ಟ್ರೆಂಡ್ ಸೆಟ್ಟರ್ ಕಾಶಿನಾಥ್ ವಿಧಿವಶ

ಹಿರಿಯ ನಟ ,ನಿರ್ದೇಶಕ ಕಾಶಿನಾಥ್  ವಿಧಿವಶರಾಗಿದ್ದಾರೆ. ಕಳೆದ ಎರಡು ದಿನಗಳಿಂದ ಶ್ರೀ ಶಂಕರ ಕ್ಯಾನ್ಸರ್ ಆಸ್ಪತ್ರೆಯಲ್ಲಿದ್ದ ಕಾಶಿನಾಥ್ ಚಿಕಿತ್ಸೆ ಫಲನೀಡದೆ ಕೊನೆಯುಸಿರೆಳೆದಿದ್ದಾರೆ. ಪತ್ನಿ ಹಾಗು ಇಬ್ಬರು ಮಕ್ಕಳು ದುಃಖತಪ್ತರಾಗಿದ್ದಾರೆ. ಮಗ ಅಭಿಮನ್ಯು ಸಿನಿಮಾರಂಗದಲ್ಲಿ ಗುರುತಿಸಿಕೊಂಡಿದ್ದರು.

ಕಾಶಿನಾಥ್ ಮೂಲತಃ ಮಂಗಳೂರಿನ ಕುಂದಾಪುರದವರು. 1975 ರಲ್ಲಿ “ಅಪರೂಪದ ಅತಿಥಿಗಳು” ಚಿತ್ರದ ಮುಖಾಂತರ ಕನ್ನಡಚಿತ್ರರಂಗಕ್ಕೆ ಬಂದವರು ಹೊಸ ಅಲೆಯನ್ನೇ ಸೃಷ್ಟಿಸಿದರು. ಅನುಭವ ಚಿತ್ರ ಅವರಿಗೆ ಜನಪ್ರಿಯತೆಯನ್ನು ತಂದುಕೊಟ್ಟಿತ್ತು. ಆ ಚಿತ್ರದ ಹೋದೆಯ ದೂರ ಓ ಜೊತೆಗಾರ ಸೇರಲು ಬಂದಾಗ ಗೀತೆ ಇಂದಿಗೂ ಜನಪ್ರಿಯವಾಗಿದೆ.

ಅವಳೇ ನನ್ನ ಹೆಂಡ್ತಿ ಚಿತ್ರವಂತೂ ಅಂದು -ಇಂದೂ ಇರುವ ವರದಕ್ಷಿಣೆ ಎಂಬ ಸಾಮಾಜಿಕ ಪಿಡುಗಿಗೆ ಕನ್ನಡಿ .   ಅನಾಮಿಕ  ಅನಂತನ ಅವಾಂತರ, ಅವನೇ ನನ್ನ ಗಂಡ, ಪೋಲಿ ಕಿಟ್ಟಿ, ಚೌಕ, ಶ್ ಹೀಗೆ .. ಅನೇಕ ವಿಭಿನ್ನ ಬಗೆಯ ಚಿತ್ರಗಳನ್ನು ತಮ್ಮದೇ ವಿಶಿಷ್ಟ ಶೈಲಿಯಲ್ಲಿ ಕೊಟ್ಟು ಟ್ರೆಂಡ್ ಸೆಟ್ಟರ್ ಎನಿಸಿಕೊಂಡವರು  ಕಾಶಿನಾಥ್. ಒಟ್ಟು 11 ಕನ್ನಡ, 1 ಹಿಂದಿ ಹಾಗೂ 1 ತೆಲುಗು ಚಿತ್ರವನ್ನು ನಿರ್ಮಿಸಿದ್ದಾರೆ. 43 ಚಿತ್ರಗಳಲ್ಲಿ ಅಭಿನಯ ನೀಡಿದ್ದಾರೆ 

ಕಳೆದ ವರುಷ ತೆರೆಕಂಡ ಚೌಕ ಚಿತ್ರದಲ್ಲಿ ಅದ್ಭುತವಾಗಿ ಅಭಿನಯಿಸಿದ್ದರು. ಜೊತೆಗೆ ಅವರು ಜೈಲಿನಲ್ಲಿ ಪ್ರೇಮ್ ಇನ್ನಿತರ ಜೊತೆಗೂಡಿ ಅಭಿನಯಿಸಿದ ಅಲ್ಲಾಡ್ಸು.. ಅಲ್ಲಾಡ್ಸು.. ಹಾಡು ಸೂಪರ್ ಹಿಟ್ ಆಗಿತ್ತು . ಅಭಿನಯ ನಿರ್ದೇಶನ ಅಷ್ಟೇ ಅಲ್ಲದೆ ಅನೇಕರಿಗೆ ಗುರು ಕೂಡ ಆಗಿದ್ದರು. ರಿಯಲ್ ಸ್ಟಾರ್ ಉಪೇಂದ್ರ, ಸಂಗೀತ ನಿರ್ದೇಶಕ, ನಟ ವಿ ಮನೋಹರ್ ಕಾಶಿನಾಥ್ ಗರಡಿಯಿಂದ ಬಂದವರೇ.

ಕಾಶಿನಾಥ್ ಅಗಲಿಕೆಗೆ ಕನ್ನಡ ಚಿತ್ರರಂಗದ ಜೊತೆಗೆ ಅವರ ಅಭಿಮಾನಿಗಳು ಕಂಬನಿ ಮಿಡಿಯುತ್ತಿದ್ದಾರೆ.

 

 

 

 

 

-Ad-

Leave Your Comments