ಕಾಲಿವುಡ್’ನಲ್ಲಿ ಕ್ರೇಜ್ ಹುಟ್ಟುಹಾಕಿದ ಜೂನಿಯರ್.ಕಟ್ಟಪ್ಪ !!!

ಬಾಹುಬಲಿ ಚಿತ್ರದ ಬಹುಬಲಾ ಪರಾಕ್ರಮಿ ಬಾಹುಬಲಿ ಕೊಂದು ಜನರಲ್ಲಿ ಯಕ್ಷ ಪ್ರಶ್ನೆಗೆ ಕಾರಣನಾಗಿದ್ದ ಕಟ್ಟಪ್ಪ ಪಾತ್ರದ ಲುಕ್ ಮತ್ತೊಮ್ಮೆ ಸಖತ್ತಾಗೆ ಸುದ್ದಿಯಾಗಿದೆ.

ಹೌದು, ಆದರೆ ಈ ಬಾರಿ ಅದು ತಮಿಳು ಚಿತ್ರರಂಗದಲ್ಲಿ ಎಂಬುದು ವಿಶೇಷ. ಕಾಲಿವುಡ್’ನಲ್ಲಿ ಬಹುನಿರೀಕ್ಷೆ ಮೂಡಿಸಿರುವ ‘ಕಾಷ್ಮೊರ’ ಚಿತ್ರದ ಫಸ್ಟ್ ಲುಕ್ ನಾಯಕ ನಟ ಕಾರ್ತಿ ಬಿಡುಗಡೆ ಮಾಡಿದ್ದಾರೆ. ಮೊದಲ ನೋಟದಲ್ಲೇ ನಟ ಕಾರ್ತಿಯ ಲುಕ್ ಕಟ್ಟಪ್ಪನನ್ನು ನೆನಪಿಸುವಂತಿದೆ. ಅಲ್ಲದೇ ಕಾಲಿವುಡ್’ನಲ್ಲಿ ಕಾಷ್ಮೊರದ ಈ ನ್ಯೂ ಅವತಾರವು ಜೂ.ಕಟ್ಟಪ್ಪನೆಂದು ಪ್ರಸಿದ್ಧಿ ಪಡೆದಿದೆ. ಫಸ್ಟ್ ಲುಕ್’ನಲ್ಲೇ ತೀವ್ರ ಕುತೂಹಲಕ್ಕೆ ಕಾರಣವಾಗಿರುವ ಬೋಳುತಲೆಯ ಗಡ್ಡದಾರಿ ಕಾರ್ತಿಯ ಹೊಸ ಅವತಾರವು ಸಿನಿಪ್ರಿಯರ ಮೆಚ್ಚುಗೆ ಗಳಿಸಿದೆ. ಪರತಿವೀರನ್ ಎಂಬ ರಾಷ್ಟ್ರಪ್ರಶಸ್ತಿ ವಿಜೇತ ಚಿತ್ರದ ಬಳಿಕ ಪಯ್ಯ ಚಿತ್ರ ಖ್ಯಾತಿಯ ಕಾರ್ತಿ ಮತ್ತೊಮ್ಮೆ ವಿಭಿನ್ನ ಪಾತ್ರದ ಮೂಲಕ ಕಾಷ್ಮೋರದೊಂದಿಗೆ ಅಕ್ಟೋಬರ್’ನಲ್ಲಿ ತೆರೆಗೆ ಬರಲಿದ್ದಾರೆ.

ಚಿತ್ರದ ಪಾತ್ರವು ಬಾಹುಬಲಿಯ ಕಟ್ಟಪ್ಪನನ್ನು ಹೋಲುತ್ತಿರುವ ಬಗ್ಗೆ ಮಾತನಾಡಿರುವ ನಟ ಕಾರ್ತಿ- ಕಾಷ್ಮೊರ ಚಿತ್ರವು ಸೆಟ್ಟೇರಿ ಮೂರು ವರ್ಷಗಳಾಗಿದೆ. ಚಿತ್ರದ ಪಾತ್ರವನ್ನು ಎಲ್ಲೂ ಹೊರಬೀಳದಂತೆ ಚಿತ್ರತಂಡ ಗೌಪ್ಯವಾಗಿರಿಸಿತ್ತು. ಆದರೆ ಬಾಹುಬಲಿ ಚಿತ್ರವು ಬಿಡುಗಡೆಯಾದಾಗ ಕಟ್ಟಪ್ಪ ಮತ್ತು ಕಾಷ್ಮೊರದ ನನ್ನ ಗೆಟಪ್ ಹೋಲಿಕೆ ಇದೆ ಅನಿಸಿತ್ತು. ಹೀಗಾಗಿ ಕೆಲ ಮಾರ್ಪಾಡುಗಳನ್ನು ಮಾಡಿ, ಕೊನೆಗೂ ಕಾಷ್ಮೊರದ ರಾಜನಾಯಕ ಪಾತ್ರಕ್ಕೆ ಇದೇ ಸೂಕ್ತವೆಂದು ಅದೇ ಲುಕನ್ನು ಇರಿಸಲಾಗಿದೆ ಅಂದಿದ್ದಾರೆ. ಅಲ್ಲದೇ ಕಟ್ಟಪ್ಪ ಪಾತ್ರಧಾರಿ ಹಿರಿಯ ನಟ ಸತ್ಯರಾಜ್ ನಮ್ಮ ಕುಟುಂಬಕ್ಕೆ ಆಪ್ತರು. ಈಗ ಅವರ ಸ್ಥಾನದಲ್ಲಿ ನನ್ನನ್ನು ಜೂನಿಯರ್ ಕಟ್ಟಪ್ಪ ಅಂತ ಸಂಭೋಧಿಸುತ್ತಿರುವುದು ಖುಷಿ ಕೊಡುತ್ತಿದೆ ಎಂದು ಕಾರ್ತಿ ಹರ್ಷ ವ್ಯಕ್ತಪಡಿಸಿದ್ದಾರೆ. ರೌದಿರಂ ಚಿತ್ರ ಖ್ಯಾತಿಯ ಗೋಕುಲ್ ನಿರ್ದೇಶಿಸುತ್ತಿರುವ ಕಾಷ್ಮೊರ ಚಿತ್ರವು ಡಾರ್ಕ್ ಫ್ಯಾಂಟಸಿ ಕಥಾಹಂದರ ಹೊಂದಿರುವ ಚಿತ್ರ ಎನ್ನಲಾಗಿದೆ.

೬೦ಕೋಟಿ ವೆಚ್ಚದಲ್ಲಿ ನಿರ್ಮಾಣವಾಗಿರೊ ಕಾಷ್ಮೊರದಲ್ಲಿ ಕಾರ್ತಿಗೆ ನಾಯಕಿಯರಾಗಿ ಕಾಲಿವುಡ್ ಕ್ವೀನ್ ನಯನತಾರ ಮತ್ತು ನಟಿ ಶ್ರೀದಿವ್ಯ ಕಾಣಿಸಿಕೊಂಡಿದ್ದಾರೆ. ಈ ಬಿಗ್ ಬಜೆಟ್ ಚಿತ್ರದ ಮೂಲಕ ಮತ್ತೊಮ್ಮೆ ಕಬಾಲಿ ಖ್ಯಾತಿಯ ಸಂಗೀತ ನಿರ್ದೇಶಕ ಸಂತೋಷ್ ನಾರಾಯಣ್ ಸಂಗೀತದ ಹೊನಲರಿಸಲಿದ್ದಾರೆಂಬ ಮಾತುಗಳು ಕಾಲಿವುಡ್ ಕಡಲತೀರದಿಂದ ಕೇಳಿ ಬರುತ್ತಿದೆ.

ಈ ಸೌತ್ ಚಿತ್ರದ ಮತ್ತೊಂದು ವಿಷೇಶತೆ ಅಂದರೆ ಚಿತ್ರದ ಕೊನೆಯ ೧೫ ನಿಮಿಷಕ್ಕೆ ೩ಡಿ ಫೇಸ್ ಸ್ಕ್ಯಾನ್ ತಂತ್ರಜ್ಞಾನ ಬಳಸಲಾಗಿದೆ. ಈ ತಂತ್ರಜ್ಞಾನವನ್ನು ಬಳಸಿದ ಮೊದಲ ದಕ್ಷಿಣ ಭಾರತದ ಚಿತ್ರವೆಂಬ ಖ್ಯಾತಿ ಕಾಷ್ಮೊರದ ಪಾಲಾಗಿದೆ. ಅಂದಹಾಗೆ ಕಾಷ್ಮೊರ ಚಿತ್ರದ ಫಸ್ಟ್ ಲುಕ್ ತಮಿಳು,ತೆಲುಗು,ಮಳಯಾಳಂ ಮತ್ತು ಕನ್ನಡದಲ್ಲೂ ಬಿಡುಗಡೆಯಾಗಿದೆ. ಹೀಗಾಗಿ ಈ ಚಿತ್ರವು ಕನ್ನಡದಲ್ಲಿ ಡಬ್ ಆಗಲಿದೆಯೇ ಎಂಬ ಪ್ರಶ್ನೆಯನ್ನು ಹುಟ್ಟುಹಾಕಿರುವುದಂತೂ ಸುಳ್ಳಲ್ಲ.

★ಕಪ್ಪು ಮೂಗುತ್ತಿ

-Ad-

Leave Your Comments