ಕಿಚ್ಚ ಸುದೀಪ್ ಹೊಸ ಅವತಾರ ಏನು ಗೊತ್ತಾ?

ಎಂಥಾ ಪಾತ್ರ ಕೊಟ್ಟರೂ ಅದನ್ನು ಅರೆದು ಕುಡಿದು ಆ ಪಾತ್ರವೇ ಆಗಬಲ್ಲ ಶಕ್ತಿ ಕೆಲವೇ ಕೆಲವು ಕಲಾವಿದರಿಗೆ ಇರುತ್ತದೆ. ಅಂಥಾ ಒಬ್ಬ ಅದ್ಭುತ ಕಲಾವಿದ ಕಿಚ್ಚ ಸುದೀಪ್. ಈ ವಿಷಯವನ್ನು ಯಾರು ಬೇಕಾದರೂ ಒಪ್ಪುತ್ತಾರೆ. “ಈಗ” ಸಿನಿಮಾದಲ್ಲಿ ಇವರ ನಟನೆ ನೋಡಿ ಬಾಲಿವುಡ್ ಕೂಡ ಬೆಚ್ಚಿಬಿದ್ದಿದೆ. ಅಂಥಾ ಅಸಾಮಾನ್ಯ ನಟ ಕಿಚ್ಚ ಸುದೀಪ್ ಮುಂದಿನ ಸಿನಿಮಾದಲ್ಲಿ ಹೊಸ ಅವತಾರ ಎತ್ತಲಿದ್ದಾರೆ. ಆ ಅವತಾರ ಏನು ಗೊತ್ತಾ? ಜನರನ್ನು ನಗಿಸುವ ಕೆಲಸ.
ಹೌದು. ಸುದೀಪ್ ಕಾಮಿಡಿ ಸಿನಿಮಾ ಒಂದರಲ್ಲಿ ನಟಿಸಲಿದ್ದಾರೆ. ಈ ಸಿನಿಮಾದ ನಿರ್ದೇಶಕ ಯಾರು ಗೊತ್ತಾ? ಗಜಕೇಸರಿ, ಹೆಬ್ಬುಲಿ ನಿರ್ದೇಶಕ ಕೃಷ್ಣ. ಸಿನಿಮಾಟೋಗ್ರಾಫರ್ ಆಗಿರುವ ಕೃಷ್ಣ ಈಗ ಪೂರ್ಣ ಪ್ರಮಾಣದ ನಿರ್ದೇಶಕನಾಗಿ ಬದಲಾಗಿದ್ದಾರೆ. ಅದಕ್ಕೆ ಕಾರಣವಿದೆ. ಈಗ ಅವರು ಸಕ್ಸಸ್‌ಫುಲ್ ನಿರ್ದೇಶಕರಾಗಿರುವುದರಿಂದ ಗೌರವವೋ ಭಯವೋ ಯಾವುದೋ ಒಂದು ಕಾರಣಕ್ಕೆ ಬೇರೆ ಯಾರೂ ಸಿನಿಮಾಟೋಗ್ರಾಫರ್ ಕೆಲಸಕ್ಕೆ ಕರೆಯುತ್ತಿಲ್ಲ. ಕೃಷ್ಣ ಕೂಡ ನಿರ್ದೇಶನ ಕೈ ಹಿಡಿದಿರುವುದರಿಂದ ಮತ್ತೊಂದು ಸಿನಿಮಾಗೆ ರೆಡಿಯಾಗಿದ್ದಾರೆ. ಈ ಸಲ ಅವರು ಕಾಮಿಡಿ ಕತೆಯನ್ನು ನೆಚ್ಚಿಕೊಂಡಿದ್ದಾರೆ.
ನಿರ್ದೇಶಕ ಕೃಷ್ಣ ಕತೆ ಹೊಳೆದಿದ್ದೇ ತಡ ಸುದೀಪ್‌ಗೆ ಹೇಳಬೇಕು ಅಂತ ಆಸೆ ಪಟ್ಟಿದ್ದಾರೆ. ಆದರೆ ಅಷ್ಟು ಹೊತ್ತಿಗಾಗಲೇ ಸುದೀಪ್ ದಿ ವಿಲನ್ ಚಿತ್ರೀಕರಣಕ್ಕಾಗಿ ಬ್ಯಾಂಕಾಕ್‌ಗೆ ಹಾರಿಯಾಗಿತ್ತು. ಆದರೆ ಕೃಷ್ಣರಿಗೆ ಮನಸ್ಸು ತಡೆಯದು ನೇರ ಬ್ಯಾಂಕಾಕ್‌ಗೆ ಹಾರಿ ಅಲ್ಲಿ ಸುದೀಪ್‌ಗೆ ಕತೆ ಹೇಳಿದ್ದಾರೆ. ಕಾಮಿಡಿ ಸಿನಿಮಾ ಆದರೂ ಸುದೀಪ್ ಖುಷಿಯಾಗಿ ಒಪ್ಪಿಕೊಂಡಿದ್ದಾರೆ. ಮತ್ತದೇ ಕತೆಗಳಿರುವ ಸಿನಿಮಾ ಮಾಡುವುದಿಲ್ಲ ಅಂತ ಹೇಳಿಕೆ ಬೇರೆ ಕೊಟ್ಟಿದ್ದಾರೆ. ಆದರೆ ಈ ಸಿನಿಮಾ ಯಾವಾಗ ಶುರುವಾಗುತ್ತದೆ ಅಂತ ಮಾತ್ರ ಗೊತ್ತಿಲ್ಲ. ಯಾಕೆಂದರೆ ದಿ ವಿಲನ್ ಮುಗಿದ ಕೂಡಲೇ ರಕ್ಷಿತ್ ಶೆಟ್ಟಿಯವರ ಥಗ್ಸ್ ಆಫ್ ಮಾಲ್ಗುಡಿ ಶುರುವಾಗಬೇಕಿದೆ.
-Ad-

Leave Your Comments