕು ಅನ್ನಿಸುವುದು 50 ದಾಟಿದ ಮೇಲೆ.

ರಾಜ್ಕುಮಾರ್ ಚಿತ್ರಗಳಲ್ಲಿ ಕಥೆ ,ಹೀರೋಯಿಸಂ ಎರಡು ಇತ್ತಲ್ಲ . ಅವತ್ತಿಗೂ ಗೆದ್ದು ಇವತ್ತಿಗೂ ಕಾಡುತ್ತವಲ್ಲ . ಇಂದಿನವರಿಗೆ ಯಾಕೆ ಸಾಧ್ಯವಾಗುತ್ತಿಲ್ಲ ?

ಆಗ ತಂತ್ರಜ್ನಾನದ ಬೆಂಬಲ ಇರಲಿಲ್ಲ. ಕಥೆಗಳಲ್ಲೇ ಎಲ್ಲವನ್ನೂ ಕಟ್ಟಿಕೊಡಬೇಕಿತ್ತು. ಜೊತೆಗೆ ಪಾತ್ರಗಳ ವೈಭವೀಕರಣವೂ ಇತ್ತು. ಆಗಿನ ಪೌರಾಣಿಕ, ಐತಿಹಾಸಿಕ ಚಿತ್ರಗಳಲ್ಲಿ ಏನಿತ್ತೋ ಇಲ್ಲೂ ಅದೇ ಇದೆ. ಬಬ್ರುವಾಹನದಲ್ಲಿ ಹೊಡೆದಾಟವಿತ್ತು. ಇವತ್ತಿಗೂ ಹೊಡೆದಾಟವಿದೆ.

ಅಮಿತಾಬ್ ಬಂದಿದ್ದು ಜಮೀನ್ದಾರನ ವಿರುದ್ಧ ಹೋರಾಡುವ angry young man ರೂಪದಲ್ಲಿ. ಸಂಪತ್ತಿಗೆ ಸವಾಲ್ ಕೂಡ ಅಷ್ಟೇ . ಇಂದಿನವರು ಯಾರ ವಿರುದ್ಧ ಹೋರಾಡಬೇಕು? ನಾವೇ ಆರಿಸಿ ಕಳುಹಿಸಿದ ಸರ್ಕಾರದ ವಿರುದ್ಧ ಬಡಿದಾಡಬೇಕು. ಜಾತಿ ಪದ್ಧತಿ , ಅಂತರ್ಜಾತಿ ವಿವಾಹ ಇವೆಲ್ಲ ಹಿಂದಿನಷ್ಟು ಗಾಢವಾಗಿ ಇಲ್ಲದಿರೋದ್ರಿಂದ ಇಂತಹ  ಕಥೆ ಇಟ್ಕೊಂಡು ಸಿನಿಮಾ ಮಾಡೋಕ್ಕಾಗಲ್ಲ.

ನೀವು ಸೋಷಿಯಲ್ ಮೀಡಿಯಾದಲ್ಲಿ active ಆಗಿದ್ದೀರಿ . ಅಲ್ಲಿ ದಿನ ಬೆಳಗಾದರೆ ಜಾತಿ,ಧರ್ಮದ ಜಟಾಪಟಿಗಳು ನಡೀತಾನೇ ಇವೆಯಲ್ಲ ?

ಜಾತಿ ಹೆಸರಿನಿಂದ ಹಿಂದಿನಂತೆ ಅವಮಾನಕ್ಕೆ ಈಡಾಗುವುದು ಕೆಡಿಮೆ ಆಗಿದೆ. ಅಂದ್ರೆ ಹೋಟೆಲ್ ನಿಂದ ಆಚೆಗೆ ಅಟ್ಟುವುದು, ಮಣ್ಣಿನ ತಟ್ಟೆಯಲ್ಲಿ ಊಟ ಹಾಕುವುದು ಈಗಿಲ್ಲ .ಗಾಂಧೀಜಿಯನ್ನ ರೈಲಿನಿಂದ ದೂಡಿದಂಥಾ ಘಟನೆಗಳು ಈಗ ನೆಡೆಯುತ್ತಿಲ್ಲ .ಎಲ್ಲೋ ಒಂದು ಕಡೆ ಮರ್ಯಾದಾ ಹತ್ಯೆ ಸುದ್ದಿ ಕೇಳಬಹುದು ಅಷ್ಟೆ. ಹಾಗಾಗಿ ಪ್ರೇಮ ಕಥೆಯುಳ್ಳ ಸಿನಿಮಾಗಳನ್ನ ಮಾಡ್ಬೇಕು . ಮಾಡ್ತಿದ್ದಾರೆ .

ಒಂದು ವಲಯದ ಪ್ರಕಾರ ಜೋಗಿ ಬರವಣಿಗೆ ತೆಳು ಅಂತಲ್ಲ ? ನಿಮಗೆ ಏನನ್ನಿಸುತ್ತೆ ?

jogi-books-35

ನಾನು ಬರೆಯುವುದು ನನ್ನ ಖುಷಿಗಾಗಿ. ನನ್ನ ಓದುಗರು ನಾಳೆಯವರೇ ಹೊರತು ನಿನ್ನೆಯವರಲ್ಲ.ಈಗ ತಾನೇ ಕನ್ನಡ ಓದಲು ಕಲಿತವರೂ ನನ್ನ ಪುಸ್ತಕಗಳನ್ನ ಓದಬೇಕು. ನನಗೀಗ 51. 25 ರ ಆಸುಪಾಸಿನವರು ನನ್ನ ಪುಸ್ತಕಗಳನ್ನ ಓದಬೇಕು .ಮುಖ್ಯವಾಗಿ ಸರಳವಾಗಿ ಬರೆಯಬೇಕು. ಈಗ ಎಲ್ಲವೂ ಮೊಬೈಲ್ನಲ್ಲಿ ಸಿಗುವ ಕಾಲ. ಹೇಳುವುದನ್ನ ಕಡಿಮೆ ಕಾಲದಲ್ಲಿ ಹೇಳಬೇಕು. ಬರವಣಿಗೆ ಚಿಕ್ಕದಾಗಿ ಸರಳವಾಗಿರಬೇಕು.

ಹಾಗಾದ್ರೆ ಜನಪ್ರಿಯ ಸಾಹಿತ್ಯ ನಿಮ್ಮದು ?

jogi-books-43

ನಾನದನ್ನು “ಜನಪ್ರಿಯ ” “ಜನಪರ ” ಅಂತೆಲ್ಲ ಕರೆಯುವುದಿಲ್ಲ.ನನಗೆ ನಂಬಿಕೆ ಇರುವುದು ಬದುಕಿನ ಉಲ್ಲಾಸದಲ್ಲಿ. ನೋವುಗಳೂ ಕೂಡ ಉಲ್ಲಾಸದ ಒಂದು ಭಾಗ. ನಮ್ಮ ನೋವುಗಳನ್ನು ಸಂಭ್ರಮಿಸಬೇಕು. ಯಶವಂತ ಚಿತ್ತಾಲರ “ಶಿಖಾರಿ ” ಖಾಸನೀಸರ ಕಥೆಗಳು ನೋವಿನಿಂದಲೇ ಹುಟ್ಟಿದ ಕೃತಿಗಳು .ಜಯಂತ್ ಕಾಯ್ಕಿಣಿ ಜನರಿಗೆ ಹತ್ತಿರವಾಗಿರುವುದು ಸಿನಿಮಾ ಹಾಡುಗಳಿಂದಾನೆ. ಅವ್ರ ಗಾಢ  ಸಾಹಿತ್ಯದಿಂದಲ್ಲ. ಲಂಕೇಶರು ನೀಲು ಪದ್ಯಗಳನ್ನು ಜನಪ್ರಿಯ ಧಾಟಿಯಲ್ಲೇ ಬರೆದದ್ದು.

ನನ್ನೆಲ್ಲ ಕಥೆಗಳು ,ಕಾದಂಬರಿಗಳು ನಾನು ನೋಡಿದ ,ಅನುಭವಿಸಿದ  ಘಟನೆಗಳೆ.

ಸಿನಿಮಾ ನಿರ್ದೇಶನ ? ನಟಿಸುವ ಯೋಚನೆ ,ಯೋಜನೆ ಇದೆಯಾ ?

12795379_10153928595149941_5454798166570350231_n

ಯಾವುದು ನನ್ನದಲ್ಲ ಎನ್ನುವ ಸ್ಪಷ್ಟ ಕಲ್ಪನೆ ನನಗಿದೆ. ನಿರ್ದೇಶನ ಮಾಡುವ ತಾಳ್ಮೆ ನಂಗಿಲ್ಲ. ನಟನೆ ಆಗಿ ಬರಲ್ಲ. ಒಂದು ಸಣ್ಣ ಪಾತ್ರಕ್ಕಾಗಿ ದಿನವಿಡೀ ಕಾಯುವ ವ್ಯವಧಾನ ನನಗಿಲ್ಲ.

 

ಧಾರವಾಹಿಗಳಲ್ಲಿ ಇತ್ತೀಚೆಗಂತು ಕೆಟ್ಟ ಅತ್ತೆ, ಕೆಟ್ಟ ಸೊಸೆ , ಕೇಡಿಗ ಬಾಸ್ ಅಂದ್ರೆ ಹೆಣ್ಣನ್ನ ಕೆಟ್ಟದಾಗಿ ತೋರಿಸುವ ಕಥೆ ನಡೀತಿದೆಯಲ್ಲ . ನೋಡುವವರು ಹೆಚ್ಚಾಗಿ ಹೆಣ್ಣುಮಕ್ಕಳೇ .ಅದರಲ್ಲೂ ಹೆಚ್ಚು ತಿಳುವಳಿಕೆ ಇಲ್ಲದವರು . ಇಂಥವು ಮತ್ತಷ್ಟು ಕೆಟ್ಟ ಪರಿಣಾಮ ಬೀರುವುದಿಲ್ಲವೇ ?

ಎಲ್ಲರ ಬುದ್ಧಿಮಟ್ಟ ಒಂದೇ ಆಗಿರುವುದಿಲ್ಲ . ಇವತ್ತಷ್ಟೇ ಅಲ್ಲ ಅವತ್ತೂ ಮನೆ ಮುರಿಯುವಂಥ ಮಂಥರೆ ಇದ್ದಳು .ಮಹಾಭಾರತದಲ್ಲಿ ಎಂಥೆಂಥಾ ಕೇಡಿಗರಿಲ್ಲ? ಇಲ್ಲಿರುವುದು ಎರಡೇ .ಒಳ್ಳೆಯದು -ಕೆಟ್ಟದ್ದು .

ಸಾಯಿಸುತೆ ಕಾದಂಬರಿಯಲ್ಲೂ ಕೆಟ್ಟ ಅತ್ತೆ,ನಾದಿನಿ ಇದ್ದರು. ಇವತ್ತು ಸುದ್ದಿ ವಾಹಿನಿಗಳ ವಿಶೇಷ ವರದಿಗಳನ್ನ ನೋಡಿ  ಅತ್ತೆ -ಸೊಸೆ ಕಾಟ ,ಕಡಿದಾಟ. ವಿವಾಹಬಾಹಿರ ಸಂಬಂಧಗಳ ಬಡಿದಾಟ ಇಂಥದ್ದೇ ಇದೆ. ಅಂದ್ರೆ ಇದು ಸಮಾಜದ ಪ್ರತಿಬಿಂಬ ಅಷ್ಟೆ .

ಇವತ್ತಿಗೂ ನಿಮ್ಮನ್ನ exite ಮಾಡೋದು ಯಾವುದು?

14022232_10154410149029941_1263563818442436497_n

ಆಕಾಶ !! ಅದರ ವೈಶಾಲ್ಯ ನನಗಿಷ್ಟ. ಕಣ್ಣತುಂಬ ಆಕಾಶವೇ ಕಾಣುವಂಥ ಬಯಲಲ್ಲಿ ಬದುಕುವುದು ನನ್ನಾಸೆ.

 

 

 

ಈಗೇನು ಓದುತ್ತಿದ್ದೀರಿ ? ಯಾವ ಸಿನಿಮಾ ನೋಡಿದ್ರಿ ?

ಮೊನ್ನೆ ಯಾರೋ “ಭಿನ್ನ ” ಅಂತ ಒಂದು ಕಾದಂಬರಿ ತಂದು ಕೊಟ್ಟಿದ್ದಾರೆ. ಓದ್ತಾ ಇದ್ದೇನೆ. ನಾನೇ ಆರಂಭಿಸಿದ ಅಪರಿಚಿತರಿಗೊಂದು ಪುಸ್ತಕ ನನಗೂ ಬಂದಿದೆ . ಲಕ್ಷ್ಮಿಕಾಂತ್ ಇಟ್ನಾಳ್ ಅನುವಾದದ ಗುಲ್ಜಾರ್  ಹೊತ್ತಿಗೆ ಬಂದಿದೆ. ಓದಬೇಕು. ಜೇಮ್ಸ್ ಬಾಂಡ್ ನಿಂದ ಹಿಡಿದು ಎಲ್ಲ ರೀತಿಯ ಸಿನಿಮಾ ನೋಡ್ತೀನಿ. ಎಲ್ಲವನ್ನು ನೋಡುವ, ಗ್ರಹಿಸುವ ಗುಣ ಬಂದಿದ್ದು ವೈಎನ್ಕೆ ಇಂದ. ಎಲ್ಲ ತರಹದ ಸಂಗೀತ ಕೇಳ್ತೀನಿ. ಈಗಲೂ ಚೆಂದಮಾಮ ಸಿಕ್ಕಿದ್ರೆ ಓದದೆ ಬಿಡಲ್ಲ. ನನ್ನ ಹತ್ತಿರ 500 ಚಂದಮಾಮ ಇದೆ.

ಕಾಡು ಸೇರುವ ವಾಸನೆ ನಿಮ್ಮ FB ಪೋಸ್ಟ್ನಲ್ಲಿ ಬಡಿದಿತ್ತಲ್ಲ.ಬೆಂಗಳೂರು ಬಿಡುವ ಯೋಚನೆ ಇದೆಯಾ ?

ಇಲ್ಲ. ಊರುಗಳೆಲ್ಲ ಸಣ್ಣ ನಗರಗಳಂತಾಗಿ ಬಿಟ್ಟಿವೆ. ಇಲ್ಲಿ ಸಿಗುವ ಪಾನಿಪುರಿ, ಕುರ್ಕುರೆ ಎಲ್ಲ ಅಲ್ಲೂ ಸಿಗುತ್ತೆ. ನಮ್ಮ ಹಳ್ಳಿಗಳು ವೈಶಿಷ್ಯ ಕಳೆದುಕೊಂಡಿವೆ. ಕಾಡನಲ್ಲಿ ಧ್ಯಾನಿಸುತ್ತೇನೆ ಅಂತಾನೂ ಹೇಳಕ್ಕಾಗಲ್ಲ.ಅಲ್ಲಿ ಇರುವವರು ಆಚೆ ಬರಲಿಕ್ಕೆ ಕಾಯ್ತಾ ಇದ್ದಾರೆ. ಮನುಷ್ಯನಿಗೆ ತಾನಿರುವ ಜಾಗ ಯಾವತ್ತೂ ಇಷ್ಟವಾಗಲ್ಲ. ನಮ್ಮ ಜೀವನ ಇನ್ನೆಲ್ಲೋ ಇದೆ ಅಂತ ಸದಾ ಹುಡುಕುವುದೇ ಕೆಲಸ. ನಾನು ಇಲ್ಲಿದ್ದರೆ ಇಲ್ಲೇ ಅಲ್ಲಿದ್ದರೆ ಅಲ್ಲೇ ಜೀವನ ಇದೆ ಅಂದುಕೊಂಡಿದ್ದೇನೆ.

“ಜೋಗಿಯ ಹೊತ್ತು ” ಹೇಗಿತ್ತು ಹೇಳಿ ? ಕಾಯ್ತಿರ್ತೆನೆ .

-ಭಾನುಮತಿ ಬಿ ಸಿ

 

-Ad-

Leave Your Comments