ಕೆಂಪಿರ್ವೆ ಬರ್ತಾ ಇದೆ ಹುಷಾರು !

ಶ್ರೀ ಸಾಮಾನ್ಯನೆ ಭಗವದ್ ಮಾನ್ಯಮ್ ಎಂದ ಕುವೆಂಪು ಮಾತು ಇಂದಿಗೂ ಅಕ್ಷರಶಃ ಸತ್ಯ. ಅದನ್ನು ಅರಿತವರಷ್ಟೇ ಉಳಿವರು. ಇಲ್ಲದಿದ್ದರೆ ಕ್ರಾಂತಿಯ ಕಿಡಿಗೆ ಬಲಿಯಾಗುವುದು ದಿಟ. ಸಾಮಾನ್ಯಜನರನ್ನ ಕಡೆಗಣಿಸಿದರೆ ಕಷ್ಟ ತಪ್ಪಿದ್ದ್ದಲ್ಲ ಎನ್ನುವ ಕಥಾನಕ ಹೊಂದಿರುವ “ಕೆಂಪಿರ್ವೆ ” ಚಿತ್ರಕ್ಕೆ ಸೆನ್ಸಾರ್ ಮಂಡಳಿ ಯು /ಎ ಸರ್ಟಿಫಿಕೇಟ್ ನೀಡಿದೆ.

ಕೆಂಪಿರ್ವೆ ಚಿತ್ರ ಸಾಮಾನ್ಯ ಜನರ ಸಂಕೇತ . ಅವರ ಪ್ರತಿಧ್ವನಿ .ಪ್ರತಿರೂಪ . ನೋಡಲಿಕ್ಕೆ ಅಣುವಿನಂತೆ ಕಾಣುವ ಕೆಂಪಿರ್ವೆ ಕಚ್ಚಿದರೆ ಕೆರೆದು ಕರೆದು ಮೈ ಕೆಂಪಡರಿಕೊಳ್ಳುವಂತೆ ಮಾಡುವುದು ಎಲ್ಲರ ಅನುಭವಕ್ಕೂ ಒಂದಲ್ಲಾ ಒಂದು ಬಾರಿ ಬಂದೇ ಬಂದಿರುತ್ತದೆ. ಹಾಗೆ ಅಯ್ಯೋ ..ಇವರೇನ್ ಮಾಡ್ತಾರೆ ಇವರಿಂದ  ಏನಾಗುತ್ತೆ ಅಂತ ಅಸಡ್ಡೆಗೆ ಒಳಗಾಗುವ ಸಾಮಾನ್ಯರು ಸಿಡಿದೆದ್ದರೆ ಏನಾಗಿಹೋಗುತ್ತದೆ ? ಎಂಥೆಥವರನ್ನ ನಡುಗಿಸಿ ನಿವಾಳಿಸಿ ಎಸೆಯಬಲ್ಲರು ಎನ್ನುವ ಹಲವು ಸಂಗತಿಗಳನ್ನು ಬಿಡಿಬಿಡಿಯಾಗಿ ತೋರುವ ಪ್ರಯತ್ನವೆ ಕೆಂಪಿರ್ವೆ ಅಂತಾರೆ ನಿರ್ದೇಶಕ ವೆಂಕಟ್ ಭಾರಧ್ವಾಜ್ .

ನಮ್ಮ ನಿಮ್ಮೆದುರಿನಲ್ಲಿ ನಡೆಯುವ ನಿತ್ಯದ ಘಟನೆಗಳನ್ನು ನೋಡಿಯೂ ನೋಡದಂತೆ ತಲೆತಗ್ಗಿಸಿ ಕುರಿಮಂದೆಯ ಹಾಗೆ ಯಾರದೋ ಆಣತಿಗೆ ತಲೆಬಾಗುವ ಜನ ಒಮ್ಮೆ ಎಚ್ಚೆತ್ತರೆ ಸರ್ಕಾರ್ರಗಳನ್ನೇ ಸುತ್ತಿ ಬಿಸಾಕಬಲ್ಲರು. ಇದಕ್ಕೆ ನಿರ್ದರ್ಶನಗಳು ಸಾಕಷ್ಟಿವೆ . ಅಂಥಾ  ಹಲವು ಸಂಗತಿಗಳನ್ನು ನಮ್ಮ ನಡುವಿನಿಂದಲೇ ಹೆಕ್ಕಿ ಚಂದದೊಂದು ರೂಪ ಕೊಟ್ಟು  ನಮ್ಮ ಜನರ ಶಕ್ತಿಯನ್ನ ನಮಗೇ ತೋರಿಸಹೊರಟಿದೆಯಂತೆ ಕೆಂಪಿರ್ವೆ.

ಒಟ್ಟಿನಲ್ಲಿ ಸಾಮಾನ್ಯನೊಬ್ಬ  ಮನಸ್ಸು ಮಾಡಿದರೆ ಅಸಾಮಾನ್ಯ ಸಾಧನೆ ಮಾಡಿ ನಿಬ್ಬೆರಗಾಗಿಸಬಲ್ಲ. ಸರ್ಕಾರಗಳಿಗೆ ಸೆಡ್ಡುಹೊಡೆಯಬಲ್ಲ. ಕಡೆಗಣಿಸಿದರೆ ಕೆಂಪಿರ್ವೆಯಂತೆ ಸದ್ದಿಲ್ಲದೇ ಕಚ್ಚಿ ಕಚ್ಚಿ  ರಣ ಮಾಡಬಲ್ಲ, ಎಚ್ಚರ..ಎಚ್ಚರ .. ಎನ್ನಲು ಸಿದ್ಧವಾಗಿದೆ ಕಥೆ-ಚಿತಕಥೆ -ನಿರ್ದೇಶನದ ಜವಾಬ್ದಾರಿಯನ್ನೂ ಹೊತ್ತಿರುವ ವೆಂಕಟ್ ಭಾರಧ್ವಾಜ್ ತಂಡ .

ಹಿರಿಯ ಕೆಂಪಿರ್ವೆಯಾಗಿ ಎಂಥವರೂ  ಮೆಚ್ಚುವ ಕಲಾವಿದ ದತ್ತಣ್ಣ ಚಿತ್ರದಲ್ಲಿದ್ದಾರೆ .ಸಯ್ಯಾಜಿರಾವ್ ಶಿಂಧೆ ಖಳನಾಗಿ ಕಾಣಿಸಿಲಿದ್ದಾರೆ. ಉಮೇಶ್ ಬಣಕಾರ್,ಶ್ರೇಯಾ, ರಾಜ್ ಬಹದ್ದೂರ್ , ರೂಪ ಹೆಗ್ಡೆ ಮುಂತಾದವರನ್ನು ಇನ್ನುಳಿದ ಪಾತ್ರಗಳಲ್ಲಿ ನೋಡಬಹುದು .

ಕೆಂಪಿರ್ವೆ ಅಮೃತ ಫಿಲಂ ಸೆಂಟರ್ ಬ್ಯಾನರ್ ನಲ್ಲಿ ಮೂಡಿಬಂದಿರುವ ಚಿತ್ರ. ಸಹ ನಿರ್ಮಾಪಕರು ರಾಜ್ ಕುಮಾರ್ ,ವಿವೇಕ್ , ಅನಿತಾ ,ನವೀನ್,ಪ್ರಶಾಂತ್ ,ಸಂಜೀವ್ .

ಮುಂದಿನ ತಿಂಗಳು ಅಂದ್ರೆ ನವೆಂಬರ್ ಎರಡನೇ ವಾರ “ಕೆಂಪಿರ್ವೆ” ಪವರ್ ತೆರೆಗೆ ತಾಕಲಿದೆ.

 

-Ad-

Leave Your Comments