ಜೋಗಿ, ನಾಗತಿಹಳ್ಳಿ ಮೆಚ್ಚಿದ ಸಿನಿಮಾ “ಶುದ್ಧಿ “

ವಿಭಿನ್ನ ನಿರೂಪಣಾ ಶೈಲಿ, ಹಾಲಿವುಡ್ ತಂತ್ರಜ್ಞಾನದಿಂದ ಟ್ರೈಲರ್ ಬಿಡುಗಡೆಯಾದಾಗಲೇ ಸುದ್ದಿ ಮಾಡಿದ್ದ ಚಿತ್ರ “ಶುದ್ದಿ “. ಇದೀಗ ಬಿಡುಗಡೆಗೆ ಮುನ್ನ ಪ್ರಿವ್ಯೂ ಪ್ರದರ್ಶನದಲ್ಲೇ ಭರ್ಜರಿ ಪ್ರಶಂಸೆ ಪಡೆದುಕೊಳ್ಳುತ್ತಿದೆ. ಅದರಲ್ಲೂ ಸುಲಭಕ್ಕೆ ಒಪ್ಪಿಕೊಳ್ಳದ ,ಸುಖಾಸುಮ್ಮನೆ ಯಾರನ್ನೂ ಹೊಗಳದ ಪತ್ರಕರ್ತ,ಸಾಹಿತಿ ಜೋಗಿಯವರಿಂದ ಮೆಚ್ಚುಗೆಗೆ ಪಾತ್ರವಾಗಿದೆ. ಇತ್ತೀಚಿಗೆ  ರಾಮರಾಮರೇ ಬಂದಾಗ ಕೂಡ ಜೋಗಿ ಪ್ರೋತ್ಸಾಹದಾಯಕ ಮಾತುಗಳನ್ನು ಆಡಿದ್ದರು. ಆ ಚಿತ್ರ ನಮ್ಮೆಲ್ಲರಿಗೂ ಇಷ್ಟವಾಗಿ ನೂರು ದಿನ ಓಡಿದ್ದು ನಿಮಗೇ  ಗೊತ್ತಿದೆ. ಈಗ ಶುದ್ದಿಯ ಸರದಿ.. ಜೋಗಿಯ ಜೊತೆಗೇ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ , ಸಿನಿಮಾಗಳನ್ನು ಮುಗಿಬಿದ್ದು ನೋಡುವ ಅವಿರತ ತಂಡದ ಸತೀಶ್ ಅನಿಸಿಕೆಗಳು ಇಲ್ಲಿವೆ .

jogiಎಲ್ಲಿಂದಲೋ ಶುರುವಾಗಿ ಮತ್ತೆಲ್ಲೋ ಮುಗಿಯುವ ಶುದ್ಧಿ ಸಿನಿಮಾದ ಕಥಾತಂತ್ರ ನನಗಿಷ್ಟವಾಯಿತು. ಒಂದು ಕತೆಯನ್ನು ಎಷ್ಟೊಂದು ಥರದಲ್ಲಿ ಹೇಳಬಹುದಲ್ಲ ಅನ್ನಿಸುವಂತೆ Adarsh H Eshwarappa ಶುದ್ಧಿ ಚಿತ್ರವನ್ನು ನಮ್ಮ ಮುಂದಿಟ್ಟಿದ್ದಾರೆ. ಪಾತ್ರ, ಘಟನೆ, ನಿರೂಪಣೆ- ಎಲ್ಲವೂ ಹೊಸ ಹುಡುಗನ ಹುರುಪನ್ನು ಹೇಳುತ್ತವೆ. ಇಬ್ಬರನ್ನೂ ಹೊರತುಪಡಿಸಿದರೆ ತೆರೆಯ ಮೇಲೆ ಎಲ್ಲರೂ ಹೊಸಬರೇ. ಆ ಹೊಸಬರೆಲ್ಲ ಸೇರಿ ಕಟ್ಟಿಕೊಡುವ ಕಥಾಜಗತ್ತನ್ನು ನೋಡುವುದೇ ಒಂದು ಖುಷಿ. ಮಳೆನೀರಿನಲ್ಲಿ ವಾಟರ್ ಕಲರ್ ಪೇಂಟಿಂಗಿನಂತೆ ಕಲಸಿ ಹೋಗುವ ಲಾರೆನ್ ಮುಖವನ್ನು ಸೆರೆಹಿಡಿದ ಆ್ಯಂಡ್ರ್ಯೂ ಆಯೆಲ್ಲಾಗೊಂದು ಸ್ಪೆಷಲ್ ಮೆನ್ಷನ್. ಥ್ಯಾಂಕ್ಸ್ ಮತ್ತು ಕಂಗ್ರಾಟ್ಸ್ – ಇಡೀ ತಂಡಕ್ಕೆ.

ಜೋಗಿ ಹೇಳಿದ ಮೇಲೆ ಸಿನಿಮಾ ನೋಡಲೇ ಬೇಕು ಬಿಡಿ. ಇನ್ನು ನಾಗತಿಹಳ್ಳಿ ಚಂದ್ರಶೇಖರ್ ಏನು ಹೇಳಿದ್ದಾರೆ ಓದ್ಕೊಂಡ್ ಬಿಡಿ.

nagathihalli-chandrashekhar

“ಶುದ್ಧಿ”ಗಮನಾರ್ಹ ಶುದ್ಧ ಚಿತ್ರ.ಧರ್ಮದ ದುರ್ಬಳಕೆ ಮಾಡುವ ‘ನೈತಿಕ’ ಪೊಲೀಸುಗಿರಿಯ ಕ್ರೌರ್ಯ,ದುರ್ಗೆಯನ್ನು ನ೦ಬುವ ವಿದೇಶಿ ಮಹಿಳೆ, ಆದರೆ ಸ೦ಘಟನೆಯನ್ನು ನ೦ಬುವ ಭಾರತೀಯ ಮಹಿಳೆ.ಎಲ್ಲೆಡೆ ಹೋರಾಟ ಮಾತ್ರ ಅನಿವಾರ್ಯ!ಅವಕಾಶವಿದ್ದರೂ ಅಶ್ಲೀಲಗೊಳಿಸದೆ ಅಭಿನಯ, ಛಾಯಾಗ್ರಹಣ, ಸ೦ಗೀತ, ಸ೦ಕಲನಗಳಲ್ಲಿ ವಿಶ್ವದರ್ಜೆ ಕಾಪಾಡಿಕೊ೦ಡು ಬದ್ಧತೆಯ ಸಿನಿಮಾ ನೀಡಿದ ತರುಣ ನಿರ್ದೇಶಕ ಆದರ್ಶ್ & ತ೦ಡಕ್ಕೆ ಋಣಿ.

ಅವಿರತ ತಂಡದ ಸತೀಶ್ ಎಲ್ಲ ಸಿನಿಮಾಗಳನ್ನು ನೋಡುವ ಅಪ್ಪಟ ಸಿನಿಮಾ ಪ್ರೇಮಿ. ಶುದ್ದಿ ಬಗ್ಗೆ ಅವರ ಶುದ್ಧ ಅಭಿಮತ ಹೀಗಿದೆ .

satish avirata

ಕನ್ನಡ ಸಿನಿಮಾನ 😱 ‘ತಗಿ ಅತ್ಲಾಗೆ’ ಅಂತ ಕೊಸರಾಡುವ  ಸಿನಿಮಾ ಪ್ರಿಯರೇ, ಕನ್ನಡ ಯಾರು ಮಾರಾಯ ನೋಡ್ತಾರೆ  ಅದೇ ಕಿತ್ತೋಗಿರೊ ಹಾಡು ಡ್ಯಾನ್ಸ್ ಫೈಟ್ ಅನ್ನೋ ಪ್ರೇಕ್ಷಕರೇ..
ಒಮ್ಮೆ ಶುದ್ಧಿ ಸಿನಿಮಾ ನೋಡಿ
ಹೊಸ ನಿರ್ದೇಶಕ, ಹೊಸ ತಂಡ, ಹೊಸ ಹುರುಪು, ಸ್ಕ್ರಿಪ್ಟ್ ನಲ್ಲಿ ಹೊಸತನ, ಹಿನ್ನೆಲೆ ಸಂಗೀತದಲ್ಲಿ ಹೊಸತನ, ಕ್ಯಾಮರ ಕೈಚಳಕದಲ್ಲಿ ಹೊಸತನ, ಎಲ್ಲಿಯೂ ಓವರ್ ಆಕ್ಟಿಂಗ್ ಅನಿಸದ ಎಲ್ಲರ  ನೈಜ ನಟನೆ… ಹೆಚ್ಚೇನು ಹೇಳೊಲ್ಲ ಹೊಸ ನಿರ್ದೇಶಕನ ಸಾಧಾರಣ ಸಿನಿಮಾ ಅಂದುಕೊಂಡು ಹೋಗಿ…. ಹೊರಗೆ ಬಂದಾಗ ಹೊಸಬ ತೆಗೆದಿರೋದ? ಅನ್ನಿಸುತ್ತೆ…. ಸ್ಕ್ರಿಪ್ಟ್ ನಲ್ಲು ಮಜಾ ಇದೆ. ಕೊನೆ ೧೫ ನಿಮಿಷದಲ್ಲಿ  ಇಷ್ಟೊತ್ತು ನೋಡಿದ್ದು ಏನು? ಈಗ ಏನು ತೋರಿಸ್ತಿದಾರೆ ಅಂತನ್ನಿಸುತ್ತೆ . ಆ ಕನ್ಫ್ಯೂಷನ್ ಕ್ಲಿಯರ್ ಮಾಡಿಕೊಳ್ಳೋಕೆ ಇನ್ನೊಮ್ಮೆ ಹೋಗ ಬೇಕಾಗುತ್ತೆ. ೨ ನೇ ಬಾರಿ ಹುಷಾರಾಗಿ ನೋಡಿ‌. ಮೊದಲ ಬಾರಿಗೆ ನೋಡಿದಾಗ ಆದ ಕನ್ಫ್ಯೂಷನ್ಸ್ ಎಲ್ಲ ಕ್ಲಿಯರ್ ಮಾಡಿಕೊಳ್ಳಬೇಕಾಗುತ್ತೆ. ಸದ್ಯಕ್ಕೆ  ಒಮ್ಮೆ ನೋಡಿ… ಚೂರು ಪಾರು ಅರ್ಥ ಆದರೆ ಇನ್ನೊಮ್ಮೆ ನೀವೆ ಹೋಗುತ್ತೀರ. 🙂 ಇದು ನನ್ನ ಅನಿಸಿಕೆ ದಯವಿಟ್ಟು ಒಮ್ಮೆ ನೋಡಿ ಹೊಸಬರ ಪ್ರಯತ್ನಕ್ಕೆ ಬೆನ್ನುತಟ್ಟಿ…ಕೊಟ್ಟ ಕಾಸಿಗೆ ಕಜ್ಜಾಯಕ್ಕೇನು ಮೋಸ ಇಲ್ಲ ನಾನಂತು ಸ್ನೇಹಿತರನ್ನು ಗುಡ್ಡೇ ಹಾಕಿಕೊಂಡು ಇನ್ನೊಮ್ಮೆ ಹೋಗುವೆ.

 

-Ad-

Leave Your Comments