ಕನ್ನಡ ಚಿತ್ರಗಳು ಚೆನ್ನೈ ನಲ್ಲಿ ರದ್ದಾಗಿರುವುದು ಸತ್ಯ .ಹಾಗಾದರೆ ಸಾ ರಾ ಗೋವಿಂದು ಹೇಳುತ್ತಿರುವುದೇನು?

ನಿನ್ನೆ ರಾತ್ರಿ ತಮಿಳುನಾಡಿನಲ್ಲಿ ಕನ್ನಡ ಚಿತ್ರಗಳನ್ನು ರದ್ದು ಮಾಡಲಾಗಿದೆ ಅನ್ನೋ ಸುದ್ದಿ ಇತ್ತು . ಬೆಳಗಾಗುತ್ತಿದ್ದಂತೆ ಸುದ್ದಿ ಗೋಷ್ಠಿಯಲ್ಲಿ ಮಾತನಾಡಿದ ಕರ್ನಾಟಕ ವಾಣಿಜ್ಯ ಮಂಡಳಿ ಅಧ್ಯಕ್ಷ ಸಾ ರಾ ಗೋವಿಂದು ನಾವು ಫಿಲಂ ಛೇ೦ಬರ್ ಜೊತೆ ಮಾತಾಡಿದ್ದೇವೆ . ಅಂಥಾದೇನು ನಡೆದಿಲ್ಲ . ಒಂದು ಪಕ್ಷ ಅವರು ಕನ್ನಡ ಸಿನಿಮಾಗಳನ್ನು ರದ್ದು ಮಾಡಿದರೆ ನಾವು ಇಲ್ಲಿ ತಮಿಳು ಸಿನಿಮಾಗಳನ್ನು ರದ್ದು ಮಾಡುತ್ತೇವೆ ಅಂದ್ರು .

ಆದ್ರೆ ಸತ್ಯ ಬೇರೇನೆ  ಇದೆ ಅಂತಿದ್ದಾರೆ ಕನ್ನಡಕ್ಕೊಂದು ವಿಭಿನ್ನ ಸಿನಿಮಾ ಕೊಟ್ಟ ಶುದ್ದಿ ಚಿತ್ರದ  ನಿರ್ದೇಶಕ ಆದರ್ಶ್ ಈಶ್ವರಪ್ಪ. ಚೆನ್ನೈ ನಲ್ಲಿ ಇಂದು ಪ್ರದರ್ಶನವಾಗಬೇಕಿದ್ದ ಶುದ್ಧಿ ಚಿತ್ರವನ್ನ ಯಾವುದೇ ಮಾಹಿತಿ ನೀಡದೆ ರದ್ದು ಮಾಡಲಾಗಿದೆ. ನಮ್ಮ ಡಿಸ್ಟ್ರಿಬ್ಯುಟರ್ ಕರೆ ಮಾಡಿದರೆ ಚೆನ್ನೈ ಮಲ್ಟಿಪ್ಲೆಕ್ಸ್ ನವರು ಫೋನ್ ಕೂಡ ರಿಸೀವ್ ಮಾಡ್ತಿಲ್ಲ. ನಲ್ವತ್ತು ಪರ್ಸೆಂಟ್ ನಷ್ಟು ಟಿಕೆಟ್ ಮಾರಾಟವಾಗಿತ್ತು. ಆದರೂ ನಮ್ಮ ಚಿತ್ರವನ್ನು ರದ್ದು ಮಾಡಿದ್ದಾರೆ. ಬುಕ್ ಮೈ ಷೋನಲ್ಲಿ ಬೇಕಿದ್ದರೆ ಚೆಕ್ ಮಾಡಿ ನೋಡಿ ಚೆನ್ನೈ ನಲ್ಲಿ ಕನ್ನಡ ಸಿನಿಮಾ ಆಯ್ಕೆನೇ ಇಲ್ಲ. ಬೆಂಗಳೂರಿನಲ್ಲಿ ಮಾತ್ರ ತಮಿಳು ಸಿನಿಮಾಗಳು  ರದ್ದಾಗಿಲ್ಲ. ನಾವು ಶುದ್ಧಿ ಚಿತ್ರ  ಮಾಡೋದಿಕ್ಕೆ ಬಹಳ ಕಷ್ಟ ಪಟ್ಟಿದ್ದೇವೆ. ನಾವ್ಯಾರು ಹಣವಂತರಲ್ಲ. ನಮ್ಮ ವಾಣಿಜ್ಯ ಮಂಡಳಿ ಇದೇಕೆ ಹೀಗೆ ಸುಳ್ಳು ಹೇಳುತ್ತಿದೆಯೋ ಅರ್ಥವಾಗುತ್ತಿಲ್ಲ. ಇಲ್ಲಿ ಕಾಣದ ಬಹುದೊಡ್ಡ ಕೈಗಳು ಆಟವಾಡುತ್ತಿವೆ ಅನ್ನಿಸುತ್ತಿದೆ . ಅಧಿಕಾರಸ್ಥರ , ಹಣವಂತರ ಮುಂದೆ ನಮ್ಮಂಥವರ ಅಳಲು ಯಾರು ಕೇಳಬೇಕು ? ನಮ್ಮನ್ನು ಕನ್ನಡಿಗರೇ ಕೈ ಹಿಡಿಯಬೇಕು. 

ಆದರ್ಶ್ ಮಾತು ಕೇಳಿದ ಮೇಲೆ ciniadda.com ತಂಡ ಬುಕ್ ಮೈ ಶೋ ಚೆನ್ನೈ ನಲ್ಲಿ ನೋಡಿದಾಗ ಕನ್ನಡ ಸಿನಿಮಾ ಆಯ್ಕೆಯೇ ಇಲ್ಲ  ಎನ್ನುವುದು ಖಚಿತವಾಗಿದೆ.  ತತ್ ಕ್ಷಣ ಸಾ ರಾ ಗೋವಿಂದು ಅವರಿಗೆ ಕರೆ ಮಾಡಿ ಕೇಳಿದಾಗ ಅವರು ಉತ್ತರಿಸಿದ್ದು ಹೀಗೆ ..

ಬುಕ್ ಮೈ ಶೋ ಚನ್ನೈ ನಲ್ಲಿ ಕನ್ನಡ ಸಿನಿಮಾ ಆಯ್ಕೆನೇ ಇಲ್ಲ . ಮೂರೂ ಸಿನಿಮಾಗಳು ರದ್ದಾಗಿವೆಯಲ್ಲ.  ನೀವು ರದ್ದಾಗಿಲ್ಲ ಎಂದಿದ್ದೀರಿ . ಇದು ಹೇಗೆ ಸಾಧ್ಯ ?

ಅಂಥಾದ್ದೇನು ನಡೆದಿಲ್ಲ. ನಾವು ಸೌತ್ ಇಂಡಿಯನ್ ಫಿಲಂ ಛೇ೦ಬರ್ ನಲ್ಲಿ ವಿಚಾರಿಸಿದ್ದೇವೆ. ಕಲೆಕ್ಷನ್ ಕಡಿಮೆ ಇರೋದ್ರಿಂದ ಸಿನಿಮಾ ತೆಗೆದಿದ್ದಾರೆ ಅನ್ನೋ ಮಾಹಿತಿ ಬಂದಿದೆ. ನಮ್ಮಲ್ಲೂ ಹಾಗೇ ತಾನೇ ? ಕಲೆಕ್ಷನ್  ಕಡಿಮೆ ಇದ್ರೆ ಸಿನಿಮಾ ಹೇಗೆ ಓಡಿಸುತ್ತಾರೆ ಹೇಳಿ ? ಜನ ಬರಬೇಕಲ್ಲವೇ ? ಶುದ್ದಿ ,ಚಕ್ರವರ್ತಿ , ಶ್ರೀನಿವಾಸ ಕಲ್ಯಾಣ ಸಿನಿಮಾಗಳಿಗೆ ಅಲ್ಲಿ ಕಲೆಕ್ಷನ್ ಕಮ್ಮಿ ಇದ್ದಿರಬಹುದು.

ನಲ್ವತ್ತು ಪರ್ಸೆಂಟ್ ಟಿಕೇಟ್ ಬುಕ್ ಆಗಿತ್ತು ಅಂತಿದ್ದಾರಲ್ಲ ಶುದ್ಧಿ ನಿರ್ದೇಶಕರು. ಜನ ಬರದೇ ಅಷ್ಟು ಬುಕ್ ಆಗೋದು ಸಾಧ್ಯನಾ ? 

ನಾವು ನಿರ್ದೇಶಕರ ಮಾತನ್ನಷ್ಟೇ ಕೇಳೋಕ್ಕಾಗಲ್ಲ . ಅಲ್ಲಿನ ಥಿಯೇಟರ್ ನವರನ್ನು ಒಂದು ಮಾತು ಕೇಳಬೇಕಾಗುತ್ತೆ. ನಮಗೆ   ಛೇ೦ಬರ್  ಕೊಟ್ಟಿರುವ ಮಾಹಿತಿ ಪ್ರಕಾರ  ಇದು ಕಲೆಕ್ಷನ್ ಸಮಸ್ಯೆ.

ಶುದ್ಧಿ ನಿರ್ದೇಶಕರು ನಿಮ್ಮ ಬಳಿ ಅಂದ್ರೆ ಕರ್ನಾಟಕ ವಾಣಿಜ್ಯ ಮಂಡಳಿಗೆ ಬಂದು ತಮಗೆ ಆಗಿರುವ ಅನ್ಯಾಯ ಬಗ್ಗೆ ಹೇಳಿದ್ರೆ ಅವರ ಜೊತೆ ನಿಲ್ತಿರಾ ? ಅಥವಾ ಸಣ್ಣ ಚಿತ್ರ ಅಂತ ಕೈ ಬಿಡ್ತೀರಾ ?

ಖಂಡಿತ ಅವರ ಜೊತೆ ನಾವಿರ್ತಿವಿ. ಕನ್ನಡ ಸಿನಿಮಾಕ್ಕೆ ತೊಂದರೆ ಆಗಿರುವುದು, ವಿನಾಕಾರಣ ರದ್ದಾಗಿರುವುದು ನಿಜವಾದರೆ ನಾವು  ಕ್ರಮ ತೆಗೆದುಕೊಳ್ಳುತ್ತೇವೆ. ಅದು ನಮ್ಮ ಕರ್ತವ್ಯ.

ciniadda.com ಸುದ್ದಿಯನ್ನು ನಿಮಗೆ ಮುಟ್ಟಿಸಿದೆ . ಶುದ್ಧಿ ದೊಡ್ಡ ಬಜೆಟ್ ಸಿನಿಮಾ ಅಥವಾ ದೊಡ್ಡ ಸ್ಟಾರ್ಗಳಿರುವ ಸಿನಿಮಾ ಅಲ್ಲದಿರಬಹುದು . ದೊಡ್ಡ ಬಜೆಟ್ ನ ಚಾಲೆಂಜಿಂಗ್ ಸ್ಟಾರ್ ದರ್ಶನ್ ಇರುವ ಚಕ್ರವರ್ತಿಗೂ ಜನ ಬರ್ತಾ ಇಲ್ವಾ  ? ಅನ್ನುವ ಪ್ರಶ್ನೆ ಯಾರನ್ನಾದರೂ ಕಾಡಲೇಬೇಕು.  ಕನ್ನಡಿಗರ ಮೇಲೆ ಅಭಿಮಾನ ಪ್ರೀತಿ ಇರುವವರು  -ಕನ್ನಡ ಸಿನಿಮಾ ಪ್ರೇಮಿಗಳು ಸತ್ಯದ ಪರವಾಗಿ ನಿಲ್ಲಬೇಕು. ಕನ್ನಡ ..ಕನ್ನಡ ಎಂದು ಬರಿದೇ  ಬಡಾಯಿ ಕೊಚ್ಚದೆ ಒಳ್ಳೆಯ ಕನ್ನಡ ಸಿನಿಮಾಗಳಿಗೆ ಆಗಿರುವ ,ಆಗುವ ಅವಮಾನಕ್ಕೆ ತಕ್ಕ ಶಾಸ್ತಿ ಮಾಡಲೇಬೇಕು.

_ಭಾನುಮತಿ ಬಿ ಸಿ

 

 

-Ad-

Leave Your Comments